ವಿಚಿತ್ರವೆಂದರೆ ಇವರಿಗೆ ಹಿಂದೂ ಸಂಘಟನೆಗಳಲ್ಲಿ ಯಾವುದೇ ಹುದ್ದೆ ಜವಾಬ್ದಾರಿ ಇಲ್ಲ. ಅದೇ ಹಿನ್ನೆಲೆಯಲ್ಲಿ ಪರಿವಾರ ಅವಳು ನಮ್ಮವಳಲ್ಲ ಎಂದು ಕೈ ತೊಳೆದುಕೊಂಡದ್ದು. ಸೂಲಿಬೆಲೆಗೂ ಕೂಡಾ. ಆದರೆ ಇವರು ವರ್ಷಪೂರ್ತಿ ಬಿಜೆಪಿ ಪರಿವಾರದ ವೇದಿಕೆಯ ದಿಕ್ಸೂಚಿ ಭಾಷಣಕಾರರು !!! ಹಿಂದುತ್ವದ ಹೆಸರಿನ ಮತ್ತು ಇಸ್ಲಾಂ ಹೆಸರಿನ ಚಳವಳಿ ಮತ್ತು ಭಾಷಣಗಳ ಹಿಂದೆ ಇರುವುದು ಪಕ್ಕಾ ರಾಜಕಾರಣ, ಅಧಿಕಾರ, ವ್ಯಾಪಾರ.
ಸುಮಾರು ಮೂವತ್ತು ವರ್ಷಗಳ ಹಿಂದಕ್ಕೆ ಸರಿದರೆ ರಾಜಕೀಯ ಭಾಷಣಗಳು ಹೆಚ್ಚು ಪ್ರಾಮುಖ್ಯತೆ ಹೊಂದಿತ್ತು. ಯಾವುದೇ ಪಕ್ಷವಿರಲಿ ಉತ್ತಮ ಭಾಷಣ ಅಂತಾದರೆ ಜನ ಪಕ್ಷಾತೀತವಾಗಿಯೇ ಕೇಳಲು ಸೇರುತ್ತಿದ್ದರು. ಆಗ ಈ ಹಿಂದುತ್ವದವರ ಅಥವಾ ಇಸ್ಲಾಂ ಸಮುದಾಯ ರಕ್ಷಕರ ಭಾಷಣಗಳಿರಲಿಲ್ಲ. ಈಗಿನಂತೆ ಸಾಲು ಸಾಲು ಹುಟ್ಟಿಕೊಂಡಿರುವ ಆಧ್ಯಾತ್ಮಿಕ ಗುರುಗಳ ಸಂಖ್ಯೆ ತೀರಾ ವಿರಳವಾಗಿದ್ದ ದಿನಗಳೂ ಹೌದು.
ಬಹುತೇಕ ವೇದಿಕೆಗಳಲ್ಲಿ ಸಾಹಿತಿಗಳು ಮತ್ತು ಸಾಂಸ್ಕೃತಿಕ / ಸಾಮಾಜಿಕ ಮುಖಂಡರ ಭಾಷಣವೇ ಪ್ರಮುಖವಾಗಿದ್ದ ಕಾಲ ಅದಾಗಿತ್ತು. ಭಾಷಣಗಾರರ ಸಕಾರಾತ್ಮಕ ಧೋರಣೆಯ ಭಾಷಣಗಳು ಮತ್ತು ನಿಂದನಾತ್ಮಕವಲ್ಲದ ಮಾತುಗಳು ಸಮಾಜವನ್ನು ಚಿಂತನೆಗೆ ಹಚ್ಚುವಂತಿರುತ್ತಿತ್ತು. ಭಾಷಣಗಾರರು ವೈಯಕ್ತಿಕವಾಗಿ ನೈತಿಕ ಶುದ್ಧತೆ, ಜೀವನ ಮೌಲ್ಯಗಳನ್ನು ಕಾಪಾಡಿಕೊಂಡವರಿದ್ದರು. ವೈಚಾರಿಕ ಭಿನ್ನತೆ ಇದ್ದರೂ ಪರಸ್ಪರ ದ್ವೇಷದ ಭಾವವಿರಲಿಲ್ಲ. ಬದಲಾಗಿ ಗೌರವ ಕೊಡುವ ದಿನಗಳಾಗಿತ್ತು.
