ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್‌ಕೆಸಿಸಿಐ (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ)ನ ಪ್ರಯತ್ನ ಉತ್ತಮವಾಗಿದೆ. ಐಟಿ ಕ್ಷೇತ್ರದಂತೆ ಕೃಷಿ ತಂತ್ರಜ್ಞಾನಕ್ಕೂ ಬೆಂಗಳೂರು ರಾಜಧಾನಿಯಾಗಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ದಿಮತ್ತೆ ಸೇರಿದಂತೆ ಎಲ್ಲ ಕ್ಷೇತ್ರಗಳ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026″ನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕೃಷಿ ಲಾಭದಾಯಕಗೊಂಡರೆ ಯುವಜನತೆ ಕೃಷಿಯತ್ತ ಮುಖಮಾಡುತ್ತಾರೆ. ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು” ಎಂದರು.
“ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ ಅವರು ಉತ್ತಮ ವಾಣಿಜ್ಯೋದ್ಯಮಿಯಾಗಿ ನನಗೆ ಚಿರಪರಿಚಿತರು. ಕೃಷಿ ವಿವಿ ಹಾಗೂ ಎಫ್‌ಕೆಸಿಸಿಐ ಸಹಭಾಗಿತ್ವದಲ್ಲಿ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026 ರೈತರಿಗೆ ಸಹಕಾರಿಯಾಗಿದೆ. ರೈತರಿಗೆ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನ ಏರ್ಪಡಿಸಿರುವುದು ಉತ್ತಮವಾಗಿದೆ. ಆದರೆ ವಸ್ತುಪ್ರದರ್ಶನವನ್ನು ಪ್ರತ್ಯೇಕವಾಗಿ ಆಯೋಜಿಸುವುದು ಉತ್ತಮವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು” ಎಂದರು.
“ಭಾರತ ದೇಶ ಕೃಷಿಪ್ರಧಾನ ದೇಶ. ಕೃಷಿಯನ್ನು ಸುಸ್ಥಿರಗೊಳಿಸುವುದು ಹಾಗೂ ಲಾಭದಾಯಕಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದಿನ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕವಾದರೆ ಯುವಜನತೆ ಸಹಜವಾಗಿ ಕೃಷಿಯತ್ತ ಮುಖಮಾಡುತ್ತಾರೆ. ಸರ್ಕಾರ ಕೃಷಿಯನ್ನು ಲಾಭದಾಯಕಗೊಳಿಸಲು ಹಲವು ಯೋಜನೆಗಳನ್ನು ರೂಪಿಸಿ, ಈ ಉದ್ದೇಶಕ್ಕೆ ಕೈಗಾರಿಕೆಗಳೂ ಕೈಜೋಡಿಸಬೇಕು” ಎಂದರು.
ಇದನ್ನೂ ಓದಿ: ಇಂದು ಒಳಮೀಸಲಾತಿ ಭವಿಷ್ಯ; ಮೂರು ದಶಕಗಳ ‘ಒಳ’ ಬೇಗುದಿಗೆ ಇಂದು ಮುಕ್ತಿ?
“ಬಿಜೆಪಿ ಸ್ಥಗಿತಗೊಳಿಸಿದ್ದ ‘ಕೃಷಿಭಾಗ್ಯ’ವನ್ನು ಸರ್ಕಾರ ಪುನಃ ಜಾರಿಗೊಳಿಸಿದೆ. ರಾಜ್ಯದಲ್ಲಿ ಒಣಭೂಮಿಯ ಪ್ರಮಾಣ ಹೆಚ್ಚಿದ್ದು, ಸಣ್ಣಹಿಡುವಳಿದಾರರಿಗೆ ಕೃಷಿಯನ್ನು ಲಾಭದಾಯಕಗೊಳಿಸಬೇಕಿದೆ. ಆದ್ದರಿಂದ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಹೆಚ್ಚು ಒಣಭೂಮಿಯಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಕೃಷಿಭಾಗ್ಯವನ್ನು ಸ್ಥಗಿತಗೊಳಿಸಿದ್ದು, ನಮ್ಮ ಸರ್ಕಾರ ಈ ಯೋಜನೆಯನ್ನು ಮರುಜಾರಿಗೊಳಿಸಿದೆ. ಸುಮಾರು 83 ಲಕ್ಷ ರೈತರಿಗೆ 70 ಸಾವಿರ ಕೋಟಿ ರೂ.ಗಳ ಕೃಷಿಸಾಲ ನೀಡಲಾಗಿದೆ. ಕಳೆದ ವರ್ಷ 8 ಸಾವಿರ ಕೋಟಿಗಳನ್ನು ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯಗಳಿಗೆ ಮೀಸಲಿಡಲಾಗಿತ್ತು. ಬಂಡವಾಳ ಹೂಡಿಕೆ ಅಧಿಕಗೊಳ್ಳಬೇಕು. ಕೈಗಾರಿಕೆ, ಗ್ರಾಮೀಣಾಭೀವೃದ್ಧಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ಕೃಷಿ ಕ್ಷೇತ್ರದಲ್ಲಿಯೂ ಹೂಡಿಕೆಗಳು ಹೆಚ್ಚಾಗಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗಲಿದೆ” ಎಂದರು.





