ಅಂಬೇಡ್ಕರ್ ಅವರ ಬರಹ, ಚಿಂತನೆ, ವಿಚಾರಧಾರೆಯ ಪ್ರೇರಣೆ ಕರ್ನಾಟಕದ ವೈಚಾರಿಕತೆಯನ್ನು ಹೇಗೆ ರೂಪಿಸಿದೆ ಎಂಬುದು ವೈಚಾರಿಕ, ಸಂಶೋಧನ ಬರಹಗಳಲ್ಲಿ ಸ್ಪಷ್ಟವಾಗಿ ತೋರಿದರೂ, ಸೃಜನಶೀಲನ ಸಾಹಿತ್ಯ ಪ್ರಕಾರದ ಕತೆ, ಕಾದಂಬರಿ, ಕಾವ್ಯ, ಪ್ರಬಂಧವನ್ನು ಒಳಗೊಂಡಂತೆ ಲೋಕವನ್ನು ನೋಡುವ ದೃಷ್ಟಿಕೋನದಲ್ಲಿ ಬೆರೆತುಹೋದ ಅಂಬೇಡ್ಕರ್ ಅವರ ಕಣ್ಣೋಟವನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲಾಗದು
ಕರ್ನಾಟಕ ಎನ್ನುವ ಭೌಗೋಳಿಕತೆಯಲ್ಲಿ ಅಂಬೇಡ್ಕರ್ ಹೇಗೆಲ್ಲಾ ನೆಲೆಗೊಂಡಿದ್ದಾರೆ ಎನ್ನುವುದೊಂದು ಕುತೂಹಲಕರ ವಿಷಯ. ಇದರ ಬೇರುಗಳನ್ನು ಶೋಧಿಸುವ ಆಲೋಚನೆಯ ಒಂದು ಟಿಪ್ಪಣಿ ಈ ಬರಹ. ಅಂಬೇಡ್ಕರ್ ಅವರ ನಂಟನ್ನು ಕರ್ನಾಟಕದ ಜತೆ ಗುರುತಿಸುವುದಕ್ಕೆ ಇರುವ ನೆಲೆಗಳಾವುವು? ಎಂದು ನೋಡಿದರೆ ಹತ್ತಾರು ಆಯಾಮಗಳಿವೆ. ಸ್ವತಃ ಅಂಬೇಡ್ಕರ್ ಕರ್ನಾಟಕದ ಜತೆ ಹೊಂದಿದ ನಂಟನ್ನು ಗುರುತಿಸುವುದು ಒಂದಾದರೆ, ಕರ್ನಾಟಕದ ಜನತೆ ಅಂಬೇಡ್ಕರ್ ಜತೆ ಗುರುತಿಸಿಕೊಂಡ ನಂಟನ್ನು ಮತ್ತೊಂದು ನೆಲೆಯಲ್ಲಿ ಶೋಧಿಸಬೇಕು. ಕರ್ನಾಟಕ ಎನ್ನುವ ರಾಜ್ಯ ನಾಮಕರಣವಾದದ್ದು 1973ರಲ್ಲಿ. ಹಾಗಾಗಿ ಅಂಬೇಡ್ಕರ್ ಕರ್ನಾಟಕ ರೂಪುಗೊಂಡಾಗಿನ ನಾಡಿನ ಜತೆ ಸಂವಾದ ಮಾಡಲಿಲ್ಲ, ಬದಲಾಗಿ ಮೈಸೂರು ರಾಜ್ಯದೊಂದಿಗೆ ಒಡನಾಡಿದ್ದರು.
ಅಂಬೇಡ್ಕರ್ ಅವರ ಬರಹ ಚಿಂತನೆ ವಿಚಾರಧಾರೆ ಪ್ರೇರಣೆ ಕರ್ನಾಟಕದ ವೈಚಾರಿಕತೆಯನ್ನು ಹೇಗೆ ರೂಪಿಸಿದೆ ಎನ್ನುವುದನ್ನು ಗುರುತಿಸುವುದು ಒಂದು ಮುಖ್ಯ ಎಳೆ. ವೈಚಾರಿಕ, ಸಂಶೋಧನ ಬರಹಗಳಲ್ಲಿ ಇದು ಸ್ಪಷ್ಟವಾಗಿ ತೋರಿದರೂ, ಸೃಜನಶೀಲನ ಸಾಹಿತ್ಯ ಪ್ರಕಾರದ ಕತೆ, ಕಾದಂಬರಿ, ಕಾವ್ಯ, ಪ್ರಬಂಧವನ್ನು ಒಳಗೊಂಡಂತೆ ಲೋಕವನ್ನು ನೋಡುವ ದೃಷ್ಟಿಕೋನದಲ್ಲಿ ಬೆರೆತುಹೋದ ಅಂಬೇಡ್ಕರ್ ಅವರ ಕಣ್ಣೋಟವನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲಾಗದು. ಈ ಅರ್ಥದಲ್ಲಿ ಕನ್ನಡ ಅಥವಾ ಕರ್ನಾಟಕದಲ್ಲಿ ರೂಪುಗೊಂಡ ವೈಚಾರಿಕತೆಯ ನೇಯ್ಗೆಯಲ್ಲಿ ಅಂಬೇಡ್ಕರ್ ಎಳೆ ದಟ್ಟವಾಗಿ ಹೆಣಿದಿದೆ. ಹೀಗೆ ಹೆಣಿಗೆಯಾದ ಅಂಬೇಡ್ಕರ್ ಎಳೆಗಳನ್ನು ಗುರುತಿಸುವುದು ಕೂಡ ಅಂಬೇಡ್ಕರ್ ಕರ್ನಾಟಕದ ಒಂದು ಮುಖ್ಯ ನೆಲೆ.
ಅಂಬೇಡ್ಕರ್ ಅವರ ಪ್ರಭಾವವನ್ನು ಕಲಿತವರಲ್ಲಿ, ಸಾಹಿತಿ, ಕವಿ, ಕಲಾವಿದ, ಚಿಂತಕರಲ್ಲಿ ಹುಡುಕುವ ಆಯಾಮವಿರುವಂತೆ ಅಂಬೇಡ್ಕರ್ ಅನಕ್ಷರಸ್ತರ ಒಡಲಲ್ಲಿ, ಮೌಖಿಕ ಕಥನಗಳಲ್ಲಿ, ಕಲಿತೂ ಏನನ್ನೂ ಬರೆಯದ ವಿದ್ಯಾವಂತರಲ್ಲಿಯೂ ನೆಲೆಗೊಂಡಿದ್ದಾರೆ. ಈ ದಾರಿಯನ್ನೂ ತೆರೆದು ತೋರಬೇಕಾಗಿದೆ. ಕಾರಣ ಅಂಬೇಡ್ಕರ್ ಅವರನ್ನು ತೋರಿಕೆಯಾಗಿ ಕಾಣಿಸುವ ಜಗತ್ತಿರುವಂತೆ ಅಂಬೇಡ್ಕರ್ ಅವರನ್ನು ಅಂತರಂಗ ಬುದ್ಧಿ ಭಾವಗಳಲ್ಲಿ ಪ್ರತಿಷ್ಠಾಪಿಸಿಕೊಂಡು ಅವರ ಆಶಯವನ್ನು ಬದುಕುತ್ತಿರುವವರೂ ಇದ್ದಾರೆ. ಹೀಗೆ ಬದುಕುವವರು ಯಾರ ಜಪ್ತಿಗೂ ಸಿಗದ ನವಿಲುಗಳಿದ್ದಂತೆ.
ಈಚೆಗೆ ಒಂದು ಟಿವಿ ಚಾನಲ್ ಬೆಂಗಳೂರಿನ ಬಿಎಂಟಿಸಿ ಮಹಿಳಾ ಡೈವರ್ ಒಬ್ಬರನ್ನು ಸಂದರ್ಶಿಸಿತು. ಅವರು ನಾನು ದೇವರನ್ನು ಪೂಜಿಸುವುದಿಲ್ಲ ನಮ್ಮನೆಯಲ್ಲಿ ಅಂಬೇಡ್ಕರ್ ಫೋಟೋ ಮಾತ್ರ ಇರೋದು, ಯಾಕಂದ್ರ ಅವರಿಂದ ನಾವು ಬದುಕು ಕಂಡೀವಿ, ಹಂಗಾಗಿ ಅಂಬೇಡ್ಕರ್ ಒಬ್ರನ್ನೆ ನಾನು ಪೂಜಿಸೋದು’ ಎನ್ನುತ್ತಾರೆ. ಇಂತಹ ಅಸಂಖ್ಯ ಜನರಲ್ಲಿ ಹೀಗೆ ಅಂಬೇಡ್ಕರ್ ನೆಲೆಗೊಂಡಿರುವ ಸಾಧ್ಯತೆಯಿದೆ. ಇಂತಹ ಪ್ರಾತಿನಿಧಿಕ ವ್ಯಕ್ತಿ ಚಿತ್ರಗಳನ್ನಾದರೂ ಗುರುತಿಸಬೇಕು.
