ವೇಶ್ಯಾವಾಟಿಕೆ ದಂಧೆ | ‘ತಲೆಹಿಡುಕ’ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದ ದಿಟ್ಟ ಮಹಿಳಾ ಪಿಎಸ್‌ಐ ಅಡ್ಡೆಯಲ್ಲಿ ನೋಡಿದ್ದೇನು?

Date:

Advertisements
ಪುನೀತ್ ಕೆರೆಹಳ್ಳಿಯನ್ನು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಸಿದ ನಂತರ ಪೊಲೀಸ್ ಇನ್ಸ್ ಪೆಕ್ಟರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಗಳ ಹೇಳಿಕೆಯನ್ನು ಪಡೆಯುತ್ತಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೇಳಿಕೆಯ ಸಾರಾಂಶ ಇಲ್ಲಿದೆ.

“ನಾನು ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ 20.03.2012 ರಂದು ನನಗೆ ರಾತ್ರಿ ಗಸ್ತು ಕರ್ತವ್ಯ ನೇಮಕವಾಗಿದ್ದು, ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರಬೇಕಾದರೆ, ಪೊಲೀಸ್ ನಿರೀಕ್ಷಕರು ಬೆಳಗಿನ ಜಾವ ಸುಮಾರು 2.15 ಗಂಟೆಗೆ ನನಗೆ ಕರೆ ಮಾಡಿ ಠಾಣೆಗೆ ವಾಪಸ್ಸು ಬರುವಂತೆ ತಿಳಿಸಿದರು. ಅದರಂತೆ ನಾನು ಠಾಣೆಗೆ ವಾಪಸ್ಸಾದಾಗ ಠಾಣೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ, ಪಿಎಸ್‌ಐ ಅಜಯ್ ಸಾರಥಿ, ಶಿವಪ್ರಕಾಶ್, ಎಎಸ್‌ಐ ಸುಬ್ರಮಣಿ, ಸಿಬ್ಬಂದಿಗಳಾದ ರಾಮಕೃಷ್ಣಗೌಡ, ಗುರುಮೂರ್ತಿ, ಬಿ ಮುಚ್ಚಂಡಿ, ಬಸವರಾಜ್ ಪೂಜಾರಿ, ಸಂತೋಷ್ ಗಣಾಚಾರಿ ಇದ್ದರು.

ಇನ್ಸ್‌ಪೆಕ್ಟರ್ ಅವರು ನಮ್ಮನ್ನು ಉದ್ದೇಶಿಸಿ “ನನಗೆ ಬಾತ್ಮಿದಾರರಿಂದ ಠಾಣಾ ಸರಹದ್ದಿನ ಕೆ ಬಿ ಸಂದ್ರ, ಗುರುಕೃಪ ಹೊಟೇಲ್ ಹತ್ತಿರ, ರಾಜಾ ರಾಮಣ್ಣ ರಸ್ತೆ, ಅನ್ನಿ ಆಲ್ಫಾ ಅಪಾರ್ಟ್‌ಮೆಂಟ್, ನಂ ಸಿ 17[12], 3ನೇ ಮಹಡಿಯಲ್ಲಿ ಮಂಜುಳಾ ಮತ್ತು ಮದನ್‌ ಮೋಹನ್ ಎಂಬುವರು ಹುಡುಗಿಯರನ್ನು ಹಣದ ಆಸೆ ತೋರಿಸಿ ಕರೆಸಿಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದಾರೆಂದು ಮಾಹಿತಿ ಬಂದಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು ದಾಳಿ ನಡೆಸಬೇಕು” ಎಂದು ತಿಳಿಸಿದರು. ನಂತರ ಠಾಣೆಗೆ ಶ್ರೀ ಚಾಂದ್ ಪಾಷ ಮತ್ತು ಮಜರ್‌ ಬೇಗ್ ಎಂಬುವರನ್ನು ಪಂಚರುಗಳಾಗಿ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ಪಂಚರುಗಳಾಗಿ ಸಹಕರಿಸಬೇಕೆಂದು ಕೇಳಿಕೊಂಡರು. ಅದಕ್ಕೆ ಅವರು ಒಪ್ಪಿಕೊಂಡರು.

