2ಬಿ ಮೀಸಲಾತಿ ರದ್ದು | ಕ್ಷುಲ್ಲಕವಾಗಿ ಕಾಣುತ್ತಿರುವುದು ಸರಕಾರದ ತೀರ್ಮಾನ ಮಾತ್ರ!

Date:

ಮೀಸಲಾತಿಯಿಂದ ತಲಾ 2% ಲಾಭ ಪಡೆದ ಲಿಂಗಾಯತರು ಮತ್ತು ಒಕ್ಕಲಿಗರು ಮುಸಲ್ಮಾನರ ವಿರುದ್ಧ ಬೀದಿಗಿಳಿಯುತ್ತಾರೆ. ಕೋಮು ಗಲಭೆ ನಡೆಯುತ್ತದೆ. ಬಿಜೆಪಿ ಅನಾಯಾಸವಾಗಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದುಕೊಂಡಿದ್ದರು. ಆದರೆ, ಪ್ರಸ್ತುತ ಕ್ಷುಲ್ಲಕವಾಗಿ ಕಾಣುತ್ತಿರುವುದು ಸರ್ಕಾರದ ತೀರ್ಮಾನ ಮಾತ್ರ.

2025ಕ್ಕೆ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮುಸ್ಲಿಂ ದ್ವೇಷವನ್ನು ದೇಶದಾದ್ಯಂತ ವ್ಯಾಪಕವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಸಮಾನತೆಯನ್ನು ಸಾರುವ ಕಮ್ಯುನಿಸ್ಟರನ್ನೂ ಕಂಡರೂ ಅಗುವುದಿಲ್ಲ. ಹಾಗಾಗಿ ʼಕಮ್ಯುನಿಷ್ಟರೂ ಮುಸಲ್ಮಾನರೂ ಸೇರಿ ಭಾರತವನ್ನು ಇಸ್ಲಾಮಿಕ್‌ ದೇಶ ಮಾಡುತ್ತಾರೆʼ ಎಂಬ ಕತೆಯನ್ನು ಅದು ಹೇಳುತ್ತಲೇ ಇದೆ. ಇದರಿಂದ ಪಾರಾಗಲು ನಾವ್ಯಾರೂ ಬದುಕಿರದ ಇತಿಹಾಸದ ಯಾವುದೋ ಒಂದು ಅಮೂರ್ತ ಕಾಲಘಟ್ಟಕ್ಕೆ ಭಾರತೀಯರು ಹೋಗಬೇಕೆಂದು ಅದು ಬಯಸುತ್ತದೆ. ಇತಿಹಾಸ ಮತ್ತು ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡ ಅದಕ್ಕೆ ಕಳೆದ ಸುಮಾರು 1500 ವರ್ಷಗಳಿಂದ ನಮ್ಮ ಜೊತೆಗೇ ಬದುಕುತ್ತಿರುವ ಮುಸಲ್ಮಾನರನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವಾಗಿರುವುದು ಅದರ ಬೌದ್ಧಿಕ ಮಿತಿಗಳನ್ನು ಹೇಳುತ್ತದೆ. ಯಾರಾದರೂ ಗೊತ್ತಿದ್ದವರು ಇವುಗಳ ಬಗೆಗೆ ಮಾತಾಡಿದರೆ ಅದು ತನ್ನ ತೀವ್ರ ಅಸಹನೆಯನ್ನು ಪ್ರಕಟಪಡಿಸುತ್ತದೆ, ಮಾತ್ರವಲ್ಲ ಅಂತ ಧ್ವನಿಗಳನ್ನು ಮಟ್ಟ ಹಾಕಲೂ ಪ್ರಯತ್ನಿಸುತ್ತದೆ. ಸಾರ್ವಜನಿಕರ ಜೊತೆಗೆ ಅದಕ್ಕೆ ಸಂವಾದ ಇಲ್ಲದಿರುವುದರಿಂದ ಅದಕ್ಕೆ ತನ್ನ ಸದಸ್ಯರ ತಿಳಿವಳಿಕೆಗಳನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ತನ್ನದೇ ಆದ ಕೆಲವು ನಿಗದಿತ ಕ್ರಿಯಾ ಯೋಜನೆಗಳೊಂದಿಗೆ ಕೆಲಸ ಮಾಡುವ ಸಂಘ ಪರಿವಾರವು ಅಂತಿಮವಾಗಿ ಬ್ರಾಹ್ಮಣ ಕೇಂದ್ರಿತವಾದ ಒಂದು ಸಮಾಜವನ್ನು ಕಲ್ಪಿಸಿಕೊಂಡು ಕೆಲಸ ಮಾಡುತ್ತದೆ. ಕಳೆದ ನೂರು ವರ್ಷಗಳಲ್ಲಿ ಅದು ಬ್ರಾಹ್ಮಣ್ಯದ ಪರಮಾಧಿಕಾರವನ್ನು ಎಂದೂ ಪ್ರಶ್ನಿಸಿಲ್ಲ. ಪ್ರಾಚೀನ ಭಾರತದ ವೈದಿಕ ಕೇಂದ್ರಿತ ಮೌಲ್ಯಗಳನ್ನು ಆಧುನಿಕತೆಗೆ ಒಂದು ಪರಿಹಾರವೆಂದೂ ಅದು ಮುಗ್ಧವಾಗಿ ನಂಬಿಕೊಂಡು ಕೆಲಸ ಮಾಡುತ್ತಿದೆ.

