ಡಾ. ಕೆ. ಬಾಲಗೋಪಾಲ್ ಇಂಟಲೆಕ್ಚುಯಲ್ ಆಕ್ಟಿವಿಸ್ಟ್ ಆಗಿದ್ದವರು ನಂತರ ಆಕ್ಟಿವಿಸ್ಟ್ ಇಂಟಲೆಕ್ಚುಯಲ್ ಕೂಡಾ ಆದರು. ತಮ್ಮ ಜೀವನದ ಕಡೆಗಾಲದವರೆಗೂ ತಮ್ಮ ಆಕ್ಟಿವಿಸಂ ಹಾಗೂ ಇಂಟಲೆಕ್ಚುಯಲ್ ಚಟುವಟಿಕೆಗಳನ್ನು ನಡೆಸುತ್ತಲೇ ಬಂದವರು. ಅವರು ಬರೆದ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ. ಬಂಜಗೆರೆ ಜಯಪ್ರಕಾಶ್. 'ಅಭಿವೃದ್ಧಿ ಎಂಬ ವಿನಾಶ ಮತ್ತು ಇತರ...' ಎಂಬ ಪುಸ್ತಕ, ಆ. 3, 2024ರ ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಲೋಕಾರ್ಪಣೆಗೊಳ್ಳಲಿದೆ...
ಇಪ್ಪತ್ತನೇ ಶತಮಾನದ ಕೊನೆಯ ದಶಕಗಳಲ್ಲಿ, ಅದರಲ್ಲೂ 1980-90ರ ದಶಕಗಳಲ್ಲಿ ‘ಇಂಟಲೆಕ್ಚುಯಲ್ ಆಕ್ಟಿವಿಸ್ಟ್’ ಎನ್ನುವ ಪದ ಬೇಕಾದಷ್ಟು ಬಳಕೆಯಾಗುತ್ತಿತ್ತು. ಇಪ್ಪತ್ತೊಂದನೇ ಶತಮಾನಕ್ಕೆ ಪ್ರವೇಶಿಸುತ್ತಿದ್ದಂತೆ ‘ಪಬ್ಲಿಕ್ ಇಂಟಲೆಕ್ಚುಯಲ್’ ಎಂಬ ಪದದ ಬಳಕೆ ಹೆಚ್ಚಾಗತೊಡಗಿದೆ. ಕಾರಣವನ್ನು ಬಹುಶಃ ಹೀಗೆ ಊಹಿಸಬಹುದೇನೋ: 80-90ರ ದಶಕಗಳಲ್ಲಿ ಯುಜಿಸಿ ನಿಯಮಾವಳಿ ಅಷ್ಟೊಂದು ಕಠಿಣವಾಗಿರಲಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಅಧ್ಯಾಪಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಕಷ್ಟು ಅವಕಾಶ ಹೊಂದಿದ್ದರು. ನೇರವಾಗಿ ಚುನಾವಣೆಗೆ ಸಂಬಂಧಪಡದಿದ್ದ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳಿದ್ದವು. ಅವುಗಳಿಗೆ ಚುನಾವಣೆ ನಡೆಯುತ್ತಿತ್ತು. ಅಧ್ಯಾಪಕರ ಸಂಘಗಳು ಉದ್ಯೋಗ ಸಂಬಂಧಿ ವಿಷಯಗಳನ್ನು ಮಾತ್ರವಲ್ಲದೆ, ಪ್ರಜಾತಾಂತ್ರಿಕ ವ್ಯವಸ್ಥೆ ನಿರ್ವಹಣೆ ಹಾಗೂ ಸಮಾಜದಲ್ಲಿ ಜಾತ್ಯತೀತ, ಪ್ರಗತಿಪರ ಆಶಯಗಳ ಪ್ರತಿಪಾದನೆ; ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ವಿರುದ್ಧ ದನಿ ಎತ್ತುವುದು; ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾದಾಗಲೆಲ್ಲ ಪ್ರತಿಭಟನೆ ಕೈಗೊಳ್ಳುವುದು ಕೂಡ ನಡೆಸುತ್ತಿದ್ದವು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಅರ್ಥಪೂರ್ಣ ಒಡನಾಟ, ಬಾಂಧವ್ಯವಿತ್ತು.
