“ಈ ಚುನಾವಣೆಯಲ್ಲಿ ಅವರು ಮತ ಚಲಾಯಿಸಲು ಸಾಧ್ಯವಾಗದೇ ಇರಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಉಳಿಯುವ ಹಕ್ಕು ಹೆಚ್ಚು ಅಮೂಲ್ಯವಾದದ್ದು, ಅದನ್ನು ಸಂರಕ್ಷಿಸಲಾಗುತ್ತದೆ” ಎಂದು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನಾ ಮತ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಿಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ(ಏ.24) ತಿರಸ್ಕರಿಸಿದೆ.
ಸಿಜೆಐ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ಪ್ರಕರಣವನ್ನು ವಿಚಾರಣೆ ನಡೆಸಿತು.
ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಸುಮಾರು 65 ಚುನಾವಣಾ ಕರ್ತವ್ಯ ಅಧಿಕಾರಿಗಳು ಸೇರಿದಂತೆ ಹಲವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿರುವ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ : ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಮತ ಪ್ರಮಾಣದ ಏರಿಕೆಗೆ ಕಾರಣ?
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ.ಆರ್. ಶಂಶಾದ್ ವಾದ ಮಂಡಿಸಿ, ಯಾವುದೇ ಸ್ಪಷ್ಟ ಕಾರಣವಿಲ್ಲದೆ, ನೋಟಿಸ್ ಇಲ್ಲದೆ ಅಧಿಕಾರಿಗಳ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಹೇಳಿದರು.
“ಚುನಾವಣಾ ಕರ್ತವ್ಯದಲ್ಲಿರುವ 65 ಅರ್ಜಿದಾರರು. ಅವರ ಕರ್ತವ್ಯ ಆದೇಶಗಳಲ್ಲಿ EPIC ಸಂಖ್ಯೆಗಳು ಉಲ್ಲೇಖವಾಗಿವೆ. ಈಗ ಆ ಸಂಖ್ಯೆಗಳೇ ಅಳಿಸಲ್ಪಟ್ಟಿವೆ. ಚುನಾವಣೆಯನ್ನು ನಡೆಸುವವರೇ ಮತ ಚಲಾಯಿಸುವುದಕ್ಕೇ ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಹಲವರಿಗೆ ಕಾರಣಗಳನ್ನೇ ನೀಡಲಾಗಿಲ್ಲ” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸಂಪರ್ಕಿಸುವಂತೆ ಸೂಚಿಸಿತು. “ನೀವು ನಿಮ್ಮ ವಾದಗಳನ್ನು ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಮಂಡಿಸಿ, ಅದು ವಿಷಯವನ್ನು ಪರಿಶೀಲಿಸಲಿ,” ಎಂದು ಸಿಜೆಐ ಸೂರ್ಯ ಕಾಂತ್ ಸೂಚಿಸಿದರು.
ಏ. 13ರಂದು, ಚುನಾವಣೆಗೆ ಕನಿಷ್ಠ ಎರಡು ದಿನಗಳ ಮುಂಚೆ ಮೇಲ್ಮನವಿ ನ್ಯಾಯಮಂಡಳಿಗಳಿಂದ ಅನುಮತಿ ಪಡೆದರೆ, ಮತದಾರರು ಪಟ್ಟಿಯಲ್ಲಿ ಮರುಸೇರ್ಪಡೆಗೊಂಡು ಮತ ಚಲಾಯಿಸಲು ಅರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.ಆದರೆ, ವರದಿಗಳ ಪ್ರಕಾರ ಈಗಾಗಲೇ ಸಲ್ಲಿಸಲಾದ ಮೇಲ್ಮನವಿಗಳಲ್ಲಿ ಕೇವಲ 136 ಪ್ರಕರಣಗಳನ್ನಷ್ಟೇ ನ್ಯಾಯಮಂಡಳಿಗಳು ನಿರ್ಧರಿಸಿವೆ.





