ದಲಿತ ಚಳವಳಿಯ ಬೌದ್ಧಿಕ ಶಕ್ತಿಯಾಗಿದ್ದ ‘ಪಂಚಮʼ ರಾಮದೇವ ರಾಕೆ

Date:

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ತಿಂಗಳಿನಲ್ಲಿ ಬಾಬಾಸಾಹೇಬರ ಆಶಯವನ್ನು ಜಾರಿಗೊಳಿಸುವುದಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರ ಕುರಿತು ದೇಶದೆಲ್ಲೆಡೆ #DalitHistoryMonth ನೆಪದಲ್ಲಿ‌ ದಲಿತ ಇತಿಹಾಸದ‌ ದಾಖಲೀಕರಣ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಂಗಮ ಕಲೆಕ್ಟಿವ್‌ ಏಪ್ರಿಲ್‌ 14ರ ಶುಕ್ರವಾರ ಸಂಜೆ 4ಗಂಟೆಗೆ ಜಂಗಮ ಕಲೆಕ್ಟಿವ್‌ನಲ್ಲಿ 'ಹೆಜ್ಜೆ' ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹಿರಿಯ ದಲಿತ ಚಳವಳಿಗಾರ ಮತ್ತು ಪತ್ರಕರ್ತ ರಾಮದೇವ ರಾಕೆಯವರೊಂದಿಗೆ ಮಾತು, ಚರ್ಚೆ, ಸಂವಾದ ಕಾರ್ಯಕ್ರಮ ನಡೆಯಲಿದೆ. 

