ನ್ಯಾಷನಲ್ ಕಾಲೇಜಿನ ಅತ್ಯಾಧುನಿಕವಾದ ಆ ಆಡಿಟೋರಿಯಂನಲ್ಲಿ ಮೂವರ ಭಾವಚಿತ್ರಗಳಿವೆ. ಎಚ್ಎನ್, ಮಹಾತ್ಮ ಗಾಂಧಿ ಮತ್ತು ಐನ್ ಸ್ಟೈನ್ ಫೋಟೊಗಳಿವೆ. ಆದರೆ ಇಲ್ಲಿ ಒಂದು ಕೊರತೆ ಇದೆ, ಅಂಬೇಡ್ಕರ್ ಫೋಟೊವೊಂದು ಇಲ್ಲಿದ್ದಿದ್ದರೆ ಈ ಆಡಿಟೋರಿಯಂ ಪೂರ್ಣಗೊಳ್ಳುತ್ತಿತ್ತು. ಕಾರಣ ಬಾಬಾಸಾಹೇಬರನ್ನ ಪ್ರೀತಿಸುವ ಯಾರಿಗಾದರೂ ಸಹಜವಾಗಿ ಅನ್ನಿಸುವ ಭಾವವದು. ಬಾಬಾಸಾಹೇಬರಿಲ್ಲದ ಯಾವ ವಿದ್ಯಾಲಯ ಪರಿಪೂರ್ಣಗೊಳ್ಳಲು ಹೇಗೆ ಸಾಧ್ಯ ಹೇಳಿ?!
ಹಳ್ಳಿಗಾಡ ಬಡಮಕ್ಕಳಿಗೆ ಶಹರದ ಕುರಿತು ವಿಶಿಷ್ಟ ವಿಚಿತ್ರ ವಿಪರೀತ ಕಲ್ಪನೆಗಳಿರುತ್ತವೆ. ಅದರಲ್ಲಿ ಪಟ್ಟಣದಲ್ಲಿ ಓದಬೇಕೆಂಬುದೂ ಒಂದು. ಆದರೆ ಬಹಳಷ್ಟು ಸಾರಿ ಬಹಳಷ್ಟು ವಿದ್ಯಾರ್ಥಿಗಳ ಬದುಕಲ್ಲಿ ಅಂದುಕೊಂಡದ್ದೆಲ್ಲ ಆಗುವುದು ಕಷ್ಟ, ಸಾಧ್ಯ. ತೇಜಸ್ವಿಯವರು ಹೇಳಿದಂತೆ ‘ಅಂದುಕೊಂಡಂತೆ ಬದುಕುವುದು ಬಹಳ ದೊಡ್ಡ ಹೋರಾಟದ ಫಲವೇ ಹೊರತು, ಸುಲಭದ್ದಲ್ಲ’.
ಮೊನ್ನೆ ನಾನು ಗೌರವಿಸುವ ಹಿರಿಯರೊಬ್ಬರು ಕರೆದಿದ್ದ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಹೋಗಿದ್ದೆ. ಅದೂ ಎಚ್ ಎನ್ ರವರು ಕಟ್ಟಿ ಬೆಳೆಸಿದ ನ್ಯಾಷನಲ್ ಕಾಲೇಜಿಗೆ. ಬೆಂಗಳೂರಿನಲ್ಲಿ ಹಲವು ಲೋಕಗಳಿವೆ. ನನಗೆ ಅಲ್ಲಿನ ರಸ್ತೆಗಳು ಮುಖ್ಯವಾಗಿ ಪಾದಚಾರಿ ಮಾರ್ಗಗಳು, ಅಪರಿಚಿತ ಮುಖಗಳು ತುಂಬಾ ಪರಿಚಿತ ಬದುಕುಗಳು ಕಾಣಿಸಿದ ಲೋಕವೇ ಭಿನ್ನವಾದದ್ದು ಸದಾ ಕಾಡುವಂಥದ್ದು. ನ್ಯಾಷನಲ್ ಕಾಲೇಜೂ ಕೂಡ ತುಂಬಾ ಕುತೂಹಲಕಾರಿಯಾದ ಲೋಕವೆನ್ನಿಸಿತು. ಪ್ರಾಥಮಿಕ ಶಾಲೆಯಿಂದ ಪದವಿಯವರೆಗೂ ಒಂದೇ ಪರಿಧಿಯಲ್ಲಿರುವ ಈ ಕಾಲೇಜು ಅನೇಕ ವಿಚಾರಗಳಿಗೆ ಮನಸ್ಸು ಸೆಳೆಯಿತು.
