ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!

Date:

Advertisements

ಬಿಜೆಪಿ ನಾಯಕರು ಬಿತ್ತಿದ ಸರಣಿ ಸುಳ್ಳುಗಳನ್ನು ತೆರೆದಿಡುವ ಮತ್ತು ವಾಸ್ತವಗಳನ್ನು ತಿಳಿಸುವ ಪ್ರಯತ್ನವನ್ನು ಈ ವರದಿಯಲ್ಲಿ ಮಾಡಲಾಗಿದೆ

ಕರ್ನಾಟಕದ ವಕ್ಫ್ ವಿವಾದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಬೀದರ್ ಕೋಟೆಯು ವಕ್ಫ್ ವಶದಲ್ಲಿದೆಯಂತೆ, ಮಂಡ್ಯದ ದೇಗುಲಕ್ಕೂ ವಕ್ಫ್ ಬೋರ್ಡ್ ನೋಟಿಸ್ ನೀಡಿದೆಯಂತೆ, ಸರ್‌ಎಂವಿ ಸ್ಮಾರಕವೂ ವಕ್ಫ್ ಆಸ್ತಿಯಂತೆ, ರಾಜ್ಯದ ಬಹುತೇಕ ಆಸ್ತಿಯು ವಕ್ಫ್ ಮಂಡಳಿಯ ಹೆಸರಿನಲ್ಲಿದೆಯಂತೆ, ವಕ್ಫ್‌ಗೆ ಒಮ್ಮೆ ನೀಡಲಾದ ಆಸ್ತಿ ದೇಶದ ಯಾವ ನ್ಯಾಯಾಲಯದಲ್ಲೂ ಪ್ರಶ್ನಿಸಲು ಸಾಧ್ಯವಿಲ್ಲವಂತೆ, ವಕ್ಫ್ ಮಂಡಳಿಗಳು ಭಾರತವನ್ನು ಮತ್ತೊಂದು ಪಾಕಿಸ್ತಾನ ಮಾಡ ಹೊರಟಿದೆಯಂತೆ, ಇದು ಅಲ್ಲಾನ ಆಸ್ತಿಯಂತೆ ಎಂಬ ಸುದ್ದಿಗಳು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿವೆ. ರಾಜ್ಯದ ಜನರು ಗೊಂದಲ ಮತ್ತು ಆತಂಕಕ್ಕೂ ಒಳಗಾಗಿದ್ದಾರೆ. ಈ ನಡುವೆ ಜನರ ಭಯವನ್ನು ಹೋಗಲಾಡಿಸಲು ಯತ್ನಿಸಬೇಕಿರುವ ರಾಜ್ಯದ ಪ್ರತಿಪಕ್ಷ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ವಿವಾದವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ನಿಜವಾಗಿಯೂ ರಾಜ್ಯದ ವಿವಿಧ ಕಡೆ ಉಂಟಾಗಿರುವ ವಕ್ಫ್ ಸಮಸ್ಯೆಯೇನು? ಆರಂಭವಾಗಿದ್ದು ಎಲ್ಲಿ? ಸಾವಿರಾರು ಜನರಿಗೆ ನೋಟಿಸ್ ನೀಡಲಾಗಿದೆಯೆ? ಸರ್ಕಾರದ ಆಸ್ತಿಯನ್ನು ವಕ್ಫ್ ಕಬಳಿಸಲು ಯತ್ನಿಸುತ್ತಿದೆಯೇ? ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ತಿದ್ದುಪಡಿಯ ಮಸೂದೆಯಲ್ಲೇನಿದೆ? ಈ ಎಲ್ಲ ಮಾಹಿತಿಗಳ ಸಮಗ್ರ ವರದಿ ಇಲ್ಲಿದೆ.        

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಎಂಬ ಸಣ್ಣ ಹಳ್ಳಿಯಲ್ಲಿನ ರೈತರು ಮತ್ತು ಕೆಲವರಿಗೆ ಕರ್ನಾಟಕ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ ಎಂಬ ವಿವಾದವು ಮೊದಲು ಶುರುವಾಗಿ ರಾಜ್ಯಾದ್ಯಂತ ವ್ಯಾಪಿಸಿ, ಕ್ರಮೇಣ ರಾಷ್ಟ್ರೀಯ ವಿಷಯವಾಗಿ ಮಾರ್ಪಟ್ಟಿದೆ. ಗ್ರಾಮಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಯನ್ನು ಬಿಜೆಪಿಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಇಡೀ ರಾಜ್ಯಕ್ಕೆ ವಿಸ್ತರಿಸಿದರು. ಇದೇ ವಿಷಯವನ್ನು ಜನರ ಮನಸ್ಸಿನಲ್ಲಿ ಮತ್ತಷ್ಟು ದಿನ ಎಳೆದುಕೊಂಡು ಹೋಗಲು ಕಮಲ ನಾಯಕರು ಸುಳ್ಳಿನ ಮೇಲೆ ಸುಳ್ಳಿನ ಪರ್ವತವನ್ನು ನಿರ್ಮಿಸಲು ಹೊರಟರು. ಕೊಡಗು, ಹಾವೇರಿ, ಬೀದರ್, ಗದಗ, ಸೇರಿದಂತೆ ರಾಜ್ಯದ ಹಲವು ಕಡೆ ವೈಯಕ್ತಿಕ ವಿಚಾರ, ಮೊದಲಾದ ಕಾರಣಗಳಿಗೆ ಉಂಟಾಗಿದ್ದ ಪ್ರಕರಣಗಳನ್ನು ಎಳೆತಂದು ವಕ್ಫ್ ಬೋರ್ಡ್ ಎಲ್ಲರಿಗೂ ನೋಟಿಸ್ ನೀಡಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಬಿಂಬಿಸಿದ್ದಾರೆ. ರೈತರ ಜಮೀನು ಒಳಗೊಂಡು ರಾಜ್ಯದ ಸಾವಿರಾರು ಎಕರೆ ಸರ್ಕಾರಿ ಆಸ್ತಿಪಾಸ್ತಿಗಳಿಗೆ ವಕ್ಫ್‌ನಿಂದ ನೋಟಿಸ್ ನೀಡಲಾಗಿದೆ ಎಂದು ಹತ್ತಾರು ಸುಳ್ಳು ವದಂತಿಗಳನ್ನು ಹಬ್ಬಿಸಲಾಗಿದೆ. ಆದರೆ ಕರ್ನಾಟಕದ ಯಾವ್ಯಾವ ಜಿಲ್ಲೆಗಳಲ್ಲಿ ಏನೇನಾಗಿದೆ ಎಂಬ ಅಸಲಿಯತ್ತು ಬೇರೆಯೇ ಇದೆ.

Advertisements

ವಿಜಯಪುರ: ಹೊನವಾಡದ ರೈತರಿಗೆ ನೋಟಿಸೇ ನೀಡಿರಲಿಲ್ಲ

ಇಡೀ ವಿವಾದದ ಕೇಂದ್ರ ಬಿಂದು ವಿಜಯಪುರದ ಹೊನವಾಡ ಎಂಬ ಗ್ರಾಮ. ವಕ್ಫ್ ಬೋರ್ಡ್ ಈ ಹಳ್ಳಿಯ ರೈತರಿಗೆ ತಮ್ಮ ಜಮೀನನ್ನು ವಾಪಸ್ ನೀಡಬೇಕೆಂದು ನೋಟಿಸ್ ನೀಡಿದೆ ಎಂಬುದಾಗಿತ್ತು. ಸದಾ ವಿವಾದವನ್ನೇ ಕೆದಕುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಹೊನವಾಡದಲ್ಲಿ 1,500 ಎಕರೆ ಭೂಮಿಯನ್ನು ಕಬಳಿಸಲು ಕರ್ನಾಟಕ ವಕ್ಫ್ ಬೋರ್ಡ್ ಸಂಚು ರೂಪಿಸಿದೆ ಎಂದು ಆರೋಪದ ಕಿಡಿ ಹೊತ್ತಿಸಿದರು. ಹೊನವಾಡದ ನೂರಾರು ರೈತರಿಗೆ ನೋಟಿಸ್ ಜಾರಿ ಮಾಡಿ, ಅವರಿದ್ದ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಶತಮಾನಗಳಿಂದ ತಮ್ಮ ಮಾಲೀಕತ್ವದ ಎಲ್ಲ ದಾಖಲೆಗಳನ್ನು ಹೊಂದಿ ಕೃಷಿ ಮಾಡುತ್ತಿರುವವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದ ರೈತರ ಸಹಾಯಕ್ಕೆ ನಾವು ಸದಾ ಸಿದ್ಧವಾಗಿದ್ದು, ವಕ್ಫ್ ಬೋರ್ಡ್ ವಿರುದ್ಧದ ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಳ್ಳುತ್ತದೆ. ರೈತರಿಗೆ ನ್ಯಾಯ ಕೊಡಿಸುತ್ತದೆ ಎಂದು ಬಿಜೆಪಿಗರು ಗೊಂದಲಕ್ಕೆ ಗಾಳಿ ಹಾಕಿದರು.

ಬಿಜೆಪಿಯ ಆರೋಪವನ್ನು ಹೊನವಾಡ ಭಾಗವಾಗಿರುವ ಬಬಲೇಶ್ವರ ಕ್ಷೇತ್ರದ ಶಾಸಕ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ದಾಖಲೆ ಸಮೇತ ಜನರ ಮುಂದಿಟ್ಟು, ಆರೋಪ ನಿರಾಕರಿಸಿದರು. ಹೊನವಾಡ ಹೊರತುಪಡಿಸಿ ಜಿಲ್ಲೆಯ ಇತರೆಡೆ 124 ನೋಟಿಸ್‌ಗಳನ್ನು ನೀಡಲಾಗಿರುವುದನ್ನು ಒಪ್ಪಿಕೊಂಡರು. ವಿವಾದ ಉಂಟಾದ ನಂತರ ಕಾಂಗ್ರೆಸ್, ಬಿಜೆಪಿ ಹಾಗೂ ಗ್ರಾಮದ ಹಿರಿಯರು ಮೂರು ಸಭೆ ನಡೆಸಿ ಹಳ್ಳಿಯ ಜನರಿಗೆ ನೋಟಿಸ್ ನೀಡಿರುವ ಬಗ್ಗೆ ಪ್ರಶ್ನಿಸಿದರು. ಸಭೆಯಲ್ಲಿ ಯಾರೊಬ್ಬರೂ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದರು. ವಿಜಯಪುರದ ‘ಟಕ್ಕೆ’ ಎಂಬ ಗ್ರಾಮದ ಜನರಿಗೆ ನೋಟಿಸ್ ನೀಡಲಾಗಿತ್ತು. ಆದರೆ ‘ಟಕ್ಕೆ’ಯ ಹೆಸರನ್ನು ‘ಹೊನವಾಡ’ ಎಂದು ತಪ್ಪಾಗಿ ನಮೂದಿಸಿರುವುದರಿಂದ ಎಲ್ಲ ಗೊಂದಲಗಳು ಉಂಟಾಗಿವೆ. ಈ ಸಮಸ್ಯೆಯನ್ನು ಕಂದಾಯ ಇಲಾಖೆ ಸರಿಪಡಿಸಿದೆ ಎಂದು ಮೂವರು ಸಚಿವರು ಸ್ಪಷ್ಟಪಡಿಸಿದರು.

ಸಚಿವರು ಸ್ಪಷ್ಟನೆ ನೀಡಿದ್ದರೂ ಸಂಸದ ತೇಜಸ್ವಿ ಸೂರ್ಯ ಮತ್ತೊಂದು ಸುಳ್ಳು ನಿರೂಪಿಸುವ ದಾಖಲೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿಜಯಪುರದಲ್ಲಿ ಸುಮಾರು 9.14 ಎಕರೆ ಹಿಡುವಳಿ ಮತ್ತು ಕೃಷಿ ಜಮೀನನ್ನು ರಾಜ್ಯ ಸರ್ಕಾರವು ಸ್ಮಶಾನವಾಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದರು. ಆದರೆ ವಾಸ್ತವದಲ್ಲಿ ದಾಖಲೆಗಳಲ್ಲಿ ಈ ಭೂಮಿಯನ್ನು ವಶಪಡಿಸಿಕೊಂಡಿದ್ದು 2022ರಲ್ಲಿ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು.

ಹೊನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು ಕೃಷಿಭೂಮಿಗಳು ಸುಮಾರು 900 ಕುಟುಂಬಗಳಿಗೆ ಸೇರಿದ 1,100 ಎಕರೆಗಿಂತ ಕಡಿಮೆಯಿದೆ. 2020ರ ಗೆಜೆಟ್‌ ಪ್ರಕಾರ ಗ್ರಾಮದಲ್ಲಿ ಕೇವಲ 14 ಎಕರೆ ವಕ್ಫ್ ಜಮೀನಿದೆ. ವಿಜಯಪುರ ಜಿಲ್ಲೆಯಲ್ಲಿ 124 ನೋಟಿಸ್‌ಗಳನ್ನು ಮಾತ್ರ ನೀಡಲಾಗಿದೆ. 21,000ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ ಎಂಬ ಬಿಜೆಪಿಯ ಹೇಳಿಕೆಗಳು ಸುಳ್ಳಾಗಿತ್ತು. ಮತ್ತೊಂದು ಪ್ರಮುಖವಾದ ವಿಚಾರವೆಂದರೆ ವಿಜಯಪುರ ಜಿಲ್ಲೆಯಲ್ಲಿ 138 ಆರ್‌ಟಿಸಿ ಜಮೀನುಗಳನ್ನು ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ (26-07-2019 ರಿಂದ 20-05-2023) ರೈತರಿಗೆ ನೋಟಿಸ್ ನೀಡದೆಯೇ ವಶಪಡಿಸಿಕೊಳ್ಳಲಾಗಿತ್ತು. 138 ಮಂದಿಯ ಕಲಂ 9 ಮತ್ತು ಕಲಂ 11 (ರೆಕಾರ್ಡ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ – ಕಲಂ 9ರಲ್ಲಿ ಉಳುಮೆ ಮಾಡುವವರ ಹೆಸರನ್ನು ನಮೂದಿಸಲಾಗಿರುತ್ತದೆ. ಕಲಂ 11 ರಲ್ಲಿ ಮೂಲ ಮಾಲೀಕರ ಹೆಸರು ನಮೂದಾಗಿರುತ್ತದೆ) ಮಾರ್ಪಡಿಸಲಾಗಿತ್ತು. ಇವುಗಳಲ್ಲಿ 102 ಆಸ್ತಿ ಮುಸ್ಲಿಂ ಸಮುದಾಯದವರಾಗಿದ್ದರೆ, 10 ಆಸ್ತಿ ಹಿಂದೂ ರೈತರದಾಗಿತ್ತು. 26 ಆಸ್ತಿ ಸ್ಮಶಾನ ಹಾಗೂ ಇತರರಿಗೆ ಸೇರಿದವುಗಳಾಗಿದ್ದವು.

ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ ವಕ್ಫ್ ಅಧೀನದಲ್ಲಿದ್ದ 14,201,32 ಎಕರೆ ಭೂಮಿಯನ್ನು ಭೂಸುಧಾರಣೆ ಕಾಯ್ದೆಯಡಿ 11,835,29 ಎಕರೆ ಹಾಗೂ ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆ ರೈತರಿಗೆ ಮಂಜೂರು ಮಾಡಲಾಗಿದೆ. 773 ಎಕರೆ ಮಾತ್ರ ವಕ್ಫ್ ಸಂಸ್ಥೆಗಳ ಸುಪರ್ದಿಯಲ್ಲಿದೆ. ಹಾಗೆಯೇ ಜಿಲ್ಲೆಯಲ್ಲಿ 1345 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಯಾರಿಗೂ ಅಧಿಕೃತವಾಗಿ ಹಂಚಿಕೆಯಾಗಿಲ್ಲ. ಒತ್ತುವರಿಯಾಗಿರುವ 26 ಎಕರೆ ಜಮೀನು ಕೋರ್ಟಿನ ವಿವಾದದಲ್ಲಿದೆ. ವಿವಾದದಲ್ಲಿರುವವರಲ್ಲಿ ಶೇ. 90 ರಷ್ಟು ಮುಸ್ಲಿಂ ಸಮುದಾಯದವರಾಗಿದ್ದಾರೆ. 

1 22
2 16
3 17

ಕೊಡಗು: ಮಹಿಳೆಗೆ ವಕ್ಫ್ ಆಸ್ತಿಯೆಂದು ಬೆದರಿಕೆಯೊಡ್ಡಿದ್ದು ಸುಳ್ಳು

ಕೊಡಗು ಜಿಲ್ಲೆಯ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ಮಹಿಳೆಯೊಬ್ಬರ ಮನೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳಿ ಖಾಲಿ ಮಾಡುವಂತೆ ಬೆದರಿಕೆಯೊಡ್ಡಲಾಗಿದೆ ಎಂಬುದಾಗಿ ಕೆಲವು ಮಾಧ್ಯಮಗಳು ವೈಭವೀಕರಿಸಿ ಸುದ್ದಿ ಮಾಡಿದ್ದವು. ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಬಿಜೆಪಿ ನಾಯಕರು ಕೂಡ ಇದಕ್ಕೆ ಹೆಚ್ಚು ಪ್ರಚಾರ ನೀಡಿದ್ದರು. ಆದರೆ ಇದೊಂದು ಅಪ್ಪಟ ಸುಳ್ಳು ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪೋಸ್ಟ್ ಆಧರಿಸಿ ಪೊಲೀಸರು ಮಹಿಳೆಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸಿದ್ದರು. ಸ್ವತಃ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು, ‘ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ, ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ ಆಸ್ತಿಗೆ ಇಬ್ಬರು ಬಂದು, ‘ಇದು ವಕ್ಫ್‌ ಬೋರ್ಡ್‌ಗೆ ಸೇರಿದ ಆಸ್ತಿ. ನೀವು ಈ ಜಾಗವನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ಜಾಗ ಖಾಲಿ ಮಾಡಿಸಲು ಹೊರಗೆ 15 ಜನ ಇದ್ದಾರೆ’ ಎಂಬುದಾಗಿ ಕೊಡವ ಸಮಾಜದ ವಿಳಾಸಕ್ಕೆ ನವೆಂಬರ್ 6, 2024ರಂದು ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವುದು ಕಂಡಬಂದಿತ್ತು. ಈ ಕುರಿತಂತೆ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಅವರ ಕಚೇರಿ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಎಸ್ಪಿ ಕೆ. ರಾಮರಾಜನ್ ಸ್ಪಷ್ಟನೆ ನೀಡಿದ್ದರು.

ಹಾಗೆಯೇ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಕುರಿತು ಸ್ವಯಂ ಪ್ರೇರಿತವಾಗಿ ನವೆಂಬರ್ 7, 2024ರಂದು ಕುಶಾಲನಗರ ಟೌನ್ ಪೊಲೀಸ್ ಠಾಣೆ ಪೊಲೀಸರು ಬೆಂಗಳೂರಿನಲ್ಲಿರುವ ಪುಚ್ಚಿಮಂಡ ರೇಣುಕಾ ಉತ್ತಪ್ಪ ಅವರ ಮನೆಗೆ ಆಗಮಿಸಿ ಘಟನೆ ಕುರಿತು ವಿಚಾರಣೆಯನ್ನು ನಡೆಸಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ವಿಚಾರಣೆಯ ಅನ್ವಯ ಇದು ಖಾಸಗಿ ಸ್ವತ್ತಾಗಿತ್ತು ವಕ್ಫ್ ಬೋರ್ಡ್ ಆಸ್ತಿಯಾಗಿರಲಿಲ್ಲ. ವಕ್ಫ್ ಬೋರ್ಡ್ ಕಚೇರಿಯಿಂದ ಯಾವುದೇ ವ್ಯಕ್ತಿಗಳು ಬಂದಿರಲಿಲ್ಲ. ಜಾಗ ಖಾಲಿ ಮಾಡುವ ಸಂಬಂಧ ವಕ್ಫ್‌ ಬೋರ್ಡ್‌ನಿಂದ ಯಾವುದೇ ನೋಟಿಸ್ ಕೂಡ ನೀಡಲಾಗಿರುವುದಿಲ್ಲ. ಈ ಬಗ್ಗೆ ಪೊಲೀಸರು ಸ್ಥಳೀಯರು ಹಾಗೂ ಮಹಿಳೆಯ ಫೋನ್ ಕರೆಗಳನ್ನು ಕೂಡ ಕಲೆ ಹಾಕಿ ಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಿದ್ದರು. ಮಹಿಳೆಯ ಜಮೀನಿನ ಕಲಂ 9ರಲ್ಲೂ ಆಕೆಯ ಹೆಸರೇ ನಮೂದಾಗಿತ್ತು.

4 14
5 9

ಗದಗ: ಸೋಮೇಶ್ವರ ದೇಗುಲದ ಆರ್‌ಟಿಸಿಯಲ್ಲಿ ವಕ್ಫ್ ಹೆಸರು: ಡಿಸಿ ಹೇಳಿದ್ದೇನು?

ಗದಗ ಜಿಲ್ಲೆಯ ಕೋಟುಮುಚಗಿ ಗ್ರಾಮದ ಐತಿಹಾಸಿಕ ಸೋಮೇಶ್ವರ ದೇಗುಲದ ಮೇಲೆ ವಕ್ಫ್ ಕಣ್ಣು ಬಿದ್ದಿದೆ ಎಂಬುದಾಗಿ ದೃಶ್ಯ ಮಾಧ್ಯಮಗಳು ಜೋರಾಗಿ ಸದ್ದು ಮಾಡಿದವು. ಸೋಮೇಶ್ವರ ದೇವಸ್ಥಾನದ ಒಟ್ಟು 130 ಎಕರೆ ಆಸ್ತಿಯಲ್ಲಿ ಸರ್ವೆ ನಂ.562ರ 12 ಎಕರೆ 22 ಗುಂಟೆಯ ಜಾಗವನ್ನು ಆರ್‌ಟಿಸಿಯ ಕಲಂ 11ರಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ ಎಂದು ವದಂತಿಯನ್ನು ಹಬ್ಬಿಸಲಾಗಿತ್ತು. ಆದರೆ ಆರ್‌ಟಿಸಿಯಲ್ಲಿ ವಕ್ಫ್ ಎಂದು ನಮೂದಾಗಿರಲಿಲ್ಲ ಎಂದು ಸ್ವತಃ ಗದಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ಪಷ್ಟಪಡಿಸಿದರು.

“ಗದಗ ಜಿಲ್ಲೆಯಲ್ಲಿರುವ ಆಸ್ತಿಗಳ ದಾಖಲೆಯಲ್ಲಿ 2019ರ ನಂತರ ಯಾವುದೇ ಆಸ್ತಿಗಳ ಆರ್‌ಟಿಸಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದಿಲ್ಲ. ಮಾಧ್ಯಮಗಳಲ್ಲಿ ಬಿತ್ತರಿಸಲಾಗಿರುವ ವರದಿ ಸುಳ್ಳು. 1974ರ ಸರ್ಕಾರದ ಗೆಜೆಟ್ ಅನ್ವಯ ಜಿಲ್ಲೆಯ ಕೆಲವು ಆರ್.ಟಿ.ಸಿ.ಗಳಲ್ಲಿ 2019ರಲ್ಲಿ ವಕ್ಫ್ ಎಂದು ನೋಂದಣಿಯಾಗಿವೆ. ವಕ್ಫ್ ಎಂದು ನೋಂದಣಿಯಾದ ಹಲವು ಆಸ್ತಿಗಳ ಮಾಲೀಕರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಆದೇಶದ ಮೇರೆಗೆ ಆರ್.ಟಿ.ಸಿಯಲ್ಲಿ ನಮೂದಾಗಿದ್ದ ವಕ್ಫ್ ಎಂಬ ಪದವನ್ನು ಸರಿಪಡಿಸಲಾಗಿದೆ. ಕೋಟುಮುಚಗಿ ಗ್ರಾಮದ ಸೋಮೇಶ್ವರ ದೇವಸ್ಥಾನ ಆಸ್ತಿಯ ಆರ್.ಟಿ.ಸಿಯಲ್ಲಿ ವಕ್ಫ್ ಎಂದು ನಮೂದಾಗಿರುವುದಿಲ್ಲ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

ಸುವರ್ಣ ನ್ಯೂಸ್ ಹಬ್ಬಿಸಿರುವ ಫೇಕ್ ನ್ಯೂಸ್
6 9
govindra reddy

ಗದಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

ಹಾವೇರಿ | ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಸುದ್ದಿಯನ್ನು ‘ವಕ್ಫ್’ಗೆ ಅಂಟಿಸಿದ ಬಿಜೆಪಿ ಸಂಸದ

ಹಾವೇರಿ ಜಿಲ್ಲೆಯ ಹಣರಗಿ ಗ್ರಾಮದ ರುದ್ರಪ್ಪ ಎಂಬ ರೈತ ಸಾಲದ ವಿಚಾರಕ್ಕೆ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಿ, ತಾನು ಹೆಣೆದಿದ್ದ ಬಲೆಯಲ್ಲಿ ತಾನೇ ಸಿಕ್ಕಿಕೊಂಡಿತು. ಗಮನಿಸಬೇಕಾದ ಸಂಗತಿ ಎಂದರೆ, ಆ ರೈತ ಆತ್ಮಹತ್ಯೆ ಮಾಡಿಕೊಂಡಾಗ 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ಆ ರೈತ, ಅತಿವೃಷ್ಟಿಯಿಂದ ಬೆಳೆ ನಾಶವಾಗಿ ಸಾಲ ತೀರಿಸಲಾಗದೆ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಐಸಿಐಸಿಐ ಬ್ಯಾಂಕಿನಿಂದ 7 ಲಕ್ಷ ರೂ. ಸಾಲ ಮಾಡಿ, ಬೆಳೆ ನಷ್ಟದಿಂದಾಗಿ ಆ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ರೈತ ತನ್ನ ಡೆತ್‌ ನೋಟ್‌ನಲ್ಲೂ, ‘ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ತಿಳಿಸಿದ್ದರು.

