ಅಕ್ಟೋಬರ್1 ರಂದು ಶಿವಮೊಗ್ಗ ಹೊರವಲಯದ ರಾಗಿಗುಡ್ಡ ಬಡಾವಣೆಯಲ್ಲಿ ಈದ್‌ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ನಡೆದ ಗಲಭೆಯು ನಗರದ ಇತರೆ ಪ್ರದೇಶಗಳಿಗೆ ಹರಡುವ ಸಂಭವನೀಯ ಸಾಧ್ಯತೆಯನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾದ ಮಹತ್ವ ಸಂಗತಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 1ರಂದು ನಗರದೆಲ್ಲಡೆ ಅದ್ದೂರಿಯ ಈದ್ ಮಿಲಾದ್ ಮೆರವಣಿಗೆಗೆ ಸಿದ್ದತೆ ನಡೆಯುತ್ತಿರುವಾಗ ಇತ್ತ ರಾಗಿಗುಡ್ಡ ಬಡಾವಣೆಯಲ್ಲಿ ಪ್ರಚೋದನಾಕಾರಿ ಕಟೌಟ್ ಮತ್ತು ದ್ವಾರಬಾಗಿಲು ಕಮಾನುಗಳ ಬಗ್ಗೆ ಪೊಲೀಸರು ಮತ್ತು ಮುಸ್ಲಿಂ ಸಮುದಾಯದ ಗುಂಪೊಂದರ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿತ್ತು.
ಪ್ರಚೋದನಾಕಾರಿ ವಾಕ್ಯಗಳ ಕಮಾನುಗಳನ್ನು ಮತ್ತು ಟಿಪ್ಪುಸುಲ್ತಾನ್‌ನ ಕಟೌಟ್‌ನಲ್ಲಿದ್ದ ಆಕ್ಷೇಪಾರ್ಹ ಚಿತ್ರವನ್ನು ತೆಗೆದು ಹಾಕುವಂತೆ ಪೊಲೀಸರು ಮುಸ್ಲಿಂ ಮುಖಂಡರ ಮನವೊಲಿಸಿದ್ದರೂ ಕಿಡಿಗೇಡಿಗಳ ಗುಂಪೊಂದು ಮುಸ್ಲಿಂ ಮುಖಂಡರ ಯಾವ ಮಾತಿಗೂ ಕ್ಯಾರೆ ಎನ್ನದೆ ಪೊಲೀಸರ ವಿರುದ್ದವೇ ಸೆಟೆದು ನಿಂತಿತು. ಕೊನೆಗೂ ಪೊಲೀಸರು ಟಿಪ್ಪು ಕಟೌಟ್‌ನಲ್ಲಿನ ಚಿತ್ರಕ್ಕೆ ಬಿಳಿ ಬಣ್ಣ ಬಳಿದದ್ದಕ್ಕೆ ಆಕ್ರೋಶಗೊಂಡ ಗುಂಪೊಂದು ಪೊಲೀಸರ ವಿರುದ್ದ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟುವ ಪ್ರಚೋದನೆಗಿಳಿದಿದ್ದು ಮೆರವಣಿಗೆಗೆ ಮುಂಚೆಯೇ ಪರಿಸ್ಥಿತಿ ಪ್ರಕ್ಷುಬ್ದಗೊಂಡಿತು ಎನ್ನಬಹುದು.
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆಯೇ ಹಲ್ಲೆ ನಡೆಸಲು ಕಿಡಿಗೇಡಿಗಳ ಗುಂಪು ಯತ್ನಿಸಿದ್ದು ಪೊಲೀಸರು ಅತ್ಯಂತ ಸಹನೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾ ನಿಯಂತ್ರಿಸುತ್ತಿದ್ದರು. ಆದರೆ, ಸಂಜೆ ಮೆರವಣಿಗೆ ಆರಂಭವಾಗುತ್ತಿದ್ದಂತೆ ರಾಗಿಗುಡ್ಡದ ಮುಖ್ಯರಸ್ತೆಯಲ್ಲಿ ಜನರ ಮೇಲೆ ಕಲ್ಲೊಂದು ಬಿತ್ತು ಎಂಬ ವದಂತಿ ಇದ್ದಕ್ಕಿದ್ದಂತೆ ಕೇಳಿಬಂದಿದ್ದು, ಮೆರವಣಿಗೆಯಲ್ಲಿದ್ದವರು ಪೊಲೀಸರ ಮೇಲೆ ಮುಗಿಬಿದ್ದರಲ್ಲದೆ ಕೆಲವರು ಕಲ್ಲು ತೂರಾಟಕ್ಕಿಳಿದರು.