ನನ್ನೊಳಗೆ ಅಂಬೇಡ್ಕರ್ ಮೊಳೆತದ್ದು ಹೇಗೆ? ಎನ್ನುವ ಅನುಭವ ಕಥನಗಳ ಸಂಗ್ರಹವನ್ನು ಮೊದಲುಗೊಂಡು ಅಂಬೇಡ್ಕರ್ ಇಂದು ಕರ್ನಾಟಕದಲ್ಲಿ ಯಾವ ಯಾವ ರೂಪದಲ್ಲಿ ಜೀವಂತ ಗೊಂಡಿದ್ದಾರೆ, ಅಂಬೇಡ್ಕರ್ ಪ್ರತಿಮೆಗಳು ಹುಟ್ಟಿಸಿದ ನವ ಜಾನಪದ ಯಾವುದು? ಅಂಬೇಡ್ಕರ್ ಕನ್ನಡ ಸಾಹಿತ್ಯದಲ್ಲಿ ಹೇಗೆ ಪುನರ್ ಸೃಷ್ಟಿಯಾಗಿದ್ದಾರೆ? ಅಂಬೇಡ್ಕರ್ ಬಗ್ಗೆ ಬಂದ ಕನ್ನಡದ ಪುಸ್ತಕಗಳಾವುವು, ಅಂಬೇಡ್ಕರ್ ಜಾನಪದ ಹೇಗಿದೆ? ಕರ್ನಾಟಕದಲ್ಲಿರುವ ಅಂಬೇಡ್ಕರ್ ಅಧ್ಯಯನದ ಸ್ವರೂಪವೇನು? ಅಂಬೇಡ್ಕರ್ ಫೋಟೋ ಮತ್ತು ಪ್ರತಿಮೆಗಳ ವಿವಾದಗಳ ಹಿನ್ನೆಲೆಗಳೇನು? ಕನ್ನಡ ದೃಶ್ಯಮಾಧ್ಯಮ ಅಂಬೇಡ್ಕರರನ್ನು ಹೇಗೆ ಕಂಡಿದೆ. ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಪರಿಚಯದ ನೆಲೆ ಯಾವುದು? ದಲಿತ ಚಿಂತನೆಯಲ್ಲಿ ಮೊಳೆತ ಅಂಬೇಡ್ಕರ್ ಮಾದರಿ ಯಾವುದು? ಅರವತ್ತರ ದಶಕದ ನಂತರ ತತ್ವಪದಕಾರರು ಅಂಬೇಡ್ಕರ್ ಬಗೆಗೆ ತತ್ವಪದಗಳನ್ನು ಕಟ್ಟಿದ್ದಾರೆ. ಈ ತತ್ವಪದಗಳಲ್ಲಿ ಅಡಗಿದ ಭೀಮತತ್ವ ಯಾವುದು? ಅಂಬೇಡ್ಕರ್ ಜಯಂತಿಯ ಸಾರ್ಥಕ ಚಿತ್ರಗಳಾವುವು? ಕರ್ನಾಟಕದಲ್ಲಿ ನೆಲೆಗೊಂಡ ಅಂಬೇಡ್ಕರ್ವಾದದ ಸ್ವರೂಪ ಯಾವುದು? ಅಂಬೇಡ್ಕರ್ ಚಿಂತನೆ ನಮ್ಮ ಸಂಶೋಧನೆಗಳನ್ನು ಹೇಗೆ ಪ್ರಭಾವಿಸಿದೆ? ಅಂಬೇಡ್ಕರ್ ಹೆಸರಿನ ಸಂಘಟನೆಗಳ ಕೆಲಸದ ಸ್ವರೂಪವೇನು? ಹೊಸ ತಲೆಮಾರು ಅಂಬೇಡ್ಕರ್ ಅವರನ್ನು ಹೇಗೆ ಎದುರುಗೊಳ್ಳುತ್ತಿದೆ? ಅಂಬೇಡ್ಕರ್ ಕರ್ನಾಟಕಕ್ಕೆ ಬಂದಿದ್ದು, ಕರ್ನಾಟಕದವರು ಅಂಬೇಡ್ಕರ್ ಜತೆ ನಡೆಸಿದ ಸಂವಾದವೇನು? ಕರ್ನಾಟಕದ ಲೋಹಿಯಾವಾದಿಗಳು, ಎಡಪಂಥೀಯರು ಅಂಬೇಡ್ಕರ್ ಅವರನ್ನು ಹೇಗೆ ಕಂಡಿದ್ದಾರೆ, ಅಂಬೇಡ್ಕರ್ ನೆಲೆಯಲ್ಲಿ ಮಹಿಳಾ ಅಧ್ಯಯನದ ಸ್ವರೂಪವೇನು? ಹೀಗೆ ಅಂಬೇಡ್ಕರ್ ಕರ್ನಾಟಕದ ಹತ್ತಾರು ನೆಲೆಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಇಲ್ಲಿನ ಒಂದೊಂದು ಸಂಗತಿಯನ್ನೂ ಒಬ್ಬೊಬ್ಬರು ಸಂಶೋಧನೆಗೆ ಕೈಗೆತ್ತಿಕೊಳ್ಳಬಹುದು. ಹೀಗೆ ಮಾಡುವ ಮೂಲಕವೆ ಅಂಬೇಡ್ಕರ್ ಕರ್ನಾಟಕ’ದ ತಾತ್ವಿಕತೆಯನ್ನು ಮರುರೂಪಿಸಬಹುದಾಗಿದೆ.
ನಾನು ಅಂಬೇಡ್ಕರ್ ಅವರ ಕರ್ನಾಟಕದ ನಂಟಿನ ಕೆಲವು ಬಿಡಿಚಿತ್ರಗಳನ್ನು ಒಂದೆಡೆ ಒಟ್ಟಾಗಿಸಲು ಪ್ರಯತ್ನಿಸಿರುವೆ. ಅಂಬೇಡ್ಕರ್ ಅವರಿಗೆ ಮೈಸೂರು ಸಂಸ್ಥಾನದ ಬಗೆಗೆ ಒಳ್ಳೆಯ ಅಭಿಪ್ರಾಯವಿತ್ತು. ಅನೇಕ ಕಡೆಗಳಲ್ಲಿ ಮೈಸೂರು ರಾಜ್ಯವನ್ನು ಉದಾಹರಣೆಯಾಗಿ ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ದಕ್ಷಿಣ ಮಹಾರಾಷ್ಟ್ರದ ದಲಿತ ಪರಿಷತ್ತಿನ ಮೊದಲ ಸಭೆ ಮಾಣಗಾಂವ್ ಸಂಸ್ಥಾನಿನ ಕಾಗಲ್ನಲ್ಲಿ 1920 ಮಾರ್ಚ್ 21/22ಕ್ಕೆ ಜರುಗುತ್ತದೆ. (ಸಂಪುಟ: 19 ಪುಟ:3) ಈ ಸಭೆಯ ಮೊದಲ ದಿನ ಯುಗಾದಿಯಾದರೂ ಐದು ಸಾವಿರದಷ್ಟು ಜನ ಸೇರುತ್ತಾರೆ. ಈ ಸಭೆಯ ನಂತರ ಕೆಲವು ನಿರ್ಣಯಗಳಾದವು. ಅದರಲ್ಲಿ ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರರು ಹಾಗೂ ದಲಿತ ವಿದ್ಯಾರ್ಥಿಗಳಿಗೆ ಮಧ್ಯಮ ಹಾಗೂ ಉಚ್ಚ ಶಿಕ್ಷಣಕ್ಕಾಗಿ ಕೊಡುವ ಶಿಷ್ಯವೇತನದ ಮಾದರಿಯಲ್ಲಿ ಬ್ರಿಟಿಷ್ ರಾಜ್ಯದಲ್ಲಿ ದಲಿತರಿಗೆ ಶಿಷ್ಯವೇತನ ನೀಡಬೇಕು ಎಂದು ವಿನಂತಿಸಲಾಗಿತ್ತು.
ಸೊಲ್ಲಾಪುರ ಜಿಲ್ಲೆಯ ತಡ್ವಾಲ್ನಲ್ಲಿ (ಡೋಕಿ) 23ನೇ ಫೆಬ್ರವರಿ 1941 ರಂದು ಮಹರ್ ಮತ್ತು ಮಾಂಗ್ ವತನ್ದಾರರುಗಳ ಸಮ್ಮೇಳನವನ್ನು ನಡೆಸಲಾಯಿತು. ಸುಮಾರು 3000 ಜನರಿದ್ದ ಆ ಸಭೆಯ ಅಧ್ಯಕ್ಷತೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ವಹಿಸಿ ಮಾತನಾಡುವಾಗ, “ಹರಿಜನರ ಸ್ಥಾನಮಾನವನ್ನು ಅಭಿವೃದ್ಧಿ ಮಾಡುವ ನಿಟ್ಟಿನತ್ತ ಗಾಂಧಿಯವರ ಪರಿಶ್ರಮ ಏನೇನೂ ಸಾಲದು ಎಂದು ಹೇಳುತ್ತಾ, ಮೈಸೂರು ಮತ್ತು ಬರೋಡಾದಲ್ಲಿ ಹರಿಜನರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರಶಂಸಿಸುತ್ತಾರೆ. ಮೈಸೂರು ಸಂಸ್ಥಾನದಲ್ಲಿ ದಲಿತರ ಪ್ರತಿಯೊಂದು ಕುಟುಂಬಕ್ಕೆ 7 ಎಕರೆ ಜಮೀನು ಕೊಟ್ಟು ಅವರನ್ನು ಬಲಪಡಿಸುತ್ತಿದ್ದಾರೆ. (18-446) ಈ ಯೋಜನೆ ಎಲ್ಲಾ ಸಂಸ್ಥಾನಗಳಿಗೂ ಮಾದರಿಯಾಗಬೇಕು ಎಂದು ಅಂಬೇಡ್ಕರ್ ಅಂದು ಮೈಸೂರ್ ಮಾದರಿಯನ್ನು ಉದಾಹರಿಸುತ್ತಾರೆ.