ಜಮೀನಿನ ಪಹಣಿಯ ಸರ್ವೆ ಸಂಖ್ಯೆಯು ಕೂಡ ಮೃತಪಟ್ಟ ರೈತನ ಹೆಸರಲ್ಲಿಯೇ ಇತ್ತು. ಪೊಲೀಸರು ತನಿಖೆ ನಡೆಸಿ ಮನೆಯವರೆಲ್ಲರ ಹೇಳಿಕೆಯನ್ನು ಪಡೆದು ಸಾಲದಿಂದಾಗಿಯೇ ಮೃತಪಟ್ಟಿರುವುದನ್ನು ದಾಖಲಿಸಿದ್ದರು. ಸರ್ಕಾರದಿಂದ ಮೃತ ರೈತನ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗಿತ್ತು. ಈ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿಯದ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ರೈತನ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ವಕ್ಫ್ ವಿವಾದದಿಂದ ಬೇಸತ್ತು ಆತ್ಮಹತ್ಯೆ ರೈತ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದರು. ಅದನ್ನೇ ನಂಬಿದ ಹಲವಾರು ಮಾಧ್ಯಮಗಳು ನಿಜವನ್ನು ಪರಿಶೀಲಿಸದೆ ಸುದ್ದಿ ಪ್ರಕಟಿಸಿದ್ದವು. ಪೊಲೀಸರು ನಂತರದಲ್ಲಿ ಸ್ಪಷ್ಟನೆಯನ್ನು ನೀಡಿದ್ದರು. ಸುಳ್ಳು ಸುದ್ದಿ ಹರಡಿದ ಕಾರಣಕ್ಕಾಗಿ ತೇಜಸ್ವಿ ಸೂರ್ಯ ಹಾಗೂ ಮಾಧ್ಯಮಗಳ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು.

7 8
ಟಿವಿ9 ಕನ್ನಡ ಮಾಧ್ಯಮ ಬಿತ್ತರಿಸಿದ ಸುಳ್ಳು ಸುದ್ದಿ
8 4

ಬೆಳಗಾವಿ | ಬಿಜೆಪಿ ಸರ್ಕಾರದಲ್ಲಿ ಒತ್ತುವರಿ; ಪ್ರಣಾಳಿಕೆಯಲ್ಲಿ ವಕ್ಫ್ ರಕ್ಷಣೆಗೆ ಒತ್ತು

ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅಥಣಿ, ಗೋಕಾಕ್ ಮತ್ತು ಚಿಕ್ಕೋಡಿಯಲ್ಲಿ ಕೆಲವು ದಿನಗಳ ಹಿಂದೆ ಕೆಲ ರೈತರು ತಮ್ಮ ಜಮೀನುಗಳ ಆರ್‌ಟಿಸಿಯಲ್ಲಿ ವಕ್ಫ್ ಎಂದು ನಮೂದಾಗಿದೆ ಎಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ಎಲ್ಲ 16 ಆರ್‌ಟಿಸಿಗಳನ್ನು ಪರಿಶೀಲಿಸಿದಾಗ ಕಂಡುಬಂದ ಸತ್ಯವೇನೆಂದರೆ ಬಿಜೆಪಿ ಅಧಿಕಾರವಿದ್ದ 2021ರಲ್ಲಿ ಆರ್‌ಟಿಸಿಯನ್ನು ಬದಲಾಯಿಸಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಜು ಅಲಗೂರ್ ಅವರು ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಪ್ರದರ್ಶಿಸಿದ್ದರು. ಒತ್ತುವರಿಯನ್ನು ತೆರವುಗೊಳಿಸಿ ವಕ್ಫ್ ಸ್ವತ್ತುಗಳನ್ನು ರಕ್ಷಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು.

ಇನ್ನೊಂದು ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಅಣ್ಣಾ ಸಾಹೇಬ್ ಜೊಲ್ಲೆ ಅವರು, ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಮ್ಮ ಜಮೀನಿನ ಆರ್‌ಟಿಸಿಯ ಕಲಂ 11ರಲ್ಲಿ ವಕ್ಫ್ ಎಂದು ನಮೂದಿಸಿದೆ’ ಎಂದು ಆರೋಪಿಸಿದ್ದರು. ಆದರೆ ಪತ್ರಿಕಾಗೋಷ್ಠಿಯಲ್ಲಿಯೇ ಪತ್ರಕರ್ತರು ಬಿಜೆಪಿ ಅಧಿಕಾರದಲ್ಲಿದ್ದ 2021ರಲ್ಲಿ ಆರ್‌ಟಿಸಿಯನ್ನು ಬದಲಿಸಲಾಗಿದೆ ಎಂದು ಜೊಲ್ಲೆ ಅವರಿಗೆ ಮನವರಿಕೆ ಮಾಡಿದಾಗ, “ಪತ್ರಿಕಾಗೋಷ್ಠಿಗೆ ಕೆಲವೇ ಗಂಟೆಗಳ ಮೊದಲು ಅದನ್ನು ಗಮನಿಸಿದ್ದೇನೆ” ಎಂದು ಹೇಳಿ ಜಾರಿಕೊಂಡಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ. ಹೀಗಾಗಿ ಬಿಜೆಪಿ ನಾಯಕರ ಈ ಹೇಳಿಕೆ ರಾಜಕೀಯವಲ್ಲದೆ ಮತ್ತೇನೂ ಆಗಿರಲಿಲ್ಲ.

‘ದಿ ಹಿಂದೂ’ ವರದಿ (ಪೂರ್ಣ ಸುದ್ದಿಗೆ ‘ಇಲ್ಲಿ’ ಕ್ಲಿಕ್ ಮಾಡಿ)

ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ
ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಬಸವಪ್ರಭು ಜೊಲ್ಲೆ ಪ್ರತಿಕ್ರಿಯೆ

2018 – 2023ರಲ್ಲೇ ಹೆಚ್ಚು ನೋಟಿಸ್ ಜಾರಿ; ಒತ್ತುವರಿಗಾಗಿ ನೋಟಿಸ್ ಸಾಮಾನ್ಯ

ಪ್ರತಿ ವರ್ಷವೂ ರಾಜ್ಯಾದ್ಯಂತ ನೂರಾರು ನೋಟಿಸ್‌ಗಳನ್ನು ನೀಡಲಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲೇ ಸರಾಸರಿ 100ರಿಂದ 200 ನೋಟಿಸ್‌ಗಳನ್ನು ನೀಡಲಾಗುತ್ತದೆ. ಇದು 1995ರಿಂದಲೂ ನಡೆಯುತ್ತಿದೆ. ಆರ್‌ಟಿಸಿಯ ಕಲಂ 11ರಲ್ಲಿ ಪ್ರತಿ ವರ್ಷ ದಾಖಲಾತಿ ಬದಲಾವಣೆ ಸೇರಿ ಹಲವಾರು ತಿದ್ದುಪಡಿಗಳನ್ನು ಕೈಗೊಳ್ಳಲಾಗುತ್ತಿದೆ. ಇವೆಲ್ಲವೂ ಒತ್ತುವರಿಗೆ ಸಂಬಂಧಿಸಿದಂತಾಗಿರುತ್ತದೆ. ರಾಜಕೀಯ ಕಾರಣದಿಂದ ಈ ಬಾರಿ ಬಿಜೆಪಿ ವಕ್ಫ್ ವಿಚಾರವನ್ನು ಮುನ್ನಲೆಗೆ ತಂದಿದೆ. 2018 – 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ರೈತರಿಗೆ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಆದೇಶದಂತೆ 21,767 ಆರ್‌ಟಿಸಿಗಳ ಮ್ಯುಟೇಷನ್‌ಗೆ ಆದೇಶಿಸಲಾಗಿತ್ತು. (ಮ್ಯುಟೇಷನ್: ವರ್ಗಾವಣೆಯನ್ನು ಅಂದರೆ ಯಾರಿಂದ ಯಾರಿಗೆ ಸ್ವತ್ತು ವರ್ಗಾವಣೆಯಾಗಿದೆ ಎಂಬುದನ್ನು ತಿಳಿಸುವ ಹಾಗೂ ಅದು ಹೇಗೆ ವರ್ಗಾವಣೆಯಾಗಿದೆ ಎಂಬುದನ್ನು ವಿವರಿಸುವ ರೆವೆನ್ಯೂ ದಾಖಲೆ- ಇದು ಗಿಫ್ಟ್, ಸೇಲ್, ವ್ಹಿಲ್ ಮತ್ತು ಉತ್ತರಾಧಿಕಾರತ್ವ ಇತ್ಯಾದಿ ರೀತಿಯಲ್ಲಿ ವರ್ಗಾವಣೆಯಾಗುವ ಆಸ್ತಿಯ ಬಗ್ಗೆ ತಿಳಿಸುತ್ತದೆ).

ಇವೆಲ್ಲವೂ ಅತಿಕ್ರಮಣಕ್ಕೆ ಸಂಬಂಧಿಸಿದ್ದವಾಗಿದೆ. ಆದಾಗ್ಯೂ ಕಂದಾಯ ಇಲಾಖೆಯ ಅಧಿಕಾರಿಗಳು ಏಕಪಕ್ಷೀಯವಾಗಿ ಕ್ರಮ ಕೈಗೊಂಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸರಿಯಾದ ಕ್ರಮವನ್ನು ಅನುಸರಿಸುವ ಮೂಲಕ ಕ್ರಮ ಕೈಗೊಳ್ಳಲಾಗಿತ್ತು. ಕೆಲವು ಕಡೆ ರೈತರ ವಿರೋಧ ಹಾಗೂ ಬಿಜೆಪಿ ನಾಯಕರು ಇದನ್ನು ಸಂಪೂರ್ಣವಾಗಿ ರಾಜಕೀಯಕ್ಕಾಗಿ ಬಳಸಿಕೊಂಡ ಕಾರಣಕ್ಕಾಗಿ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗಳ ಆದೇಶವನ್ನು ಹಿಂಪಡೆಯಲಾಗಿದೆ. ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲದೆ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿಯೂ ರೈತರಿಗೆ ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ.

ಇಷ್ಟು ಮಾತ್ರವಲ್ಲದೆ ಹಾಸನ, ಮಂಡ್ಯ, ಬೀದರ್ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇದೇ ರೀತಿಯಲ್ಲಿ ಬೇರೆ ಬೇರೆ ಕಾರಣಗಳಿಗೆ ವಕ್ಫ್ ಬೋರ್ಡ್ ನೋಟಿಸ್‌ಗಳನ್ನು ನೀಡಿದೆ ಅಥವಾ ಪ್ರಕರಣಗಳನ್ನು ದಾಖಲಿಸಿದೆ ಎಂದು ವದಂತಿ ಹಬ್ಬಿಸಲಾಗಿದೆ. ಬಿಜೆಪಿ ಇವೆಲ್ಲವನ್ನು ವ್ಯವಸ್ಥಿತವಾಗಿ ತನ್ನ ದುರುದ್ದೇಶಿತ ರಾಜಕೀಯಕ್ಕೆ ಬಳಸಿಕೊಂಡಿದೆ. ಆದರೆ ಸತ್ಯವನ್ನು ಪರಿಶೀಲಿಸಿದಾಗ ಎಲ್ಲೂ ಏನು ಕಂಡುಬಂದಿರಲಿಲ್ಲ. ಎಲ್ಲವೂ ವದಂತಿ ಎಂದು ಸಾಬೀತಾಗಿತ್ತು. ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಕಂದಾಯ ಇಲಾಖೆ ಕೆಲವು ರೈತರಿಗೆ ನೋಟಿಸ್ ಜಾರಿಗೊಳಿಸಿತ್ತು.

ವಕ್ಫ್ ಆಸ್ತಿ ಎಂದರೇನು? ಮುಸ್ಲಿಮರು ಮಾತ್ರ ದಾನ ನೀಡಬಹುದೆ?