ಯುಸಿಜಿ ನಿಯಮಾವಳಿ ಹೇಗಿತ್ತು ಎಂದರೆ ವಿಶ್ವವಿದ್ಯಾಲಯ ತನ್ನ ಆಂತರಿಕ ವಿಷಯಗಳಲ್ಲಿ ಬಹುತೇಕ ಸ್ವಾಯತ್ತತೆಯನ್ನು ಅನುಭವಿಸಬಹುದಿತ್ತು. ಹಾಗಾಗಿ ಅಧ್ಯಾಪಕರು ತಮಗೆ ಸರಿಯೆನಿಸಿದ ತತ್ವ, ಸಿದ್ಧಾಂತಗಳ ಪ್ರತಿಪಾದನೆಗೆ ಮುಕ್ತರಿದ್ದರು. ಆಗ ಇಂಟಲೆಕ್ಚುಯಲ್ ಆಕ್ಟಿವಿಸ್ಟ್‌ಗಳು ಬಹಳ ಕಡೆ ಕಂಡುಬರುತ್ತಿದ್ದರು. ಇಪ್ಪತ್ತನೇ ಶತಮಾನ ಕೊನೆಯಾಗುವುದರೊಂದಿಗೆ ಸರ್ಕಾರದ ‘ಸಂಕ್ಷೇಮ ಸಾಧನೆ’ ದೃಷ್ಟಿಕೋನದಲ್ಲಿ ಬದಲಾವಣೆ ಬಂದು, ಮುಕ್ತ ಮಾರುಕಟ್ಟೆ ಧೋರಣೆ ಅಧಿಕೃತಗೊಳ್ಳುತ್ತಿದ್ದಂತೆ ಕಾನೂನು – ಸುವ್ಯವಸ್ಥೆ ನಿರ್ವಹಣೆಯೇ ಅದರ ಆದ್ಯತೆಯಾಯಿತು. ಬಡತನ ನಿರ್ಮೂಲನೆ ಎಂಬ ಪದಜಾಲ ಅಪರೂಪಗೊಂಡು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ ಎಂಬ ನುಡಿಗಟ್ಟುಗಳು ಮೊಳಗತೊಡಗಿದವು.
ಇಂಟಲೆಕ್ಚುಯಲ್ ಆಕ್ಟಿವಿಸ್ಟ್‌ಗಳು ಸಂಕ್ಷೇಮ ಸಾಧನೆಯ ಗುರಿಗೆ ಒಂದುಮಟ್ಟಿಗೆ ಅಗತ್ಯವಿದ್ದಿರಬಹುದು ಅಥವಾ ಪ್ರಭುತ್ವಕ್ಕೆ ಆ ಮಟ್ಟಿನ ಉದಾರವಾದಿ ನಿಲುವಿದ್ದಿರಬಹುದು. ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವುದನ್ನು ಪರಮಗುರಿಯಾಗಿಸಿಕೊಂಡ, ಮುಕ್ತಮಾರುಕಟ್ಟೆಯನ್ನು ಆರಾಧ್ಯಧೈವವಾಗಿಸಿಕೊಂಡ ನಿಲುವಿಗೆ ಇಂಟಲೆಕ್ಚುಯಲ್ ಆಕ್ಟಿವಿಸ್ಟ್ ಅಭಿವೃದ್ಧಿಗೆ ಕಂಟಕಪ್ರಾಯನೆಂಬಂತೆ ಕಾಣತೊಡಗಿದ. ಅವನನ್ನು, ಬಿಜೆಪಿ ಸರ್ಕಾರ ಬಂದ ಮೇಲೆ, ಬಲಪಂಥೀಯ ಸಂಘಟನೆಗಳು ವಿಪರೀತ ಬಲ – ಸಂಪನ್ಮೂಲ ಕೂಡಿಸಿಕೊಂಡೊಡನೆ ಹೆಚ್ಚುಕಡಿಮೆ ಭಯೋತ್ಪಾದಕನ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲಾಯಿತು. ಅರ್ಬನ್ ನಕ್ಸಲರು ಎಂಬ ದೋಷಾರೋಪಣೆಯೂ ಪ್ರಚಲಿತಗೊಂಡಿತು. ವಿಶ್ವವಿದ್ಯಾಲಯದ ಅಧ್ಯಾಪಕರು ವಿಪರೀತ ನಿಯಮಾವಳಿಗಳ ಬಿಕ್ಕಟ್ಟಿಗೆ ಸಿಲುಕಿದರು. ಇನ್ನು ಕೆಲವರು ಹೆಚ್ಚಳಗೊಂಡ ಸಂಬಳ – ಸವಲತ್ತುಗಳ ಬಲೆಯೊಳಕ್ಕೆ ಸಿಲುಕಿ ಆಚೆ ಈಚೆ ಹೊರಳಲು ಪುರುಸೊತ್ತು ಇಲ್ಲದಂತಾದರು.
ಈ ನಡುವೆ, ಪ್ರಭುತ್ವ ದಮನಕಾರಿ ನಿಲುವು ಅನುಸರಿಸಿದಾಗಲೆಲ್ಲ, ಪರಿಣಾಮಗಳ ಪರಿವೆಯಿದ್ದೂ ದನಿ ಎತ್ತುತ್ತಲೇ ಬಂದವರನ್ನು ಪಬ್ಲಿಕ್ ಇಂಟಲೆಕ್ಚುಯಲ್ ಎಂದು ಕರೆಯಲಾಯಿತು. ಯಾಕೆಂದರೆ ಅವರು ಆಕ್ಟಿವಿಸಂ ನಡೆಸುವವರಾಗಿರಲಿಲ್ಲ. ಇಂಟಲೆಕ್ಚುಯಲ್‌ಗಳು ಆಕ್ಟಿವಿಸ್ಟರಾಗದಿರುವಂತೆ ನಿರ್ಬಂಧಿಸಿದ ವ್ಯವಸ್ಥೆ, ಆಕ್ಟಿವಿಸ್ಟ್‌ಗಳು ಇಂಟಲೆಕ್ಚುಯಲ್ ಆಗದಿರುವ ಒತ್ತಡವನ್ನೂ ನಿರ್ಮಿಸಿತು. ಬೀದಿ ಹೋರಾಟಗಳು, ಭೂಗತ ಹೋರಾಟಗಳು ಪೊಲೀಸು, ಅರೆಸೇನಾಪಡೆಗಳ ದಾಳಿಗೆ ಸಿಕ್ಕು ತತ್ತರಿಸಿದವು. ಎನ್‌ಕೌಂಟರ್ ಹೆಸರಲ್ಲಿ ಸಾಯದೇ ಇದ್ದವರು ಸೆರೆಮನೆಗಳಲ್ಲಿ ಬಂಧಿಯಾದರು. ಜಾಮೀನಿನ ಮೇಲೆ ಹೊರಬಂದರೂ ಕೋರ್ಟು-ಕಾನೂನುಗಳ ಚಕ್ರವ್ಯೂಹದಲ್ಲಿ ಸಿಲುಕಿ ನರಳತೊಡಗಿದರು. ಹೌದು, ನಾನು ವರ್ತಮಾನದ ಸ್ಥಿತಿಯನ್ನು ಕುರಿತೇ ವರ್ಣಿಸುತ್ತಿದ್ದೇನೆ.