ಸ್ಥಳದಲ್ಲಿದ್ದ ಎಸ್ಪಿ ಜಿ ಕೆ ಮಿಥುನ್‌ಕುಮಾರ್, ಅಡಿಷನಲ್ ಎಸ್ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್ ಪಿ ಸುರೇಶ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅಭಯ್‌ಪ್ರಕಾಶ್ ಅವರುಗಳು ಸಿಬ್ಬಂದಿಗಳೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರಾದರೂ ದುಷ್ಕರ್ಮಿಗಳ ಗುಂಪೊಂದು ಮಹಿಳೆಯರನ್ನು ಮುಂದು ಮಾಡಿ ಪೊಲೀಸರ ಮೇಲೆ ಕಲ್ಲು ತೂರಾಟ. ಹಲ್ಲೆ ಯತ್ನ, ಅಶ್ಲೀಲ ಪದಗಳಿಂದ ನಿಂದನೆಗಳಿಗಿಳಿಯಿತು. ರಾಗಿಗುಡ್ಡದ 8 ಮತ್ತು 9ನೇ ತಿರುವಿನಲ್ಲಿ ಜಮಾಯಿಸಿದ ಗುಂಪೊಂದು ಮನಸ್ಸೋ ಇಚ್ಚೆಯಾಗಿ ಇಟ್ಟಿಗೆ, ಕಲ್ಲುಗಳನ್ನು ಪೊಲೀಸರತ್ತ ತೂರಲಾರಂಭಿಸಿತು.
ಪರಿಸ್ಥಿತಿ ಉದ್ರಿಕ್ತಗೊಳ್ಳುತ್ತಿದ್ದಂತೆ ಇತ್ತ ರಾಗಿಗುಡ್ಡ ಆರನೇ ತಿರುವಿನಲ್ಲಿ ಇನ್ನೊಂದು ಸಮುದಾಯದ ಕೆಲವೆ ವ್ಯಕ್ತಿಗಳ ಗುಂಪೊಂದು ಕಲ್ಲು ತೂರಾಟಕ್ಕಿಳಿದಿದ್ದು. ಪೊಲೀಸರು ಈ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರೆ ಇತ್ತ 9 ನೇ ತಿರುವಿನ ಅಡ್ಡರಸ್ತೆಯಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪು ಪೊಲೀಸರನ್ನು ಗುರಿಯಾಗಿಸಿಕೊಂಡು ಆಘಾತಕಾರಿ ಆಕ್ರಮಣಕ್ಕಿಯಿಳಿತು. ಎಸ್ಪಿ ಮಿಥುನ್‌ಕುಮಾರ್ ಸೇರಿದಂತೆ ಪತ್ರಕರ್ತರು ಕಲ್ಲು ಹೊಡೆತದಿಂದ ಕೂದಲೆಳೆಯಲ್ಲೆ ಪಾರಾದರು. ಈ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರ ಕಾಲಿಗೆ ಕಲ್ಲು ಬಿದ್ದು ಗಾಯವಾದರೆ ಎಸ್ಪಿ ಅವರ ಗನ್‌ಮ್ಯಾನ್ ಕಲ್ಲುತೂರಾಟದಲ್ಲಿ ನಿರತ ಗುಂಪಿನ ಸಮೀಪವೇ ಸಿಕ್ಕಿಹಾಕಿಕೊಂಡು ಹಲ್ಲೆಗೊಳಗಾಗಿ ಅವರಿಂದ ಪಾರಾಗುವಲ್ಲಿ ಯಶಸ್ವಿಯಾದರು. ಗನ್ ಮ್ಯಾನ್ ಸಿಕ್ಕಿಹಾಕಿಕೊಂಡ ವಿಷಯ ತಿಳಿದ ಎಸ್ಪಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಗುಂಪನ್ನು ಬೆನ್ನತ್ತಿದ್ದರಾದರೂ ಒಂದು ಹಂತದಲ್ಲಿ ಉದ್ರಿಕ್ತಗುಂಪಿನ ಅಟ್ಟಹಾಸ ಮೀತಿಮೀರಿತ್ತು. ಬಹುಸಂಖ್ಯಾತ ಸಮುದಾಯದ ತಿರುವುಗಳಿಗೆ ನುಗ್ಗಿದ ಉದ್ರಿಕ್ತ ಗುಂಪು ಮನೆಗಳನ್ನು, ವಾಹನಗಳನ್ನು ಗುರಿ ಮಾಡಿ ದಾಳಿ ಮಾಡಿದ್ದು ಕೆಲವರ ಮೇಲೆ ಹಲ್ಲೆ ನಡೆಸಿತು.