ಪ್ರಾಥಮಿಕ ಶಾಲೆಯನ್ನ ನೋಡಿದಾಗ ನಾನು ಇಲ್ಲೇ ಶಾಲೆಗೆ ಸೇರಬೇಕಿತ್ತು ಅನಿಸಿತು, ಪ್ರೌಢ, ಪಿಯು, ಪದವಿ ಕಾಲೇಜಿನ ವರಾಂಡ, ತರಗತಿ ಕೋಣೆಗಳು, ವಿಶಾಲವಾದ ಅವಕಾಶ, ಬಯಲು ರಂಗಮಂದಿರಗಳು, ಶುದ್ಧ ಸ್ವಚ್ಛ ವಾಸನೆರಹಿತ ಶೌಚಾಲಯಗಳು, ಕಸವಿಲ್ಲದ ಮೈದಾನ ಹೀಗೆ ಏನೆಲ್ಲ. ಒಟ್ಟಿನಲ್ಲಿ ನಾನಿಲ್ಲಿ ಓಡಾಡಬೇಕಿತ್ತು, ಓದಬೇಕಿತ್ತು ಅನಿಸಿತು. ಇದೇ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ನಾನು ಬರೆದ ಪದ್ಯವೊಂದು ಪಠ್ಯವಾಗಿದೆ.
ನಾನು ಈ ಬರಹ ಬರೆಯುತ್ತಿರುವ ಮುಖ್ಯ ಉದ್ದೇಶಕ್ಕೆ ಬರುತ್ತೇನೆ. ನ್ಯಾಷನಲ್ ಕಾಲೇಜಿನ ಸಾಹಿತ್ಯ ಹಬ್ಬದ ಒಂದು ಗೋಷ್ಠಿ ನನ್ನನ್ನಿನ್ನೂ ಕಾಡುತ್ತಿದೆ, ಕಲಕುತ್ತಿದೆ. ಅದು ಈ ನಾಡಿನ ಪ್ರಾಜ್ಞ ಪ್ರಾಧ್ಯಾಪಕರಲ್ಲೊಬ್ಬರಾದ ಪ್ರೊ.ನಿತ್ಯಾನಂದಶೆಟ್ಟಿಯವರ ಗೋಷ್ಠಿ.
ಅತ್ಯಾಧುನಿಕವಾದ ಆ ಆಡಿಟೋರಿಯಂನಲ್ಲಿ ಮೂವರ ಭಾವಚಿತ್ರಗಳಿವೆ. ಎಚ್ ಎನ್ ರವರ ಫೋಟೊ, ಮಹಾತ್ಮ ಗಾಂಧಿಯವರ ಫೋಟೊ ಮತ್ತು ಐನ್ ಸ್ಟೈನ್ ರವರ ಫೋಟೊ. ಸಭಾಂಗಣದಲ್ಲಿ ಬಂದ ತಕ್ಷಣ ಈ ಫೋಟೊಗಳು ಯಾರನ್ನಾದರೂ ಸೆಳೆಯುತ್ತವೆ. ಕಾರಣ ಆ ಫೋಟೊಗಳು ಸಹಜವಾಗಿವೆ, ಭಾವತೀವ್ರತೆಯಿಂದ ಕೂಡಿವೆ, ನನಗಂತೂ ಆ ಮೂವರೂ ಜೊತೆ ಕೂತು ನಮ್ಮ ಮಾತು ಅಟಾಟೋಪ ಆಲಿಸುತ್ತಿರುವರು ಎನ್ನಿಸುವಷ್ಟು ಜೀವಶಕ್ತಿ ಆ ಫೋಟೊಗಳಿಗಿವೆ. ತಮ್ಮ ಮಾತಿನ ಮೊದಲಲ್ಲಿಯೇ ಆ ಫೋಟೊಗಳನ್ನ ಗಮನಿಸಿ ಇಲ್ಲಿ ಮೂವರ ಫೋಟೊಗಳೇನೋ ಇವೆ, ಜೊತೆಗೆ ಇಲ್ಲಿ ಒಂದು ಕೊರತೆ ಇದೆ, ಅಂಬೇಡ್ಕರ್ ಫೋಟೊವೊಂದು ಇಲ್ಲಿದ್ದಿದ್ದರೆ ಈ ಆಡಿಟೋರಿಯಂ ಪೂರ್ಣಗೊಳ್ಳುತ್ತಿತ್ತು ಎಂದ ತಕ್ಷಣ ನಾನು ಮೈಗಣ್ಣಾದೆ ಕಿವಿಗಳನ್ನ ಕೇಂದ್ರೀಕರಿಸಿ ವಿಚಲಿತಗೊಳ್ಳದಂತೆ ನಾನು ಅವರ ಮಾತುಗಳಿಗೆ ಪರವಶನಾದೆ. ಕಾರಣ ನನ್ನ ಅಥವಾ ಬಾಬಾಸಾಹೇಬರನ್ನ ಪ್ರೀತಿಸುವ ಯಾರಿಗಾದರೂ ಸಹಜವಾಗಿ ಅನ್ನಿಸುವ ಭಾವವದು. ಬಾಬಾಸಾಹೇಬರಿಲ್ಲದ ಯಾವ ವಿದ್ಯಾಲಯ ಪರಿಪೂರ್ಣಗೊಳ್ಳಲು ಹೇಗೆ ಸಾಧ್ಯ ಹೇಳಿ?!
ಮುಂದೆ ಕೇಳಿ, ತಮ್ಮ ಮಾತುಗಳನ್ನ ಬೆಳೆಸುತ್ತಾ ಬೆಳೆಸುತ್ತಾ ಪ್ರೊಫೆಸರ್ ರವರ ಕೃತಕವಲ್ಲದ ಲಯ, ಭಾರವೆನಿಸದ ದನಿ, ಎದೆಗೆ ತಾಕುವಂಥ ಖಚಿತತೆ, ಗರ್ವವಿಲ್ಲದ ಸ್ವವಿಶ್ವಾಸ ಮತ್ತು ಒಂದು ಮಾತು ಮತ್ತೊಂದು ಮಾತಿನ ನಡುವೆ ಇರಲೇಬೇಕಾದ ಅರ್ಥವತ್ತಾದ ಮೌನ ನನ್ನನ್ನೂ ಮತ್ತು ನಮ್ಮನ್ನೂ ವೈಚಾರಿಕತೆಯ ಮಡಿಲೊಳಗೆ ಒಡಲೊಳಗೆ ಬೆಚ್ಚಗೆ ಆಲಿಸುತ್ತ ತಲೆ ಕಿವಿ ಕಣ್ಣು ಹೃದಯ ಆತ್ಮ ಒಂದು ಮಾಡಿಕೊಂಡು ಗಂಟೆ ಕಾಲ ಏಕತ್ರವಾಗಿ ಕೂರುವಂತೆ ಮಾಡಿದ್ದವು. ಸಭಿಕರದ್ದು ಬಹುತೇಕ ಇದೆ ಭಾಗ್ಯ ಪಾಡು.