ಡಾ. ಕೆ ಬಾಲಗೋಪಾಲ್ ಇಂಟಲೆಕ್ಚುಯಲ್ ಆಕ್ಟಿವಿಸ್ಟ್ ಆಗಿದ್ದವರು ನಂತರ ಆಕ್ಟಿವಿಸ್ಟ್ ಇಂಟಲೆಕ್ಚುಯಲ್ ಕೂಡಾ ಆದರು. ತಮ್ಮ ಜೀವನದ ಕಡೆಗಾಲದವರೆಗೂ ತಮ್ಮ ಆಕ್ಟಿವಿಸಂ ಹಾಗೂ ಇಂಟಲೆಕ್ಚುಯಲ್ ಚಟುವಟಿಕೆಗಳನ್ನು ನಡೆಸುತ್ತಲೇ ಬಂದವರು. ಬಾಲಗೋಪಾಲ್ 2009 ಅಕ್ಟೋಬರ್ 8ರಂದು ಮರಣಿಸಿದರು (ಜನನ 10, ಜೂನ್ 1952). ಆಗ ಅವರಿಗೆ ಐವತ್ತೇಳು ವರ್ಷ ವಯಸ್ಸು. ಜಠರ ಸಂಬಂಧಿ ಕ್ಯಾನ್ಸರ್‌ನಿಂದ ಅವರು ಬಾಧಿತರಾಗಿದ್ದರು ಎಂದು ಅವರಿಗೆ ನಿಕಟವಾಗಿದ್ದ ಸ್ನೇಹಿತರು ನನಗೆ ಹೇಳಿದರು.
ಗಣಿತ ಶಾಸ್ತ್ರದ ಅಧ್ಯಾಪಕರಾಗಿ ಅವಿಭಜಿತ ಆಂದ್ರಪ್ರದೇಶದ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದ ಬಾಲಗೋಪಾಲ್ ಇತಿಹಾಸಕ್ಕೆ ಸಂಬಂಧಿಸಿ ಡಿ ಡಿ ಕೋಸಾಂಬಿ ಬರೆದ ಕೃತಿಗಳನ್ನು ಓದಿದರು. ಕೋಸಾಂಬಿ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಇತಿಹಾಸವನ್ನು ರಚಿಸುವ ಮೂಲಕ ಭಾರತೀಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಸೃಜನಶೀಲ, ವೈಜ್ಞಾನಿಕ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ ಎಂದು ತಿಳಿದುಕೊಂಡ ಬಾಲಗೋಪಾಲ್ ತಾವೂ ಮಾರ್ಕ್ಸ್‌ವಾದವನ್ನು ಅಧ್ಯಯನ ಮಾಡಿದರು. ಕೋಸಾಂಬಿಯವರು ಕೂಡ ಮೂಲತಃ ಗಣಿತಶಾಸ್ತ್ರಜ್ಞರಾಗಿದ್ದರು ಎಂಬುದೊಂದು ಆಸಕ್ತಿದಾಯಕ ಅಂಶ. ಹಾಗೆ ಹೊರಟ ಬಾಲಗೋಪಾಲ್ ಆಂಧ್ರದಲ್ಲಿ ಆಗ ಹಬ್ಬುತ್ತಿದ್ದ ತೀವ್ರಗಾಮಿ ಕಮ್ಯುನಿಸ್ಟ್ ಹೋರಾಟದ ಸಂಪರ್ಕಕ್ಕೆ ಬಂದರು. ಪೀಪಲ್ಸ್ ವಾರ್ ಗ್ರೂಪ್ ಎಂದು ಕರೆಯುತ್ತಿದ್ದ ಕ್ರಾಂತಿಕಾರಿ ಸಶಸ್ತ್ರ ಹೋರಾಟದ ಮೇಲೆ ಹಾಗೂ ಅದನ್ನು ನಿಗ್ರಹಿಸುವ ನೆಪದಲ್ಲಿ ಆದಿವಾಸಿಗಳ ಮೇಲೆ, ರೈತ ಕೂಲಿಗಳ ಮೇಲೆ, ಕ್ರಾಂತಿಕಾರಿ ಹೋರಾಟದ ಬೆಂಬಲಿಗರಾಗಿದ್ದ ವಿದ್ಯಾರ್ಥಿ – ಯುವಜನ ಸಂಘಟನೆಗಳ ಮೇಲೆ ಆಂಧ್ರಪ್ರದೇಶದ ಸರ್ಕಾರ ನಡೆಸುತ್ತಿದ್ದ ದಮನಕಾಂಡ ವಿರೋಧಿಸಲು ಎಪಿಸಿಎಲ್‌ಸಿ ಸಂಘಟನೆ ಕಟ್ಟಿದರು. 1975ರಲ್ಲಿ ತುರ್ತು ಪರಿಸ್ಥಿತಿಯ ಕಾಲದಲ್ಲಿ ನಡೆದ ಬಂಧನಗಳು ಮತ್ತು ನಿಗೂಢ ಸಾವುಗಳ ಕುರಿತಾಗಿ ಹುಟ್ಟಿದ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ಕಡೆಗೆ ತೀವ್ರಗಾಮಿ ಕ್ರಾಂತಿಕಾರಿಗಳನ್ನು ಕಾನೂನು ವ್ಯಾಪ್ತಿ ಮೀರಿ ದಮನಿಸುತ್ತಿದ್ದುದನ್ನು ಪ್ರಶ್ನಿಸುವ – ಪ್ರತಿಭಟಿಸುವ ದಿಕ್ಕಿನೆಡೆಗೆ ನಡೆದರು.
