ಸರಿ ಸುಮಾರು ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು ಕರ್ನಾಟಕದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲ ದಾರದಹಳ್ಳಿಯ ಧೀಮಂತ ರಾಜಕಾರಣಿ ಚಂದ್ರೇಗೌಡರು, ಅಧಿಕಾರಕ್ಕಾಗಿ, ಹಣಕ್ಕಾಗಿ, ಚಾಲ್ತಿಗಾಗಿ, ಪ್ರಚಾರಕ್ಕಾಗಿ ತಾವು ನಂಬಿದ ತತ್ವ, ಸಿದ್ಧಾಂತಗಳನ್ನು ಬಲಿ ಕೊಡದವರು. ರಾಜಕಾರಣಕ್ಕೆ ಘನತೆ, ಗೌರವ ತರುವ ಮೂಲಕ, ರಾಜಕಾರಣದಲ್ಲಿ ಇಂಥವರಿರಬೇಕು ಎಂದು ಬಯಸುವಂತೆ ಬದುಕಿ ಬಾಳಿದವರು.
‘ಬದುಕಿನಲ್ಲಿ ನೆನಪು ಬಹುಬೇಗ ಕಳೆದುಹೋಗುತ್ತವೆ’ ಎಂದು ಖ್ಯಾತ ದಾರ್ಶನಿಕ ಕನ್ಫೂಷಿಯಸ್‌ನ ವ್ಯಾಖ್ಯಾನವೊಂದನ್ನು ಉಲ್ಲೇಖ ಮಾಡಿದ ಡಿ.ಬಿ ಚಂದ್ರೇಗೌಡರು, ‘ನೆನಪುಗಳನ್ನು ಕಳೆದುಹೋಗಲಿಕ್ಕೆ ಬಿಡಬಾರದು, ದಾಖಲಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವಾಗಬೇಕು, ಬನ್ನಿ ಮಾತನಾಡೋಣ’ ಎಂದಿದ್ದರು.
ಅದು, 2015ರಲ್ಲಿ, ದೇವರಾಜ ಅರಸು ಶತಮಾನೋತ್ಸವ ಸಂದರ್ಭದಲ್ಲಿ, ದೇವರಾಜ ಅರಸು ಕುರಿತು ಚಂದ್ರೇಗೌಡರನ್ನು ಭೇಟಿಯಾದಾಗ ಹೇಳಿದ ಮಾತು ಇನ್ನೂ ಕಿವಿಯಲ್ಲಿದೆ. ಆಗ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ದಿನದಲ್ಲಿ 45 ನಿಮಿಷಗಳ ಕಾಲ ಮಾತ್ರ ಕೂತು ಮಾತನಾಡಲು ಶಕ್ತರಾಗಿದ್ದರು. ಅವರಿಗೆ ತ್ರಾಸ ಕೊಡಬಾರದೆಂಬುದು ಅವರ ಶ್ರೀಮತಿ ಪೂರ್ಣಮ್ಮನವರ ಕೋರಿಕೆಯಾಗಿತ್ತು. ಶ್ರೀಮತಿಯವರ ಸಜ್ಜನಿಕೆಗೆ ಮರು ಮಾತನಾಡದೆ, ಅವರು ಕೊಟ್ಟ ಮಲೆನಾಡಿನ ಕಾಫಿ ಕುಡಿದು, ಗೌಡರ ಸಮಯಕ್ಕೆ ಹೊಂದಿಸಿಕೊಂಡು ಹೋಗಿ, ಒಂದು ತಿಂಗಳವರೆಗೆ ಮಾತುಕತೆ ನಡೆಸಿದ್ದೆ. ಆ ಅವಧಿಯಲ್ಲಿ ಅವರೊಂದಿಗೆ ಒಂದು ರೀತಿಯ ಆತ್ಮೀಯತೆ ಬೆಳೆದಿತ್ತು. ಮುಕ್ತವಾಗಿ ಮಾತನಾಡುವ ವಾತಾವರಣ ಸೃಷ್ಟಿಸಿತ್ತು. ಅವರ ಮಾತುಗಳುದ್ದಕ್ಕೂ ದೇವರಾಜ ಅರಸು ಕುರಿತು ಅಪಾರ ಪ್ರೀತಿ ಮತ್ತು ಗೌರವ ಎದ್ದುಕಾಣುತ್ತಿತ್ತು. ಜೊತೆಗೆ ಕರ್ನಾಟಕದ ರಾಜಕಾರಣವನ್ನು ಬಿಡಿಸಿಟ್ಟಿತ್ತು.
