ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ನೇಪಾಳ, ಹವಾಮಾನ ಬದಲಾವಣೆಗೆ ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲ ಹೊರಸೂಸುತ್ತಿರುವ ಭಾರತ, ಚೀನಾ ಮತ್ತು ಅಮೆರಿಕದಿಂದ ಪರಿಹಾರ ನೀಡುವಂತೆ ಆಗ್ರಹಿಸಿದೆ. ಹವಾಮಾನ ಬದಲಾವಣೆಗೆ ಅತಿ ಕಡಿಮೆ ಕೊಡುಗೆ ನೀಡಿರುವ ನೇಪಾಳವೇ ಅದರ ಪರಿಣಾಮದಿಂದ ಉಂಟಾಗುತ್ತಿರುವ ಭಾರೀ ನಷ್ಟವನ್ನು ಭರಿಸುವುದು ನ್ಯಾಯಸಮ್ಮತವಲ್ಲ ಎಂದು ನೇಪಾಳ ಸರ್ಕಾರ ವಾದಿಸಿದೆ.
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ಹವಾಮಾನ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿರುವ ರಾಷ್ಟ್ರಗಳು ಅದರ ಪರಿಣಾಮಗಳನ್ನು ಎದುರಿಸುತ್ತಿರುವ ದೇಶಗಳ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕು. ಇದು ದಾನವಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲ ಹೊರಸೂಸುವ ರಾಷ್ಟ್ರಗಳು ಹವಾಮಾನ ದುರಂತದಿಂದ ಬಾಧಿತ ದೇಶಗಳಿಗೆ ನೆರವು ನೀಡುವುದು ನೈತಿಕ ಹಾಗೂ ಕಾನೂನುಬದ್ಧ ಹೊಣೆಗಾರಿಕೆ ಎಂದು ಪ್ರತಿಪಾದಿಸಿದ್ದಾರೆ.
“ನಮ್ಮ ರಾಜತಾಂತ್ರಿಕ ನಿಲುವನ್ನು ನೆರವು ಎಂಬುದರಿಂದ ‘ನ್ಯಾಯ ಮತ್ತು ಪರಿಹಾರ’ದತ್ತ ಬದಲಾಯಿಸುತ್ತಿದ್ದೇವೆ. ಚೀನಾ, ಅಮೆರಿಕ ಮತ್ತು ಭಾರತ ಐತಿಹಾಸಿಕ ಹೊಣೆಗಾರಿಕೆಯನ್ನು ಹೊಂದಿವೆ. ಹವಾಮಾನ ಬದಲಾವಣೆಗೆ ಹೆಚ್ಚು ದುರ್ಬಲವಾಗಿರುವ ನೇಪಾಳದಂತಹ ರಾಷ್ಟ್ರಗಳಿಗೆ ಪರಿಹಾರ ನೀಡುವಲ್ಲಿ ಅವುಗಳ ಪಾತ್ರ ಇರಬೇಕು” ಎಂದು ಖನಾಲ್ ದಿ ಕಠ್ಮಂಡು ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಏನಿದು ಹಸಿರುಮನೆ ಅನಿಲ?
ಭೂಮಿಗೆ ಸೂರ್ಯನಿಂದ ಬೆಳಕು ಮತ್ತು ಶಾಖ ಬರುತ್ತದೆ. ಭೂಮಿ ಆ ಶಾಖದ ಒಂದು ಭಾಗವನ್ನು ಮತ್ತೆ ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ಆದರೆ ವಾತಾವರಣದಲ್ಲಿರುವ ಕೆಲವು ಅನಿಲಗಳು ಭೂಮಿಯಿಂದ ಹೊರಹೋಗಬೇಕಾದ ಶಾಖದ ಒಂದು ಭಾಗವನ್ನು ಹಿಡಿದಿಟ್ಟುಕೊಳ್ಳುತ್ತವೆ. ಈ ಅನಿಲಗಳನ್ನೇ ಹಸಿರುಮನೆ ಅನಿಲಗಳು (Greenhouse gases) ಎನ್ನಲಾಗುತ್ತದೆ.
