ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ರಘುವಂಶಿ ಎಂಬಾತ ಮಹಿಳಾ ಡ್ಯಾನ್ಸರ್ ಜೊತೆ ಅಶ್ಲೀಲ ಮತ್ತು ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ರಘುವಂಶಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯವರಾದ ಬಬ್ಬನ್ ಸಿಂಗ್ ರಘುವಂಶಿ ‘ರಾಸ್ರಾ ಕಿಸಾನ್ ಕೋ ಅಪರೇಟಿವ್ ಮಿಲ್’ನ ಉಪಾಧ್ಯಕ್ಷರಾಗಿದ್ದಾರೆ. ಅಲ್ಲದೆ, 1993ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬನ್ ಸಿದ್ಧ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಪಕ್ಷದ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ, ಬಿಹಾರದ ದುರ್ಗಿಪುರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗಿದ್ದಾಗಿದ್ದ ರಘುವಂಶಿ ಮಹಿಳೆಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡು, ವಿಕೃತಿ ಮೆರೆದಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ರಘುವಂಶಿ ಅವರನ್ನು ಪಕ್ಷದಿಂದ ವಜಾಗೊಳಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ ಶುಕ್ಲಾ ಆದೇಶಿಸಿರುವುದಾಗಿ ಬಲಿಯಾ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಹೇಳಿದ್ದಾರೆ.
“ರಘುವಂಶಿ ದುರ್ನಡತೆಯ ಪ್ರಕರಣವನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ನಕಲಿ ಎಂದು ಹೇಳಿರುವ ರಘುವಂಶಿ, “ಪಕ್ಷದ ಕೆಲ ಮುಖಂಡರು ಉದ್ದೇಶಪೂರ್ವಕವಾಗಿ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಅಕ್ಕಾಗಿ, ಇಂತಹ ವಿವಾದ ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ವೈರಲ್ ಆಗಿರುವ ವಿಡಿಯೋ ನಕಲಿ. ನಾನು ಅಂಥದ್ದೇನೂ ಮಾಡಿಲ್ಲ. ನಾನು ಈಗ ವಯೋವೃದ್ಧ. ನನ್ನ ವರ್ಚಸ್ಸಿಗೆ ಕಳಂಕ ಹಚ್ಚುವ ದುರುದ್ದೇಶದಿಂದ ಸೃಷ್ಟಿಸಿರುವ ಪಿತೂರಿ ಇದು. ಈ ಪಿತೂರಿಯ ಹಿಂದೆ ಶಾಸಕ ಕೇತಕಿ ಸಿಂಗ್ ಅವರ ಕುಟುಂಬವಿದೆ” ಎಂದು ಹೇಳಿದ್ದಾರೆ.