ಇದನ್ನು ಓದಿದ್ದೀರಾ?: ಒಂದು ಜಿಜ್ಞಾಸೆ | ಎರಡು ವರ್ಷ ಸೆಲ್ಲೋ ನುಡಿಸಿದ ಕಲಾವಿದ ಮತ್ತು ದುರಿತ ಕಾಲ
ಪ್ರಭುತ್ವವು ಕ್ರಾಂತಿಕಾರಿಗಳ ಮೇಲೆ, ಅವರ ಬೆಂಬಲಿಗರಾದ ಸಾಮಾನ್ಯ ಜನತೆಯ ಮೇಲೆ ನಡೆಸಿದ ಹಿಂಸಾಕಾಂಡವನ್ನು ಬಯಲಿಗೆಳೆಯಲು ಎಪಿಸಿಎಲ್‌ಸಿ (ಆಂಧ್ರಪ್ರದೇಶ್ ಸಿವಿಲ್ ಲಿಬರ್ಟೀಸ್ ಕಮಿಟಿ) ಸತ್ಯಶೋಧನಾ ಸಮಿತಿಗಳನ್ನು ರಚಿಸಿ ವಾಸ್ತವಾಂಶಗಳ ಬಗ್ಗೆ ಮಾಹಿತಿ ಪ್ರಕಟಿಸಿದರು. ನ್ಯಾಯಾಲಯಗಳಲ್ಲಿ ದಾವೆ ಹೂಡಿದರು. ಸರ್ಕಾರದ ಕಾನೂನು ವ್ಯಾಪ್ತಿ ಮೀರಿದ ಹಿಂಸಾವನ್ನು ಬಯಲಿಗೆಳೆದು ತೀವ್ರ ಮುಜುಗರಕ್ಕೀಡು ಮಾಡಿದರು. ಈ ಸುದ್ದಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಕಟಗೊಂಡು, ಬಾಲಗೋಪಾಲ್ ಅವರ ಹೆಸರು ಮಾನವ ಹಕ್ಕುಗಳ ಹೋರಾಟಗಾರರಾಗಿ ವ್ಯಾಪಕವಾಗಿ ಮಾನ್ಯತೆ ಪಡೆದುಕೊಂಡಿತು.
1985ರಲ್ಲಿ ತಮ್ಮ ಅಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ ಮಾನವ ಹಕ್ಕುಗಳ ರಕ್ಷಣೆಗೆ ಕಟಿಬದ್ಧರಾದ ಹೋರಾಟಗಾರರಾಗಿ ಮುಂದುವರಿದರು. ಮೊದಲು ಎಪಿಸಿಎಲ್‌ಸಿ ನಂತರ, 1998ರಲ್ಲಿ ರಚನೆಗೊಂಡ ಮಾನವ ಹಕ್ಕುಗಳ ವೇದಿಕೆ(ಎಚ್‌ಆರ್‍ಎಫ್)ನ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದರು. ತಮ್ಮ ಜೀವನದ 24 ವರ್ಷಗಳ ಅವಧಿಯನ್ನು ಅವರು ಮಾನವ ಹಕ್ಕುಗಳ ಹೋರಾಟಕ್ಕಾಗಿ ಸವೆಸಿದರು.
