“1990ರ ದಶಕದ ಮಧ್ಯಭಾಗದಲ್ಲಿ ಭೂಗತ ಜಗತ್ತಿನೊಂದಿಗಿನ ಬ್ರಿಜ್ ಭೂಷಣ್ ಸಂಬಂಧವೂ ಮುನ್ನೆಲೆಗೆ ಬಂದಿತ್ತು” ಎಂಬುದನ್ನು ಶಾಸಕ ಅಶೋಕ್ ರೈ ಮರೆತ್ತಿದ್ದಾರೆಯೇ?
“ಈ ಹಿಂದೆ ನಾನು ಕೊಲೆ ಮಾಡಿದ್ದೇನೆ. ಜನರು ತಮಗೆ ಬೇಕಾದುದನ್ನು ಹೇಳಲಿ. ನಾನು ಕೊಲೆ ಮಾಡಿದ್ದೇನೆ”- ಹೀಗೆಂದು ಹೇಳಿಕೊಂಡವನ ಹೆಸರು ಬ್ರಿಜ್ ಭೂಷಣ್ ಶರಣ್ ಸಿಂಗ್. ಆದರೆ ಎಂದಿಗೂ ಕೊಲೆಯತ್ನದ ವಿಚಾರಣೆ ಆತ ಒಳಗಾಗಲಿಲ್ಲ.
ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜ್ ಭೂಷಣ್‌ನ ತೋಳ್ಬಲದ ಕಥೆಗಳು ಪ್ರಸಿದ್ಧವಾಗಿವೆ. ಆದರೂ ಗೊಂಡಾ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ, ಆತ ಈ ಕೃತ್ಯ ಎಸಗಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಆದರೆ 2022ರಲ್ಲಿ ವೆಬ್ ಪೋರ್ಟಲ್‌ವೊಂದಕ್ಕೆ ಸಂದರ್ಶನ ನೀಡಿದಾಗಲಷ್ಟೇ ಈ ಪಾತಕ ಹೊರಗೆ ಬಿದ್ದದ್ದು. 2019ರ ಲೋಕಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಬ್ರಿಜ್ ಉಲ್ಲೇಖಿಸಿದ್ದನು. ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆಯ ಯತ್ನ) ಮತ್ತು ಇತರ ಗಂಭೀರ ಅಪರಾಧಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲಿವೆ ಎನ್ನಲಾಗಿದೆ.
ಬ್ರಿಜ್‌ಭೂಷಣ್ 2011ರಿಂದಲೂ ಅಂದರೆ ಭಾರತದ ವ್ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷನಾಗಿದ್ದಾಗಿನಿಂದಲೂ ತೋಳ್ಬಲ ಪ್ರದರ್ಶಿಸುವುದನ್ನು ಆರಂಭಿಸಿದ್ದ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ, ದೈಹಿಕ ಕಿರುಕುಳ, ಸರ್ವಾಧಿಕಾರ ಧೋರಣೆ, ಡಬ್ಲ್ಯುಎಫ್‌ಐ ನಿರ್ವಹಣೆಯಲ್ಲಿ ಹಣಕಾಸಿನ ಅಕ್ರಮ ಸೇರಿದಂತೆ ಗಂಭೀರ ಆರೋಪಗಳನ್ನು ಪ್ರಖ್ಯಾತ ಕುಸ್ತಿಪಟುಗಳು ಮಾಡಿದ್ದರಿಂದ ಪೋಕ್ಸೋ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬಳಿಕವೇ ಆತನ ಕ್ರಿಮಿನಲ್ ವೃತ್ತಾಂತ ಮುನ್ನೆಲೆಗೆ ಬಂದಿತ್ತು. ಇಂತಹ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಖಾಸಗಿಯಾಗಿ ಆಯೋಜನೆಗೊಂಡಿರುವ ಕಂಬಳಕ್ಕೆ ವಿಶೇಷ ಅತಿಥಿಯನ್ನಾಗಿ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಕರೆದಿರುವುದಾದರೂ ಏತಕ್ಕೆ?
ಇದಿಷ್ಟು ಹೇಳಿದರೆ ಬ್ರಿಜ್‌ನ ಪಾತಕಗಳ ತೀವ್ರತೆ ಅರ್ಥವಾಗುವುದಿಲ್ಲ. 2014ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಗೊಂಡಾ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಉಲ್ಲೇಖಿಸಿ ‘ಸ್ಕ್ರಾಲ್’ ಜಾಲತಾಣ ವರದಿಯೊಂದನ್ನು ಮಾಡಿತ್ತು. 1980ರ ದಶಕದಲ್ಲಿ ಮೋಟಾರು ಸೈಕಲ್/ಬೈಕ್ ಕಳ್ಳತನದಿಂದ ಹಿಡಿದು ಮದ್ಯದ ಅಂಗಡಿಗಳನ್ನು ನಡೆಸುವವರೆಗೆ ಬ್ರಿಜ್ ತೊಡಗಿಸಿಕೊಂಡಿದ್ದ ಎಂದು ವರದಿ ಉಲ್ಲೇಖಿಸಿತ್ತು. ದೇವಾಲಯದ ಕೊಳಗಳ ಕೆಳಭಾಗದಲ್ಲಿ ಇರುವ ನಾಣ್ಯಗಳನ್ನು ಕದಿಯಲು ಹುಡುಗರನ್ನು ಕಳಿಸುತ್ತಿದ್ದನು. ನಂತರದಲ್ಲಿ ಬ್ರಿಜ್ ಸಿವಿಲ್ ಗುತ್ತಿಗೆದಾರನಾದನು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಂಪುಟದಲ್ಲಿ ಸಚಿವರಾಗಿದ್ದ ವಿನೋದ್ ಕುಮಾರ್ ಸಿಂಗ್ ಅಲಿಯಾಸ್ ಪಂಡಿತ್ ಸಿಂಗ್- ಈ ಎಲ್ಲಾ ಚಟುವಟಿಕೆಗಳಲ್ಲಿ ಸಹವರ್ತಿಯಾಗಿದ್ದರು.
ಇದನ್ನೂ ಓದಿರಿ: ಕಂಬಳದ ಶೋಷಕ ಆಯಾಮ ಮುಂದುವರೆಸುತ್ತಿರುವ ಅಶೋಕ್ ರೈ
ಕಾಲಕ್ರಮೇಣ ಬ್ರಿಜ್ ಭೂಷಣ್ ಮತ್ತು ಪಂಡಿತ್ ಸಿಂಗ್ ನಡುವೆ ವೈರತ್ವ ಏರ್ಪಟ್ಟಿತು. ಸ್ನೇಹಿತರಿಂದಾಗಿ ಇಬ್ಬರ ನಡುವೆ ಬಿರುಕುಗಳು ಮೂಡಿದ್ದವು. 1993ರಲ್ಲಿ ಬ್ರಿಜ್ ಭೂಷಣ್ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 147 (ತಪ್ಪು ಹರಡುವಿಕೆ), 148 (ಮಾರಣಾಂತಿಕ ಆಯುಧವನ್ನು ಹೊಂದಿರುವುದು) ಮತ್ತು 149 (ಸಾಮಾನ್ಯ ವಸ್ತುವಿನೊಂದಿಗೆ ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ಮಾಡಿದ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಾಯಿತು. ಕಾರಣ ಪಂಡಿತ್ ಸಿಂಗ್ ಮೇಲೆ ಗುಂಡು ಹಾರಿಸಲಾಗಿತ್ತು. ಪಂಡಿತ್ ಸಿಂಗ್ ಅವರು ‘ಸ್ಕ್ರಾಲ್’ಗೆ ನೀಡಿದ ಸಂದರ್ಶನದಲ್ಲಿ- “ನನ್ನ ಮೇಲೆ 20 ಗುಂಡುಗಳನ್ನು ಹಾರಿಸಲಾಯಿತು, ಹೀಗಾಗಿ 14 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದೆ” ಎಂದು ವಿವರಿಸಿದ್ದರು.
