ಅನ್ನ ನೀರು ಅರಿವೆಯೇ ಪರಮ- ಕೋಮುವಾದಕ್ಕೆ ಕಪಾಳಮೋಕ್ಷ

Date:

Advertisements
ಬಿಜೆಪಿಯದು ಅಪಮಾನಕರ ಸೋಲು. ಪ್ರಧಾನಿ ಮೋದಿ-ಅಮಿತ್ ಶಾ ಜೋಡಿಗೂ ಆಗಿರುವ ತೀವ್ರ ಮುಖಭಂಗ. ಕೋವಿಡ್ ಮತ್ತು ನೆರೆಯ ಹಾವಳಿಯಲ್ಲಿ ಜರ್ಝರಿತವಾದ ರಾಜ್ಯದ ಜನರನ್ನು ವಿಚಾರಿಸಲು ಮೋದಿಯವರು ಬಂದಿರಲಿಲ್ಲ. ಎರಡು ವರ್ಷಗಳಲ್ಲಿ ಒಮ್ಮೆ ಬಂದವರು, ಕಳೆದ ಮೂರೂವರೆ ತಿಂಗಳುಗಳಲ್ಲಿ ಹನ್ನೊಂದು ಸಲ ಕರ್ನಾಟಕಕ್ಕೆ ಭೇಟಿ ನೀಡಿದರು

ದಕ್ಷಿಣ ಭಾರತದ ಬಿಜೆಪಿ ಮಹಾದ್ವಾರ ಮುರಿದು ಮುಖ ಅಡಿಯಾಗಿ ಬಿದ್ದಿದೆ. ಹಿರಿಯ ರಾಜಕೀಯ ವಿಶ್ಲೇಷಕ ಪ್ರೊ.ಯೋಗೇಂದ್ರ ಯಾದವ್ ವಿಶ್ಲೇಷಿಸಿದಂತೆ ಕರ್ನಾಟಕದ ಈ ವಿಧಾನಸಭಾ ಚುನಾವಣೆಯು ಭಾರತದ ಸಹಬಾಳ್ವೆಯ ಆತ್ಮಕ್ಕಾಗಿ ನಡೆದ ಕುರುಕ್ಷೇತ್ರ ಸಮರ.

ಯಾದವ್ ಅವರ ಈ ವಿಶ್ಲೇಷಣೆ ದೇಶದ ‘ಮ್ಯಾಕ್ರೋ ಲೆವೆಲ್’ ಸ್ಥಿತಿಗತಿಗೆ ಅತ್ಯಂತ ಪ್ರಸ್ತುತವೆನಿಸುತ್ತದೆ. ಸ್ಥಳೀಯ ಮಟ್ಟದಲ್ಲಿ ಅಥವಾ ನೆಲಮಟ್ಟದಲ್ಲಿ ನೋಡುವುದೇ ಆದರೆ ಕಾಂಗ್ರೆಸ್ ಪಕ್ಷದ ಈ ಗೆಲುವು ಜನಸಾಮಾನ್ಯರ ಗೆಲುವು. ಹೊಟ್ಟೆಗೆ ಹಿಟ್ಟಿನ, ಮೈಗೆ ಬಟ್ಟೆಯ ಹಾಗೂ ತಲೆಯ ಮೇಲೆ ಸೂರಿಗಾಗಿ ಹಗಲಿರುಳು ಜಂಜಾಟ ನಡೆಸುವ ಬಡ ಜನಸಮುದಾಯಗಳ ಗೆಲುವು. ಅನ್ನವನ್ನು ಬೇಡುವ ಹೊಟ್ಟೆಗಳ ಮುಂದಿನ ಖಾಲಿ ತಟ್ಟೆಗಳಿಗೆ ದ್ವೇಷ, ಕೋಮುವಾದದ ಬೆಂಕಿಯನ್ನೂ, ಹುಸಿ ರಾಷ್ಟ್ರವಾದ, ಒಣಹೆಮ್ಮೆಯ, ವಿಶ್ವಗುರುವಿನ ಬಣ್ಣದ ಕನಸುಗಳನ್ನು ಬಡಿಸುವ ಕ್ರೌರ್ಯಕ್ಕೆ ಜನತೆ ನೀಡಿರುವ ಉತ್ತರ.

