ಈ ದಿನ ಸಂಪಾದಕೀಯ | ಹರಿಗೆ ಗುಡಿ ಕಟ್ಟುವ ಮುನ್ನ ದರಿದ್ರ ನಾರಾಯಣರತ್ತ ನೋಡುವರೇ ದೊರೆಗಳು?

Date:

ರಾಮಮಂದಿರ ಬಹುಸಂಖ್ಯಾತ ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎಂದೇ ಇಟ್ಟುಕೊಳ್ಳೋಣ. ಅದಕ್ಕಿಂತಲೂ ಮುಖ್ಯವಾಗಿ ಜೊತೆಗೆ ದೇಶದ ಜನರ ಯೋಗಕ್ಷೇಮ ನೋಡಿಕೊಳ್ಳುವುದು, ಅವರಿಗೆ ಇರಲು ಮನೆ, ತಿನ್ನಲು ಅನ್ನ, ಶಿಕ್ಷಣ, ಆರೋಗ್ಯ ಸೇವೆ ಪೂರೈಸಿ ಸಲಹುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದೆ. ಅದನ್ನು ನಮ್ಮ ಸರ್ಕಾರಗಳು ಮರೆಯದಿರಲಿ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಹೊಸ ಹುರುಪು ಕಾಣುತ್ತಿದೆ. ಜನರನ್ನು ಸಂಘಟಿಸುವುದು, ಮನೆ ಮನೆಗೆ ತೆರಳಿ ಅದರ ಬಗ್ಗೆ ಹೊಸ ಸುದ್ದಿ ತಿಳಿಸುವ ಮೂಲಕ ಜನಸಂಪರ್ಕ ಸಾಧಿಸುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣವು 180 ಮಿಲಿಯನ್ ಡಾಲರ್‌ಗಳ ಬೃಹತ್ ಯೋಜನೆಯಾಗಿದೆ. ಮಂದಿರದ ಜೊತೆಗೆ ಅಯೋಧ್ಯೆಯಲ್ಲಿ ಹೊಸ ರಸ್ತೆ, ವಿಮಾನ ನಿಲ್ದಾಣ, ಸೇತುವೆಗಳು ತಲೆ ಎತ್ತುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ 15,700 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿಗಳಿಗೆ ಮೊನ್ನೆಯಷ್ಟೇ ಚಾಲನೆ ನೀಡಿದ್ದಾರೆ. 1,450 ಕೋಟಿ ರೂಪಾಯಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಹೀಗೆ ಅಲ್ಲಿ ಬಣ್ಣ ಬಣ್ಣದ ಚಿತ್ರಗಳು; ಸಡಗರ, ಸಂಭ್ರಮದ ಕ್ಷಣಗಳು.

ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರಕ್ಕಾಗಿ ಇದುವರೆಗೆ 900 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇನ್ನೂ ಅದರ ಬೊಕ್ಕಸದಲ್ಲಿ 3,000 ಕೋಟಿ ರೂಪಾಯಿ ಇದೆ. ಭಾರತದಲ್ಲಿ ಮಾತ್ರವೇ ಅಲ್ಲ, ವಿದೇಶಗಳಿಂದಲೂ ರಾಮಮಂದಿರ ನಿರ್ಮಾಣಕ್ಕಾಗಿ ಕೋಟಿಗಟ್ಟಲೇ ಹಣ ಹರಿದು ಬರುತ್ತಿದೆ.
ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ವಿವಿಧ ರೀತಿಯಲ್ಲಿ ಜನರ ಕೆಲಸ ಮಾಡುತ್ತಿದ್ದ ಅನೇಕ ಲಾಭರಹಿತ ಸಂಸ್ಥೆಗಳ (ಎನ್‌ಜಿಒ) ವಿದೇಶಿ ದೇಣಿಗೆ ಸ್ವೀಕಾರ ಪರವಾನಗಿ (ಎಫ್‌ಸಿಆರ್‌ಎ) ರದ್ದುಪಡಿಸಿತ್ತು. ಜನವರಿ 2020 ರಲ್ಲಿ, 10,000 ಕ್ಕೂ ಹೆಚ್ಚು ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಜನವರಿ 2022 ರಲ್ಲಿ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿ, ಆಕ್ಸ್‌ಫಾಮ್ ಇಂಡಿಯಾ, ದೆಹಲಿ ವಿಶ್ವವಿದ್ಯಾಲಯ, ಐಐಟಿ ದೆಹಲಿ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಂತಹ ಪ್ರಮುಖ ಘಟಕಗಳು ಸೇರಿದಂತೆ ಸುಮಾರು 6,000 ಲಾಭರಹಿತ ಸಂಸ್ಥೆಗಳ ಎಫ್‌ಸಿಆರ್‌ಎ ಪರವಾನಗಿಯನ್ನು ಸರ್ಕಾರ ವಾಪಸ್ ಪಡೆದಿದೆ. ತೀರಾ ಇತ್ತೀಚೆಗೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಆರ್‌ಆರ್‌) ಮತ್ತು ಮಕ್ಕಳು, ಮಹಿಳೆಯರು ಮತ್ತು ಲಿಂಗ ಆಧಾರಿತ ಹಿಂಸಾಚಾರದಿಂದ ಬದುಕುಳಿದವರಿಗೆ ಕೆಲಸ ಮಾಡುವ ಮೂರು ಎನ್‌ಜಿಒಗಳ ಪರವಾನಗಿಯನ್ನು ರದ್ದು ಪಡಿಸಿತ್ತು. ಇಂಥ ಕೇಂದ್ರ ಸರ್ಕಾರ, ವಿದೇಶಿ ದೇಣಿಗೆ ಸ್ವೀಕರಿಸಲು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಉದಾರವಾಗಿ ಎಫ್‌ಸಿಆರ್‌ಎ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಮಮಂದಿರ ಉದ್ಘಾಟನೆಯ ಸಿದ್ಧತೆ ನಡೆದಿರುವಾಗಲೇ ಬಿಜೆಪಿ ‘ಫಿರ್ ಆಯೇಗಾ ಮೋದಿ’ ಎನ್ನುವ ಹಾಡನ್ನು ಬಿಡುಗಡೆ ಮಾಡುವ ಮೂಲಕ 2024ರ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಮೋದಿ ಕಾಶಿ, ಅಯೋಧ್ಯೆ, ಉಜ್ಜಯಿನಿ ಮುಂತಾದೆಡೆ ಮಾಡುತ್ತಿರುವ ಹಿಂದೂ ಪುನರುತ್ಥಾನವಾದಿ ಕೆಲಸಗಳು ಪ್ರಧಾನಿಗಳ ಸಾಧನೆಯ ಪಟ್ಟಿಯಲ್ಲಿ ವಿಡಿಯೋದ ಆರಂಭದಲ್ಲೇ ಕಾಣಿಸಿಕೊಂಡಿವೆ. ‘ರಾಮ ಮಂದಿರ ಕಟ್ಟಿದ್ದು ಯಾರು, 370 ತೆಗೆದಿದ್ದು ಯಾರು?’ ಎನ್ನುವಂಥ ಸಾಲುಗಳು ಹಾಡಿನಲ್ಲಿವೆ. ವಿಡಿಯೋದಲ್ಲಿ ಮೋದಿ ಸರ್ಕಾರದ ಇತರೆ ಕೆಲಸಗಳನ್ನೂ ತೋರಿಸಲಾಗಿದೆ.

ಅಯೋಧ್ಯೆ ರಾಮ ಮಂದಿರದ ಸಡಗರದ ಚಿತ್ರಗಳ ಜೊತೆಜೊತೆಯಲ್ಲೇ ದೇಶದಲ್ಲಿ ದಾರುಣ ಚಿತ್ರಗಳೂ ಅನಾವರಣಗೊಳ್ಳುತ್ತಿವೆ. ದೇಶದಲ್ಲಿ ನಿರುದ್ಯೋಗ ನಿರಂತರವಾಗಿ ಏರುತ್ತಲೇ ಇದೆ. 2023ರ ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ ದಾಖಲೆಯ 10.5%ಗೆ ಮುಟ್ಟಿತ್ತು. ಉತ್ತರದ ರಾಜ್ಯಗಳಿಂದ ದಕ್ಷಿಣಕ್ಕೆ ಕೂಲಿ ಅರಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಡಿಶಾದಿಂದ ಹಾಗೆ ಬಂದ ಕುಟುಂಬವೊಂದರ ಅಪ್ರಾಪ್ತ ಬಾಲಕಿ ಮೇಲೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 11 ಮಂದಿ ಕಿರಾತಕರು ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ವರದಿಯಾಗಿದೆ.