ಪ್ರಜಾಪ್ರಭುತ್ವದ ಸಾಧ್ಯತೆಗಳ ಬಗ್ಗೆ, ಮಾನವ ಹಕ್ಕುಗಳ ವ್ಯಾಪ್ತಿಯ ಬಗ್ಗೆ ಅವರ ತಿಳಿವಳಿಕೆ ಆಳಗೊಂಡಂತೆ, ಕ್ರಾಂತಿಕಾರಿ ಚಟುವಟಿಕೆಗಳ ಭಾಗವಾಗಿ ನಡೆಯುತ್ತಿದ್ದ ‘ಕ್ರಾಂತಿಕಾರಿ ಹಿಂಸಾಚರಣೆಯ’ ಬಗ್ಗೆಯೂ ಅವರು ಪ್ರಶ್ನೆಗಳನ್ನೆತ್ತಲಾರಂಭಿಸಿದರು. ಪ್ರಭುತ್ವ ನಡೆಸುವ ಕಾನೂನು ವ್ಯಾಪ್ತಿ ಮೀರಿದ ಹಿಂಸಾಚಾರದಂತೆಯೇ ಕ್ರಾಂತಿಕಾರಿ ಸಂಘಟನೆ ಕ್ರಾಂತಿಯ ಹೆಸರಲ್ಲಿ ನಡೆಸುವ ಹಿಂಸೆಯೂ ಅವರೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ಮಾರ್ಕ್ಸ್‌ವಾದವನ್ನು ದೇಶ-ಕಾಲಗಳ ಪರಿಮಿತಿಯಾಚೆಗೆ ಒಂದು ‘ಅಕ್ಷರಶಃ ಸತ್ಯ’ವನ್ನಾಗಿ ವಾದ ಮಾಡುವ ಸಂಘಟನೆಗಳ ಬಗ್ಗೆ ಅವರು ವಿಮರ್ಶಾತ್ಮಕ ನಿಲುವು ತಳೆದರು. ಇದರಿಂದ ಅವರು ಹಲವು ಬಗೆಯಲ್ಲಿ ಸಹಯೋಗ ಹೊಂದಿದ್ದ ಪೀಪಲ್ಸ್ ವಾರ್ ಗ್ರೂಪ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕಾಯಿತು.
ಪ್ರಜಾಪ್ರಭುತ್ವವೆನ್ನುವುದು, ಸಂವಿಧಾನಾಧಾರಿತ ಕಾನೂನುಗಳೆಂಬವು ಜನತೆಗೆ ಒದಗಿಸುತ್ತಾ ಬಂದಿರುವ ಅವಕಾಶಗಳು ಕಾಲಾನುಸಾರ ಪಕ್ವಗೊಳ್ಳುತ್ತಾ ಬಂದಿರುವುದನ್ನು ಅವರು ಗಮನಿಸಿದರು. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸಾಮೂಹಿಕ ಹೋರಾಟಗಳ ಅಗತ್ಯವಿದೆಯೆನ್ನುವುದನ್ನು ಪ್ರತಿಪಾದಿಸಿದರು. ಆದರೆ ಪ್ರಭುತ್ವದ ಹಿಂಸೆಯಾಗಲೀ, ಕ್ರಾಂತಿಕಾರಿ ಸಂಘಟನೆಗಳು ನಡೆಸುವ ‘ಕ್ರಾಂತಿಕಾರಿ ಹಿಂಸೆ’ಯಾಗಲೀ, ಎರಡೂ ಮಾನವ ಹಕ್ಕುಗಳನ್ನು ದಮನಿಸುತ್ತಿದೆಯೆಂಬ ನಿಲುವಿಗೆ ಬಂದು ನಿಂತರು. ಸಶಸ್ತ್ರ ಕ್ರಾಂತಿ ಹಾಗೂ ಕ್ರಾಂತಿಕಾರಿ ಹಿಂಸೆಯ ನ್ಯಾಯಬದ್ಧತೆ ನಂಬಿದ್ದ ಪೀಪಲ್ಸ್ ವಾರ್ ಗ್ರೂಪ್ ಇದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಬಾಲಗೋಪಾಲ್ ತಾವು ಪೂರ್ಣ ಅರಿವಿನಿಂದ ಗ್ರಹಿಸಿದ ಸತ್ಯಗಳಿಂದ ಬೇರ್ಪಡಲು ಸಿದ್ಧರಿರಲಿಲ್ಲ. ತಾವು ಮೆಚ್ಚಿದ, ಬೆಂಬಲಿಸಿದ ತೀವ್ರಗಾಮಿ ಮಾರ್ಕ್ಸ್‌ವಾದಿ ಲೆನಿನ್‌ವಾದಿ ಕ್ರಾಂತಿಕಾರಿ ಸಂಘಟನೆಗಳ ವ್ಯಾಪ್ತಿಯಿಂದ ಬಾಲಗೋಪಾಲ್ ಹೊರಬರಬೇಕಾಯಿತು. ಹಾಗೆ ದೂರವಾದ ಮೇಲೂ ಬಾಲಗೋಪಾಲ್ ತಮ್ಮ ಕಡೆಯ ಉಸಿರಿನವರೆಗೆ ಜನತೆಯ ಹಕ್ಕುಗಳ ಪರವಾಗಿ, ಸರ್ಕಾರಿ ಯಂತ್ರಾಂಗದ ಹಿಂಸೆಯ ವಿರುದ್ಧವಾಗಿ, ವ್ಯವಸ್ಥೆಯನ್ನು ಬದಲಿಸಿ ನಿಜವಾದ ಪ್ರಜಾತಾಂತ್ರಿಕ ಸಮಾಜವನ್ನಾಗಿ ಪರಿವರ್ತಿಸುವ ಜನರ ಹೋರಾಟಗಳ ಬೆಂಬಲಿಗರಾಗಿ ಕ್ರಿಯಾಶೀಲರಾಗಿದ್ದರು. ಅವರಿಗೆ ಇದ್ದದ್ದು ಕಾರ್ಯಾಚರಣೆಯ ವಿಧಾನದ ಬಗೆಗಿನ ಭಿನ್ನಾಭಿಪ್ರಾಯವೇ ಹೊರತು, ಶೋಷಣಾರಹಿತ ಸಮಾಜ ನಿರ್ಮಾಣದ ಗುರಿಯೆಡೆಗಿನ ಅಪನಂಬುಗೆಯಲ್ಲ.