ಧಾರ್ಮಿಕ ಮತ್ತು ಸಾಮಾಜಿಕ ಸೇವೆಯ ಉದ್ದೇಶಕ್ಕಾಗಿ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳು ವಕ್ಫ್ ಮಂಡಳಿಗೆ ನೀಡಿದ ಜಮೀನನ್ನು ‘ವಕ್ಫ್ ಆಸ್ತಿ’ ಎಂದು ಪರಿಗಣಿಸಲಾಗುತ್ತದೆ. ‘ವಕ್ಫ್’ ಎಂಬ ಪದವು ಅರೇಬಿಕ್ ಪದ ವಕ್ಫಾದಿಂದ ಬಂದಿದೆ. ಇದರರ್ಥ ಪೂರ್ಣ ವಿರಾಮ ಅಥವಾ ಬೇರ್ಪಡಿಸಲಾಗದು. ಇದು ಹಿಂತೆಗೆದುಕೊಳ್ಳಲಾಗದ ದಾನದ ಸ್ವರೂಪವನ್ನು ಸೂಚಿಸುತ್ತದೆ. ವ್ಯಕ್ತಿಯೊಬ್ಬರು ಸ್ವಯಂಪ್ರೇರಿತವಾಗಿ, ಶಾಶ್ವತವಾಗಿ, ಅವರ ಸಂಪತ್ತಿನ ಒಂದು ಭಾಗವನ್ನು ದಾನ ಮಾಡುವುದಾಗಿದೆ. ಇಸ್ಲಾಂ ಧರ್ಮದಲ್ಲಿ ದಾನ ಮಾಡುವುದು ಕಡ್ಡಾಯವಾಗಿದ್ದು, ಇದನ್ನು ‘ಜಕಾತ್’ ಎಂದು ಕರೆಯಲಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ನೀಡುವುದನ್ನು ವಕ್ಫ್ ಎನ್ನಲಾಗುತ್ತದೆ. ವಕ್ಫ್ ಆಸ್ತಿಯನ್ನು ದೇವರ ಹೆಸರಿನಲ್ಲಿ (ಅಂದರೆ ಅಲ್ಲಾನ ಹೆಸರಿನಲ್ಲಿ) ಕೊಡಲಾಗುತ್ತದೆ.

ಖಾಸಗಿಯವರ ಪಾಲಾಗದೆ ಸಮುದಾಯದ, ಸಾರ್ವಜನಿಕ ಹಿತಕ್ಕಾಗಿ ಆಸ್ತಿಯನ್ನು ಬಳಸುವುದು ವಕ್ಫ್‌ನ ಪ್ರಮುಖ ಉದ್ದೇಶವಾಗಿದೆ. ಆದರೆ ಇದು ‘ಕುರಾನ್’ನಲ್ಲಿ ಕಡ್ಡಾಯವಿಲ್ಲ. ಆದಾಯವನ್ನು ಸಮುದಾಯದ ವಂಚಿತ ವರ್ಗಗಳ ಕಲ್ಯಾಣ ಮತ್ತು ಅಭಿವೃದ್ಧಿಗೆ ಬಳಸಬೇಕು. ಸಾಂಪ್ರದಾಯಿಕವಾಗಿ, ಫಲಾನುಭವಿಗಳು ಮುಸ್ಲಿಮರಾಗಿರಬಹುದು. ಆದರೆ ಅಂತಹ ಯಾವುದೇ ನಿಯಮವಿಲ್ಲ. ದರ್ಗಾಗಳು, ಮಸೀದಿಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಮುಸ್ಲಿಮೇತರರು ಆಸ್ತಿಯನ್ನು ದಾನ ಮಾಡಿದ ಅಸಂಖ್ಯಾತ ನಿದರ್ಶನಗಳಿವೆ. ವಕ್ಫ್ ಅಧೀನದಲ್ಲಿರುವ ಬೆಳಗಾವಿಯ ದೊಡ್ಡ ಕಾಲೇಜುಗಳಲ್ಲಿ ಒಂದನ್ನು ಮತ್ತು ಬೆಂಗಳೂರಿನಲ್ಲಿ ಭಿಕ್ಷುಕರ ಆಹಾರ ಕೇಂದ್ರವನ್ನು ಮುಸ್ಲಿಮೇತರರು ದಾನ ಮಾಡಿದ ಭೂಮಿಯಲ್ಲಿ ನಿರ್ಮಿಸಲಾಗಿದೆ. ‘ವಕ್ಫ್’ ಭೂಮಿಯನ್ನು ಮಾರಾಟ ಅಥವಾ ಗುತ್ತಿಗೆಗೆ ಕೂಡ ನೀಡುವಂತಿಲ್ಲ. ಹೀಗೆ ಒಮ್ಮೆ ವಕ್ಫ್ ಮಂಡಳಿಗೆ ನೀಡಿದ ಯಾವುದೇ ರೀತಿಯ ಸ್ವತ್ತು, ಶಾಶ್ವತವಾಗಿ ವಕ್ಫ್ ಆಸ್ತಿಯಾಗುತ್ತದೆ ಎನ್ನುತ್ತದೆ ವಕ್ಫ್ ಕಾಯ್ದೆ. ಮಸೀದಿ, ದರ್ಗಾ, ಖಬರಸ್ಥಾನ, ಈದ್ಗಾಗಳ ನಿರ್ವಹಣೆ ಮಾಡುವ ವ್ಯಕ್ತಿಗಳಿಗೆ ವಕ್ಫ್ ಮಂಡಳಿಯು ಇಂತಿಷ್ಟು ಜಮೀನನ್ನು ಇನಾಂ ರೂಪದಲ್ಲಿ ನೀಡುವ ಪದ್ಧತಿ ಜಾರಿಯಲ್ಲಿತ್ತು.

ದಾನ ಮಾಡಿದ ಆಸ್ತಿಯನ್ನು ಚಾರಿಟಬಲ್ ಟ್ರಸ್ಟ್ ನಿರ್ವಹಿಸಬಹುದು. ಇದು ಸಾರ್ವಜನಿಕ ಟ್ರಸ್ಟ್ ಅಥವಾ ಖಾಸಗಿ ಟ್ರಸ್ಟ್ ಅಥವಾ ಕುಟುಂಬ ಟ್ರಸ್ಟ್ ಆಗಿರಬಹುದು. ಇದನ್ನು ವಕ್ಫ್ ಮಂಡಳಿಯೇ ನಿರ್ವಹಿಸುವ ಅಗತ್ಯವಿಲ್ಲ. ಟ್ರಸ್ಟಿಗಳನ್ನು ಮುತವಲ್ಲಿ(ವ್ಯವಸ್ಥಾಪಕ/ಮ್ಯಾನೇಜರ್) ಎಂದು ಕರೆಯಲಾಗುತ್ತದೆ. ವಾಕಿಫ್ ಅಥವಾ ದಾನಿ ಮುಸ್ಲಿಂ ಆಗಿರಬಹುದು, ಆದರೆ ಅದು ಕಡ್ಡಾಯವಲ್ಲ. ಸಮುದಾಯದ ಬಲಾಢ್ಯರು ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸರ್ಕಾರ 1954ರಲ್ಲಿ ವಕ್ಫ್ ಕಾಯ್ದೆಯನ್ನು ರಚಿಸಿತು. ನಂತರದ 10 ವರ್ಷಗಳಲ್ಲಿ ವಕ್ಫ್ ಬೋರ್ಡ್ ರಚನೆಯಾಯಿತು. 1995ರಲ್ಲಿ ಹಾಗೂ 2013ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ವಕ್ಫ್ ಬೋರ್ಡ್ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು ಅದು ಪದನಿಮಿತ್ತ ಅಧಿಕಾರಿಗಳು ಮತ್ತು ನಾಮನಿರ್ದೇಶಿತ ಹಾಗೂ ಚುನಾಯಿತ ಸದಸ್ಯರನ್ನು ಹೊಂದಿದೆ. ಮುತವಲ್ಲಿಗಳು ಸಾಮಾನ್ಯವಾಗಿ ಚುನಾಯಿತರಾಗುತ್ತಾರೆ. ಆದರೆ ಅವರನ್ನು ನಾಮನಿರ್ದೇಶನ ಮಾಡಬಹುದು. ದಾನ ನೀಡಲಾದ ಭೂಮಿ ಒಳಗೊಂಡು ಎಲ್ಲ ವಿವಾದಗಳನ್ನು ವಕ್ಫ್ ಟ್ರಿಬ್ಯೂನಲ್ ಮುಂದೆ ಇರಿಸಲಾಗುತ್ತದೆ. ಇದು ಹೈಕೋರ್ಟ್‌ನಿಂದ ನೇಮಕಗೊಂಡ ನ್ಯಾಯಾಂಗ ಸಂಸ್ಥೆಯಾಗಿದೆ ಮತ್ತು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿರುತ್ತದೆ. ಯಾವುದೇ ಆಸ್ತಿಯನ್ನ ವಕ್ಫ್ ನೇರವಾಗಿ ಬಂದು ತನ್ನದೆಂದು ವಶಕ್ಕೆ ಪಡೆಯುವುದಿಲ್ಲ. ವಕ್ಫ್ ನ್ಯಾಯ ಮಂಡಳಿಯಲ್ಲಿ ಆ ಆಸ್ತಿಗಳ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಂಡು, ಬಳಿಕ ವಕ್ಪ್‌ಗೆ ಸಂಬಂಧಿಸಿದ ಆಸ್ತಿಯನ್ನು ವಕ್ಫ್ ವಶಕ್ಕೆ ಪಡೆಯಬಹುದು. ಒಂದು ವೇಳೆ, ವಕ್ಫ್ ನ್ಯಾಯ ಮಂಡಳಿಯ ಆದೇಶದ ಬಗ್ಗೆ ಆಕ್ಷೇಪಗಳಿದ್ದರೆ, ಅಂತಹ ಖಾಸಗಿ ವ್ಯಕ್ತಿಗಳು ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಮೇಲ್ಮನವಿ ಸಲ್ಲಿಸಬಹುದು.

ರಾಜ್ಯ ವಕ್ಫ್ ಬೋರ್ಡಅನ್ನು ಆಡಳಿತಾರೂಢ ಸರಕಾರವೇ ನೇಮಿಸುತ್ತದೆ. ಸಂಬಂಧಪಟ್ಟ ಮಂತ್ರಿಗಳು ಅದರ ಮುಖ್ಯಸ್ಥರಾಗಿರುವುದಲ್ಲದೇ ಮುಸ್ಲಿಮ್ ಶಾಸಕರು, ಸಂಸದರು ಅದರ ಸದಸ್ಯರಾಗಿರುತ್ತಾರೆ ಹಾಗೂ ಸರಕಾರವು ನೇಮಿಸುವ ಇಸ್ಲಾಮಿಕ್ ಪರಿಣಿತರು ಸಹ ಸದಸ್ಯರಾಗಿರುತ್ತಾರೆ. ಅದೇ ಮಾದರಿಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್‌ಗಳು ಅಸ್ತಿತ್ವದಲ್ಲಿರುತ್ತದೆ. ವಕ್ಫ್ ಬೋರ್ಡ್ ಯಾವುದೇ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಈಗ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳು ಆಧಾರ ರಹಿತವಾಗಿವೆ.

ಇದಲ್ಲದೆ ಒಂದು ವಕ್ಫ್ ಟ್ರಿಬ್ಯುನಲ್ ಅನ್ನು ಕೂಡ ಈ ಕಾಯ್ದೆಯ ಪ್ರಕಾರ ಸರಕಾರ ಸ್ಥಾಪಿಸಬೇಕು. ಇದು ವಕ್ಫ್ ಆಸ್ತಿಯ ಘೋಷಣೆಯ ಬಗ್ಗೆ ತಗಾದೆ ಹುಟ್ಟಿದಾಗ ನ್ಯಾಯ ಪಂಚಾಯತಿಯನ್ನು ಮಾಡುತ್ತದೆ. ವಕ್ಫ್ ಟ್ರಿಬ್ಯುನಲ್ ಅನ್ನೂ ಕೂಡ ಸರಕಾರವೇ ನೇಮಿಸುತ್ತದೆ. ಸೆಷನ್‌ ಮತ್ತು ಜಿಲ್ಲಾ ಸ್ಥಾಯಿಕ ನ್ಯಾಯಾಂಗದ ಅಧಿಕಾರಿ ಅದರ ಮುಖ್ಯಸ್ಥರಾಗಿರುತ್ತಾರೆ. ಸಹಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಹಾಗೂ ಇಸ್ಲಾಮಿಕ್ ಪರಿಣಿತರು ಸದಸ್ಯರಾಗಿರುತ್ತಾರೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ವಕ್ಫ್ ಬೋರ್ಡ್ ಮತ್ತು ವಕ್ಫ್ ಟ್ರಿಬ್ಯುನಲ್ ಎರಡನ್ನೂ ಸರಕಾರ ನೇಮಿಸುತ್ತದೆ. ಎರಡನ್ನೂ ಸರಕಾರವೇ ನಿಯಂತ್ರಿಸುತ್ತದೆ. ಇದು ಮುಸ್ಲಿಂ ಸಮುದಾಯದ ಸ್ವತಂತ್ರ ನಿರ್ವಹಣೆಯಲ್ಲಿರುವ ಸಂಸ್ಥೆಗಳಲ್ಲ. ಇವನ್ನು ಬಿಜೆಪಿ ಸರಕಾರವಿದ್ದಾಗ ಬಿಜೆಪಿ ನೇಮಿಸಿರುತ್ತದೆ. ಕಾಂಗ್ರೆಸ್ ಇದ್ದಾಗ ಕಾಂಗ್ರೆಸ್ ನೇಮಿಸುತ್ತದೆ. ಗಮನಿಸಿ, ಮುಸ್ಲಿಮ್ ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ಹೋಲಿಸಿದರೆ ಹಿಂದೂ, ಸಿಖ್ ಮಠಗಳ ಮತ್ತು ದೇವಸ್ಥಾನಗಳ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ಸರಕಾರದ ಇಷ್ಟೊಂದು ವ್ಯವಸ್ಥಿತ ಮಧ್ಯಪ್ರವೇಶವಿಲ್ಲ.