ಸಂವಿಧಾನದ ಕರಡು ಸಮಿತಿಯ ಚರ್ಚೆಯಲ್ಲಿ 1949 ರ ಜೂನ್ 15 ರಂದು ಅಂಬೇಡ್ಕರ್ ಅವರು 270 ನೆಯ ವಿಧಿಯಲ್ಲಿ ಭಾರತೀಯ ಸಂಸ್ಥಾನಗಳ ಆಸ್ತಿಪಾಸ್ತಿಗಳು ಮತ್ತು ಹೊಣೆಗಾರಿಕೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎನ್ನುವುದಕ್ಕೆ ಅಂಬೇಡ್ಕರ್ ಅವರು ಮೈಸೂರನ್ನು ಉಲ್ಲೇಖಿಸುತ್ತಾರೆ. ತಮ್ಮ ಭೂಭಾಗದಲ್ಲಿ ಅಥವಾ ಇನ್ನಾವುದೇ ವಿಷಯದಲ್ಲಿ ಯಾವ ಮಾರ್ಪಾಡೂ ಆಗದೇ ಅವು ಇದ್ದ ಹಾಗೆಯೇ ಸಂವಿಧಾನಕ್ಕೊಳಪಡಲಿರುವ ಭಾರತೀಯ ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನವೂ ಒಂದೆನ್ನುತ್ತಾರೆ. ಅದು ಈಗ ಸ್ವತಂತ್ರ ಸಂಸ್ಥಾನವಾಗಿದ್ದು ಯಾವುದೇ ಮಾರ್ಪಾಡಿಗೊಳಗಾಗದೇ ಸಂವಿಧಾನಕ್ಕೊಳಗೊಳ್ಳುವುದಿದೆ’(13-8) ಎಂದು ಸಭೆಗೆ ಉತ್ತರಿಸುತ್ತಾರೆ.
ಹಿಂದೂ ಕೋಡ್ ಬಿಲ್ಗೆ ಸಂಬಂಧಿಸಿದ ಚರ್ಚೆ ನಡೆಯುವಾಗಲೂ ಅಂಬೇಡ್ಕರ್ ಮೈಸೂರು ರಾಜ್ಯವನ್ನು ಪ್ರಸ್ತಾಪಿಸಿ, ಸ್ತ್ರೀಯರ ಆಸ್ತಿಯ ಹಕ್ಕಿಗೆ ಸಂಬಂಧಿಸಿದಂತೆ ಮೈಸೂರು ಸಂಸ್ಥಾನಕ್ಕೆ ತನ್ನದೇ ಆದ ಹಿಂದೂ ನಿಯಮಾವಳಿ ಇತ್ತು. ಹಾಗೂ ಅದು ಬ್ರಿಟಿಷ್ ಭಾರತದ ಇತರ ಪ್ರಾಂತ್ಯಗಳಲ್ಲಿದ್ದ ಕಾನೂನಿಗಿಂತ ಸಾಕಷ್ಟು ಭಿನ್ನವಾಗಿತ್ತು. ಈಗ ಮೈಸೂರು ಸಹ ಭಾರತದ ಅವಿಭಾಜ್ಯ ಅಂಗವಾಗಿದೆ. ಆದುದರಿಂದ 1950ರ ಜನವರಿ 26ರಂದು ಗಣರಾಜ್ಯ ಉದ್ಘಾಟನೆಯಾದಾಗ, ಹಿಂದೂ ಕಾನೂನಿನ ವಿವಿಧ ಪದ್ಧತಿಗಳನ್ನು ನಾವು ಎದುರಿಸಬೇಕಾಗುತ್ತದೆ (14-738) ಎಂದು ಸಭೆಗೆ ಮೈಸೂರು ಸಂಸ್ಥಾನದಲ್ಲಿ ಈಗಾಗಲೆ ಇದ್ದ ಪ್ರಗತಿಪರ ಮಹಿಳಾ ಕಾನೂನುಗಳನ್ನು ಸಮರ್ಥಿಸಿಕೊಳ್ಳುತ್ತಾರೆ.
ಮುಂಬೈನ ಕೊಲಾಬಾದಲ್ಲಿರುವ ಜೈರಾಜ್ ಹೌಸಲ್ಲಿ 1955 ಆಗಷ್ಟ್ 25 ರಂದು ಆಯೋಜಿಸಿದ್ದ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಕಾರ್ಯಕಾರಿಣಿ ಸಭೆಯಲ್ಲಿ ಮೈಸೂರು ರಾಜ್ಯದಿಂದ ಮೂವರು ಪ್ರತಿನಿಧಿಗಳು ಪಾಲ್ಗೊಂಡಿರುತ್ತಾರೆ. (17-388) ಅದರಲ್ಲಿ ಜೆ.ಸಿ.ಆದಿಮುಗಂ, ಸಿ.ಎಂ.ಆರ್ಮುಗಂ, ವಿ.ದೊರೆಸ್ವಾಮಿ. ಈ ಒಕ್ಕೂಟದ ಅಖಿಲಭಾರತ ಮಟ್ಟದ ಮಾನ್ಯತೆಯನ್ನು ಮುಂದುವರಿಸಬೇಕೆಂದು ಚುನಾವಣ ಆಯೋಗಕ್ಕೆ ಮಾಡಿದ ಮನವಿಯನ್ನು ಮೈಸೂರಿನ ವಿ ದೊರೆಸ್ವಾಮಿ ಅನುಮೋದಿಸುತ್ತಾರೆ. ಹಿಂದುಗಳು ಅಸ್ಪೃಶ್ಯತೆಗೆ ಮೂಲಕಾರಣರೆಂದು ಬೌದ್ಧರ ಬಗ್ಗೆ ಹೇಗೆ ಅನಾದರ ಮಾಡಿದರು ಎಂದು ಅಂಬೇಡ್ಕರ್ ಅವರು ವಿಶ್ಲೇಷಿಸುವ ಸಂದರ್ಭದಲ್ಲಿ ಮೈಸೂರು ರಾಜ್ಯವನ್ನು ಆಧರಿಸಿ ಸಾಂಸ್ಕೃತಿಕ ಅಧ್ಯಯನ ಮಾಡಿದ ಇಬ್ಬರು ಪಾಶ್ಚಿಮಾತ್ಯ ವಿದ್ವಾಂಸರ ಮಾತನ್ನು ದಾಖಲಿಸುತ್ತಾರೆ.ಮೈಸೂರು ಪ್ರಾಂತ್ಯದ ಹಾಸನ ಜಿಲ್ಲೆಯ ಹೊಲೆಯರನ್ನು ಕುರಿತಂತೆ ಹೇಳುತ್ತಾ ಕ್ಯಾಪ್ಟನ್ ಜೆ.ಎಸ್.ಎಫ್. ಮೆಕೆಂಜಿ ಹೀಗೆನ್ನುತ್ತಾರೆ : “ಹೊಲೆಯರು ವಾಸಿಸುವ ಹೊಲೆಗೇರಿ ಎಂಬ ಭಾಗವು ಪ್ರತಿಯೊಂದು ಹಳ್ಳಿಯಲ್ಲೂ ಇದೆ. ಅವರು ಮೊದಲಿಗೆ ಹಳ್ಳಿಗಾಡಿನಲ್ಲಿ ಜೀತದಾಳುಗಳಾಗಿದ್ದವರು. ಅವರ ವಸತಿಯು ಹಳ್ಳಿಯ ಎಲ್ಲೆಯಾಚೆ ಇರುವಂತಹುದು. ಅವರ ಸ್ಪರ್ಶದಿಂದ ಮೈಲಿಗೆಯಾಗುವಂತಹ ಅಶುದ್ಧ ಜನಾಂಗದವರು ಅವರೆಂದು ಎಣಿಸಲಾಗುತ್ತದಾದ್ದರಿಂದ ಹೀಗಿದೆಯೆಂದು ಮೊದಲಿಗೆ ನಾವು ಅಂದುಕೊಂಡಿದ್ದೆವು.”
ಅಬ್ಬೆ ದುಬೆ ಉಲ್ಲೇಖ: “ಇಂದಿಗೂ ಸಹ ಒಂದು ಹಳ್ಳಿಯ ಬ್ರಾಹ್ಮಣರ ಬೀದಿಯಲ್ಲಿ ಒಬ್ಬ ಪರಯ್ಯಾ ಎನಿಸಿಕೊಂಡವನು ಸುಳಿಯುವಂತಿಲ್ಲ; ಅದೇ ಪಟ್ಟಣವೊಂದರಲ್ಲಿ ಅವನು ಬ್ರಾಹ್ಮಣನೊಬ್ಬನ ಮನೆಯತ್ತಲಾಗಲಿ ಅದರ ಪಕ್ಕದಲ್ಲಿಯಾಗಲಿ ಹೋಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ, ತಡೆಯುವುದೂ ಇಲ್ಲ. ಪರಯ್ಯಾಗಳೂ ಕೂಡ ಸ್ವತಃ ತಮ್ಮ ಹಟ್ಟಿಗಳಲ್ಲಿ ಬ್ರಾಹ್ಮಣನೊಬ್ಬನನ್ನು ಯಾವ ಸಂದರ್ಭದಲ್ಲೇ ಆಗಲಿ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅದು ತಮ್ಮ ನಾಶಕ್ಕೆ ಕಾರಣವಾಗುತ್ತದೆಂದು ಅವರ ನಿಚ್ಚಳವಾದ ನಂಬಿಕೆ.” (6-311) ಈ ಸಂಗತಿಯನ್ನು ವಿವರಿಸುತ್ತಾ ಅಂಬೇಡ್ಕರ್ ಅವರು ಇಡೀ ಭಾರತಖಂಡದಲ್ಲಿ ಹೇಗೆ ಅಸ್ಪೃಶ್ಯತೆ ಆಚರಣೆಯಲ್ಲಿತ್ತು ಎನ್ನುವುದನ್ನು ಮೈಸೂರು ಪ್ರಾಂತ್ಯದ ಈ ಉದಾಹರಣೆಯನ್ನೂ ಉಲ್ಲೇಖಿಸುತ್ತಾರೆ.