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯ ಸುಶಿಕ್ಷಿತ, ಶ್ರೀಮಂತ ಕುಟುಂಬದ ಕುಡಿಯಾದ ಡಿ.ಬಿ ಚಂದ್ರೇಗೌಡರು, ತರುಣರಾಗಿದ್ದ ಕಾಲದಲ್ಲಿ, ವಿದ್ಯಾಭ್ಯಾಸ ಮುಗಿಸಿದ ಕಾಲಘಟ್ಟದಲ್ಲಿ ಜಯಪ್ರಕಾಶ್ ನಾರಾಯಣರ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಪ್ರಜಾ ಸೋಷಲಿಸ್ಟ್ ಪಾರ್ಟಿ ಮೂಲಕ 1967ರಲ್ಲಿ ರಾಜಕೀಯ ರಂಗಕ್ಕೆ ಧುಮುಕಿದ್ದರು.
ಗೌಡರು ರಾಜಕಾರಣಕ್ಕೆ ಬಂದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು, ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿ ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆ ಯೋಚಿಸುತ್ತಿದ್ದರು. ಅವುಗಳನ್ನೆಲ್ಲ ಕರ್ನಾಟಕದಲ್ಲಿ ಕಾರ್ಯರೂಪಕ್ಕೆ ತರಲು ದೇವರಾಜ ಅರಸು ಸೇನಾನಿಯಂತೆ ಸಿದ್ಧರಾಗಿ ನಿಂತಿದ್ದರು. ಇದು ಒಂದು ರೀತಿಯಲ್ಲಿ, ಕಾಂಗ್ರೆಸ್ ಸೇರಲು ಚಂದ್ರೇಗೌಡರನ್ನು ಪ್ರೇರೇಪಿಸಿದ ಕಾರಣಗಳಾಗಿದ್ದವು. ಅದಕ್ಕೆ ಪೂರಕವಾಗಿ, 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ, ಪಟ್ಟಭದ್ರರು, ಶ್ರೀಮಂತರು, ಮೇಲ್ವರ್ಗದವರು ನಿಜಲಿಂಗಪ್ಪನವರ ಸಿಂಡಿಕೇಟ್ ಕಾಂಗ್ರೆಸ್ ಸೇರಿದರೆ; ಶೋಷಿತರು, ಬಡ ವರ್ಗದವರು, ಗೇಣಿದಾರರು, ಹಿಂದುಳಿದವರು ಇಂದಿರಾ ಗಾಂಧಿಯವರ ಇಂಡಿಕೇಟ್ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಳ್ಳುವಂತಾಗಿತ್ತು. ರಾಜಕಾರಣ ಹೊಸ ಪೀಳಿಗೆಗೆ ತೆರೆದುಕೊಂಡಿತ್ತು. ಆ ಹೊಸ ಪೀಳಿಗೆಯ ರಾಜಕಾರಣಿಗಳಲ್ಲಿ ಚಂದ್ರೇಗೌಡರೂ ಒಬ್ಬರಾಗಿ ಕಾಂಗ್ರೆಸ್ ಸೇರಿದ್ದರು.
ಅದೇ ಸಮಯಕ್ಕೆ 1971ರ ಲೋಕಸಭಾ ಚುನಾವಣೆ ಎದುರಾಯಿತು. ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿತ್ತು. ಆ ಜವಾಬ್ದಾರಿ ಅರಸರ ಹೆಗಲಿಗೆ ಬಿದ್ದಿತ್ತು. ಚಿಕ್ಕಮಗಳೂರಿನ ಹಾಲಿ ಎಂಪಿ ಹುಚ್ಚೇಗೌಡರು ಸ್ಪರ್ಧಿಸಲ್ಲ ಎಂದು ಹೇಳಿ ಹಿಂದೆ ಸರಿದರು. ಆ ಸಂದರ್ಭದಲ್ಲಿ ದೇವರಾಜ ಅರಸರು ಜಿಲ್ಲೆಯಲ್ಲಿ ಪ್ರಭಾವಿಗಳು, ಶ್ರೀಮಂತರು, ಒಕ್ಕಲಿಗ ನಾಯಕರು ಯಾರ್‍ಯಾರಿದ್ದಾರೆಂದು ಕೇಳಿ, ಪಟ್ಟಿ ಮಾಡಿದರು. ಒಬ್ಬೊಬ್ಬರನ್ನೇ ಕರೆದು ಮಾತನಾಡಿಸಿದರು. ಕೊನೆಗೆ, ‘ಕೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ತಡಕಾಡಿದರಂತೆ’ ಎಂದರು. ಸುತ್ತ ಇದ್ದವರಿಗೆಲ್ಲ ಆಶ್ಚರ್ಯ. ‘ಡಿ.ಬಿ ಚಂದ್ರೇಗೌಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ’ ಎಂದು ನಿಂತ ನಿಲುವಿನಲ್ಲಿಯೇ ಘೋಷಿಸಿಬಿಟ್ಟರು.