ಬಿಸಿಲಿನ ದಿನ ಕಾರಿನೊಳಗೆ ಕುಳಿತುಕೊಂಡಿದ್ದೀರಿ ಎಂದುಕೊಳ್ಳಿ. ಕಾರಿನ ಕಿಟಕಿಗಳ ಮೂಲಕ ಸೂರ್ಯನ ಬೆಳಕು ಒಳಗೆ ಬರುತ್ತದೆ. ಒಳಗಿನ ಸೀಟು, ಡ್ಯಾಶ್ಬೋರ್ಡ್ ಮುಂತಾದವು ಬಿಸಿಯಾಗುತ್ತವೆ. ಆ ಬಿಸಿಯೆಲ್ಲ ಸುಲಭವಾಗಿ ಹೊರಗೆ ಹೋಗದೆ ಕಾರಿನೊಳಗೇ ಶೇಖರಿಸಲ್ಪಡುತ್ತದೆ. ಸ್ವಲ್ಪ ಸಮಯದ ನಂತರ ಹೊರಗಿನ ತಾಪಕ್ಕಿಂತ ಕಾರಿನ ಒಳಭಾಗ ಹೆಚ್ಚು ಬಿಸಿಯಾಗುತ್ತದೆ. ಭೂಮಿಯಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ. ಗಾಜು ಕಾರನ್ನು ಬಿಸಿಯಾಗಿಟ್ಟರೆ, ಭೂಮಿಯನ್ನು ಬಿಸಿಯಾಗಿಡುವ ಕೆಲಸವನ್ನು ಹಸಿರುಮನೆ ಅನಿಲಗಳು ಮಾಡುತ್ತವೆ.
ಹಸಿರುಮನೆ ಅನಿಲಗಳು ಇಲ್ಲದಿದ್ದರೆ ಭೂಮಿ ತುಂಬಾ ತಣ್ಣಗಾಗುತ್ತಿತ್ತು. ಜೀವಿಗಳು ಬದುಕಲು ಬೇಕಾದಷ್ಟು ಉಷ್ಣತೆ ಇರದೇ ಇರಬಹುದಿತ್ತು. ಸಮಸ್ಯೆ ಏನೆಂದರೆ, ಈ ಅನಿಲಗಳ ಪ್ರಮಾಣ ಅಗತ್ಯಕ್ಕಿಂತ ಹೆಚ್ಚುತ್ತಿರುವುದು.
ನೇಪಾಳದ ದೊಡ್ಡ ಭಾಗ ಹಿಮಾಲಯ ಪ್ರದೇಶದಲ್ಲಿದೆ. ಹಿಮಾಲಯದ ಹಿಮನದಿಗಳು ಮತ್ತು ಪರ್ವತ ಪರಿಸರ ಹವಾಮಾನ ಬದಲಾವಣೆಗೆ ಅತ್ಯಂತ ಸೂಕ್ಷ್ಮ. ಜಾಗತಿಕ ತಾಪಮಾನ ಹೆಚ್ಚಾದಾಗ ಹಿಮನದಿಗಳ ಕರಗುವಿಕೆ ವೇಗವಾಗಬಹುದು. ಜೊತೆಗೆ ಮಳೆಯ ಸ್ವರೂಪದಲ್ಲೂ ಬದಲಾವಣೆಗಳು ಉಂಟಾಗಬಹುದು. ಇದರಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ಇತರ ಹವಾಮಾನ ಸಂಬಂಧಿತ ಅಪಾಯಗಳು ಹೆಚ್ಚಾಗಬಹುದು. ಇದನ್ನೇ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಪ್ರತಿಪಾದಿಸಿರುವುದು.
ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಮನೆಗಳು, ರಸ್ತೆಗಳು, ಸೇತುವೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದ್ದು, ಪುನರ್ನಿರ್ಮಾಣಕ್ಕೆ ಬಿಲಿಯನ್ಗಟ್ಟಲೆ ಡಾಲರ್ ಅಗತ್ಯವಾಗಬಹುದು ಎಂದು ನೇಪಾಳ ಅಂದಾಜಿಸಿದೆ.
