ಹಿರೇಮಠ ಸಂದರ್ಶನ-2 | ಸರ್ಕಾರಕ್ಕೆ ಹಣ ಬರಬೇಕಂದ್ರೆ ಗಣಿಗಾರಿಕೆ ರಾಷ್ಟ್ರೀಕರಣ ಮಾಡ್ಬೇಕು

Date:

Advertisements

ಪರಿಸರ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್ ಹಿರೇಮಠ ಅವರನ್ನು ಲೇಖಕಿ ರೂಪ ಹಾಸನ ಅವರು ಸಂದರ್ಶಿಸಿದ್ದಾರೆ. ಸಂದರ್ಶನದ ಮೊದಲ ಭಾಗವನ್ನು ಜುಲೈ 22ರಂದು ‘ಹಿರೇಮಠ ಸಂದರ್ಶನ-1 | ಮನುಷ್ಯನಲ್ಲಿ ಮನುಷ್ಯತ್ವನೇ ಇಲ್ಲ ಅಂದ್ರೆ, ಪ್ರಕೃತಿ ಸರಿಪಡಿಸಲಾಗದ ರೀತಿ ಬುಡಮೇಲಾಗ್ತದೆ‘ ಶೀರ್ಷಿಕೆಯಲ್ಲಿ ಪ್ರಕರಟಿಸಲಾಗಿತ್ತು. ಸಂದರ್ಶನದ ಮುಂದುರೆದ 2ನೇ ಭಾಗ ಇಲ್ಲಿದೆ;

• ಜೊತೆಗೆ ಭೂಮಿಗೆ ಸಂಬಂಧಿಸಿಯೇ ನಿಮ್ಮ ಹೋರಾಟದ ನಂಟು ಇದೆಯಲ್ಲ! ಇದಕ್ಕೆ ಏನಾದರೂ ಹಿನ್ನೆಲೆ ಇದೆಯಾ?
ಹೌದು. ಇದಕ್ಕ ನನ್ನದೊಂದು ಅನುಭವ ಹೇಳಬೇಕದಾ; 2000ದ ಡಿಸೆಂಬರ್‌ದಾಗ ನಾವೊಂದು 14-15 ಮಂದಿ ಕೇರಳದ ಪಶ್ಚಿಮಘಟ್ಟದ ಸೆರಗಿನಾಗಿರೋ ‘ಪಾಲ್ಗಾಟ್’ ಅನ್ನೋ ಕಣಿವೆ ಜಾಗದಾಗ ಕೂಡಿದ್ದೋ. ಇವತ್ತಿಗೆ ಈಗದಕ್ಕೇ ಪಾಲಕ್ಕಾಡ್ ಅಂತೇನೋ ಬೇರೆ ಹೆಸರಿದೆ. ‘ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್’ [ಕೆಎಸ್‌ಎಸ್‌ಪಿ] ಸಂಘಟನೆಯವರು, ಡಾ. ಎಂ.ಪಿ ಪರಮೇಶ್ವರನ್ ಅವರ ನೇತೃತ್ವದಾಗ ಇದನ್ನ ಆಯೋಜಿಸಿದ್ದರು. ಅದರಲ್ಲಿ ಒರಿಸ್ಸಾದಿಂದ ಕಿಶನ್ ಪಟ್ನಾಯಕ್, ಎಂ.ಕೆ ಪ್ರಸಾದ್, ಡಾ. ಪರಮೇಶ್ವರರಾವ್, ಉಜಿರಮ್ಮ, ಬಿ.ಡಿ.ಶರ್ಮ, ಕಿಶೋರ್ ಸಂತ್, ಡಾ.ಕರುಣಾಕರನ್… ಹಿಂಗೆ ದೊಡ್ಡ ದೊಡ್ಡ ವಿಜ್ಞಾನಿಗಳು, ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರು, ಗುಡಿ ಕೈಗಾರಿಕೆ, ಕೃಷಿ, ಸಾಮಾಜಿಕ ವಿಷ್ಯದಾಗ ಕೆಲಸ ಮಾಡೋರು, ಭಾರತ ಬಿಟ್ಟು ಹೋಗಿ ವಾಪಸ್ ಬಂದು ಸಾಮಾಜಿಕವಾಗಿ ವ್ಯಸ್ತರಾಗಿರೋವರೆಲ್ಲ ಒಂದು ವಾರ ಕೂಡಿದ್ದೊ ಅಲ್ಲಿ. ಹಿಂಗೆ ಎಲ್ಲಾ ಕೂಡ್ಕೊಂಡು ಭೂಮಿ, ಅದರ ಒಡೆತನ, ಹಕ್ಕು, ಮಹತ್ವದ ಕುರಿತಂಗೆ ಅಭ್ಯಾಸ ಮಾಡಿದ್ವಿ. ಇದರ ಬಗ್ಗೆ ಆಳವಾಗಿ ಇಳೀತಾ ಹೋದಾಗ ನನಗನ್ನಿಸ್ತು- ‘ಇವರೊಳಗೆಲ್ಲಾ ಎಷ್ಟೊಂದು ದೃಢ ಸಂಕಲ್ಪ ಐತಿ! ಏನಾದ್ರೂ ದೇಶದ ಒಳಿತಿಗಾಗಿ ಮಾಡ್ಬೇಕು ಅನ್ನೋ ವಿಶ್ವಾಸ ಹೊಂದ್ಯಾರ. ಎಲ್ಲಿಂದ ರ‍್ತದಿದು ಈ ಕಾಲದಾಗೆ’ ಅಂತ ಆಶ್ಚರ್ಯಪಟ್ಟಿದ್ದೆ.