ಅರಸು ಪ್ರೋತ್ಸಾಹ, ಜನರ ಬೆಂಬಲದಿಂದ ಗೆದ್ದ ಗೌಡರು ಚಿಕ್ಕ ವಯಸ್ಸಿಗೇ ದೆಹಲಿಯ ಸಂಸತ್ ಭವನ ಪ್ರವೇಶಿಸಿದ್ದರು. ಆನಂತರ, ಚಂದ್ರೇಗೌಡರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದರು. ಅರಸರೊಂದಿಗೆ ಇಡೀ ಕರ್ನಾಟಕ ಸುತ್ತಿ, ಸಾಮಾಜಿಕ ಬದುಕನ್ನು ಅರಿತು ಅರಗಿಸಿಕೊಂಡರು. 1972ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು, ದೇವರಾಜ ಅರಸು ಮುಖ್ಯಮಂತ್ರಿಯಾದರು. ಚಿಕ್ಕವಯಸ್ಸಿನಲ್ಲಿಯೇ ಮುಖ್ಯಮಂತ್ರಿಗಳ ಆಪ್ತವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ ಗೌಡರಿಗೆ ಸಿಕ್ಕಿತ್ತು.

1975ರ ತುರ್ತು ಪರಿಸ್ಥಿತಿಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಹುತೇಕ ಕಡೆ ಕಾಂಗ್ರೆಸ್ ನಿರ್ನಾಮವಾಗಿತ್ತು. ಆದರೆ ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಲ್ಲಿ 26 ಗೆದ್ದಿತ್ತು. ಈ ಗೆಲುವಿಗೆ ಅರಸು ಕಾರಣ, ಅದು ಸರಕಾರದ ಸಾಧನೆಗೆ ಸಂದ ಜಯವಾಗಿತ್ತು. 1977ರಲ್ಲಿ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡರು, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಸೋತು ಸುಣ್ಣಾಗಿದ್ದ ಇಂದಿರಾ ಗಾಂಧಿ ಸ್ಪರ್ಧಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅವಕಾಶ ಕಲ್ಪಿಸಿಕೊಟ್ಟಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗೆಲುವಿಗೆ ಶ್ರಮಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಈ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಚಂದ್ರೇಗೌಡರು, ದೇವರಾಜ ಅರಸರ ರಾಜಕೀಯ ಚಾಣಾಕ್ಷತೆಯನ್ನು ಮನದುಂಬಿ ಮಾತನಾಡಿದ್ದರು. ಸ್ಥಾನವನ್ನು ತಾವಾಗಿಯೇ ತೆರವು ಮಾಡಿಕೊಡುವಂತೆ, ತಾವೇ ಇಂದಿರಾ ಗಾಂಧಿಯವರ ಮನವೊಲಿಸುವಂತೆ ಮತ್ತು ತಾವೇ ಖುದ್ದಾಗಿ ಕ್ಷೇತ್ರ ಸುತ್ತಾಡಿ ಗೆಲ್ಲಿಸಿಕೊಂಡು ಬರುವಂತೆ ಅರಸು, ಚಂದ್ರೇಗೌಡರ ಮನವೊಲಿಸಿದ್ದರಂತೆ. ಅದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಚುನಾವಣೆ. ಭಾರತದ ರಾಜಕಾರಣದ ಮಟ್ಟಿಗೆ ಐತಿಹಾಸಿಕ ಚುನಾವಣೆ. 77 ಸಾವಿರ ಮತಗಳ ಅಂತರದಿಂದ ಗೆದ್ದ ಇಂದಿರಾ ಗಾಂಧಿಯವರ ರಾಜಕೀಯ ಪುನರ್ಜನ್ಮ ಕೊಟ್ಟ ಚುನಾವಣೆ. ಆ ಗೆಲುವು ಅರಸು ಅವರ ಸಾಧನೆಯ ಮೈಲಿಗಲ್ಲು ಎಂದ ಚಂದ್ರೇಗೌಡರು, ಅದರಿಂದ ವೃದ್ಧಿಸಿದ ಆತ್ಮವಿಶ್ವಾಸವೇ ಅವರನ್ನು ಅಜ್ಞಾನಕ್ಕೆ ದೂಡಿತು, ದಿಕ್ಕು ತಪ್ಪಿಸಿತು ಎಂದ ಮೌನಕ್ಕೆ ಜಾರಿದರು.
