ಪ್ರಶ್ನೆಪತ್ರಿಕೆ ಸೋರಿಕೆ: ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದು ಪೊಲೀಸ್ ಪರೀಕ್ಷೆ ಅಮಾನ್ಯಗೊಳಿಸಿದ ಯೋಗಿ ಸರ್ಕಾರ

Date:

Advertisements

ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಅಭ್ಯರ್ಥಿಗಳ ನಿರಂತರ ಹೋರಾಟಕ್ಕೆ ಮಣಿದಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಶನಿವಾರ ಅಧಿಕೃತ ಘೋಷಣೆ ಹೊರಡಿಸಿದೆ.

ಫೆಬ್ರವರಿ 17 ಮತ್ತು 18ರಂದು ಎರಡು ಹಂತಗಳಲ್ಲಿ ನಡೆಸಲಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿತ್ತು. ಒಟ್ಟು 48 ಲಕ್ಷ ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 43 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು.

ಪ್ರಶ್ನೆಪತ್ರಿಕೆಯು ಸೋರಿಕೆಯಾಗಿರುವ ವಿಚಾರ ತಿಳಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಕಳೆದ 5-6 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸಿ, ಮರು ಪರೀಕ್ಷೆ ನಡೆಸುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದರು.

Advertisements

ಈ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ” ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ ಅಮಾನ್ಯಗೊಳಿಸಲಾಗಿದೆ. ಅಲ್ಲದೇ, 6 ತಿಂಗಳೊಳಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ಯುವಕರ ಪರಿಶ್ರಮ ಹಾಗೂ ಪರೀಕ್ಷೆಯ ಪಾವಿತ್ರ್ಯತೆಯೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇಲೆ ಇಲ್ಲಿಯವರೆಗೆ ಅನೇಕ ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ, ಪರೀಕ್ಷೆ ರದ್ದಾಗದಿದ್ದರಿಂದ ರೊಚ್ಚಿಗೆದ್ದಿದ್ದ ಲಕ್ಷಾಂತರ ಮಂದಿ ಅಭ್ಯರ್ಥಿಗಳು, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಲ್ಲದೇ, ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದರು. ಕೊನೆಗೂ ಈ ಆಗ್ರಹಕ್ಕೆ ಮಣಿದಿರುವ ಯೋಗಿ ಸರ್ಕಾರ, ಪರೀಕ್ಷೆಯನ್ನೇ ಅಮಾನ್ಯಗೊಳಿಸಿದೆ.

ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪ್ರಕರಣದ ಪತ್ರಿಕೆ ಸೋರಿಕೆ ವಿಚಾರವಾಗಿ ಆಂತರಿಕ ತನಿಖೆಗಾಗಿ ನೇಮಕಾತಿ ಮಂಡಳಿಯು ತನಿಖಾ ಸಮಿತಿಯನ್ನು ರಚಿಸಿದೆ. ಎಡಿಜಿ ಶ್ರೇಣಿಯ ಅಧಿಕಾರಿ ಈ ವಿಚಾರಣಾ ಸಮಿತಿಯ ನೇತೃತ್ವ ವಹಿಸಿದ್ದು, ಇದುವರೆಗೆ ಸುಮಾರು 1500 ದೂರುಗಳನ್ನು ಅಭ್ಯರ್ಥಿಗಳು ಇ-ಮೇಲ್ ಮೂಲಕ ನೇಮಕಾತಿ ಮಂಡಳಿಗೆ ಕಳುಹಿಸಿದ್ದಾರೆ. ಆಂತರಿಕ ಸಮಿತಿಯು ಈ ದೂರುಗಳನ್ನು ತನಿಖೆ ಮಾಡಲಿದೆ. ಪರೀಕ್ಷೆಯ ಮೊದಲು ಪತ್ರಿಕೆಗಳು ನಿಜವಾಗಿ ಸೋರಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲಿದೆ.

