ಬೆಂಗಳೂರು ಬೆಳೆಯುತ್ತಲೇ ಇದೆ. ನಗರ ಬೆಳೆದಂತೆಲ್ಲ ತನ್ನ ಸುತ್ತಲಿನ ಹಳ್ಳಿಗಳನ್ನು ನುಂಗುತ್ತಿದೆ. ಗ್ರಾಮಗಳನ್ನು ಆಕ್ರಮಿಸಿಕೊಂಡು ಬೆಂಗಳೂರನ್ನು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವಿಸ್ತರಿಸುತ್ತಲೇ ಇದೆ. ಇದೀಗ ಬಿಡಿಎ ಕಣ್ಣು ಬೆಂಗಳೂರು ದಕ್ಷಿಣ ತಾಲೂಕಿನ 58 ಹಳ್ಳಿಗಳ ಮೇಲೆ ಬಿದ್ದಿದೆ. ಬಿಡಿಎ ವಕ್ರದೃಷ್ಟಿಯಿಂದಾಗಿ ಹಲವಾರು ಗ್ರಾಮಗಳ ಜನರು ವಿದ್ಯುತ್ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೊಸದಾಗಿ ಮನೆಗಳನ್ನು ಕಟ್ಟುತ್ತಿರುವವವರು ವಿದ್ಯುತ್‌ಗಾಗಿ ಪರಿತಪಿಸುವಂತಾಗಿದೆ.
ಬೆಂಗಳೂರಿನ ಹೊರವಲಯದಲ್ಲಿ ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ಪೆರಿಫೆರಲ್ ವರ್ತುಲ ರಸ್ತೆ–2ಯನ್ನು ನಿರ್ಮಾಣ ಮಾಡಲು ಬಿಡಿಎ ಉದ್ದೇಶಿಸಿದೆ. ಮಾತ್ರವಲ್ಲದೆ, ರಸ್ತೆಯ ಜೊತೆಗೆ ವಾಣಿಜ್ಯ ಮತ್ತು ವಸತಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದೆ. ರಸ್ತೆ ಮತ್ತು ಆರು ಬಡಾವಣೆಗಳ ನಿರ್ಮಾಣಕ್ಕಾಗಿ 58 ಹಳ್ಳಿಗಳ ಬರೋಬ್ಬರಿ 5,000 ಎಕರೆ ರೈತರ ಭೂಮಿಯನ್ನು ಕಸಿದುಕೊಳ್ಳಲು ಬಿಡಿಎ ಹೊಂಚುಹಾಕಿದೆ.
ಉದ್ದೇಶಿತ 100 ಮೀಟರ್ ಅಗಲದ ಪಿಆರ್‌ಆರ್–2 ರಸ್ತೆಗಾಗಿ 854 ಎಕರೆ ಮತ್ತು ಆರು ಬಡಾವಣೆಗಳ ನಿರ್ಮಾಣಕ್ಕಾಗಿ 4,959 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಿಡಿಎ ಯೋಜಿಸಿದೆ. ಅದಕ್ಕಾಗಿ, ಬಿ.ಎಂ ಕಾವಲು, ದೇವಗೆರೆ, ಗುಡಿಮಾವು, ಗಂಗಸಂದ್ರ, ಕಂಬೀಪುರ, ಅಗರ, ಉತ್ತರಿ, ಗುಳಕಮಲೆ, ಒ.ಬಿ ಚೂಡಹಳ್ಳಿ ಹಾಗೂ ಕಗ್ಗಲೀಪುರ ಗ್ರಾಮಗಳ ವ್ಯಾಪ್ತಿಯಲ್ಲಿರುವ 58 ಹಳ್ಳಿಗಳ ಮೇಲೆ ಬಿಡಿಎ ವಕ್ರದೃಷ್ಟಿ ಬಿದ್ದಿದೆ.