ಇದನ್ನು ಓದಿದ್ದೀರಾ?: ತನ್ನ ಗೋರಿಯನ್ನು ತಾನೇ ತೋಡಿಕೊಂಡ ಜಾತ್ಯತೀತ ಜನತಾದಳ: ಒಂದು ಅವಲೋಕನ
‘ಅರಸು ಕೊಟ್ಟ ಮಾತು ತಪ್ಪಲಿಲ್ಲ’ ಎಂದ ಗೌಡರು, ‘ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿದರು. ನೀರಾವರಿ ಸಚಿವ ಸ್ಥಾನ ನೀಡಿ ಗೌರವಿಸಿದರು’ ಎಂದಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಗೌಡರು ಸಚಿವರಾಗಿ ಕೇವಲ ಒಂದು ವರ್ಷ ಕಳೆಯುವುದರೊಳಗೆ ದೇವರಾಜ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಸಿನಿಂದ ಹೊರಬರಬೇಕಾಯಿತು. ಅವರು ಹುಟ್ಟುಹಾಕಿದ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡ ಗೌಡರು, 1980-81ರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದರು.
ಸುಶಿಕ್ಷಿತ ರಾಜಕಾರಣಿ ಎಂದೇ ಹೆಸರಾದ ಚಂದ್ರೇಗೌಡರು, ಆಳವಾದ ಅಧ್ಯಯನ, ಆರೋಗ್ಯಕರ ಚಿಂತನೆ, ಶಿಸ್ತುಬದ್ಧ ಜೀವನ, ಸಂಯಮದ ನಡತೆ, ಕಳಂಕರಹಿತ ರಾಜಕಾರಣವನ್ನು ವೃತದಂತೆ ಪಾಲಿಸಿಕೊಂಡು ಬಂದವರು. 1983ರಲ್ಲಿ ಜನತಾ ಪಕ್ಷ ಸೇರಿ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. ತಮ್ಮ ವೇಷಭೂಷಣ, ವ್ಯಕ್ತಿತ್ವಕ್ಕೆ ಒಗ್ಗುವ ರಾಮಕೃಷ್ಣ ಹೆಗಡೆಯವರ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿ, ಆ ಸ್ಥಾನಕ್ಕೇ ಮೆರಗು ತಂದರು. ಆ ಸಂದರ್ಭದ ರಾಜಕಾರಣವನ್ನು ಮೆಲುಕು ಹಾಕಿದ ಗೌಡರು, ಹೆಗಡೆ ಮತ್ತು ನಜೀರ್ ಸಾಬ್ ರನ್ನು ಮೆಚ್ಚಿ ಮಾತನಾಡಿದರು. 1986ರಲ್ಲಿ ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ‘ಆಗ ನಾನು ಕೇಂದ್ರದಲ್ಲಿ ಸಚಿವನಾಗುವ ಅವಕಾಶವಿತ್ತು. ವಿ.ಪಿ ಸಿಂಗ್ ಕೂಡ ಕರೆದಿದ್ದರು. ನಾನೇ ಕೊಂಚ ಉಡಾಫೆ ಮಾಡಿದೆ’ ಎಂದು ತಮ್ಮ ರಾಜಕಾರಣದ ಬೆಳ್ಳಿಗೆರೆಯನ್ನು ತಾವೇ ತುಂಡರಿಸಿಕೊಂಡ ಕತೆ ಹೇಳಿದರು.