ಧಾರ್ಮಿಕ ಸ್ಥಳಗಳ ನಿರ್ವಹಣೆಗೆ ತಗಲುವ ವೆಚ್ಚ ಮತ್ತು ಆ ಕರ್ತವ್ಯಕ್ಕೆ ನಿಯೋಜನೆಗೊಂಡ ವ್ಯಕ್ತಿಯ ಕುಟುಂಬ ನಿರ್ವಹಣೆಗೆಂದು ಜಮೀನು ನೀಡಲಾಗುತ್ತಿತ್ತು. ಅಂತಹ ವ್ಯಕ್ತಿ ಕರ್ತವ್ಯದಿಂದ ವಿಮುಖನಾದರೆ ಆತನಿಂದ ಆ ಜಮೀನನ್ನು ವಾಪಸ್ ಪಡೆದು, ಹೊಸದಾಗಿ ನಿಯೋಜನೆಯಾದವರಿಗೆ ನೀಡಲಾಗುತ್ತಿತ್ತು. ಆಂಗ್ಲರ ಆಳ್ವಿಕೆಯಲ್ಲಿ ಹಾಗೂ ಸ್ವತಂತ್ರ ಭಾರತದ ಮೊದಲ 25 ವರ್ಷಗಳವರೆಗೂ ಇದೇ ಪದ್ಧತಿ ಜಾರಿಯಲ್ಲಿತ್ತು. ಈ ಪದ್ಧತಿ ಬದಲಾಗಿದ್ದು ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯ ಬಳಿಕ. ಅದೇ ಮಾದರಿಯ ಕಾಯ್ದೆಯನ್ನು ಕೇಂದ್ರ ಸರ್ಕಾರ ನಂತರದಲ್ಲಿ ಜಾರಿಗೊಳಿಸಿತು. ಈ ಕಾಯ್ದೆಯ ಅನುಸಾರ ಜಮೀನ್ದಾರಿ, ಇನಾಮ್ದಾರಿ ಮತ್ತು ಗೇಣಿದಾರ ಪದ್ಧತಿ ರದ್ದಾಯಿತು. ಕರ್ನಾಟಕ ಸರ್ಕಾರವು 1974ರಿಂದ 1979ರವರೆಗೆ ಹಲವು ಕಾಯ್ದೆಗಳು, ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದು ಭೂಸುಧಾರಣಾ ನೀತಿಗಳನ್ನು ಅನುಷ್ಠಾನಕ್ಕೆ ತಂದಿತು. ರಾಜ್ಯದಲ್ಲಿ ಜಮೀನ್ದಾರಿ, ಇನಾಮ್ದಾರಿ ಮತ್ತು ಗೇಣಿದಾರ ಪದ್ಧತಿಗಳು ರದ್ದಾಗಿದ್ದು- ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು.

ವಕ್ಫ್ ಮಂಡಳಿ ನೋಟಿಸ್ ನೀಡುವುದಿಲ್ಲ

ರಾಜ್ಯ ಸರ್ಕಾರ 10 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ಸಭೆಗಳನ್ನು ನಡೆಸಿ ಕೆಲವು ರೈತರಿಗೆ ನೋಟಿಸ್‌ಗಳನ್ನು ನೀಡಿ ಮತ್ತು ಆರ್‌ಟಿಸಿಗಳಲ್ಲಿ ಮಾಡಲಾದ ಮ್ಯುಟೇಶನ್‌ಗಳ ವಿರುದ್ಧ ಮೊಕದ್ದಮೆ ಹೂಡಲಾಗಿದ್ದರೂ, ವಾಸ್ತವದಲ್ಲಿ ಸತ್ಯ ಮತ್ತು ಸುಳ್ಳಿನ ಮಿಶ್ರಣವಿದೆ. ಉದಾಹರಣೆಗೆ ವಿಜಯಪುರ ಜಿಲ್ಲೆಯ ಹೊನವಾಡದ ಒಟ್ಟು ಕೃಷಿಭೂಮಿ 1,100 ಎಕರೆ ದಾಟುವುದಿಲ್ಲ. ಅವುಗಳಲ್ಲಿ ವಕ್ಫ್ ಭೂಮಿ ಕೇವಲ 14 ಎಕರೆ ಮಾತ್ರ.  2022 ರಲ್ಲಿ, ಬಿಜೆಪಿ ಸರ್ಕಾರವು 9 ಎಕರೆ ಸ್ಮಶಾನದ ಮಾಲೀಕತ್ವವನ್ನು ಮಂಡಳಿಗೆ ವರ್ಗಾಯಿಸಿತ್ತು. ಅಲ್ಲದೆ, ಕರ್ನಾಟಕದಲ್ಲಿ ‘ಸಾವಿರಾರು ನೋಟಿಸ್‌ಗಳನ್ನು’ ಹೊರಡಿಸಲಾಗಿದೆ ಎಂಬ ಬಿಜೆಪಿಯ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಕಂದಾಯ ಇಲಾಖೆಯು ಐದು ಜಿಲ್ಲೆಗಳಲ್ಲಿ 423 ನೋಟಿಸ್‌ಗಳನ್ನು ನೀಡಲು ತಯಾರಿ ನಡೆಸಿತ್ತು.

ಎರಡನೆಯದಾಗಿ, ವಕ್ಫ್ ಬೋರ್ಡ್‌ನಿಂದ ನೋಟಿಸ್‌ಗಳನ್ನು ಹೊರಡಿಸಲಾಗಿದೆ ಮತ್ತು ಉರ್ದು ಭಾಷೆಯಲ್ಲಿ ನೋಟಿಸ್‌ಗಳಿವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿರುವುದು ಶುದ್ಧ ಸುಳ್ಳು. ಸಾಮಾನ್ಯವಾಗಿ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆಯೇ ವಿನಾ ವಕ್ಫ್ ಬೋರ್ಡ್ ನೀಡುವುದಿಲ್ಲ. “ಸುಳ್ಳು ಸುದ್ದಿ” ಹಬ್ಬಿಸಿದ್ದಕ್ಕಾಗಿ ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಲವು ವರ್ಷಗಳಿಂದಲೂ ವಕ್ಫ್ ಭೂಮಿ ಒತ್ತುವರಿಯಾಗುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಆದರೆ ಈ ಬಾರಿ ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿತ್ತು. ಆದರೆ ಅತಿಕ್ರಮಣದ ಬಗ್ಗೆ ಭಾರತೀಯ ಜನತಾ ಪಕ್ಷದ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇವೆಲ್ಲ ಸಂಗತಿಗಳನ್ನು ಗಮನಿಸಿದರೆ ವಕ್ಫ್ ಮಂಡಳಿ ರೈತ ವಿರೋಧಿಯಲ್ಲ. ಬಿಜೆಪಿಯು ತನ್ನ ರಾಜಕೀಯ ಲಾಭಕ್ಕಾಗಿ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ, ಕೈಗಾರಿಕೀಕರಣ ಮುಂತಾದವುಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯುತ್ತಿದೆ. ಕೆಲವು ಕಡೆ ಉಚಿತವಾಗಿ, ತೀರಾ ಕಡಿಮೆ ಹಣಕ್ಕೆ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಬೆಂಗಳೂರಿನ ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದ ಬಳಿ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಕೆಐಆರ್‌ಡಿಬಿ ಮುಂದಾಗಿದೆ. ಅದನ್ನು ವಿರೋಧಿಸಿ ಕಳೆದ 2 ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೂ, ಸರ್ಕಾರಗಳು ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಇಂತಹ ಹಲವಾರು ಪ್ರಕರಣಗಳು ದೇಶದ ಎಲ್ಲ ಕಡೆ ನಡೆಯುತ್ತಿವೆ. ಇವೆಲ್ಲವುಗಳ ಬಗ್ಗೆ ಬಿಜೆಪಿ ನಾಯಕರು ಒಂದಿಷ್ಟು ಚಕಾರವೆತ್ತುವುದಿಲ್ಲ.

ಅನ್ವರ್ ಮಾಣಿಪ್ಪಾಡಿ ವರದಿ; ವಕ್ಫ್‌ ಆಸ್ತಿ ಕಬಳಿಕೆಯಲ್ಲಿ ಎಲ್ಲ ಪಕ್ಷಗಳ ಪಾಲು

ವಕ್ಫ್‌ ಆಸ್ತಿ ಕಬಳಿಕೆಯಲ್ಲಿ ಎಲ್ಲ ರಾಜಕೀಯ ನಾಯಕರು ಪಾಲು ಪಡೆದಿದ್ದಾರೆ.  2012ರಲ್ಲಿ  ಬಿಜೆಪಿ ಸರ್ಕಾರ  ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಆಯೋಗ ರಚಿಸಿತ್ತು. ಮಾಣಿಪ್ಪಾಡಿ ಅವರು ತಮ್ಮ ವರದಿಯಲ್ಲಿ, 29 ಸಾವಿರ ಎಕರೆ ವಕ್ಫ್ ಆಸ್ತಿ ಕಬಳಿಕೆ ಆಗಿದ್ದು, 2-3 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ನಡೆದಿದೆ ಎಂದು ಹೇಳಿದ್ದರು. ಮುಸ್ಲಿಂ ಮುಖಂಡರು, ಎಲ್ಲ ಪಕ್ಷಗಳ ರಾಜಕೀಯ ನಾಯಕರು ಮತ್ತು ಮೌಲ್ವಿಗಳು ವಕ್ಫ್ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದರು.

ಕರ್ನಾಟಕದಲ್ಲಿ ವಕ್ಫ್ ಬಳಿಯಿರುವ ಆಸ್ತಿಯಷ್ಟು?

ಕರ್ನಾಟಕ ವಕ್ಫ್ ಬೋರ್ಡ್‌ನ ಹಿರಿಯ ಅಧಿಕಾರಿ ಹಾಗೂ ವಕ್ಫ್ ಸಚಿವರು ಹೇಳುವ ಪ್ರಕಾರ ರಾಜ್ಯದಲ್ಲಿ ವಕ್ಫ್ ಬೋರ್ಡ್ ಬಳಿ ಈ ಮೊದಲು 1.12 ಲಕ್ಷ ಎಕರೆ ಭೂಮಿಯಿತ್ತು. ಭೂಸೂಧಾರಣೆ ಮತ್ತು ಇನಾಂ ನಿರ್ಮೂಲನೆ ಕಾಯ್ದೆಯಡಿ 75 ಸಾವಿರ ಎಕರೆ ಭೂಮಿಯನ್ನು ಕಳೆದುಕೊಳ್ಳಬೇಕಾಯಿತು. ಈ ಭೂಮಿಯನ್ನು ಭೂರಹಿತ ರೈತರು ಹಾಗೂ ಗೇಣಿದಾರರಿಗೆ ವಿತರಿಸಲಾಯಿತು. ಉಳಿದಂತೆ 15 ಸಾವಿರಕ್ಕೂ ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಹೊರತುಪಡಿಸಿದರೆ 20 ಸಾವಿರ ಎಕರೆ ಭೂಮಿ ಮಾತ್ರ ಮಂಡಳಿಯ ಅಧೀನದಲ್ಲಿದೆ.

ಭಾರತದಲ್ಲಿ ಪಾಕಿಸ್ತಾನದ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಆಸ್ತಿ ವಕ್ಫ್ ಬಳಿಯಿದೆಯೆ?