ಆದರೆ, ರಸ್ತೆ ಮತ್ತು ಬಡಾವಣೆಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ಪ್ರಾಥಮಿಕ ಗೆಜೆಟ್ ಅಧಿಸೂಚನೆ ಈವರೆಗೆ ಬಂದಿಲ್ಲ. ಅಧಿಸೂಚನೆಯೇ ಬಾರದೇ ಇದ್ದರೂ, ಹಳ್ಳಿಗಳ ರೈತರ ಮೇಲೆ ಈಗಾಗಲೇ ಬಿಡಿಎ ತನ್ನ ದರ್ಪ ತೋರಿಸಲು ಮುಂದಾಗಿದೆ. ಹೊಸದಾಗಿ ಮನೆ ಕಟ್ಟುತ್ತಿರುವ ರೈತರು ಮತ್ತು ಗ್ರಾಮ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕೊಡದಂತೆ ಬೆಸ್ಕಾಂಗೆ ಬಿಡಿಎ ಕಾರ್ಯಪಾಲಕ ಎಂಜಿನಿಯರ್ (ನಾಡಪ್ರಭು ಕೆಂಪೇಗೌಡ ಬಡಾವಣೆ ವಿಭಾಗ) ಅಶೋಕ್ ಪತ್ರ ಬರೆದಿದ್ದಾರೆ.
ಬೆಸ್ಕಾಂಗೆ ಬರೆದ ಪತ್ರದಲ್ಲಿ, “ಬಿಡಿಎ ವತಿಯಿಂದ ಪಿಆರ್‌ಆರ್-2 ಯೋಜನೆ ಮತ್ತು ಯೋಜನೆಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆರು ಬಡಾವಣೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಯೋಜನಾ ವರದಿಯನ್ನು ಹಾಗೂ ಯೋಜನಾ ನಕ್ಷೆಯನ್ನು ತಯಾರಿಸುವ ಪ್ರಕ್ರಿಯೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪ್ರಯತಿಯಲ್ಲಿದೆ. ಪ್ರಸ್ತುತ ಪರಿವೀಕ್ಷಣೆಯ ಸಮಯದಲ್ಲಿ ಹೊಸದಾಗಿ ಅನಧಿಕೃತ ಕಟ್ಟಡ/ಬಡಾವಣೆ ನಿರ್ಮಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ, ಆ ಗ್ರಾಮಗಳಿಗೆ ಬೆಸ್ಕಾಂ ಒದಗಿಸಿರುವ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲು ಹಾಗೂ ಶಾಸ್ವತ ವಿದ್ಯುತ್ ಸಂಪರ್ಕ ಕಲ್ಪಿಸಬಾರದೆಂದು ಕೋರಿದ್ದೇವೆ” ಎಂದು ಬಿಡಿಎ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಸೂಚಿಸಿದ್ದಾರೆ.

ರಸ್ತೆ ಮತ್ತು ಬಡಾವಣೆ ನಿರ್ಮಾಣಕ್ಕೆ ಸರ್ಕಾರವು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರವೇ ಬಿಡಿಎ ಭೂಸ್ವಾಧೀನ ಮತ್ತು ಇತರ ಪ್ರಕ್ರಿಯೆಗಳನ್ನು ಆರಂಭಿಸಬೇಕು. ಆದರೆ, ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್‌ಅನ್ನು ಹೊರಡಿಸಿಯೇ ಇಲ್ಲ. ರಸ್ತೆ ಮತ್ತು ಬಡಾವಣೆ ಅಭಿವೃದ್ಧಿಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿವರಿಸಿಯೂ ಇಲ್ಲ. ಆದರೂ, ಬಿಡಿಎ ಏಕಾಏಕಿ ಗ್ರಾಮಗಳ ನಿವಾಸಿಗಳ ಮೇಲೆ ಆಕ್ರಮಣಕಾರಿ ದರ್ಪ ತೋರಿಸಲು ಮುಂದಾಗಿದೆ. ಗ್ರಾಮಗಳ ಜನರು ಮನೆಗಳನ್ನು ಕಟ್ಟಿಕೊಳ್ಳುವುದನ್ನೂ ತಡೆಯಲು ಹೊಂಚುಹಾಕುತ್ತಿದೆ. ಹೀಗಾಗಿಯೇ, ವಿದ್ಯುತ್ ಸಂಪರ್ಕ ಕಡಿತಕ್ಕಾಗಿ ಬೆಸ್ಕಾಂಗೆ ಪತ್ರ ಬರೆದಿದೆ.