1989ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಪಡೆದಾಗ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದರು. ಆಗ ಡಿ.ಬಿ ಚಂದ್ರಗೌಡರು ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದರು. ಈ ಬಗ್ಗೆ ಮಾತನಾಡುತ್ತಾ ಗೌಡರು, ‘ನಿಜಲಿಂಗಪ್ಪನವರ ಲವ-ಕುಶರೆಂದು ಖ್ಯಾತರಾದವರು ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆಯವರು ಆಗ ವಿರುದ್ಧ ದಿಕ್ಕಿನಲ್ಲಿದ್ದರು. ಇವರಿಬ್ಬರಿಗೂ ಬೇಕಾಗಿದ್ದ ನಾನು, ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದ್ದು, ಇಬ್ಬರನ್ನೂ ಸಂಭಾಳಿಸಿದ್ದು ರಾಜಕಾರಣದ ಒಳ-ಹೊರಗನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಅದೊಂದು ಅಪರೂಪದ ಅವಧಿ’ ಎಂದು ನೆನಪಿಸಿಕೊಂಡರು.
ಆ ನಂತರ, 90ರ ದಶಕದಲ್ಲಿ ಹೆಗಡೆ-ಗೌಡರ ಕದನದಿಂದ ಕಂಗೆಟ್ಟು ಜನತಾಪಕ್ಷ ತೊರೆದು ಕಾಂಗ್ರೆಸ್ ಸೇರಿದ ಚಂದ್ರೇಗೌಡರು, 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಈ ಸಂದರ್ಭದಲ್ಲಿ ನಡೆದ ಒಂದು ಪ್ರಸಂಗವನ್ನು ಹಂಚಿಕೊಂಡ ಗೌಡರು, ‘ಜೆ.ಎಚ್. ಪಟೇಲರ ಸರ್ಕಾರ ಕಳೆಗುಂದಿತ್ತು. ಕಾಂಗ್ರೆಸ್ಸಿಗೆ ಅನುಕೂಲಕರ ವಾತಾವರಣವಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದೊಂದಿಗಿನ ನಿಷ್ಠೆ, ಸೇವೆ ಮತ್ತು ತ್ಯಾಗಗಳನ್ನು ಪರಿಗಣಿಸಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಚಲಾವಣೆಯಲ್ಲಿತ್ತು. ದೆಹಲಿಯಿಂದ ಬಂದ ಕರೆಗಳು ನಿಮ್ಮ ಹೆಸರು ಅಂತಿಮವಾಗಿದೆ ಎಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ನನ್ನನ್ನು ಕೈಬಿಟ್ಟು ಎಸ್.ಎಂ ಕೃಷ್ಣರನ್ನು ಅಧ್ಯಕ್ಷರನ್ನಾಗಿಸಲಾಯಿತು. ನಮ್ಮ ಪಕ್ಷದವರೇ ನನ್ನ ಬೆನ್ನಿಗೆ ಚೂರಿ ಹಾಕಿದ್ದರು. ಅಧ್ಯಕ್ಷ ಸ್ಥಾನ ಸಿಗದಂತೆ ನೋಡಿಕೊಂಡಿದ್ದರು’ ಎಂದು ನೊಂದು ನುಡಿದಿದ್ದರು. ‘ಯಾರು ಎಂದು ಕೇಳಬಹುದೇ’ ಎಂದಿದ್ದಕ್ಕೆ, ‘ಹೆಸರು ಹೇಳುವುದಿಲ್ಲ, ಅವರೆಲ್ಲ ಚೆನ್ನಾಗಿರಲಿ’ ಎಂದು ದೊಡ್ಡಗುಣವನ್ನು ಪ್ರದರ್ಶಿಸಿದ್ದರು.
