ಮಾಘ ಪೂರ್ಣಿಮೆಯ ಗಂಗಾ ಸ್ನಾನಕ್ಕೆಂದು ಭಕ್ತರನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ನಿಯಂತ್ರಣ ತಪ್ಪಿ ಕೆರೆಯೊಂದಕ್ಕೆ ಉರುಳಿಬಿದ್ದ ಪರಿಣಾಮ 8 ಮಕ್ಕಳು ಸೇರಿದಂತೆ 22 ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಪಟಿಯಾಲಿ-ದರಿಯಾವ್ಗಂಜ್ ರಸ್ತೆಯಲ್ಲಿರುವ ಕೆರೆಯೊಂದಕ್ಕೆ ಬಿದ್ದಿದ್ದು, ಕೆರೆಗೆ ಬಿದ್ದ ನಂತರ ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿದೆ. ಹೀಗಾಗಿ ಹೆಚ್ಚಿನ ಭಕ್ತರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಕಾಸ್ಗಂಜ್ ಎಂಬಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಉರುಳಿ ಬಿದ್ದ ಟ್ರ್ಯಾಲಿಯಲ್ಲಿ ಒಟ್ಟು 40 ಮಂದಿ ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#UPDATE | CMO Kasganj, Rajiv Agrawal says, “22 deaths reported in Kasganj accident, five people are admitted here and two have been discharged…Around 10 people are injured…” pic.twitter.com/AqHFPPt8r9
— ANI UP/Uttarakhand (@ANINewsUP) February 24, 2024
ಸೇತುವೆ ಮೇಲೆ ಹೋಗುತ್ತಿದ್ದ ವೇಳೆ ಏಕಾಏಕಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದ ಬಳಿಕ ಕೆರೆಗೆ ಮಗುಚಿ ಬಿದ್ದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದು ಸ್ಥಳೀಯರು ನೀರಿನಲ್ಲಿದ್ದವರನ್ನ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೂ ಕೂಡ 8 ಮಕ್ಕಳು ಸೇರಿ 15 ಮಂದಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರ ಪೈಕಿ ಎಂಟು ಮಂದಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ವೈದ್ಯಾಧಿಕಾರಿ ಡಾ.ರಾಜೀವ್ ಅಗರ್ವಾಲ್, “ಇದುವರೆಗೆ 22 ಜನರ ಸಾವು ದೃಢಪಟ್ಟಿದೆ. ಪಟಿಯಾಲಿಯ ಸಿಎಚ್ಸಿಯಲ್ಲಿ ಏಳು ಮಕ್ಕಳು ಮತ್ತು ಎಂಟು ಮಹಿಳೆಯರು ಮೃತಪಟ್ಟಿದ್ದಾರೆ. 10 ಮಂದಿ ಗಾಯಾಳುಗಳಾಗಿದ್ದಾರೆ” ಎಂದು ಹೇಳಿದ್ದಾರೆ.
ಘಟನೆ ನಡೆದ ಸ್ಥಳದಿಂದ ಜಿಲ್ಲಾ ಆಸ್ಪತ್ರೆಯವರೆಗೆ ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲದ ಕಾರಣದಿಂದ ಘಟನಾ ಸ್ಥಳಕ್ಕೆ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಲುಪಲು ತಡವಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಜಿಲ್ಲಾಧಿಕಾರಿ ಸುಧಾ ವರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ರಜತ್ ಕೌಶಿಕ್ ಸೇರಿದಂತೆ ಹಲವು ಮಂದಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
#WATCH | Uttar Pradesh: A trolley carrying devotees overturned in Kasganj this morning, resulting in the death of 15 persons including children.
On the accident, DM Kasganj Sudha Verma says, “Some devotees from Etah were travelling to Kasganj this morning, when the trolley… pic.twitter.com/3VKohTQarg
— ANI UP/Uttarakhand (@ANINewsUP) February 24, 2024
ಸತ್ತವರಲ್ಲಿ ಒಂದೇ ಕುಟುಂಬದ ಅನೇಕ ಜನರು ಸೇರಿದ್ದಾರೆ ಎಂದು ತಿಳಿದು ಬಂದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತರೆಲ್ಲರೂ ಇಟಾ ಜಿಲ್ಲೆಯ ಜೈತಾರಾ ಪ್ರದೇಶದವರು ಎಂದು ಹೇಳಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ನೀಡುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.