ನೆಹರೂ ಯುಗದ ಬಗ್ಗೆ ಆರ್‌ಎಸ್‌ಎಸ್‌ಗೆ ಅಷ್ಟೊಂದು ಸಿಟ್ಟು ಏಕಿದೆಯೆಂದರೆ ನೆಹರೂ ಅವರು ಸಮಾಜವಾದದ ತಳಹದಿಯ ಮೇಲೆ ದೇಶವನ್ನು ಕಟ್ಟಲು ಹೊರಟದ್ದು ಮತ್ತು ಅಂಬೇಡ್ಕರ್‌ ನೇತೃತ್ವದಲ್ಲಿ ಸಿದ್ಧಗೊಂಡ ಸಂವಿಧಾನವನ್ನು ಪರಿಣಾಮಕಾರಿಯಾಗಿ ಚಾಲ್ತಿಗೆ ತರಲು ಕೆಲಸ ಮಾಡಿದ್ದು. ಇಲ್ಲಿನ ಪಾರಂಪರಿಕ ರಾಜತ್ವ, ಧಾರ್ಮಿಕತೆ, ಬ್ರಾಹ್ಮಣ್ಯ, ಜಾತೀಯತೆ ಮೊದಲಾದ ಹಂಗುಗಳಿಂದ ನಮ್ಮನ್ನು ಬಿಡಿಸಿ, ನಮಗೆಲ್ಲರಿಗೂ ದೇಶದ ಪೌರತ್ವವನ್ನು ಮೊದಲ ಬಾರಿಗೆ ಒದಗಿಸಿಕೊಡಲು ನೆಹರೂ ಕೆಲಸ ಮಾಡಿದ್ದಂತೂ ನಿಜ. ಆ ಪ್ರಯತ್ನಗಳನ್ನು ಆನಂತರದವರು ಸರಿಯಾಗಿ ಮುಂದುವರೆಸಿದ್ದರೆ ನಮ್ಮ ದೇಶದ ಗತಿಯೇ ಬೇರಾಗಿರುತ್ತಿತ್ತು. ಇರಲಿ, ಇವತ್ತು ಭಾರತೀಯ ಮುಸಲ್ಮಾನರನ್ನು ಭಾರತದಲ್ಲಿಯೇ ಅವಮಾನಿಸುತ್ತಿರುವ ಸಂಘ ಪರಿವಾರದವರು ಒಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೆಂದರೆ, ಈ ಸಂಘ ಪರಿವಾರದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂಬ ಅಂಶವನ್ನು.