1985-90 ರ ಅವಧಿಯಲ್ಲಿ ಬಿಜೆಪಿ ಹಿಂದುತ್ವವನ್ನು ನೇರ ರಾಜಕಾರಣಕ್ಕೆ ತಂದ ನಂತರ ಪ್ರಚೋದನಾಕಾರಿ ಭಾಷಣಗಳು ಪ್ರಾರಂಭವಾಯಿತು. ಬಿಜೆಪಿಯ ಅಂಗ ಸಂಸ್ಥೆಗಳಾಗಿ ವಿದ್ಯಾರ್ಥಿಗಳ ವಿದ್ಯಾರ್ಥಿ ಪರಿಷತ್, ಕಾರ್ಮಿಕರ ಬಿ ಎಂ ಎಸ್, ವಿಶ್ವ ಹಿಂದೂ ಪರಿಷತ್, ಮಹಿಳೆಯರ ದುರ್ಗಾವಾಹಿನಿ, ಯುವಕರಿಗೆ ಜಾಗರಣ ವೇದಿಕೆ, ಬಜರಂಗದಳ ಹೀಗೆ ಸಮಾಜದ ವಿವಿಧ ಸ್ತರಗಳಲ್ಲಿ ವೇದಿಕೆಗಳು ನಿರ್ಮಾಣಗೊಂಡು ರಾಜಕೀಯ ಪ್ರೇರಿತ ಪ್ರಚೋದನಾಕಾರಿ ಭಾಷಣ ಎಲ್ಲಾ ಕಡೆ ಪಸರಿಸಿಕೊಂಡಿತು. ಇಲ್ಲಿ ಮುಸ್ಲಿಂ ಮತ್ತು ಕ್ರೈಸ್ತರನ್ನು ನಿಂದಿಸುವ ರೋಚಕತೆ ಇದ್ದದ್ದರಿಂದ ಅದು ಭಾರೀ ಪ್ರಸಿದ್ಧಿ ಪಡೆಯತೊಡಗಿತು.
ಇದಕ್ಕೆ ಪ್ರತಿರೋಧವಾಗಿ ಹುಟ್ಟಿಕೊಂಡ ಮುಸ್ಲಿಂ ಸಂಘಟನೆ ಪಿಎಫ್ಐ, ಎಸ್ ಡಿ ಪಿ ಐ, ಕ್ಯಾಂಪಸ್ ಫ್ರಂಟ್ ಸಂಘಟನೆಗಳು ಇಸ್ಲಾಂ ಸಮುದಾಯ ರಕ್ಷಕರು ಎಂದು ಬಿಂಬಿಸಿಕೊಂಡು ತಾಂಟ್ರೆ ಬಾ ತಾಂಟ್ ಎಂದು ಪ್ರಚೋದನೆಗೆ ಶುರು ಮಾಡಿಕೊಂಡರು.
ಈ ಎಲ್ಲಾ ಬೆಳವಣಿಗೆಯಲ್ಲಿ ಚೈತ್ರಾರಂತವರು ಹಲವಾರು ಜನ ಎರಡೂ ಕಡೆ ವೇದಿಕೆಯೇರಿ ಅಬ್ಬರಿಸತೊಡಗಿದರು. ಇವರುಗಳ ಭಾಷಣದ ರೋಚಕತೆಗೆ ಜನರು ಸಾಮೂಹಿಕ ಸನ್ನಿಗೆ ಒಳಗಾಗತೊಡಗಿದ್ದರು. ಯಾವುದು ನಿಜ, ಸುಳ್ಳು ಎಂಬ ವಿಚಾರವನ್ನೂ ಮಾಡದೇ ಎಲ್ಲವನ್ನೂ ಯಥಾವತ್ತಾಗಿ ಸ್ವೀಕರಿಸುವ, ಬೆಂಬಲಿಸುವ, ಪ್ರಚಾರಮಾಡುವ ವರ್ಗ ಹುಟ್ಟಿಕೊಂಡಿತು. ಹೀಗೆ ಸಿಕ್ಕ ಅದ್ಭುತ ಯಶಸ್ಸಿನಿಂದಾಗಿ ಭಾಷಣಗಾರರು ರಾತೋರಾತ್ರಿ ಚಿಂತಕರು, ಪ್ರಖರ ವಾಗ್ಮಿ, ದಿಕ್ಸೂಚಿ ಭಾಷಣಗಾರರಾದರು.
ತಮ್ಮ ಧರ್ಮದ ಕುರಿತು ಓದು ಇಲ್ಲ, ಜ್ಞಾನವಿಲ್ಲ ಆದರೂ ಒಂದಿಷ್ಟು ಘೋಷಣಾ ವಾಕ್ಯ, ನಿಂದನೆ, ಪ್ರಚೋದನೆ ಎಲ್ಲ ಸೇರಿಸಿ ಉಪ್ಪು ಖಾರ ಹಾಕಿ ಭೀಕರ ಭಾಷಣದೂಟ ನಿರಂತರವಾಗಿ ಮಾಡಿಕೊಂಡು ಬಂದರು. ಇಂತಹ ಭಾಷಣ ಕೇಳಿದ ಕೆಲವು ಯುವಕರು ಪರಸ್ಪರ ತಾಂಟಿಕೊಂಡು ಜೈಲು ಸೇರಿದರು, ಸ್ಮಶಾನದಲ್ಲಿ ಮಲಗಿದರು.
ತೆರೆಯ ಹಿಂದೆ…
ಪರದೆಯ ಮುಂದೆ ಈ ಮೇಲಿನಂತಾದರೆ, ಅದರ ಹಿಂದಿರುವುದು ಏನು ಎಂಬ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಹಾಗೆ ಪ್ರಯತ್ನ ಮಾಡಿ ತಿಳಿದುಕೊಂಡು ಹೇಳಿದರೆ ಅದು ಕೇವಲ ವಿರೋಧಕ್ಕಾಗಿ ಎಂಬ ಮುದ್ರೆ ಒತ್ತುವ ಟೀಂ ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡಿತ್ತು. ಇಲ್ಲವಾದರೆ ಯಾವ ನೈತಿಕತೆ, ಜೀವನ ಮೌಲ್ಯ, ಆದರ್ಶಗಳೂ ಇಲ್ಲದ, ಹಿಂದೂ ಧರ್ಮದ ಜ್ಞಾನವೇ ಇರದ ಕಾಳಿ ಸ್ವಾಮಿ, ಚೈತ್ರಾ, ಪುನೀತ್ ಕೆರೆಹಳ್ಳಿ, ಮಧುಗಿರಿ ಮೋದಿ, ಪ್ರಶಾಂತ ಸಂಬರಗಿ ಅಂತವರು ಹಿಂದುತ್ವದ ನಾಯಕರಾಗಿ ಮೂಡಿ ಬರಲು ಸಾಧ್ಯವಿರಲಿಲ್ಲ. ಇಂತವರಿಗೆ ಚಕ್ರವರ್ತಿ ಸೂಲಿಬೆಲೆಯಂತವರು ಬೆಂಗಾವಲಾಗಿ ನಿಂತದ್ದು ಮತ್ತೊಂದು ಕುಚೋದ್ಯ.
ಇದನ್ನೂ ಓದಿ ಹಿಂದುತ್ವ ದರೋಡೆ: ಕುಂದಾಪುರದ ಚೈತ್ರಾರನ್ನು ಬೆಳೆಸಿದ ಸಂಘಟನೆ ಬೆಳೆದು ಬಂದ ದಾರಿ ಇದು…
ಇನ್ನೂ ಒಂದು ವಿಚಿತ್ರವೆಂದರೆ ಇವರಿಗೆ ಹಿಂದೂ ಸಂಘಟನೆಗಳಲ್ಲಿ ಯಾವುದೇ ಹುದ್ದೆ ಜವಾಬ್ದಾರಿ ಇಲ್ಲ. ಅದೇ ಹಿನ್ನೆಲೆಯಲ್ಲಿ ಪರಿವಾರ ಅವಳು ನಮ್ಮವಳಲ್ಲ ಎಂದು ಕೈ ತೊಳೆದುಕೊಂಡದ್ದು. ಸೂಲಿಬೆಲೆಗೂ ಕೂಡಾ. ಆದರೆ ಇವರುಗಳು ವರ್ಷಪೂರ್ತಿ ಬಿಜೆಪಿ ಪರಿವಾರದ ಪರ, ಅವರ ವೇದಿಕೆಯ ದಿಕ್ಸೂಚಿ ಭಾಷಣಕಾರರು !!!
ಹಿಂದುತ್ವದ ಹೆಸರಿನ ಮತ್ತು ಇಸ್ಲಾಂ ಹೆಸರಿನ ಚಳವಳಿ ಮತ್ತು ಭಾಷಣಗಳ ಹಿಂದೆ ಇರುವುದು ಪಕ್ಕಾ ರಾಜಕಾರಣ, ಅಧಿಕಾರ, ಮತ್ತು ವ್ಯಾಪಾರ. ಈ ರೀತಿ ಭಾಷಣ ಮಾಡುವವರಿಗೆ ಆದಾಯವಿದೆ. ಜೀವನ ಸೌಲಭ್ಯಗಳು ಪುಕ್ಕಟೆ ಸಿಗುತ್ತದೆ. ವ್ಯವಹಾರಗಳು ಕುದುರುತ್ತವೆ. ಬೆವರು ಸುರಿಸದೇ ಕೇವಲ ಭಾಷಣದಿಂದಲೇ ಬದುಕು. ಸ್ವತಃ ಸೂಲಿಬೆಲೆ ಕೂಡಾ ತನ್ನ ಅಭಿಮಾನಿಗಳು ತನಗೆ ವಸ್ರ್ತ ವಾಹನ ಇತ್ಯಾದಿ ಖರ್ಚು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಿದೆ.
ಹೀಗಿರುವಾಗ ಚೈತ್ರಾ ಮಾಡಿದ ವ್ಯವಹಾರದಲ್ಲಿ ಯಾವ ಆಶ್ಚರ್ಯವೂ ಇಲ್ಲಾ. ಯಾಕೆಂದರೆ ಇಂತಹ ಅಕ್ರಮ ಸಂಪಾದನೆಯ ಘಟನೆಗಳು ಭಿನ್ನ ಭಿನ್ನ ರೀತಿಯಲ್ಲಿ ಬೇರೆ ಬೇರೆ ಮುಖಂಡರು ಮಾಡುವುದನ್ನು ಅವಳೂ ನೋಡಿದ್ದಾಳೆ. ನಮಗೂ ತಿಳಿದಿದೆ. ಇಲ್ಲಿ ಅವಳು ಸಿಕ್ಕಿ ಹಾಕಿಕೊಂಡಳು ಅಷ್ಟೆ.
ಇದನ್ನೂ ಓದಿ ಚೈತ್ರಾ ಪ್ರಕರಣ | ಬಿಜೆಪಿಯ ವಸೂಲಿ ದಂಧೆಯ ಬಲಿಪಶುಗಳಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಇದ್ದಾರೆ
ಇಷ್ಟು ಹೇಳಿದ ಮೇಲೆ ಮುಸ್ಲಿಂ ಸಂಘಟನೆಗಳ ಚಳವಳಿಯೂ ಅಧಿಕಾರ ಮತ್ತು ಹಣದ ವ್ಯವಹಾರದಲ್ಲಿದೆ ಅನ್ನುವುನ್ನು ಒಪ್ಪಿಕೊಳ್ಳಲೇಬೇಕು.
ಹಾಗಾದರೆ ಕಾಂಗ್ರೆಸ್‌ನವರು ಪರಿಶುದ್ಧರೋ ? ಅಲ್ಲಿ ಯಾರೂ ಭ್ರಷ್ಟಾಚಾರ ಮಾಡಿಲ್ಲವೋ? ಅನ್ನುವ ಪ್ರಶ್ನೆ. ಪ್ರತಿಯೊಂದೂ ರಾಜಕೀಯ ಪಕ್ಷದಲ್ಲೂ ಭ್ರಷ್ಟಾಚಾರ ಮಾಡುವವರಿದ್ದಾರೆ. ಆದರೆ ಚೈತ್ರ ಮತ್ತು ಅಂತಹ ಪ್ರಕರಣಗಳು ಕಾಂಗ್ರೆಸ್ / ಬಿಜೆಪಿಯ ವಿಷಯವಲ್ಲ. ಅದು ಸಂಸ್ಕೃತಿ, ದೇಶಪ್ರೇಮ, ರಾಷ್ಟ್ರಾಭಿಮಾನ, ಜೀವನ ಮೌಲ್ಯ, ಆದರ್ಶಗಳ ಕುರಿತ ಪುಂಖಾನುಪುಂಖ ಭಾಷಣ. ಹಿಂದೂ ಮತ್ತು ಮುಸ್ಲಿಂ ಧರ್ಮದ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರ ಇದು. ಇದು ರಾಜಕೀಯ ಭ್ರಷ್ಟಾಚಾರಕ್ಕಿಂತ ಹೆಚ್ಚು ಅಪಾಯಕಾರಿ.
ಇದನ್ನೂ ಓದಿ ಚೈತ್ರಾ ಎಂಬ ಗಾಳವನ್ನು ಬಳಸಿ, ಗೋವಿಂದ ಎಂಬ ಮೀನನ್ನು ಹಿಡಿದವರಾರು?
ಯಾಕೆಂದರೆ, ಇಲ್ಲಿನ ಕೃತಿ ಭ್ರಷ್ಟಾಚಾರವಾದರೆ ಮಾತುಗಳು ಹಿಂಸೆಗೆ ಪ್ರಚೋದನೆ ಕೊಡುವಂತದ್ದಾಗಿದೆ. ಸಮಾಜವನ್ನು ಛಿದ್ರಗೊಳಿಸಿ, ಬೆಂಕಿ ಹಚ್ಚಿ ಆ ಬೆಂಕಿಯಲ್ಲಿ ತಮ್ಮ ಊಟ ಬೇಯಿಸಿಕೊಳ್ಳುವ ಕ್ರೂರತ್ವವಿದೆ. ರಾಜಕೀಯ ಭ್ರಷ್ಟಾಚಾರ ಮತ್ತು ಮತೀಯ ಭ್ರಷ್ಟಾಚಾರಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವಂತಿಲ್ಲ.
ಚೈತ್ರ ಒಂದು ಊರಿನಲ್ಲಿ ಭಾಷಣ ಮಾಡುತ್ತಾಳೆ. ಅವಳು ಕಾಲಿಡುವ ಮೊದಲು ಆ ಊರಿನ ಜನ ಅಣ್ಣ ತಮ್ಮಂದಿರಂತಿರುತ್ತಾರೆ. ಅವಳ ಭಾಷಣದ ನಂತರ ಊರು ಇಬ್ಭಾಗವಾಗುತ್ತದೆ (ಹಿಂದುಗಳೆ). ಅವಳು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಊರಿನ ಜನರಿಗೆ ಪರದೆಯ ಹಿಂದಿನ ಸತ್ಯ ಅರ್ಥವಾಗಿ, ದೇವಸ್ಥಾನದಲ್ಲಿ ಪೂಜೆ ಮಾಡಿ ಮತ್ತೆ ಒಂದಾಗಿದ್ದಾರೆ. ಇಂತಹ ಘಟನೆ ನೂರಾರು ಇರಬಹುದು.
ಜನ ಸಾಮೂಹಿಕ ಸನ್ನಿಯಿಂದ ಇನ್ನಾದರೂ ಹೊರಬರಲಿ. ಭಾಷಣಗಳ ತಿರುಳು ಮತ್ತು ಭಾಷಣ ಮಾಡುವವನ ಮಿದುಳು ಎರಡನ್ನೂ ಅರ್ಥಮಾಡಿಕೊಂಡರೆ, ಯಾರದ್ದೋ ಅಧಿಕಾರ ಮತ್ತು ವ್ಯವಹಾರಕ್ಕಾಗಿ ಸಾಮಾಜಿಕ ಶಾಂತಿಯ ಬಲಿಯಾಗುವುದು ತಪ್ಪುತ್ತದೆ.

ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