ಇಡೀ ಕರ್ನಾಟಕವನ್ನು ʼಹಿಂದುತ್ವದʼ ಹೆಸರಲ್ಲಿ ಮರು ರೂಪಿಸಿ ಬಿಜೆಪಿಗೆ ಮತ್ತು ಆರ್‌ಎಸ್ಎಸ್‌ಗೆ ದಕ್ಷಿಣ ಭಾರತದಲ್ಲಿ ಭದ್ರವಾದ ನೆಲೆಯೊಂದನ್ನು ಕಟ್ಟಬಯಸಿದ ಶಕ್ತಿಗಳಿಗೆ ಸದ್ಯಕ್ಕೆ ತಾತ್ಕಾಲಿಕ ಹಿನ್ನಡೆಯಾದರೂ ಆಗಿದೆ. ಈ ವಿಷಯದಲ್ಲಿ ಕರ್ನಾಟಕದ ಬುದ್ಧಿಜೀವಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ.
ಎಲ್ಲರ ನಿದ್ದೆ ಕೆಡಿಸಿದ್ದ ಕರ್ನಾಟಕ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿದೆ. 1989ರ ಆನಂತರ ಕಾಂಗ್ರೆಸ್ ಪಕ್ಷಕ್ಕೆ ಈ ಸಲದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ದೊರಕಿವೆ. 224 ಸೀಟುಗಳಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದೆ. ಅದಕ್ಕೆ ಸಿಕ್ಕ ಮತಗಳ ಪ್ರಮಾಣವು ಶೇ.42.88 ಆಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕರ್ನಾಟಕದ ಬಿಜೆಪಿ ಮತ್ತು ಅದರ ಪಟಾಲಂಗಳು ಕಾಂಗ್ರೆಸ್ ಮುಕ್ತ ಭಾರತದ ಮಂತ್ರ ಪಠಿಸುತ್ತಿರುವಾಗಲೇ ಹೀಗಾದದ್ದು ಪ್ರಜಾಪ್ರಭುತ್ವಕ್ಕೆ ಸಂದ ದೊಡ್ಡ ಜಯ! ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೂ ಇದೊಂದು ಐತಿಹಾಸಿಕ ಗೆಲುವು. ಬಿಜೆಪಿ ಟ್ರೋಲರ್‌ಗಳಿಂದ ನಿರಂತರ ಅವಮಾನಕ್ಕೆ ಒಳಗಾಗಿದ್ದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೂ ಈ ಗೆಲುವು ಒಂದಷ್ಟು ಸಮಾಧಾನ ತಂದಿರಬಹುದು.
ಕಾಂಗ್ರೆಸ್ಸಿನ ಈ ಗೆಲುವು ಕಾಂಗ್ರೆಸ್ಸಿಗೆ ಮಾತ್ರವಲ್ಲ, ಇತರ ಅನೇಕರಿಗೂ ಸಮಾಧಾನ ತಂದಿದೆ. ಬಿಜೆಪಿಯ ಸರ್ವಾಧಿಕಾರಿ ಧೋರಣೆ, ದುರಹಂಕಾರಿ ವರ್ತನೆ, ಸಂವಿಧಾನವನ್ನು ಗೌಣಗೊಳಿಸುವ ಮಾತುಗಳು, ಮೀಸಲಾತಿ ವಿರೋಧಿ ಧೋರಣೆ, ಬುದ್ದಿಜೀವಿಗಳ ಬಗ್ಗೆ ತೋರಿದ ಅನಾದರ, ಅಲ್ಪಸಂಖ್ಯಾತರನ್ನು ಒರೆಸಿ ಹಾಕುವ ವರ್ತನೆ, ಇತ್ಯಾದಿಗಳಿಂದ ರೋಸಿ ಹೋಗಿದ್ದವರೆಲ್ಲ ಈಗೊಂದು ಸುದೀರ್ಘವಾದ ನಿಟ್ಟುಸಿರು ಬಿಟ್ಟಿದ್ದಾರೆ. ಸಂವಿಧಾನದ ಬಗ್ಗೆ ನಂಬುಗೆ ಇರಿಸಿದ್ದ ಎಲ್ಲರಿಗೂ ಇಂಥದ್ದೊಂದು ಗೆಲುವಿನ ಅಗತ್ಯವಿತ್ತು.
ಕಾಂಗ್ರೆಸ್ಸಿನ ಗೆಲುವಿಗೆ ಅನೇಕ ಕಾರಣಗಳಿವೆ ಮತ್ತು ಅವು ಜನರಿಂದ ಜನರಿಗೆ ಭಿನ್ನವಾಗಿವೆ. ಬೆಲೆ ಏರಿಕೆ ಮತ್ತು ಅದನ್ನು ಸಮರ್ಥಿಸಿದ ಬಿಜೆಪಿಯ ಟ್ರೋಲ್ ಪಡೆಗಳು ಬಿಜೆಪಿಗೆ ಮರಣಾಂತಿಕ ಆಘಾತ ನೀಡಿವೆ. 40% ಭ್ರಷ್ಟಾಚಾರ ಮತ್ತು ಅದರ ಬಗ್ಗೆ ಉಸಿರೆತ್ತದ ಬಿಜೆಪಿಯ ರಾಷ್ಟ್ರೀಯ ನಾಯಕರ ನಡೆಗಳೂ ಜನರ ಕಣ್ಣಲ್ಲಿ ಸಂದೇಹಾಸ್ಪದವಾಗಿದ್ದುವು. ಅಲ್ಪಸಂಖ್ಯಾತರ ಮೇಲೆ ನಡೆದ ನಿರಂತರ ಹಲ್ಲೆಗಳಿಂದ ಮುಗ್ಧ ಜನಗಳೂ ಬೆಚ್ಚಿ ಬಿದ್ದಿದ್ದರು. ʼಲಿಂಗಾಯತ ನಾಯಕರನ್ನು ಹಿನ್ನೆಲೆಗೆ ಸರಿಸಿ, ಪ್ರಲ್ಹಾದ ಜೋಶಿಯವರನ್ನು ಮುಖ್ಯಮಂತ್ರಿ ಮಾಡುತ್ತಾರೆʼ ಎಂಬ ಸುದ್ದಿಯಿಂದ ಬಿಜೆಪಿಯ ಸಕ್ರಿಯ ರಾಜಕಾರಣಿಗಳೂ ಕೂಡಾ ಅಸ್ವಸ್ಥ ಮನಸ್ಕರಾದರು. ಈ ನಡುವೆ ಒಕ್ಕಲಿಗರನ್ನು ಕೋಮುವಾದಿಗಳನ್ನಾಗಿಸಿ ಅವರ ಮತಗಳನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನವೂ ನಡೆಯಿತು. ಉರಿಗೌಡ-ನಂಜೇಗೌಡರ ಕಥನವೂ ಫಲ ನೀಡಲಿಲ್ಲ. ಕೊನೆ ಹಂತದಲ್ಲಿ ಹನುಮಾನ್ ಚಾಲೀಸ್ ಪಠಣ ನಡೆಸಿದರೂ ಭಜರಂಗಿ ಬಿಜೆಪಿಯ ಕೈ ಹಿಡಿಯಲಿಲ್ಲ.