ವಸಾಹತು ಆಡಳಿತ ಕಾಲದಲ್ಲಿ ಪಾಶ್ಚಿಮಾತ್ಯ ಶಿಕ್ಷಣದ ಬೆಳಕಿನಲ್ಲಿ ಭಾರತವನ್ನು ಪುನರ್‌ ರೂಪಿಸಿದ ರಾಜಾರಾಂ ಮೋಹನ ರಾಯ್, ದಯಾನಂದ ಸರಸ್ವತಿ, ಈಶ್ವರಚಂದ್ರ ವಿದ್ಯಾಸಾಗರ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಮೊದಲಾದವರು ವಸಾಹತು ಕಾಲಘಟ್ಟದಲ್ಲಿಯೇ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ತಮ್ಮನ್ನು ಮುಕ್ತವಾಗಿ ತೆರೆದುಕೊಂಡಿದ್ದರು. ಅದರೆ ಈ ಮಟ್ಟದಲ್ಲಿ ಮುಸ್ಲಿಮರು ಇಂಗ್ಲಿಷಿಗೆ ತೆರೆದುಕೊಳ್ಳಲಿಲ್ಲ. ಬ್ರಿಟಿಷರನ್ನು ತೀವ್ರವಾಗಿ ಇದಿರಿಸಿದ ಅವರು, ಇಂಗ್ಲಿಷನ್ನೂ ತಿರಸ್ಕರಿಸಿದ್ದರು. ಅದರ ಬದಲು ಉರ್ದುವಿಗೇ ಬಲವಾಗಿ ಅಂಟಿಕೊಂಡರು. ಆದರೆ ಮುಂದೆ ಮುಸ್ಲಿಮರು ಹಿಂದಿಯ ರಾಜಕೀಯಕ್ಕೆ ಬಲಿಯಾಗಿ, ಈ ಭಾಷಾ ರಾಜಕೀಯದ ವಿರುದ್ಧವೂ ಹೋರಾಡಬೇಕಾಯಿತು. ಸರ್ ಸೈಯದ್ ಅಹಮದ್ ಖಾನ್ (1817-1898) ಅವರು ಹಿಂದಿ ಮತ್ತು ಉರ್ದುಗಳ ನಡುವಣ ಜಗಳವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದು ಈಗ ಇತಿಹಾಸ. ‘ಉರ್ದು ಮತ್ತು ಹಿಂದಿ ಭಾಷೆಗಳು ಹಿಂದೂ ಮುಸಲ್ಮಾನರನ್ನು ಬೆಸೆಯುವ ಗಂಗಾ-ಜಮುನೆಯರು’ ಎಂದು ಅವರು ವ್ಯಾಖ್ಯಾನಿಸಿದ್ದರು. ಉರ್ದುವಿನಲ್ಲಿ ಪ್ರಕಟವಾಗುತ್ತಿದ್ದ ಅರ್ಧಕ್ಕಿಂತ ಹೆಚ್ಚು ಪುಸ್ತಕಗಳ ಲೇಖಕರು ಹಿಂದುಗಳಾಗಿರುವುದರಿಂದ ಉರ್ದುವನ್ನು ಮುಸಲ್ಮಾನರ ಭಾಷೆ ಎಂದು ಹೇಳಬಾರದೆಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಅವರ ಪ್ರಯತ್ನ ಮುಂದಿನ ದಿನಗಳಲ್ಲಿ ನಿರೀಕ್ಷಿತ ಪರಿಣಾಮಗಳನ್ನು ಬೀರಲೇ ಇಲ್ಲ.

