ಸಂವಿಧಾನದ ಆಶಯಗಳ ನೆಲೆಯಲ್ಲಿ, ಎಲ್ಲರಿಗೂ ಶಿಕ್ಷಣ, ಆರೋಗ್ಯ ,ಉದ್ಯೋಗ ಮತ್ತು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಪಕ್ಷಗಳು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ನೆಲೆಯಲ್ಲಿ ಚುನಾವಣೆಗಳು ನಡೆದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು.
2024ರ ಪಾರ್ಲಿಮೆಂಟರಿ ಚುನಾವಣಾ ಫಲಿತಾಂಶ ಬಂದಿದೆ. ಸುಳ್ಳಿನ ಸರದಾರ ಮೋದಿ ಬೆಂಬಲಿತ ಗೋದಿ ಮಾಧ್ಯಮಗಳು ಚುನಾವಣೋತ್ತರ ಫಲಿತಾಂಶಗಳ ಬಗ್ಗೆ ನಡೆಸಿದ್ದ ಸಮೀಕ್ಷೆಗಳ ಬಹುತೇಕ ಕಪೋಕಲ್ಪಿತ ವರದಿಗಳನ್ನು ಸುಳ್ಳನ್ನಾಗಿಸುವ ಮೂಲಕ ಭಾರತೀಯ ಪ್ರಜ್ಞಾವಂತ ಜನರು ತೀರ್ಪು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನಾವು ತೀರ್ಪಿನ ಅಂಕಿ-ಅಂಶಗಳನ್ನು ನೋಡಿದಾಗ, ಇದು ನಿಜವಾದ ಹಾಗು ನ್ಯಾಯಸಮ್ಮತವಾದ ಚುನಾವಣಾ ತೀರ್ಪು ಎನಿಸುವುದಿಲ್ಲ. ಕಾರಣ, ಈ ಚುನಾವಣೆ ಒಂದು ಬಗೆಯ ಅಘೋಷಿತ ತುರ್ತು ಪರಿಸ್ಥಿತಿಯ ನಡುವೆ ಭಯ, ದ್ವೇಷ ಮತ್ತು ಕೋಮುವಾದ ಬಿತ್ತಿ ಬೆಳೆ ತೆಗೆದ ತೀರ್ಪಿನಂತಿದೆ.
ಮುಕ್ತ ಹಾಗು ಪಾರದರ್ಶಕ ಚುನಾವಣೆಯೆಂದರೆ, ಅಲ್ಲಿ ಚುನಾವಣಾ ಬಾಂಡ್‌ಗಳಿರುವುದಿಲ್ಲ; ವಿರೋಧ ಪಕ್ಷಗಳು ಚುನಾವಣೆಗಳನ್ನು ನಡೆಸಲು ಬಳಸಬೇಕಾದ ಕನಿಷ್ಠ ನಿಧಿಯನ್ನು ಸುಳ್ಳು ನೆಪವೊಡ್ಡಿ ಜಪ್ತಿ ಮಾಡಿರುವುದಿಲ್ಲ; ವಿರೋಧ ಪಕ್ಷದ ನಾಯಕರ ಮೇಲೆ ಸುಳ್ಳು ಮೊಕದ್ದಮೆಗಳನ್ನೂಡಿ ಬಂಧಿಸಿ ಕಾರಾಗೃಹಕ್ಕೆ ತಳ್ಳುವುದಿಲ್ಲ; ಸಿಬಿಐ,ಇಡಿ, ಉಪಾ (uapa) ಇತ್ಯಾದಿಗಳ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಅಡಗಿಸುವುದಿಲ್ಲ; ಚುನಾವಣೆ ಸಂದರ್ಭದಲ್ಲಿ ನಿರಂತರವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಳಂಘಿಸಿ ದ್ವೇಷ ಹಾಗು ಒಡಕು ರಾಜಕಾರಣದ ಮೂಲಕ ಮತಯಾಚನೆ ಇರುವುದಿಲ್ಲ; ಎಲ್ಲಕ್ಕಿಂತ ಮಿಗಿಲಾಗಿ, ಗೋದಿ ಮಾಧ್ಯಮದ ಮೂಲಕ ನಿರಂತರ ಅಪಪ್ರಚಾರ ಹಾಗು ಸುಳ್ಳನ್ನು 24×7 ಬಿತ್ತರಿಸುವ ಮೂಲಕ ಜನರನ್ನು ಗೊಂದಲಕ್ಕೆ ದೂಡುವ ಅಥವಾ ಜಾತಿ-ಧರ್ಮಗಳ ನೆಲೆಯಲ್ಲಿ ಜನರನ್ನು ವಿಭಜಿಸಿ ಧೃವೀಕರಣದ ಕೊಳಕು ರಾಜಕಾರಣವನ್ನು ಮೀರಿದ ನ್ಯಾಯಯುತ ಚುನಾವಣೆಯಾಗಿರುತ್ತಿತ್ತು.
ಸಂವಿಧಾನದ ಆಶಯಗಳ ನೆಲೆಯಲ್ಲಿ, ಎಲ್ಲರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಪಕ್ಷಗಳು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ನೆಲೆಯಲ್ಲಿ ಚುನಾವಣೆಗಳು ನಡೆದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು.
ಆದರೆ, ಆರ್ ಎಸ್ ಎಸ್ ಮತ್ತು ಅದರ ಮುಂಚೂಣಿ ಕೋಮುವಾದಿ ಸಂಘಟನೆಗಳು, ಭಾರತದ ಸಂವಿಧಾನ ಪ್ರತಿಪಾದಿಸುವ ಬಹುತ್ವ ಹಾಗು ಬಹು ಸಂಸ್ಕೃತಿ ನೆಲೆಯ ರಾಷ್ಟ್ರೀಯತೆಯನ್ನು ಧಿಕ್ಕರಿಸಿ, ಕೋಮುವಾದ ಹಾಗು ಧಾರ್ಮಿಕತೆಯ ನೆಲೆಯಲ್ಲಿ ಪ್ರತಿಪಾದಿಸುವ ಹಿಂದುತ್ವದ ನೆಲೆಯಲ್ಲಿ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಅಜೆಂಡಾವನ್ನು ಮುಂದಿಟ್ಟುಕೊಂಡು ಇಡೀ ದೇಶವನ್ನೆ ಕೋಮುದಳ್ಳುರಿಗೆ ತಳ್ಳುವ ಕೋಮುವಾದಿ ಧರ್ಮರಾಜಕಾರಣ ಚುನಾವಣೆಯ ಅಸ್ತ್ರವನ್ನಾಗಿಸಿಕೊಂಡಿತ್ತು.
ಇದನ್ನು ಬಲವಾಗಿ ಪ್ರತಿರೋಧಿಸಿದ ಇಂಡಿಯಾ ಬ್ಲಾಕ್ ಮೈತ್ರಿಯು ಈ ಚುನಾವಣೆಯಲ್ಲಿ ಸಂವಿಧಾನ ಮತ್ತು ಸಂವಿಧಾನದ ಆಶಯಗಳನ್ನು ಚುನಾವಣೆಯ ಕೇಂದ್ರ ವಿಷಯಗಳನ್ನಾಗಿಸುವ ಮೂಲಕ ಹೊಸ ಬಗೆಯ ಚರ್ಚೆಯನ್ನು ಹುಟ್ಟಿಹಾಕಿತು. ಜೊತೆಗೆ, ರಾಹುಲ್ ಗಾಂಧಿಯವರ ಭಾರತ ಜೋಡೋ ಹಾಗು ನ್ಯಾಯಪರ ಯಾತ್ರೆಗಳು, ದೇಶದಲ್ಲಿ ಒಂದು ಪರ್ಯಾಯ ನೆರೇಟಿವ್ ಮೂಲಕ ಕೋಮುವಾದಿ ವ್ಯಕ್ತಿ ಕೇಂದ್ರಿತ ಫ್ಯಾಸಿಸ್ಟ್ ಶಕ್ತಿಗಳನ್ನು ಸ್ವಲ್ಪ ಮಟ್ಟಿಗೆ ಮಣಿಸಲು ಸಾಧ್ಯವಾಗಿದೆ.
ಒಟ್ಟಾರೆ, ಈ ಚುನಾವಣೆಯಲ್ಲಿ ಭಾರತದ ಜನತೆ ಕೋಮುವಾದ, ವಿಭಜಕ ಶಕ್ತಿ, ದ್ವೇಷ , ಧರ್ಮ ರಾಜಕಾರಣ ಮತ್ತು ಶೂನ್ಯ ಅಭಿವೃದ್ಧಿಗಳ ವಿರುದ್ಧ ತೀರ್ಪು ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ಪರ ಹಾಗು ಸರ್ವಾಧಿಕಾರ ವಿರುದ್ಧ ಜನತೆ ನೀಡಿರುವ ತೀರ್ಪು. 2024ರ ಚುನಾವಣೆಯ ಕೇಂದ್ರ ವಿಷಯ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಇದರಲ್ಲಿ ಇಂದು ಸಂವಿಧಾನ ಗೆದ್ದಿದೆ ಮತ್ತು ಸಂವಿಧಾನ ವಿರೋಧಿಗಳು ಸೋತಿದ್ದಾರೆ.
ಆದರೆ, ಇದು ಕೇವಲ ಪ್ರಾರಂಭ. ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ನಾವು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಸಾಮಾಜಿಕ, ಸಾಂಸ್ಕೃತಿಕವಾಗಿ ಮತ್ತು ಸೈದ್ಧಾಂತಿಕ ನೆಲೆಯಲ್ಲಿಯೂ ಸೋಲಿಸಬೇಕಿದೆ. ಇದು ಅಷ್ಟು ಸುಲಭದ ಕೆಲಸವಲ್ಲ. ಕಾರಣ ಕಳೆದ 100 ವರ್ಷಗಳಿಂದ ಜನರ ಮನಸ್ಸಿನಲ್ಲಿ ಬಿತ್ತಿರುವ ವಿಷಪೂರಿತ ದ್ವೇಷದ ವಿಷಯಗಳನ್ನು ಅನ್‌ಲರ್ನ್‌ಗೊಳಿಸಿ, ಸಾಂವಿಧಾನಿಕ ಮೌಲ್ಯಗಳಾದ ಪ್ರೀತಿ, ಮಾನವೀಯತೆ, ವ್ಯಕ್ತಿಗೌರವ, ಭಾತೃತ್ವ, ತಾರತಮ್ಯರಹಿತ ಸಮಾನತೆ, ಸಮಾನ ಅವಕಾಶ, ಸಾಮಾಜಿಕ ನ್ಯಾಯ, ಶಾಂತಿಯುತ ಸಹಬಾಳ್ವೆ, ಬಹುತ್ವ, ಬಹು ಸಂಸ್ಕೃತಿ, ಬಹುಭಾಷೆ, ವೈವಿಧ್ಯತೆಯಿಂದ ಕೂಡಿದ ಉಡುಗೆ-ತೊಡುಗೆ, ಆಹಾರ ಪದ್ಧತಿ, ಎಲ್ಲಕ್ಕಿಂತ ಮಿಗಿಲಾಗಿ ಮಾನವರು ಮಾನವರಾಗಿ ಬದುಕುವ ಹೊಸ ಬಗೆಯ ಸಂಸ್ಕೃತಿಯನ್ನು ಜನತೆಗೆ ತಿಳಿಸಬೇಕಿದೆ.
ಇದನ್ನೂ ಓದಿ ‘ಈ ದಿನ’ ವಿಶ್ಲೇಷಣೆ | ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ ಅಸಾಧಾರಣ ಜನಾದೇಶ
ಹೊಸ ಬಗೆಯ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಲು, ಕಳೆದ 74 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗದ ಸಂವಿಧಾನ ಮತ್ತು ಸಂವಿಧಾನದ ಆಶಯಗಳನ್ನು ಹೊತ್ತು ಜನರ ಬಳಿಗೆ ಹಿಂದಿರುಗಬೇಕಿದೆ. ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಯಾವುದೇ ಅಡ್ಡ ದಾರಿಯಿಲ್ಲ. ನಮಗಿರುವ ಒಂದೇ ದಾರಿ ಸಾಂವಿಧಾನಿಕ ಮೌಲ್ಯಗಳನ್ನು ಜನರಲ್ಲಿ ಬಿತ್ತಿ ಬೆಳೆಸುವ ಮೂಲಕ ಭಾರತವನ್ನು ಭಾರತವನ್ನಾಗಿ ಉಳಿಸಿಕೊಳ್ಳುವುದು. ಇದು ವಿಶ್ರಮಿಸುವ ಕಾಲವಲ್ಲ. ಸಂವಿಧಾನ ಉಳಿಯದೆ ಭಾರತ ಉಳಿಯದು. ಈ ಫಲಿತಾಂಶದಿಂದ ಬದಲಾವಣೆ ಪ್ರಾರಂಭವಾಗಿದೆ. ಅದನ್ನು ತಾರ್ಕಿಕ ಹಂತಕ್ಕೆ ಒಯ್ಯುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತರ ಮೇಲಿದೆ

ನಿರಂಜನಾರಾಧ್ಯ ವಿ ಪಿ
ಅಭಿವೃದ್ಧಿ ಶಿಕ್ಷಣ ತಜ್ಞ