ಇಡೀ ಪಾಕಿಸ್ತಾನದ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ವಕ್ಫ್ ಆಸ್ತಿಗಳು ಭಾರತದಲ್ಲಿವೆ ಎಂಬ ಸುದ್ದಿ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ, “ಪಾಕಿಸ್ತಾನದ ವಿಸ್ತೀರ್ಣ 8.81 ಲಕ್ಷ ಚದರ ಕಿ.ಮೀ. ಭಾರತದಲ್ಲಿನ ವಕ್ಫ್ ಮಂಡಳಿಯ ವಿಸ್ತೀರ್ಣ 9.40 ಲಕ್ಷ ಚದರ ಕಿ.ಮೀ.; ಒಂದು ಪಾಕಿಸ್ತಾನವನ್ನು ಹೊರಗೆ ರಚಿಸಲಾಗಿದೆ ಮತ್ತು ಇನ್ನೊಂದನ್ನು ಒಳಗೆ ರಚಿಸಲಾಗಿದೆ. ಹಿಂದೂಗಳೇ ನಿದ್ದೆ ಮಾಡುತ್ತಿರಿ. ಇದು ಕಾಂಗ್ರೆಸ್ಸಿನ ಅದ್ಭುತ ಕೆಲಸ” ಎಂದು ಕೂಡ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಈ ವೈರಲ್ ಪೋಸ್ಟ್‌ನಲ್ಲಿನ ಅಂಕಿ ಅಂಶಗಳನ್ನು ಗಮನಿಸಿದ ಹಲವು ಮಂದಿ ಈ ಫೋಸ್ಟ್ ಅನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆದರೆ, ‘ಕನ್ನಡ ಫ್ಯಾಕ್ಟ್‌ಚೆಕ್‌’ ಜಾಲತಾಣವು ಸತ್ಯವನ್ನು ಹೊರಗೆ ತಂದಿದೆ. ಸೆಪ್ಟೆಂಬರ್ 13ರಂದು ಪ್ರೆಸ್ ಇನ್‌ಫರ್‌ಮೇಷನ್‌ ಬ್ಯೂರೋದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ, ”ವಕ್ಫ್ ತಿದ್ದುಪಡಿ ಮಸೂದೆ 2024ರ ವಿವರಣೆ’’ ಎಂಬ ಶೀರ್ಷಿಕೆಯ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ಪ್ರಶ್ನೆ 6ರಲ್ಲಿ, ‘ವಕ್ಫ್ ಮಂಡಳಿಯು ಎಷ್ಟು ಆಸ್ತಿಗಳನ್ನು ನಿಯಂತ್ರಿಸುತ್ತದೆ?’ ಎಂದು ಕೇಳಲಾಗಿದೆ. ಅದಕ್ಕೆ ವಕ್ಫ್ ಮಂಡಳಿಗಳು ಪ್ರಸ್ತುತ ಭಾರತದಾದ್ಯಂತ 9.40 ಲಕ್ಷ ಎಕರೆಗಳಷ್ಟು ವ್ಯಾಪಿಸಿರುವ 8.70 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತವೆ ಮತ್ತು ಅದರ ಮೌಲ್ಯ ಅಂದಾಜು 1.2 ಲಕ್ಷ ಕೋಟಿ ಎಂದು ಉಲ್ಲೇಖಿಸಲಾಗಿದೆ.

ಪಿಐಬಿ ಅಧಿಕೃತ ವರದಿಯಲ್ಲಿ ನೀಡಿರುವ ಮಾಹಿತಿಯನ್ನು ನೋಡಿದಾಗ ಭಾರತದಲ್ಲಿ ವಕ್ಫ್ ಆಸ್ತಿ 9.40 ಲಕ್ಷ ಎಕರೆ ಇದೆ. ಅಂದರೆ ಇದು ಸರಿಸುಮಾರು 3,804 ಚದರ ಕಿ.ಮೀ. ಯಷ್ಟಿದೆ. ಪಾಕಿಸ್ತಾನದ ಒಟ್ಟು ವಿಸ್ತೀರ್ಣ 8,81,913 ಚದರ ಕಿಲೋಮೀಟರ್‌ಗಳಷ್ಟಿದೆ. ಇದನ್ನು ಪಾಕಿಸ್ತಾನದ ಭೂ ವಿಸ್ತರಣೆಗೆ ಹೋಲಿಸಿದರೆ, ಪಾಕಿಸ್ತಾನದ ವಿಸ್ತೀರ್ಣ ಭಾರತದ ವಕ್ಫ್ ಮಾಲಿಕತ್ವದ ಭೂಪ್ರದೇಶಕ್ಕಿಂತಲೂ 231 ಪಟ್ಟು ದೊಡ್ಡದಾಗಿದೆ. ಒಟ್ಟಾರೆಯಾಗಿ ಇವೆಲ್ಲ ಅಂಶಗಳನ್ನು ಗಮನಿಸಿ ಹೇಳುವುದಾದರೆ ಭಾರತದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ವಿಸ್ತೀರ್ಣ 9.40 ಲಕ್ಷ ಚದರ ಕಿಲೋಮೀಟರ್ ಅಲ್ಲ ಎಂಬುದು ಸತ್ಯವಾಗಿದೆ. ಬದಲಿಗೆ, ವಕ್ಫ್ ಸಂಸ್ಥೆ ಹೊಂದಿರುವುದು 9.4 ಲಕ್ಷ ಎಕರೆ. ಇದು ಪಾಕಿಸ್ತಾನದ ಒಟ್ಟು ಪ್ರದೇಶಕ್ಕಿಂತ 231 ಪಟ್ಟು ಚಿಕ್ಕದಾಗಿದೆ. 9.40 ಲಕ್ಷ ಎಕರೆ ಜಮೀನನಲ್ಲಿ ಶೇ. 90 ರಷ್ಟು ವಿವಿಧ ಧರ್ಮಾರ್ಥ ಕೆಲಸಗಳಿಗೆ ನೀಡಲಾಗಿದೆ. ಭಾರತದಲ್ಲಿ ದೇಗುಲ, ಮಠಮಾನ್ಯಗಳ ಸುಪರ್ದಿಯಲ್ಲಿರುವ ಆಸ್ತಿಗೆ ಹೋಲಿಸಿದರೆ ವಕ್ಫ್ ಆಸ್ತಿ ಏನೇನೂ ಇಲ್ಲ. ಆಂಧ್ರಪ್ರದೇಶ ರಾಜ್ಯ ಒಂದರಲ್ಲೇ ದೇವಸ್ಥಾನಗಳು ಮತ್ತು ಮಠಗಳಿಗೆ 4.2 ಲಕ್ಷ ಎಕರೆ ಜಮೀನಿದೆ. ತಮಿಳುನಾಡಿನಲ್ಲಿ 5 ಲಕ್ಷ ಎಕರೆ ಜಮೀನಿದೆ. ಹೀಗೆ ಎರಡು ರಾಜ್ಯಗಳಲ್ಲೇ ಹಿಂದೂ ದೇವಸ್ಥಾನ ಮತ್ತು ಮಠಗಳಿಗೆ 9 ಲಕ್ಷಕ್ಕೂ ಹೆಚ್ಚು ಎಕರೆ ಜಮೀನಿದೆ ಎಂದು ಹಲವು ಸರ್ಕಾರಿ ವರದಿಗಳೇ ತಿಳಿಸಿವೆ. ಅಲ್ಲದೆ ವಕ್ಫ್‌ಗೆ ತೆರಿಗೆ ವಿನಾಯಿತಿಗಳಿರುವಂತೆ ಮಠಮಂದಿರಗಳಿಗೂ ತೆರಿಗೆ ವಿನಾಯಿತಿ ಇದೆ.

9 4
10 5

ವಕ್ಫ್ ಆಸ್ತಿ ಅಲ್ಲಾನದ್ದು ಎಂದು ಹೇಳಿದ್ದ ಮಾಜಿ ಸಿಎಂ ಬೊಮ್ಮಾಯಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ 2022ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ‘ವಕ್ಫ್ ಆಸ್ತಿ ಅಲ್ಲಾನದ್ದು’ ಎಂದು ಹೇಳಿದ್ದರು. 2022ರಲ್ಲಿ ಬೆಂಗಳೂರಿನಲ್ಲಿ ಕೆಎಂಡಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೊಮ್ಮಾಯಿ “ವಕ್ಫ್ ಆಸ್ತಿ ಅಲ್ಲಾಹನದ್ದು. ಅದರಲ್ಲಿ ಕಾಂಪ್ರಮೈಸ್ ಮಾಡಬಾರದು. ನೀವು ಕಾಂಪ್ರಮೈಸ್ ಆದಲ್ಲಿ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಊಪರ್ವಾಲಾ(ಮೇಲಿನವನು) ನೋಡುತ್ತಿದ್ದಾನೆ. ಖುದಾನ ಜಮೀನನ್ನು ಲೂಟಿ ಮಾಡುತ್ತಿರಬೇಕಾದರೆ ನೀವೆಲ್ಲ ಕಣ್ಣು ಮುಚ್ಚಿ ಕುಳಿತರೆ, ಲೂಟಿ ಮಾಡುವವನಿಗಿಂತ ಲೂಟಿ ಮಾಡಲು ಬಿಟ್ಟವರೇ ದೊಡ್ಡ ಮುಜ್ರಿಂ(ತಪ್ಪಿತಸ್ಥ) ಆಗುತ್ತಾರೆ. ಖುದಾನ ಜಮೀನುಗಳನ್ನು ರಕ್ಷಿಸುವ ಅವಕಾಶ ಲಭಿಸಿರುವ ನೀವು ಪುಣ್ಯವಂತರು” ಎಂದಿದ್ದರು.

“ಕರ್ನಾಟಕದಲ್ಲಿ ಸುಮಾರು 2,000 ಕೋಟಿ ವಕ್ಫ್ ಆಸ್ತಿಯನ್ನು ಈಗಾಗಲೇ ಖಾಸಗಿಯವರು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಜಮೀನು ಒಳಗೆ ಹಾಕಿದ್ದರೆ ಬೇರೆ ವಿಷಯ. ಸಂಪೂರ್ಣ ಆಸ್ತಿಗಳನ್ನೇ ಖಾಸಗಿಯವರು ಒಳಗೆ ಹಾಕಿಕೊಂಡಿದ್ದಾರೆ. ಇನ್ನೀಗ ಆಸ್ತಿಯ ಒಂದು ಮೂಲೆಯಲ್ಲಿ ನಾವು ಮಸೀದಿ ಕಟ್ಟುತ್ತೇವೆ ಎಂದರೆ ಅವರು ನಿಮಗೆ ಅವಕಾಶ ಕೊಡುತ್ತಾರಾ? ಆದ್ದರಿಂದ ಖಾಸಗಿಯವರು ವಶಪಡಿಸಿಕೊಂಡಿರುವ ವಕ್ಫ್‌ನ ಎಷ್ಟು ಆಸ್ತಿಗಳಿವೆಯೋ ಅದೆಲ್ಲವೂ ಮತ್ತೆ ವಕ್ಫ್ ಬೋರ್ಡಿಗೆ ಬರುವವರೆಗೂ ನೀವೆಲ್ಲ ಸುಮ್ಮನೆ ಕೂರಬಾರದು. ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ಬೊಮ್ಮಾಯಿ ಅಬ್ಬರದ ಭಾಷಣ ಮಾಡಿದ್ದರು.

ಬೊಮ್ಮಾಯಿ ಭಾಷಣ ಮಾಡುವ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಪಿ ಸಿ ಮೋಹನ್, ಬಿಜೆಪಿ ನಾಯಕ ರಾಜು ಗೌಡ, ಆಗಿನ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಶಾಫಿ ಸಅದಿ ಸೇರಿದಂತೆ ಹಲವರು ಇದ್ದರು. ಯಾರೊಬ್ಬರೂ ಆಗ ತಕರಾರು ತೆಗೆದಿರಲಿಲ್ಲ. ಬೊಮ್ಮಾಯಿ ಹೇಳಿಕೆ ತಪ್ಪು ಎಂದಿರಲಿಲ್ಲ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿವಾದ ದೊಡ್ಡದಾದ ನಂತರ ಬೊಮ್ಮಾಯಿ ಮಾತು ಬದಲಿಸಿ ತಾವು ಹೇಳಿದ್ದ ವಿಷಯವೇ ಬೇರೆಯಾಗಿತ್ತು. ಸಂದರ್ಭವೂ ಬೇರೆಯಾಗಿತ್ತು ಎಂದಿದ್ದರು. 

11 7

ಬಿಜೆಪಿ ನಾಯಕರ ರಾಜಕೀಯ; ಸುಳ್ಳು ಮತ್ತು ಸತ್ಯಗಳು

ಅಕ್ಟೋಬರ್ 7 ಮತ್ತು 8 ರಂದು ವಿಜಯಪುರ ಜಿಲ್ಲೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ ವೇಳೆ ವಕ್ಫ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದರು. ನಂತರ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಕ್ಫ್ ಆಸ್ತಿಗಳ ಖಾತಾ ಆಗದಿರುವ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕು ಎಂದು ಮೌಖಿಕ ಸೂಚನೆ ನೀಡಿದ್ದರು. ಸಚಿವ ಜಮೀರ್ ಅಹಮ್ಮದ್ ವಿಜಯಪುರಕ್ಕೆ ಬಂದು ಹೋಗುತ್ತಿದ್ದಂತೆ ವಕ್ಫ್ ವಿವಾದ ಕಿಡಿ ಹೊತ್ತಿಕೊಂಡಿತು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ನಾಯಕರು ಕೆಲವು ವರ್ಷಗಳಿಂದ ವಕ್ಫ್ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರೂ ಈ ಬಗ್ಗೆ ಸಾರ್ವಜನಿಕರು ಯಾರು ಗಮನ ಹರಿಸಿರಲಿಲ್ಲ. ಆದರೆ ವಕ್ಫ್ ಆಸ್ತಿಗಳ ಬಗ್ಗೆ ಸಚಿವ ಜಮೀರ್ ಅಹಮದ್ ಅದಾಲತ್ ನಡೆಸಿದ ನಂತರ ಯತ್ನಾಳ್, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ದುರುದ್ದೇಶದ ರಾಜಕೀಯ ಅಸ್ತ್ರವನ್ನಾಗಿ ಮಾರ್ಪಡಿಸಿಕೊಂಡರು.

