ಜಮೈಕದ ರೆಗ್ಗೀ ಘರಾಣದ ಗಾಯಕ, ರಾಸ್ಟಾಫರೈನ್ (ಕ್ಯಾಥೋಲಿಕ್‌ಗಿಂತ ಭಿನ್ನವಾದ ಧರ್ಮ ಮತ್ತು ಸಾಮಾಜಿಕ ಆಂದೋಲನ ಮಾರ್ಗದ ಮಿಸಳ್) ಮಾರ್ಲೈಯ ಹೆಸರನ್ನು ಒಳಗೊಂಡ ಕೆ.ಪಿ.ಲಕ್ಷ್ಮಣ್ ನಿರ್ದೇಶನದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ (Bob Marley from kodihalli) ನಾಟಕ ರಂಗಭೂಮಿಯ ಎಲ್ಲಾ ಸಿದ್ಧ ಮಾದರಿಯನ್ನು ತುಂಡರಿಸಿದೆ, ಎಲ್ಲ ಗಡಿಗಳನ್ನು ದಾಟಿ ತನ್ನದೇ ಹೊಸ ದಾರಿ ನಿರ್ಮಿಸಿದೆ. ರೆಗ್ಗೀ ಗಾಯಕ ಮಾರ್ಲೈಗೆ ನುಡಿನಮನದ ಭಾಗವಾಗಿ ಸ್ಕ್ರಿಪ್ಟ್ ರಚನೆಯಾದರೂ ಸಹ ಪ್ರಾರಂಭವಾಗಿ ಕೆಲವೇ ನಿಮಿಷಗಳಲ್ಲಿ ನಾಟಕ ಜಮೈಕಾದಿಂದ ಭಾರತಕ್ಕೆ ಸ್ಥಳಾಂತರವಾಗಿ ದಲಿತರ ಬದುಕಿನ ಶೋಷಣೆಯ ಕಥನದ ಹಲವು ಆಯಾಮಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ.
ಖಾಲಿ ಸ್ಟೇಜ್ ಮತ್ತು ಮಾರ್ಲೈನ ಜನಪ್ರಿಯ Get up, stand up Stand up for your right ಹಾಡಿನ ಮೂಲಕ ನಾಟಕ ಶುರುವಾಗುತ್ತದೆ. ನಂತರ, ಕೋಡಿಹಳ್ಳಿಯಿಂದ ನಗರಕ್ಕೆ ವಲಸೆ ಬಂದ ಗಾಯಕ, ಕರ್ನಾಟಕದ ಯಾವುದೋ ಮೂಲೆಯಿಂದ ನಗರಕ್ಕೆ ಬಂದ ಇಂಗ್ಲಿಷ್ ಶಿಕ್ಷಕಿ ಮತ್ತು ಕಲಾವಿದ ಈ ಮೂವರ ನಡುವಿನ ಒಂದು ಸಂಜೆ ಮತ್ತು ರಾತ್ರಿಯ ಬದುಕಿನ ಸುತ್ತ ಕತೆ ಬಿಚ್ಚಿಕೊಳ್ಳುತ್ತದೆ. ‘ದಲಿತರಾಗಿ ಹುಟ್ಟಿದ ಕಾರಣ…’ ಎನ್ನುವ ಸಾಮಾಜಿಕ ಹಿಂಸೆಯು ಮೂವರಿಗೂ ಮಾನಸಿಕವಾಗಿ ಬೆಂಬಿಡದೆ ದಾಳಿ ಮಾಡುತ್ತಲೇ ಇರುತ್ತದೆ. ಜಾತಿ ನರಕದ ಕೊಚ್ಚೆಯಾಗಿರುವ ಹಳ್ಳಿಯಿಂದ ಬಿಡುಗಡೆಗಾಗಿ ನಗರಕ್ಕೆ ಬಂದರೂ ಸಹ ಬೆಂಬಿಡದ ಜಾತಿ ತಾರತಮ್ಯದ ಅನುಭವ ಮೂವರ ನಡುವೆ ಸಾಮಾನ್ಯವಾಗಿದ್ದರೂ ಸಹ ಪ್ರತಿರೋಧ ಭಿನ್ನವಾಗುವ ಕಥನವೆ ಇಲ್ಲಿನ ಜೀವಾಳ.