ಕರ್ನಾಟಕದ ಮತದಾರರು ಹಲವು ಸಲ ನಿರ್ಣಾಯಕ ಮತದಾನ ಮಾಡಿದ್ದಾರೆ. 1983ರಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಜನತಾಪಕ್ಷವನ್ನು ಅಧಿಕಾರಕ್ಕೆ ತಂದರು. 1984ರಲ್ಲಿ ಇಂದಿರಾಗಾಂಧಿ ಹತ್ಯೆಗೀಡಾದಾಗ ಲೋಕಸಭಾ ಚುನಾವಣೆಗಳಲ್ಲಿ ಪುನಃ ಕಾಂಗ್ರೆಸ್ಸನ್ನು ಭರಪೂರ ಬೆಂಬಲಿಸಿದರು. ಬಿಜೆಪಿ ಬೆಂಬಲದ ಊರುಗೋಲಿನೊಂದಿಗೆ ಸರ್ಕಾರ ನಡೆಸುತ್ತಿದ್ದ ರಾಮಕೃಷ್ಣ ಹೆಗಡೆ ಲೋಕಸಭಾ ಚುನಾವಣೆಯಲ್ಲಿ ಜನತಾಪಕ್ಷದ ತೀವ್ರ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಪುನಃ ಜನಾದೇಶ ಕೋರಿದರು. ಕೆಲವೇ ತಿಂಗಳುಗಳ ಅಂತರದಲ್ಲಿ ಜರುಗಿದ ಈ ಚುನಾವಣೆಯಲ್ಲಿ ಜನತಾಪಕ್ಷಕ್ಕೆ ತುಂಬು ಬಹುಮತ ನೀಡಿ ಯಾರ ಹಂಗಿಗೂ ಬೀಳದೆ ಸರ್ಕಾರ ನಡೆಸಿರಿ ಎಂದು ಹರಸಿದ್ದ ಪರಿಪಕ್ವ ಮತದಾರರು ಕರ್ನಾಟಕದವರು.

Advertisements

ವಿಧಾನಸಭೆಗೆ ಕಾಂಗ್ರೆಸ್ ಪಕ್ಷವನ್ನು ಆರಿಸಿರುವ ರಾಜ್ಯದ ಜನತೆ ವರ್ಷದೊಪ್ಪತ್ತಿನಲ್ಲೇ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿಯವರನ್ನು ಬೆಂಬಲಿಸುವ ಎಲ್ಲ ಸಾಧ್ಯತೆಗಳೂ ಇವೆ. ಸದ್ಯದ ಸ್ಥಿತಿಯಲ್ಲಿ ಜನಸಮುದಾಯಗಳ ನಡುವೆ ಮೋದಿ ವರ್ಚಸ್ಸು ಈಗಲೂ ಬೆಳಗಿದೆ.

ಹೀಗಾಗಿ ಕಾಂಗ್ರೆಸ್ ಪಕ್ಷ ಗೆಲುವಿನ ಲೋಲುಪತೆಯಲ್ಲಿ ಮೈಮರೆತರೆ ಲೋಕಸಭಾ ಚುನಾವಣೆಗಳಲ್ಲಿ ಮತ್ತೆ ಸೋಲು ನಿಶ್ಚಿತ. ತೀವ್ರ ದುರ್ಭರವಾಗಿ ಹೋಗಿರುವ ತಮ್ಮ ದೈನಂದಿನ ಬದುಕಿನ ಜಂಜಾಟಗಳನ್ನು ಹಗುರಗೊಳಿಸಬೇಕು ಎಂಬ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಮತದಾರರು. ಅವರ ನಿರೀಕ್ಷೆ ಹುಸಿಯಾಗದಂತೆ ಆಡಳಿತ ನಡೆಸದೆ ಹೋದರೆ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಂಡಂತೆಯೇ ಸರಿ.