ಭಾರತದಲ್ಲಿ 2021ರ ಅಂಕಿಸಂಖ್ಯೆಯಂತೆ, ತೀವ್ರ ಬಡತನ ಹೊಂದಿರುವವರ ಸಂಖ್ಯೆ ಶೇ. 11.9ರಷ್ಟಿದೆ. ನವಜಾತ ಶಿಶುಗಳ ಮರಣ ಸಂಖ್ಯೆ ಅಧಿಕವಾಗಿರುವ ಜಗತ್ತಿನ ದೇಶಗಳಲ್ಲಿ ಭಾರತವೂ ಒಂದಾಗಿದೆ. 2022ರಲ್ಲಿ 2,227 ಮಂದಿ ಬಿಸಿಗಾಳಿಯಿಂದ ಸಾವನ್ನಪ್ಪಿದ್ದರು. ಚಳಿ, ಗಾಳಿ, ಮಳೆಯಿಂದ ರಕ್ಷಣೆ ಸಿಗದೇ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಪ್ರತಿವರ್ಷ ಪ್ರವಾಹ, ಬರಗಾಲದಂಥ ಪ್ರಕೃತಿ ವಿಕೋಪಗಳಿಂದ ಕೋಟ್ಯಂತರ ಮಂದಿ ನಿರಾಶ್ರಿತರಾಗುತ್ತಿದ್ದು, ತಮ್ಮ ಬದುಕಿನ ನೆಲೆ ಕಂಡುಕೊಳ್ಳುತ್ತಿದ್ದಾರೆ. ಒಂದು ಮೂಲದ ಪ್ರಕಾರ, ದೇಶದ 1 ಕೋಟಿ 87 ಲಕ್ಷ ಮಂದಿಗೆ ಮನೆ ಇಲ್ಲ.

ರಾಮಮಂದಿರ ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎಂದೇ ಇಟ್ಟುಕೊಳ್ಳೋಣ. ಅದಕ್ಕಿಂತಲೂ ಮುಖ್ಯವಾಗಿ ಜೊತೆಗೆ ದೇಶದ ಜನರ ಯೋಗಕ್ಷೇಮ ನೋಡಿಕೊಳ್ಳುವುದು, ಅವರಿಗೆ ಇರಲು ಮನೆ, ತಿನ್ನಲು ಅನ್ನ ಕೊಟ್ಟು ಸಲಹುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದೆ.

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?
ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ?

ಹುಚ್ಚ! ನೀನು ಹಳ್ಳಿಗೋಡು
ದೀನ ಜನರ ಪಾಡ ನೋಡು
ಇರಲು ಗುಡಿಯು ಇಲ್ಲವಲ್ಲ
ಹೊಟ್ಟೆ ತುಂಬ ಅನ್ನವಿಲ್ಲ
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ಎಂದು ದಶಕಗಳ ಹಿಂದೆಯೇ ಲೇಖಕ, ಹೋರಾಟಗಾರ ದಿನಕರ ದೇಸಾಯಿ ಬರೆದ ಕವನ ಇವತ್ತಿಗೂ ಅತ್ಯಂತ ಪ್ರಸ್ತುತವಾಗಿದೆ. ದಿನಕರ ದೇಸಾಯಿಯವರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದವರು. ಒಂದು ಅವಧಿಗೆ ಲೋಕಸಭಾ ಸದಸ್ಯರೂ ಆಗಿದ್ದರು. ತಮ್ಮ ಕೊನೆಯುಸಿರಿರುವವರೆಗೂ ರೈತ, ಕಾರ್ಮಿಕ ಹೋರಾಟಗಳಲ್ಲಿ ಭಾಗಿಯಾಗಿದ್ದವರು. ದರಿದ್ರ ನಾರಾಯಣನ ಸೇವೆಯಲ್ಲಿಯೇ ದೇವರನ್ನು ಕಾಣುವ ಅಂಥ ರಾಜಕಾರಣಿಗಳು, ಜನಪ್ರತಿನಿಧಿಗಳು ನಮಗಿಂದು ಬೇಕಾಗಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...