80-90ರ ದಶಕದಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ‘ಅಂಡರ್ ವರ್ಲ್ಡ್’ ಪಾತಕಿಗಳ ನೆತ್ತರ ಓಕಳಿಯಾಟ ಬಿರುಸಾಗಿ ನಡೆಯುತ್ತಿತ್ತು. ಈ ಅಂಡರ್ ವರ್ಲ್ಡ್ ಪಾತಕಿಗಳಿಗೆ ನೇರವಾಗಿ ಮುಂಬಯಿ ಭೂಗತ ಜಗತ್ತಿನೊಂದಿಗೆ ಸಂಪರ್ಕ, ಮುಂಬಯಿ ಡಾನ್ ಸನ್ನೆ ಕೊಟ್ಟರೆ ಮಂಗಳೂರಿನಲ್ಲಿ ಗುಂಡಿನ ಸದ್ದು ಮೊಳಗಿ ನೆತ್ತರು ಚೆಲ್ಲುತ್ತಿತ್ತು.
ಈ ಪಾತಕ ಲೋಕ ಬೆಂಗಳೂರಿನೊಂದಿಗೆ ಬೆಸೆದುಕೊಂಡದ್ದು ನಂತರದ ದಿನಗಳಲ್ಲಿ. ಅದಕ್ಕೂ ಕಾರಣ ಸ್ಪಷ್ಟವಿದೆ. ಕರಾವಳಿಯ ಮರಿ ಡಾನ್‌ಗಳಿಗೆ ಕರಾವಳಿಯಲ್ಲಿಯೇ ಮೂಲ ಬೇರುಗಳನ್ನು ಹೊಂದಿದ್ದ ಬೆಂಗಳೂರಿನ ಹಿರಿ ಡಾನ್‌ಗಳು ನೆರಳಾದ ಬಳಿಕ ಕರಾವಳಿಯ ಪಾತಕ ಲೋಕ ಬೆಂಗಳೂರಿನತ್ತ ಮುಖ ಮಾಡಿತು.
ಹಾಗಂದ ಮಾತ್ರಕ್ಕೆ, ಪಾತಕಿಗಳು ಪೂರ್ಣವಾಗಿ ಬೆಂಗಳೂರು- ಮಂಗಳೂರು ಹಾಟ್ ಲೈನ್ ಸಂಪರ್ಕವನ್ನೇ ನೆಚ್ಚಿಕೊಂಡವರಲ್ಲ. ಇತ್ತ ಮೂಲ ಮುಂಬಯಿ ಮೂಲದ ನಂಟು ಕಡಿದುಕೊಳ್ಳಲೂ ಇಲ್ಲ.
ಮುಂಬಯಿ ಭೂಗತ ಪಾತಕಿಗಳ ಅಟ್ಟಹಾಸ ಮೆರೆದಿದ್ದ ಆ ಕಾಲದಲ್ಲಿ “ಮಿಸ್ ವರ್ಲ್ಡ್ ನಮ್ಮದೆ, ಅಂಡರ್ ವರ್ಲ್ಡ್ ಕೂಡ ನಮ್ಮದೇ” ಎಂಬ ಮಾತು ತಮಾಷೆಯ ರೂಪದಲ್ಲಿ ಜನಜನಿತವಾಗಿದ್ದರೂ ಅದು ಕೇವಲ ವ್ಯಂಗ್ಯೋಕ್ತಿಯಾಗಿರದೆ ಅಂದಿನ ವಾಸ್ತವ ಕೂಡ ಆಗಿತ್ತು.
ನಿಧಾನಕ್ಕೆ ಮಂಗಳೂರು ಪಾತಕ ಲೋಕವನ್ನು ಪೊಲೀಸರು ಹೆಡೆಮುರಿ ಕಟ್ಟಿ ಹಾಕುತ್ತಾರೆ. ಜಯಂತ್ ಶೆಟ್ಟಿಯಂತಹ ಪೊಲೀಸ್ ಅಧಿಕಾರಿಗಳು ಮಂಗಳೂರು ಅಂಡರ್ ವರ್ಲ್ಡ್ ಪಾತಕಿಗಳನ್ನು ಕಟ್ಟಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದವರು. ಆ ವೇಳೆಗೆ ಒಂದಷ್ಟು ಪಂಟರ್‌ಗಳು ಹೊಡೆದಾಟದಲ್ಲಿ, ಶೂಟೌಟ್‌ನಲ್ಲಿ ಉರುಳಿ ಹೋಗಿದ್ದರು.