ಕರ್ನಾಟಕದ ದಲಿತ ಚಳವಳಿ ಮತ್ತು ಪತ್ರಿಕೋದ್ಯಮದ ಇತಿಹಾಸ ಯಾವತ್ತೂ ಮರೆಯಬಾರದ ಹೆಸರು. ಆದರೆ ಕರ್ನಾಟಕದ ದಲಿತ ಚಳವಳಿಯ ಇತಿಹಾಸದ ಕುರಿತ ಬರವಣಿಗೆಗಳು ಮತ್ತು ಚರ್ಚೆಗಳೆಲ್ಲ ಕೆಲವು ಹೆಸರುಗಳ ಸುತ್ತಲೇ ಸುತ್ತುತ್ತದೆ. ಇದಕ್ಕೆ ಕಾರಣ ದಸಂಸದ ಹುಟ್ಟಿಗೆ ಕಾರಣರಾದ ಹಲವರು ಸಾಹಿತ್ಯ ಲೋಕದ ತಾರೆಗಳಾಗಿದ್ದದ್ದು. ದಸಂಸದ ಹುಟ್ಟು ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಅಪಾರವಾಗಿದ್ದರೂ ಚಳವಳಿಯನ್ನು ಕೇವಲ ವ್ಯಕ್ತಿಕೇಂದ್ರಿತ ದೃಷ್ಟಿಕೋನದಿಂದ ನೋಡುವುದು ಇತಿಹಾಸ ಮತ್ತು ವರ್ತಮಾನ ಎರಡಕ್ಕೂ ಮಾಡುವ ಅಪಮಾನ. ಯಾವುದೇ ಜನ ಚಳವಳಿ ವ್ಯಕ್ತಿಕೇಂದ್ರಿತವಾಗಿ ಉಳಿಯುವುದಿಲ್ಲ. ಕರ್ನಾಟಕದ ದಲಿತ ಚಳವಳಿಗೆ ಅಪಾರವಾದ ಕೊಡುಗೆಯನ್ನು ಕೊಟ್ಟರೂ ಮರೆಯಲ್ಲೆ ಉಳಿದ ಅನೇಕ ಹಿರಿಯರಿದ್ದಾರೆ. ಅಂತವರಲ್ಲಿ ಬಹಳ ಮುಖ್ಯರು ರಾಮದೇವ ರಾಕೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಾನವಾಡಿ ಗ್ರಾಮದ ಶಿಕ್ಷಕರ ಮಗನಾಗಿ ಜನಿಸಿದ ರಾಕೆಯವರು ಬಾಲ್ಯದಲ್ಲಿ ಬಡತನವನ್ನಾಗಲೀ, ಅಸ್ಪೃಶ್ಯತೆಯ ನೋವನ್ನಾಗಲೀ ನೇರವಾಗಿ ಉಂಡವರಲ್ಲ. ಹಳೆ ಮೈಸೂರು ಪ್ರಾಂತ್ಯದಲ್ಲಿ ವಸಾಹತುಶಾಹಿಯ ಕಾಲದಲ್ಲೆ ದಲಿತರಿಗೆ ಶಿಕ್ಷಣ ದೊರೆತಿದ್ದರಿಂದ ಇವರ ತಂದೆ ಶಿಕ್ಷಕರಾಗುವುದಕ್ಕೆ ಸಾಧ್ಯವಾಗಿತ್ತು. ಶಿಕ್ಷಕರಾಗಿದ್ದ ತಂದೆ, ಬಿಎಸ್ಸಿ ಪದವೀಧರರಾಗಿದ್ದ ಅಣ್ಣ ಮನೆಯಲ್ಲಿ ಓದಿಗೆ ಬೇಕಾದ ವಾತಾವರಣ ಕಲ್ಪಿಸಿಕೊಟ್ಟಿದ್ದರು. ಹುಟ್ಟೂರು ಹಾನವಾಡಿ ಮತ್ತು ಮಂಡ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಹೈಸ್ಕೂಲು, ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಬಾಬಾಸಾಹೇಬರ ಪ್ರೇರಣೆಯಿಂದ ಓದುವ ಆಸಕ್ತಿಯನ್ನು ಬೆಳೆಸಿಕೊಂಡ ರಾಕೆ ಜಗತ್ತಿನ ಸಾಹಿತ್ಯ, ರಾಜಕೀಯ ಸಿದ್ದಾಂತಗಳನ್ನು ಓದಿಕೊಂಡು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡರು. ಮೈಸೂರಿನಲ್ಲಿ ಓದುವಾಗ ತಂಗಿದ್ದ ಸಿದ್ಧಾರ್ಥ ಹಾಸ್ಟೆಲ್‌ ಇವರ ಸಾಮಾಜಿಕ ಜೀವನಕ್ಕೆ ಹೊಸ ತಿರುವು ನೀಡಿತು. ಎಪ್ಪತ್ತರ ದಶಕದ ಕರ್ನಾಟಕಕ್ಕೆ ಹಲವು ತಿರುವುಗಳನ್ನು ಕೊಟ್ಟ ಸಮಾಜವಾದಿ ಯುವಜನ ಸಭಾದಲ್ಲಿ ಸಕ್ರಿಯರಾಗಿದ್ದ ರಾಕೆ ಮೈಸೂರಿನಲ್ಲಿ ನಡೆದ ‘ಜಾತಿ ವಿನಾಶ ಸಮ್ಮೇಳನ’, ಅಬ್ರಾಹ್ಮಣ ಬರಹಗಾರರು ಆಯೋಜಿಸಿದ್ದ ‘ಬರಹಗಾರರು ಕಲಾವಿದರ ಒಕ್ಕೂಟ’ದ ಸಮ್ಮೇಳನಗಳಲ್ಲಿ ಭಾಗವಹಿಸಿದರು. ಮುಂದೆ ದೇವರಾಜ ಅರಸರ ಸರ್ಕಾರದಲ್ಲಿ ಮಂತ್ರಿಯಾಗಿದ್ದ
ಬಿ. ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದ ಬಗ್ಗೆ ನೀಡಿದ ಹೇಳಿಕೆಯೊಂದರಿಂದ ಶುರುವಾದ ‘ಬೂಸಾ ಚಳವಳಿ’ಯಲ್ಲಿ ಭಾಗವಹಿಸಿದರು. ಆಗ ಸಮಾಜವಾದಿ ಚಳವಳಿಯ ಮುಖವಾಣಿಯಂತೆ ಬರುತ್ತಿದ್ದ ರಾಜಶೇಖರ ಕೋಟಿಯವರ ‘ಆಂದೋಲನ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.

