ಉಚಿತ ಯೋಜನೆ | ಇಲ್ಲಿ ಯಾರು ಯಾರಿಂದ ನಿಜವಾಗಿಯೂ ಉಪಕೃತರಾಗುತ್ತಿದ್ದಾರೆ?

Date:

Advertisements
ಹೆಚ್ಚಿನ ಬಾರಿ ಕೈಗಾರಿಕೆಗೆ ಸರ್ಕಾರವೇ ನೆರವು ನೀಡುತ್ತದೆ. ಒಮ್ಮೆ ಈ ಕೈಗಾರಿಕೆಗಳು ಲಾಭಗಳಿಸಲು ತೊಡಗಿದ ನಂತರ, ಆರಂಭಿಕ ಹಂತದಲ್ಲಿ ಪಡೆದ ಸವಲತ್ತುಗಳಿಗೆ ಪ್ರತಿಫಲವನ್ನು ಸರ್ಕಾರಕ್ಕೆ ಅಥವಾ ಸಮಾಜಕ್ಕೆ ನೀಡುತ್ತವೆಯೇ? ಈ ಕುರಿತು ದೊಡ್ಡಮಟ್ಟದಲ್ಲಿ ಎಲ್ಲಿಯೂ ಚರ್ಚೆ ನಡೆಯುವುದಿಲ್ಲ ಎಂಬುದು ವಾಸ್ತವ

ಎಲ್ಲರ ನಿರೀಕ್ಷೆಗಳು ಹುಸಿಯಾಗುವ ರೀತಿಯಲ್ಲಿ ಪ್ರಸ್ತುತ ಸರ್ಕಾರದ ರಚನೆಯಾಯಿತು. ಅದರ ಬೆನ್ನಿಗೇನೇ ಈಗಾಗಲೇ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು ಜಾರಿಯಾಗಿಲ್ಲ ಎನ್ನುವ ಕೂಗು ಒಂದೆಡೆಯಾದರೆ, “ನಮ್ಮ ತೆರಿಗೆಯ ಹಣ ಬಿಟ್ಟಿ ಭಾಗ್ಯಗಳಿಗಲ್ಲ, ದೇಶಕ್ಕಾಗಿ” ಎನ್ನುವುದನ್ನು ಎನ್ನುವ ಅಭಿಯಾನವನ್ನು ಉದ್ಯಮಿ ಮೋಹನದಾಸ್ ಪೈ ಅವರ ಮೂಲಕ ಮುಂಚೂಣಿಗೆ ಬಂದು ನಿಂತಿದೆ.

ಇದೇ ಹೊತ್ತಲ್ಲಿ ಇದನ್ನು ಖಂಡಿಸುವ ಒಂದಿಷ್ಟು ಅಭಿಪ್ರಾಯ ಮತ್ತು ನಿಲುವುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಒಂದು ರೀತಿಯಲ್ಲಿ ಇದೊಂದು ಆರೋಗ್ಯಪೂರ್ಣ ಚರ್ಚೆಗೆ ಮುನ್ನುಡಿಯೂ ಆಗಬಹುದಾದ ವಿಷಯವೇ, ಇರಲಿ ನಿಜವಾಗಿಯೂ ಯಾರು ಯಾರ ಬೆಳವಣಿಗೆಗೆ ಎಷ್ಟು ಕಾರಣರು? ಯಾರು ಯಾರಿಂದ ನಿಜವಾಗಿಯೂ ಉಪಕೃತರಾಗುತ್ತಿದ್ದಾರೆ ಎನ್ನುವ ಕುರಿತು ಕೆಲವೊಂದು ವಿಚಾರಗಳನ್ನು ಚರ್ಚಿಸುವುದು ನನ್ನ ಈ ಲೇಖನದ ಉದ್ದೇಶ.

ಬಿಟ್ಟಿ, ಪುಕ್ಸಟ್ಟೆ, ಬಿಡಿಗಾಸಿಗೆ ಏನಾದರೂ ಕೊಡುವುದು ಎಂದರೆ ವಸ್ತು ಅಥವಾ ಸೇವೆಯ ನಿಜವಾದ ಬೆಲೆಗಿಂತ ಕಡಿಮೆಗೆ ಅಥವಾ ಏನೂ ನೀಡದೇನೇ ಪಡೆಯುವುದು. ಈ ವಿಷಯ ಪ್ರಮುಖ ಉತ್ಪಾದನಾ ವಲಯಗಳಾದ ಕೃಷಿ ಮತ್ತು ಕೈಗಾರಿಕೆಗಳಲ್ಲಿ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