ಮುಂಬೈನ ಪರಳನಲ್ಲಿರುವ ದಾಮೋದರ್ ಹಾಲ್ನಲ್ಲಿ ಶನಿವಾರ ಸೆಪ್ಟಂಬರ್ 10, 1932ರಂದು ರಾತಿ ಮಹಾರ್ ಬಾಲವೀರ ಸಂಸ್ಥೆಯ ವತಿಯಿಂದ ಜರುಗಿದ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ಬಾಷಣವನ್ನು ಮಾಡಿದರು. ಇಂದು ಅಸ್ಪೃಶ್ಯ ಸಮಾಜಕ್ಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿರುವ ಸಂಗತಿಯೆಂದರೆ ಅದು ಶಿಕ್ಷಣ ಪ್ರಸಾರ. ಸಮಾಜದ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಸಂಸ್ಥೆ ಶಿಕ್ಷಣಕ್ಕೆ ಸಂಬಂದಿಸಿದಂತೆ ನಮ್ಮ ಯುವ ಜನಾಂಗದ ಮುಂದಿನ ಹೆಜ್ಜೆ ಮತ್ತು ಇಂದಿನ ಅವರ ಮನಸ್ಥಿತಿ ಏನು ಎನ್ನುವ ಪಶ್ನೆಯತ್ತ ನಾವು ಚಿಂತನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಾಗುವ ದಿಕ್ಕನ್ನು ನಾವು ನಿರ್ಧರಿಸಬೇಕಿದೆ. ನಾನೇ ಸ್ವತಃ ಈ ಕೆಲಸ ಕೈಗೆತ್ತಿಕೊಂಡು ಆ ನಿಟ್ಟಿನಲ್ಲಿ ಕೆಲಸ ಆರಂಬಿಸಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ 3 ಬೋರ್ಡಿಂಗ್ಗಳು ಅಸ್ತಿತ್ವಕ್ಕೆ ಬಂದಿವೆ. ಮಹಾರಾಷ್ಟ್ರದ ಮಕ್ಕಳಿಗಾಗಿ ಠಾಣೆಯಲ್ಲಿ ಬೋರ್ಡಿಂಗ್, ಕರ್ನಾಟಕದ ಮಕ್ಕಳಿಗಾಗಿ ದಾರವಾಡದಲ್ಲಿ ಬೋರ್ಡಿಂಗ್ ಮತ್ತು ಗುಜರಾತ್ದ ಮಕ್ಕಳಿಗಾಗಿ ಅಹ್ಮದಾಬಾದ್ನಲ್ಲಿ ಸ್ಥಾಪಿಸಿರುವ ಹಾಸ್ಟೆಲ್, ಈ ಮೂರು ಬೋರ್ಡಿಂಗ್ಗಳಲ್ಲಿ ಇಂದು ಏನಿಲ್ಲವೆಂದರೂ 100 ಮಕ್ಕಳಿಗೆ ಸೌಲಭ್ಯ ಕಲ್ಪಿಸಲಾಗಿದೆ (19-270) ಎಂದು ವಿವರಿಸುತ್ತಾರೆ. ಅಂದರೆ ಶೈಕ್ಷಣಿಕವಾಗಿ ದಲಿತರನ್ನು ಮೇಲೆತ್ತುವ ಸಾಂಸ್ಥಿಕ ಪ್ರಾಯೋಗಿಕ ಕೆಲಸದಲ್ಲಿ ಅಂಬೇಡ್ಕರರು ಕರ್ನಾಟಕವನ್ನೂ ಪರಿಗಣಿಸಿದ್ದರು ಎನ್ನುವುದು ಇದರಿಂದ ತಿಳಿಯುತ್ತದೆ.
ಹೈದಾಬಾದ್ ಸಂಸ್ಥಾನದ ಪ್ರಮುಖ ದಲಿತ ನಾಯಕ ಬಿ. ಎಸ್. ವೆಂಕಟರಾವ್ ಅಧ್ಯಕ್ಷತೆಯಲ್ಲಿ ಮೇ 30 ಮತ್ತು 31, 1936 ರಂದು ಅಖಿಲ ಮುಂಬೈ ಪ್ರದೇಶ ಮಹಾರ್ ಸಮಾವೇಶ ನಡೆಯಿತು. ಅಂದು ಅಂಬೇಡ್ಕರ್ ಆ ಸಭೆಯನ್ನುದ್ದೇಶಿಸಿ ಮಾತನಾಡಿದರು. (19-436). ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲವಾಗುವಂತಹ ಬೃಹತ್ ಮಂಟಪವನ್ನು ದಾದರ್-ನಾಯಗಾಂವ ನಾಕಾ ಹತ್ತಿರದ ವಿಶಾಲ ಮೈದಾನದಲ್ಲಿ ಹಾಕಲಾಗಿತ್ತು. ಈ ಸಮಾವೇಶಕ್ಕೆ ಮೈಸೂರು ರಾಜ್ಯದಿಂದ ಬಳವಂತರಾವ್ ವರಾಳೆ, ಎ.ಕೆ. ಮಾಳಗೆ, ಮಾರುತಿರಾವ್ ಜೋತಿರಾವ್ ರಾವಣ್ ಪಾಲ್ಗೊಂಡಿದ್ದರು.
ಶುದ್ಧಿ ಯಾಕಾಗಿ ಬೇಕು ಎನ್ನುವ ಟಿಪ್ಪಣಿಯಲ್ಲಿ ಕರ್ನಾಟಕದ ಲಿಂಗಾಯತ ಸ್ವಾಮಿಯೊಬ್ಬರನ್ನು ಉಲ್ಲೇಖಿಸುತ್ತಾರೆ. ಶುದ್ಧಿ ಚಳವಳಿಯ ಪುರಸ್ಕೃರು ಉದಾತ್ತ ಧ್ಯೇಯದಿಂದ ಪ್ರೇರಿತರಾಗಿಲ್ಲ ಎಂಬುದಕ್ಕೆ ಇನ್ನೊಂದು ಸಾಕ್ಷ್ಯ ಇಲ್ಲಿ ದೊರೆತಿದೆ. ಕರ್ನಾಟಕದಲ್ಲಿನ ಲಿಂಗಾಯತ ಸ್ವಾಮಿಯೊಬ್ಬರು, ಡೋರ್ ಎಂಬ ದಲಿತ ಜಾತಿಯ ಜನರನ್ನು ಶುದ್ಧಿ ಮಾಡಿ, ಅವರನ್ನು ಯಾರೂ ಅಸ್ಪೃಶ್ಯರೆಂದು ತಿಳಿಯಬಾರದೆಂದು ತಮ್ಮ ಅನುಯಾಯಿಗಳಿಗೆ ಆದೇಶವಿತ್ತರು. ಈ ಸಮಾಚಾರ ಪಕಟಿಸುತ್ತಾ, ಪ್ರತಿಯೊಬ್ಬ ಮರಾಠಿ ಪತ್ರಕರ್ತರು “ಸ್ವಾಮೀಜಿ ಅವರು ಇದರ ಬದಲಿಗೆ, ಮುಸಲ್ಮಾನ ಹಾಗೂ ಕ್ರೈಸ್ತರನ್ನು ಶುದ್ಧಿ ಮಾಡಿದ್ದರೆ ಚೆನ್ನಿತ್ತು’’ (22-102) ಎಂದರ್ಥ ಬರುವಂತೆ ಉದ್ಗರಿಸಿದ್ದಾರೆ. ಹಿಂದೂ ಸಮಾಜದ ದಲಿತ ವರ್ಗವನ್ನು ಅದೇ ಸ್ಥಿತಿಯಲ್ಲಿ ಇಡುವ, ಮತ್ತು ಹೊರಗಿನ ಮುಸಲ್ಮಾನ ಮತ್ತು ಕೈಸ್ತರನ್ನು ಮಾತ್ರ ಶುದ್ಧಿ ಮಾಡಿ ಒಳಗೆ ಕರೆದುಕೊಳ್ಳುವ ಧೋರಣೆಯಿದು. ಶುದ್ಧರಾಗಿ ಹಿಂದೂ ಸಮಾಜದೊಳಗೆ ಬರುವ ಮುಸಲ್ಮಾನರು ಮತ್ತು ಕ್ರೈಸ್ತರ ಒಂದು ಭಿನ್ನ ಜಾತಿ ಮಾಡುವ ಹುನ್ನಾರವಿದು. ಕಾರಣ, ಯಾರಿಗೆ ಇತರ ಜಾತಿಯಲ್ಲಿ ಶರೀರ ಸಂಬಂದ ನಡೆಯುವುದಿಲ್ಲವೋ, ಮತ್ತು ಅನ್ನೋದಕವೂ ವ್ಯವಹಾರದಲ್ಲಿ ಕಲ್ಮಶಗೊಂಡಿದೆಯೋ, ಅಂತಹವರಿಗೂ ಪ್ರಾಯಶ್ಚಿತ್ತ ಮಾಡಿ ತಮ್ಮ ಮೂಲಜಾತಿಯನ್ನು ಸೇರಿಕೊಳ್ಳುವುದು ಸಾದ್ಯ. ಉಳಿದ ಶುದ್ಧೀಕತೃವಿಗೆ ತಮ್ಮದೇ ಆದ ಭಿನ್ನ ಜಾತಿ ಮಾಡಿಕೊಳ್ಳದೆ ಗತ್ಯಂತರವಿಲ್ಲ. ಅರ್ಥಾತ್, ಶುದ್ಧಿ ಚಳವಳಿಯೇ ಪೂರ್ಣ ಆತ್ಮಸಾಕ್ಷಾತ್ಕಾರ ನೀಡುವ ಚಳವಳಿಯಾಗಿರದೆ, ಬದಲಿಗೆ ಕೇವಲ ಸಂಖ್ಯಾಬಲ ಹೆಚ್ಚಿಸುವ ಸಾಧನವಾಗಿದೆ.
