ಉತ್ತರಪ್ರದೇಶದ ಅಯೋಧ್ಯೆಯಿಂದ ಶ್ರಾವಸ್ತಿಯ ತನಕ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮಾಲೀಕ ಈತ. ಈ ಸಂಸ್ಥೆಗಳೇ ಬ್ರಿಜಭೂಷಣನ ಚುನಾವಣಾ ಯಂತ್ರವನ್ನು ಸಲೀಸಾಗಿ ನಡೆಸಿಕೊಡುತ್ತವೆ. ಹೀಗಾಗಿ ಈತನಿಗೆ ಬಿಜೆಪಿ ಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಈತ ಬೇಕೇ ಬೇಕು
ಮಂಗಳೂರು ಸೀಮೆಯ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬರಲಿದೆ. ಇದೇ 25-26ರಂದು ಅರಮನೆ ಮೈದಾನದಲ್ಲಿ ಪುಟ್ಟ ದಕ್ಷಿಣ ಕನ್ನಡವೊಂದು ಮೈತಳೆದು ಸಂಭ್ರಮಿಸಲಿದೆ. ಇದು ಸಂತಸದ ಸಂಗತಿಯೇ ಹೌದು. ಬೆಂಗಳೂರು ಕಂಬಳ ಸಮಿತಿ ಎಂಬ ಖಾಸಗಿ ಸಂಘಟನೆಗೆ ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಒಂದು ಕೋಟಿ ರುಪಾಯಿ ನೆರವು ನೀಡಿದೆ.
ಆದರೆ ಈ ಕ್ರೀಡಾ ಸಡಗರಕ್ಕೆ ಮುಖ್ಯ ಅತಿಥಿಯಾಗಿ ಪ್ರಚಂಡ ಪುಂಡ, ಆತ್ಯಾಚಾರಗಳ ಆರೋಪಿ, ಪರಮ ಪಾತಕಿಯೊಬ್ಬನನ್ನು ಆಹ್ವಾನಿಸಲಾಗಿದೆ! ಆಘಾತಕಾರಿ ಬೆಳವಣಿಗೆಯಿದು. ವಿಚಿತ್ರವೆಂದರೆ ಈ ಪಾತಕಿಯನ್ನು ಆಹ್ವಾನಿಸುವಂತೆ ಉತ್ತರಕನ್ನಡದ ಸಿದ್ದಿ ಜನಾಂಗದಿಂದ ಭಾರೀ ಬೇಡಿಕೆ ಬಂದಿತ್ತಂತೆ! ಹಾಗೆಂದು ಸಂಘಟಕ ಮತ್ತು ಕಾಂಗ್ರೆಸ್ ಶಾಸಕ ಅಶೋಕ್ ರೈ ಹೇಳಿದ್ದಾರೆ. ಅಂದ ಹಾಗೆ ರೈ ಅವರು ಇತ್ತೀಚಿನ ತನಕ ಬಿಜೆಪಿಯಲ್ಲಿದ್ದವರು. ಆಫ್ರಿಕಾ ಮೂಲದ ಸಿದ್ದಿ ಜನಾಂಗಕ್ಕೂ ಉತ್ತರಪ್ರದೇಶದ ಈ ರಜಪೂತ ಸಂಜಾತನಿಗೂ ಎತ್ತಣ ಸಂಬಂಧವೋ!
ಕರ್ನಾಟಕದ ರಾಜಕಾರಣ ಇನ್ನೂ ಉತ್ತರಪ್ರದೇಶದಷ್ಟು ಅಪರಾಧೀಕರಣಕ್ಕೆ ತುತ್ತಾಗಿಲ್ಲ. ಯೂಪಿ-ಬಿಹಾರದಂತೆ ಪುಂಡರು ಮಾಫಿಯಾಗಳು ರೌಡಿಗಳ ತೋಳ್ಬಲ ಕರ್ನಾಟಕವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ದುರ್ದಿನಗಳು ಇನ್ನೂ ಬಂದಿಲ್ಲ. ರಾಜ್ಯ ಸರ್ಕಾರ ಕಣ್ಣು ತೆರೆದು ಇಂತಹ ಬೆಳವಣಿಗೆಯನ್ನು ಚಿವುಟಬೇಕು. ಕಂಬಳಕ್ಕೆ ಬ್ರಿಜಭೂಷಣ್ ಅತಿಥಿ ಎಂಬ ಬಗ್ಗೆ ಈ ದಿನ.ಕಾಮ್ ಮಾಡಿದ ವರದಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರ ಫಲಶ್ರುತಿ ಎಂಬಂತೆ, ಆತ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.
ಬಿಜೆಪಿಯ ಬಾಹುಬಲಿ
ಬಿಜೆಪಿಯ ಸಂಸದನೂ ಆಗಿರುವ ಈ ಚಂಡಪ್ರಚಂಡ ಬ್ರಿಜಭೂಷಣ್ ಶರಣ್ ಸಿಂಗ್. ಉತ್ತರಪ್ರದೇಶದ ಬಿಜೆಪಿ ‘ಬಾಹುಬಲಿ’. ಒಲಿಂಪಿಕ್ಸ್ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಾಲಿಕ್ ಮತ್ತು ವಿನೇಶಾ ಫೋಗಟ್ ಮುಂತಾದ ಹಲವು ಹತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಶೋಷಣೆಯನ್ನು ನಡೆಸಿದ ಗಂಭೀರ ದೂರುಗಳನ್ನು ಹೊತ್ತವನು ಈತ. ಕಾನೂನು ವ್ಯವಸ್ಥೆಗೆ ಸವಾಲೆಸೆದು ಗೇಲಿ ಮಾಡಿ ಸೆಡ್ಡು ಹೊಡೆದವನಿವನು.
ಇವನ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಹೆಣ್ಣುಮಕ್ಕಳ ಬೆನ್ನು ಹತ್ತುವ ಅಪರಾಧಗಳಡಿ ಚಾರ್ಜ್ ಶೀಟ್ ಸಲ್ಲಿಸಲು ಯಥೇಚ್ಛ ಸಾಕ್ಷ್ಯ, ಪುರಾವೆಗಳಿವೆ. ತನ್ನ ಕುಕೃತ್ಯಗಳ ಮೇಲೆ ಪರದೆ ಎಳೆದು ಮುಚ್ಚಿಡುವ ಪ್ರಯತ್ನ ನಡೆಸಿದ ಎಂದು ದೆಹಲಿ ಪೊಲೀಸರು ಎರಡು ತಿಂಗಳ ಹಿಂದೆಯಷ್ಟೇ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದ್ದರು. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಈತ ಲೈಂಗಿಕ ಹಲ್ಲೆ ನಡೆಸಿರುವ ಆರೋಪವನ್ನು ಬಾಲಕಿಯ ತಂದೆ ನಿಗೂಢವಾಗಿ ವಾಪಸು ಪಡೆದರು.
ಬ್ರಿಜಭೂಷಣ ಶರಣ್ ಸಿಂಗ್ ಭಾರತೀಯ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ. ಉತ್ತರಪ್ರದೇಶದ ಗೊಂಡಾ ಸೀಮೆಯ ಬಲಿಷ್ಠ ಪ್ರಭಾವಶಾಲಿ ರಜಪೂತ. ವಯಸ್ಸು 66. ಆರರಲ್ಲಿ ಐದು ಸಲ ಬಿಜೆಪಿ ಸಂಸದ. ಫೆಡರೇಷನ್ನಿನ ಅಧ್ಯಕ್ಷರಾಗಿ ಕಳೆದ 11 ವರ್ಷಗಳಲ್ಲಿ ಅದೆಷ್ಟು ಮಂದಿ ಹೆಣ್ಣುಮಕ್ಕಳ ಲೈಂಗಿಕ ಶೋಷಣೆ ಮಾಡಿದ್ದಾರೋ, ಲೆಕ್ಕವಿಲ್ಲ ಎನ್ನುತ್ತಾರೆ ವಿನೇಶ್ ಪೋಗಟ್, ಸಾಕ್ಷಿ ಮಲ್ಲಿಕ್ ಮುಂತಾದ ಕ್ರೀಡಾಪಟುಗಳು ತಿಂಗಳುಗಟ್ಟಲೆ ದೆಹಲಿಯಲ್ಲಿ ಧರಣಿ ಕುಳಿತು ಕಣ್ಣೀರು ಹಾಕಿದ್ದರು. ಈತನ ಮೇಲೆ ಕ್ರಮಕ್ಕಾಗಿ ಆಗ್ರಹಿಸಿದ್ದರು. ಆದರೆ ನರೇಂದ್ರ ಮೋದಿಯವರ ಸರ್ಕಾರ ಈತನ ಕೂದಲನ್ನೂ ಕೊಂಕಿಸಲಿಲ್ಲ. ಈತನ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಳ್ಳಲು ದೆಹಲಿ ಪೊಲೀಸರು ತಯಾರಿರಲಿಲ್ಲ. ದೆಹಲಿ ಪೊಲೀಸರ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿದೆ. ಕಡೆಗೆ ಸುಪ್ರೀಮ್ ಕೋರ್ಟ್ ಆದೇಶದ ನಂತರ ಪೊಲೀಸರಿಗೆ ಬೇರೆ ದಾರಿ ಉಳಿಯಲಿಲ್ಲ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸೀಟುಗಳನ್ನು ಗೆಲ್ಲಿಸಿಕೊಡಲು ಬ್ರಿಜಭೂಷಣ್ ಬಿಜೆಪಿಗೆ ಬೇಕೇ ಬೇಕು. ಬೇಟಿ ಬಚಾವೊ ಎಂದು ರಜಪೂತ ತಲೆಯಾಳು ಬ್ರಿಜಭೂಷಣನನ್ನು ಜೈಲಿಗೆ ಹಾಕಿದರೆ ಸೀಟು ಗೆಲ್ಲಿಸಿಕೊಡುವವರು ಯಾರು ಎಂಬುದು ಮೋದಿಯವರ ಚಿಂತೆ.
ಹೆಲಿಕಾಪ್ಟರುಗಳಲ್ಲೇ ಬ್ರಿಜಭೂಷಣ್ ಸಂಚಾರ. ಅಡಿಗಡಿಗೆ ಕಾಲಿಗೆ ಬಿದ್ದು ನಮಿಸುವ ಅನುಯಾಯಿಗಳು. ಹಿಂದೆ ಮುಂದೆ ಸರ್ಕಾರಿ ಅಂಗರಕ್ಷಕರು. ಕೊರಳ ತುಂಬ ಹೂಮಾಲೆಗಳು. ಹಣೆಯ ಮುಚ್ಚುವಂತೆ ಬಳಿದುಕೊಂಡು ನಡುವೆ ದೊಡ್ಡ ಕುಂಕುಮ ಧರಿಸಿದ ವ್ಯಸನಗಳ ಸರದಾರನಂತಹ ಮುಖಚಹರೆ. ಚಿನ್ನದಲ್ಲಿ ಸುತ್ತಿದ ರುದ್ರಾಕ್ಷಿ ಸರಗಳು, ಜರತಾರಿ ದಿರಿಸು. ತಲೆಯ ಮೇಲೆ ಮುತ್ತಿನ ಸರ ತೊಡಿಸಿದ ಬಣ್ಣಬಣ್ಣದ ಮುಕುಟ. ವಿಶ್ವಹಿಂದೂ ಪರಿಷತ್ ನ ಉಚ್ಚ ನಾಯಕ ಅಶೋಕ್ ಸಿಂಘಲ್ ಆಪ್ತನೀತ. ಭಾರತೀಯ ಜನತಾ ಪಕ್ಷ ತನಗೆ ವಹಿಸಿ ಕೊಟ್ಟ ಎಲ್ಲ ಕೆಲಸ ಕಾರ್ಯಗಳನ್ನೂ ಯಶಸ್ವಿಯಾಗಿ ಮಾಡಿ ತೋರಿಸಿದ್ದಾನೆ.
ಹರೆಯದಲ್ಲಿ ಕುಸ್ತಿ ಆಡುತ್ತಿದ್ದ. 80ರ ದಶಕದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಭಾಗಿಯಾಗಿದ್ದ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮದಲ್ಲಿ ಪಾಲ್ಗೊಂಡು ಹಿಂದುತ್ವ ವರ್ಚಸ್ಸು ಗಳಿಸಿಕೊಂಡವನು.
ಉತ್ತರಪ್ರದೇಶದ ಅಯೋಧ್ಯೆಯಿಂದ ಶ್ರಾವಸ್ತಿಯ ತನಕ ನೂರು ಕಿ.ಮೀ. ಸುತ್ತಳತೆಯ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮಾಲೀಕ ಈತ. ಈ ಸಂಸ್ಥೆಗಳೇ ಬ್ರಿಜಭೂಷಣನ ಚುನಾವಣಾ ಯಂತ್ರವನ್ನು ಸಲೀಸಾಗಿ ನಡೆಸಿಕೊಡುತ್ತವೆ. ಹೀಗಾಗಿ ಈತನಿಗೆ ಬಿಜೆಪಿ ಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಈತ ಬೇಕೇ ಬೇಕು ಚುನಾವಣೆಗಳನ್ನು ಗೆಲ್ಲಲು.

ತನ್ನ ತವರು ಜಿಲ್ಲೆ ಗೊಂಡಾ ಮತ್ತು ಸುತ್ತಮುತ್ತಲ ಕನಿಷ್ಠ ಆರು ಜಿಲ್ಲೆಗಳಲ್ಲಿ ಈತನ ದಟ್ಟ ಪ್ರಭಾವ ಹಬ್ಬಿ ನೆಲೆಸಿದೆ. ಬಹ್ರೇಚ್, ಗೊಂಡಾ, ಬಲರಾಂಪುರ್, ಶ್ರಾವಸ್ತಿ ಹಾಗೂ ಅಯೋಧ್ಯಾ ಜಿಲ್ಲೆಗಳಲ್ಲಿ ಈತನ ಐವತ್ತು ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆಗಳು ಈತನ ರಾಜಕೀಯ ಪ್ರಭಾವದ ಹೊಳಪು ಹೆಚ್ಚಿಸಿವೆ. ರಾಜಕೀಯ ಉದ್ದೇಶಕ್ಕೆಂದು ಇವುಗಳನ್ನು ಸ್ಥಾಪಿಸಲಿಲ್ಲ. ಆದರೆ ಇಂದು ವಿದ್ಯಾರ್ಥಿಗಳು ನನ್ನ ಸುತ್ತ ತಿರುಗುತ್ತಾರೆ. ಜನ ನನ್ನನ್ನು ಮಾಫಿಯಾ ಎಂದು ಕರೆಯಬಹುದು. ಆದರೆ ವಿದ್ಯಾರ್ಥಿಗಳ ಪಾಲಿಗೆ ನಾನು ಆದರ್ಶಮೂರ್ತಿ. ಈ ಹಿಂದೆ ನಾನು ಬ್ರಾಹ್ಮಣರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಿದ್ದೆ. ಈಗ ಬ್ರಾಹ್ಮಣ ಯುವಕರು ನನ್ನ ಕಾಲು ಮುಟ್ಟಿ ಗುರೂಜೀ ಎಂದು ಕರೆಯುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ಬ್ರಿಜಭೂಷಣ್. ಈ ಕಾರಣಗಳಿಗಾಗಿಯೇ ಬ್ರಿಜಭೂಷಣ್ ತನ್ನ ಸೀಮೆಯಲ್ಲಿ ಬಿಜೆಪಿಗಿಂತ ಬಲಿಷ್ಠ. ತನ್ನದೇ ಪಕ್ಷಕ್ಕೆ ಸವಾಲೆಸೆಯಬಲ್ಲ ಮತ್ತು ಅದರ ತೀರ್ಮಾನಗಳನ್ನು ಪ್ರಶ್ನಿಸಬಲ್ಲ. ಹಾಗೆ ಮಾಡಿದ ನಂತರ ಕೂದಲೂ ಕೊಂಕದೆ ಉಳಿಯಬಲ್ಲ.
ನಾನು ಕೊಲೆ ಮಾಡಿರುವುದು ಹೌದು ಎಂದು ಈತ ಸಾರ್ವಜನಿಕವಾಗಿ ಘೋಷಿಸಿದ್ದು ಉಂಟು. ಆದರೆ ಕೊಲೆಯ ಕುರಿತು ಈತನನ್ನು ಕಾಯಿದೆ ಕಾನೂನಿನ ಕೈಗಳು ಈತನ ತನಕ ಚಾಚಿಲ್ಲ. ಈತನ ತೋಳ್ಬಲದ ಕತೆಗಳು ವಿಶೇಷವಾಗಿ ಗೊಂಡಾ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮನೆಮಾತು.
2022ರಲ್ಲಿ ಅಂತರ್ಜಾಲ ತಾಣವೊಂದಕ್ಕೆ ಸಂದರ್ಶನ ನೀಡುವ ತನಕ ಈತ ಕೊಲೆ ಮಾಡಿದ್ದನೆಂಬ ವಿಚಾರ ಯಾರಿಗೂ ಗೊತ್ತಿರಲಿಲ್ಲ. 2019ರ ಲೋಕಸಭಾ ಚುನಾವಣೆ ಪ್ರಮಾಣಪತ್ರದಲ್ಲಿ ಕೊಲೆ ಪ್ರಯತ್ನದ ಕೇಸೂ ಸೇರಿದಂತೆ ನಾಲ್ಕು ಕ್ರಿಮಿನಲ್ ಕೇಸುಗಳು ಮತ್ತು ಇತರೆ ಗಂಭೀರ ಅಪರಾಧ ಪ್ರಕರಣಗಳು ನಮೂದಾಗಿದ್ದವು.
1980ರ ದಶಕದಲ್ಲಿ ಮೋಟರ್ ಬೈಕುಗಳ ಕಳವಿನಿಂದ ಹಿಡಿದು ಅನಧಿಕೃತ ಲಿಕ್ಕರ್ ಶಾಪ್ ಗಳನ್ನು ನಡೆಸುತ್ತಿದ್ದ ಆಪಾದನೆಗಳು ಈತನ ಮೇಲಿದ್ದವು ಎಂದು ಗೊಂಡಾ ಜಿಲ್ಲೆಯ ಹಿರಿಯ ಪತ್ರಕರ್ತರು ಹೇಳಿದ್ದನ್ನು ಸುದ್ದಿ ಜಾಲತಾಣ ‘ಸ್ಕ್ರೋಲ್’ ವರದಿ ಮಾಡಿತ್ತು. ಈತ ಸಿವಿಲ್ ಕಾಂಟ್ರ್ಯಾಕ್ಟರ್ ಆಗಿದ್ದ. ಸಮಾಜವಾದಿ ಪಾರ್ಟಿ ಸರ್ಕಾರದ ಕ್ಯಾಬಿನೆಟ್ ಸಚಿವ ವಿನೋದ್ ಕುಮಾರ್ ಸಿಂಗ್ ಅಲಿಯಾಸ್ ಪಂಡಿತ್ ಸಿಂಗ್ ಎಂಬಾತ ಈ ಎಲ್ಲ ಚಟುವಟಿಕೆಗಳಲ್ಲಿ ಬ್ರಿಜಭೂಷಣನ ಪಾಲುದಾರನಾಗಿದ್ದ.
ಆನಂತರ ಇವರಿಬ್ಬರು ಪರಸ್ಪರ ಹಗೆಗಳಾದರು. 1993ರಲ್ಲಿ ಪಂಡಿತ್ ಸಿಂಗ್ ನನ್ನು ಗುಂಡಿಟ್ಟು ಕೊಲ್ಲುವ ಪ್ರಯತ್ನದ ಕೇಸು ಬ್ರಿಜಭೂಷಣ್ ಮೇಲೆ ದಾಖಲಾಯಿತು. ತನ್ನ ಮೇಲೆ 20 ಗುಂಡುಗಳನ್ನು ಹಾರಿಸಲಾಯಿತು, 14 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂಬುದು ಪಂಡಿತ್ ಸಿಂಗ್ ಆರೋಪ.