1857ರ ಮೊದಲ ಸ್ವಾತಂತ್ರ್ಯ ಹೋರಾಟದ ಆನಂತರ ಭಾರತೀಯ ಮುಸಲ್ಮಾನರು ಬಡವರಾಗುತ್ತಲೇ ಹೋದರು. ಇಸ್ಲಾಂ ಅರಸರ ಕಾಲದಲ್ಲಿ ತುಂಬ ಪ್ರಭಾವೀ ಹುದ್ದೆಗಳನ್ನು ಹೊಂದಿದ್ದ ಅವರು ಇದ್ದಕ್ಕಿದ್ದಂತೆಯೇ ಬಡವರಾದದ್ದು ಹೇಗೆ? ಈ ಕುರಿತು ನೆಹರೂ ಅವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ- ‘ಜನಕ್ರಾಂತಿಯನ್ನು ಅಡಗಿಸಿದ ಆನಂತರ ಬ್ರಿಟಿಷ್ ಸರ್ಕಾರ ಉದ್ದೇಶಪೂರ್ವಕವಾಗಿ ಮುಸಲ್ಮಾನರನ್ನು ಹೆಚ್ಚು ನಿಗ್ರಹಿಸಿತು. ಮುಸಲ್ಮಾನರಿಗೆ ಕೆಲಸ ಸಿಗುವ ದಾರಿಗಳೆಲ್ಲವೂ ಮುಚ್ಚಿಹೋಯಿತು’. ನೆಹರೂ ಅವರ ಮಾತು ಎರಡು ವಿಷಯಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಮೊದನೆಯದಾಗಿ, ಮುಸಲ್ಮಾನರು ಹೆಚ್ಚು ಉಗ್ರವಾಗಿ ಬ್ರಿಟಿಷರೊಡನೆ ಕಾದಾಡಿದ್ದಾರೆ ಮತ್ತು ಎರಡನೆಯದಾಗಿ, ಈ ಹೋರಾಟದ ಆನಂತರ ಹೆಚ್ಚಿನ ಮುಸಲ್ಮಾನರು ಬೀದಿಗೆ ಬಿದ್ದಿದ್ದಾರೆ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಬ್ರಿಟಿಷರು ಬಿಟ್ಟು ಹೋದ ಆಡಳಿತ ವ್ಯವಸ್ಥೆಗೆ ಸೇರಿಕೊಳ್ಳಲು ಇಂಗ್ಲಿಷ್‌ ಕಲಿತ ಹಿಂದೂಗಳು ತಯಾರಾಗಿದ್ದರು. ಆದರೆ ಇಂಗ್ಲಿಷ್‌ ತಿರಸ್ಕರಿಸಿದ್ದ ಮುಸಲ್ಮಾನರಿಗೆ ಉನ್ನತ ಹುದ್ದೆಗಳನ್ನು ಪಡೆಯುವುದು ಸಾಧ್ಯವಾಗಲೇ ಇಲ್ಲ. ಅಲ್ಪ ಸ್ವಲ್ಪ ಇಂಗ್ಲಿಷ್‌ ಕಲಿತ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದರು. ನಿಧಾನವಾಗಿ ಹಿಂದಿ ಭಾಷಿಕರಿಂದಲೂ ದೂರ ತಳ್ಳಲ್ಪಟ್ಟ ಅಮಾಯಕ ಮುಸ್ಲಿಮರು ಈ ದೇಶದಲ್ಲಿಯೇ ಎರಡನೆಯ ದರ್ಜೆ ನಾಗರಿಕರಾಗಿ ಬದುಕಬೇಕಾದ ದುರಂತವೊಂದನ್ನು ಚರಿತ್ರೆ ನಿರ್ಮಿಸಿಬಿಟ್ಟಿತು. ಹೀಗಾಗಿ ಇವತ್ತು ಮುಸ್ಲಿಮರಿಗೆ ಧಾರ್ಮಿಕ ಆಧಾರದ ಮೇಲೆ ಮೀಸಲಾತಿ ಕೊಡಬೇಕಾಗಿಲ್ಲ, ಬದಲು ಅವರ ಬಡತನವನ್ನು ಗಮನಿಸಿಯೇ ಮೇಲೆತ್ತಬೇಕಾಗಿದೆ. ಸಾಚಾರ್‌ ಸಮಿತಿ ಹೇಳಿದ್ದೂ ಅದನ್ನೇ.