29 ವರ್ಷಗಳ ಕಾಲ ನಡೆದ ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಜ್ ಭೂಷಣ್‌ನನ್ನು ಖುಲಾಸೆಗೊಳಿಸಲಾಗಿತ್ತು. “ತನಿಖೆಯಲ್ಲಿ ಲೋಪವೆಸಗಲಾಗಿದೆ” ಎಂದು ನ್ಯಾಯಾಲಯವು ತನಿಖಾಧಿಕಾರಿಗಳನ್ನು ಟೀಕಿಸಿತ್ತು.
ಆ ದಾಳಿಯ ಸಂದರ್ಭದಲ್ಲಿ ತಾನು ದೆಹಲಿಯಲ್ಲಿದ್ದೆ ಎಂದು ಬ್ರಿಜ್ ಭೂಷಣ್ ವಾದಿಸಿದ್ದನು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಧೀಶರು, “ಈ ಹೇಳಿಕೆಯಲ್ಲಿ ಸತ್ಯವಿದೆಯೇ ಎಂದು ತಿಳಿಯಲು ತನಿಖಾಧಿಕಾರಿಗಳು ಯಾವುದೇ ಪ್ರಯತ್ನ ಮಾಡಲಿಲ್ಲ, ಇದು ಇಡೀ ತನಿಖೆಯನ್ನು ಪ್ರಶ್ನಾರ್ಹಗೊಳಿಸಿದೆ” ಎಂದಿದ್ದರು.
ಪ್ರಕರಣದ ಸಂತ್ರಸ್ತ ಪಂಡಿತ್ ಸಿಂಗ್, ತೀರ್ಪಿಗೆ ಸುಮಾರು ಒಂದೂವರೆ ವರ್ಷಗಳ ಮೊದಲು ಕೋವಿಡ್-19 ಸೋಂಕಿಗೆ ಒಳಗಾಗಿ ಮೇ 2021ರಲ್ಲಿ ನಿಧನರಾದರು. ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್‌ನನ್ನು ಖುಲಾಸೆಗೊಳಿಸಲು ಇದ್ದ ಮತ್ತೊಂದು ಕಾರಣ- ಪಂಡಿತ್ ಸಿಂಗ್ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿರಲಿಲ್ಲ. “ನೀವೇಕೆ ಹೇಳಿಕೆ ದಾಖಲಿಸಿಲ್ಲ?” ಎಂಬ ಪ್ರಶ್ನೆಗೆ 2014ರ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಪಂಡಿತ್ ಸಿಂಗ್, “1993ರ ಫೈರಿಂಗ್ ಪ್ರಕರಣದಲ್ಲಿ ನಾನು ಬ್ರಿಜ್ ಭೂಷಣ್ ವಿರುದ್ಧ ಸಾಕ್ಷಿ ಹೇಳಲು ನಿರ್ಧರಿಸಿದರೆ, ನಾನು ಆತನನ್ನು ಜೈಲಿಗೆ ಕಳುಹಿಸಬಹುದಿತ್ತು. ಆದರೆ ಆತನನ್ನು ಬದುಕಿಸಬೇಕೆಂದು ನಾನು ಹಾಗೆ ಮಾಡಲಿಲ್ಲ. ಪ್ರಭಾವಿ ವ್ಯಕ್ತಿಯೊಂದಿಗೆ ಜಗಳವಾಡುವುದು ಖುಷಿಯಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದರು.
ಪಂಡಿತ್ ಸಿಂಗ್‌ನಿಗೆ ರವೀಂದರ್ ಸಿಂಗ್ ಎಂಬ ಸಹೋದರನಿದ್ದರು. ಇಬ್ಬರೂ ಗುತ್ತಿಗೆದಾರರಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಒಮ್ಮೆ ಅವರು ಪಂಚಾಯತ್ ಸಭೆಯನ್ನು ನಡೆಸಲು ಹೋಗಿದ್ದರು. ಅಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬ್ರಿಜ್ ಭೂಷಣ್ ಪಕ್ಕದಲ್ಲಿ ನಿಂತಿದ್ದ ರವೀಂದರ್‌ಗೆ ಒಂದು ಗುಂಡು ತಗುಲಿತ್ತು. ಇದು ಭೂಷಣ್‌ನನ್ನು ಎಷ್ಟು ಕೆರಳಿಸಿತೆಂದರೆ- ಗುಂಡು ಹಾರಿಸಿದ ವ್ಯಕ್ತಿಯ ಕೈಯಿಂದ ರೈಫಲ್ ಕಿತ್ತುಕೊಂಡು ಗುಂಡು ಹಾರಿಸಿದನು. ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದನು.
