ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಇರುವಲ್ಲಿಗೆ ಅಥವಾ ಮನೆ ಬಾಗಿಲಿಗೆ ದೊರೆಯುವ ವ್ಯವಸ್ಥೆ ಹೆಚ್ಚುತ್ತಿದೆ. ಜನರು ತಮ್ಮ ಓಡಾಟವನ್ನು ಕಡಿಮೆ ಮಾಡಲು ಆರಂಭವಿಸಿದ್ದಾರೆ. ಆನಾರೋಗ್ಯಗಳು ಕಾಡಲಾರಂಭಿಸುತ್ತಿವೆ. ಹಿಗಾಗಿ, ಪ್ರತಿಯೊಬ್ಬರು ಕನಿಷ್ಠ ದೈಹಿಕ ಶ್ರಮ ವ್ಯಯಿಸಬೇಕು, ವ್ಯಾಯಾಮ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ, ಯುವತಿಯೊಬ್ಬರು ಕೇವಲ 180 ಮೀಟರ್‌ಗಳ ಪ್ರಯಾಣವನ್ನು ನಡಿಗೆಯಲ್ಲಿ ಹೋಗದೆ, ‘ಓಲಾ ಬೈಕ್’ ಬುಕ್ ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
180 ಮೀಟರ್ ದೂರ ಎಂಬುದು ಅರಾಮದಾಯ ನಡಿಗೆಯ ಅಂತರ. ಇಷ್ಟು ಕಡಿಮೆ ದೂರದ ಪ್ರಯಾಣಕ್ಕೆ ಸ್ವಂತ ವಾಹನಗಳನ್ನು ಕೊಂಡೊಯ್ಯುವುದನ್ನು ಬಹುತೇಕರು ಮಾಡುತ್ತಾರೆ. ಆದರೆ, ಇಷ್ಟು ಕಡಿಮೆ ಅಂತರದ ಪ್ರಯಾಣಕ್ಕೆ ‘ಕ್ಯಾಬ್’ಗಳನ್ನು ಬುಕ್ ಮಾಡಿಕೊಂಡು ಹೋಗುವುದು ಇದೇ ಮೊದಲ ಪ್ರಕರಣ ಇರಬಹುದು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಹಲವಾರು ನೆಟ್ಟಿಗರು 180 ಮೀಟರ್ ಪ್ರಯಾಣಕ್ಕೂ ಓಲಾ ಬುಕ್ ಮಾಡಿದವರ ಕುರಿತು ಹಾಸ್ಯ ಮಾಡುತ್ತಿದ್ದಾರೆ. ಆದರೆ, ಬೀದಿ ನಾಯಿಗಳ ದಾಳಿ ಮತ್ತು ಕಾಟಕ್ಕೆ ಹೆದರಿ ಆಕೆ ಕಡಿಮೆ ಅಂತರದ ಪ್ರಯಾಣಕ್ಕೂ ಓಲಾ ಬೈಕ್‌ಅನ್ನು ಅವಲಂಬಿಸಿದ್ದರೆಂದು ವಿಡಿಯೋದಲ್ಲಿನ ಸಂಭಾಷಣೆಯಲ್ಲಿ ಗೊತ್ತಾಗಿದೆ. ಆಕೆ, ತನ್ನ ಕಡಿಮೆ ಅಂತರದ ಪ್ರಯಾಣಕ್ಕೆ 19 ರೂ.ಗಳನ್ನು ಪಾವತಿಸಿದ್ದಾರೆ.
ಆದಾಗ್ಯೂ, ಈ ವಿಡಿಯೋ ಯಾವ ನಗರ ಅಥವಾ ಪ್ರದೇಶದ್ದು ಎಂಬುದು ಗೊತ್ತಾಗಿಲ್ಲ. ಆದರೆ, ಓಲಾ ಬೈಕ್ ಚಾಲಕ ಮತ್ತು ಯುವತಿ ಹಿಂದಿಯಲ್ಲಿ ಸಂಭಾಷಣೆ ನಡೆಸಿದ್ದು, ಘಟನೆಯು ಉತ್ತರ ಭಾರತದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿದೆ.