ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಸ್ನಿಂದ ಮೃತಪಟ್ಟಿರುವುದು ದೃಢಪಟ್ಟಿರುವುದಾಗಿ ಕೇಂದ್ರದ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ದೃಢಪಡಿಸಿದ್ದಾರೆ.
ಇಂದು ದೆಹಲಿಯಲ್ಲಿ ಮಾತನಾಡಿದ ಅವರು, ಪುಣೆ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಈ ರೋಗ ಲಕ್ಷಣ ಇರುವುದು ದೃಢಪಟ್ಟಿದೆ. ಶಂಕಿತ ನಿಫಾ ತಗಲಿರುವ ಇತರ ನಾಲ್ಕು ಮಾದರಿಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
#WATCH | On two suspected deaths due to Nipah virus in Kerala, Union Health Minister Dr Mansukh Mandaviya says, "They have been confirmed…" pic.twitter.com/6MwAwsfOOd
— ANI (@ANI) September 12, 2023
ಕೇಂದ್ರದಿಂದ ಕೇರಳಕ್ಕೆ ತಂಡವನ್ನು ಕಳುಹಿಸಲಾಗಿದೆ. ನಿಫಾ ಕುರಿತು ಕೇಂದ್ರದ ತಂಡ ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಆಗಸ್ಟ್ 30 ರಂದು ಮೊದಲ ಪ್ರಕರಣ ದಾಖಲಾಗಿತ್ತು. ನಿನ್ನೆ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಜ್ವರದಿಂದ ಇಬ್ಬರು ಸಾವನ್ನಪ್ಪಿದ್ದರು. ಸಾವಿನ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನಿಫಾ ಸೋಂಕಿನ ಲಕ್ಷಣ ಕಂಡುಬಂದಿರುವ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂಭತ್ತು ವರ್ಷದ ಮಗು ವೆಂಟಿಲೇಟರ್ನಲ್ಲಿದೆ.
ಪರೀಕ್ಷೆ ಫಲಿತಾಂಶ ಬಂದ ನಂತರ ನಿನ್ನೆ ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
The sample of a person, who died at Kozhikode following fever and breathlessness on Monday, tested positive for #Nipahvirus, said health officials.
— IANS (@ians_india) September 12, 2023
As soon as the result of the sample from National Institute of Virology Pune came, a central team of top officials from Delhi will… pic.twitter.com/otS8ByZDMI
ಆಗಸ್ಟ್ 30 ರಂದು ಅವರು ಜ್ವರದಿಂದ ಸಾವನ್ನಪ್ಪಿದ್ದರು. 10 ದಿನಗಳ ನಂತರ, ನಾಲ್ಕು ಸಂಬಂಧಿಕರಲ್ಲಿ ರೋಗ ಲಕ್ಷಣಗಳು ಕಂಡು ಬಂದಿದ್ದವು. ಈಗ ಮೃತಪಟ್ಟವರ ಇಬ್ಬರು ಮಕ್ಕಳು, ಅವರ ಸಂಬಂಧಿ ಮತ್ತು ಸಂಬಂಧಿಕರ ಮಗು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಶಂಕಿತರ ರಕ್ತ ಮತ್ತು ದ್ರವವನ್ನ ಪರೀಕ್ಷೆಗಾಗಿ ಪುಣೆ ವೈರಾಲಜಿ ಲ್ಯಾಬ್ಗೆ ಕಳುಹಿಸಲಾಗಿದೆ.
ಸಾವುಗಳು ವರದಿಯಾದ ಬೆನ್ನಲ್ಲಿಯೇ ಕೇರಳದ ಆರೋಗ್ಯ ಇಲಾಖೆ ಸೋಮವಾರ ರಾತ್ರಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಹೆಲ್ತ್ ಅಲರ್ಟ್ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ.
2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿತ್ತು. ಆ ಬಳಿಕ 2021ರಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ನಿಫಾ ವೈರಸ್ ಪ್ರಸಾರದ ಬಗ್ಗೆ ವರದಿಯಾಗಿತ್ತು. ನಿಫಾ ವೈರಸ್ಗೆ ಇದುವರೆಗೆ ಯಾವುದೇ ಚುಚ್ಚುಮದ್ದಾಗಲೀ, ಔಷಧವಾಗಲಿ ಇನ್ನೂ ಕಂಡುಹಿಡಿಯಲಾಗಿಲ್ಲ.
ನಿಫಾ ವೈರಸ್ ಏಷ್ಯಾದಲ್ಲಿ ತಿಳಿದಿರುವ ಕೆಲವೇ ಸಾಂಕ್ರಾಮಿಕಗಳಿಗೆ ಕಾರಣವಾಗಿದ್ದರೂ, ಇದು ವ್ಯಾಪಕ ಶ್ರೇಣಿಯ ಪ್ರಾಣಿಗಳಿಗೆ ಸೋಂಕು ತರುತ್ತದೆ ಮತ್ತು ಜನರಲ್ಲಿ ತೀವ್ರವಾದ ಕಾಯಿಲೆ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ನಿಫಾ ವೈರಸ್ ಬಗ್ಗೆ ಆಶಿಕ್ ಅಬು ನಿರ್ದೇಶನದಲ್ಲಿ ‘ವೈರಸ್’ ಎಂಬ ಮಲಯಾಳಂ ಸಿನಿಮಾ ಕೂಡ ಕೆಲ ವರ್ಷಗಳ ಹಿಂದೆ ಬಿಡುಗಡೆಗೊಂಡಿತ್ತು.