ನಂತರ ಮಧ್ಯರಾತ್ರಿ ಸುಮಾರು 2.35 ಗಂಟೆಯ ಸಮಯದಲ್ಲಿ ನಾವು ಎರಡು ತಂಡಗಳನ್ನು ರಚಿಸಿಕೊಂಡು ಠಾಣೆಯಿಂದ ಸರ್ಕಾರಿ ಜೀಪು ಮತ್ತು ಹೊಯ್ಸಳ ವಾಹನದಲ್ಲಿ ಕೆ ಬಿ ಸಂದ್ರ, ಗುರುಕೃಪ ಹೊಟೇಲ್ ಹತ್ತಿರ, ರಾಜಾ ರಾಮಣ್ಣ ರಸ್ತೆ, ಅನ್ನಿ ಆಲ್ಫಾ ಅಪಾರ್ಟ್‌ ಮೆಂಟ್‌ನ ಹತ್ತಿರ ಮಧ್ಯರಾತ್ರಿ ಸುಮಾರು 3.00 ಗಂಟೆಗೆ ತಲುಪಿದೆವು. ನಂತರ ಇನ್ಸ್ ಪೆಕ್ಟರ್ ರವರು ಸಿಬ್ಬಂದಿಯವರನ್ನು ಮತ್ತು ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಪ್ಲಾಟ್ ನಂ ನಂ ಸಿ 17[12] ರ ಹತ್ತಿರ ಹೋಗಿ ಹೊರಗಿನಿಂದ ಬಾಗಿಲನ್ನು ಬಡಿದಿದ್ದು ಬಾಗಿಲನ್ನು ತೆರೆಯಲಿಲ್ಲ. ನಂತರ ಪದೇ ಪದೇ ಬಡಿದಾಗ ಒಬ್ಬ ಮಹಿಳೆ ಬಂದು ಬಾಗಿಲನ್ನು ತೆರೆದಿದ್ದು, ಆಕೆಯನ್ನು ಹೆಸರು ವಿಳಾಸ ಕೇಳಿದಾಗ ಆಕೆ ತನ್ನ ಹೆಸರು ಮಂಜುಳಾ ಎಂದು ತಿಳಿಸಿದರು. ನಂತರ ಮನೆಯನ್ನು ಶೋಧಿಸಲಾಗಿ ಹಾಲ್‌ನಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಆತ ತನ್ನ ಹೆಸರು ಮದನಮೋಹನ್ ಎಂದು ತಿಳಿಸಿದನು. ನಂತರ ಹಾಲ್‌ ಪರಿಶೋಧಿಸಿದಾಗ ಹಾಲ್‌ನಲ್ಲಿ ಒಂದು ಟೀಪಾಯಿ ಇದ್ದು ಅದರ ಮೇಲೆ ಒಂದು ಕಿಂಗ್ ಫಿಷರ್‌ ಮದ್ಯದ ಬಾಟಲ್, ಕಾಮಸೂತ್ರ ಕಂಪನಿ ಹೆಸರಿನ ಒಂದು ಕಾಂಡೋಮ್ ಪ್ಯಾಕೇಟ್ ಇದ್ದು, ಮಂಜುಳಾ ಮತ್ತು ಮದನ್‌ ಮೋಹನ್ ಅವರನ್ನು ವಿಚಾರಿಸಲಾಗಿ ಅವರು ತಾವು ಬೇರೆ ಕಡೆಗಳಿಂದ ಹುಡುಗಿಯರನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡು ಅವರಿಗೆ ಹಣದ ಆಸೆ ತೋರಿಸಿ ಗಿರಾಕಿಗಳನ್ನು ಕರೆದುಕೊಂಡು ಬಂದು ವೇಶ್ವಾವಾಟಿಕೆ ನಡೆಸುತ್ತಿರುವುದಾಗಿ ತಿಳಿಸಿದ ಮೇರೆಗೆ ಮದನ್‌ ಮೋಹನ್‌ನನ್ನು ವಶಕ್ಕೆ ಪಡೆದು ಆತನ ಅಂಗಶೋಧನೆ ಮಾಡಲಾಗಿ ಆತನ ಬಳಿ ಒಂದು ಬೈಕ್‌ ಕೀ, ಒಂದು ಪ್ರೆಸ್ ರಿಪೋರ್ಟರ್ ಐಡಿ ಕಾರ್ಡ್, ಒಂದು ನೀಲಿ ಮತ್ತು ಸಿಲ್ವರ್ ಮಿಶ್ರ ಬಣ್ಣದ ಐಪೋನ್ ಕಂಪನಿಯ ಮೊಬೈಲ್, 1300 ರೂ ನಗದು ದೊರೆತಿದ್ದು, ಬೈಕ್‌ ಕೀ ಬಗ್ಗೆ ವಿಚಾರಿಸಿದಾಗ ತನ್ನ ಬಳಿ ಹೋಂಡಾ ಯೂನಿಕಾರ್ನ್ ಕಂಪನಿಯ ಬೈಕ್ ಇದ್ದು ಅದನ್ನು ಗಿರಾಕಿಗಳನ್ನು ಕರೆದುಕೊಂಡು ಬರಲು ಬಳಸುತ್ತಿರುವುದಾಗಿ ತಿಳಿಸಿದ ಮೇರೆಗೆ ಸದರಿ ಬೈಕನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

Advertisements

೩೩೩೩೩

ನಂತರ ರೂಂಗಳನ್ನು ಪರಿಶೀಲಿಸಿದಾಗ ಒಂದು ರೂಂನಲ್ಲಿ ಒಬ್ಬ ಹುಡುಗಿ ಮತ್ತು ಹುಡುಗ ಇದ್ದು ಅವರ ಹೆಸರು ವಿಳಾಸ ಕೇಳಲಾಗಿ ಅವರು ತಮ್ಮ ಹೆಸರು ಪುನೀತ್ ಕುಮಾರ್ ತಂದೆ ಹೆಚ್ ಎಸ್ ಪುಟ್ಟಸಿದ್ದಪ್ಪ, 21 ವರ್ಷ, ವಾಸ ಕೆರೆಹಳ್ಳಿ ಗ್ರಾಮ, ಮಡಬಲು ಅಂಚೆ, ಪಾಳ್ಯ ಹೋಬಳಿ, ಆಲೂರು ತಾಲ್ಲೋಕ್, ಹಾಸನ ಜಿಲ್ಲೆ, ಎಂದೂ ಆತನ ಜೊತೆಯಲ್ಲಿದ್ದವಳು ಮನೋರಾಯನ ಪಾಳ್ಯ, ಆರ್ ಟಿ ನಗರದ ವಿಧವೆ ಎಂದು ಪರಿಚಯಿಸಿಕೊಂಡಳು.  ತನ್ನನ್ನು ವೇಶ್ಯಾವಾಟಿಕೆಗೆಂದು ಕರೆದುಕೊಂಡು ಬಂದಿದ್ದಾರೆಂದು ತಿಳಿಸಿದ್ದು ರೂಂ ಅನ್ನು ಶೋಧಿಸಿದಾಗ ದಿಂಬಿನ ಕೆಳಗೆ ಒಂದು ಹೆರಿಟೇಜ್ ವೈನ್ ಬಾಟೆಲ್, ಒಂದು ಕಾಮಸೂತ್ರ ಹೆಸರಿನ ನಿರೋದ್ ಪ್ಯಾಕೇಟ್ ದೊರೆತಿದ್ದು ಅವುಗಳನ್ನು ವಶಕ್ಕೆ ತಗೆದುಕೊಂಡು ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಯಿತು.

