ವೈಎಸ್‌ಆರ್ ತೆಲಂಗಾಣ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ವೈ ಎಸ್ ಶರ್ಮಿಳಾ ನವದೆಹಲಿಯ ಎಐಸಿಸಿ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಮುಖ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆಯಾದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈ ಎಸ್ ಶರ್ಮಿಳಾ, ಕಾಂಗ್ರೆಸ್ ದೇಶದ ಅತಿ ದೊಡ್ಡ ಜಾತ್ಯತೀತ ಪಕ್ಷವಾಗಿದ್ದು ಎಲ್ಲ ಸಮುದಾಯಗಳಿಗೆ ಅಚಲವಾಗಿ ಸೇವೆ ಸಲ್ಲಿಸುತ್ತದೆ ಹಾಗೂ ಎಲ್ಲ ವರ್ಗದ ಜನರನ್ನು ಒಂದುಗೂಡಿಸುತ್ತದೆ. ತಮಗೆ ಯಾವುದೇ ಜವಾಬ್ದಾರಿ ಕೊಟ್ಟರೂ ತಾವು ಅದನ್ನು ಪರಿಪೂರ್ಣವಾಗಿ ನಿರ್ವಹಿಸುವುದಾಗಿ ತಿಳಿಸಿದ್ದಾರೆ.
“ನಮ್ಮ ತಂದೆಯವರ ಕನಸು ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ನೋಡುವುದಾಗಿತ್ತು. ತಾವು ನಮ್ಮ ತಂದೆಯ ಕನಸಿಗೆ ತಮ್ಮ ಕೊಡುಗೆಯನ್ನು ನೀಡುವುದಾಗಿ” ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಗೆ ಗುಡಿ ಕಟ್ಟುವ ಮುನ್ನ ದರಿದ್ರ ನಾರಾಯಣರತ್ತ ನೋಡುವರೇ ದೊರೆಗಳು?
ಶರ್ಮಿಳಾ ಅವರ ಪತಿ ಅನಿಲ್ ಕುಮಾರ್ ಮಾತನಾಡಿ, ನಾವು ಕಾಂಗ್ರೆಸ್ ಕುಟುಂಬದ ಭಾಗವಾಗಲು ಬಯಸುತ್ತೇವೆ. ಪಕ್ಷ ಯಾವುದೇ ನಿರ್ಧಾರ ಕೈಗೊಂಡರು ಶರ್ಮಿಳಾ ಅವರು ಬದ್ಧವಾಗಿರುತ್ತಾರೆ ಆಕೆ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಆಂಧ್ರ ಪ್ರದೇಶ ರಾಜಕೀಯದಲ್ಲಿ ಪರಿಣಾಮ ಬೀರಲಿದೆ” ಎಂದು ಹೇಳಿದರು.
ಶರ್ಮಿಳಾ ಅವರು ಆಂಧ್ರಪ್ರದೇಶದ ಅವಿಭಜಿತ ಮುಖ್ಯಮಂತ್ರಿಯಾಗಿದ್ದ ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿಯಾಗಿದ್ದು, ಈಕೆಯ ಸಹೋದರ ವೈ ಎಸ್ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶರ್ಮಿಳಾ ಅವರು ತಮ್ಮ ನಿಕಟಪೂರ್ವ ಪಕ್ಷ ವೈಎಸ್‌ಆರ್ ತೆಲಂಗಾಣ ಕಾಂಗ್ರೆಸ್ ಎಲ್ಲೂ ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.