ಕರ್ನಾಟಕದ ವಿಧಾನಸಭಾ ಚುನಾವಣೆಗಳ ಗೆಲುವು ಕೇವಲ ರಾಹುಲ್ ಗಾಂಧಿ ಗೆಲುವಲ್ಲ. ಆದರೆ ಬಿಜೆಪಿಯ ಸೋಲು ಕೇವಲ ರಾಜ್ಯ ನಾಯಕತ್ವದ ಸೋಲು ಮಾತ್ರವಲ್ಲ, ಪ್ರಧಾನಿ ಮೋದಿಯವರ ಸೋಲು ಕೂಡ. ಸ್ಥಳೀಯ ನಾಯಕತ್ವಕ್ಕೆ ಪೂರ್ಣ ಅಂಕಗಳು ಸಲ್ಲಬೇಕು. ಹೈಕಮಾಂಡಿನದೇನಿದ್ದರೂ ಪೂರಕ ಪಾತ್ರ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡಿ ಬಿಜೆಪಿಯ ಬಲೆಗೆ ಬೀಳದೆ ತಾಳಮೇಳದೊಂದಿಗೆ ಸೆಣೆಸಿರುವುದು ಅಭಿನಂದನೀಯ. ಕಾಂಗ್ರೆಸ್ ಹೈಕಮಾಂಡು ತನ್ನನ್ನು ತಾನು ಹೇರಿಕೊಳ್ಳದೆ ಈ ಅವಳಿಜವಳಿ ಚಹರೆಗಳನ್ನೇ ಮುಂದೆ ಬಿಟ್ಟದ್ದು ವಿವೇಕದ ನಡೆ. ಈ ಜುಗಲ್ ಬಂದಿಗೆ ಪೂರಕವಾಗಿ ಒದಗಿ ಬಂದದ್ದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ದೊರೆತ ಘನ ಗೆಲುವಿನಲ್ಲಿ ಖರ್ಗೆಯವರ ಪಾತ್ರ ಗಣನೀಯ.

ಬಿಜೆಪಿಯದು ಅಪಮಾನಕರ ಸೋಲು. ಪ್ರಧಾನಿ ಮೋದಿ-ಅಮಿತ್ ಶಾ ಜೋಡಿಗೂ ಆಗಿರುವ ತೀವ್ರ ಮುಖಭಂಗ. ಕೋವಿಡ್ ಮತ್ತು ನೆರೆಯ ಹಾವಳಿಯಲ್ಲಿ ಜರ್ಝರಿತವಾದ ರಾಜ್ಯದ ಜನರನ್ನು ವಿಚಾರಿಸಲು ಮೋದಿಯವರು ಬಂದಿರಲಿಲ್ಲ. ಎರಡು ವರ್ಷಗಳಲ್ಲಿ ಒಮ್ಮೆ ಬಂದವರು, ಕಳೆದ ಮೂರೂವರೆ ತಿಂಗಳುಗಳಲ್ಲಿ ಹನ್ನೊಂದು ಸಲ ಕರ್ನಾಟಕಕ್ಕೆ ಭೇಟಿ ನೀಡಿದರು. 20 ರ್ಯಾಲಿಗಳನ್ನು ನಡೆಸಿ ತಮ್ಮ ವರ್ಚಸ್ಸನ್ನೇ ಪಣಕ್ಕಿಟ್ಟರು ಮೋದಿ. ಬಿಜೆಪಿ ಪ್ರಚಾರಾಂದೋಲನದ ಏಕೈಕ ಬೃಹತ್ ಚಹರೆ. ಹೀಗಾಗಿ ಸೋಲಿನ ಹೊಣೆಯಿಂದ ಅವರು ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಮತದಾರರು ಈಗಾಗಲೆ ಹೇಳಿರುವಂತೆ ರಾಜ್ಯದ ಕಷ್ಟ ಕಾಲದಲ್ಲಿ ಬಂದಿದ್ದರೆ, ತಮ್ಮ ಪಕ್ಷದ ರಾಜ್ಯ ಸರ್ಕಾರ ನಡೆಸಿದ ಶೇ.40ರ ಭ್ರಷ್ಟಾಚಾರಕ್ಕೆ ಆರಂಭದಲ್ಲೇ ಅಂಕುಶ ಇಟ್ಟಿದ್ದರೆ ಮತಭಿಕ್ಷೆಗಾಗಿ ಅವರು ಹೀಗೆ ಹಗಲಿರುಳು ಕನ್ನಡಿಗರ ಮುಂದೆ ಕೈ ಚಾಚಬೇಕಿರಲಿಲ್ಲ. ಭಜರಂಗಬಲಿಯನ್ನು ಆವಾಹಿಸಬೇಕಿರಲಿಲ್ಲ. ಜೊತೆಗೆ ತಮ್ಮ ಪಕ್ಷವನ್ನು ಈ ಚುನಾವಣೆಯಲ್ಲಿ ಕೆಂಡದ ಹೊಂಡದ ಮೇಲೆ ಹಾಯಿಸಿರುವ ವಿಷಯ ಬೆಲೆ ಏರಿಕೆ. ಬೆಲೆ ಏರಿಕೆಯ ಅಪರಾಧದ ಕಟಕಟೆಯಲ್ಲಿ ನಿಲ್ಲಬೇಕಾದ ಪ್ರಮುಖ ಆರೋಪಿ ತಾವೇ ವಿನಾ ರಾಜ್ಯ ಸರ್ಕಾರ ಅಲ್ಲ ಎಂಬುದನ್ನು ಮೋದಿಯವರು ಮನಗಾಣಬೇಕು.