ಇವತ್ತು ಭಾರತದಲ್ಲಿರುವ ಸುಮಾರು 20 ಕೋಟಿ ಮುಸಲ್ಮಾರನ್ನು ನಿತ್ಯವೂ ಅವಮಾನಿಸಲಾಗುತ್ತಿದೆ. ಉದ್ಯೋಗ, ವಿದ್ಯೆ, ಮಾರುಕಟ್ಟೆ ಮತ್ತಿತರ ಸಾರ್ವಜನಿಕೆ ಕ್ಷೇತ್ರಗಳಲ್ಲಿ ಅವರ ಅಸ್ತಿತ್ವವನ್ನು ಇಲ್ಲವಾಗಿಸಲಾಗುತ್ತಿದೆ. ಹಿಂದೆ ನಮ್ಮಲ್ಲಿ ದಲಿತರು ಹೇಗಿದ್ದರೋ ಅದೇ ಪರಿಸ್ಥಿತಿಯನ್ನು ಮುಸ್ಲಿಮರಿಗೆ ತಂದೊಡ್ಡಲಾಗಿದೆ. ಅವರನ್ನು ಅಸ್ಪೃಶ್ಯರನ್ನಾಗಿಸುವುದರ ಜೊತೆಗೆ ಅದೃಶ್ಯರನ್ನಾಗಿಸಲು ಪ್ರಯತ್ನಗಳು ಮುಂದುವರೆಯುತ್ತಿವೆ. ಮುಸಲ್ಮಾನರು ಪ್ರಬಲವಾದ ಒಂದು ರಾಜಕೀಯ ಶಕ್ತಿಯಾಗಿ ಬೆಳೆಯದಂತೆಯೂ ಮಾಡಲಾಗಿದೆ. ಯಾರದೋ ಸ್ವಾರ್ಥಕ್ಕಾಗಿ ಬೆಳೆಸಲಾದ ಕೋಮುವಾದಕ್ಕೆ ಅಮಾಯಕ ಮುಸಲ್ಮಾನರು ಬಲಿಯಾಗುತ್ತಿದ್ದಾರೆ. ಅವರ ಕೆಲವು ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಲಾಗಿದೆ. 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ EWS ಕೋಟಾಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಮಾಡುವುದರ ಮೂಲಕ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಮರನ್ನು ಅತ್ಯಂತ ಮುಂದುವರೆದಿರುವ ವರ್ಗಗಳ ಜೊತೆ ಪೈಪೋಟಿಗಿಳಿಸಲಾಗಿದೆ. ಬಹುಶಃ ಇದಕ್ಕಿಂತ ಮೂರ್ಖತನದ ಕೆಲಸ ಇನ್ನೊಂದು ಇರಲಾರದು.

1995ರಿಂದ ಸಮಸ್ಯೆಯಿಲ್ಲದೇ ಮುಂದುವರೆದುಕೊಂಡು ಬಂದಿದ್ದ ಈ ಮೀಸಲಾತಿಯು ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒಂದು ದೊಡ್ಡ ಸಮಸ್ಯೆಯಾಗಿ ಬಿಜೆಪಿ ಸರಕಾರಕ್ಕೆ ಕಂಡಿದೆ. ಬಡವರ ಬಟ್ಟಲಲ್ಲಿ ಇದ್ದ ರೊಟ್ಟಿಯನ್ನು ಕಿತ್ತುಕೊಂಡು ಬೇರೆಯವರಿಗೆ ಕೊಡುವ ಕ್ರೌರ್ಯವನ್ನು ಸರಕಾರ ನಿರ್ಲಜ್ಜೆಯಿಂದ ಮಾಡಿದೆ. ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ 2(ಬಿ) ಪ್ರವರ್ಗದಡಿ ಮೀಸಲಾತಿ ಕೊಟ್ಟದ್ದನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಮಿತ್‌ ಶಾ ಮೊನ್ನೆ ಘೋಷಿಸಿದರು. ಒಂದು ವೇಳೆ ಹಾಗೆ ಕೊಟ್ಟಿರುವುದು ಧರ್ಮದ ಆಧಾರದಲ್ಲಿಯೇ ಹೌದಾಗಿದ್ದರೆ, ಅದಕ್ಕೆ ತಿದ್ದುಪಡಿ ತಂದು ʼಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ಪರಿಗಣಿಸಿ 4% ಮೀಸಲಾತಿಯನ್ನು ಮುಂದುವರೆಸಲು ಇವರಿಗೆ ತೊಂದರೆಯೇನಿತ್ತು? ಜೊತೆಗೆ ʼಧರ್ಮದ ಮೀಸಲಾತಿ ಸಲ್ಲʼ ಎನ್ನುವ ಬಿಜೆಪಿ ಸರ್ಕಾರ 3(ಬಿ) (ಈಗ 2ಡಿ) ಯಲ್ಲಿರುವ ಕ್ರಿಶ್ಚಿಯನ್ ಮೀಸಲಾತಿಯನ್ನು ಏಕೆ ಮುಟ್ಟಲು ಹೋಗಿಲ್ಲ?