ಲಿಜಿಸ್ಲೇಟಿವ್ ಅಸೆಂಬ್ಲಿ ಡಿಬೇಟ್ಸ್ ನಲ್ಲಿ 15 ಮಾರ್ಚ್ 1946 ರಲ್ಲಿ ಡಿ.ಪಿ.ಕರಮಕರ್ ಅವರು ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟುವ ಯೋಜನೆ ಇದೆಯೇ ಎಂದು ಕೇಳುತ್ತಾರೆ. ಆಗ ಅಂಬೇಡ್ಕರ್ ಇದನ್ನೆ ಪ್ರತಿಕ್ರಿಯಿಸುತ್ತಾ, ಹೌದು, ಆದರೆ 1942ನೆಯ ಇಸವಿಯಲ್ಲಿ ಸಿದ್ಧಗೊಳಿಸಲಾದ ಆ ಯೋಜನೆಯ ಮೂಲಕ ಕೇವಲ 3,000 ಎಕರೆ ಭೂಮಿಗೆ ನೀರಾವರಿ ಒದಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈ ಯೋಜನೆಯಲ್ಲಿ ಪರಿಶೀಲಿಸಿದಾಗ ಕೆಲವು ತಾಂತ್ರಿಕ ದೋಷಗಳಿವೆ. ಇದನ್ನು ಚರ್ಚಿಸಲು ಕೊಡಗಿನ ಕಮೀಷನರ್ಗೆ ಕೇಳಲಾಗಿದೆ ಎಂದು ಉತ್ತರಿಸುತ್ತಾರೆ. ಕೊಡಗಿನ ಚೀಫ್ ಕಮೀಷನರ್ ಅವರಿಂದ ಪರಿಷ್ಕøತ ಯೋಜನೆ ಇನ್ನು ಕೇಂದ್ರ ಸರಕಾರಕ್ಕೆ ಬಂದಿಲ್ಲ ಎಂದು ಹೇಳುತ್ತಾರೆ. ಹೀಗೆ ಕೊಡಗಿನ ಲಕ್ಷ್ಮಣ ತೀರ್ಥ ನದಿಗೆ ಕಟ್ಟಲಾದ ಅಣೆಕಟ್ಟಿನ ಹಿಂದೆ ಅಂಬೇಡ್ಕರ್ ಅವರ ದೂರದೃಷ್ಠಿಯೂ ಕೆಲಸ ಮಾಡಿದೆ. ರಂಗೂನಿನಲ್ಲಿ 1954 ರ ಡಿಸೆಂಬರ್ 4 ರಂದು ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಭಾರತದಲ್ಲಿ ಬೌದ್ಧ ಚಳವಳಿ ಒಂದು ನೀಲನಕ್ಷೆ’ ಎನ್ನುವ ಪತ್ರಿಕೆ ಮಂಡಿಸುತ್ತಾರೆ. ಈ ಭಾಷಣದ ಎರಡನೆ ಭಾಗದಲ್ಲಿ ದಕ್ಷಿಣ ಭಾರತದಲ್ಲಿ ಬೌದ್ಧ ಧರ್ಮದ ಸ್ಥಿತಿಗತಿಗಳ ಕುರಿತು ಚರ್ಚಿಸುತ್ತಾರೆ. 1954ರ ಜುಲೈ 7ರಿಂದ 14 ರವರೆಗೆ ಅಂದರೆ ಒಂದು ವಾರ ದಕ್ಷಿಣ ಭಾರತದಲ್ಲಿ ಅಂಬೇಡ್ಕರ್ ಪ್ರವಾಸ ಮಾಡುತ್ತಾರೆ. ಆ ಸಂದರ್ಭದಲ್ಲಿ ಕೋಲಾರದ ಚಿನ್ನದ ಗಣಿ, ಫ್ರೇಜರ್ ಟೌನ್ (ಬೆಂಗಳೂರು ಕಂಟೋನ್ಮೆಂಟ್) ಮತ್ತು ಬೆಂಗಳೂರು ಸಿಟಿಯ ಸೆಂಟ್ರಲ್ ಜೈಲ್ ಹತ್ತಿರ ಸಭೆಗಳನ್ನು ಮಾಡುತ್ತಾರೆ (18-700-05). ಮೈಸೂರು ರಾಜ್ಯದ ರಾಜಪ್ರಮುಖರಾದ ಮಹಾರಾಜರನ್ನು ಅಂಬೇಡ್ಕರ್ ಜುಲೈ 8 ರಂದು ಬೇಟಿ ಮಾಡಿ, ನಮ್ಮ ಕೆಲಸಗಳಿಗಾಗಿ ಒಂದು ಕೇಂದ್ರವನ್ನು ನಿರ್ಮಿಸಲು ತುಂಡು ಭೂಮಿಯನ್ನು ದಾನವಾಗಿ ಕೇಳುತ್ತಾರೆ. ಆಗ ಮಹಾರಾಜರು 5 ಎಕರೆ ಭೂಮಿಯನ್ನು ದಾನವಾಗಿ ಕೊಡಲು ಒಪ್ಪುತ್ತಾರೆ.
ಅಂಬೇಡ್ಕರ್ ಭಾಷಾವಾರು ಪ್ರಾಂತಗಳ ರಚನೆಗೆ ವಿರುದ್ಧವಿದ್ದರು. ಅದಕ್ಕೆ ಅಂಬೇಡ್ಕರರಿಗೆ ಅವರದೇ ಆದ ದೂರದೃಷ್ಠಿ ಹಾಗೂ ಸಮರ್ಥನೆಗಳಿದ್ದವು. ಮೈಸೂರು ರಾಜ್ಯವನ್ನು ಬೊಂಬಾಯಿಯಿಂದ ಬೇರ್ಪಡಿಸಬೇಕು ಎನ್ನುವ ಸೈಮನ್ ಸಮಿತಿ 1929ರ ಮೇ 17ರಂದು ಸಲ್ಲಿಸಿದ ವರದಿಗೆ ಅಂಬೇಡ್ಕರ್ ಸಹಿ ಹಾಕುವುದಿಲ್ಲ. ಇದಕ್ಕೆ ವಿರೋದ ವ್ಯಕ್ತಪಡಿಸಿ ಡಾ. ಅಂಬೇಡ್ಕರ್ ವರದಿ ಸಲ್ಲಿಸಿದ್ದರು. “ಒಂದು ರಾಜ್ಯ ಒಂದು ಭಾಷೆ”ಎಂಬ ನಿಯಮಕ್ಕೆ ಬದ್ಧರಾಗಿರಲು ನಮ್ಮ ದೇಶ ಸೂಕ್ತವಲ್ಲ. ಈ ನಿಯಮವನ್ನು ಅನುಸರಿಸಿ ನಾವು ಹಲವಾರು ಚಿಕ್ಕ ಚಿಕ್ಕ ರಾಜ್ಯಗಳನ್ನು ಅಸ್ತಿತ್ವಕ್ಕೆ ತರುವುದು ಕಾರ್ಯಸಾಧುವಾಗುವುದಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದ್ದರು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಗವಾಕ್ಷಿಯಲ್ಲಿ ಮರಳಿ ಬರಲಿದೆಯೇ ‘ಪೆಗಸಸ್’ ದೆವ್ವ?
“ನನ್ನ ಅಭಿಪ್ರಾಯವೆಂದರೆ ಮೊದಲು ನಮ್ಮ ಜನರಲ್ಲಿ ರಾಷ್ಟ್ರೀಯತೆಯ ಭಾವವನ್ನು ಹುಟ್ಟುಹಾಕಬೇಕು. ಅವರು ಮೊದಲು ಭಾರತೀಯರು ಅನಂತರವಷ್ಟೇ ಹಿಂದೂಗಳು, ಮುಸಲ್ಮಾನರು, ಸಿಂಧಿಗಳು ಹಾಗೂ ಕನ್ನಡದವರು. ಅವರು ಮೊದಲಿಗೆ ಹಾಗೂ ಕಡೆಯದಾಗಿ ಬಾರತೀಯರಷ್ಟೇ. ಅದೇ ನಮ್ಮ ಧ್ಯೇಯವಾಗಿರಬೇಕು. ಹಾಗೆ ಮಾಡಿದರೆ ಸ್ಥಳೀಯ ಗುಂಪುಗಳನ್ನು ಪ್ರಾದೇಶಿಕತೆಗಳನ್ನು ಬಲಪಡಿಸಬೇಕಾದ ಅಗತ್ಯಬರುವುದಿಲ್ಲ. (17-64)” ಎನ್ನುತ್ತಾರೆ.
