ಯುವಕನೋರ್ವ ಶೌಚಾಲಯದಲ್ಲೇ ಕುಳಿತು ಗುಜರಾತ್ ಹೈಕೋರ್ಟ್‌ನ ವಿಡಿಯೋ(ವರ್ಚುವಲ್) ಕಲಾಪದಲ್ಲಿ ಭಾಗವಹಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ನಿರ್ಜಾರ್ ಎಸ್ ದೇಸಾಯಿ ಅವರ ಪೀಠವು ಕಳೆದ ಜೂನ್ 20ರಂದು ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ. ‘ಸಮದ್ ಬ್ಯಾಟರಿ’ ಎಂಬ ಹೆಸರಿನಲ್ಲಿ ಲಾಗಿನ್ ಆಗಿದ್ದ ಯುವಕ, ಕುತ್ತಿಗೆಗೆ ಬ್ಲೂಟೂತ್ ಇಯರ್‌ಫೋನ್ ಧರಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಶೌಚಾಲಯದ ಒಳಗಡೆ ಇದ್ದಾಗಲೇ ಕಲಾಪದ ವಿಡಿಯೋ ಆನ್ ಮಾಡಿಕೊಂಡಿದ್ದು, ಶೌಚ ಕಾರ್ಯ ಮುಗಿಸಿದ ಬಳಿಕ ನೀರನ್ನು ಹಾಕಿ ಸ್ವಚ್ಛಗೊಳಿಸಿಕೊಂಡು ನಂತರ ಹೊರಗೆ ಬರುವುದು ದಾಖಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ವಿಡಿಯೋದಲ್ಲಿರುವ ವ್ಯಕ್ತಿಯು ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರಾಗಿದ್ದರು. ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ ಪ್ರತಿವಾದಿಯಾಗಿ ಹಾಜರಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಸೌಹಾರ್ದಯುತವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ತಿಳಿಸಿದ ನಂತರ, ನ್ಯಾಯಾಲಯವು ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು.
ಇದು ಅನುಚಿತ ವರ್ತನೆ. ಕಲಾಪಕ್ಕೆ ಭಾಗವಹಿಸುವಾಗ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬ ಸಾಮಾನ್ಯ ಪರಿಜ್ಞಾನ ಇಲ್ಲ. ಹಾಗಾಗಿ, ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ನ್ಯಾಯಾಲಯವು ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈ ಬಗ್ಗೆ ನ್ಯಾಯಾಲಯಗಳು ಕೂಡ ಕೆಲವೊಂದು ನಿಯಮಗಳನ್ನು ಕೂಡ ರಚಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಆನ್‌ಲೈನ್ ನ್ಯಾಯಾಲಯದ ವಿಚಾರಣೆಯಲ್ಲಿ ಅನುಚಿತ ವರ್ತನೆಯ ನಿದರ್ಶನ ಇದೇ ಮೊದಲಲ್ಲ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗುವಾಗ ಸಿಗರೇಟ್ ಸೇದುತ್ತಿದ್ದ ದೂರುದಾರನಿಗೆ ಗುಜರಾತ್ ಹೈಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ₹50,000 ದಂಡ ವಿಧಿಸಿತ್ತು.
ಅದೇ ರೀತಿ, ಮಾರ್ಚ್‌ನಲ್ಲಿ ದೆಹಲಿ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನ ಪ್ರಕರಣದಲ್ಲಿ ಹಾಜರಾಗುವಾಗ ಸಿಗರೇಟ್ ಸೇದುತ್ತಿದ್ದ ಕಕ್ಷಿದಾರನೋರ್ವನಿಗೆ ಸಮನ್ಸ್ ನೀಡಿತ್ತು.