‘ಆಂದೋಲನ’ದಂತಹ ಮುಖ್ಯವಾಹಿನಿಯ ಪತ್ರಿಕೆಗಳು ದಲಿತರಿಗೆ ಸಂಬಂಧಿಸಿದ ಸುದ್ದಿಗಳಿಗೆ ಜಾಗ ಕೊಡುವುದು ಸಾಧ್ಯವಿಲ್ಲ ಎನಿಸಿದಾಗ ದಲಿತರಿಗಾಗಿಯೇ ಒಂದು ಪತ್ರಿಕೆ ಮಾಡಬೇಕು ಎಂದು ಮುಂದಾದ ಹೊಸ ತಲೆಮಾರಿನ ಪ್ರಯತ್ನವಾಗಿ ‘ಶೋಷಿತ’ ಪತ್ರಿಕೆ ಶುರುವಾಯಿತು. ಮುಂದೆ ‘ಶೋಷಿತ’ ‘ಪಂಚಮ’ ಆಗಿ ಬದಲಾಯಿತು.’ಪಂಚಮ’ ಸಂಪಾದಕರಾಗಿ ರಾಮದೇವ ರಾಕೆ ಮತ್ತು ಪ್ರಕಾಶಕರಾಗಿ ಎಚ್.ಗೋವಿಂದಯ್ಯ ಜವಾಬ್ದಾರಿ ವಹಿಸಿಕೊಂಡರೆ ದೇವನೂರ ಮಹಾದೇವ ಪತ್ರಿಕೆಯ ಬೆನ್ನಿಗೆ ನಿಂತರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಪಂಚಮ’ ಪತ್ರಿಕೆ ಇಡಿ ರಾಜ್ಯದ ದಲಿತ ಸಮುದಾಯದ ದನಿಯಾಗಿ ಮೂಡಿಬರತೊಡಗಿತು. ಸಮಾಜವಾದಿ ಚಳವಳಿ, ಬರಹಗಾರರ ಒಕ್ಕೂಟ ದಲಿತರು ಮತ್ತು ಜಾತಿಯ ಪ್ರಶ್ನೆಯನ್ನು ಸರಿಯಾದ ರೀತಿಯಲ್ಲಿ ಎತ್ತಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ಸಮಾಜವಾದಿ ಯುವಜನ ಸಭಾ ಮತ್ತು ಬರಹಗಾರರ ಒಕ್ಕೂಟದಲ್ಲಿ ಇದ್ದ ಪ್ರೊ‌.ಬಿ ಕೆ, ದೇವನೂರ ಮಹಾದೇವ, ಇಂಧೂದರ ಹೊನ್ನಾಪುರ, ಎಚ್. ಗೋವಿಂದಯ್ಯ, ಶಿವಾಜಿ ಗಣೇಶನ್, ಕೆ.ಬಿ.ಸಿದ್ದಯ್ಯ, ಶ್ರೀಧರ ಕಲಿವೀರ, ಚಂದ್ರಪ್ರಸಾದ್ ತ್ಯಾಗಿ, ಕೆ.ರಾಮಯ್ಯ ಮುಂತಾದ ದಲಿತ ಲೇಖಕರು ಸೇರಿ ‘ದಲಿತ ಲೇಖಕರು ಕಲಾವಿದರ ಯುವ ಸಂಘಟನೆ’ ಆರಂಭಿಸಿದರು. ದಲೇಕಯುಸಂನಲ್ಲಿ ಸಕ್ರಿಯರಾಗಿದ್ದ ರಾಕೆ ಮುಂದೆ ಭದ್ರಾವತಿಯಲ್ಲಿ ಇಡೀ ರಾಜ್ಯದ ದಲಿತರ ಸಂಘಟನೆಯಾಗಿ ಶುರುವಾದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದರು.

