ದೆಹಲಿ ವಿವಿಯ ದೌಲತ್ ರಾಮ್ ಕಾಲೇಜು ಕೇಸರೀಕರಣ: ವಿದ್ಯಾರ್ಥಿಗಳು ಹೇಳುವುದೇನು?

Date:

Advertisements
ದೆಹಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರೆ ತುಂಬಿಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯವನ್ನು ಹಿಂದುತ್ವದ ಕೊಳಕು ಕೋಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಹಲವಾರು ಕಾಲೇಜುಗಳಲ್ಲಿ ಆರ್‌ಎಸ್‌ಎಸ್‌ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ...

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯ ವಾರ್ಷಿಕೋತ್ಸವ ಆಚರಿಸಲು ದೆಹಲಿ ವಿಶ್ವವಿದ್ಯಾಲಯದ (ಡಿಯು) ದೌಲತ್ ರಾಮ್ ಕಾಲೇಜು (ಡಿಆರ್‌ಸಿ – ಮಹಿಳಾ ಕಾಲೇಜು) ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ‘ಶ್ರೀ ರಾಮಲಲ್ಲಾ ವಿರಾಜ್‌ಮಾನ್ ಕಿ ಪ್ರಾಣಪತಿಷ್ಠಾ ಕಿ ಪ್ರಥಮ ವರ್ಷಗಂತ್’ (ಶ್ರೀ ರಾಮಲಲ್ಲಾ ವಿರಾಜ್‌ಮಾನ್‌ನ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ) ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆದಿದೆ. ಡಿಆರ್‌ಸಿ ಪ್ರಾಂಶುಪಾಲೆ ಸವಿತಾ ರಾಯ್, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಕಾರ್ಯಕ್ರಮವು ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಂತೆ ಕಾಣುತ್ತಿತ್ತು ಎಂದು ಹೇಳುತ್ತಾರೆ ಅಲ್ಲಿನ ವಿದ್ಯಾರ್ಥಿಗಳು.

ಕಾರ್ಯಕ್ರಮ ನಡೆಸಿದ್ದರ ಬಗ್ಗೆ ಡಿಆರ್‌ಸಿಯ ಹಲವಾರು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವನ್ನು ಖಂಡಿಸಿದ್ದಾರೆ. ಬಹುತ್ವ ಮೌಲ್ಯಗಳು, ಸೌಹಾರ್ದತೆ ಮತ್ತು ಸುರಕ್ಷತೆಯ ಸ್ಥಳವಾಗಿದ್ದ ನಮ್ಮ ಕಾಲೇಜನ್ನು ಕೇಸರೀಕರಣಗೊಳಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ, ಕಾಲೇಜಿನ ಓರ್ವ ಪ್ರಾಧ್ಯಾಪಕಿ ಉದ್ದೇಶಪೂರ್ವಕವಾಗಿಯೇ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯನ್ನು ರಾಮಾಯಣದ ಬಗ್ಗೆ ಪ್ರಶ್ನಿಸಿದ್ದಾರೆ. ತಾನು ಹಿಜಾಬ್ ಧರಿಸಿದ್ದ ಕಾರಣಕ್ಕಾಗಿಯೇ ತಮ್ಮನ್ನು ಪ್ರಾಧ್ಯಾಪಕಿ ಪ್ರಶ್ನಿಸಿದರು. ಜಾತಿ-ಧರ್ಮಗಳನ್ನು ನೋಡದೆ ಬೋಧಿಸಬೇಕಾದ ಪ್ರಾಧ್ಯಾಪಕರು ಕೋಮುದ್ವೇಷದಿಂದ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisements

ಕಾರ್ಯಕ್ರಮವನ್ನು ದೂರದಿಂದಲೇ ಗಮನಿಸಿದ ದಲಿತ ವಿದ್ಯಾರ್ಥಿನಿಯೊಬ್ಬರು, ”ಡಿಆರ್‌ಸಿ ಸಿಬ್ಬಂದಿಗಳು ತಮ್ಮ ಪ್ರಬಲ ಜಾತಿಯ ಧೋರಣೆಗಳನ್ನು ಬಹಿರಂಗವಾಗಿ ಪ್ರದರ್ಶಿಸಿದರು. ಅವರ ನಡೆಯಲ್ಲಿ ನನಗೆ ಯಾವುದೇ ಆಶರ್ಯವಾಗಲಿಲ್ಲ. ಸಿಬ್ಬಂದಿಗಳು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ನಡೆಸಿಕೊಳ್ಳುವ ರೀತಿ, ಮಹಿಳಾ ಕಾಲೇಜಿನ ಮೂಲ ಉದ್ದೇಶವನ್ನು ಅಳಿಸಿಹಾಕಲು ಅವರೆಲ್ಲರೂ ಪ್ರಯತ್ನಿಸುತ್ತಿರುವ ಧೋರಣೆಗಳನ್ನು ಮೊದಲಿನಿಂದಲೂ ನೋಡಿದ್ದೇವೆ. ಈ ಕಾರ್ಯಕ್ರಮವು ಅವರ ಪ್ರಯತ್ನಗಳನ್ನು ಇನ್ನಷ್ಟು ದೃಢವಾಗಿ ಬಹಿರಂಗಗೊಳಿಸಿದೆ” ಎಂದು ಹೇಳಿದ್ದಾರೆ.