ಈ ಪತ್ರವು ಕಾನೂನುಬಾಹಿರವಾಗಿದ್ದು, ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ಬೆಸ್ಕಾಂಗೆ ಪತ್ರ ಬರೆದಿದ್ದಾರೆ. ಗಮನಾರ್ಹವೆಂದರೆ, ಅಶೋಕ್ ಅವರು ನಾಡಪ್ರಭು ಕೆಂಪೇಗೌಡ ಬಡಾವಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆಗಿದ್ದಾರೆ. ಸದರಿ ಗ್ರಾಮಗಳು ಅಥವಾ ಉದ್ದೇಶಿತ ಆರು ಬಡಾವಣೆಗಳು ಅಧಿಕಾರಿ ಅಶೋಕ್ ಅವರ ವ್ಯಾಪ್ತಿಗೂ ಬರುವುದಿಲ್ಲ. ಈ ಪ್ರದೇಶವು ಪಿಆರ್‌ಆರ್-2 ವ್ಯಾಪ್ತಿಗೆ ಬರುತ್ತದೆ. ಉದ್ದೇಶಿತ ಪಿಆರ್‌ಎರ್-2 ಮತ್ತು ಆರು ಬಡಾವಣೆಗಳಿಗೂ ಈ ಅಧಿಕಾರಿಗೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ, ಅಶೋಕ್ ತಮ್ಮ ವ್ಯಾಪ್ತಿಯನ್ನು ಮೀರಿ ಬೆಸ್ಕಾಂಗೆ ಪತ್ರ ಬರೆದಿದ್ದಾರೆ.
ಈ ಪತ್ರವು ಗ್ರಾಮಸ್ಥರಿಗೆ ದೊರೆತಿದ್ದು, ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಅವರನ್ನು ಅವರ ಕಚೇರಿಯಲ್ಲಿಯೇ ಭೇಟಿ ಮಾಡಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ತರ ಪ್ರಶ್ನೆಯಿಂದ ತಬ್ಬಿಬ್ಬಾದ ಅಧಿಕಾರಿ ಅಶೋಕ್, ‘ಮೇಲಿನವರ ಒತ್ತಡದಿಂದ ಪತ್ರ ಬರೆದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಂಡು, ಗ್ರಾಮಸ್ಥರು ತಮ್ಮ ಬಳಿಗೆ ಬಾರದಂತೆ ತಡೆದಿದ್ದಾರೆ.
ಮತ್ತೊಂದು ಗಮನಾರ್ಹವೆಂದರೆ, ಇದೇ ಎಂಜಿನಿಯರ್ ಅಶೋಕ್ ಅವರ ವ್ಯಾಪ್ತಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 2008ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ, 2010ರಲ್ಲಿಯೇ ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅಂದಿನಿಂದಲೇ ಬಡಾವಣೆ ನಿರ್ಮಾಣ ಕೆಲಸಗಳು ಆರಂಭವಾಗಿದ್ದವು. ಇದೀಗ, 15 ವರ್ಷಗಳೇ ಕಳೆದಿವೆ. ಆದರೂ, ಈ ಬಡಾವಣೆಗೆ ಇದೂವರೆಗೂ ಅಗತ್ಯ ಮೂಲಸೌಕರ್ಯಗಳನ್ನು ಬಿಡಿಎ ಒದಗಿಸಿಲ್ಲ. ರಸ್ತೆ, ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆಗಳನ್ನು ಒದಗಿಸಲಾಗಿಲ್ಲ. ಇಡೀ ಬಡಾವಣೆಯಲ್ಲಿ ಬೇಲಿಗಳು, ಗಿಡ-ಗಂಟಿಗಳು ಬೆಳೆದುಕೊಂಡಿವೆ.