ಇದನ್ನು ಓದಿದ್ದೀರಾ? ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಶ್ಯಾಮ್ ಕಿಶೋರ್ ʼಬೆಂಗಳೂರು ಕಂಬಳʼದ ಅತಿಥಿ!
ಕರಾವಳಿ ಇನ್ನೊಂದು ಸ್ವರೂಪದಲ್ಲಿ ಬದಲಾವಣೆಗೆ ಮಗ್ಗುಲು ಬದಲಿಸಿತ್ತು. ಕೋಮು ದ್ವೇಷದ ವಿಷಗಾಳಿ ಮಂಗಳೂರು ಕರಾವಳಿಯಲ್ಲಿ ಹಬ್ಬಿಕೊಂಡಾಗ ಅಂಡರ್ ವರ್ಲ್ಡ್ ಪಾತಕ ಲೋಕ ಕೋಮು ಪುಂಡಾಟಿಕೆಯ ಪೋಕರಿಗಳ ತಾಣವಾಯಿತು. ಇಷ್ಟಾಗಿಯೂ ಭೂಗತ ಪಾತಕ ಲೋಕ ಮೊದಲಿನಂತೆ ಗುಂಡಿನ ಸದ್ದು ಮಾಡದಿದ್ದರೂ, ತನ್ನ ಕರಾಳ ಕಬಂಧಬಾಹುವನ್ನು ಆಳದಲ್ಲಿ ಉಳಿಸಿಕೊಂಡಿತ್ತು. ಸದ್ದಿಲ್ಲದ ಹಫ್ತಾ ವಸೂಲಿ, ಒಪ್ಪಂದದ ಹಫ್ತಾ ವಿತರಣೆ, ಪಂಚಾಯತಿ, ಸೆಟ್ಲ್‌ಮೆಂಟ್ ಇವತ್ತಿನ ತನಕವೂ ನಡೆದೇ ಇದೆ.
ಇಷ್ಟೆಲ್ಲವನ್ನು ಬೆಂಗಳೂರು ಕಂಬಳದ ಈ ಸಂದರ್ಭದಲ್ಲಿ ಅನಿವಾರ್ಯವಾಗಿ ನೆನಪಿಸಿಕೊಳ್ಳಬೇಕಾಯಿತು. ಅನಿವಾರ್ಯಕ್ಕಿಂತಲೂ ಹೆಚ್ಚಾಗಿ ಬೆಂಗಳೂರು ಕಂಬಳದ ಆಹ್ವಾನ ಪತ್ರಿಕೆಯಲ್ಲಿ ನೆತ್ತರ ಗುರುತಿನ ಅತಿಥಿಯ ಹೆಸರು ಬಂದದ್ದು ಹೇಗೆ ಎಂಬ ಪ್ರಶ್ನೆಗೆ ಈ ಮೇಲಿನ ಮಾತು ಪೀಠಿಕೆಯಾಗಬೇಕಾಯಿತು.
ಹೌದು.. ಶ್ಯಾಮ್ ಕಿಶೋರ್ ಗರಿಕಪಟ್ಟಿ ಎಂಬ ಯಾವುದೇ ಹುದ್ದೆ, ಸ್ಥಾನಮಾನ ಇಲ್ಲದ ಕಂಬಳದ ವಿವಿಐಪಿ ಅತಿಥಿಯ ಮೂಲದ ಬಗ್ಗೆ ಕೆದಕಿ “ಈ ದಿನ ಡಾಟ್ ಕಾಮ್” ಪ್ರಕಟಿಸಿದ ವರದಿಯ ಕಂಬಳ ಓಟದ ಎಮ್ಮೆಗೆ ಬಾರಿಸುವ ‘ಬಾರ್ ಕೋಲಿ’ನ ಛಡಿ ಏಟಿನಂತಿತ್ತು.