ಇಡೀ ಕರ್ನಾಟಕವನ್ನು ʼಹಿಂದುತ್ವದʼ ಹೆಸರಲ್ಲಿ ಮರು ರೂಪಿಸಿ ಬಿಜೆಪಿಗೆ ಮತ್ತು ಆರ್‌ಎಸ್ಎಸ್‌ಗೆ ದಕ್ಷಿಣ ಭಾರತದಲ್ಲಿ ಭದ್ರವಾದ ನೆಲೆಯೊಂದನ್ನು ಕಟ್ಟಬಯಸಿದ ಶಕ್ತಿಗಳಿಗೆ ಸದ್ಯಕ್ಕೆ ತಾತ್ಕಾಲಿಕ ಹಿನ್ನಡೆಯಾದರೂ ಆಗಿದೆ. ಈ ವಿಷಯದಲ್ಲಿ ಕರ್ನಾಟಕದ ಬುದ್ಧಿಜೀವಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ. ಈದಿನ.ಕಾಮ್, ಪೀಪಲ್ ಟಿವಿ, ಎದ್ದೇಳು ಕರ್ನಾಟಕ, ನಾನು ಗೌರಿಯಂತ ಪರ್ಯಾಯ ಸಂಘಟನೆಗಳು ಹಿಂದುತ್ವ ಎಂಬುದು ಸತ್ವ ಇಲ್ಲದ ರಾಜಕೀಯ ಅಜೆಂಡಾವೇ ಹೊರತು ಎಲ್ಲ ಹಿಂದುಗಳ ಒಳಿತಿಗಾಗಿ ಮಾಡುವ ಕೆಲಸ ಅಲ್ಲವೆಂಬುದನ್ನು ಮತ್ತೆ ಮತ್ತೆ ಜನರಿಗೆ ಹೇಳಿವೆ. ʼಬಿಜೆಪಿಗೆ ವೋಟ್ ಮಾಡಿದವರು ಮಾತ್ರ ಹಿಂದುಗಳುʼ ಎಂಬಲ್ಲಿಗೆ ಅದು ಬಂದು ನಿಂತರೆ ಆಗ 40% ಭ್ರಷ್ಟಾಚಾರವೂ ಒಳಗೊಂಡಂತೆ, ಬಿಜೆಪಿಯ ಎಲ್ಲ ಕಳಂಕಗಳನ್ನು ಎಲ್ಲ ಹಿಂದುಗಳು ಹೊತ್ತುಕೊಳ್ಳಬೇಕಾಗುತ್ತದೆ. ಅದು ಎಂದಿಗೂ ಸಾಧ್ಯವಿಲ್ಲದ ಸಂಗತಿ ಎಂಬುದನ್ನು ಕರ್ನಾಟಕ ಒಪ್ಪಿಕೊಂಡಿತು. ʼಬಡ ಮುಸಲ್ಮಾನರನ್ನು ಜಾತ್ರೆಗಳಿಂದ ಹೊರಗಟ್ಟಿದಾಗ ಹೊಮ್ಮುವ ನಿಟ್ಟುಸಿರಿಗೆ ಯಾವ ಹಿಂದೂ ಕೂಡಾ ಬಲಿಯಾಗಬಾರೆದೆಂದು ಆಶಿಸುವʼ ಹಲವು ಜನರು ಬಿಜೆಪಿಗೆ ವಿರುದ್ಧವಾಗಿ ಮತಚಲಾಯಿಸಿದರು.