29 ವರ್ಷಗಳ ವಿಚಾರಣೆಯ ನಂತರ ಈ ಕೊಲೆ ಕೇಸಿನಿಂದ ಬ್ರಿಜಭೂಷಣ್ ಖುಲಾಸೆಯಾದ. ಸಾಕ್ಷ್ಯಾಧಾರಗಳ ಕೊರತೆ ಎಂದಿತು ನ್ಯಾಯಾಲಯ. ಕಳಪೆ ತನಿಖೆಗಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಪುರಾವೆಗಳನ್ನು ಸಂಗ್ರಹಿಸಲು ಪೊಲೀಸರು ಯಾವುದೇ ಯತ್ನ ಮಾಡಿಲ್ಲವೆಂದೂ, ಅಪರಾಧದಲ್ಲಿ ಬಳಕೆಯಾದ ಹತಾರನ್ನು ಕೂಡ ವಶಪಡಿಸಿಕೊಂಡಿಲ್ಲವೆಂದೂ ಝಾಡಿಸಿತ್ತು.
ಪಂಡಿತ್ ಸಿಂಗ್ ನ ತಮ್ಮನೊಬ್ಬನಿದ್ದ. ಅವನ ಹೆಸರು ರವೀಂದರ್ ಸಿಂಗ್. ಈತ ಬ್ರಿಜಭೂಷಣನ ಆಪ್ತ ಗೆಳೆಯ. ಇಬ್ಬರೂ ಕಾಂಟ್ರ್ಯಾಕ್ಟರುಗಳು. ಜೊತೆ ಸೇರಿ ಕೆಲಸ ಮಾಡುತ್ತಿದ್ದರು. ಇವರು ನಡೆಸುತ್ತಿದ್ದ ಪಂಚಾಯಿತಿ ಸಭೆಯೊಂದರಲ್ಲಿ ಗುಂಡುಗಳು ಹಾರಿದವು. ಈ ಪೈಕಿ ಒಂದು ಗುಂಡು ರವೀಂದರ್‌ಗೆ ತಗುಲಿತು. ಬ್ರಿಜಭೂಷಣ್ ಪಕ್ಕದಲ್ಲಿ ನಿಂತಿದ್ದ ರವೀಂದರ್ ಅಲ್ಲೇ ಮೃತನಾದ. ಕೆರಳಿದ ಬ್ರಿಜಭೂಷಣ್, ಗುಂಡು ಹಾರಿಸಿದ್ದ ವ್ಯಕ್ತಿಯ ಕೈಯಿಂದ ಬಂದೂಕನ್ನು ಕಿತ್ತುಕೊಂಡು ಅವನಿಗೆ ಗುಂಡಿಟ್ಟು ಕೊಂದ. ಈ ಘಟನೆಯನ್ನು ಖುದ್ದು ಬ್ರಿಜಭೂಷಣ್ ಲಲ್ಲನ್ ಟಾಪ್ ಎಂಬ ಸುದ್ದಿ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾನೆ. ಜನ ಏನಾದರೂ ಹೇಳಿಕೊಳ್ಳಲಿ, ನನ್ನಿಂದ ಕೊಲೆಯೊಂದು ನಡೆದಿದೆ. ರವೀಂದರ್ ನನ್ನು ಗುಂಡು ಹಾರಿಸಿ ಕೊಂದವನನ್ನು ನಾನು ಕೊಂದಿದ್ದೇನೆ. ಅಯೋಧ್ಯಾ ಜಿಲ್ಲೆಯ ಫೈಜಾಬಾದ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಲಲ್ಲೂ ಸಿಂಗ್ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿ ಎಂದೂ ಬ್ರಿಜಭೂಷಣ್ ಹೇಳಿರುವುದುಂಟು.