ತಕ್ಷಣವೇ ಸಾವರಿಸಿಕೊಂಡ ಸಂಘಟಕರು ಆಹ್ವಾನ ಪತ್ರಿಕೆಯನ್ನು ಬದಲಾಯಿಸಿ, ಇನ್ನು ರಕ್ತದ ಕಲೆ ಕೈಗೆ ಅಂಟದಿರಲಿ ಎಂದು ಕೈತೊಳೆದು ಬಿಟ್ಟರು. ಇದನ್ನು ಸಂಘಟಕರ ಕ್ರೀಡಾ ಸ್ಪೂರ್ತಿ ಅನ್ನಬೇಕಷ್ಟೇ! ಈ ಗರಕಿಪಟ್ಟಿ ಶ್ಯಾಮ್ ಕಿಶೋರನ ಬಗ್ಗೆ ಮುಂಬಯಿಯಲ್ಲಿ ನೆಲೆಸಿರುವ ತುಳುವರಲ್ಲಿ ಮಾತನಾಡಿಸಿದಾಗ ಅಚ್ಚರಿ ಕಾದಿತ್ತು. ಯಾರೂ ಕೂಡ ಈ ಶ್ಯಾಮ ಕಿಶೋರನನ್ನು ಮುಂಬಯಿಯ ಬೆಳಕಿನ ಜಗತ್ತಿನಲ್ಲಿ ನೋಡೇ ಇಲ್ಲವಂತೆ. ಆತನಿಗೆ ಸಾಮಾಜಿಕ ಮುಖ ಇರುವುದು ನಾವು ಕಂಡೇ ಇಲ್ಲ ಅನುತ್ತಾರೆ ಮುಂಬಯಿ ನಿವಾಸಿ ತುಳುವರು.
ತುಳುನಾಡು ಮತ್ತು ಕನ್ನಡಿಗರಿಗೆ ಕೊಟ್ಟ ಸಂದೇಶ ಏನು: ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ
ವಿವಾದವೆದ್ದ ಬಳಿಕ ಆಹ್ವಾನ ಪತ್ರ ಬದಲಿಸಿರಬಹುದು. ಆದರೆ ಮುಂಬಯಿ ಸರಣಿ ಸ್ಪೋಟದ ಅಪರಾಧಿ, ಪಾತಕಿಯನ್ನು ತುಳುನಾಡಿನ ಗೌರವದ ಕಂಬಳಕ್ಕೆ ಅತಿಥಿಯಾಗಿ ಆಹ್ವಾನಿಸಿದ ವ್ಯಕ್ತಿಯ ಅಥವಾ ಈ ಪಾತಕಿಯನ್ನು ಆಹ್ವಾನಿಸುವಂತೆ ಸೂಚನೆಕೊಟ್ಟ ವ್ಯಕ್ತಿಯ ಮೂಲವನ್ನು ಹುಡುಕಬೇಕಾಗಿದೆ ಎಂದು ಮುಂಬಯಿಯ ಹಿರಿಯ ಕನ್ನಡ ಪತ್ರಕರ್ತ ಹಾಗೂ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂಬಯಿಂದ ಆಹ್ವಾನ ಮಾಡುವುದಿದ್ದರೆ, ಅನೇಕ ಸಾಧಕ ತುಳುವರು, ಕನ್ನಡಿಗರು ಇಲ್ಲಿದ್ದಾರೆ. ಅವರನ್ನು ಆಹ್ವಾನಿಸಬಹುದಿತ್ತಲ್ಲವೇ ಎಂದು ಪತ್ರಕರ್ತ ಪಾಲೆತ್ತಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀವು ತುಳುನಾಡಿನ ಪಾವಿತ್ರತೆಯ ಹಾಗೂ ಗೌರವದ ಕಂಬಳಕ್ಕೆ ಅಂಡರ್ ವರ್ಲ್ಡ್ ಪಾತಕಿಯನ್ನು ಕರೆಯುವ ಮೂಲಕ ತುಳುವರಿಗೆ ಹಾಗೂ ಕನ್ನಡಿಗರಿಗೆ ಕೊಟ್ಟ ಸಂದೇಶ ಏನು ಎಂದು ಚಂದ್ರಶೇಖರ ಪಾಲೆತ್ತಾಡಿ ಪ್ರಶ್ನಿಸಿದ್ದಾರೆ.