ಅಂದರೆ ಪ್ರಾದೇಶಿಕ ಭಾಷೆಗಳ ಆಧಾರದಲ್ಲಿ ರಾಜ್ಯಗಳನ್ನು ವಿಂಗಡಿಸುವುದು ಸರಿಯಲ್ಲ ಎನ್ನುವುದು ಅಂಬೇಡ್ಕರರ ದೃಢವಾದ ನಿಲುವಾಗಿತ್ತು. ಕರ್ನಾಟಕದ ಬೆಳಗಾವಿಗೆ ಅಂಬೇಡ್ಕರರು ಬೇರೆ ಬೇರೆ ಅವಧಿಗಳಲ್ಲಿ ಹಲವು ಬಾರಿ ಬಂದದ್ದಿದೆ. ಬಹಿಷ್ಕøತ್ ಹಿತಕಾರಣಿ ಸಭೆಗಳಿಗೆ 1924 ರ ಡಿಸೆಂಬರ್ 24, 1925 ರ ನವೆಂಬರ್ 11,12, 1929 ರ ಮಾರ್ಚ್ 23 ರಂದು ಅಂಬೇಡ್ಕರ್ ಆಗಮಿಸಿದ್ದಾರೆ. ಮಾರ್ಚ್ 23 ಈ ಸಭೆಯಲ್ಲಿ ಬೆಳಗಾಂವನ ಮೇಲ್ಜಾತಿಯ ನಾಯಕರುಗಳಾದ ರಾ. ಮರಾಠೆ, ರಾ. ಗಜೆಂದ್ರಗಡಕರ್, ನಾಗಗೌಡಾ ಇವರುಗಳಲ್ಲದೆ ದಲಿತರ ನಾಯಕರುಗಳಾದ ರಾ. ಕೊಂಡದೇವ್ ಖೋಲವಡೀಕರ್, ದತ್ತೊಪಂತ ಪವಾರ್, ಡಾ. ರಮಾಕಾಂತ್ ಕಾಂಬಳೆ, ರಾ. ಯಶವಂತವಾರ್ ಪೋಳ್, ರಾಮಪ್ಪಾ ಕಾಂಬಳೆ ಹಾಗೂ ದರ್ಮಣಾ ಸಾಂಬ್ಣಾಣಿ ಹಾಜರಿದ್ದರು.

1927ರ ಸಂದರ್ಭದಲ್ಲಿ ಅಂಬೇಡ್ಕರ್ ಬೆಳಗಾವಿಯ ಹುಕ್ಕೇರಿ ಹಾಗೂ ಚಿಕ್ಕೋಡಿ ಸಮೀಪದ ‘ಕರೋಶಿ’ ಗ್ರಾಮದ ಮುಸ್ಲಿಂ ಕುಟುಂಬದ ‘ಜಿಗನ್ ಭೀ ಪಟೇಲ್’ರ ಮನೆಯಲ್ಲಿ ಉಳಿದುಕೊಂಡು ಜಮೀನ್ದಾರನೊಬ್ಬನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಭೂಮಿ ಕೊಡಿಸುತ್ತಾರೆ. ಚಿತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಅಂಬೇಡ್ಕರ್ 1945, 1952 ರಲ್ಲಿ ಕ್ರಮವಾಗಿ ಏಪ್ರಿಲ್ 28, 27ರಂದು ಭೇಟಿ ಕೊಟ್ಟ ನೆನಪಿಗೆ ಈತನಕ ದಲಿತರು ಕಳೆದ 75 ವರ್ಷದಿಂದ ಏಪ್ರಿಲ್ 27,28 ರಂದು ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಿಕೊಳ್ಳುತ್ತಾರೆ. ಕರ್ನಾಟಕದ ಬಹಿಷ್ಕೃತ ಸಮಾಜದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿಯಲ್ಲಿ ಮೇ 23, 1932ರಂದು ಆಯೋಜಿಸಿದ ಸನ್ಮಾನ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಬಂದಿದ್ದರು. ಅಂದು ಆಹ್ವಾನಿಸಿದ ದಿ.ಬ.ಲಠ್ಠೆಯವರನ್ನು ಉಲ್ಲೇಖಿಸಿ “ದಿ.ಬ.ಲಠ್ಠೆ ಸಾಹೇಬರೇ ಮತ್ತು ಸದ್ಗೃಹಸ್ಥರೆ, ತಾವುಗಳು ನನ್ನನ್ನು ಈ ಸ್ಥಳಕ್ಕೆ ಬರುವ ಯೋಗಾಯೋಗ ಕಲ್ಪಿಸಿದ್ದಕ್ಕೆ ನಾನು ನಿಮಗೆ ಕೃತಜ್ಞನಾಗಿದ್ದೇನೆ. ಇಂದು ಬಾರತದಲ್ಲಿ ದೇಶದ್ರೋಹಿ, ದೇಶ ಒಡೆಯುವ, ಹಿಂದೂ ಧರ್ಮದ ದ್ರೋಹಿ ಮತ್ತು ಹಿಂದೂ-ಹಿಂದೂಗಳಲ್ಲಿ ಭೇದ ಹುಟ್ಟಿಸುವ ಕೆಲಸ ಯಾರಾದರೂ ಮಾಡುತ್ತಾರೆಂದರೆ ಅಥವಾ ದೇಶದ ಅತಿ ದೊಡ್ಡ ಶತ್ರು ಎಂದು ಯಾರಿಗಾದರೂ ಅನ್ನುತ್ತಿದ್ದರೆ ಅದು ನಾನು. ಆದರೆ ಈ ಪ್ರಕ್ಷುಬ್ಧ ವಾತಾವರಣ ತಿಳಿಗೊಂಡ ಬಳಿಕ, ದುಂಡು ಮೇಜಿನ ಪರಿಷತ್ತಿನ ಕೆಲಸ ಕಾರ್ಯಗಳನ್ನು ನನ್ನ ವಿರೋಧಿಗಳು ಅನ್ನಿಸಿಕೊಂಡವರು ಸೂಕ್ಷ್ಮವಾಗಿ ಗಮನಿಸಿದರೆ ಡಾ. ಅಂಬೇಡ್ಕರ್ ಈ ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಒಪ್ಪಲೇಬೇಕಾಗುತ್ತದೆ’ (19-264) ಎಂದು ಅಂತರಾಳದ ಮಾತುಗಳನ್ನು ಮುಕ್ತವಾಗಿ ಮಾತನಾಡಿದ್ದರು.
ವಿಜಯಪುರ ಜಿಲ್ಲೆಯ ಬೀಳಗಿಯ ಸೋಮನಗೌಡ ಪಾಟೀಲನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ಆತನನ್ನು ನಿರ್ದೋಷಿಯನ್ನಾಗಿಸಿದ್ದು, ವಿಜಯಪುರದ ಇಂದಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಸ್ಪೃಶ್ಯರ ಸಮಾವೇಶ ಉದ್ದೇಶಿಸಿ 1937ರ ಮೇ 30ರಂದು ಮಾತನಾಡಿದ್ದರು. ಮರುದಿನ ಇಂಡಿ ತಾಲ್ಲೂಕಿನ ಬರಡೋಲ ಗ್ರಾಮದಲ್ಲಿ ಅಸ್ಪೃಶ್ಯರ ಸಭೆಯಲ್ಲಿ ಭಾಗವಹಿಸಿದ್ದರು. 28ನೆಯ ಡಿಸೆಂಬರ್ 1929ರಂದು ದಾರವಾಡ ಜಿಲ್ಲೆಯ ಮೊದಲ ಬಹಿಷ್ಕೃತರ ಪರಿಷತ್ತು ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಅಂದು ಅಂಬೇಡ್ಕರ್ ಅವರು ಕೇವಲ `ವಿದ್ಯೆ ಕಲಿತರೆ ಯೋಗ್ಯತೆ ಬರುತ್ತೆ ಅಂತ ನನಗನ್ನಿಸೋದಿಲ್ಲ. ಮನುಷ್ಯ ವಿದ್ವಾಂಸನಾದರೆ ಆತ ಸಮಾಜಕ್ಕೆ ನೆರವಾಗ್ತಾನೆ ಎಂದೇನೂ ಇಲ್ಲ. ವಿದ್ವಾಂಸನಾದ ಮನುಷ್ಯ ವಂಚಕ, ಮೋಸಗಾರ, ಸಾಲಗಾರ ಇನ್ನೇನೇನೋ ಆಗಿರುತ್ತಾನೆ. ಇಂದಿನ ಪರಿಸ್ಥಿಯಲ್ಲಿ ವಿದ್ಯೆ ಕಲಿತ ಆಧುನಿಕ ಜನ ದಲಿತರೊಂದಿಗೆ ಯಾವ ರೀತಿ ವರ್ತಿಸ್ತಿದಾರೆ ಅನ್ನೋದನ್ನು ನೀವೇ ನೋಡುತ್ತಿದ್ದೀರಲ್ಲ’ ಎಂದು ಹೇಳುತ್ತಾರೆ.