ತಾನು ಮತ್ತೊಂದು ಕೊಲೆ ಮಾಡಿರುವ ಅನುಮಾನ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಇತ್ತೆಂದು ಬ್ರಿಜಭೂಷಣ್ ತಾನಾಗಿಯೇ ಹೇಳಿಕೊಂಡಿದ್ದಾನೆ. ಗೊಂಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಯುತ್ತಾನೆ. ‘ನೀನೇ ಆತನನ್ನು ಕೊಲ್ಲಿಸಿದೆಯಲ್ಲವೇ’ ಎಂದು ವಾಜಪೇಯಿ ತನ್ನನ್ನು ಕೇಳಿದ್ದಾಗಿ ವಿವರಿಸಿದ್ದಾನೆ. ಬ್ರಿಜಭೂಷಣ್ ಸಿಂಗ್ ಗಳಿಸಿಕೊಂಡಿರುವ ಕಟ್ಟರ್ ಹಿಂದುತ್ವವಾದಿಯ ವರ್ಚಸ್ಸು ಬಿಜೆಪಿಗೆ ಅನುಕೂಲಕರ. ಪ್ರಾಯಶಃ ಈ ಕಾರಣಗಳಿಂದಾಗಿಯೇ ಈತನ ಕುಕೃತ್ಯಗಳನ್ನು ಬಿಜೆಪಿಯ ವರಿಷ್ಠರು ಕಡೆಗಣಿಸಿಬಿಡುತ್ತಾರೆ.

ಈತನ ಪತ್ನಿ ಕೇತಕೀದೇವಿ ಸಿಂಗ್ ಗೊಂಡಾ ಜಿಲ್ಲಾ ಪಂಚಾಯತಿಯ ಹಾಲಿ ಅಧ್ಯಕ್ಷೆ. ಮಗ ಪ್ರತೀಕ್ ಭೂಷಣ್ ಸಿಂಗ್ ಗೊಂಡಾ ಸದರ್ ಕ್ಷೇತ್ರದ ಶಾಸಕ. ಭೂಗತ ಲೋಕದ ಪಾತಕಿಗಳೊಂದಿಗೆ ಈತ ಸಂಪರ್ಕ ಹೊಂದಿದ್ದ ಸಂಗತಿಯೂ 1990ರ ಮಧ್ಯಭಾಗದಲ್ಲಿ ಬಯಲಿಗೆ ಬಂದಿತ್ತು. ದಾವೂದ್ ಇಬ್ರಾಹಿಮನ ಸಹಚರರಿಗೆ ಆಶ್ರಯ ಕೊಟ್ಟ ಆಪಾದನೆಗಳ ಮೇರೆಗೆ ಹಲವು ತಿಂಗಳುಗಳ ಕಾಲ ದೆಹಲಿಯ ತಿಹಾರ ಜೈಲಿನಲ್ಲಿ ಬಂದಿಯಾಗಿದ್ದ. ಕರಾಳ ಕಾಯಿದೆ ಎಂದೇ ಬಣ್ಣಿಸಲಾಗಿದ್ದ ಖಿಂಆಂ ಅಥವಾ ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ನಿಗ್ರಹ ಕಾಯಿದೆಯ ಅಡಿಯಲ್ಲಿ ಈತನನ್ನು ಬಂಧಿಸಲಾಗಿತ್ತು. ಸಾಕ್ಷ್ಯ ಪುರಾವೆಗಳ ಕೊರತೆಯ ಕಾರಣದಿಂದ ಆರೋಪಮುಕ್ತನಾದ.