ಈ ವರದಿ ಓದಿದ್ದೀರಾ?: ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಯಾರ ಹೊಣೆ?; ಅವರೂ ನಮ್ಮ ಮಕ್ಕಳಂತೆ ಅಲ್ಲವೇ?
ಈ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಖರೀದಿ ಮಾಡಿದವರು ಮನೆ ಕಟ್ಟಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಬಿಡಿಎ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೂ, ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ತಮ್ಮದೇ ವ್ಯಾಪ್ತಿಯಲ್ಲಿರುವ ಬಡಾವಣೆಗೆ ವಿದ್ಯುತ್ ಸಂಪರ್ಕವೂ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗದ ಎಂಜಿನಿಯರ್ ಅಶೋಕ್ ಅವರು ತಮ್ಮ ವ್ಯಾಪ್ತಿಗೆ ಬಾರದ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ನೀಡದಂತೆ ಬೆಸ್ಕಾಂಗೆ ಪತ್ರ ಬರೆದಿದ್ದಾರೆ.

ವಿದ್ಯುತ್ ಸಂಪರ್ಕ ಪಡೆಯುವುದು ಪ್ರತಿಯೊಬ್ಬ ನಿವಾಸಿಯ ಅಗತ್ಯ ಮತ್ತು ಮೂಲ ಹಕ್ಕು. ಅದನ್ನೇ ಕಸಿದುಕೊಳ್ಳಲು ಬಿಡಿಎ ಮುಂದಾಗಿದೆ. ಗ್ರಾಮಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸಲು ಮುಂದಾಗಿದ್ದ ಜನರು ಬಿಡಿಎ ಅಧಿಕಾರಿಗಳ ದರ್ಪದಿಂದಾಗಿ ಕಂಗಾಲಾಗಿದ್ದಾರೆ. ತಾವು ನಿರ್ಮಿಸುತ್ತಿರುವ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ, ಬದುಕುವುದೇ ಹೇಗೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಬಿಡಿಎ ಬರೆದಿರುವ ಪತ್ರವನ್ನು ನಿರ್ಲಕ್ಷಿಸಿ, ಯಥಾಪ್ರಕಾರ ವಿದ್ಯುತ್ ಒದಗಿಸುವಂತೆ ಗ್ರಾಮದ ನಿವಾಸಿಗಳು ಬೆಸ್ಕಾಂಗೆ ಪತ್ರ ಬರೆದಿದ್ದಾರೆ.
ಬಿಡಿಎ ದರ್ಪದ ಬಗ್ಗೆ ಈದಿನ.ಕಾಮ್ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, “ಬಡ ರೈತರು, ಭೂಮಿಯ ಮಾಲೀಕರು ಮತ್ತು ಗ್ರಾಮಸ್ಥರಿಗೆ ಭೂಸ್ವಾಧೀನ ಅಥವಾ ಇತರ ಪ್ರಕ್ರಿಯೆಗಳ ಬಗ್ಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಆದರೂ, ಬಿಡಿಎ ಅಧಿಕಾರಿ ಅಶೋಕ್ ಅವರು ಕಾನೂನುಬಾಹಿರವಾಗಿ ಬೆಸ್ಕಾಂಗೆ ಪತ್ರ ಬರೆದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ಧೋರಣೆಯಾಗಿದೆ. ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ಸಾರ್ವಜನಿಕರ ಹಕ್ಕು. ಅದನ್ನು ಅಧಿಕಾರಿಗಳು ಕಿತ್ತುಕೊಳ್ಳುತ್ತಿದ್ದಾರೆ. ಜನರ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರು, ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಿಸಬೆಕು. ತಮ್ಮ ಬಿಡಿಎ ಅಧಿಕಾರಿಗಳಿಗೆ ಬುದ್ದಿಹೇಳಿ, ಜನರಿಗೆ ತೊಂದರೆಯಾಗದಂತೆ ಸೂಕ್ತ ಮಾರ್ಗದರ್ಶನ ನೀಡಿ, ಜನರ ಹಿತಕಾಯಬೇಕು” ಎಂದು ಆಗ್ರಹಿಸಿದ್ದಾರೆ.