‘ನಾವು ಬಾಬಾಸಾಹೇಬರನ್ನ ಅವರು ಬರೆದ ಬರಹಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ತಿಂಗಳುಗಟ್ಟಲೆ ವರ್ಷಗಟ್ಟಲೆ ಓದಿದರೂ ಬಹುಶಃ ಬಾಬಾಸಾಹೇಬರು ಪೂರ್ಣವಾಗಿ ದಕ್ಕಲಾರರೇನೋ. ಆದರೆ ಬಾಬಾಸಾಹೇಬರನ್ನ ಅವರು ಬದುಕಿದ ಕಾಲಘಟ್ಟದಲ್ಲಿ ಅವರು ಇತರರೊಂದಿಗೆ ನಡೆಸಿದ ಸಂವಾದಗಳನ್ನ ನಾವು ಓದದೇ ಇರುವ ಮತ್ತೊಂದು ಕೃತಿ ನಮಗೆ ಸಿಗಬಹದು’ ಎಂದು ನಿತ್ಯಾನಂದಶೆಟ್ಟರು ಹೇಳುತ್ತಿರುವಂತೆಯೇ ನನಗೆ ಅವರು ಕಾಲವನ್ನ ಗತಕಾಲವನ್ನ ಮನುಷ್ಯರನ್ನ ಓದುವ ಬಗೆಯನ್ನೂ ಕಲಿಸುತ್ತಿದ್ದಾರೇನೋ ಎನ್ನಿಸುತ್ತಿತ್ತು. ನಿತ್ಯಾನಂದ ಶೆಟ್ಟಿಯವರ ಮೌನದಲ್ಲಿ ಬಹಳಷ್ಟು ಅರ್ಥವತ್ತಾದ ಮಾತುಗಳಿವೆ ಎನಿಸುತ್ತಿತ್ತು.
ಪ್ರೊಫೆಸರ್ ರವರು ತಮ್ಮ ದೀರ್ಘ ಉಪನ್ಯಾಸದಲ್ಲಿ ನಮ್ಮನ್ನೆಲ್ಲ ಮುಳುಗಿಸಿ ಎಚ್ಚರಿಸಿದ್ದರು. ನಾವು ಗೌರವಿಸುವ ಕನ್ನಡದ ಮಹತ್ವದ ಬರಹಗಾರರಾದ ಕೇಶವ ಮಳಗಿಯವರು ಅನುವಾದಿಸಿರುವ ಮಹಾತ್ಮ ಮತ್ತು ಬಾಬಾಸಾಹೇಬರ ನಡುವೆ ನಡೆದ ಸಂವಾದದ ಯಥಾ ರೂಪವನ್ನ ನಿತ್ಯಾನಂದಶೆಟ್ಟರು ಮತ್ತು ಅವರ ಶಿಷ್ಯರೊಬ್ಬರು ಸೇರಿ ಆ ಸಂಭಾಷಣೆಗೆ ಮರುಜೀವ ತುಂಬಿ ನಮ್ಮೆದುರಿಗಿಟ್ಟರು. ಅದೆಷ್ಟು ಗಾಢ ಆರ್ದ್ರ ಮತ್ತು ತೀವ್ರ ಮನಸೆಳೆಯುವ ಸಂವಾದವದು. ಅದನ್ನ ಅಷ್ಟೇ ತೀವ್ರವಾಗಿ ಕನ್ನಡೀಕರಣಗೊಳಿಸಿದ ಅನುವಾದಕರೂ ಮತ್ತು ಅದನ್ನು ಪ್ರಸ್ತುತಪಡಿಸಿದ ನಿತ್ಯಾನಂದಶೆಟ್ಟರೂ ಅಭಿನಂದನಾರ್ಹರು.
ಯಾರು ಹೆಚ್ಚು ಯಾರು ಕಡಿಮೆ ಯಾರು ಅಗತ್ಯ ಯಾರು ಅನಗತ್ಯ ಯಾವುದು ಬೇಕು ಯಾವುದು ಬೇಡ ಎಂಬ ಜಿಜ್ಞಾಸೆಗಳೇ ಬೇಡದೆ ಸುಮ್ಮನೆ ಆ ಒಂದು ಗಂಟೆ ಆ ಮಹಾತ್ಮರಿಬ್ಬರ ಮಾತಿನ ಬೆಳಕನ್ನ ಎದೆ ತುಂಬಿಕೊಳ್ಳುತ್ತಾ ಹೋದೆ. ಬಾಬಾಸಾಹೇಬರ ದಿಟ್ಟತನ ಬೌದ್ಧಿಕ ಹೃದಯವಂತಿಕೆ ಮತ್ತು ಎಂಥ ಸಂದಿಗ್ಧತೆಯಲ್ಲೂ ಬಿಟ್ಟುಕೊಡದೆ ಇರುವ ಕರುಣಭಾವ ಮತ್ತು ಮಹಾತ್ಮನ ಅನುಕರಣೀಯ, ಎಲ್ಲರೂ ಬಯಸಬಹುದಾದ ಮಮತೆ ಇನ್ನೂ ಈಗಲೂ ಮುಂದೆಯೂ ಕಾಡುವಂಥದ್ದು. ಅವರು ಕಾಲವಾದವರಲ್ಲ ಕಾಲಾತೀತವಾಗಿ ಜೀವಂತವಾಗಿ ಉಳಿಯಬಲ್ಲ ಚೇತನಗಳು ಎಂಬುದನ್ನ ಪ್ರೊ.ನಿತ್ಯಾನಂದಶೆಟ್ಟರು ಕೈಯಲ್ಲಿ ನೆಪಕ್ಕೆ ಸ್ಕ್ರಿಪ್ಟ್ ಇಟ್ಟುಕೊಂಡು ಹೃದಯದಾಳದಿಂದ ನಾಭಿಮೂಲದಿಂದ ಆತ್ಮಬಲದಿಂದ ಬಾಬಾಸಾಹೇಬರು ಹೇಳಿದ್ದ ಮಾತುಗಳನ್ನ ಮತ್ತೆ ನಮ್ಮೆದೆಗೆ ಹಾಕಿದರು.