ಬ್ರಿಜಭೂಷಣ್ ತಿಹಾರ್ ಜೈಲಿನಲ್ಲಿದ್ದಾಗ ಈತನ ಪತ್ನಿಗೆ ಗೊಂಡಾ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿತು ಬಿಜೆಪಿ. ಆಕೆ ಆರಿಸಿ ಬಂದಳು ಕೂಡ. ಈತನ 22 ವರ್ಷ ವಯಸ್ಸಿನ ಮಗ ಶಕ್ತಿಸಿಂಗ್ 2004ರಲ್ಲಿ ಆತ್ಮಹತ್ಯೆ ಮಾಡಿಕೊಂಡ. ತಾನು ಬರೆದಿಟ್ಟ ಪತ್ರದಲ್ಲಿ ತನ್ನ ಆತ್ಮಹತ್ಯೆಗೆ ತಂದೆ ಬ್ರಿಜಭೂಷಣನೇ ಕಾರಣನೆಂದು ದೂರಿದ್ದ. ‘ನೀನೊಬ್ಬ ಒಳ್ಳೆಯ ತಂದೆಯಾಗಲಿಲ್ಲ. ನನ್ನ ಒಡಹುಟ್ಟಿದವರನ್ನಾಗಲಿ, ನನ್ನನ್ನೇ ಆಗಲಿ ಸರಿಯಾಗಿ ನೋಡಿಕೊಳ್ಳಲಿಲ್ಲ ನೀನು. ಯಾವಾಗಲೂ ನಿನ್ನ ಹಿತವನ್ನು ಮಾತ್ರವೇ ನೋಡಿಕೊಂಡೆ. ನಮ್ಮ ಭವಿಷ್ಯವನ್ನು ಕತ್ತಲು ಕವಿದಿದೆ. ಹೀಗಾಗಿ ಬದುಕಿರುವುದರಲ್ಲಿ ಅರ್ಥವಿಲ್ಲ’ ಎಂದು ಶಕ್ತಿಸಿಂಗ್ ತಂದೆಯ ಸ್ವಾರ್ಥಕ್ಕೆ ಕನ್ನಡಿ ಹಿಡಿದಿದ್ದ.
ವಿನೇಶ್ ಫೋಗಟ್, ಬಬಿತಾ ಫೋಗಟ್ ತಂದೆ ಮಹಾವೀರ್ ಫೋಗಟ್ ಅವರಿಗೂ ಬ್ರಿಜಭೂಷಣ್ ಧೋರಣೆ ಹಿಡಿಸಿಲ್ಲ. ಕುಸ್ತಿಪಟುಗಳಿಗೆ ದೊರೆಯುವ ಸ್ಪಾನ್ಸರ್ ಶಿಪ್ ಹಣದಲ್ಲಿ ಅರ್ಧವನ್ನು ಬ್ರಿಜಭೂಷಣ್ ಕಿತ್ತುಕೊಳ್ಳುವುದಾಗಿ ಹೇಳುತ್ತಾರೆ.
ಅತ್ತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದು ತಂದ ವಿನೇಶ ಫೋಗಟ್ ಮತ್ತು ಸಾಕ್ಷಿ ಮಾಲಿಕ್ ಅವರನ್ನು ಪೊಲೀಸರು ರಸ್ತೆಗಳಲ್ಲಿ ಎಳೆದಾಡಿದರು. ಸಾಕ್ಷಿಯ ಮುಖದ ಮೇಲೆ ಬೂಟುಗಾಲಿಟ್ಟು ನೆಲಕ್ಕೆ ಒತ್ತಿ ಹಿಡಿದ ಫೋಟೋಗಳು ಇತಿಹಾಸದಲ್ಲಿ ದಾಖಲಾಗಿವೆ. ಇತ್ತ ಪಾರ್ಲಿಮೆಂಟಿನ ಹೊಸ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಸಂಸದ ಬ್ರಿಜಭೂಷಣ್ ಗಮ್ಮತ್ತಾಗಿ ಮಿಂಚುತ್ತಿದ್ದ.
ಪೋಕ್ಸೋ ಕಾಯಿದೆಯಡಿ ಈತನ ಬಂಧನವನ್ನು ವಿರೋಧಿಸಿ ಅಯೋಧ್ಯೆಯ ಸಂತರು ಪ್ರದರ್ಶನ ನಡೆಸಿದರು. ಹೆಣ್ಣುಮಕ್ಕಳ ಮಾನ ಪ್ರಾಣಗಳಿಗಿಂತಲೂ ಬ್ರಿಜಭೂಷಣ ಎಂಬ ಹಿಂದುತ್ವದ ಬಾಹುಬಲಿಯ ರಕ್ಷಣೆಯನ್ನೇ ಧರ್ಮ ರಕ್ಷಣೆ ಎಂದು ಇವರು ಬಗೆದದ್ದು ದುರಂತ.

ಡಿ ಉಮಾಪತಿ
ಹಿರಿಯ ಪತ್ರಕರ್ತರು