ವ್ಯೂಹ ರಚಿಸಿದ ಎಸ್ಪಿ
ರಾಗಿಗುಡ್ಡದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆರ್‌ಎಎಫ್ ಮತ್ತು ಕೆಎಸ್‌ಆರ್‌ಪಿಯ ಹೆಚ್ಚುವರಿ ತುಕಡಿಗಳನ್ನು ಕರೆಯಿಸಿಕೊಳ್ಳಲಾಗಿದ್ದು ಪರಿಸ್ಥಿತಿಯ ಮೇಲೆ ನಿಗಾವಹಿಸಲಾಗಿತ್ತು. ಮಹಿಳಾ ಪೊಲೀಸರು ಸೇರಿದಂತೆ ಕರ್ತವ್ಯ ನಿರತ ಪೊಲೀಸರನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದ ಉದ್ರಿಕ್ತಗುಂಪು ಘರ್ಷಣೆಗೆ ಪ್ರಚೋದಿಸುವಲ್ಲಿ ನಿರತವಾಗಿದ್ದರೂ ಅತ್ಯಂತ ಸಂಯಮದಿಂದ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದರು. ಎಂತಹದ್ದೆ ಸಂದರ್ಭ ಎದುರಾದರೂ ಅದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸನ್ನದ್ಧಗೊಂಡಿತ್ತು.
ರಾಗಿಗುಡ್ಡದಲ್ಲಿ ಈದ್ ಮೆರವಣಿಗೆಯಲ್ಲಿದ್ದವರ ಮೇಲೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ಮೆರವಣಿಗೆಯಲ್ಲಿದ್ದವರ ಮೇಲೆಯೇ ಲಾಠಿಚಾರ್ಜು ನಡೆಸಿದ್ದಾರೆ. ಮಹಿಳೆಯರು ಮಕ್ಕಳನ್ನು ಹೊಡೆಯುತ್ತಿದ್ದಾರೆ, ಸಮುದಾಯದ ಬಂಧುಗಳು ರಕ್ಷಣೆಗೆ ಬರುವಂತೆ ವಾಟ್ಸಾಪ್ ವಾಯ್ಸ್‌ನಲ್ಲಿ ಸುಳ್ಳು ಮೆಸೇಜ್‌ಗಳು ಹರಿದಾಡತೊಡಗಿದವು. ಪರಿಸ್ಥಿತಿಯನ್ನು ನಿಭಾಯಿಸುವುದು ಪೊಲೀಸ್ ಇಲಾಖೆ ಒಂದು ಸವಾಲಿನ ಕೆಲಸವೇ ಆಗಿತ್ತು.
ನಗರದಲ್ಲಿ ವಿವಿಧ ಬಡಾವಣೆಗಳಿಂದ ಈದ್ ಮೆರವಣಿಗೆಗಳು ಅಮೀರ್ ಅಹಮ್ಮದ್ ಸರ್ಕಲ್‌ಗೆ ಜಮಾವಣೆ ಆಗುತ್ತಿದ್ದು, ಇತ್ತ ಪುಂಡಾಟಕ್ಕಿಳಿದಿದ್ದ ಗುಂಪನ್ನು ರಾಗಿಗುಡ್ಡ ಬಿಟ್ಟು ಹೊರ ಹೋಗದಂತೆ ಮತ್ತು ಹೊರಗಿನವರು ರಾಗಿಗುಡ್ಡ ಬಡಾವಣೆಯೊಳಗೆ ಪ್ರವೇಶಿಸದಂತೆ ನಾಕಾಬಂಧಿ ಹಾಕಲಾಗಿದ್ದು ಬಡಾವಣೆಗೆ ಸೀಮಿತವಾಗಿ 144 ಸೆಕ್ಷನ್ ಜಾರಿಗೊಳಿಸಿ ಬೀದಿಯಲ್ಲಿದ್ದ ಗುಂಪುಗಳನ್ನು ಚದುರಿಸಿ ರಾತ್ರಿ 9ಗಂಟೆ ವೇಳೆಗೆ ಇಡೀ ರಾಗಿಗುಡ್ಡ ಪ್ರದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಎಸ್ಪಿ ಮಿಥುನ್‌ಕುಮಾರ್ ರಚಿಸಿದ ವ್ಯೂಹ ಯಶಸ್ವಿಯಾಯಿತು.
ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ನಡೆಯುತ್ತಿದ್ದ ಈದ್‌ಮಿಲಾದ್ ಮೆರವಣಿಗೆ ಮತ್ತು ಅಮೀರ್ ಅಹಮದ್ ವೃತ್ತದಲ್ಲಿನ ಮುಖ್ಯ ಕಾರ್ಯಕ್ರಮದ ಮೇಲೆ ರಾಗಿಗುಡ್ಡದ ಗಲಭೆ ಯಾವುದೇ ಪರಿಣಾಮ ಬೀರದಂತೆ, ಹೆಂಗಸರು, ಮಕ್ಕಳು ಸಂಭ್ರಮದಿಂದ ಭಾಗವಹಿಸಿ ಧರ್ಮಗುರುಗಳ ಪ್ರವಚನ, ಭಕ್ತಿಯಿಂದ ಪ್ರವಾದಿಯ ಸ್ತುತಿ, ವಚನಗಳೊಂದಿಗೆ ಶಾಂತಿಯುತವಾಗಿ ಮುಕ್ತಾಯಗೊಳ್ಳುವಲ್ಲಿ ಸಹಕಾರಿಯಾಯಿತು.
ಎಸ್ಪಿ ಮಿಥುನ್ ಕುಮಾರ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ಸಕಾಲಿಕ ಎಚ್ಚರಿಕೆಯಿಂದ ದುಷ್ಕರ್ಮಿಗಳ ಸಂಚಿನಿಂದ ನಗರದಲ್ಲಿ ಸಂಭವಿಸಬಹುದಾದ ಗಲಭೆಯೊಂದು ತಪ್ಪಿದಂತಾಗಿದೆ. ಅಷ್ಟಕ್ಕೂ ರಾಗಿಗುಡ್ಡದಲ್ಲಿ ನಡೆದದ್ದು ಎರಡು ಧರ್ಮದ ಗುಂಪುಗಳ ನಡುವೆ ನಡೆದ ಕೋಮುಗಲಭೆಯಲ್ಲ. ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರು ಮತ್ತು ಶಾಂತಿ, ಸೌಹಾರ್ದತೆ ಹಾಳುಗೆಡವುವ ಕಿಡಿಗೇಡಿಗಳ ನಡುವೆ ನಡೆದ ಸಂಘರ್ಷವಷ್ಟೇ.
ಸುಳ್ಳುಗಳ ಮೇಲಾಟ-ಪೊಲೀಸರಿಗೆ ಸಂಕಟ
ರಾಗಿಗುಡ್ಡ ಗಲಭೆಯ ಹಿನ್ನಲೆಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳುಗಳದ್ದೇ ಕಾರುಬಾರು ನಡೆದಿದೆ. ಪೊಲೀಸರು ಎನ್‌ಕೌಂಟರ್‌ಗೆ ಬಲಿ, ಮಹಿಳೆಯರ ಮೇಲೆ ಹಲ್ಲೆ, ಗಲಭೆಯಲ್ಲಿ ಹೊರಗಿನ ವ್ಯಕ್ತಿಗಳಿದ್ದಾರೆ. ಹೀಗೆ ತರಾವರಿ ಸುಳ್ಳುಗಳು ಜನರನ್ನು ಆತಂಕಗೊಳಿಸುತ್ತಿವೆ. ಇದನ್ನು ನಿಯಂತ್ರಿಸುವುದೇ ಪೊಲೀಸ್ ಇಲಾಖೆಗೆ ಈಗ ದೊಡ್ಡ ತಲೆನೋವಾಗಿದೆ.
ಸುಳ್ಳು ಸುದ್ದಿ ಹರಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ನಡುವೆ ನ್ಯೂಸ್ ಚಾನೆಲ್‌ಗಳಲ್ಲೂ ಭೀತಿಹುಟ್ಟಿಸುವಂತ ಸುದ್ದಿಗಳು ಪ್ರಸಾರಗೊಳ್ಳುತ್ತಿರುವುದು, ಕೆಲವು ನ್ಯೂಸ್ ಚಾನೆಲ್ ಗಳಲ್ಲಿ ಪ್ರಚೋದನಾಕಾರಿ ಚರ್ಚೆಗಳನ್ನು ನಡೆಸುತ್ತಿರುವುದು ಶಿವಮೊಗ್ಗದ ಸೌಹಾರ್ದತೆಯ ಮೇಲೆ ಮಾರಕ ಪರಿಣಾಮ ಬೀರುವಂತಿವೆ.

ಎನ್ ರವಿಕುಮಾರ್
ಪತ್ರಕರ್ತ, ಲೇಖಕ