ಇನ್ನು, ಕಾಲೇಜಿನ ಗ್ರಂಥಾಲಯದಲ್ಲಿ ಹಿಂದು ಪುರಾಣಗಳನ್ನು ವಿವರಿಸುವ ಪುಸ್ತಕಗಳಿಗಾಗಿಯೇ ವಿಶೇಷ ವಿಭಾಗವನ್ನು ತೆರೆಯಲಾಗಿದ್ದು, ಅದಕ್ಕೆ ‘ರಾಮಾಲಯ’ ಎಂದು ಹೆಸರಿಡಲಾಗಿದೆ. ಅದನ್ನೂ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಗಿದೆ. ”ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ” ಎಂದು ಬಿಜೆಪಿ ಬೆಂಬಲಿತ ಕೋಮುವಾದಿ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕಾರ್ಯದರ್ಶಿ ಮಹಿಮಾ ಸಿಂಗ್ ಹೇಳಿದ್ದಾರೆ.

ಕಾಲೇಜಿನ ಈ ನಡೆಯನ್ನು ಹಲವರು ಖಂಡಿಸಿದ್ದಾರೆ. ಡಿಆರ್‌ಸಿ ಕಾಲೇಜಿನ ಸಂಸ್ಥಾಪಕ, ಶಿಕ್ಷಣ ತಜ್ಞ ದೌಲತ್ ರಾಮ್ ಗುಪ್ತಾ ಅವರು ಪ್ರತಿನಿಧಿಸುತ್ತಿದ್ದ ಮೌಲ್ಯಗಳನ್ನು ಕಾಲೇಜಿನ ಪ್ರಸ್ತುತ ಆಡಳಿತ ಮಂಡಳಿ ನಾಶಮಾಡಿದೆ. ದೌಲತ್ ರಾಮ್ ಅವರು ಲಾಲಾ ಲಜಪತ್ ರಾಯ್ ಅವರ ಶಿಷ್ಯರಾಗಿದ್ದರು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಕೆಲಸ ಮಾಡಿದ್ದರು. ಇಂದು ಅವರ ಮೌಲ್ಯಗಳು-ಆಶಯಗಳಿಗೆ ವಿರುದ್ಧವಾಗಿ ಆಡಳಿತ ಮಂಡಳಿ ನಡೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ದೆಹಲಿ ವಿವಿ, ದೌಲತ್ ರಾಮ್ ಕಾಲೇಜು, ಡಿಆರ್‌ಸಿ, ಕೇಸರೀಕರಣ, Delhi University, Daulat Ram College, DRC, Saffronization,

ಕಾಲೇಜಿನಲ್ಲಿ ಇಂತಹ ಬಲಪಂಥೀಯ ವಿಚಾರಗಳೊಂದಿಗೆ ಕಾರ್ಯಕ್ರಮಗಳು ನಡೆದಿರುವುದು ಇದೇ ಮೊದಲಲ್ಲ. ಇದೇ ಕೊನೆಯೂ ಅಲ್ಲ. ಈ ಹಿಂದೆ, 2024ರ ಅಕ್ಟೋಬರ್‌ನಲ್ಲಿ ಡಿಆರ್‌ಸಿ ‘ಅಮೃತಕಾಲ ವಿಮರ್ಶೆ: ಭಾರತ್ @2027’ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿತ್ತು. ಇದೀಗ, ಮುಂದಿನ ತಿಂಗಳು (ಫೆಬ್ರವರಿ 8) ಜಾಗತಿಕ ಭಯೋತ್ಪಾದನಾ ನಿಗ್ರಹ ಮಂಡಳಿಯ ಸಹಯೋಗದಲ್ಲಿ ‘ಅಮೃತಕಾಲಕ್ಕಾಗಿ ಭಾರತದ ಭೂ-ತಂತ್ರ’ ಎಂಬ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ.

ಗಮನಾರ್ಹವಾಗಿ, ರೈತ ಹೋರಾಟಗಳನ್ನು ಬೆಂಬಲಿಸಿದ್ದ, ಅಂಬೇಡ್ಕರ್ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ ಕಾರಣಕ್ಕಾಗಿ ಪ್ರಾಧ್ಯಾಪಕಿ ರಿತು ಸಿಂಗ್ ಅವರನ್ನು 2020ರಲ್ಲಿ ಕಾಲೇಜು ಆಡಳಿತ ವಜಾಗೊಳಿಸಿತ್ತು. ದಲಿತ ಸಮುದಾಯಕ್ಕೆ ಸೇರಿದ ರಿತು ಸಿಂಗ್ ಅವರ ಬೋಧನೆ ಮತ್ತು ಅಭಿಪ್ರಾಯಗಳನ್ನು ಕಾಲೇಜಿನ ಪ್ರಾಂಶುಪಾಲರು ‘ಬೆದರಿಕೆ’ ಎಂದು ಬಣ್ಣಿಸಿದ್ದರು. ರಿತು ಸಿಂಗ್ ಅವರು ಕಾಲೇಜಿ ನಾಲ್ಕನೇ ಗೇಟ್‌ ಎದುರು 186 ದಿನಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರು.