ಇದೆಲ್ಲಾ ಇರಲಿ. ಬಾಲಗೋಪಾಲ್ ಭಾರತದ ಅತಿ ಮುಖ್ಯ ಚಿಂತಕರು ಮತ್ತು ಹೋರಾಟಗಾರರೂ ಆಗಿದ್ದರೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅವರು ತೆಲುಗಿನಲ್ಲಿ, ಇಂಗ್ಲಿಷ್‌ನಲ್ಲಿ ಬರೆದ ಪುಸ್ತಕಗಳ ವಿಷಯ ವ್ಯಾಪ್ತಿ ಬಹಳ ವಿಸ್ತಾರವಾದುದು. ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯಕ ಹೀಗೆ ಅವರ ಸಮಕಾಲೀನ ವರ್ತಮಾನದಲ್ಲಿ ಪ್ರಚಲಿತವಿದ್ದ ಹಲವು ವಿಷಯಗಳ ಬಗ್ಗೆ ಅತ್ಯಂತ ತಲಸ್ಪರ್ಶಿಯಾದ ಕೃತಿಗಳನ್ನು ಬರೆದವರು ಅವರು.
ಕನ್ನಡದಲ್ಲಿ ಅವರ ಹಲವು ಕೃತಿಗಳು ಅನುವಾದಗೊಂಡಿವೆ. ಆದರೆ ಹೆಚ್ಚು ಓದುಗರನ್ನು ಅವು ತಲುಪಲಿಲ್ಲ. ವಿವಿಧ ವಿಷಯಜ್ಞಾನಗಳ ಬಗ್ಗೆ ಅವರಿಗಿದ್ದ ವ್ಯಾಪಕ ಅಧ್ಯಯನ, ಆಳವಾದ ಚಿಂತನೆ ಹಾಗೂ ಅವುಗಳನ್ನು ಅತ್ಯಂತ ಸರಳವಾಗಿ ಆದರೆ ಗಹನವಾಗಿ ಮಂಡನೆ ಮಾಡುತ್ತಿದ್ದ ವಿಧಾನ – ಮಾದರಿಪ್ರಾಯವಾಗಿದೆ. ಬುದ್ಧಿಜೀವಿಗಳು ಇತರೆ ಬುದ್ಧಿಜೀವಿಗಳಿಂದ ‘ಸೈ’ ಅನಿಸಿಕೊಳ್ಳುವುದಕ್ಕಾಗಿ ಪಾಂಡಿತ್ಯಪೂರ್ಣ ರಚನೆಗಳನ್ನು ಮಾಡುವುದಿದೆ. ಇತರೆ ಬುದ್ಧಿಜೀವಿಗಳ ಪ್ರಶಂಸೆಯೆಂಬುದು ಅಂತಹವರಿಗೆ ಪ್ರಶಸ್ತಿ ಸಮಾನ. ತಾವು ಗಳಿಸಿರುವ ಪಾಂಡಿತ್ಯವನ್ನೆಲ್ಲಾ ಸಾಮಾನ್ಯ ಓದುಗರಿಗೆ, ಕಾರ್ಯಕರ್ತರಿಗೆ ಅರ್ಥ ಮಾಡಿಸುವುದೇ ತನ್ನ ಜ್ಞಾನದ ಸಾರ್ಥಕತೆಯೆಂದು ಬರೆದವರು, ಬದುಕಿದವರು ಬಾಲಗೋಪಾಲ್. ಅವರಿಗೆ ಪ್ರಶಸ್ತಿ, ಪ್ರಶಂಸೆಗಳ ಹಂಬಲವಿರಲಿಲ್ಲ. ತಾನು ಹೇಳುವುದು ಜನರಿಗೆ ಅರ್ಥವಾಗುತ್ತಿದೆಯೇ ಇಲ್ಲವೇ ಎಂಬ ಕಾಳಜಿಯಿಂದ ಬರೆದವರು, ಭಾಷಣ ಮಾಡಿದವರು ಅವರು. ವಿಷಯ ಜ್ಞಾನ ಪಡೆದವರು ಬೇಕಾದಷ್ಟು ಜನ ಇದ್ದಾರೆ. ಆದರೆ ಅದನ್ನು ಜನತೆಯಲ್ಲಿ ಅರಿವು ಮೂಡಿಸಲಿಕ್ಕಾಗಿ ಮುಡಿಪಾಗಿಟ್ಟವರು ನಿಜವಾಗಿ ‘ಜನತೆಯ ಬುದ್ಧಿಜೀವಿ’. ಬಾಲಗೋಪಾಲ್ ಅಂತಹ ಅದ್ವಿತೀಯ ಜನತೆಯ ಬುದ್ಧಿಜೀವಿ.