ಸಮಾಜವನ್ನು ಒಡೆಯುವ ಕೋಮುವಾದಿ ಕಾರ್ಯಸೂಚಿ ಚಿರಾಯು ಅಲ್ಲ. ಅದಕ್ಕೂ ಕಡೆಗಾಲವಿದೆ. ಹೊಟ್ಟೆಬಟ್ಟೆ, ಸಾಮರಸ್ಯ ಸಹಬಾಳ್ವೆಗಿಂತ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಮೋದಿ ಮತ್ತು ಅವರ ಸಂಗಾತಿಗಳು ಅರಿಯಬೇಕು.

ಹಿಂದೆ ಬಾಬಾ ಬುಡನ್ ಗಿರಿ- ದತ್ತಪೀಠ ವಿವಾದ, ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಕೋಮುವಾದಿ ಪ್ರಕರಣಗಳನ್ನು ಹಿಂಡಿ ಮತಗಳಿಸಿತ್ತು ಬಿಜೆಪಿ.   ಹಲಾಲ್, ಹಿಜಾಬ್, ಅಜಾನ್, ಟಿಪ್ಪು ಸುಲ್ತಾನ್, ಉರಿಗೌಡ- ಟಿಪ್ಪುವನ್ನು ಕೊಂದರು ಎನ್ನಲಾದ  ಉರಿಗೌಡ- ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಸೃಷ್ಟಿ. ಜೈ ಭಜರಂಗಬಲಿ ಎಂದು ಘೋಷಣೆ ಹಾಕಿ ಮತಯಂತ್ರದ ಗುಂಡಿಯನ್ನು ಒತ್ತಿರಿ ಎಂದು ಮೋದಿಯವರು ಮತ್ತೆ ಮತ್ತೆ ಚುನಾವಣಾ ಪ್ರಚಾರಕ್ಕೆ ಭಜರಂಗಬಲಿಯನ್ನು ಎಳೆದು ತಂದ ವೈಖರಿ ಯಶಸ್ಸು ಕಾಣಲಿಲ್ಲ.