ನ್ಯಾಷನಲ್ ಕಾಲೇಜಿನ ಮೆಟ್ರೋ ನಿಲ್ದಾಣದಲ್ಲಿಳಿದು ಜಾಗರೂಕವಾಗಿ ರಸ್ತೆ ದಾಟಿ ಅಗಾಧ ಬಯಲಿನ ಆಟದ ಬಯಲೊಳಗೆ ಹೆಜ್ಜೆ ಇಟ್ಟರೆ ಅಲ್ಲೂ ಫುಲ್ ಟ್ರಾಫಿಕ್. ಒಂದು ಕ್ರಿಕೆಟ್ ಟೀಮ್ ಆಡಬಹುದಾದ ಮೈದಾನದಲ್ಲಿ ನೂರು ಕ್ರಿಕೆಟ್ ಟೀಮುಗಳು, ಎರಡುನೂರಕ್ಕೂ ಹೆಚ್ಚು ಬ್ಯಾಟುಗಳು, ನೂರಾರು ಬಾಲುಗಳು ಬಹುತೇಕರಿಗೆ ಯೂನಿಫಾರ್ಮ್ ಗಳಿದ್ದವು, ಎಳೆಯರಿಂದ ಹಿಡಿದು ಅರವತ್ತರ ಹರೆಯದವರವರೆಗೆ ಅಲ್ಲಿ ಕ್ರೀಡಾಪಟುಗಳು ನೆರೆದಿದ್ದರು. ಯಾರ ಟೀಮಿಗೆ ಯಾರು ಸೇರಿದ್ದಾರೆ, ಯಾರ ಬಾಲು ಯಾರಿಗೆ ಎಂದು ಒಂದೂ ತೋಚದ ನನಗೆ ತಲೆ ಎನ್ನುವುದು ಗಿರಗಿಟ್ಟಲೆಯಾಗಿತ್ತು. ಇದು ನ್ಯಾಷನಲ್ ಕಾಲೇಜು ಮೈದಾನವೇ ಇರಬೇಕು ಎಂದುಕೊಂಡು ಆ ಜನಜಂಗುಳಿಯೊಳಗೆ ಸಿಕ್ಕಿಕೊಂಡ ನನಗೆ ಕಾಲೇಜಿನ ಬಾಗಿಲೇ ಸಿಗುತ್ತಿಲ್ಲ. ಯಾರನ್ನಾದರೂ ಕೇಳೋಣವೆಂದರೆ ಅಲ್ಲಿನ ಆಟಗಾರರ ತಲ್ಲೀನತೆ ಎಷ್ಟಿತ್ತೆಂದರೆ ಅವರನ್ನು ಮಾತನಾಡಿಸುವುದೂ ಸಹ ಅಪರಾಧವೆಂಬಂತಾಗಿತ್ತು. ಹಾಗೂ ಹೀಗೂ ಸಂಕೋಚದಿಂದಲೇ ಒಬ್ಬರನ್ನ ಕೇಳಿದೆ. ಅವರು ತಮಗೆ ಗೊತ್ತಿಲ್ಲವೆಂಬುದನ್ನ ಸನ್ನೆಯಲ್ಲೇ ತಿಳಿಸಿದರು. ಅಲ್ಲಿನ ಸಾವಿರಾರು ಮಂದಿಯೊಳಗೆ ನನಗೆ ನ್ಯಾಷನಲ್ ಕಾಲೇಜು ತೋರಿಸುವವರಾರು ಎಂದು ಯೋಚಿಸುತ್ತ ಕಾಲೇಜು ಹುಡುಗನೊಬ್ಬನನ್ನ ನಿಲ್ಲಿಸಿ ಗಟ್ಟಿಯಾಗಿ ಕೇಳಿದೆ. ಆತ ವಿಧೇಯನಾಗಿ ಕಾಲೇಜಿಗೆ ಹೋಗುವ ದಿಕ್ಕು ತೋರಿಸಿದ. ಸಮಾಧಾನಗೊಂಡು ಆತ ತೋರಿದ ದಿಕ್ಕಿನ ಕಡೆ ಫೀಲ್ಡರುಗಳು, ಬೌಲರುಗಳು ಮತ್ತು ಚಂಡುಗಳ ಮಧ್ಯ ಅತ್ತಿಂದಿತ್ತ ಇತ್ತಿಂದತ್ತ ಜಿಗಿಯುತ್ತ ಹಾಗೂ ಹೀಗೂ ನ್ಯಾಷನಲ್ ಕಾಲೇಜಿನ ಪ್ರಾಥಮಿಕ ಶಾಲೆಯ ಗೇಟಿಗೆ ಬಂದೆ. ಅಲ್ಲಿನ ಸೆಕ್ಯೂರಿಟಿ ಗಾರ್ಡ್ ರನ್ನ ಕಾಲೇಜು ಯಾವ ಕಡೆಗಿದೆ ಎಂದು ಕೇಳಿದೆ. ಅವರು ಮತ್ತೊಂದು ಗೇಟಿನ ದಿಕ್ಕು ತೋರಿಸಿದರು. ಅಂತೂ ನ್ಯಾಷನಲ್ ಕಾಲೇಜಿಗೆ ಹೆಜ್ಜೆ ಇಟ್ಟೆ. ಹೊರಗಡೆ ಸಾಹಿತ್ಯ ಹಬ್ಬದ ಸಂಭ್ರಮವನ್ನ ತೋರುವಂತೆ ಕಟೌಟು ಕಂಡಿತು. ಒಳಗೆ ಹೆಜ್ಜೆ ಇಟ್ಟಂತೆ ಎರಡು ಪುಸ್ತಕ ಮಳಿಗೆಗಳು ಅದೀಗ ತಾನೆ ಪುಸ್ತಕಗಳನ್ನ ಹೊಂದಿಸಿಕೊಳ್ಳುತ್ತಿದ್ದವು. ಗೌಜು ಎನ್ನಿಸಿದ ನಿರಾಳ ಶಾಂತ ಪ್ರಶಾಂತ ಅವಕಾಶವನ್ನ ಕಂಡು ನಾನೂ ಕೊಂಚ ನಿರಾಳನಾದೆ. ಜಂಗಳದನದ ಹಿಂಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದವನಿಗೆ ಒಮ್ಮೆಲೇ ಶಾಂತವಾದ ಆಲದ ಮರದ ನೆರಳು ಸಿಕ್ಕಂತೆನಿಸಿ ಬಯಲು ರಂಗಮಂದಿರದ ಕಟ್ಟೆಯ ಮೇಲೆ ಕೂತೆ. ರಾಮಮೋಹನ್ ಸರ್ ಕಂಡರು. ಅವರು ಅಕ್ಕರೆಯಿಂದ ಕರೆದು ಉಡುಗೊರೆ ಕೊಟ್ಟು ಮಮತೆಯಿಂದ ತಬ್ಬಿ ಸ್ವಾಗತಿಸಿದರು.