ರಾಕೆಯವರ ಪ್ರಕಾರ ಬೂಸಾ ಚಳವಳಿ ರಾಜ್ಯದ ದಲಿತ ಪ್ರಜ್ಞೆಯನ್ನು ಎಚ್ಚರಿಸಿದರೆ ‘ಪಂಚಮ ಪತ್ರಿಕೆ’ ಆ ಪ್ರಜ್ಞೆಯನ್ನು ಒಂದು ವೇದಿಕೆಗೆ ತರುವುದಕ್ಕೆ ಕಾರಣವಾಯಿತು. ದಸಂಸ ಮುಖವಾಣಿಯಾಗಿ ‘ಪಂಚಮ’ ಚಳವಳಿಗೆ ಬೇಕಾದ ಬೌದ್ದಿಕ ಸತ್ವವನ್ನು ಪೂರೈಸತೊಡಗಿತು. ಇಡೀ ದೇಶದಲ್ಲಿ ದಲಿತರ ಮೇಲಾಗುತ್ತಿದ್ದ ದೌರ್ಜನ್ಯಗಳ ಕುರಿತು ಪಂಚಮ ತರುತ್ತಿದ್ದ ವರದಿಗಳು. ಜಗತ್ತಿನ ಬೇರೆ ಬೇರೆ ದೇಶಗಳ ವಿಮೋಚನಾ ಚಳವಳಿಗಳು, ವಿಮೋಚನಾ ಸಾಹಿತ್ಯಗಳ ಕುರಿತ ಬರಹಗಳು ‘ಪಂಚಮ’ದ ಮೂಲಕ ಕನ್ನಡಕ್ಕೆ ಬರತೊಡಗಿದವು. ಮುಖ್ಯವಾಹಿನಿ ಪತ್ರಿಕೋದ್ಯಮಕ್ಕೆ ಬೇಡವಾಗಿದ್ದ ತಳಸಮುದಾಯದ ಪ್ರಶ್ನೆಗಳನ್ನು ಪಂಚಮ ಎತ್ತುತ್ತಿತ್ತು. ಅದರ ಸಂಪಾದಕರಾಗಿ ಬಹಳ ವರ್ಷ ರಾಮದೇವ ರಾಕೆಯವರು ಪತ್ರಿಕೆಯನ್ನು ಮುನ್ನಡೆಸಿದರು. ‘ಪಂಚಮ’ದ ಸಂಪಾದಕರಾಗಿ, ದಲಿತ ಕಲಾ ಮಂಡಲಿಯ ಸಂಚಾಲಕರಾಗಿ, ದಸಂಸದ ಕಾರ್ಯಕರ್ತನಾಗಿ ರಾಮದೇವ ರಾಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕೋಟಿಗಾನಹಳ್ಳಿ ರಾಮಯ್ಯನವರ ಪ್ರಕಾರ ಕರ್ನಾಟಕದ ದಲಿತ ಚಳವಳಿಯ ಮೊದಲ ಪೂರ್ಣಾವಧಿ ಕಾರ್ಯಕರ್ತ ಅಂತ ಕರೆಯುವುದಾದರೆ ಅದು ರಾಮದೇವ ರಾಕೆ.

ಇದನ್ನು ಓದಿ ಈ ದಿನ ಸಂಪಾದಕೀಯ | ಬಿಜೆಪಿ ಸರ್ಕಾರ ಕೆಎಂಎಫ್ ಅನ್ನು ಮುಗಿಸುತ್ತಿದೆಯೇ? ವಾಸ್ತವವೇನು?

ಪಂಚಮ ಪತ್ರಿಕೆಯ ವರದಿಗಳು, ಲೇಖನಗಳು, ವಿಶ್ಲೇಷಣಾ ಬರಹಗಳನ್ನು ಇಂದು ಓದಿದಾಗ ಹಲವಾರು ಪಿಎಚ್‌ಡಿ ಪದವಿಗಳಿಗೆ ವಸ್ತುವಾಗಬಲ್ಲ ವಿಷಯಗಳನ್ನು ಹೋರಾಟದಲ್ಲಿದ್ದವರು ಎಷ್ಟು ಸಹಜವಾಗಿ, ಅರ್ಥಪೂರ್ಣವಾಗಿ ಬರೆದಿದ್ದಾರೆ ಅನ್ನಿಸುತ್ತದೆ. ‘ಪಂಚಮ’ದ ಪ್ರತಿ ಸಂಚಿಕೆಯ ಹಿಂದೆ ಇರುವ ಕತೆಗಳು ಬೇರಯೇ ಚರಿತ್ರೆಯನ್ನು ಹೇಳುತ್ತವೆ. ಪಂಚಮದ ಪ್ರತಿ ಸಂಚಿಕೆಯೂ ಒಂದು ಪಠ್ಯವಾಗಿ ಕಾಣಿಸುತ್ತವೆ. ಬರವಣಿಗೆಯ ಜೊತೆಗೆ ಕಲಾವಿದರೂ ಆಗಿರುವ ರಾಕೆ ಪಂಚಮ ಪತ್ರಿಕೆ ರೂಪಿಸುವುದರ ಜೊತೆಗೆ ಪತ್ರೆಸಂಗಪ್ಪ, ಶೇಷಗಿರಿಯಪ್ಪ ಪ್ರಕರಣಗಳಂತಹ ದಲಿತ ಚಳವಳಿ ರೂಪಿಸುತ್ತಿದ್ದ ಹೋರಾಟಗಳಿಗೆ ಬೀದಿ ನಾಟಕಗಳನ್ನೂ ಬರೆದಿದ್ದಾರೆ.

ಮುಂದೆ 1982ರಲ್ಲಿ‌ ಪ್ರಜಾವಾಣಿ ಪತ್ರಿಕೆಗೆ ಸೇರಿ ಬಳ್ಳಾರಿ, ಮಂಡ್ಯ ಸೇರಿದಂತೆ ಹಲವು ಕಡೆ ಕೆಲಸ ಮಾಡಿ 2012ರಲ್ಲಿ ನಿವೃತ್ತರಾಗಿದ್ದಾರೆ. ದಲಿತ ಚಳವಳಿ ರೂಪಿಸಿದ ಭೂ ಹೋರಾಟಗಳು, ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ನಡೆದ ಹೋರಾಟ, ಜಾಥಾಗಳ ಕುರಿತು ನಿಖರವಾಗಿ‌ ಮಾತನಾಡಬಲ್ಲ ರಾಕೆಯವರು ದಲಿತ ಚಳವಳಿಯ ಇತಿಹಾಸದ ಕುರಿತು ಬಂದಿರುವ ಬರವಣಿಗೆಗಳ ಪೊಳ್ಳುತನಗಳ ಬಗ್ಗೆ ಸಿಟ್ಟಾಗುತ್ತಾರೆ. ಚಳವಳಿಯನ್ನು ಸಮಗ್ರವಾಗಿ ದಾಖಲಿಸುವ ಸಾಮರ್ಥ್ಯವುಳ್ಳ ಕೆಲವೇ ಕೆಲವು ಹಿರಿಯರಲ್ಲಿ ರಾಕೆಯವರು ಬಹುಮುಖ್ಯರು.

ವಿ ಎಲ್ ನರಸಿಂಹಮೂರ್ತಿ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...