ನಂತರ ಅದರ ಪಕ್ಕದಲ್ಲಿದ್ದ ರೂಂ ಅನ್ನು ಪರಿಶೀಲಿಸಿದಾಗ ಅದರಲ್ಲಿ ಒಬ್ಬ ಮಹಿಳೆ ಹಾಗು ಹುಡುಗ ಇದ್ದು ಅವರನ್ನು ಹೆಸರು ವಿಳಾಸ ಕೇಳಲಾಗಿ ಅವರು ಸಿ ರವಿ ತಂದೆ ಚಿನ್ನರಾಯಪ್ಪ 24 ವರ್ಷ, ವಾಸ ನಿಡಗುರ್ತಿ ಗ್ರಾಮ, ಹೆಚ್ಕೆ ಹಳ್ಳಿ, ಚಿಂತಾಮಣಿ ತಾಲ್ಲೋಕ್, ಚಿಕ್ಕಬಳ್ಳಾಪುರ ಜಿಲ್ಲೆ ಎಂದು ತಿಳಿಸಿದ್ದು ರೂಂ ಅನ್ನು ಶೋಧಿಸಿದಾಗ 4 ಸ್ಕೋರ್ ಕಂಪನಿಯ ಹೆಸರಿನ ನಿರೋದ್ ಪ್ಯಾಕೇಟ್‌ಗಳು, ಒಂದು ಹೆರಿಟೇಜ್ ವೈನ್ ಬಾಟಲ್ ಇದ್ದು ಆತನ ಬಳಿ ಒಂದು ಸಿ2 ಕಪ್ಪು ಬಣ್ಣದ ಮೊಬೈಲ್ ಫೋನ್, ಒಂದು ಬಸ್ ಪಾಸ್, 200 ರೂ ನಗದು ಹಣ ದೊರೆತಿದ್ದು, ಅವುಗಳನ್ನು ವಶಕ್ಕೆ ತಗೆದುಕೊಳ್ಳಲಾಯಿತು. ನಂತರ ಆತನ ಜೊತೆಯಲ್ಲಿದ್ದ ಮಹಿಳೆಯನ್ನು ವಿಚಾರಿಸಿದಾಗ ಆಕೆ ತಾನು ವಿವಾಹಿತ ಮಹಿಳೆಯಾಗಿದ್ದು, ಬಿಎಂಹೆಚ್ ರಸ್ತೆ, ಮೈಸೂರು ನಿವಾಸಿ ಎಂದು ತಿಳಿಸಿದಳು. ತನ್ನನ್ನು ಒಂದು ವಾರದ ಹಿಂದೆ ಕರೆಸಿಕೊಂಡು ವೇಶ್ಯಾವಾಟಿಕೆಗೆ ಪ್ರಚೋದಿಸಿ ತೊಡಗಿದ್ದಾಗಿ ತಿಳಿಸಿದ್ದು ರವಿಯನ್ನು ಬಂಧಿಸಲಾಗಿದೆ.

ನಂತರ ಅದರ ಪಕ್ಕದಲ್ಲಿದ್ದ ಅಡುಗೆ ಮನೆಯನ್ನು ಪರಿಶೋಧಿಸಲಾಗಿ ಅದರಲ್ಲಿ ಒಬ್ಬ ಹುಡುಗ ಮತ್ತು ಮಹಿಳೆ ಇದ್ದು ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಜೆ ಭರತ್ ತಂದೆ ಜಯರಾಂ 24 ವರ್ಷ, ವಾಸ ನಂ ನಂ26/1, ಪದ್ಮನಾಭ ನಗರ, 3ನೇ ಹಂತ ಬೆಂಗಳೂರು 85 ಎಂದು ತಿಳಿಸಿದ್ದು ಆತನ ಬಳಿ ಒಂದು ಒಂದು ಎಲ್ ಜಿ ಮೊಬೈಲ್, ಒಂದು ಚಾನೆಲ್ ಹೆಸರಿನ ಒಂದು ಗುರುತಿನ ಚೀಟಿ ಒಂದು ಕಪ್ಪಬಣ್ಣದ ಪರ್ಸ್, 100 ರೂ ನಗದು, ಸ್ಕೋರ್ ಕಂಪನಿಯ ಹೆಸರಿನ 4 ನಿರೋದ್ ಪ್ಯಾಕೆಟ್‌ಗಳು ದೊರೆತಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆತನೊಂದಿಗಿದ್ದ ಹುಡುಗಿಯ ಹೆಸರನ್ನು ಕೇಳಲಾಗಿ ಆಕೆ ತನ್ನ ಹೆಸರು ಹೇಳಿ ಬನ್ನೇರುಘಟ್ಟ ನಿವಾಸಿ ಎಂದಳು. ಆಕೆಗೆ ಇನ್ನೂ ಕೇವಲ 19 ವಯಸ್ಸಾಗಿದ್ದು ಆಕೆಯನ್ನು ಒಂದು ವಾರದ ಹಿಂದೆ ಕೆರೆದುಕೊಂಡು ಬಂದು ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಗೆ ಪ್ರಚೋದಿಸಿದರೆಂದು ತಿಳಿಸಿರುತ್ತಾಳೆ.

ನಂತರ ಬಾತ್ ರೂಂ ಪರಿಶೋಧಿಸಿದಾಗ ಅದರಲ್ಲಿ ಒಬ್ಬ ಮಹಿಳೆ ಹಾಗು ಇಬ್ಬರು ವ್ಯಕ್ತಿಗಳು ಇದ್ದು ಅವರ ಹೆಸರು ವಿಳಾಸ ಕೇಳಲಾಗಿ ಅವರು ತಮ್ಮ ಹೆಸರು ಹೆಚ್ ಡಿ ಚಂದ್ರಶೇಖರ್, ತಂದೆ ದೊಡ್ಡಗೌಡ, 21 ವರ್ಷ, ಹಿತ್ತಲಹಳ್ಳಿ ಗ್ರಾಮ, ಕುಣಿಗಲ್ ಹೋಬಳಿ, ಕತ್ತನಮಂಗಲ ಅಂಚೆ, ತುಮಕೂರು ಜಿಲ್ಲೆ ಎಂದು ತಿಳಿಸಿದ್ದು ಆತನ ಬಳಿ ಸ್ಕೋರ್ ಹೆಸರಿನ 2 ನಿರೋದ್ ಪ್ಯಾಕೇಟ್ ಮತ್ತು ಒಂದು ಬಾಕ್ಸ್, 300 ರೂ ನಗದು ದೊರೆತಿದ್ದು ಅವುಗಳನ್ನು ವಶಕ್ಕೆ ತಗೆದುಕೊಳ್ಳಲಾಯಿತು. ನಂತರ ಮತ್ತೊಬ್ಬ ತನ್ನ ಹೆಸರು ಜಿ ಎಸ್ ಪುನೀತ್ ಕುಮಾರ್ ತಂದೆ ಶಿವಣ್ಣ, 19 ವರ್ಷ, ವಾಸ ಅಜ್ಜನಹಳ್ಳಿ ಗ್ರಾಮ, ಗೊಲ್ಲರಹಟ್ಟಿ ಹೋಬಳಿ, ಸೊನ್ನ ಸಮುದ್ರ ಅಂಚೆ, ಅರಸೀಕೆರೆ ತಾಲೂಕು ಹಾಸನ ತಿಳಿಸಿದ್ದು ಆತನ ಬಳಿ ಸ್ಕೋರ್ ಕಂಪನಿಯ ಹೆಸರಿನ 5 ನಿರೋದ್ ಪ್ಯಾಕೇಟ್‌ಗಳು 50 ರೂ ನಗದು, ಚಂದ್ರಶೇಖರ್‌ಗೆ ಸೇರಿದ ಮೊಬೈಲ್ ಪೋನ್ ಇದ್ದು ಅವುಗಳನ್ನು ಮತ್ತು ಚಂದ್ರಶೇಖರ್ ಹೆಸರಿನಲ್ಲಿದ್ದ ಯುನಿವರ್ಸಿಟಿಯ ಗುರುತಿನ ಚೀಟಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಆತನ ಜೊತೆಯಿದ್ದ ಹುಡುಗಿಯನ್ನು ವಿಚಾರಿಸಿದಾಗ ಆಕೆ ತನಗೆ ಮಾತು ಬರುವುದಿಲ್ಲ(ಮೂಕಿ) ಎಂದು ಕೈ ಸನ್ನೆಯಲ್ಲಿ ತಿಳಿಸಿದಳು. ಈ ಸಂದರ್ಭವನ್ನು ಬಳಕೆ ಮಾಡಿಕೊಂಡ ಆರೋಪಿಗಳು ‘ನಾವೇ ಆಕೆಯನ್ನು ಸಾಕುತ್ತಿರುವುದಾಗಿ’ ತಿಳಿಸಿದರು. ನಂತರ ವಿಚಾರಣೆ ನಡೆಸಿದಾಗ ಆ ಮಹಿಳೆಯು ಮೂಕಿಯಂತೆ ನಟನೆ ಮಾಡಿದ್ದು, ಆಕೆಯನ್ನು ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಗೆ ತೊಡಗಿಸಿದ್ದಾಗಿ ತಿಳಿದು ಬಂತು.

ಇದನ್ನೂ ಓದಿ ‘ಕ್ರಿಮಿನಲೈಸಿಂಗ್ʼ ಕಾಂಡೋಮ್ ಮತ್ತು ಪುನೀತ್ ಕೆರೆಹಳ್ಳಿ ʼತಲೆಹಿಡುಕತನʼ ಕೇಸಿನಲ್ಲಿ ಪೊಲೀಸರ ತಪ್ಪುಗಳು !

ನಂತರ, ದಾಳಿಯ ಬಗ್ಗೆ ಪಂಚರುಗಳ ಸಮಕ್ಷಮ ಮಹಜರು ಕ್ರಮ ಜರುಗಿಸಿದ್ದು, ‘ತಲೆಹಿಡುಕತನʼ ಮತ್ತು ವೇಶ್ಯಾವಾಟಿಕೆ ಮಾಡುತ್ತಿದ್ದ ಮಂಜುಳಾ, ಮದನ್ ಮೋಹನ್, ಸಿ ರವಿ, ಎಸ್ ಭರತ್, ಜಿ ಎಸ್ ಪುನೀತ್ ಕುಮಾರ್, ಹೆಚ್ ಡಿ ಚಂದ್ರಶೇಖರ್, ಪುನೀತ್ ಕುಮಾರ್‌ನನ್ನು ಬಂಧಿಸಿ ನೊಂದ ಮಹಿಳೆಯರನ್ನು ಹಾಗು ದಾಳಿಯ ಸಮಯದಲ್ಲಿ ದೊರೆತ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದೆವು. ನಾನು ದಾಳಿಯಲ್ಲಿ ಇನ್ಸ್‌ಪೆಕ್ಟರ್ ಅವರೊಂದಿಗೆ ಭಾಗವಹಿಸಿ ಸಹಕರಿಸಿದ್ದು, ಮಹಜರ್‌ನಲ್ಲಿ ಸಹಿ ಮಾಡಿರುತ್ತೇನೆ. ಪಂಚರ ಸಮಕ್ಷಮ ವಶಪಡಿಸಿಕೊಂಡ ವಸ್ತುಗಳನ್ನು ಹಾಗು ವಶಕ್ಕೆ ತೆಗೆದುಕೊಂಡ ಆರೋಪಿಗಳನ್ನು ಮತ್ತು ನೊಂದ ಮಹಿಳೆಯರನ್ನು ನೋಡಿದ್ದು ಮತ್ತೆ ನೋಡಿದರೆ ಗುರುತಿಸುತ್ತೇನೆ”.

ಸಹಿ/
ಮಹಿಳಾ ಪೊಲೀಸ್ ಉಪನಿರೀಕ್ಷಕರು

(ಚಾರ್ಜ್‌ಶೀಟ್‌ನಲ್ಲಿರುವ ಮಹಿಳಾ ಪೊಲೀಸ್ ಉಪನಿರೀಕ್ಷಕರ ಹೇಳಿಕೆಯ ಯಥಾವತ್ತನ್ನು ಅರ್ಥ ವ್ಯತ್ಯಾಸವಾಗದಂತೆ, ಆದರೆ ಕಾನೂನು ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬದಲಾವಣೆ ಮಾಡಿಕೊಂಡು ಅಕ್ಷರ ರೂಪಕ್ಕೆ ಇಳಿಸಲಾಗಿದೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಹಾಗಾದರೆ ಇಲ್ಲಿ ಪುನೀತ್ ಕೆರೆಹಳ್ಳಿ ಒಬ್ಬ ಗಿರಾಕಿ ಹೇಗೆ ಅವನು ತಲೆಹಿಡುಕ(ಪಿಂಪ್) ಆಗುತ್ತಾನೆ. ಮಹಿಳೆಯರನ್ನ ವಂಚಿಸಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಮದನಮೋಹನ ಅವನು ಪಿಂಪ್ ಅಲ್ವ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X