ಮೊದಲ ಗೋಷ್ಠಿಯಲ್ಲಿ ಕನ್ನಡದ ಮಹತ್ವದ ಕಥೆಗಾರ ಮತ್ತು ಪ್ರಬಂಧಕಾರ ವಸುಧೇಂದ್ರ ವೇದಿಕೆಯ ಮೇಲೆ ಬಂದರು. ಕಥೆ ಎಂದರೇನು, ಕಥೆ ಹುಟ್ಟುವ ಬಗೆ ಹೇಗೆ, ಕಥೆಯ ಹಿಂದಿನ ಪ್ರೇರಣೆಗಳೇನು ಎಂಬುದರ ಕುರಿತು ನಿರರ್ಗಳವಾಗಿ ಮಾತನಾಡುತ್ತ ಬದುಕಿನ ಕೆಲವು ಸಹಜ ಜೀವಂತ ಉದಾಹರಣೆಗಳ ಮೂಲಕ ತಮ್ಮ ಕಥನದ ಅನುಭವಗಳನ್ನ ಹಂಚಿಕೊಳ್ಳುತ್ತಾ ಹೋದರು. ಬರಹವೆಂಬುದು ಸಡಗರ ಸಂಭ್ರಮ ಖುಷಿಯ ದಟ್ಟ ಅನುಭವ ಎಂಬುದನ್ನ ಅವರ ಮಾತುಗಳು ಮತ್ತೆ ಮತ್ತೆ ಸಾರುತ್ತಿತ್ತು. ಆದರೆ ಮತ್ತೊಬ್ಬರ ದಗ್ದತೆಯನ್ನ ಅಷ್ಟು ದಟ್ಟವಾಗಿ ಸಾಂದ್ರವಾಗಿ ಸವಿವರವಾಗಿ ತಮ್ಮ ಪ್ರಬಂಧ ಕಥೆಗಳಲ್ಲಿ ಹಿಡಿದು ತೋರುವ ವಸುಧೇಂದ್ರ ಯಾಕೆ ಇಷ್ಟು ಮೇಲು ಸ್ತರದಲ್ಲಿ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆ ಹಾಗೇ ಉಳಿಯಿತು. ಬಹುಶಃ ವಿದ್ಯಾರ್ಥಿಗಳಿದ್ದಾರೆ ಎಂಬ ಕಾರಣಕ್ಕೆ ಅವರು ತಮ್ಮ ನಿಜ ಅನುಭವವನ್ನ ಮುಟ್ಟುತ್ತಿಲ್ಲ ಎನ್ನಿಸಿತು.

ನಂತರದ ಗೋಷ್ಠಿಯಲ್ಲಿ ಕನ್ನಡದ ಈ ಹೊತ್ತಿನ ಮಹತ್ವದ ಕಥೆಗಾರ್ತಿಯವರಾದ ಅನುಪಮಾ ಪ್ರಸಾದ್ ಮತ್ತು ಲೆಬನಾನಿನವನನ್ನ ತಮ್ಮ ಅನುವಾದದ ಮೂಲಕ ಕನ್ನಡದ ಮನಸುಗಳ ಹತ್ತಿರ ತಂದ ಸಂಧ್ಯಾರಾಣಿಯವರಿದ್ದರು. ಮೊದಲಿಗೆ ಸಂಧ್ಯಾರಾಣಿಯವರು ತಮ್ಮ ಇತ್ತೀಚಿನ ಕೃತಿಯ ಬರವಣಿಗೆಯ ಅನುಭವ ಹಂಚಿಕೊಳ್ಳುತ್ತಾ ಆ ಕೃತಿಯಲ್ಲಿ ಬರುವ ತೀರಾ ಸಾಮಾನ್ಯರನ್ನು ಕೂಡ ಬಹುವಚನದಲ್ಲೇ ದಾಖಲಿಸಿರುವ ಕುರಿತು ಮತ್ತು ಅದರ ಸಕಾರಣ ಕುರಿತು ಹೇಳಿದರು. ಹೆಣ್ಣುಮಕ್ಕಳಾಗಿರುವ ಕಾರಣಕ್ಕೇ ಬರಹ ಮತ್ತು ಸೃಜನಶೀಲ ಲೋಕದಲ್ಲಿ ಎದುರಿಸಬೇಕಾದ ಹಲವು ತಳ್ಳಂಕಗಳು ಮತ್ತು ಸವಾಲುಗಳ ಕುರಿತು ಸಂಧ್ಯಾರಾಣಿಯವರು ಮಾತನಾಡಿದರು.