ಇದನ್ನೂ ಓದಿ ದಲಿತ ಚಳವಳಿಯ ಬೌದ್ಧಿಕ ಶಕ್ತಿಯಾಗಿದ್ದ ‘ಪಂಚಮʼ ರಾಮದೇವ ರಾಕೆ
ಆ ದಿನ ವೇದಿಕೆಯಲ್ಲಿ ಮೈಸೂರಿನ ಸೌ. ಕನಕಲಕ್ಷ್ಮಿ ಅಮ್ಮಾ, ಶ್ರೀ. ಮುದವೇಡು ಕೃಷ್ಣರಾಯಪ್ಪ ಕುಳಿತಿದ್ದರು. ಮೇಲ್ಜಾತಿಯವರಲ್ಲಿ ಡಾ. ಕಿರ್ಲೋಸ್ಕರ್, ಡಾ. ಕಮಲಾಪುರ್, ನಂತಹ ಪಸಿದ್ಧ ಜನ ಉಪಸ್ಥಿತರಿದ್ದರು. ಅಂದರೆ ದಲಿತರು ಮಾತ್ರವಲ್ಲದೆ ಆಗಲೂ ಮೇಲ್ಜಾತಿಯವರೂ ಅಂಬೇಡ್ಕರ್ ಚಿಂತನೆಗೆ ಆಕರ್ಷಿತರಾಗಿದ್ದರು. ಸೊಲ್ಲಾಪುರ ಮತ್ತು ಅಹಮದ್ ನಗರ ಜಿಲ್ಲೆಯ ಪ್ರವಾಸ ಮುಗಿಸಿ ಜನವರಿ 27, 1937 ರಂದು ರಾತ್ರಿ ಏಳಕ್ಕೆ ಅಂಬೇಡ್ಕರ್ ಬೆಳಗಾವಿಗೆ ಆಗಮಿಸುತ್ತಾರೆ. ಸ್ವತಂತ್ರ ಮಜ್ದೂರ್ ಪಕ್ಷದ ವತಿಯಿಂದ ಮುಂಬೈ ಕಾನೂನು ಕೌನ್ಸೆಲಿಂಗ್ಗೆ 15 ಜನರನ್ನು ಆಯ್ಕೆ ಮಾಡಬೇಕಿರುತ್ತೆ, ಆಗ ಅಂಬೇಡ್ಕರ್ ಸ್ವತಂತ್ರ ಮಜ್ದೂರ್ ಪಕ್ಷದ ಅಭ್ಯರ್ಥಿಯಾಗಿ ಶ್ರೀ ದೌಲತ್ ರಾವ್ ಗುಲಾವ್ ಜಾಧವ್ ಅವರನ್ನು ಚುನಾವಣೆಗೆ ನಿಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಅಂಬೇಡ್ಕರರು ಮತ ಚಲಾವಣೆ ಮಾಡಿ ಜಾದವ್ ಅವರನ್ನು ನೀವು ಯಾಕೆ ಗೆಲ್ಲಿಸಬೇಕು ಎಂದು ಮಾತನಾಡುತ್ತಾರೆ. ಅಂಬೇಡ್ಕರ್ ಕರ್ನಾಟಕದ ಇಬ್ಬರು ವ್ಯಕ್ತಿಗಳನ್ನು ಅವರ ದಿಟ್ಟತನದ ಕಾರಣಕ್ಕೆ ಉಲ್ಲೇಖಿಸುತ್ತಾರೆ. ಅದರಲ್ಲಿ ಮೊದಲನೆಯದು 12 ನೇ ಶತಮಾನದ ಬಸವಣ್ಣ, ಎರಡನೆಯದು 17-18 ನೇ ಶತಮಾನದ ಟಿಪ್ಪು ಸುಲ್ತಾನ. ಈ ಇಬ್ಬರ ಬಗೆಗಿನ ಅಂಬೇಡ್ಕರ್ ಅವರ ನಿಲುವು ಚಾರಿತ್ರಿಕವಾಗಿ ಮಹತ್ವದ್ದು. ಬಸವಣ್ಣನನ್ನು ಕುರಿತು`ಶ್ರೀ ಬಸವರು ವೇದ, ವೇದಾಂಗ, ಶ್ರುತಿ, ಸ್ಮೃತಿ, ಪುರಾಣಗಳ ಮೇಲೆ ಪ್ರಚಂಡವಾದ ದಾಳಿಯನ್ನು ಮಾಡಿದರು. ಇದೇ ರೀತಿಯಾಗಿ ಅವರು ಬ್ರಾಹ್ಮಣರ ವರ್ಚಸ್ವ, ಜಾತಿಭೇದ ಮತ್ತು ಪೂಜೆ-ಅರ್ಚೆ ಹಾಗೂ ಇತರ ಧಾರ್ಮಿಕ ವಿಧಿಗಳ ವಿರುದ್ಧವಾಗಿ ಬಂಡು ಹೂಡಿದರು. ಅವರು ಹೊಸ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಬಹುಜನ ಸಮಾಜದವರು ಹಾಗೂ ಬ್ರಾಹ್ಮಣ ಸಮಾಜದವರು ಕೂಡ ಶ್ರೀ ಬಸವರ ಲಿಂಗಾಯತ ಧರ್ಮಕ್ಕೆ ಬಂದರು’(22-540) ಹೀಗೆ ಬಸವಣ್ಣನ ಬ್ರಾಹ್ಮಣ ವಿರೋಧಿ ಲಿಂಗಾಯತ ಚಳವಳಿಯ ಬಗೆಗೆ ವಿಶ್ಲೇಷಿಸುತ್ತಾರೆ.
ಟಿಪ್ಪು ಬಗ್ಗೆ ಅಂಬೇಡ್ಕರ್ ಏನಂದಿದ್ದರು? : ಪ್ರಭುತ್ವ ಸರಕಾರದ ಮುಂಚಿನ ಭಾರತದ ಬಗ್ಗೆ ಬರೆಯುತ್ತ ಅಂಬೇಡ್ಕರ್ ಅವರು ಟಿಪ್ಪು ಸುಲ್ತಾನ್ ಅವರ ಬಗ್ಗೆ ಬರೆಯುತ್ತಾರೆ. ʼಟಿಪ್ಪು ಸುಲ್ತಾನ ಆಳುತ್ತಿರುವ ದಕ್ಷಿಣ ಭಾರತದ ಜನರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಒಬ್ಬ ಇತಿಹಾಸಕಾರ ಹೀಗೆ ಅಭಿಪ್ರಾಯ ಪಡುತ್ತಾನೆ. ಯಾವಾಗ ಒಬ್ಬ ವ್ಯಕ್ತಿ ತನಗೆ ಏನೂ ಗೊತ್ತಿಲ್ಲದ ದೇಶದಲ್ಲಿ ಪ್ರವಾಸ ಮಾಡುತ್ತಿರುವಾಗ ಅಲ್ಲಿನ ಭೂಮಿ ಒಳ್ಳೆಯ ರೀತಿಯಿಂದ ಉಳುತ್ತಿರುವುದನ್ನು ಆತನು ಕಂಡರೆ ಔದ್ಯಮಿಕ ವಸತಿಗಳ ಸಮೂಹವನ್ನು ನೋಡಿದರೆ, ಹೊಸದಾಗಿ ನಿರ್ಮಿಸಿದ ನಗರಗಳನ್ನು ವೀಕ್ಷಿಸಿದರೆ, ಅಲ್ಲಿನ ವ್ಯಾಪಾರದ ಮೊತ್ತ ಹೆಚ್ಚುತ್ತಿರುವುದನ್ನು ನೋಡಿದರೆ, ಪಟ್ಟಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತು ಎಲ್ಲವೂ ಊರ್ಜಿತವಾಗುತ್ತಿದ್ದರೆ, ಇದು ಒಂದು ಜನರಿಗೆ ಹಿತ ನೀಡುವ ಸರಕಾರದಲ್ಲಿ ಮಾತ್ರ ಸಾಧ್ಯ ಎಂದಿದ್ದಾನೆ. ಇದೀಗ ಇಲ್ಲಿ ವಿವರಿಸಿದ ಪ್ರದೇಶ ಟಿಪ್ಪುವಿನ ದೇಶವಾಗಿತ್ತು. ಆತನ ಸರಕಾರ ಹೀಗಿತ್ತು ಎಂದು ಗೌರವಯುತ ನಿರ್ಣಯಕ್ಕೆ ನಾವು ಬರುತ್ತೇವೆ”.

ʼಇವನಾಳುವ ದೇಶದಲ್ಲಿ ಎಲ್ಲೆಡೆಯಲ್ಲಿಯೂ ಜನರು ವಾಸವಾಗಿದ್ದರು ಮತ್ತು ಉಳಲು ಯೋಗ್ಯವಾಗಿರುವ ಭೂಮಿ ಎಲ್ಲವನ್ನು ಇವರು ಬೆಳೆಗಳನ್ನು ತೆಗೆಯಲು ಉಪಯೋಗ ಮಾಡುತ್ತಿದ್ದರು” ಎಂದು ಇತಿಹಾಸಕಾರ ಹೇಳಿದ್ದಾನೆ. ಈತನ ಸರಕಾರ ಮನಸ್ವೇಚ್ಛೆಯ ಹಾಗೂ ಕಟ್ಟುನಿಟ್ಟಾದ ಕಾಯ್ದೆಗಳನ್ನು ಒಳಗೊಂಡಿದ್ದರೂ ಇದೊಂದು ಸಮರ್ಥ ನಿರಂಕುಶ ಪ್ರಭುತ್ವವಾಗಿತ್ತು. ಇದು ತನ್ನ ಭವಿಷ್ಯದ ಹೆಗ್ಗಳಿಕೆಗೆ ಕಾರಣವಾಗುವ ಪ್ರಜೆಗಳಿಗೆ ಸಂರಕ್ಷಿಸುತ್ತಿತ್ತೇ ಹೊರತು ಶೋಷಿಸುತ್ತಿರಲಿಲ್ಲ ಹಾಗೂ ತನ್ನ ವೈರಿಗಳನ್ನು ಮಾತ್ರ ಕ್ರೂರ ರೀತಿಯಿಂದ ನಡೆಸಿಕೊಳ್ಳುತ್ತಿತ್ತು. (11-64) ಎನ್ನುತ್ತಾರೆ. ಇಂದು ಟಿಪ್ಪುವನ್ನು ಕೋಮುವಾದಿಯಾಗಿ ನೋಡುತ್ತಿರುವ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಈ ಮಾತುಗಳು ಮುಖ್ಯವಾಗುತ್ತವೆ.