ಸಾವಿರಾರು ವರ್ಷಗಳಿಂದ ಕರ್ನಾಟಕದ ಮಣ್ಣಲ್ಲಿ ವಾಸವಾಗಿರುವ ಮುಸ್ಲಿಮರ ಬಗ್ಗೆ ಬಿಜೆಪಿ ಹೊಂದಿರುವ ಧೋರಣೆ ಆಘಾತಕಾರಿಯಾದುದು, ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ವಿಕೃತ ಸಂತೋಷ ಪಡುವ ಇವರು ಆ ಸಮಯವನ್ನು ಮುಸ್ಲಿಮರ ಅಭಿವೃದ್ಧಿಗೆ ಬಳಸಬಹುದಿತ್ತು. 1957ರ ಮೊದಲ ಸ್ವಾತಂತ್ರ್ಯ ಹೋರಾಟದ ಆನಂತರ ಭಾರತೀಯ ಮುಸಲ್ಮಾನರು ಬಡವರಾಗುತ್ತಲೇ ಹೋಗಿದ್ದಾರೆ. ಇಸ್ಲಾಂ ಅರಸರ ಕಾಲದಲ್ಲಿ ತುಂಬ ಪ್ರಭಾವೀ ಹುದ್ದೆಗಳನ್ನು ನಿರ್ವಹಿಸಿದ್ದ ಮುಸ್ಲಿಮರು ಇದ್ದಕ್ಕಿದ್ದಂತೆಯೇ ಹೇಗೆ ಬಡವರಾದರು ಎಂಬ ಪ್ರಶ್ನೆಯನ್ನು ಬಿಜೆಪಿ ಕೇಳಿಕೊಂಡರೆ ಮಾತ್ರ ಆ ಪಕ್ಷಕ್ಕೆ ಭಾರತದಲ್ಲಿ ಭವಿಷ್ಯವಿದೆ. ಈ ಕುರಿತು ನೆಹರೂ ಅವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ- ‘ಜನಕ್ರಾಂತಿಯನ್ನು ಅಡಗಿಸಿದ ಆನಂತರ ಬ್ರಿಟಿಷ್ ಸರ್ಕಾರ ಉದ್ದೇಶಪೂರ್ವಕವಾಗಿ ಮುಸಲ್ಮಾನರನ್ನು ಹೆಚ್ಚು ನಿಗ್ರಹಿಸಿತು. ಮುಸಲ್ಮಾನರಿಗೆ ಕೆಲಸ ಸಿಗುವ ದಾರಿಗಳೆಲ್ಲವೂ ಮುಚ್ಚಿಹೋಯಿತು’.
ಇದನ್ನು ಓದಿದ್ದೀರಾ?: ಕರ್ನಾಟಕ ಚುನಾವಣೆ | ಯಡಿಯೂರಪ್ಪ ಕಣ್ಣೀರಿಗೆ ಭಾರಿ ಬೆಲೆತೆತ್ತ ಬಿಜೆಪಿ
ನೆಹರೂ ಅವರ ಮಾತು ಎರಡು ವಿಷಯಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಮೊದನೆಯದಾಗಿ, ಮುಸಲ್ಮಾನರು ಹೆಚ್ಚು ಉಗ್ರವಾಗಿ ಬ್ರಿಟಿಷರೊಡನೆ ಕಾದಾಡಿದ್ದಾರೆ ಮತ್ತು ಎರಡನೆಯದಾಗಿ, ಈ ಹೋರಾಟದ ಆನಂತರ ಹೆಚ್ಚಿನ ಮುಸಲ್ಮಾನರು ಬೀದಿಗೆ ಬಿದ್ದಿದ್ದಾರೆ. ಭಾರತದ ಸುಮಾರು ೨೦ ಕೋಟಿ ಮುಸಲ್ಮಾನರು ಇವತ್ತು ಉದ್ಯೋಗ, ವಿದ್ಯೆ ಮತ್ತಿತರ ಕ್ಷೇತ್ರಗಳಲ್ಲಿ ದಿನನಿತ್ಯ ಬಗೆ ಬಗೆಯ ಅವಮಾನಗಳಿಗೆ ಗುರಿಯಾಗುತ್ತಿದ್ದಾರೆ. ಅವರು ಪ್ರಬಲವಾದ ಒಂದು ರಾಜಕೀಯ ಶಕ್ತಿಯಾಗಿ ಬೆಳೆಯದಂತೆ ಮಾಡುವ ಹುನ್ನಾರಗಳನ್ನು ಭಾರತೀಯ ಸಮಾಜ ಬೆಳೆಸಿಕೊಂಡಿದೆ. ಕೋಮುವಾದಕ್ಕೆ ಅಮಾಯಕ ಮುಸಲ್ಮಾನರು ಬಲಿಯಾಗುತ್ತಿದ್ದಾರೆ. ಅವರ ಕೆಲವು ಹಕ್ಕುಗಳನ್ನು ಕಸಿದುಕೊಳ್ಳುವ ಮಾತುಗಳನ್ನೂ ನಾವು ಆಗಾಗ ಕೇಳುತ್ತಿದ್ದೇವೆ. ಅವರಿಗಿದ್ದ ಶೇಕಡಾ 4ರ ಮೀಸಲಾತಿಯನ್ನು ಅವರ ತಟ್ಟೆಯಿಂದ ಕಸಿದುಕೊಂಡು ಬೇರೆಯವರಿಗೆ ನೀಡಲಾಯಿತು. ಬಿಜೆಪಿಯು ನಂಬುವ ಯಾವ ದೇವರೂ ಈ ಆಕ್ರಮವನ್ನು ಒಪ್ಪಿಕೊಳ್ಳಲಾರ.

ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕ ಸಾಂಸ್ಕೃತಿಕವಾಗಿ ಭಿನ್ನ ಎಂಬುದನ್ನು ಮೋದಿ, ಯೋಗಿ, ಶಾ, ನಡ್ಡಾ, ಮೊದಲಾದ ರಾಷ್ಟ್ರೀಯ ನಾಯಕರು ತಿಳಿದುಕೊಂಡಿಲ್ಲವೆಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಅವರ ಬಾಯಲ್ಲಿ ಒಂದೆರಡು ಕನ್ನಡ ಪದಗಳು ಬಂದಾಗ ರೋಮಾಂಚಿತಗೊಂಡವರು ಇದ್ದದ್ದು ಹೌದಾದರೂ ಅದು ಮತ್ತೆ ಚುನಾವಣಾ ನಾಟಕ ಎಂಬುದನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರು ಕರ್ನಾಟಕದವರಲ್ಲ. ಇಲ್ಲಿಯ ಬಹುಭಾಷಿಕತೆ, ಬಹು ಧಾರ್ಮಿಕತೆ, ಬಹು ಸಮುದಾಯಿಕತೆ, ಪ್ರಾದೇಶಿಕ ವ್ಯತ್ಯಾಸ ಇತ್ಯಾದಿಗಳನ್ನು ಒಂದು ಉಸಿರಿನಲ್ಲಿ ಬುಲ್ಡೋಜ್ ಮಾಡಲಾಗುವುದಿಲ್ಲ. ಇವುಗಳ ಬಗೆಗೆ ಆಳವಾದ ತಿಳಿವಳಿಕೆಯುಳ್ಳವರು ಬಿಜೆಪಿಯಲ್ಲಿ ಬಹಳ ಕಡಿಮೆ ಜನ ಇದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಜೊತೆಗೆ ಕೇಂದ್ರ ನಾಯಕರ ಆಕ್ರಮಣಕಾರಿ ಪ್ರವಾಸದಲ್ಲಿ ಸ್ಥಳೀಯ ಬಿಜೆಪಿ ನಾಯಕರೆಲ್ಲ ಹೇಳ ಹೆಸರಿಲ್ಲದಂತೆ ತೇಲಿ ಹೋಗಿಬಿಟ್ಟರು. 40 ಟನ್ ಹೂವನ್ನು ತನ್ನ ಮೇಲೇ ಎರಚಿಸಿಕೊಂಡು ಸಂತೋಷಿಸುವ ʼಸ್ವಮೋಹಿ ನಾಯಕನಿಗಿಂತʼ, ʼಇದಾವ ಪರಿಯಲ್ಲಿ ಕಾಡಿತ್ತು ಮಾಯೆʼ ಎಂದು ತನ್ನನ್ನೇ ಸಂಶಯಿಸಿಕೊಂಡ ಬಸವಣ್ಣ, ʼಲಂಗೋಟಿ ಬಲು ಒಳ್ಳೇದಣ್ಣʼ, ಎಂದು ಹಾಡಿದ ಪುರಂದರದಾಸ, ನಮ್ಮ ಅಸ್ಮಿತೆಯ ನೈಜ ಸಂಕೇತಗಳು.