1999ರಿಂದ 2004ರವರೆಗೆ ಎಸ್.ಎಂ ಕೃಷ್ಣರ ಸಂಪುಟದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಚಂದ್ರೇಗೌಡರು, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅದೇ ಅವಧಿಯಲ್ಲಿ ಬಾಬಾ ಬುಡನ್‌ಗಿರಿ-ದತ್ತಪೀಠ ವಿವಾದದ ಕೇಂದ್ರಬಿಂದುವಾಗಿತ್ತು. ಅದಕ್ಕೆ ಕೋಮುಬಣ್ಣ ಬಳಿದು, ರಾಜಕೀಯಕ್ಕೆ ಬಳಸಿಕೊಳ್ಳಲು ಸಿ.ಟಿ ರವಿಯಂತಹ ಉಪದ್ವ್ಯಾಪಿಗಳು ಕುಣಿದಾಡುತ್ತಿದ್ದವು. ಆ ಸಂದರ್ಭದಲ್ಲಿ ರವಿ ಆಯೋಜಿಸಿದ್ದ ದತ್ತಮಾಲಾ ಅಭಿಯಾನದ ಹೋಮ ಕಾರ್ಯಕ್ರಮದಲ್ಲಿ ಚಂದ್ರೇಗೌಡರು ಪಾಲ್ಗೊಂಡರು. ಅದು ಮಲೆನಾಡು ಪ್ರದೇಶದಲ್ಲಿ ಬಿಜೆಪಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಯಿತು. ಚಂದ್ರೇಗೌಡರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಮೆತ್ತಿತು. ಅದರ ಫಲವಾಗಿ ಸುಮಾರು 20 ವರ್ಷಗಳ ಕಾಲ ಕಾಂಗ್ರೆಸ್ ಆ ಭಾಗದಲ್ಲಿ ಗೆಲ್ಲದಂತಾಯಿತು, ಹೊಸಬರು ಪಕ್ಷಕ್ಕೆ ಬರದಂತಾಯಿತು. ಸಾಮಾಜಿಕ ಜೀವನ ಅಸ್ತವ್ಯಸ್ತವಾಯಿತು. ಹಾಗೆಯೇ ಚಂದ್ರೇಗೌಡರು ಕೂಡ ರಾಜಕೀಯ ನೇಪಥ್ಯಕ್ಕೆ ಸೇರುವಂತಾಯಿತು.
ಆನಂತರ, 2009ರಲ್ಲಿ ಬಿಜೆಪಿ ಸೇರುವ ಮೂಲಕ ಚಂದ್ರೇಗೌಡರು, ಮತ್ತೆ ರಾಜಕೀಯ-ಸಾಮಾಜಿಕ ವಲಯದಲ್ಲಿ ಚರ್ಚೆಯ ವಸ್ತುವಾದರು. ಆ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಪಕ್ಷಕ್ಕೆ ನನ್ನ ಕೊಡುಗೆ ಏನಿಲ್ಲವೇ? ನಾನೇನು ಭ್ರಷ್ಟನೇ, ದುರಾಡಳಿತ ನಡೆಸಿದ ದುಷ್ಟನೇ? ರಾಜಕಾರಣಕ್ಕೆ ಕಳಂಕ ತಂದ ವ್ಯಕ್ತಿಯಾಗಿದ್ದನೇ? ಕಾಂಗ್ರೆಸ್ಸಿನಿಂದ ನಾನು ಯಾವ ಲಾಭವನ್ನೂ ಮಾಡಿಕೊಂಡವನಲ್ಲ, ಬಯಸಿದವನೂ ಅಲ್ಲ. ಆದರೂ ಅವರು ನನ್ನನ್ನು ಕಡೆಗಣಿಸಿದರು. ಮುಗಿದ ಅಧ್ಯಾಯ ಎಂದು ನನ್ನ ಬೆನ್ನ ಹಿಂದೆಯೇ ಕುಹಕವಾಡಿದರು. ಅದೇ ಸಂದರ್ಭದಲ್ಲಿ ಮನೆಗೆ ಬಂದ ಬಿಜೆಪಿಯ ಅನಂತಕುಮಾರ್ ಮತ್ತು ಯಡಿಯೂರಪ್ಪ, ನನ್ನನ್ನು ಗೌರವದಿಂದ ಕಂಡರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಕೇಳಿಕೊಂಡರು. ನಾನು ವಾಜಪೇಯಿ ಮತ್ತು ಅಡ್ವಾಣಿಯವರ ಮಾತಿಗೆ ಮರ್ಯಾದೆ ಕೊಟ್ಟು, ಬಿಜೆಪಿ ಸೇರಿದೆ. ಗೆದ್ದು ನನ್ನ ರಾಜಕೀಯ ‘ಮಿತ್ರ’ರಿಗೆ ಉತ್ತರ ಕೊಟ್ಟೆ, ಕೊಡಬೇಕಿತ್ತು’ ಎಂದರು.