ಈ ಘಟನೆಯ ಕುರಿತು ಸ್ವತಃ ಬ್ರಿಜ್ ಭೂಷಣ್ ಆನ್‌ಲೈನ್ ಪೋರ್ಟಲ್ ‘ಲಾಲನ್‌ಟಾಪ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ. “ನಾನು ಹಿಂದೆ ಕೊಲೆ ಮಾಡಿದ್ದೇನೆ. ಜನರು ಏನೇ ಹೇಳಿದರೂ ನಾನು ಕೊಲೆ ಮಾಡಿದ್ದೇನೆ. ರವೀಂದರ್‌ಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ತಕ್ಷಣವೇ ಗುಂಡಿಕ್ಕಿ ಕೊಂದಿದ್ದೇನೆ” ಎಂದು ಸಂದರ್ಶನದಲ್ಲಿ ತಿಳಿಸಿದ್ದನು.
ಬ್ರಿಜ್ ಭೂಷಣ್ ಮತ್ತೊಂದು ಕೊಲೆ ಮಾಡಿದ್ದಾನೆಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕಿಸಿದ್ದರು. ಗೊಂಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ನಂತರ, ಮಾಜಿ ಪ್ರಧಾನಿ ವಾಜಪೇಯಿ, “(ನೀವು) ಅವನನ್ನು ಕೊಂದಿದ್ದೀರಿ” ಎಂದಿದ್ದರು.
ಬ್ರಿಜ್ ಭೂಷಣ್ ಆರು ಬಾರಿ ಸಂಸದನಾಗಿದ್ದಾನೆ, ಐದು ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಮತ್ತು ಒಮ್ಮೆ (2009ರಲ್ಲಿ) ಎಸ್‌ಪಿ ಟಿಕೆಟ್‌ನಲ್ಲಿ ಗೆದ್ದಿದ್ದಾನೆ. ಅವರು ಗೊಂಡಾ ಲೋಕಸಭಾ ಕ್ಷೇತ್ರದಿಂದ 1991 ಮತ್ತು 1999ರಲ್ಲಿ ಮೊದಲ ಎರಡು ಚುನಾವಣೆಗಳನ್ನು ಗೆದ್ದನು. 2004ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಆತನಿಗೆ ಬಲರಾಂಪುರ ಕ್ಷೇತ್ರದಿಂದ ಟಿಕೆಟ್ ನೀಡಿತು. ಗೊಂಡಾದಿಂದ ಘನಶ್ಯಾಮ್ ಶುಕ್ಲಾ ಅವರನ್ನು ನಿಲ್ಲಿಸಿತು. ಮತದಾನದ ದಿನ ರಸ್ತೆ ಅಪಘಾತದಲ್ಲಿ ಶುಕ್ಲಾ ಸಾವನ್ನಪ್ಪಿದ್ದರು.
ಸ್ಕ್ರಾಲ್‌ನೊಂದಿಗಿನ ಸಂಭಾಷಣೆಯಲ್ಲಿ ಅದನ್ನು ನೆನಪಿಸಿಕೊಂಡಿರುವ ಬ್ರಿಜ್ ಭೂಷಣ್, “ನನ್ನ ವಿರೋಧಿಗಳು- ಇದು ಅಪಘಾತವಲ್ಲ ಕೊಲೆ ಎಂದು ವದಂತಿಗಳನ್ನು ಹರಡಿದರು. ಅಟಲ್ ಜಿ ನನಗೆ ಕರೆ ಮಾಡಿ, ‘ಮಾರ್ವಾ ದಿಯಾ (ನೀವು ಅವನನ್ನು ಕೊಂದಿದ್ದೀರಿ) ಎಂದಿದ್ದರು” ಎಂದು ಬ್ರಿಜ್ ಹೇಳಿದ್ದಾನೆ.