ಗ್ರಾಮ ಮಟ್ಟದಲ್ಲೇ ಇತ್ಯರ್ಥಗೊಳ್ಳಬೇಕಾಗಿದ್ದ ಸಣ್ಣ ಸಮಸ್ಯೆಯನ್ನು ರಾಜ್ಯದ ವಿಚಾರವನ್ನಾಗಿ ಮಾಡಿ, ಕೋಮು ಸಂಘರ್ಷಕ್ಕೆ ವೇದಿಕೆ ಕಲ್ಪಿಸಿದರು. ಸಚಿವ ಜಮೀರ್ ಸೂಚನೆ ವಿರೋಧಿಸಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜಿಲ್ಲೆಯಲ್ಲಿ ರೈತರನ್ನು ಸೇರಿಸಿ ದೊಡ್ಡ ಸಮಾವೇಶವನ್ನೇ ಮಾಡಿದರು. ನಂತರದಲ್ಲಿ ಹೊನವಾಡದಲ್ಲಿ ಯತ್ನಾಳ್, ಶೋಭಾ ಮುಂತಾದ ನಾಯಕರು ಧರಣಿ ಹಮ್ಮಿಕೊಂಡು ಅಮಾಯಕ ಜನರಲ್ಲಿ ಕೋಮು ದ್ವೇಷವನ್ನು ಹರಡಿದರು. ಒಂದು ಚಿಕ್ಕ ಸಮಸ್ಯೆಯನ್ನು ರಾಜ್ಯದ ವಿಚಾರವನ್ನಾಗಿ ಮಾಡಿ, ಸಾಮರಸ್ಯವನ್ನು ಕದಡಿದರು.

ಕರ್ನಾಟಕದಲ್ಲಿ ನಡೆಯುತ್ತಿದ್ದ ಉಪಚುನಾವಣೆಯಲ್ಲಿ ಕೋಮು ಧ್ರುವೀಕರಣ ಸಾಧಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ವಕ್ಫ್ ವಿಚಾರವನ್ನು ಬಿಜೆಪಿ ನಾಯಕರು ಮುನ್ನಲೆ ತಂದರು ಎಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತವೆ. ಹಾಗೆಯೇ ಇದನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅನುಕೂಲಕರ ವಾತಾವರಣ ಸೃಷ್ಟಿಸಿಕೊಳ್ಳಲು ಬಿಜೆಪಿಯವರು ಯತ್ನಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, “ಕರ್ನಾಟಕದಲ್ಲಿ ಬಡ ರೈತರು ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನು ವಕ್ಫ್ ಮಂಡಳಿ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ವಕ್ಫ್ ಬೋರ್ಡ್ 1,500 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ‘ಅಮಾಯಕ ಹಿಂದೂಗಳ’ ಭೂಮಿಯನ್ನು ಪಡೆದುಕೊಳ್ಳಲು ಪಿತೂರಿ ನಡೆಸುತ್ತಿದೆ” ಎಂದು ದ್ವೇಷ ಬಿತ್ತನೆಯ ಮಾತುಗಳನ್ನು ಆಡಿದ್ದರು. ಪ್ರಲ್ಹಾದ್ ಜೋಶಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ವಕ್ಫ್ ಆಸ್ತಿ ಅಲ್ಲಾನ ಆಸ್ತಿಯೇ?’ ಎಂದು ಪ್ರಚೋದಿಸಿದ್ದರೆ, ಯತ್ನಾಳ್ ಅವರ ಮಾತುಗಳು ಸದಾ ಬೆಂಕಿ ಕಾರುತ್ತಲೇ ಇವೆ.

ಬಾಗಲಕೋಟೆ: ಯತ್ನಾಳ್‌ಗೆ ವಕ್ಫ್ ರಾಜಕೀಯ ಮಾಡದಂತೆ ಹಿಂದೂ ಭಕ್ತರ ತರಾಟೆ

ವಕ್ಫ್ ವಿಚಾರವನ್ನು ವಿವಾದವನ್ನಾಗಿಸಿದ ಮುಂಚೂಣಿ ನಾಯಕರಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಮುಖರು. ಇತ್ತೀಚಿಗೆ ವಕ್ಫ್ ವಿಷಯವನ್ನು ಪ್ರಸ್ತಾಪಿಸಿ, ಮುಖಭಂಗ ಅನುಭವಿಸಿದ್ದಾರೆ. ನವೆಂಬರ್ 11 ರಂದು ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ‘ವಕ್ಫ್’ ವಿಚಾರ ಪ್ರಸ್ತಾಪಿಸಿದ್ದರು.

ಈ ವೇಳೆ ವೇದಿಕೆಯ ಬಳಿಯಲ್ಲಿದ್ದ ಗ್ರಾಮದ ಸ್ಥಳೀಯರು, ‘ಇಲ್ಲಿ ರಾಜಕಾರಣ ಮಾಡಲು ಬರಬೇಡಿ’ ಎಂದು ತರಾಟೆಗೆ ತೆಗೆದುಕೊಂಡು, ಛೀಮಾರಿ ಹಾಕಿದ್ದಾರೆ. ಇದರಿಂದ ಸಾರ್ವಜನಿಕರ ಎದುರಲ್ಲೇ ಮುಖಭಂಗ ಅನುಭವಿಸಿದ ಯತ್ನಾಳ್, ಅರ್ಧದಲ್ಲಿಯೇ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

“ಇದು ಯಾವ ಕಾರ್ಯಕ್ರಮ, ನೀವು ಏನು ಮಾತಾಡುತ್ತಿದ್ದೀರಿ. ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯದವರು ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು ಆರು ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ. ಇದು ರಾಜಕೀಯ ಮಾತಾನಾಡುವ ಸ್ಥಳವಲ್ಲ’’ ಎಂದು ಯತ್ನಾಳ್ ಅವರನ್ನು ಸಭೆಯಲ್ಲಿ ನೆರೆದಿದ್ದ ಜನರು ತರಾಟೆಗೆ ತೆಗೆದುಕೊಂಡರು. ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಯತ್ನಾಳ್ ವೇದಿಕೆಯಿಂದ ಇಳಿದು ಹೋದರು. ಆದರೂ ಯತ್ನಾಳ್ ಸೇರಿದಂತೆ, ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪ್ರಲ್ಹಾದ್ ಜೋಶಿ, ಸಿಟಿ ರವಿ ಮುಂತಾದವರು ವಕ್ಫ್‌ನ ವಾಸ್ತವ ಸ್ಥಿತಿ ಮಾತನಾಡುವುದಕ್ಕಿಂತ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಕ್ಕಿಂತ ಕೋಮು ದ್ವೇಷ ಹರಡುವುದರಲ್ಲೇ ಹೆಚ್ಚು ನಿರತರಾಗಿದ್ದಾರೆ. 

yatnal 9

ಜೆಪಿಸಿಯ ಜಗದಂಬಿಕಾ ಪಾಲ್ ರಾಜಕೀಯ

ಕೋಮು ಸೌಹಾರ್ದ ಕದಡುವ ರಾಜಕೀಯದ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಮಸೂದೆಗೆ ತಿದ್ದುಪಡಿ ತರಬೇಕೆಂದು ಹೊರಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಸೂದೆಯಲ್ಲಿರುವ ಅಂಶಗಳು ಸಂವಿಧಾನದ ಜಾತ್ಯತೀತ ತತ್ವಕ್ಕೆ ಮತ್ತು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದು ಪ್ರತಿಪಕ್ಷಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ಇದಕ್ಕಾಗಿ ಸರ್ಕಾರ ಮಸೂದೆಯನ್ನು ಪರಿಶೀಲಿಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಿದೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಒಳಗೊಂಡ ಸಮಿತಿಗೆ ಬಿಜೆಪಿಯ ಹಿರಿಯ ಸಂಸದ ಜಗದಂಬಿಕಾ ಪಾಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ನಿಷ್ಪಕ್ಷಪಾತವಾಗಿ ತನಿಖೆ ಹಾಗೂ ವಿಚಾರಣೆ ನಡೆಸಬೇಕಾದ ಜಗದಂಬಿಕಾ ಪಾಲ್ ವಿವಾದವನ್ನು ಮತ್ತಷ್ಟು ದೊಡ್ಡದು ಮಾಡುವ ಸಲುವಾಗಿ, ಜೆಪಿಸಿ ಸದಸ್ಯರಿಗೂ ಮಾಹಿತಿ ನೀಡದೆ ವಿವಾದ ಆರಂಭವಾದ ಕರ್ನಾಟಕದ ವಿಜಯಪುರಕ್ಕೆ ಆಗಮಿಸಿದ್ದರು. ಜೆಪಿಸಿ ಅಧ್ಯಕ್ಷರು ಯಾವುದೇ ಸ್ಥಳಕ್ಕೆ ಹೋಗಬೇಕೆಂದರೆ, ಸಾಮಾನ್ಯವಾಗಿ ಎಲ್ಲ ಸದಸ್ಯರೂ ಒಟ್ಟು ಸೇರಿ ಹೋಗುತ್ತಾರೆ. ಕನಿಷ್ಠ ಅವರೆಲ್ಲರಿಗೂ ಮಾಹಿತಿ ಇರುತ್ತದೆ ಅಥವಾ ನಿಯಮಾನುಸಾರ ಮಾಹಿತಿ ನೀಡಬೇಕು. ಸದರಿ ಜೆಪಿಸಿಯಲ್ಲಿ ಕರ್ನಾಟಕದ ಇಬ್ಬರು ಸದಸ್ಯರಿದ್ದಾರೆ. ಬಿಜೆಪಿಯ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡಾ. ಸೈಯ್ಯದ್ ನಾಸಿರ್ ಹುಸೇನ್. ಆದರೆ ಪಾರದರ್ಶಕತೆ ನೀತಿಯನ್ನು ಅನುಸರಿಸದ ಜಗದಂಬಿಕಾ ಪಾಲ್ ತಮ್ಮ ಪಕ್ಷ ಬಿಜೆಪಿಯ ತೇಜಸ್ವಿ ಸೂರ್ಯ ಅವರನ್ನು ಮಾತ್ರ ಕರೆದುಕೊಂಡು ಹೋಗಿದ್ದಾರೆ. ತೇಜಸ್ವಿ ಸೂರ್ಯ ಅವರಿಗೆ ಮಾಹಿತಿ ನೀಡಿರುವ ಪಾಲ್ ಅವರು ಮತ್ತೊಬ್ಬ ಸದಸ್ಯ ಸೈಯ್ಯದ್ ನಾಸಿರ್ ಹುಸೇನ್ ಅವರಿಗೆ ಮಾಹಿತಿಯನ್ನೇ ನೀಡಿಲ್ಲ. ವಿಜಯಪುರಕ್ಕೆ ಆಗಮಿಸಿದ ಜಗದಂಬಿಕ ಪಾಲ್, ವಕ್ಫ್ ವಿಚಾರದಲ್ಲಿ ಧರಣಿ ಮಾಡುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಬಳಿ ತೆರಳಿದ್ದಾರೆ. ಪಾಲ್ ಅವರಿಗೆ ನೊಂದವರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ನೋಟಿಸ್ ಪಡೆದ ರೈತರ ಬಳಿ ತೆರಳಿ ಅವರ ನಿಜವಾದ ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ ಬಿಜೆಪಿ ನಾಯಕರ ಬಳಿ ತೆರಳಿದ್ದು ರಾಜಕೀಯವಲ್ಲದೆ ಮತ್ತೇನೂ ಅಲ್ಲ ಎಂಬುದು ಸ್ಪಷ್ಟ.

ವಕ್ಫ್ ಭೂಮಿ ರಾಷ್ಟ್ರೀಕರಣಗೊಳಿಸುವ ಹುನ್ನಾರ?