ಇದನ್ನು ಓದಿ ಈ ದಿನ ಸಂಪಾದಕೀಯ | ಸತ್ಯವಾಯಿತು ಈದಿನದ ಸಮೀಕ್ಷೆ; ಇದು ಜನರ ಗೆಲುವು

ಕಾಂಗ್ರೆಸ್ ಪಕ್ಷ ಜಾಣತನ ತೋರಿತು. ಬಿಜೆಪಿಯ ಕೋಮುವಾದಿ ತಂತ್ರದ ಬಲೆಯಿಂದ ಬಹುತೇಕ ಪ್ರಜ್ಞಾಪೂರ್ವಕವಾಗಿ ದೂರ ಉಳಿಯಿತು. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಸ್ಥಳೀಯ ಸಮಸ್ಯೆಗಳನ್ನು ನಿರಂತರ ಮುಂಬೆಳಕಿನಲ್ಲಿ ಇಟ್ಟಿತು. ಚುನಾವಣಾ ಪ್ರಚಾರ ಸಂವಾದವನ್ನು ತಾನೇ ನಿರ್ಮಿಸಿ ಬಿಜೆಪಿಯನ್ನು ಇಕ್ಕಳಕ್ಕೆ ಸಿಲುಕಿಸಿತು.
ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಸಂಗತಿಯು ಕಾಂಗ್ರೆಸ್ಸನ್ನು ಕೆಟ್ಟದಾಗಿ ಕಾಡಲಿದೆ ಎಂಬುದು ಕಾಂಗ್ರೆಸ್ ವಿರೋಧಿಗಳ ಕಡು ನಿರೀಕ್ಷೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಬ್ಬರೂ ಮುಖ್ಯಮಂತ್ರಿ ಹುದ್ದೆಗೆ ದಾವೇದಾರಿಕೆ ಹೂಡಿದ್ದಾರೆ. ಅದು ಸ್ವಾಭಾವಿಕ ಕೂಡ. ಆದರೆ ಮುಖ್ಯಮಂತ್ರಿ ಯಾರಾಗಬೇಕೆಂಬ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಮುಂದಿದ್ದಾರೆ. ರಾಜ್ಯವ್ಯಾಪೀ ಜನಪ್ರಿಯತೆಯೂ ಅವರ ಪರವಾಗಿದೆ. ತಮ್ಮ ಕಟ್ಟಕಡೆಯ ಚುನಾವಣೆಯಿದು ಎಂದು ಸಿದ್ದರಾಮಯ್ಯ ಸಾರಿದ್ದಾರೆ.

ಇತ್ತ ಶಿವಕುಮಾರ್ ಅವರ ವಿರುದ್ಧ ಕೇಸುಗಳಿವೆ. ಈ ಆಶಂಕೆಯಿಂದಲೇ ಶಿವಕುಮಾರ್ ಅವರು ಸಂಸದರೂ ಅದ ತಮ್ಮ ಸೋದರ ಡಿ.ಕೆ.ಸುರೇಶ್ ಅವರಿಂದಲೂ ನಾಮಪತ್ರ ಸಲ್ಲಿಸಿದ್ದುಂಟು. ಶಿವಕುಮಾರ್ ಮುಖ್ಯಮಂತ್ರಿಯಾದರೆ, ಕೇಸುಗಳ ಕುಣಿಕೆಯನ್ನೇ ಅವರ ಕುತ್ತಿಗೆಯ ಸುತ್ತ ಹೆಣೆಯುವುದು ನಿಶ್ಚಿತ. ಕಾಂಗ್ರೆಸ್ ಮುಖ್ಯಮಂತ್ರಿ ದಸ್ತಗಿರಿ- ಕೋರ್ಟುಗಳಿಗೆ ಅಲೆಯುವ ಮುಜುಗರವನ್ನು ಎದುರಿಸುವ ಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ. ಜೊತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಆಯ್ಕೆಗೆ ಬಿಟ್ಟರೆ ಶಿವಕುಮಾರ್ ಅವರಿಗಿಂತ ದೊಡ್ಡ ಸಂಖ್ಯೆಯ ಮತಗಳು ಸಿದ್ದರಾಮಯ್ಯನವರಿಗೆ ಬೀಳುವುದು ಖಚಿತ. ಈ ಅಂಶಗಳನ್ನು ಅರಿಯದಷ್ಟು ಅಮಾಯಕರೇನಲ್ಲ ಶಿವಕುಮಾರ್. ಹೀಗಾಗಿ ಅವರು ತಮ್ಮ ಸರದಿಗಾಗಿ ಸಹನೆಯಿಂದ ಕಾಯುವ ಸಂಭವವೇ ಹೆಚ್ಚು.

ಬಿಜೆಪಿಯ ಜೊತೆಗೆ ಅಪಮಾನಕರ ಸೋಲು ಅನುಭವಿಸಿರುವ ಮತ್ತೊಂದು ಪಕ್ಷ ಜಾತ್ಯತೀತ ಜನತಾದಳ. ಕುಟುಂಬ ಕೇಂದ್ರಿತ ರಾಜಕಾರಣ ಬಹುದೂರ ಸಾಗುವುದಿಲ್ಲ ಎಂಬ ಪಾಠವನ್ನು ಕಲಿಯಬೇಕಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡಲು ಪ್ರಾದೇಶಿಕ ಪಕ್ಷವೊಂದರ ನೈಜ ಅಗತ್ಯ ಕರ್ನಾಟಕಕ್ಕೆ ಇದೆ.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X