26 ಜನರನ್ನು ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ರಾಜಕೀಯಗೊಳಿಸುವುದನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಳ್ಳಿಹಾಕಿದರು.
ಅಮಾಯಕ ನಾಗರಿಕರ ಮೃತ ದೇಹಗಳ ಮೇಲೆ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಬೇಡುವುದಿಲ್ಲ ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ ಅವರು “ರಾಜ್ಯ ಸ್ಥಾನಮಾನ ಸ್ಥಾಪನೆ ಪ್ರಮುಖ ಉದ್ದೇಶವಾದರೂ ಮತ್ತೊಂದು ಬಾರಿಗೆ ಈ ಬೇಡಿಕೆಯನ್ನು ವ್ಯಕ್ತಪಡಿಸುತ್ತೇನೆ. ಶವಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಒತ್ತಾಯಿಸುವುದಿಲ್ಲ. ಕೇಂದ್ರದಿಂದ ರಾಜ್ಯದ ಸ್ಥಾನಮಾನವನ್ನು ಒತ್ತಾಯಿಸಲು ನಾನು ಇಂದಿನ ಪರಿಸ್ಥಿತಿಯನ್ನು ಬಳಸಿಕೊಳ್ಳುವುದಿಲ್ಲ. ನಾವು ಅದನ್ನು ಇನ್ನೊಂದು ಸಂದರ್ಭದಲ್ಲಿ ಒತ್ತಾಯಿಸುತ್ತೇವೆ” ಎಂದು ಹೇಳಿದರು.
“ಜನರು ಸರ್ಕಾರವನ್ನು ಬೆಂಬಲಿಸಿದಾಗ ಉಗ್ರವಾದ ಮತ್ತು ಭಯೋತ್ಪಾದನೆ ಕೊನೆಗೊಳ್ಳುತ್ತದೆ. ನಾವು ಬಂದೂಕುಗಳನ್ನು ಬಳಸಿ ಉಗ್ರವಾದವನ್ನು ನಿಯಂತ್ರಿಸಬಹುದು, ಆದರೆ ಜನರು ನಮ್ಮನ್ನು ಬೆಂಬಲಿಸಿದಾಗ ಮಾತ್ರ ಅದು ಕೊನೆಗೊಳ್ಳುತ್ತದೆ. ಈಗ ಜನರು ಆ ಹಂತವನ್ನು ತಲುಪುತ್ತಿದ್ದಾರೆಂದು ತೋರುತ್ತದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
“ನಾನು ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊಂದಿಲ್ಲದಿದ್ದರೂ, ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರನ್ನು ಆಹ್ವಾನಿಸಿದೆ. ಅವರ ಆತಿಥೇಯನಾಗಿ, ಅವರನ್ನು ನೋಡಿಕೊಳ್ಳುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಆದರೆ ಈಗ ಪ್ರವಾಸಿಗರಿಗೆ ವಿಷಾದಿಸಲು ನನಗೆ ಪದಗಳಿಲ್ಲ” ಎಂದು ಹೇಳಿದರು.
ಸಂತ್ರಸ್ತರ ನೋವಿಗೆ ದುಃಖ ವ್ಯಕ್ತಪಡಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ, “ಕೆಲವೇ ದಿನಗಳ ಹಿಂದೆ ವಿವಾಹವಾದ ನೌಕಾಪಡೆಯ ಅಧಿಕಾರಿಯ ಪತ್ನಿಗೆ ನಾನು ಏನು ಹೇಳಬೇಕು? ಅವರಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಮೃತಪಟ್ಟ ಅನೇಕ ಕುಟುಂಬ ಸದಸ್ಯರು ಮಾಡಿದ ಅಪರಾಧವೇನು ಎಂದು ನನ್ನನ್ನು ಆನೇಕರು ಕೇಳಿದರು? ಆದರೆ ನನ್ನಲ್ಲಿ ಉತ್ತರವಿರಲಿಲ್ಲ” ಎಂದು ಹೇಳಿದರು.
ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಒಮರ್ ಅಬ್ದುಲ್ಲಾ ಅವರು ದೇಶಾದ್ಯಂತವಿರುವ ಎಲ್ಲ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಅರ್ಪಿಸಿದರು. “ತಕ್ಷಣದ ಕ್ರಮಗಳನ್ನು ಕೈಗೊಂಡು ಅಹಿತಕರ ಘಟನೆಗಳನ್ನು ತಡೆಗಟ್ಟಿದ ಎಲ್ಲ ರಾಜ್ಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದರು.