‘ಈ ದಿನ’ ವಿಶ್ಲೇಷಣೆ | ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ ಅಸಾಧಾರಣ ಜನಾದೇಶ

Date:

ಎನ್.ಡಿ.ಎ.ಗೆ ಬಹುಮತ ಸಿಕ್ಕಿದೆ. ಆದರೆ ಅದನ್ನು ಮೋದಿಯವರಿಗೆ ದೊರೆತ ಜನಾದೇಶ ಎಂದು ಭಾವಿಸುವಂತಿಲ್ಲ. ಬಿಜೆಪಿಗೆ ಸರಳ ಬಹುಮತವೂ ದಕ್ಕದೆ ಹೋದರೆ ಅದನ್ನು ನರೇಂದ್ರ ಮೋದಿಯವರ ನೈತಿಕ ಸೋಲು ಎಂದೇ ಕರೆಯಬೇಕಾಗುತ್ತದೆ. ಬಿಜೆಪಿಯ ಉತ್ತರಪ್ರದೇಶ ಭದ್ರಕೋಟೆಯಲ್ಲಿ ಭಾರೀ ಬಿರುಕು ಮೂಡಿದೆ.

 

ಮೋದಿತ್ವದ ಅಬ್ಬರಕ್ಕೆ ಲಗಾಮು ಹಾಕಿದ್ದಾರೆ ಭಾರತದ ಮತದಾರರು. ಮೋದಿಯವರು ಹತ್ತು ವರ್ಷಗಳ ಕಾಲ ಅಂಚಿಗೆ ನೂಕಿದ್ದ ಹೊಟ್ಟೆ ಬಟ್ಟೆಯ ಚಿಂತೆಯನ್ನು ಪುನಃ ಚುನಾವಣಾ ಚರ್ಚೆಗೆ ತಂದಿದ್ದಾರೆ. ತಾಯಿ ಗರ್ಭದಿಂದ ಜೈವಿಕವಾಗಿ ಜನಿಸುವುದೇ ಸ್ವಾಭಾವಿಕ, ಅಯೋನಿಜ ಎಂದು ಹೇಳಿಕೊಂಡು ಪರಮಾತ್ಮನಾಗುವುದು ಬೇಡ ಎಂದಿದ್ದಾರೆ. ವ್ಯಕ್ತಿಪೂಜೆ ಮತ್ತು ಕೋಮುವಾದಿ ರಾಜಕಾರಣಕ್ಕೆ ಅಸಮ್ಮತಿ ಸೂಚಿಸಿದ್ದಾರೆ.

ಸಂವಿಧಾನವನ್ನು ಬದಲಾಯಿಸಿ ಮೀಸಲಾತಿಗೆ ವಿಪತ್ತು ತರುವರೆಂಬ ಶಂಕೆಯು ಉತ್ತರಪ್ರದೇಶದ ದಲಿತರಿಂದ ಜಾಣತನದ ಮತದಾನ ಮಾಡಿಸಿರುವ ಸುಳಿವುಗಳಿವೆ. ನೆಲ ಮರೆತು ಆಕಾಶದಲ್ಲಿ ಹಾರಾಡುತ್ತಿದ್ದವರನ್ನು ಪುನಃ ನೆಲದ ನೆನಪು ಮಾಡಿಕೊಟ್ಟಿರುವುದು ಈ ಫಲಿತಾಂಶಗಳ ಅಗ್ಗಳಿಕೆ. ಗೆಲುವಿನ ಹೊಸ್ತಿಲಿನಲ್ಲಿ ನಿಲ್ಲಿಸಿ ಸರಳ ಬಹುಮತದ ಗೆಲುವನ್ನು ಕೂಡ ನಿರಾಕರಿಸಿ ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬಂತೆ ತೂಗು ಹಾಕಿ ಮೋದಿಯವರನ್ನು ಮಿತ್ರಪಕ್ಷಗಳ ಮರ್ಜಿಗೆ ಒಪ್ಪಿಸಿರುವ ಅಸಾಧಾರಣ ಫಲಿತಾಂಶವಿದು.

ಎನ್.ಡಿ.ಎ.ಗೆ ಬಹುಮತ ಸಿಕ್ಕಿದೆ. ಆದರೆ ಅದನ್ನು ಮೋದಿಯವರಿಗೆ ದೊರೆತ ಜನಾದೇಶ ಎಂದು ಭಾವಿಸುವಂತಿಲ್ಲ. ಬಿಜೆಪಿಗೆ ಸರಳ ಬಹುಮತವೂ ದಕ್ಕದೆ ಹೋದರೆ ಅದನ್ನು ನರೇಂದ್ರ ಮೋದಿಯವರ ನೈತಿಕ ಸೋಲು ಎಂದೇ ಕರೆಯಬೇಕಾಗುತ್ತದೆ. ಬಿಜೆಪಿಯ ಉತ್ತರಪ್ರದೇಶ ಭದ್ರಕೋಟೆಯಲ್ಲಿ ಭಾರೀ ಬಿರುಕು ಮೂಡಿದೆ. ದೇಶಾದ್ಯಂತ ಬಿಜೆಪಿ ವೋಟುಗಳನ್ನು ಪ್ರಮಾಣ ತಗ್ಗಿದೆ. ಆದರೆ ಈ ಪ್ರಮಾಣ ಪ್ರತಿಪಕ್ಷಕ್ಕೆ ಸೀಟುಗಳಾಗಿ ಬದಲಾಗಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಣ್ಸನ್ನೆಯೇ ಕಟ್ಟಾಜ್ಞೆಯೆಂಬಂತೆ ನಡು ಬಾಗಿಸುವವರ ಮುಂದೆ ಅಭಿಷಿಕ್ತ ಸಾಮ್ರಾಟನಂತೆ ಮೆರೆದ ಮೋದಿಯವರು ಮಿತ್ರಪಕ್ಷಗಳ ಮರ್ಜಿಯಲ್ಲಿ ಮತ್ತೆ ಪ್ರಧಾನಿಯಾಗಲು ಬಯಸುವರೇ? ಎನ್.ಡಿ.ಎ ಸ್ರಾಕರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಬಿಜೆಪಿಯ ಮೇಲೆ ಮೋದಿ-ಶಾ ಅವರ ಉಕ್ಕಿನ ಹಿಡಿತ ಜಾರುವಂತೆ ತೋರುತ್ತಿದೆ. ಪಕ್ಷದ ಹಣೆಬರೆಹ ಬರೆಯುತ್ತಿದ್ದ ಈ ಜೋಡಿಯ ವಿರುದ್ಧ ಅತೃಪ್ತಿಯ ಅಪಸ್ವರಗಳು ಏಳುವುದು ಸ್ವಾಭಾವಿಕ. ಇಳಿಎಣಿಕೆ ಶುರುವಾದರೆ ಆಶ್ಚರ್ಯಪಡಬೇಕಿಲ್ಲ.

ಮೋದಿಯವರನ್ನು ಸುಳ್ಳು ಸುಳ್ಳೇ ಆಕಾಶಕ್ಕೆ ಏರಿಸಿದ್ದ ಮತಗಟ್ಟೆ ಸಮೀಕ್ಷೆಗಳು ಮಣ್ಣು ಮುಕ್ಕಿವೆ. ಹತ್ತು ವರ್ಷಗಳ ಬಿಡುವಿನ ನಂತರ ಸಮ್ಮಿಶ್ರ ಸರ್ಕಾರದ ದಿನಗಳು ವಾಪಸು ಬಂದಿವೆ. ಕಮಂಡಲದ ಮುಂದೆ ಸಂಪೂರ್ಣ ಸೋತು ಸೊರಗಿದ್ದ ಮಂಡಲ್ ತುಸುವಾದರೂ ಚೇತರಿಕೆ ಕಂಡಿದೆ. ಪ್ರಾದೇಶಿಕ ಪಕ್ಷಗಳ ರಾಜಕಾರಣವನ್ನು ಮುಗಿಸಿಬಿಡುವ ಹುನ್ನಾರಕ್ಕೆ ಭಾರೀ  ಹಿ ಉತ್ತರ ಪ್ರದೇಶದಲ್ಲಿ ‘ಪಿಛಡಾ ದಲಿತ್ ಅಲ್ಪಸಂಖ್ಯಾತ್’ (ಅಹಿಂದ) ಮತಗಳ ಮೇಲೆ ಕಣ್ಣಿರಿಸಿ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಜೊತೆಗೂಡಿ ಹೆಣೆದಿದ್ದ ಚುನಾವಣಾ ವ್ಯೂಹಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.

ಚುನಾವಣೆಯಲ್ಲಿ ಪ್ರತಿಪಕ್ಷಗಳ ಕೈ ಕಾಲು ಕಟ್ಟಿ ಹಾಕದೆ ಸಮಾನ ಅವಕಾಶ ನೀಡಿದ್ದರೆ ಈ ಚುನಾವಣೆ ಫಲಿತಾಂಶಗಳು ಬೇರೆಯೇ ಆಗಿರುತ್ತಿದ್ದವು. ಎನ್.ಡಿ.ಎ. ಜಾಗದಲ್ಲಿ ಇಂಡಿಯಾ ಒಕ್ಕೂಟ ಇರಬಹುದಿತ್ತು, ಇಂಡಿಯಾ ಒಕ್ಕೂಟದ ಜಾಗಕ್ಕೆ ಎನ್.ಡಿ.ಎ.ಕುಸಿಯಬಹುದಿತ್ತು.

ದಟ್ಟವಾಗಿ ಕವಿಯಬಹುದಿದ್ದ ಸರ್ವಾಧಿಕಾರದ ಅಪಾಯದಿಂದ ದೇಶವನ್ನು ಪಾರು ಮಾಡಿದ್ದಾರೆ ಮತದಾರರು. ಪ್ರತಿಪಕ್ಷಗಳಿಗೆ ಬಲ ತುಂಬಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್.ಸಿ.ಪಿ.ಯ ಮನೆಮುರುಕರಾದ ಶಿಂಧೆ ಮತ್ತು ಅಜಿತ್ ಪವಾರ್ ಗೆ ಪಾಠ ಕಲಿಸಿದ್ದಾರೆ. ಈ ಅಪಹರಣದ ಸೂತ್ರಧಾರ ಬಿಜೆಪಿಯನ್ನೂ ಬಿಡದೆ ಶಿಕ್ಷಿಸಿದ್ದಾರೆ ಮಹಾರಾಷ್ಟ್ರದ ಮತದಾರರು. ನಕಲಿ ಶಿವಸೇನೆ ಮತ್ತು ನಕಲಿ ಎನ್.ಸಿ.ಪಿ. ಯಾವುದೆಂದು ತೋರಿಸಿಕೊಟ್ಟಿದ್ದಾರೆ. ಸದ್ಯದಲ್ಲೇ ಕದ ಬಡಿದಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗಳು ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಕಡು ಕಠಿಣವಾಗಲಿವೆ ಎಂಬ ಭವಿಷ್ಯವನ್ನು ಫಲಿತಾಂಶಗಳು ನಿಚ್ಚಳವಾಗಿ ಹೇಳಿವೆ.

ಸರ್ವಾಧಿಕಾರ, ಭಯ ಭೀತಿ ಹುಟ್ಟಿಸುವ ರಾಜಕಾರಣ, ಪ್ರತಿಪಕ್ಷಗಳ ದಮನ, ಮೇರೆಯಿಲ್ಲದ ದುರಹಂಕಾರವನ್ನು ಮತದಾರರು ಒಪ್ಪಿಲ್ಲ. ಆಡಳಿತಯಂತ್ರ, ಗೋದಿ ಮೀಡಿಯಾ, ಸಾಂವಿಧಾನಿಕ ಸಂಸ್ಥೆಗಳು, ಹಣಬಲ, ಏಜೆನ್ಸಿಗಳನ್ನು ಬಗಲಿಗಿಟ್ಟುಕೊಂಡೂ ಬಹುಮತ ಪಡೆಯಲು ಬಹುಮತಕ್ಕೆ ತಿಣುಕಾಡಿದೆ ಬಿಜೆಪಿ.

ಒಡಿಶಾ ನವೀನ್ ಪಟ್ನಾಯಕ್ ಜೊತೆಯೇ ಉಳಿದಿದ್ದರೆ ಬಿಜೆಪಿಯ ಸಂಖ್ಯೆ ಮತ್ತಷ್ಟು ಕುಸಿಯುತ್ತಿತ್ತು. ಆಂಧ್ರದಲ್ಲಿ ಚಂದ್ರಬಾಬು ಜೊತೆ ಕೈ ಜೋಡಿಸದೆ ಹೋಗಿದ್ದರೆ ಎನ್.ಡಿ.ಎ. ಸಂಖ್ಯೆ 300 ಗಡಿಯನ್ನು ಸಮೀಪಿಸುತ್ತಿರಲಿಲ್ಲ.

ಟಿಎಂಸಿ

ದ್ರಾವಿಡ ನಾಡಿನ ತಮಿಳು ಮತದಾರರು ಮೋದಿಯವರ ಸೆಂಗೋಲ್ ಮತ್ತು ತಿರುಕ್ಕುರುಳ್ ನಾಟಕಕ್ಕೆ ಮಾರು ಹೋಗಿಲ್ಲ. ಬಿಜೆಪಿ ನಗಾರಿ ಬಾರಿಸಿ ಸಾರಿದ್ದ ಅಣ್ಣಾಮಲೈ ಎಂಬ ನೀರುಗುಳ್ಳೆಯನ್ನು ಒಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತಾವು ಈಗಲೂ ಬಹುದೊಡ್ಡ ರಾಜಕೀಯ ಶಕ್ತಿ ಎಂದು ರುಜುವಾತು ಮಾಡಿ ಬಿಜೆಪಿಯನ್ನು ಕೆಡವಿದ್ದಾರೆ ಮಮತಾ ಬ್ಯಾನರ್ಜಿ.

ಚುನಾವಣೆಗೆ ಮುನ್ನ ನಾಲ್ಕು ನಿರ್ಣಾಯಕ ಮೈತ್ರಿಗಳನ್ನು ಮಾಡಿಕೊಳ್ಳದೆ ಹೋಗಿದ್ದರೆ ಬಿಜೆಪಿ ಮತ್ತಷ್ಟು ತಾಪತ್ರಯ ಎದುರಿಸಬೇಕಿತ್ತು. ಆಂಧ್ರದ ತೆಲುಗುದೇಶಂ ಪಾರ್ಟಿ, ಬಿಹಾರದ ಜೆ.ಡಿ.ಯು, ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್.ಜೆ,ಪಿ ಕರ್ನಾಟಕದ ಜಾತ್ಯತೀತ ಜನತಾದಳ, ಪಶ್ಚಿಮೀ ಉತ್ತರಪ್ರದೇಶದ ಜಯಂತ್ ಚೌಧರಿ ನೇತೃತ್ವದ ಜಾಟ್ ಪಕ್ಷವಾದ ರಾಷ್ಟ್ರೀಯ ಲೋಕದಳದ ಜೊತೆಗಿನ ಮೈತ್ರಿಗಳು ಎನ್.ಡಿ.ಎ.ಗೆ ಬಹುಮತ ತಂದು ಕೊಟ್ಟಿವೆ.

2014ರ ಚುನಾವಣೆಯಲ್ಲಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆದ ಘೋಷಣೆ ‘ಅಚ್ಛೇ ದಿನ್’. ಏರಿಕೆ ನಿರುದ್ಯೋಗದ ಸಮಸ್ಯೆಗಳ ಉರಿಯಲ್ಲಿ ಬೇಯುತ್ತಿರುವ ಜನಕೋಟಿಗೆ ಒಳ್ಳೆಯ ದಿನಗಳು ಇನ್ನೂ ಮರಳುಗಾಡಿನ ಮರೀಚಿಕೆ. ಬಡವರು-ಸಿರಿವಂತರ ನಡುವಣ ಭಾರೀ ಕಂದಕ ಭಾರತದಲ್ಲಿ ಹಿಗ್ಗುತ್ತಲೇ ನಡೆದಿದೆ. ಈ ಭೇದ ಭಾವ ಸಹಜ ಸ್ವಾಭಾವಿಕ, ಈ ತರತಮ ಇಲ್ಲದಿದ್ದರೆ ಹೇಗೆ ಎಂದು ವಾದಿಸಿದ ಮೋದಿಯವರು ಈ ದೇಶದ ದೀನ ದರಿದ್ರರ ಪರವಾಗಿರುವುದಾದರೂ ಹೇಗೆ?

ಉತ್ತರಪ್ರದೇಶದಲ್ಲಿ ಭಾರೀ ರಾಜಕೀಯ ಭೂಕಂಪ ಉಂಟಾಗಿದೆ. ಮೇಲ್ನೋಟಕ್ಕೆ ಕಾಣದ ಅಂತರ್ವಾಹಿನಿಯೊಂದು ಹರಿದಿದೆ. ಯಾರದೇ ಪರ ಅಥವಾ ವಿರುದ್ಧ ಅಲೆಯಿಲ್ಲದ ಈ ಚುನಾವಣೆಯಲ್ಲಿ ಅದೃಶ್ಯ ಮತದಾರರ ಶಕ್ತಿ ಸರ್ವಾಧಿಕಾರಕ್ಕೆ ಸೆಡ್ಡು ಹೊಡೆದಿದೆ.

ರಾಮಮಂದಿರ ರಾಜಕಾರಣದ ಕೇಂದ್ರಬಿಂದುವಾದ ಅಯೋಧ್ಯೆ- ಫೈಜಾಬಾದ್  ಕ್ಷೇತ್ರದ ಸೋಲು ಬಿಜೆಪಿಗೆ ಆಗಿರುವ ಬಹುದೊಡ್ಡ ಮುಖಭಂಗ. ರಾಮಮನೋಹರ ಲೋಹಿಯಾ ಮತ್ತು ಕವಿ ಕುಂವರ್ ನಾರಾಯಣ್ ಜನಿಸಿದ ನೆಲವಿದು. ದಲಿತರು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರ ಅಯೋಧ್ಯೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು  ಸೋಲಿಸಿರುವ ಅವಧೇಶ್ ಪ್ರಸಾದ್ ಅವರು ಸಮಾಜವಾದಿ ಪಾರ್ಟಿಯ ಹಿರಿಯ ದಲಿತ ನಾಯಕ. ಸಮಾಜವಾದಿ ಪಾರ್ಟಿ ಹುಟ್ಟಿದಾಗಿನಿಂದ ಆ ಪಕ್ಷದ ಜೊತೆ ಇರುವವರು. ಮುಲಾಯಂ ಅವರ ಸಮಕಾಲೀನರು. ಫೈಜಾಬಾದ್ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದವರು. ಈ ಕ್ಷೇತ್ರದ ಮಿಲ್ಕೀಪುರ ವಿಧಾನಸಭಾ ಕ್ಷೇತ್ರದಿಂದ ಒಂಬತ್ತು ಸಲ ಆರಿಸಿ ಬಂದಿರುವವರು. ಐದು ಸಲ ಕ್ಯಾಬಿನೆಟ್ ಮಂತ್ರಿ ಆಗಿದ್ದವರು. ಕಳೆದ ಎರಡೂ ಸಲ ಬಿಜೆಪಿಯ ಲಲ್ಲೂಸಿಂಗ್ ಅವರನ್ನು ಈ ಕ್ಷೇತ್ರ ಗೆಲ್ಲಿಸಿತ್ತು. ಈ ಸಲವೂ ಅವರನ್ನೇ ಹೂಡಿತ್ತು ಬಿಜೆಪಿ.

ದಿವಂಗತ ಪ್ರಧಾನಿ ಮತ್ತು ಸಮಾಜವಾದಿ ನಾಯಕ ಚಂದ್ರಶೇಖರ್ ಅವರ ಕ್ಷೇತ್ರ ಬಲಿಯಾ. ಅವರ ಮಗ ನೀರಜ್ ಶೇಖರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ನಿಂತು ಸೋತಿದ್ದಾರೆ. ಸಮಾಜವಾದಿ ಪಾರ್ಟಿಯ ಸನಾತನ ಪಾಂಡೆ ಇಲ್ಲಿ ಗೆದ್ದಿದ್ದಾರೆ. ನೀರಜ್ ಸಮಾಜವಾದಿ ಪಾರ್ಟಿಯಲ್ಲಿದ್ದು ರಾಜ್ಯಸಭಾ ಸದಸ್ಯರಾಗಿದ್ದರು. 2019ರಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರಿದವರು.

ಮೋದಿಯವರು ಮೂರನೆಯ ಸಲ ಮಿತ್ರ ಪಕ್ಷಗಳ ಮರ್ಜಿ ಕಾದು ಪ್ರಧಾನಿಯಾಗಲು ಒಪ್ಪುವರೇ ಅಥವಾ ದೇಶ ಬೇರೊಬ್ಬ ಪ್ರಧಾನಿಯನ್ನು ಕಾಣುವುದೇ ಎಂದು ಕಾದು ನೋಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

2 COMMENTS

  1. ದಲಿತರ ಪಕ್ಷ ಎಂದು ಹೇಳಿಕೊಳ್ಳುವ ಮಾಯಾವತಿಯವರು ಬಿಜೆಪಿಯ ಬಿ ಟೀಮಿನಂತೆ ವರ್ತಿಸಿ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸದೆ ತನ್ನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ೨೪೦ ಸೀಟು ಗಳಿಸಲು ನೆರವಾದರು. ಇದಕ್ಕೆ ಕಾರಣ ಮಾಯಾವತಿಯವರು ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರ. ಬಿಜೆಪಿಯು ಇ. ಡಿ., ಸಿಬಿಐ ಛೂ ಬಿಡುವ ಹೆದರಿಕೆಯಿಂದ ತನ್ನ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಹಾಗೂ ಜೈಲುಪಾಲಾಗುವುದನ್ನು ತಪ್ಪಿಸಿಕೊಳ್ಳಲು ತನ್ನ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಬಿಜೆಪಿ ಉತ್ತರಪ್ರದೇಶದಲ್ಲಿ ೧೬ ಸೀಟುಗಳು ಹೆಚ್ಚು ಬರುವಂತೆ ಮಾಡಿದರು. ಏಕೆಂದರೆ ಅಲ್ಲಿ ಸೋತ ಇಂಡಿಯಾ ಮೈತ್ರಿಕೂಟದ ೧೬ ಅಭ್ಯರ್ಥಿಗಳ ಸೋಲಿನ ಅಂತರ ಮಾಯಾವತಿಯವರ ಬಿಎಸ್ಪಿ ಅಭ್ಯರ್ಥಿಗಳು ಗಳಿಸಿದ ವೋಟುಗಳಿಂತ ತುಂಬಾ ಹೆಚ್ಚು ಇತ್ತು. ಮಾಯಾವತಿಯವರು ದಲಿತರಿಗೆ ಎಸಗಿದ ಇಂಥ ದ್ರೋಹಡಾ ಬಗ್ಗೆ ದಲಿತರು ಚಿಂತಿಸುವುದು ಯಾವಾಗ? ದಲಿತರ ದಡ್ಡತನಕ್ಕೆ ಏನೆಂದು ಹೇಳುವುದು?

  2. ಮೇಲಿನ ಕಾಮೆಂಟಿಗೆ ಒಂದು ತಿದ್ದುಪಡಿ: ಮೇಲಿನ ಒಂದು ವಾಕ್ಯದಲ್ಲಿ ಒಂದು ತಪ್ಪು ಆಗಿದೆ. ವಾಕ್ಯವನ್ನು ಈ ರೀತಿ ಓದಿಕೊಳ್ಳುವುದು. “ಏಕೆಂದರೆ ಅಲ್ಲಿ ಸೋತ ಇಂಡಿಯಾ ಮೈತ್ರಿಕೂಟದ ೧೬ ಅಭ್ಯರ್ಥಿಗಳ ಸೋಲಿನ ಅಂತರ ಮಾಯಾವತಿಯವರ ಬಿಎಸ್ಪಿ ಅಭ್ಯರ್ಥಿಗಳು ಗಳಿಸಿದ ವೋಟುಗಳಿಂತ ತುಂಬಾ ಕಡಿಮೆ ಇತ್ತು.”

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ...

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ಬಾಲ್ಯವಿವಾಹ | ಕರ್ನಾಟಕಕ್ಕೆ 2ನೇ ಸ್ಥಾನ: ನಾಚಿಕೆಗೇಡಿನ ಸಂಗತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ಅತಿ ಹೆಚ್ಚು...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...