ಈ ಶ್ಯಾಮ್ ಕಿಶೋರ್ ಗರಿಕಪಟ್ಟಿಯನ್ನು ಮುಂಬಯಿಯ ಸಾಮಾಜಿಕ ಬದುಕಿನಲ್ಲಿ ನಾವು ನೋಡಿಯೂ ಇಲ್ಲ, ಕೇಳಿಯೂ ಇಲ್ಲ, ಪತ್ರಕರ್ತನಾಗಿಯೂ ನಾನು ಒಂದು ಬಾರಿಯೂ ಈತನ ಸಾಮಾಜಿಕ ವಿಚಾರದ ಸುದ್ದಿಯನ್ನೇ ನೋಡಿಲ್ಲ. ಇಂತಹ ವ್ಯಕ್ತಿಯನ್ನು ಅದ್ಯಾಗೆ ನೀವು ಕರೆದಿರಿ ಅನ್ನುವುದನ್ನು ಮುಂಬಯಿ ಜನತೆಗೆ ಸ್ವಲ್ಪ ವಿವರಿಸಿದರೆ ಒಳ್ಳೆಯದಿತ್ತು ಎಂದು ಮುಂಬಯಿಯ ಚಂದ್ರಶೇಖರ ಪಾಲೆತ್ತಾಡಿ ಅವರು “ಈ ದಿನ ಡಾಟ್ ಕಾಮ್“ಗೆ ಪ್ರತಿಕ್ರಿಸಿದ್ದಾರೆ.
ಛಿ! ಥೂ..ಇಟ್ಸ್ ಅ ಶೇಮ್: ಹಿರಿಯ ಪೊಲೀಸ್ ಅಧಿಕಾರಿ
ಇಟ್ಸ್ ಅ ಶೇಮ್! ನನ್ನಲ್ಲಿ ಅಂತವನ ಬಗ್ಗೆ ಕೇಳಬೇಡಿ. ಅವೆಲ್ಲ ಕ್ರಿಮಿನಲ್‌ಗಳು. ಅಂಥವರನ್ನು ಕಂಬಳದಂತಹ ಈವೆಂಟ್‌ಗೆ ಗೆಸ್ಟ್ ಆಗಿ ಕರೀತಾರಾ? ಅಯ್ಯೋ..ಮುಂಬಯಿಯಲ್ಲಿ ಯಾರಾದರೂ ಅವರನ್ನು ಪಬ್ಲಿಕ್ ಪಂಕ್ಷನ್‌ಗೆ ಕರೆದಿದ್ದಾರಾ? ಅದ್ಯಾಗೆ ಬೆಂಗಳೂರಿನವರು ಇಂತಹ ಥರ್ಡ್ ರೇಟ್ ಕ್ರಿಮಿನಲ್ ಅನ್ನು ಇನ್ವೈಟ್ ಮಾಡಿದ್ರು…ಶೇಮ್! ಶೇಮ್! ನನ್ನನ್ನು ಏನೂ ಕೇಳಬೇಡಿ, ಇಂತವರ ಬಗ್ಗೆ ನಾನು ಮಾತನಾಡಲ್ಲ.
(ಇದು ಮುಂಬಯಿಯಲ್ಲಿ ಸೇವೆಯಲ್ಲಿರುವ ಕರಾವಳಿ ಮೂಲದ ಹಿರಿಯ ಪೊಲೀಸ್ ಅಧಿಕಾರಿಯ ಮಾತುಗಳು)
‘ಈ ವ್ಯಕ್ತಿ ಯಾರೆಂದೆ ನನಗೆ ಗೊತ್ತಿಲ್ಲ. ಈ ವ್ಯಕ್ತಿಯ ಸಾಮಾಜಿಕ ಕಳಕಳಿ, ಸಾಮಾಜಿಕ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ’- ಶಿಮಂತೂರು ಚಂದ್ರಹಾಸ ಸುವರ್ಣ, ತುಳು ವಿದ್ವಾಂಸರು, ಮುಂಬಯಿ

ಈತನನ್ನು ಮುಂಬಯಿಯ ಸಾಮಾಜಿಕ ಬದುಕಿನಲ್ಲಿ ಕಂಡಿಲ್ಲ: ಜಯ ಕೆ. ಶೆಟ್ಟಿ
ಕೆಲವು ಸಂಘಟನೆಗಳಲ್ಲಿ ಕ್ರಿಮಿನಲ್‌ಗಳು ಸೇರಿಕೊಳ್ಳುತ್ತಾರೆ. ಇಂತಹ ಅಪಾಯದ ಬಗ್ಗೆ ಜನ ಎಚ್ಚೆತ್ತುಕೊಂಡಿರಬೇಕು. ನಾನು ಮುಂಬಯಿಯಲ್ಲಿ 60 ವರ್ಷಗಳಿಂದ ಇದ್ದೇನೆ. ಆದರೆ ಈ ವ್ಯಕ್ತಿ ಮಾಡಿದ ಜನ ಸೇವೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈತನನ್ನು ಮುಂಬಯಿಯ ಸಾಮಾಜಿಕ ಬದುಕಿನಲ್ಲಿ ಕಂಡಿಲ್ಲ.