ಸರಕಾರದ ಉದ್ದೇಶ ಸ್ಪಷ್ಟ. ಅದು ಮುಸ್ಲಿಮರನ್ನು ಎರಡನೆಯ ಅಥವಾ ಮೂರನೆಯ ದರ್ಜೆಯ ನಾಗರಿಕರನ್ನಾಗಿ ಪರಿವರ್ತಿಸುವುದು. ಅದಕ್ಕಾಗಿಯೇ ಅದು 1920ರ ಮಿಲ್ಲರ್ ಸಮಿತಿಯ ವರದಿ, 1961ರ ನಾಗನಗೌಡ ಸಮಿತಿ, ವೆಂಕಟ ಸ್ವಾಮಿ ಅಯೋಗ ಮತ್ತು 1990ರ ಚಿನ್ನಪ್ಪ ರೆಡ್ಡಿ ಅಯೋಗದ ವರದಿಗಳನ್ನು ನೋಡುವ ಕೆಲಸವನ್ನೂ ಮಾಡಿಲ್ಲ. 2013ರಲ್ಲಿ ಬಿಜೆಪಿ ಸರ್ಕಾರವೇ ಮುಸ್ಲಿಮರಿಗೆ ಒಬಿಸಿ ಪ್ರಮಾಣ ಪತ್ರ ಕೊಡುವ ವಿವಾದವೊಂದರಲ್ಲಿ ಹೊರಡಿಸಿದ  ಸುತ್ತೋಲೆ ಕ್ರಮಾಂಕ No:BCW 68 BCA 2013  ಪ್ರಕಾರ ಎಲ್ಲ ಮುಸ್ಲಿಮರಿಗೂ ಒಬಿಸಿ ಸರ್ಟಿಫಿಕೇಟ್‌ ಕೊಡಲು ಅದೇಶಿಸಿದ್ದನ್ನೂ ಮರೆತುಬಿಟ್ಟಿತು.

ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದ ಸರಕಾರ ಅದನ್ನು 3 (ಎ)ಒಕ್ಕಲಿಗ ಮತ್ತು 3 (ಬಿ) ಲಿಂಗಾಯತ ಗುಂಪಿಗೆ ಹಂಚಿ ಕೊಟ್ಟಿತು. ಈ ಹಂಚುವಿಕೆಯ ಹಿಂದೆ ಬಹುದೊಡ್ಡ ಹುನ್ನಾರ ಇದೆಯೆಂದು ನನಗೆ ಅನ್ನಿಸುತ್ತದೆ. ಅದೆಂದರೆ,

