ಕೇಂದ್ರ ಸರಕಾರ ರಾಜ್ಯಗಳಿಗೆ ಅಕ್ಕಿ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರ ಸಮರ್ಥನೆಗಿಳಿದಿದೆ...
ಭಾರತೀಯ ಆಹಾರ ನಿಗಮದ ಹೇಳಿಕೆ ಪ್ರಕಾರ ಎಪ್ರಿಲ್ 1, 2023ಕ್ಕೆ 113 ಲಕ್ಷ ಟನ್ ಗೋಧಿ ಮತ್ತು 236 ಲಕ್ಷ ಟನ್ ಅಕ್ಕಿ ಸಂಗ್ರಹವಿದೆ. ಇದು ಸರಕಾರದ ವಿವಿಧ ಯೋಜನೆಗಳಿಗೆ ಪೂರೈಸಿಯೂ ಮಿಗತೆ ಪ್ರಮಾಣದಲ್ಲಿದೆ ಎಂದು FCI ಹೇಳಿದೆ. ಹಾಗೆಯೇ ಸರಕಾರದ ಅಂದಾಜು ಪ್ರಕಾರ ಈ ವರ್ಷ 325 ಮಿಲಿಯನ್ ಟನ್ ನಷ್ಟು ಆಹಾರ ಉತ್ಪಾದನೆಯ ಗುರಿ ಹೊಂದಿದ್ದು ಇದು ಕಳೆದ ವರ್ಷಕ್ಕಿಂತ 3% ಜಾಸ್ತಿ.
2022-23ನೇ ಸಾಲಿನಲ್ಲಿ ಅಂದರೆ 2023ರ ಮೇ ವರೆಗೆ ಅಕ್ಕಿಯ ಉತ್ಪಾದನೆ 1308 ಲಕ್ಷ ಟನ್ ಆಗಿದ್ದು, ಇದರಲ್ಲಿ ಸರಕಾರವೇ 626 ಲಕ್ಷ ಟನ್ ಕೊಂಡುಕೊಂಡು ದಾಸ್ತಾನು ಮಾಡುವ ಗುರಿ ಹೊಂದಿದೆ. ಈ ಬಾಬ್ತು ಸರಕಾರ 1,59,659 ಕೋಟಿ ರೂ. ರೈತರಿಗೆ ಪಾವತಿಸಿದೆ.
ಅಂದರೆ ಭಾರತೀಯ ಆಹಾರ ನಿಗಮದಲ್ಲಿ ರಾಜ್ಯಗಳ ಬೇಡಿಕೆ ಪೂರೈಸುವಷ್ಟು ಅಕ್ಕಿಯ ಸಂಗ್ರಹ ಇದೆ.
ರಾಜ್ಯ ಸರಕಾರಗಳು ಹೆಚ್ಚುವರಿಯಾಗಿ ಕೊಳ್ಳುವುದಾದರೆ ನಿಗಮವು ತನಗಾದ ನೈಜ ವೆಚ್ಚವನ್ನೇ ಭರಿಸುವಷ್ಟು ದರ ನಿಗದಿ ಮಾಡುತ್ತದೆ. ಇದೇ ಲೆಕ್ಕಾಚಾರದಲ್ಲೇ ರೂ. 36 ಎಂದು ಕರ್ನಾಟಕ ಸರಕಾರಕ್ಕೆ ನಿಗದಿ ಮಾಡಿದ್ದು, ಸರಕಾರಗಳಿಗೆ ಪೂರೈಸುವುದೆಂದರೆ ಬೆಲೆ ಏರಿಕೆ ಆಘಾತದಿಂದ ಬಡವರನ್ನು ರಕ್ಷಿಸಿ ಆಹಾರದ ಹಾಹಾಕಾರವನ್ನು ತಡೆಯುವುದು ಎಂದರ್ಥ.
ಆದರೆ ಕೇಂದ್ರ ಸರಕಾರ ರಾಜ್ಯಗಳಿಗೆ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರದ ಸಮರ್ಥನೆ.
ಹೀಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾದ ಅಕ್ಕಿ ಗ್ರಾಹಕರಿಗೆ ಕಡಿಮೆ ದರಕ್ಕೆ ದೊರಕಿದ ಉದಾಹರಣೆ ಇಲ್ಲ!
ಇದರರ್ಥ ಇಷ್ಟೇ: ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಾ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಕಲ್ಲು ಹಾಕಲು ಯತ್ನಿಸುತ್ತಿದೆ.
ರಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಆಹಾರವನ್ನು ಕಾಪು ದಾಸ್ತಾನು ಮಾಡುವ ವ್ಯವಸ್ಥೆ ನಮ್ಮಲ್ಲಿ ಕಡಿಮೆ. ಕರ್ನಾಟಕ ಈ ಕೆಲಸ ಮಾಡಬೇಕಿತ್ತು. ಆದರೆ ಭಾಜಪ ಸರಕಾರ ಈ ಕಾಪು ದಾಸ್ತಾನು ಇಟ್ಟಿಲ್ಲ. ಅಷ್ಟೇ ಏಕೆ, ಪಡಿತರದಲ್ಲಿ ನೀಡುವ ಅಕ್ಕಿಯ ಪ್ರಮಾಣವನ್ನೂ ಕಡಿತಗೊಳಿಸಿದೆ.
ಈಗ ಬಿಜೆಪಿಯ ಸಂಸದರು ಅನ್ನಕ್ಕೆ ಕಲ್ಲು ಹಾಕುವ ಈ ವಿಕೃತಿಯನ್ನು ಸಮರ್ಥಿಸಿ ಕೇಕೆ ಹಾಕಿ ಕುಣಿಯುತ್ತಿದ್ದಾರೆ. ಜನಾಗ್ರಹದ ಸುನಾಮಿ ಎರಗುವ ಕಿಂಚಿತ್ತು ಪರಿವೆಯೂ ಇಲ್ಲದ ಈ ಪಕ್ಷದ ಆತ್ಮಹತ್ಯಾಕಾರಿ ನಿಲುವು
ಮಾತ್ರ ಅಚ್ಚರಿ ತರುತ್ತಿದೆ.