ಸರಿ ಸುಮಾರು ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು ಕರ್ನಾಟಕದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲ ದಾರದಹಳ್ಳಿಯ ಧೀಮಂತ ರಾಜಕಾರಣಿ ಚಂದ್ರೇಗೌಡರು, ನಾಲ್ಕು ಬಾರಿ ಶಾಸಕರಾಗಿ(ಮೂರು ಸಲ ವಿಧಾನಸಭೆ, ಒಂದು ಬಾರಿ ವಿಧಾನ ಪರಿಷತ್), ನಾಲ್ಕು ಬಾರಿ ಸಂಸತ್ ಸದಸ್ಯರಾಗಿ(ಮೂರು ಬಾರಿ ಲೋಕಸಭೆ, ಒಂದು ಸಲ ರಾಜ್ಯಸಭೆ) ಸೇವೆ ಸಲ್ಲಿಸಿದವರು. ಮೇಲ್ಮನೆ-ಕೆಳಮನೆಗಳಲ್ಲಿ ಕಾರ್ಯನಿರ್ವಹಿಸಿ ಆಡಳಿತಾತ್ಮಕ ಅನುಭವವುಳ್ಳವರು. ಕಾವೇರಿ ನದಿ ವಿವಾದವೂ ಸೇರಿದಂತೆ, ಕಾನೂನು ಹೋರಾಟಕ್ಕೆ ಸದಾ ಸಿದ್ಧರಾಗಿದ್ದು ರಾಜ್ಯಕ್ಕೆ ನ್ಯಾಯ ಒದಗಿಸಿಕೊಟ್ಟವರು. ವಿವಿಧ ಖಾತೆಗಳ ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದವರು.

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳಲ್ಲಿ ಘರ್ಷಣೆಗಳು ಸಂಭವಿಸುವ ಸಂದಿಗ್ಧ ಸಂದರ್ಭಗಳು ಸೃಷ್ಟಿಯಾದಾಗ; ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆ, ಸೂಚನೆ ಮತ್ತು ಪರಿಹಾರ ಕ್ರಮಗಳನ್ನು ಸರಕಾರಗಳಿಗೆ ಕೊಟ್ಟವರು. ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದವರು. ಲೋಹಿಯಾರ ಸೋಷಲಿಸ್ಟ್ ಪಕ್ಷದಿಂದ ಹಿಡಿದು ಬಿಜೆಪಿವರೆಗೆ- ಎಲ್ಲ ಪಕ್ಷಗಳಿಗೂ ಒಂದು ಸುತ್ತು ಹಾಕಿ ಬಂದವರು. ಅಧಿಕಾರಕ್ಕಾಗಿ, ಹಣಕ್ಕಾಗಿ, ಚಾಲ್ತಿಗಾಗಿ, ಪ್ರಚಾರಕ್ಕಾಗಿ ತಾವು ನಂಬಿದ ತತ್ವ, ಸಿದ್ಧಾಂತಗಳನ್ನು ಬಲಿ ಕೊಡದವರು. ಅದಕ್ಕಿಂತಲೂ ಹೆಚ್ಚಾಗಿ ರಾಜಕಾರಣಿ ಎಂದರೆ ಗೇಲಿಗೆ, ಅಪಹಾಸ್ಯಕ್ಕೆ, ಟೀಕೆಗೆ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಗಂಭೀರ ವ್ಯಕ್ತಿತ್ವದಿಂದ ಮಾದರಿಯಾದವರು. ರಾಜಕಾರಣಕ್ಕೆ ಘನತೆ, ಗೌರವ ತರುವ ಮೂಲಕ, ರಾಜಕಾರಣದಲ್ಲಿ ಇಂಥವರಿರಬೇಕು ಎಂದು ಬಯಸುವಂತೆ ಬದುಕಿ ಬಾಳಿದವರು. ಹಾಗೆಯೇ ನಾಡಿನ ಜನರ ನೆನಪಿನಲ್ಲಿ ಬಹುಕಾಲ ಉಳಿಯುವವರು.

ಲೇಖಕ, ಪತ್ರಕರ್ತ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com