ತಮ್ಮ ಸ್ವಂತ ಅಗತ್ಯಗಳ ಬಗ್ಗೆ, ಸುಖ- ಸೌಕರ್ಯಗಳ ಬಗ್ಗೆ ಸದಾ ನಿರ್ಲಕ್ಷ್ಯದಿಂದ ಇದ್ದವರು ಬಾಲಗೋಪಾಲ್. ವೈಯಕ್ತಿಕವಾಗಿ ಅವರು ಗಳಿಸಬಯಸಿದ್ದು, ಅನುಭವಿಸಬಯಸಿದ್ದು ಬಹುಶಃ ಏನೂ ಇಲ್ಲ. ಸಾಂಸಾರಿಕ ಜೀವನದಲ್ಲೂ ವ್ಯಕ್ತಿಗತ ಸುಖ-ನೆಮ್ಮದಿ ಹುಡುಕಿದವರಲ್ಲ. ಸೈದ್ಧಾಂತಿಕ ಬದ್ಧತೆ ಮತ್ತು ಜನತೆಯ ಹಿತಾಸಕ್ತಿ ಪ್ರತಿಪಾದನೆ ಅವರ ಜೀವನದ ಆದರ್ಶವಾಗಿತ್ತು. ತಮಗೆ ಸತ್ಯವೆಂದು ಕಂಡಿದ್ದನ್ನು ಮುಲಾಜುಗಳಿಗಾಗಿ ಪ್ರತಿಪಾದಿಸದೆ ಬಿಟ್ಟದ್ದು ಅವರ ಜೀವನದಲ್ಲಿ ಇರಲಿಲ್ಲವೆಂದರೆ ಸುಳ್ಳಲ್ಲ.
ನಾನು ಅವರನ್ನು ಮೊದಲು ನೋಡಿದ್ದು ವಾರಂಗಲ್‌ನಲ್ಲಿ ನಡೆದ ಬೃಹತ್ ರೈತ-ಕೂಲಿ ಸಮಾವೇಶದಲ್ಲಿ. ಲಕ್ಷಾಂತರ ಜನರು ನೆರೆದಿದ್ದ ಆ ಸಮಾವೇಶ ನಿಜಕ್ಕೂ ಜನಸಾಗರದಂತಿತ್ತು. ಅದು ತನ್ನದೇ ಆದ ಹುಮ್ಮಸ್ಸಿನಿಂದ ಮೊರೆಯುತ್ತಿತ್ತು. ಬಂದು ಸೇರುವವರು, ಸೇರಿದ ನಂತರ ತಳವಾಗಲು ಜಾಗ ಹುಡುಕಿಕೊಳ್ಳುವವರು, ಹಸಿವೆ ತೀರಿಸಿಕೊಳ್ಳಲು ಊಟದ ಕೌಂಟರ್‌ಗಳಿಗೆ ಹೋಗುವವರು, ಘೋಷಣೆ ಕೂಗುವವರು, ಬಹಳ ದಿನದ ನಂತರ ಭೇಟಿಯಾದ ಸಂಗಾತಿಗಳನ್ನು ತಬ್ಬಿಕೊಂಡು ಮಾತಾಡುವವರು – ವೇದಿಕೆಯ ಮೇಲೆ ಜನಸಾಗರದ ಅಲೆಗಳ ನಡುವೆ ನಾವೆಯಲ್ಲಿ ನಿಂತು ತನ್ನ ಸಂಗೀತವನ್ನು ತಾನು ನುಡಿಸುವ ಹಾಡುಗಾರನಂತೆ ಬಾಲಗೋಪಾಲ್ ಉಪನ್ಯಾಸ ಮಾಡುತ್ತಿದ್ದರು. ಜನಸಾಗರ ಆಗೀಗ ಶಾಂತಗೊಂಡು ಆಲಿಸುತ್ತಿತ್ತು. ಮಿಕ್ಕಂತೆ ತೆರೆಗಳೆದ್ದು ಓಲಾಡುತ್ತಿತ್ತು. ಆ ಬದ್ಧತೆ, ನಿಷ್ಠೆ, ನಂಬುಗೆ ಹಾಗೂ ಧ್ಯೇಯಪರತೆ ಕಂಡು, ಅನುಭವಿಸಿ ನಾನು ಅಚ್ಚರಿಗೊಂಡೆ. ಅದು ನೆರೆದಿದ್ದ ಜನರ ಹೋರಾಟದ ನ್ಯಾಯೋಚಿತತೆ ಬಗ್ಗೆ ಅವರಿಗಿದ್ದ ಗೌರವ, ತನ್ನ ಕರ್ತವ್ಯ ತಾನು ನೆರವೇರಿಸುತ್ತಿದ್ದ ಬುದ್ಧಿಜೀವಿಯ ತನ್ಮಯತೆ.