ತಮಗೆ ಇರಿಸಲಾದ ಮೀಸಲಾತಿ ರದ್ದಾದ ಕೂಡಲೇ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದು ಪ್ರತಿಭಟಿಸುತ್ತಾರೆ. (ನಿನ್ನೆ ಬಂಜಾರರು ಇಳಿದಂತೆ). ಆಗ ಮೀಸಲಾತಿಯಿಂದ ತಲಾ ಎರಡು ಶೇಕಡಾ ಲಾಭ ಪಡೆದ ಲಿಂಗಾಯತರು ಮತ್ತು ಒಕ್ಕಲಿಗರು ಮುಸಲ್ಮಾನರ ವಿರುದ್ಧ ಬೀದಿಗಿಳಿಯುತ್ತಾರೆ. ಕೋಮು ಗಲಭೆ ನಡೆಯುತ್ತದೆ, ಮತ್ತೆ ಬಿಜೆಪಿ ಅನಾಯಾಸವಾಗಿ ಅಧಿಕಾರಕ್ಕೆ ಬರುತ್ತದೆ. ಆದರೆ ಕರ್ನಾಟಕದ ಮುಸಲ್ಮಾನರು ಇಂತಹ ಘಟನೆಗಳು ನಡೆಯಲು ಅವಕಾಶವನ್ನೇ ನೀಡದ ಪ್ರೌಢತೆಯನ್ನು ತೋರಿಸಿ ನಾಡಿನ ಘನತೆಯನ್ನು ಎತ್ತಿ ಹಿಡಿದರು. ಒಕ್ಕಲಿಗರು ಮತ್ತು ಲಿಂಗಾಯತರೂ ಸರಕಾರದ ಈ ತೀರ್ಮಾನದಿಂದ ರೋಮಾಂಚಿತರಾಗದೆ, ತಮ್ಮ ದೊಡ್ಡತನವನ್ನು ಮೆರೆದವರು. ಕ್ಷುಲ್ಲಕವಾಗಿ ಕಾಣುತ್ತಿರುವುದು ಸರಕಾರದ ತೀರ್ಮಾನ ಮಾತ್ರ.

ಡಾ. ಪುರುಷೋತ್ತಮ ಬಿಳಿಮಲೆ
+ posts

ಜಾನಪದ ವಿದ್ವಾಂಸರು, ಲೇಖಕರು,  ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಡಾ. ಪುರುಷೋತ್ತಮ ಬಿಳಿಮಲೆ
ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು,  ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು

4 COMMENTS

  1. ನಿಮ್ಮ ವಿಶ್ಲೇಷಣೆ ಬಹಳ ವಸ್ತುನಿಷ್ಠವಾಗಿದೆ ಸಾರ್. ಓದಿ ತುಂಬಾ ಖುಷಿಯಾಯಿತು 🙏

  2. ಮುಸ್ಲಿಮರು ಯಾವ ಕಾರಣಕ್ಕೆ ಹಿಂದಕ್ಕೆ ತಳ್ಳಲ್ಪಟ್ಟಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿತು ಸರ್ ಅರ್ಥಪೂರ್ಣ ವಿಶ್ಲೇಷಣೆ ನೀಡಿದ್ದೀರಿ 🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ...

ಬೆಂಗಳೂರು ಕಂಬಳ | ಪಾತಕಿ ಶ್ಯಾಮ್ ಕಿಶೋರ್ ಗರಿಕಪಟ್ಟಿಗೆ ಆಹ್ವಾನ: ಮುಂಬಯಿ ತುಳುವರಿಗೆ ಅಚ್ಚರಿ!

80-90ರ ದಶಕದಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ 'ಅಂಡರ್ ವರ್ಲ್ಡ್‌' ಪಾತಕಿಗಳ ನೆತ್ತರ...

ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…

ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು...

ದೇಶ ವಿಭಜನೆ ಕಾಲಘಟ್ಟದ ಒಂದು ಉಪಕತೆ : ಹಸನ್ ನಯೀಂ ಸುರಕೋಡ ಬರೆಹ

ಭಾರತ ವಿಭಜನೆ ಎನ್ನುವ ಕಾಲಘಟ್ಟದ ಅಧ್ಯಯನವನ್ನು ಮಾಡಬಯಸುವವರು ಸಾದತ್ ಹಸನ್ ಮಂಟೊರಂಥ...