Advertisements

ಒಬ್ಬ ರೈತ ತಾನು ಬೆಳೆಯುವ ತರಕಾರಿ, ಆಹಾರದ ಬೆಳೆ ಅಥವಾ ವಾಣಿಜ್ಯ ಬೆಳೆಗೆ ತಗಲುವ ವೆಚ್ಚ, ಅವನ ದುಡಿಮೆಯ ವೆಚ್ಚ ಮತ್ತು ಒಂದು ಸಣ್ಣ ಲಾಭಾಂಶವನ್ನು ಇಟ್ಟು ಬೆಲೆ ನಿಗದಿಪಡಿಸಿ ಮಾರುಕಟ್ಟೆಗೆ ಹೋದರೆ, ಅವನ ಉತ್ಪನ್ನವನ್ನು ಆ ದರದಲ್ಲಿ ಇವತ್ತು ಮಾರಾಟವಾಗುತ್ತದೆಯೋ ಬಹುಮಟ್ಟಿಗೆ ಇಲ್ಲವೇ ಇಲ್ಲ ಎನ್ನಬಹುದು.

ಉದಾಹರಣೆಗೆ ನೂರು ರೂಪಾಯಿಗೆ ತನ್ನ ಬೆಳೆಯನ್ನು ಮಾರಾಟ ಮಾಡುವುದು ಸಾಧ್ಯವಿಲ್ಲ ಎಂದಾಗ, ರೈತ ಮೊದಲ ಹಂತದಲ್ಲಿ ತನ್ನ ಲಾಭಾಂಶ ಬಿಡುತ್ತಾನೆ. ಎರಡನೇ ಹಂತದಲ್ಲಿ ತನ್ನ ದುಡಿಮೆಯ ಅಂಶವನ್ನೂ ಬಿಡುತ್ತಾನೆ. ದಯನೀಯ ಸ್ಥಿತಿಯಲ್ಲಿ ಸಿಕ್ಕಿದ್ದಷ್ಟಕ್ಕೆ ಮಾರಾಟ ಮಾಡಿ ಬಂದದ್ದರಲ್ಲಿ ತನ್ನ ವೆಚ್ಚವನ್ನೂ ಭರಿಸಲಾಗದೆ ಸಾಲಗಾರನಾಗುತ್ತಾನೆ. ಇಂತಹ ಉತ್ಪನ್ನವನ್ನು ಖರೀದಿಸುವ ಬಳಕೆದಾರ, ವ್ಯಾಪಾರಿಗಳು ರೈತನಿಂದ ಏನು ಪಡೆಯುತ್ತಾರೆ. ಅದನ್ನು ಏನೆಂದು ಕರೆಯೋಣ?

ಅಂದರೆ ನೂರು ರೂಪಾಯಿ ಬೆಲೆಯ ವಸ್ತುವನ್ನು ಉತ್ಪಾದಕನ ಹತಾಶ ಸ್ಥಿತಿಯನ್ನು ಉಪಯೋಗಿಸಿ, 80 ರೂಪಾಯಿಗೋ ಅಥವಾ 50 ರೂಪಾಯಿಗೋ ಖರೀದಿಸುವವರಿಗೆ ಬಗ್ಗೆ ನಮ್ಮದೇನೂ ತಕರಾರಿಲ್ಲ.

ಇದನ್ನು ನಾವೆಲ್ಲರೂ ಸರಿಯಾಗಿ ಗ್ರಹಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ರೈತರ ಸ್ಥಿತಿಯನ್ನು ಸುಧಾರಿಸುವ ಎಲ್ಲ ಕ್ರಮಗಳ ಹೊರತಾಗಿಯೂ, ಕೃಷಿ ಇವತ್ತು ಹೆಚ್ಚಿನ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

ಇದರೊಟ್ಟಿಗೆ ಒಬ್ಬ ರೈತ ತಾನು ಕೃಷಿ ಕಾರ್ಯ ಮಾಡುವಾಗ ವಾತಾವರಣ ನಿರ್ಮಲವಾಗಿರಲು ದೊಡ್ಡ ಕಾಣಿಕೆ ನೀಡುತ್ತಾನೆ. ಬಹಳಷ್ಟು ಜೀವಸಂಕುಲಗಳನ್ನು ಸಾಕುತ್ತಾನೆ ಅಥವಾ ಅದು ಮುಂದುವರಿಯಲು ಅನುವು ಮಾಡಿಕೊಡುತ್ತಾನೆ. ಆದರೆ ಅದ್ಯಾವುದನ್ನೂ ನಮ್ಮ ಲೆಕ್ಕಾಚಾರ ಗುರುತಿಸುವುದಿಲ್ಲ.

ಈ ಕಾರಣದಿಂದಾಗಿಯೇ ಕೃಷಿ ರಂಗಕ್ಕೆ ಹಲವು ರೀತಿಯ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇದರ ಪ್ರಯೋಜನ ನಾವು ರೈತರಿಗೆ ಸಿಗುತ್ತದೆ ಎಂದು ಮೂಗುಮುರಿಯುತ್ತೇವೆ. ಆದರೆ ಅದರಿಂದ ನಿಜವಾಗಿಯೂ ಪ್ರಯೋಜನ ಪಡೆಯುವವರು ರೈತರಲ್ಲ, ಬದಲಿಗೆ ಉತ್ಪನ್ನಗಳನ್ನು ಖರೀದಿಸುವವರು ಮತ್ತು ವ್ಯಾಪಾರಸ್ಥರು.

ಇದೇ ವಾದವನ್ನು ಸರ್ಕಾರದ ಸಹಾಯಧನ ಪಡೆಯುವ ಶಿಕ್ಷಣ, ವೈದ್ಯಕೀಯ, ಸಾರಿಗೆ ಸಂಪರ್ಕ ವಲಯಗಳಿಗೂ ವಿಸ್ತರಿಸಬಹುದು. ಇವೆಲ್ಲದರ ದೊಡ್ಡ ಲಾಭಾಂಶ ವ್ಯಾಪಾರಿಗಳಿಗೆ ಮತ್ತು ಕೈಗಾರಿಕೆಗಳಿಗೆ ದೊರೆಯುತ್ತಿದೆ.

ಒಂದು ವೇಳೆ ಕೈಗಾರಿಕೆಗಳಿಗೆ ಮತ್ತು ವ್ಯಾಪಾರಿಗಳಿಗೆ ಯಾವುದೇ ಕಾರಣದಿಂದ ನಷ್ಟವಾದರೆ ಕೆಲವೇ ಸಂಖ್ಯೆಗಳಲ್ಲಿ ಇರುವ ಮತ್ತು ಸಂಘಟಿತರಾಗಿರುವ ಈ ವರ್ಗ, ಸರ್ಕಾರದ ಮೇಲೆ ಒತ್ತಡ ಅಥವಾ ಪ್ರಭಾವ ಬೀರುವ ಮೂಲಕ ತಮ್ಮ ಕಷ್ಟ-ನಷ್ಟಗಳನ್ನು ಸರ್ಕಾರದ ಸಹಾಯದಿಂದಲೇ ಭರ್ತಿ ಮಾಡಿಕೊಳ್ಳುತ್ತಾರೆ. ಸರ್ಕಾರದಿಂದ ಸವಲತ್ತು ಪಡೆಯುವುದು ಎಂದರೆ ಸಮಾಜದಿಂದ ಪಡೆಯುವುದು ಎಂದರ್ಥ ತಾನೇ?

industry

ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಬೇಕೇಬೇಕು. ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ಸರ್ಕಾರ ಒಂದೋ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ನೀಡುತ್ತದೆ. ಕೈಗಾರಿಕೆಗೆ ಬೇಕಾದ ಸವಲತ್ತುಗಳನ್ನೂ ನೀಡುತ್ತದೆ. ಇದರಿಂದ ಉದ್ಯೋಗ, ಉತ್ಪಾದನೆ, ವಿದೇಶಿ ವಿನಿಮಯ ದೊರೆಯುತ್ತದೆ. ಒಂದು ಹಂತದ ನಂತರ, ಈ ಕೈಗಾರಿಕೆಗಳು ಲಾಭ ಗಳಿಸಲು ತೊಡಗುತ್ತದೆ. ಹೀಗೆ ಲಾಭಗಳಿಸಲು ತೊಡಗಿದ ನಂತರದಲ್ಲಾದರೂ ತಾವು ಆರಂಭಿಕ ಹಂತದಲ್ಲಿ ಪಡೆದ ಸವಲತ್ತುಗಳಿಗೆ ಪ್ರತಿಫಲವನ್ನು ಸರ್ಕಾರಕ್ಕೆ ಅಥವಾ ಸಮಾಜಕ್ಕೆ ನೀಡುತ್ತವೆಯೇ? ಈ ಕುರಿತು ಯಾವ ಚರ್ಚೆಯೂ ದೊಡ್ಡಮಟ್ಟದಲ್ಲಿ ನಡೆಯುವುದಿಲ್ಲ ಎಂಬುದು ವಾಸ್ತವ. ಬಡಜನರಿಗೆ ನೀಡಲಾಗುವ ಬಹಳಷ್ಟು ಪ್ರಯೋಜನವನ್ನು ಅನುಕೂಲಸ್ಥರೇ ಪಡೆಯುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ಈ ಹಂತದಲ್ಲಿ ನಿಜವಾಗಿಯೂ ಆಗಬೇಕಿರುವುದು, ಯಾರ ಹೆಸರಲ್ಲಿ ಪ್ರೋತ್ಸಾಹಕ ಯೋಜನೆಗಳು ಆರಂಭವಾಗಿದೆಯೋ, ಅದು ಯೋಗ್ಯ ಫಲಾನುಭವಿಗಳಿಗೆ ಮಾತ್ರ ತಲುಪಬೇಕು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