ಆ ವೇಳೆ, ಕೋವಿಡ್‌ ಲಾಕ್‌ಡೌನ್ ಘೋಷಿಸಲಾಯಿತು. 2020ರ ಆಗಸ್ಟ್‌ನಲ್ಲಿ ಲಾಕ್‌ಡೌನ್‌ ಮುಗಿದ ಬಳಿ ಕಾಲೇಜಿಗೆ ಬಂದ ಸಿಂಗ್‌ ಅವರಿಗೆ ಪ್ರಾಂಶುಪಾಲರು ಸೇರ್ಪಡೆ ಪತ್ರವನ್ನು ನೀಡಿರಲಿಲ್ಲ. ತಮ್ಮನ್ನು ಅಕ್ರಮವಾಗಿ ವಜಾಗೊಳಿಸಿದ್ದರ ವಿರುದ್ಧ ಕಾಲೇಜಿನ ಎದುರು ಮತ್ತೆ 10 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಆದರೂ, ಅವರನ್ನು ಮರು ನೇಮಕ ಮಾಡಿಕೊಳ್ಳಲಿಲ್ಲ. ಬದಲಾಗಿ, ಅವರ ವಿರುದ್ಧ ದೆಹಲಿ ಪೊಲೀಸರು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದರು.

ಈ ವರದಿ ಓದಿದ್ದೀರಾ?: ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?

”ಶಿಕ್ಷಣ ಮತ್ತು ಧರ್ಮವು ಪರಸ್ಪರ ಪ್ರತ್ಯೇಕವಾಗಿರಬೇಕು. ದೆಹಲಿ ವಿಶ್ವವಿದ್ಯಾಲಯದ ಕುಲಪತಿಯ ಬೆಂಬಲವಿಲ್ಲದೆ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯವಿಲ್ಲವೆಂದು ನಾನು ಭಾವಿಸುತ್ತೇನೆ. ದೆಹಲಿ ವಿಶ್ವವಿದ್ಯಾಲಯವು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ನೆಲೆಯಾಗುತ್ತಿದೆ. ಡಿಆರ್‌ಸಿ ಪ್ರಾಂಶುಪಾಲೆ ಸವಿತಾ ರಾಯ್ ಅವರ ಸಹಕಾರ ಹೆಚ್ಚಿದೆ. ದೆಹಲಿ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರೆ ತುಂಬಿಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯವನ್ನು ಹಿಂದುತ್ವದ ಕೊಳಕು ಕೋಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಹಲವಾರು ಕಾಲೇಜುಗಳಲ್ಲಿ ಆರ್‌ಎಸ್‌ಎಸ್‌ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ” ಎಂದು ಸಿಂಗ್ ಆರೋಪಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಹಲವಾರು ಕಾಲೇಜುಗಳ ಕ್ಯಾಂಪಸ್‌ನಲ್ಲಿ ಹೋಮ-ಹವನ, ಪೂಜೆಗಳು ಹಾಗೂ ರಾಮಾಯಣ ಬೋಧನೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರವೃತ್ತಿಗಳು ನಡೆಯುತ್ತಿವೆ. ದೆಹಲಿಯ ಲಕ್ಷ್ಮಿಬಾಯಿ ಕಾಲೇಜು, ಹಂಸರಾಜ್ ಕಾಲೇಜುಗಳು ಹಿಂದಿನಿಂದಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿವೆ. 2022ರಲ್ಲಿ, ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ದೈನಂದಿನ ಬೆಳಗಿನ ಸಮಯದಲ್ಲಿ ಭಗವದ್ಗೀತೆ ಪಠಣ ಮತ್ತು ತಿಂಗಳಿಗೆ ಒಮ್ಮೆ ಸುಂದರ್‌ಕಾಂಡ್‌ ಪಠಣ ಮಾಡುವ ಆಚರಣೆಯನ್ನು ಆರಂಭಿಸಿದ್ದರು.

ಮತ್ತೊಂದು ಗಂಭೀರ ವಿಚಾರವೆಂದರೆ, ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಕೆಲವು ಕಾಲೇಜುಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಡಿಆರ್‌ಸಿಯನ್ನೂ ಖಾಸಗೀಕರಣ ಮಾಡುವ ಹುನ್ನಾರವಿದೆ ಎಂಬ ಆರೋಪಗಳಿವೆ.

ಮಾಹಿತಿ ಮೂಲ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X