ಈ ಸಮಿತಿಯ ತನಿಖೆಯನ್ನು ಎಡಿಜಿಪಿ ಅಶೋಕ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದೆ. ಪೊಲೀಸ್ ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ಈ ಸಮಿತಿ ರಚಿಸಿದ್ದಾರೆ.

ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಭೀಕರ ಅಪಘಾತ; ಕೆರೆಗೆ ಉರುಳಿದ ಟ್ರ್ಯಾಕ್ಟರ್ ಟ್ರ್ಯಾಲಿ: 8 ಮಕ್ಕಳು ಸೇರಿ 22 ಮಂದಿ ಮೃತ್ಯು

ಅಕ್ರಮ ನಡೆದಿರುವ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ಇದ್ದಲ್ಲಿ ಫೆಬ್ರವರಿ 27 ರವರೆಗೆ @secyappoint@nic.in ಗೆ ಈ ಮೇಲ್ ಮೂಲಕ ದೂರು ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ. ಕಳೆದ ಶುಕ್ರವಾರ ಸಂಜೆಯವರೆಗೆ ಸುಮಾರು 1500 ದೂರುಗಳನ್ನು ಅಭ್ಯರ್ಥಿಗಳು ಪೊಲೀಸ್ ನೇಮಕಾತಿ ಮಂಡಳಿಗೆ ಕಳುಹಿಸಿದ್ದಾರೆ. ಕೆಲವು ಶಿಕ್ಷಕರು ಮತ್ತು ಅಭ್ಯರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ನಿಯೋಗ ತೆರಳಿ, ಅಕ್ರಮ ನಡೆದಿರುವ ದಾಖಲೆಗಳನ್ನು ನೀಡಿದರು ಮತ್ತು ಪತ್ರಿಕೆಗಳು ಹೇಗೆ ಸೋರಿಕೆಯಾಗಿದೆ ಎಂಬುದರ ಕುರಿತು ವಿವರಣೆ ನೀಡಿದ್ದರು.

ಸದ್ಯ, ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಯ ಪೇಪರ್ ಸೋರಿಕೆಯಾಗಿ ಪರೀಕ್ಷೆಯನ್ನೇ ರದ್ದುಗೊಳಿಸಿ 6 ತಿಂಗಳೊಳಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿರುವುದರಿಂದ ಅಭ್ಯರ್ಥಿಗಳು ಪ್ರತಿಭಟನೆ ಹಿಂದೆಗೆದುಕೊಂಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಹಬ್ಬಿದ ಆರೋಪ: ಯೂಟ್ಯೂಬ್ ಶಿಕ್ಷಕನ ಬಂಧನ

ಈ ನಡುವೆ ಈ ಪ್ರಕರಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿದ ಆರೋಪದ ಮೇಲೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲಾ ಪೊಲೀಸರು ಯೂಟ್ಯೂಬ್ ಶಿಕ್ಷಕ ಲಲಿತ್ ಪಾಠಕ್ ಎಂಬುವವರನ್ನು ಬಂಧಿಸಿದ್ದಾರೆ. ಲಲಿತ್ ಪಾಠಕ್ ಯುಪಿ ಪೊಲೀಸ್ ನೇಮಕಾತಿ ಪತ್ರಿಕೆ ಸೋರಿಕೆಯಾಗಿದೆ ಎಂದು ತನ್ನ ಯೂಟ್ಯೂಬ್‌ನ ಮೂಲಕ ವದಂತಿಗಳನ್ನು ಹರಡಿರುವ ಆರೋಪ ಹೊರಿಸಲಾಗಿದೆ.

ಈ ನಡುವೆ ಯೋಗಿ ಸರ್ಕಾರ ಪರೀಕ್ಷೆಯನ್ನೇ ರದ್ದುಗೊಳಿಸಿರುವುದರಿಂದ ಅವರನ್ನು ಬಿಡುಗಡೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X