ಪ್ರಭುತ್ವ ಫ್ಯಾಸಿಸಂ ಮತ್ತು ಜಾತಿ ಅಸಮಾನತೆಯ ವ್ಯವಸ್ಥೆ ಫ್ಯಾಸಿಸಂ ಕುರಿತು ಮಾತನಾಡುವ ಇಡೀ ನಾಟಕವು ಬ್ರೆಕ್ಟ್‌ನ ಎಪಿಕ್ ರಂಗಭೂಮಿಯ ಪ್ರಯೋಗದಂತಿದೆ. ಇಲ್ಲಿನ ವಿನೋದ ದೃಶ್ಯಗಳಿಗೆ ದಕ್ಕಿದ ಸರ್ರಿಯಲಿಸಂನ ಸ್ಪರ್ಶದ ಕಾರಣ ರಂಗದ ಮೇಲೆ ಎಪಿಕ್ ಮಾದರಿ ಸಾಕಾರಗೊಂಡಿದೆ. ನಾಟಕದಲ್ಲಿ ವಿನೋದ ದೃಶ್ಯಗಳು ಭೌತಿಕವಾಗಿ ಪ್ರದರ್ಶನಗೊಂಡರೆ ತಾತ್ವಿಕವಾಗಿ ಅದು ವಿಷಾದದ ದನಿಯಾಗಿರುತ್ತದೆ. ಇಲ್ಲಿ ವಿಷಾದ ಮತ್ತು ಪ್ರತಿರೋಧ ಪರಸ್ಪರ ಡಿಕ್ಕಿ ಹೊಡೆಯುತ್ತಲೇ ಇಡೀ ನಾಟಕದ ಸ್ಥಾಯೀಭಾವವಾಗಿರುವುದು ಎಪಿಕ್ ಪ್ರಯೋಗದ ಗೆಲುವು. ಗ್ರಾಮ ಭಾರತದ ಫ್ಯೂಡಲ್-ಬ್ರಾಹ್ಮಣಶಾಹಿಯ ಜಾತಿ ದೌರ್ಜನ್ಯದ ಎಲ್ಲಾ ಸಂಕೋಲೆಗಳನ್ನು ಕತ್ತರಿಸಿಕೊಂಡು ನಗರದ ಕಾಸ್ಮೋಪಾಲಿಟನ್ ವಾತಾವರಣದಲ್ಲಿ ಸ್ವಾತಂತ್ರ್ಯ, ಸಮಾನತೆಯನ್ನು ಅನುಭವಿಸಬಹುದೇ? ತಲ್ಲಣಗೊಳಿಸುವ ಇಂತಹ ಪ್ರಶ್ನೆಗೆ ನಿರ್ದೇಶಕರು ನಾಟಕದ ಕೊನೆಗೆ ʼಶ್ರೇಷ್ಠ ಕನಿಷ್ಠ ಅನ್ನೋದು ಇರೋವರೆಗೂ ಸಂಘರ್ಷ, ಹೋರಾಟ ಇದ್ದೇ ಇರುತ್ತದೆʼ ಎನ್ನುವ ರಾಕ್ ಶೈಲಿಯ ಹಾಡಿನ ಮೂಲಕ (ಇದು ಆರಂಭದಲ್ಲಿ ಬರುವ ಮರ್ಲೈನ ಹಾಡಿನ ಕನ್ನಡ ರೂಪಾಂತರ) ಉತ್ತರಿಸಿದ್ದಾರೆ.
ಆದರೆ, ಹಳ್ಳಿಯಲ್ಲಿ ಐಡೆಂಟಿಟಿ ಕಾರಣಕ್ಕೆ ಶೋಷಣೆಗೆ ಒಳಗಾಗುವ ದಲಿತರು ನಗರಕ್ಕೆ ವಲಸೆ ಬಂದರೂ ಸಹ ಮತ್ತೊಂದು ರೂಪದಲ್ಲಿ ಅದೇ ಗುರುತಿನ ಕಾರಣಕ್ಕೆ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ ಎನ್ನುವ ವಾಸ್ತವ ಕಥನವನ್ನು ಮುರಿಯಲು ಪ್ರಯತ್ನಿಸುವ ‘dalit assertion’ ಈ ನಾಟಕದ ಆತ್ಮ. ಪ್ರೇಕ್ಷಕರನ್ನು ಉದ್ದೇಶಿಸಿ ಗಾಯಕ ಹೇಳುವ ʼಪಾಪ ನೀವೇನು ಮಾಡುತ್ತೀರಿ, ಸುಮ್ಮನೆ ನೋಡುತ್ತೀರಿ ಅಷ್ಟೆʼ ಮಾತುಗಳು ಲಿಬರಲ್ ಮುಖ ಸಾಮಾಜಿಕ ಮೌಲ್ಯವಾಗಲಿಲ್ಲ ಎಂದು ಧ್ವನಿಸುತ್ತದೆ. ಇಲ್ಲಿ ಎನ್.ಕೆ. ಹನುಮಂತಯ್ಯನವರ ಕವಿತೆಯ ಸಾಲುಗಳು, ವೇಮುಲ ಬರೆದ ಪತ್ರದ ಸಾಲುಗಳು ನಾಟಕದ ಅಥೆಂಟಿಕ್ ಭಾಷೆಯಂತಿದೆ. ಹಿನ್ನಲೆಯಲ್ಲಿ ಬರುವ ಅಂಬೇಡ್ಕರ್ ಅವರ ʼವೇಟಿಂಗ್ ಫಾರ್ ವೀಸಾʼ ಬರಹದ ಸಾಲುಗಳು ನಾಟಕದ ಗಾಯಕ, ಶಿಕ್ಷಕಿ, ಕಲಾವಿದ ನಗರಕ್ಕೆ ಬಂದರೂ ಸಹ… ಎನ್ನುವ ಕಹಿ ಅನುಭವದ ಕನ್ನಡಿಯಂತಿದೆ.
ರಂಗಭೂಮಿ ಪ್ರಯೋಗದಲ್ಲಿ ಅನೇಕ ದಾರಿಗಳನ್ನು ತೆರೆದಿಡುವ Bob Marley from kodihalli ನಾಟಕ ಈ ಕಾಲದ ಅಗತ್ಯವಾಗಿತ್ತು. ಬಹು ಮುಖ್ಯ ಎಪಿಕ್ ಮಾದರಿಯಾಗಿದೆ.
ಸಮರ್ಥ ಅಭಿನಯ ನೀಡಿದ ಚಂದ್ರು, ಶ್ವೇತಾ, ಭರತ್ ಅವರಿಗೆ, ಮಹತ್ವದ ನಾಟಕ ಕೊಟ್ಟ ನಿರ್ದೇಶಕ ಲಕ್ಷ್ಮಣ್ ಅವರಿಗೆ ಶರಣು…