ಇದು ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ಬ್ರಿಜ್ ಭೂಷಣ್ ಅಭಿಪ್ರಾಯಪಡುತ್ತಾನೆ. ಪರಿಣಾಮವಾಗಿ, ಆತ 2008ರಲ್ಲಿ ಮಾಡಿದ್ದೇನು ಗೊತ್ತೆ? ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಿರ್ಣಾಯಕ ವಿಶ್ವಾಸ ನಿರ್ಣಯದಲ್ಲಿ ತಮ್ಮದೇ ಪಕ್ಷದ ವಿರುದ್ಧ ಅಡ್ಡ ಮತದಾನ ಮಾಡಿ ಸುದ್ದಿಯಾಗಿದ್ದನು. ಬಿಜೆಪಿ ಆತನನ್ನು ಹೊರಹಾಕಿತು, ಆದರೆ ಎಸ್ಪಿ ಬ್ರಿಜ್ ಭೂಷಣ್‌ಗೆ ಬಾಗಿಲು ತೆರೆದಿತ್ತು. 2009ರಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾದನು. 2014ರಲ್ಲಿ ಮತ್ತೆ ಬಿಜೆಪಿ ಮರಳಿದನು. ಕೈಸರ್‌ಗಂಜ್‌ನಿಂದಲೇ 2019ರಲ್ಲೂ ಗೆದ್ದು ಸಂಸದನಾಗಿ ಮುಂದುವರಿದನು.
ಬಿಜೆಪಿ ಅಭ್ಯರ್ಥಿಯನ್ನು ಹತ್ಯೆ ಮಾಡಿರುವ ಬಗ್ಗೆ ಅಂದಿನ ಪ್ರಧಾನಿ ಭೂಷಣ್ ಮೇಲೆ ಶಂಕೆ ವ್ಯಕ್ತಪಡಿಸಿದ ಬಳಿಕವೂ ಆತ ಬಿಜೆಪಿಯಲ್ಲೇ ಉಳಿದುಕೊಂಡಿರುವುದು ಗಮನಾರ್ಹ. ಅಡ್ಡ ಮತದಾನದ ನಂತರವೇ ಆತ ಬಿಜೆಪಿಯಿಂದ ಉಚ್ಚಾಟಿತನಾಗಿದ್ದು!
ಇದ್ಯಾವುದೂ ಬ್ರಿಜ್ ಭೂಷಣ್‌ನ ರಾಜಕೀಯದ ಮೇಲೆ ಪರಿಣಾಮ ಬೀರಲಿಲ್ಲ. ಆತ ಟಿಕೆಟ್ ಪಡೆದು ಚುನಾವಣೆಯ ನಂತರ ಚುನಾವಣೆಯಲ್ಲಿ ಗೆಲ್ಲುವುದನ್ನು ಮುಂದುವರಿಸಿದನು. ಒಂದು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಕ್ರೀಡಾ ಸಂಘದ ಅಧ್ಯಕ್ಷರಾಗಿದ್ದನು.
ಉತ್ತರ ಪ್ರದೇಶದ ಬಹ್ರೈಚ್, ಗೊಂಡಾ, ಬಲ್ರಾಮ್‌ಪುರ, ಅಯೋಧ್ಯೆ ಮತ್ತು ಶ್ರಾವಸ್ತಿ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಬ್ರಿಜ್ ನಡೆಸುತ್ತಿದ್ದಾನೆ. ಈ ಪ್ರದೇಶದಲ್ಲಿ ಆತ ರಾಜಕೀಯ ಪ್ರಾಬಲ್ಯ ಮೆರೆಯುವುದಕ್ಕೆ ಇದು ಕಾರಣವಾಗಿದೆ.