ನಕಲಿ ಪಡಿತರ ಚೀಟಿಗಳು, ಗ್ರಾಮೀಣ ಭಾಗದಲ್ಲಿ ರಸಗೊಬ್ಬರ ಸಹಾಯಧನ, ಉಚಿತ ವಿದ್ಯುತ್ ಕಬಳಿಸುವ ಶ್ರೀಮಂತ ರೈತ ವರ್ಗದ ಪ್ರಭಾವ ನಿವಾರಿಸುವ ಕೆಲಸವನ್ನು ಸರ್ಕಾರದ ಆಡಳಿತ ದಕ್ಷವಾಗಿ ನಿಭಾಯಿಸಬೇಕು. ಹೀಗೆ ನಿಭಾಯಿಸಿದಲ್ಲಿ ಯಾರಲ್ಲಿ ಕೊಳ್ಳುವ ಸಾಮರ್ಥ್ಯ ಇಲ್ಲವೋ ಅವರ ಕೈಗೆ ಆದಾಯ ಬಂದಾಗ, ಸಂಪನ್ಮೂಲ ಇಡೀ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುತ್ತದೆ. ಎಲ್ಲರ ಜೀವನವು ಸುಗಮವಾಗುತ್ತದೆ.

ಸರ್ಕಾರ ನಿಜವಾದ ಅರ್ಥದಲ್ಲಿ ತಾಯಿಯಾಗಬೇಕು. ಮನೆಯಲ್ಲಿ ಅಶಕ್ತರಾಗಿರುವ ಮಕ್ಕಳು ಶಕ್ತವಾಗಿರುವವರ ಅಬ್ಬರದ ಮಧ್ಯೆ, ಅನಾಥರಾಗದಂತೆ ತಾಯಿ ಕರುಳು ಮಿಡಿಯುತ್ತಿರುತ್ತದೆ. ಅಸಂತೋಷ, ಅಸಮಾಧಾನಗಳು ಅಂಟು ಕಾಯಿಲೆ ಇದ್ದಹಾಗೆ. ಸರ್ಕಾರ ನಡೆಸುವವರ ಬುದ್ಧಿವಂತಿಕೆ ಇರುವುದು ಕಾಯಿಲೆ ಬಾರದಂತೆ ನೋಡುವುದರಲ್ಲಿಯೇ ಹೊರತು, ಕಾಯಿಲೆ ಬಂದ ನಂತರ ಔಷಧಿಗಾಗಿ ಹುಡುಕಾಟ ನಡೆಸುವುದರಲ್ಲಿ ಅಲ್ಲ.

ಯಾರು ಯಾವ ಪಾತ್ರ ನಿರ್ವಹಿಸಲು ಉತ್ಸುಕತೆ ತೋರಿಸುತ್ತಿದ್ದಾರೆ ಎನ್ನುವುದನ್ನು ಅರಿಯಲು ಯಾವ ದೊಡ್ಡ ಪದವಿಯ ಅಗತ್ಯವೇ ಇಲ್ಲ. ಮನುಷ್ಯ ಪ್ರೀತಿ ಮತ್ತು ಸಾಮಾಜಿಕ ಉತ್ತರದಾಯಿತ್ವದ ಕನಿಷ್ಠ ಕಲ್ಪನೆ ಸಾಕು. ಈಗ ಹೇಳಿ ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ?

ಉದಯಕುಮಾರ್
ಡಾ ಉದಯ್‌ ಕುಮಾರ್‌ ಇರ್ವತ್ತೂರು
+ posts

ನಿವೃತ್ತ ಪ್ರಾಂಶುಪಾಲರು, ಮಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಉದಯ್‌ ಕುಮಾರ್‌ ಇರ್ವತ್ತೂರು
ಡಾ ಉದಯ್‌ ಕುಮಾರ್‌ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X