ಬಿಜೆಪಿಯ ಕೋಮುವಾದಿ ರಾಜಕಾರಣ ಇನ್ನುಮುಂದೆ ಕರ್ನಾಟದಲ್ಲಿ ನಡೆಯಲಾರದು. ಜನರಿಗೆ ಇವರ ಮಸಲತ್ತುಗಳೆಲ್ಲ ಗೊತ್ತಾಗಿದೆ. ಬಾಬಾ ಬುಡನ್‌ಗಿರಿ ಪ್ರಕರಣದಿಂದಲೇ ರಾಜಕೀಯವಾಗಿ ಮೇಲೆಬಂದ ಸಿ ಟಿ ರವಿ ಈ ಚುನಾವಣೆಯಲ್ಲಿ ಸೋತಿರುವುದು ಸಣ್ಣ ಸಂಗತಿಯೇನಲ್ಲ. ಸಾಮಾನ್ಯ ಜನರಿಗೆ ಕೋಮುವಾದ ಒಂದು ಬಗೆಯ ವಿಷಯ ಎಂಬುದು ಗೊತ್ತಾಗತೊಡಗಿದೆ. ಬಿಜೆಪಿ ತರಬಯಸುವ ಕೋಮುವಾದಿ ಆಯಾಮಕ್ಕೆ ಕರ್ನಾಟಕ ಬಲಿಯಾಗಲು ಸಾಧ್ಯವೇ ಇಲ್ಲ, ಏಕೆಂದರೆ ಕನ್ನಡ ಪ್ರಜ್ಞೆಗೆ ಕೋಮುವಾದದ ಆಯಾಮವೇ ಇರಲಿಲ್ಲ. ಚಾರಿತ್ರಿಕವಾಗಿ ಕರ್ನಾಟಕ-ಕನ್ನಡವು ಎಲ್ಲರನ್ನೂ ಒಳಗೊಂಡೇ ಬೆಳೆದಿದೆ. ಜೈನರು ಕರ್ನಾಟಕವನ್ನು “ಜಿನ ಧರ್ಮದ ಆಡುಂಬೊಲಂ” ಮಾಡಿಕೊಂಡಿದ್ದರು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳೆಲ್ಲ ವಾಸಿಸಿ ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ?: ಕರ್ನಾಟಕ ಚುನಾವಣೆ | ಸದುಪಯೋಗವಾಗಲಿ ಕಾಂಗ್ರೆಸ್ ‘ಗ್ಯಾರಂಟಿ’
ವಚನ ಚಳವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿರಲಾರದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೆ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸದೆ ಮೇಲುಕೋಟೆಯಲ್ಲಿ ಜಾಗ ನೀಡಿದರು. ಕರಾವಳಿಗೆ ಮೊದಲು ಆಗಮಿಸಿದ ಮುಸ್ಲಿಮರು ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬಬ್ಬರ್ಯ ಎಂಬ ಮುಸ್ಲಿಂ ದೈವಗಳು ಸೃಷ್ಟಿಯಾದುವು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸ ಮಾಡಿದರು. ಯಾರನ್ನೂ ತಿರಸ್ಕರಿಸದ ಅಥವಾ ಹೊರಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆದಿದೆ. ಅಸಹನೆ ಮತ್ತು ದ್ವೇಷ ಕನ್ನಡದ ಗುಣವೇ ಅಲ್ಲ. ಹೀಗಾಗಿಯೇ ಬಿಜೆಪಿಗೆ ಕರ್ನಾಟದಲ್ಲಿ ಭವಿಷ್ಯ ಇಲ್ಲ.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿಯು ಕರ್ನಾಟಕ ಸಂಸ್ಕೃತಿಯ ಮೇಲೆ ಆಳವಾದ ಗಾಯ ಮಾಡಿದೆ. ಬಿವಿ ಕಾರಂತರಂತವರು ಕಟ್ಟಿದ ರಾಷ್ಟ್ರೀಯ ಖ್ಯಾತಿಯ ರಂಗಾಯಣ ಕೊನೆಗೆ ಎಲ್ಲಿಗೆ ತಲುಪಿತು? ಪಠ್ಯ ಪುಸ್ತಕ ಪರಿಷ್ಕರಣೆ, ಹೊಸ ಶಿಕ್ಷಣ ನೀತಿಗಳು ಹಾಸ್ಯಾಸ್ಪದವಾದುವು. ಇತಿಹಾಸವೆಂದು ಉರಿಗೌಡ, ನಂಜೇಗೌಡರು ಮುಂದೆ ಬಂದರು. ಸರಿಯಾದ ಜಾಗದಲ್ಲಿ ಸರಿಯಾದವರನ್ನು ಕುಳ್ಳಿರಿಸಬೇಕೆಂಬ ಕನಿಷ್ಠ ಪ್ರಜ್ಞೆಯೇ ಸರಕಾರಕ್ಕೆ ಇಲ್ಲವಾದರೆ ಅವರು ನಾಡನಾಳಲು ಅನರ್ಹರು ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ.