ನಾನು ಆಲ್ ಇಂಡಿಯಾ ಲೀಗ್ ಫಾರ್ ರೆವಲ್ಯೂಷನರಿ ಕಲ್ಚರ್ (ಎಐಎಲ್‌ಸಿಆರ್) ಮೀಟಿಂಗ್‌ಗಳಿಗೆ ಆಗಾಗ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದೆ. ಒಂದೆರಡು ಸಲ ಬಾಲಗೋಪಾಲ್ ಅವರ ಮನೆಗೂ ಹೋಗಿ ತಂಗಿದ್ದೆ. ನನ್ನನ್ನು ಮೀಟಿಂಗ್ ಸ್ಥಳಕ್ಕೆ ತಲುಪಿಸುವವರೆಗೂ ಅವರು ತೋರಿಸುತ್ತಿದ್ದ ಕಾಳಜಿ ನಿಜವಾದ ಮನುಷ್ಯ ಪ್ರೀತಿಗೆ ಉದಾಹರಣೆಯಂತಿತ್ತು. ಅವರ ಬಳಿ ಹೆಚ್ಚು ಮಾತನಾಡಲು, ಚರ್ಚಿಸಲು ನನಗೆ ಹೆಚ್ಚಿನ ವಿಷಯಗಳೇನೂ ಇರುತ್ತಿರಲಿಲ್ಲ. ವೇದಿಕೆಯಲ್ಲಿ ಗಂಟೆಗಟ್ಟಲೆ ಮಾತಾಡುತ್ತಿದ್ದ ಅವರು ಖಾಸಗಿ ಸಂಭಾಷಣೆಗಳಲ್ಲಿ ಮಿತಬಾಷಿಯಂತಿದ್ದರು. ಅಥವಾ ಅವರ ಬಿಡುವಿರದ ಕೆಲಸಗಳಿಂದಾಗಿ ಸ್ನೇಹ ಸಂಭಾಷಣೆಗಳಲ್ಲಿ ತೊಡಗುತ್ತಿರಲಿಲ್ಲವೋ, ಏನೋ. ಅವರು ಬರೆದಿದ್ದನ್ನು ಓದಿ ನೋಡಿ ಬೇಕಾದಷ್ಟು ವಿಷಯಗಳ ಅರಿವನ್ನು ಸ್ಪಷ್ಟತೆಯನ್ನು ಪಡೆದ ನಾನು ಅವರನ್ನು ಅಚ್ಚರಿಯಿಂದ, ಮೆಚ್ಚುಗೆಯಿಂದ ಮಾತನಾಡಿಸಿದ್ದೇ ಹೆಚ್ಚು.

ನಾನು ಅನುವಾದಿಸಿರುವ ಈ ಲೇಖನಗಳು ನನ್ನ ಅರಿವಿನ ವ್ಯಾಪ್ತಿಯನ್ನು ಹೆಚ್ಚಿಸಿವೆ. ನಿಮಗೂ ಇದರಿಂದ ಒಂದಿಷ್ಟು ವಿಷಯಗಳು ಸ್ಪಷ್ಟವಾಗಬಹುದೆಂಬ ನಂಬುಗೆಯಿಂದ ಈ ಕಾರ್ಯ ಕೈಗೊಂಡಿದ್ದೇನೆ.
ಫ್ಯಾಸಿಸಂನ ಒಂದು ವರಸೆ 2014ರಿಂದ ಹಿಡಿದು ಇಂದಿನವರೆವಿಗೂ ಭಾರತದ ಪ್ರಜಾತಾಂತ್ರಿಕ ವಾತಾವರಣದಲ್ಲಿ ಉಂಟುಮಾಡಿದ ಅನಾಹುತಗಳನ್ನು ನೋಡಲು ಬಾಲಗೋಪಾಲ್ ಅವರು ಬದುಕಿರಲಿಲ್ಲ. ಕೋಮುವಾದಿ ಶಕ್ತಿಗಳು ಭಾರತೀಯ ಸಮಾಜದ ಆದ್ಯತೆಗಳನ್ನು ಬದಲಿಸಿದ ರೀತಿ, ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳ ಕಾರ್ಯವಿಧಾನವನ್ನು ತನ್ನ ಸ್ವಾರ್ಥಕ್ಕಾಗಿ ವಕ್ರೀಕರಿಸಿರುವ ರೀತಿಗಳನ್ನು ನೋಡಿದ್ದರೆ ಅವರು ಇನ್ನಷ್ಟು ಸರಳವಾಗಿ, ಸ್ಫಟಿಕ ಸ್ಪಷ್ಟವಾಗಿ ಬರೆದು ನಮ್ಮೆಲ್ಲರನ್ನು ಎಚ್ಚರಿಸುವುದು, ಚಿಂತನೆಗೆ ಹಚ್ಚುವುದು ಸಾಧ್ಯವಿತ್ತು.
ಹಾಗಿದ್ದರೂ ಅವರು ಬರೆದಿರುವ ಬರಹಗಳು ನಮ್ಮ ಅರಿವನ್ನು, ಹೋರಾಟದ ಹಾದಿಯನ್ನು ನಿಚ್ಚಳಗೊಳಿಸುವ ಕೆಲಸವನ್ನಂತೂ ಮಾಡುವಂತಿವೆ.
– ಡಾ. ಬಂಜಗೆರೆ ಜಯಪ್ರಕಾಶ್