ಕೇಂದ್ರ ಸರ್ಕಾರದ 1995 ಮತ್ತು 2013ರಲ್ಲಿನ ವಕ್ಫ್ ಕಾಯ್ದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ವಕ್ಫ್(ತಿದ್ದುಪಡಿ) ಮಸೂದೆ 2024, ಕೆಲವು ಆತಂಕಕಾರಿ ನಿಬಂಧನೆಗಳನ್ನು ಹೊಂದಿದೆ ಎಂದು ಸಮುದಾಯದ ಮುಖಂಡರ ಆತಂಕಕ್ಕೆ ಒಳಗಾಗಿದ್ದಾರೆ. ಉದ್ದೇಶಿತ ಮಸೂದೆಯಲ್ಲಿ ಎಲ್ಲ ವಕ್ಫ್ ಜಮೀನುಗಳನ್ನು ಸರ್ಕಾರಿ ಜಮೀನುಗಳಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುವ ಸಾಧ್ಯತೆಯಿದೆ. ಜಿಲ್ಲಾ ನ್ಯಾಯಾಧೀಶರ ನೇತೃತ್ವದ ನ್ಯಾಯಮಂಡಳಿಯ ಅಧಿಕಾರವನ್ನು ನ್ಯಾಯಾಂಗದ ಸದಸ್ಯರಲ್ಲದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮಟ್ಟಕ್ಕೆ ತಗ್ಗಿಸುತ್ತದೆ. ಸರ್ಕಾರದ ಭೂಸ್ವಾಧೀನ ಮಸೂದೆಯು ವಂಚಿತ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಾಗಿಯೇ ಬಂದಿದೆ. ರಾಜಕೀಯ ವ್ಯಕ್ತಿಗಳು, ವಕ್ಫ್ ಬೋರ್ಡ್‌ನಲ್ಲಿದ್ದ ಹಲವರು ವಕ್ಫ್ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇವೆಲ್ಲವುಗಳ ಹೊರತಾಗಿ ದಾನಿಗಳ ಉದ್ದೇಶಗಳಿಗಿಂತ ಭಿನ್ನವಾದ ರೀತಿಯಲ್ಲಿ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲಾಗುತ್ತಿದೆ. ಸಮುದಾಯಕ್ಕೆ ಅನುಕೂಲವಾಗುವಂತೆ ಕಾನೂನುಗಳನ್ನು ಮಾರ್ಪಡಿಸಬೇಕಿದೆ. ಆದರೆ, ಪ್ರಸ್ತಾವಿತ ಮಸೂದೆಯು ಅಂತಹ ಉದ್ದೇಶಗಳನ್ನು ಹೊಂದಿರುವಂತೆ ತೋರುತ್ತಿಲ್ಲ.

ನೂತನ ಮಸೂದೆಯು ಕೇವಲ ಚುನಾಯಿತ ಸರ್ಕಾರಗಳ ಹಸ್ತಕ್ಷೇಪವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಕ್ಫ್ ನಿಯಮಗಳ ವಿರುದ್ಧವಾಗಿ ಲಾಭದಾಯಕ ಸಂಸ್ಥೆಗಳಾಗಿ ಮಾರ್ಪಡಿಸಬಹುದು. ಎಲ್ಲ ವಿಚಾರಗಳಲ್ಲೂ ‘ಒಂದು ರಾಷ್ಟ್ರ, ಒಂದು ಕಾನೂನು’ ಎಂದು ಆಗ್ರಹಿಸುವ ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಧಾರ್ಮಿಕ ಕಾನೂನುಗಳ ವಿಚಾರದಲ್ಲಿ ಮಾತ್ರ ಭಿನ್ನ ನಿಲುವು ವ್ಯಕ್ತಪಡಿಸುತ್ತಾರೆ. ಹಿಂದೂ ದೇವಾಲಯಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕೆಂದು ಅವರು ಬಯಸುತ್ತಾರೆ. ಆದರೆ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಸರ್ಕಾರವು ಬಿಗಿಯಾಗಿ ನಿಯಂತ್ರಿಸಬೇಕು ಎಂದು ಒತ್ತಾಯಿಸುತ್ತಾರೆ.

ಎಲ್ಲ ಧಾರ್ಮಿಕ ಆಸ್ತಿಗಳು ಪ್ರತಿಕೂಲ ಸ್ವಾಧೀನದಿಂದ ಉಂಟಾಗುವ ಮಾಲೀಕತ್ವದ ಹಕ್ಕುಗಳಿಂದ ವಿನಾಯಿತಿ ಪಡೆದಿವೆ. ಆದರೆ ವಕ್ಫ್ ಆಸ್ತಿ ಸರ್ಕಾರಿ ಆಸ್ತಿಯಾದರೆ, ಅದು ದುರ್ಬಲವಾಗುತ್ತದೆ. ಯಾವುದೇ ವಕ್ಫ್ ಆಸ್ತಿಯು ಶತಮಾನಗಳ ಕಾಲ ಅದರ ಸ್ವಾಧೀನವನ್ನು ಇತರರು ಅನುಭವಿಸುತ್ತಿದ್ದರೂ ಅದು ಖಾಸಗಿ ಆಸ್ತಿಯಾಗುವುದಿಲ್ಲ. ಆದರೆ ಸರ್ಕಾರಿ ಆಸ್ತಿಯು 12 ವರ್ಷಗಳ ನಂತರ ಪ್ರತಿಕೂಲ ಸ್ವಾಧೀನದಿಂದ ತನ್ನ ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಇದು ಒಂದು ಸಮುದಾಯವನ್ನು ಮತ್ತಷ್ಟು ದುರ್ಬಲಗೊಳಿಸುವುದಲ್ಲದೆ ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು.

ಹಿಂದೂ, ಇತರ ಸಂಸ್ಥೆಗಳಿಗೆ ಯಾವುದೇ ತಿದ್ದುಪಡಿಯಿಲ್ಲ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ವಕ್ಫ್ ಮಸೂದೆಯ ಬಗ್ಗೆ ಯಾರ ಜೊತೆಗೂ ಸಮಾಲೋಚನೆ ನಡೆಸಿಲ್ಲ. ಮಸೂದೆ ಪ್ರಸ್ತಾಪಿಸಿರುವ ತಿದ್ದುಪಡಿಯಲ್ಲಿ, ‘ಕಾಗದ ಪತ್ರ ತೋರಿಸಿದರೆ ದಾಖಲಾದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ, ವಕ್ಫ್ ಬೋರ್ಡಿನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕು’ ಎಂದು ಬದಲಿಸಲಾಗಿದೆ. ಆದರೆ ಈ ಬಗೆಯ ಷರತ್ತು ಹಿಂದೂ, ಸಿಖ್ ಅಥವಾ ಕ್ರೈಸ್ತ ಸಂಸ್ಥೆಗಳಿಗೆ ವಿಧಿಸಲಾಗಿಲ್ಲ. ನೂತನ ಮಸೂದೆಯು ಮುಸ್ಲಿಂ ವಕ್ಫ್ ವಿಷಯದಲ್ಲಿ ಸರ್ಕಾರಿ ಹಿಡಿತವನ್ನು ಹೆಚ್ಚಿಸುವ ಮತ್ತು ಮುಸ್ಲಿಂ ಆಸ್ತಿಗಳನ್ನು ರಾಷ್ಟ್ರೀಕರಿಸುವ ಹಿಂದುತ್ವವಾದಿ ದುರುದ್ದೇಶವನ್ನು ಹೊಂದಿದೆ. ಇದು ಮುಸ್ಲಿಮರ ಅಸ್ತಿತ್ವ, ಅಸ್ಮಿತೆ, ಬದುಕು ಮತ್ತು ನಾಗರಿಕತ್ವವನ್ನೇ ನಾಶ ಮಾಡುವ ಉಗ್ರ ಹಿಂದುತ್ವ ಯೋಜನೆಯ ಭಾಗವಾಗಿದೆ. ಅದ್ದರಿಂದಲೇ ಬಿಜೆಪಿಯ ವಕ್ಫ್ ವಿರೋಧ ಮುಸ್ಲಿಮರನ್ನು ಆತಂಕಕ್ಕೀಡು ಮಾಡುತ್ತಿದೆ.

ಹಲವು ದಶಕಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಜಮೀನು ನಿಮ್ಮದಲ್ಲ ಎಂಬ ನೋಟಿಸ್ ಬಂದರೆ ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ. ಆದರೆ 1998 ಜನವರಿ 28 ರಂದು ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಕೊಟ್ಟ ತೀರ್ಪಿನ ಪ್ರಕಾರ ಒಮ್ಮೆ ಒಂದು ಆಸ್ತಿಯ ಸ್ವರೂಪ ವಕ್ಫ್ ಸ್ವರೂಪದ್ದಾಗಿದ್ದಲ್ಲಿ ಅದು ಶಾಶ್ವತವಾಗಿ ವಕ್ಫ್ ಸ್ವರೂಪದ್ದಾಗಿರುತ್ತೆ. ಅದರ ಒಡೆತನವನ್ನು ವರ್ಗಾವಣೆ ಮಾಡಲು ಬರುವುದಿಲ್ಲ. ಆ ಆದೇಶದ ಮುಂದುವರಿಕೆಯಾಗಿಯೇ, ಒತ್ತುವರಿಯಾಗಿರಬಹುದಾದ ಆಸ್ತಿಗಳಿಗೆ ವಕ್ಫ್ ನೋಟಿಸ್ ಕೊಡುತ್ತಿದೆ. ಆ ಪ್ರಕ್ರಿಯೆಯನ್ನು ನಿಲ್ಲಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ.

ಮುಸ್ಲಿಂ ಸಮಾಜದ ಶ್ರೀಮಂತರು ಮತ್ತು ರಾಜಕಾರಣಗಳಿಂದ ವಕ್ಫ್ ಆಸ್ತಿಗಳ ಅತಿ ಹೆಚ್ಚು ದುರ್ಬಳಕೆಯಾಗುತ್ತಿವೆ. ವಕ್ಫ್ ಆಸ್ತಿಗಳ ಒಡೆತನವನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ ಅದರ ಗುತ್ತಿಗೆ ಮತ್ತು ಉಪಗುತ್ತಿಗೆಯನ್ನು ಆ ಆಸ್ತಿಯ ಉಸ್ತುವಾರಿ ನೋಡಿಕೊಳ್ಳುವ ಮುತವಲ್ಲಿ ಮಾಡಬಹುದು. ಈ ಅವಕಾಶವನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ಗುತ್ತಿಗೆ ಆದಾಯ ತರಬಹುದಾದ ಆಸ್ತಿಗಳನ್ನು ವಿಂಡ್ಸರ್ ಮ್ಯಾನರ್‌ನಂತಹ ಪಂಚತಾರಾ ಹೋಟೆಲ್‌ಗಳಿಗೆ ಅಥವಾ ಶ್ರೀಮಂತರಿಗೆ ಭ್ರಷ್ಟಾಚಾರದ ಮೂಲಕ ನೀಡಿರುತ್ತಾರೆ. ವಕ್ಫ್ ಬೋರ್ಡಿಗೆ ಅತಿ ದೊಡ್ಡ ನಷ್ಟವಾಗುತ್ತಿರುವುದು ನಗರದ ವಕ್ಫ್ ಆಸ್ತಿಗಳ ದುರ್ಬಳಕೆ ಮತ್ತು ಒತ್ತುವರಿಗಳಿಂದ. ಇದನ್ನು ಖಂಡಿತ ನಿಗ್ರಹಿಸಬೇಕಿದೆ.

ಗ್ರಾಮಿಣ ಪ್ರದೇಶದಲ್ಲಿ ರೈತರು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ಅಕಸ್ಮಾತ್ ವಕ್ಫ್ ಭೂಮಿ ಆಗಿದ್ದರೂ ಅದನ್ನು ಅವರಿಂದ ಕಿತ್ತುಕೊಳ್ಳುವುದರಿಂದ ವಕ್ಫ್‌ಗೆ ಯಾವ ಹೊಸ ಆದಾಯವೂ ಬರುವುದಿಲ್ಲ. ಏಕೆಂದರೆ ಅದು ಉಳುಮೆ ಮಾಡುವ ಭೂಮಿಯೇ ಆಗಿರುತ್ತದೆ. ಆದ್ದರಿಂದ ಅದು ವಕ್ಫ್ ಭೂಮಿಯೆಂದು ಸ್ಥಾಪಿತವಾದರೂ ಅದನ್ನು ರೈತರಿಗೆ ಉಳುಮೆಗೆ ಬಿಟ್ಟುಕೊಡುವುದರ ಮೂಲಕ ಮಾತ್ರ ವಕ್ಫ್‌ಗೆ, ಮುಸ್ಲಿಂ ಸಮುದಾಯಕ್ಕೆ ಮತ್ತು ಒಟ್ಟಾರೆ ಸಮಾಜಕ್ಕೆ ಸಾಮಾಜಿಕ, ಆರ್ಥಿಕ ಲಾಭ ಹಾಗೂ ನಿಜವಾದ ಪರಿಹಾರ ಸಿಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ರೈತರು, ವಕ್ಫ್ ಬೋರ್ಡ್, ಮುಸ್ಲಿಂ ಸಮುದಾಯ ಮತ್ತು ಸರ್ಕಾರ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ. ರೈತರ ವಿಷಯದಲ್ಲಿ ಬಿಜೆಪಿ ನಾಯಕರು ಕೂಡ ಕೋಮು ದ್ವೇಷವನ್ನು ಬಿಟ್ಟು ಅವರ ಏಳೆಗೆಯತ್ತ ಗಮನಹರಿಸಬೇಕಾಗಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X