ಇದನ್ನು ಓದಿದ್ದೀರಾ?: ಕೋಲಾರದ ನೆಲಕ್ಕೆ ವಿದಾಯ ಹೇಳಿದ ಕೋಟಿಗಾನಹಳ್ಳಿ ರಾಮಯ್ಯ
ನಂತರ ಕಥೆಗಾರ್ತಿ ಅನುಪಮಾ ಪ್ರಸಾದ್ ರವರು ತಮ್ಮ ಕಥನದ ಮಾತು ಶುರು ಮಾಡಿದರು. ವಸುಧೇಂದ್ರರ ಮಾತಿನ ಮತ್ತೊಂದು ದಿಕ್ಕಿನಂತೆ ಅಥವಾ ಬೇರೊಂದು ದಾರಿಯಂತೆ ಮಾತು ಶುರು ಮಾಡಿದ ಅನುಪಮಾ ಪ್ರಸಾದ್ ತಮ್ಮ ದಗ್ದ ಸ್ವರದ ದಟ್ಟ ಅನುಭವವನ್ನ ಸಭಿಕರಿಗೆ ದಾಟಿಸುತ್ತ ಸೃಜನೆಯ ಆತ್ಯಂತಿಕ ಸವಾಲು ಮತ್ತು ಗಂಡುಲೋಕದ ತಂದೊಡ್ಡುವ ಬದುಕಿನ ಸಂದಿಗ್ದತೆಗಳನ್ನ ಬಿಚ್ಚಿಡುತ್ತ ಹೋದರು. ಕೇರಳ ಜನಪದದಲ್ಲಿ ಹೆಣ್ಣುಜೀವದ ಪ್ರೇರಣಾದಾಯಕ ಪಾತ್ರವಾಗಿರುವ ಭಗವತಿಯ ಕಥೆಯನ್ನ ಉದಾಹರಿಸುತ್ತಾ ಭಗವತಿಯನ್ನ ಕಾಡಿಗಟ್ಟಲು ಮತ್ತು ಅವಳ ವಿದ್ವತ್ತನ್ನ ನಾಶಪಡಿಸಲು, ಕೊನೆಗವಳು ಇಲ್ಲವಾಗುವಂತೆ ನಡೆಸಿದ ಗಂಡುಜನ್ಮಗಳ ಹುನ್ನಾರಗಳ ಸಂಯಮದಿಂದ ಸೂಕ್ಷ್ಮತೆಯಿಂದ ಕೇಳುಗರ ಎದೆತೇವಗೊಳ್ಳುವಂತೆ ನಿರೂಪಿಸುತ್ತಾ ಹೋದರು.
ಹೇಳುವುದಕ್ಕೆ ಸಾಕಷ್ಟಿದೆ. ಒಂದು ದಿನಕ್ಕಾದರೂ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಲು ಅವಕಾಶ ಮಾಡಿಕೊಟ್ಟ ನಾನು ಪ್ರೀತಿಸುವ ಗೌರವಿಸುವ ಹಿರಿಯರಾದ ರಾಮಮೋಹನ್ ಕೆ.ಎನ್ ರವರಿಗೆ ಮತ್ತು ಗುರುಲಿಂಗ ಅಮ್ಮಣಗಿಯವರಿಗೆ ಮತ್ತು ಇಡೀ ದಿನ ನನ್ನೊಂದಿಗೆ ವಿಧೇಯ ವಿದ್ಯಾರ್ಥಿಗಳಾಗಿ ಪಾಠ ಕೇಳಿದ ಪಾಠ ಹೇಳಿದ ಮಿತ್ರರಾದ ಸೋಮು ಕುದುರಿಹಾಳ ಮತ್ತು ಅರಬಗಟ್ಟೆ ಅಣ್ಣಪ್ಪ ನನ್ನ ದಿನವನ್ನು ಹಸಿರಾಗಿಸಿದರು.
ಇನ್ನೂ ಮುಗಿದಿಲ್ಲ…

ವೀರಣ್ಣ ಮಡಿವಾಳರ
ಕವಿ, ಲೇಖಕ, ಶಿಕ್ಷಕ