ಮುಂಬೈ ಇಲಾಖಾ ಪ್ರಾಂತೀಯ ಬಹಿಷ್ಕೃತ ಪರಿಷದ್ 3 ನೇ ಅಧಿವೇಶನ ನಿಪ್ಪಾಣಿಯಲ್ಲಿ 11-12 ಎಪ್ರಿಲ್ 1925 ರಂದು ಜರುಗಿತು. ಅಂಬೇಡ್ಕರ್ ಈ ಸಮಾವೇಶದ ಅಧ್ಯಕ್ಷರಾಗಿದ್ದರು. ಬೆಳಗಾವಿ ಜಿಲ್ಲೆಯ ಅಸ್ಪೃಶ್ಯ ಸಮಾಜದ ಕಾರ್ಯಕರ್ತರಾದ ಶ್ರೀ. ಡಿ.ಆರ್. ಇಂಗಳೆ, ಹಾಗೂ ನಿಪ್ಪಾಣಿಯ ಪ್ರಸಿದ್ಧ ಸಮಾಜ ಸೇವಕರಾದ ದಲಿತ ಸಮಾಜದ ಉದ್ಧಾರಕರಾದ ಶ್ರೀ ಮಾರುತಿ ಜ್ಯೋತಿ ರಾವಣ ಇವರು ಅಧಿವೇಶನದ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಅಧಿವೇಶನವು ನಿಪ್ಪಾಣಿಯ ಮಲ್ಲಿಕಾರ್ಜುನ ಥೇಟರಿನಲ್ಲಿ ಜರುಗಿತ್ತು. ಸಮಾವೇಶಕ್ಕೆ ಬಂದಿದ್ದ ಅತಿಥಿಗಳಿಗೆ ವಸತಿ ವ್ಯವಸ್ಥೆಯನ್ನು ನಗರ ಪಾಲಿಕೆಯಲ್ಲಿ ಮಾಡಲಾಗಿತ್ತು. ನಗರಪಾಲಿಕೆಯ ಒಂದು ಪ್ರಶಸ್ತವಾದ ಕೋಣೆಯಲ್ಲಿ ಬಾಬಾಸಾಹೇಬರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು, ಯಾವುದೇ ರೀತಿಯ ತಾರತಮ್ಯವಾಗದಂತೆ ಅಥಿತಿಗಳಿಗೆಲ್ಲ ಊಟದ ವ್ಯವಸ್ಥೆಯನ್ನು ಬಂದ ಮಾಡಲಾಗಿತ್ತು.
ಇದನ್ನು ಓದಿ ಮೋದಿ ಸರ್ನೇಮ್ ಪ್ರಕರಣ; ಆದೇಶವನ್ನು ಏಪ್ರಿಲ್ 20ಕ್ಕೆ ಕಾಯ್ದಿರಿಸಿದ ನ್ಯಾಯಾಲಯ
ಈ ಸಂದರ್ಭದಲ್ಲಿ ಬಾಬಾ ಸಾಹೇಬರ ಮೆರವಣಿಗೆಯನ್ನು ಏರ್ಪಡಿಸಿದ್ದರು. ಮೆರವಣಿಗೆಯು ಸಾಗುತ್ತಿರಬೇಕಾದರೆ ಬ್ರಾಹ್ಮಣನೊಬ್ಬನಿಗೆ ಅಸ್ಪೃಶ್ಯರ ವೈಭವ ಕಂಡು ಸಹಿಸಿಕೊಳ್ಳಲಾಗದೆ ಬಾಬಾಸಾಹೇಬರ ಮೆರವಣಿಗೆಯ ಮೇಲೆ ಚಪ್ಪಲಿ ಎಸೆದನು. ಅಲ್ಲಿ ಸೇರಿದ್ದ ದಲಿತರೆಲ್ಲ ಬ್ರಾಹ್ಮಣನ ಮನೆ ಹೊಕ್ಕು ಹೊಡೆಯಲು ಹೊರಟಾಗ ಬಾಬಾಸಾಹೇಬರು ಅದನ್ನು ತಡೆದು ಇಂಥ ವಿಘ್ನಗಳು ನಮ್ಮ ಚಳುವಳಿಗೆ ಇರುವದು ಸಹಜ. ಆದ್ದರಿಂದ ಈಗ ಯಾರೂ ತಾಳ್ಮೆ ಕಳೆದುಕೊಳ್ಳದೇ ಮೆರವಣಿಗೆಯನ್ನು ಮುಂದುವರೆಸಿ ಎಂದು ಆಜ್ಞಾಪಿಸಿದರು. ಆದರೂ ಒಬ್ಬ ದಲಿತನು ಸಿಟ್ಟು ತಡೆಯದೇ ತನ್ನ ಚಪ್ಪಲಿಗಳನ್ನು ಆ ಬ್ರಾಹ್ಮಣನ ಮನೆಯ ಮೇಲೆ ಒಗೆದನು. ಇದನ್ನು ನೋಡಿದ ಅನೇಕರು ತಾವು ತಮ್ಮ ಚಪ್ಪಲಿಗಳನ್ನು ಆ ಬ್ರಾಹ್ಮಣನ ಮನೆಯ ಮೇಲೆ ಒಗೆದರು. ಸುಮಾರು ಹತ್ತು ಸಾವಿರ ಕಾರ್ಯಕರ್ತರೆಲ್ಲ ತಮ್ಮ ಚಪ್ಪಲಿಗಳನ್ನು ಅವನ ಮನೆಯ ಮೇಲೆ ಒಗೆದಾಗ ಅವನ ಮನೆಯ ಆಟ್ಟಿ, ತುಂಬಿ ಹೋಯಿತು. ಅಲ್ಲಿ ಚಪ್ಪಲುಗಳ ರಾಶಿಯೇ ತುಂಬಿತ್ತು.
ನಿಪ್ಪಾಣಿಯ ಈ ಸಭೆಯ ಕೊನೆಗೆ ಅನೇಕ ಗೊತ್ತುವಳಿಗಳನ್ನು ಪಾಸು ಮಾಡಲಾಯಿತು. ಅದರಲ್ಲಿಯ ಒಂದು ಗೊತ್ತುವಳಿ ಹೀಗಿತ್ತು. ಅಸ್ಪಶ್ಯ ಜನಾಂಗದ ಮಹಾನ್ ದುರೀಣರಾದ ಡಾ. ಬಿ.ಆರ್. ಅಂಬೇಡ್ಕರ ಅವರನ್ನು ಮತ್ತು ಶೋಷಿತ ವರ್ಗದ ಜನರನ್ನು ಅಪಮಾನಿಸಲು ಚಪ್ಪಲು ಎಸೆದ ಬ್ರಾಹ್ಮಣನ ಮನೆಯಲ್ಲಿ ಚಪ್ಪಲಿಗಳನ್ನು ಯಾರೂ ವಿಲೇವಾರಿ ಮಾಡತಕ್ಕದ್ದಲ್ಲ. ಆದರಂತೆ: ನಿಪ್ಪಾಣಿ, ಮುನ್ಸಿಪಾಲ್ಟಿ ಸಹಿತ ಈ ಚಪ್ಪಲಿಗಳನ್ನು ಅಲ್ಲಿಂದ ತೆಗೆಯಬಾರದೆಂದು ತಿಳಿಸಿತು.
ಹೀಗೆ ಅಂಬೇಡ್ಕರ್ ಕರ್ನಾಟಕದ ಜತೆ ಸಂವಾದಿಸಿದ ಒಂದು ಮಾದರಿಯ ಕೆಲವು ಆಯ್ದ ಚಿತ್ರಗಳನ್ನು ಕಟ್ಟಿಕೊಡಲು ಪ್ರಯತ್ನಿಸಿರುವೆ. ಹೀಗೆಯೇ ಕರ್ನಾಟಕ ಅಂಬೇಡ್ಕರ್ ಅವರನ್ನು ಕಟ್ಟಿಕೊಂಡ ಬಗೆಯ ಬಗ್ಗೆಯೂ ಇನ್ನೊಂದು ಮಗ್ಗಲಿನ ಶೋಧ ಮಾಡಬೇಕಿದೆ. ಈ ನೆಲೆಯಲ್ಲಿಅಂಬೇಡ್ಕರ್ ಕರ್ನಾಟಕ’ದ ಚಹರೆಗಳನ್ನು ಮತ್ತಷ್ಟು ಸ್ಪಷ್ಟಗೊಳಿಸಬೇಕಿದೆ.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು
Nice sir , keep researching and writing. Thank you so much. Felt happy to read your writings.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com