ಬ್ರಿಜ್ ಭೂಷಣ್ ಅವಧ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಧ್ಯಯನ ಮಾಡಿದ ನಂತರ 1990ರ ದಶಕದ ಅಂತ್ಯದಲ್ಲಿ ಬಿಜೆಪಿ ಸೇರಿದನು. ರಾಮ ಜನ್ಮಭೂಮಿ ವಿವಾದದ ಯುಗವದು. ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಯಾಶೀಲನಾಗಿದ್ದ ಬ್ರಿಜ್ ಬಿಜೆಪಿಯ ಕಣ್ಣು ಸೆಳೆದನು. ಇಂದು, ಅವರ ಪತ್ನಿ ಕೇತ್ಕಿ ದೇವಿ ಸಿಂಗ್ ಗೊಂಡಾ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರೆ, ಅವರ ಮಗ ಪ್ರತೀಕ್ ಭೂಷಣ್ ಸಿಂಗ್ ಗೊಂಡಾ ಸದರ್ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ಬ್ರಿಜ್ ಭೂಷಣ್ ರಾಮಮಂದಿರ ಹೋರಾಟದ ಪ್ರಮುಖ ಮುಖಗಳಲ್ಲಿ ಒಬ್ಬನಾಗಿದ್ದ. ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಬಾಬ್ರಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. 2020ರಲ್ಲಿ ನ್ಯಾಯಾಲಯವು ಬ್ರಿಜ್ ಭೂಷಣ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು.
“ರಾಮಮಂದಿರ ಚಳವಳಿ ಸಂದರ್ಭದಲ್ಲಿ, ಮುಲಾಯಂ ಸಿಂಗ್ ಅವರಿಂದ ಬಂಧಿಸಲ್ಪಟ್ಟ ಮೊದಲ ವ್ಯಕ್ತಿ ನಾನು. ವಿವಾದಾತ್ಮಕ ಕಟ್ಟಡವನ್ನು ಕೆಡವಿದ ನಂತರ ಸಿಬಿಐ ಬಂಧಿಸಿದ ಮೊದಲ ವ್ಯಕ್ತಿ ಕೂಡ ನಾನು” ಎಂದು ಆತ ಹೇಳಿಕೊಂಡಿದ್ದಾನೆ.
1990ರ ದಶಕದ ಮಧ್ಯಭಾಗದಲ್ಲಿ ಭೂಗತ ಜಗತ್ತಿನೊಂದಿಗಿನ ಆತನ ಸಂಬಂಧವೂ ಮುನ್ನೆಲೆಗೆ ಬಂದಿತು. ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆತ ತಿಹಾರ್ ಜೈಲಿನಲ್ಲಿ ಹಲವಾರು ತಿಂಗಳು ಕಳೆಯಬೇಕಾಯಿತು. ಹೀಗಾಗಿ ಭಯೋತ್ಪಾದನೆ ಮತ್ತು ವಿಭಜಕ ಚಟುವಟಿಕೆಗಳ ತಡೆ ಕಾಯ್ದೆ (ಟಾಡಾ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದ ಆತನನ್ನು ಖುಲಾಸೆಗೊಳಿಸಲಾಗಿತ್ತು. ಆತ ಜೈಲಿನಲ್ಲಿದ್ದ ಸಂದರ್ಭದಲ್ಲಿ ಆತನ ಪತ್ನಿ ಗೊಂಡಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.