ನೇಪಾಳದ ಬೇಡಿಕೆ, ಹವಾಮಾನ ಬದಲಾವಣೆಯಿಂದ ಉಂಟಾಗುವ ‘ನಷ್ಟ ಮತ್ತು ಹಾನಿ’ಗೆ ಪರಿಹಾರ ಒದಗಿಸುವ ಅಂತಾರಾಷ್ಟ್ರೀಯ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದೆ. ಹವಾಮಾನ ದುರಂತಗಳಿಂದ ಹೆಚ್ಚು ಬಾಧಿತವಾಗುವ ಅಭಿವೃದ್ಧಿಶೀಲ ಹಾಗೂ ದುರ್ಬಲ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಗೆ ಪರಿಹಾರ ಪಡೆಯಲು ನೇಪಾಳವು Fund for Responding to Loss and Damageನಿಂದ ನೆರವು ಕೋರಿ ಸಂಪರ್ಕಿಸಿದೆ.
ಪ್ರವಾಹ, ಭೂಕುಸಿತ ಹಾಗೂ ಹಿಮನದಿಗಳ ಕರಗುವಿಕೆ ಸೇರಿದಂತೆ ಹವಾಮಾನ ಸಂಬಂಧಿತ ಅಪಾಯಗಳು ಹಿಮಾಲಯ ಪ್ರದೇಶದ ಜನಜೀವನಕ್ಕೆ ದಿನದಿಂದ ದಿನಕ್ಕೆ ದೊಡ್ಡ ಬೆದರಿಕೆಯಾಗುತ್ತಿವೆ ಎಂದು ನೇಪಾಳ ಹೇಳಿದೆ. ಪುನರ್ವಸತಿ ಮತ್ತು ಪುನರ್ನಿರ್ಮಾಣಕ್ಕೆ ಭಾರಿ ಮೊತ್ತದ ಹಣದ ಅಗತ್ಯವಿರುವ ಹಿನ್ನೆಲೆಯಲ್ಲಿ ನೇಪಾಳ ಅಂತಾರಾಷ್ಟ್ರೀಯ ನೆರವು ಪಡೆಯುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ: ‘ಪ್ರವಾಹಕ್ಕೆ ನೀವುಗಳೇ ಕಾರಣ’: ಚೀನಾ, ಅಮೆರಿಕ, ಭಾರತದ ಬಳಿ ಪರಿಹಾರ ಕೇಳಿದ ನೇಪಾಳ
ಹೆಚ್ಚಿನ ಕಾರ್ಬನ್ ಹೊರಸೂಸುವಿಕೆಯ ಮೂಲಕ ಆರ್ಥಿಕ ಅಭಿವೃದ್ಧಿಯ ಲಾಭ ಪಡೆದ ರಾಷ್ಟ್ರಗಳು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಹೆಚ್ಚು ಅನುಭವಿಸುತ್ತಿರುವ ದೇಶಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂಬುದು ನೇಪಾಳದ ಪ್ರಮುಖ ಬೇಡಿಕೆಯಾಗಿದೆ. ಭಾರತ ಮತ್ತು ಚೀನಾ ನೇಪಾಳದ ನೆರೆಯ ರಾಷ್ಟ್ರಗಳಾಗಿರುವುದರ ಜತೆಗೆ ಆ ದೇಶದ ಆರ್ಥಿಕತೆಯ ಮೇಲೂ ಪ್ರಮುಖ ಪ್ರಭಾವ ಹೊಂದಿವೆ. ಹೀಗಾಗಿ ನೇಪಾಳದ ಪರಿಹಾರ ಬೇಡಿಕೆ ರಾಜತಾಂತ್ರಿಕವಾಗಿಯೂ ಮಹತ್ವ ಪಡೆದಿದೆ.
ಪ್ರವಾಹ ಮತ್ತು ಭೂಕುಸಿತದ ನಂತರ ಪುನರ್ವಸತಿ ಹಾಗೂ ಪುನರ್ನಿರ್ಮಾಣಕ್ಕೆ ಅಗತ್ಯವಿರುವ ನೆರವು ಪಡೆಯಲು ನೇಪಾಳ ತನ್ನ ರಾಜತಾಂತ್ರಿಕ ಕಚೇರಿಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಪ್ರಯತ್ನಗಳನ್ನು ಆರಂಭಿಸಿದೆ ಎಂದು ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.