ಏನೇ ಇರಲಿ, ಕಾಂಗ್ರೆಸ್ ಮಾತ್ರ ತನ್ನ ಗೆಲುವಿನಿಂದ ಗೆದ್ದು ಬೀಗುವ ಸಮಯ ಇದು ಅಲ್ಲವೇ ಅಲ್ಲ. ಅದರ ಮುಂದೆ ಅನೇಕ ಸವಾಲುಗಳಿವೆ. ಎಷ್ಟೋ ಕಾಂಗ್ರೆಸ್ಸಿಗರಿಗೆ ಅವರ ಪಕ್ಷದ ಚರಿತ್ರೆಯೇ ತಿಳಿದಿಲ್ಲ, ಸಂವಿಧಾನವನ್ನು ಓದಿ ತಿಳಿದು ಗೊತ್ತಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಆನಂತರ ಗಾಂಧಿ ಮತ್ತು ನೆಹರೂ ಮೇಲೆ ನಡೆಸಿದ ಅಪಪ್ರಚಾರಗಳ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ತಮ್ಮ ನೇತಾರರನ್ನೇ ಸರಿಯಾಗಿ ಸಮರ್ಥಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್ಸಿಗೆ ಅದರ ಸುದೀರ್ಘ ಇತಿಹಾಸವೇ ಭಾರವಾಗಿದೆ. ಅದರ ಭಾರಕ್ಕೆ ಅದುವೇ ಕುಸಿದು ಹೋಗಬಾರದು.
ಇಡೀ ದೇಶಕ್ಕೆ ಮಾದರಿ ಆಗಬಹುದಾದ ಕರ್ನಾಟಕ ಕೇಂದ್ರಿತವಾದ ಅಭಿವೃದ್ಧಿಯ ಪರಿಕಲ್ಪನೆಯನ್ನು ಕಾಂಗ್ರೆಸ್ ನೀಡಲಿ ಎಂದು ಆಶಿಸುತ್ತಾ, ಅದರ ಮುಂದಿನ ಐದು ವರ್ಷಗಳ ಜನಪರ ಆಡಳಿತಕ್ಕೆ ಶುಭ ಹಾರೈಸುತ್ತೇನೆ.

ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು
ಕರ್ನಾಟಕದ ಪ್ರಬುದ್ಧ ಜನ ಕೋಮುವಾದಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಿದೆ. ಕಾಂಗ್ರೆಸ್ ಒಳ ಜಗಳ ಬಿಟ್ಟು, ದಳ್ಳಾಳಿಗಳನ್ನು ದೂರವಿಟ್ಟು ಜನಪರ ಕೆಲಸ ಮಾಡಬೇಕು, ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬೆಲೆ ನಿಯಂತ್ರಣ ಮಾಡಿ, ಸರ್ಕಾರಿ ಕೆಲಸಗಳು ದಳ್ಳಾಳಿ ಮುಕ್ತವಾಗಬೇಕು