2004ರಲ್ಲಿ ಬ್ರಿಜ್ ಭೂಷಣ್‌ನ 22 ವರ್ಷದ ಮಗ ಶಕ್ತಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ತಂದೆಯ ಮೇಲೆ ಗುರುತರವಾದ ಆರೋಪಗಳನ್ನು ಮಾಡಿದ್ದನು. “ನೀವು ಉತ್ತಮ ತಂದೆ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ನೀವು ನನ್ನ ಒಡಹುಟ್ಟಿದವರನ್ನೂ ನನ್ನನ್ನೂ ನೋಡಿಕೊಳ್ಳಲಿಲ್ಲ. ನೀವು ಯಾವಾಗಲೂ ನಿಮ್ಮ ಬಗ್ಗೆ ಯೋಚಿಸುತ್ತೀರಿ. ನಮ್ಮ ಬಗ್ಗೆ ಕಾಳಜಿ ವಹಿಸಲಿಲ್ಲ. ನಮ್ಮ ಭವಿಷ್ಯವು ಕತ್ತಲೆಯಲ್ಲಿದೆ. ಹೀಗಾಗಿ ನಾವು ಬದುಕುವುದರಲ್ಲಿ ಅರ್ಥವಿಲ್ಲ” ಎಂದು ಶಕ್ತಿ ಸಿಂಗ್ ತನ್ನ ಸೂಸೈಡ್ ನೋಟ್‌ನಲ್ಲಿ ಬರೆದಿದ್ದರು.
ಇದನ್ನೂ ಓದಿರಿ: ಕಂಬಳಕ್ಕೆ ಬ್ರಿಜ್ ಭೂಷಣ್ ಅತಿಥಿ; ಸಿದ್ದಿ ಸಮುದಾಯದ ಬೇಡಿಕೆ ಎಂದ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ
ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲುಎಫ್‌ಐ) ನಿರ್ವಹಿಸುವಲ್ಲಿಯೂ ದಬ್ಬಾಳಿಕೆಯನ್ನು ಬ್ರಿಜ್ ನಡೆಸಿದ್ದನು. 2021ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, “ಅವರು (ಕುಸ್ತಿಪಟುಗಳು) ಬಲವಾಗಿರುತ್ತಾರೆ. ಅವರನ್ನು ನಿಯಂತ್ರಿಸಲು ನಿಮಗೆ ಬಲವಾದ ಯಾರಾದರೂ ಬೇಕು. ಇಲ್ಲಿ ನನಗಿಂತ ಬಲಶಾಲಿ ಯಾರಾದರೂ ಇದ್ದಾರೆಯೇ?” ಎಂದು ಪ್ರಶ್ನಿಸಿದ್ದನು ಬ್ರಿಜ್.
ಆತನ ಸರ್ವಾಧಿಕಾರದ ವರ್ತನೆ ಅಷ್ಟಿಷ್ಟಲ್ಲ. ಜನವರಿ 2021 ರಲ್ಲಿ ನೋಯ್ಡಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರೈಲ್ವೇ ಕೋಚ್‌ನನ್ನು ಅಮಾನತುಗೊಳಿಸಿದ್ದನು. ಕುಸ್ತಿಪಟು ಬೆಂಬಲಿಗರು ಆಟದ ಅಖಾಡಕ್ಕೆ ಪ್ರವೇಶಿಸಿದ್ದರಿಂದ ದೆಹಲಿಯ ಕುಸ್ತಿಪಟುವಿಗೆ ದಂಡ ವಿಧಿಸುವಂತೆ ರೆಫರಿಗೆ ಸೂಚಿಸಿದನು. ಅಂತಹ ಯಾವುದೇ ನಿಯಮವಿಲ್ಲ ಎಂದು ರೆಫರಿ ಹೇಳಿದರೂ ಸಿಂಗ್ ಸುಮ್ಮನಿರಲಿಲ್ಲ. ಕುಸ್ತಿ ವಿಚಾರದಲ್ಲಿ ಬ್ರಿಜ್ ಮೇಲಿರುವ ಆರೋಪಗಳು ಒಂದೆರಡಲ್ಲ. ಇಂತಹ ವ್ಯಕ್ತಿ ಬೆಂಗಳೂರಿಗೆ ಬಂದು ಕಂಬಳದಲ್ಲಿ ಭಾಗಿಯಾಗಬೇಕೆ? ಸಂಘಪರಿವಾರದ ಹಿನ್ನೆಲೆಯ ಅಶೋಕ್ ರೈ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕರ್‍ಯಾರೂ ಬುದ್ಧಿ ಹೇಳಲಿಲ್ಲವೇ?
ಮಾಹಿತಿ ಮೂಲ: ದಿ ವೈರ್, ದೀಪಕ್ ಗೋಸ್ವಾಮಿ

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.