ಆ ಉನ್ನತ ಮಟ್ಟದ ಸಭೆಯಾಗ ಭಾಗವಹಿಸಿದ್ದಾಗ, ಒರಿಸ್ಸಾದ ಕೋರಾಪುಟ್ ಜಿಲ್ಲೆಯ ‘ಮಾಲ್ಕಂಜ್’ ಎನ್ನೋ ಆದಿವಾಸಿಗಳಿರೋ ಒಂದು ಸಣ್ಣ ತಾಂಡಾದಲ್ಲಿ ಗೋಲಿಬಾರ್ ಆಗಿ ಹತ್ತಾರು ಮಂದಿ ಕೊಲೆ ಆಗೇತಿ ಅಂತ ಸುದ್ದಿ ಬಂತು. Ulkal Alumini International Limited ನವರು, ಈ ಆದಿವಾಸಿಗಳಿಗೆ ಸಂಬಂಧಿಸಿದ ಭೂಮಿಯನ್ನ ಒತ್ತಾಯದಿಂದ ಕಬ್ಜಾ ಮಾಡ್ಕೊಂಡಿದ್ರು. ಇದನ್ನ ವಿರೋಧಿಸಿ ಆದಿವಾಸಿಗಳು ಪ್ರತಿಭಟನೆ ನಡೆಸಿದ್ರು. ಆಗ ಗೋಲಿಬಾರ್ ನಡೆದಿತ್ತು. ತಕ್ಷಣ ನಾವೊಂದು ಟೀಮ್ ಸೇರಿ ಅಲ್ಲಿಗೆ ಹೋದ್ವಿ. ಆ ಜನದೊಳಗ ಭೂಮಿ ಬಗ್ಗೆ ಅದೆಷ್ಟು ಪ್ರೀತಿ ಅದಾ, ಏನೊಂದು ತೀವ್ರವಾದ ಸಂಬಂಧ ಇದೆ ಅಂದ್ರಾ… ಬಹಳೇ ಅಮೂಲ್ಯ ಅನ್ಸಿತ್ತದು. ಯಾವುದಾದರೂ ಬುಡಕಟ್ಟು ಜನರ ಭೂಮಿ ಪ್ರೀತಿ ಬಗ್ಗೆ ಏನಾರೂ ಯಾರಾದ್ರೂ ರ‍್ದಿದ್ದಾರೇನು ಅಂತ ವಿಚಾರ ಮಾಡ್ದಾಗ ನಮ್ಮಲ್ಲೊಬ್ಬರು- ‘ಪರಾಜಾ’ ಕೃತಿ ಅದ್ಭುತವಾಗಿದೆ’ ಅಂದ್ರು. ಅದು ಒರಿಯಾ ಭಾಷೆನಾಗ ಗೋಪಿನಾಥ್ ಮೊಹಂತೆಯೆನ್ನುವ ಪ್ರಸಿದ್ಧ ಕಾದಂಬರಿಕಾರರು ರಚಿಸಿದ್ದಿತ್ತು. ಅವರಿಗೆ ಅದಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಕೂಡ ಬಂದಿತ್ತು. ನಾನು ಅದರ ಇಂಗ್ಲಿಷ್ ಅನುವಾದಕ್ಕಾಗಿ ಹುಡುಕ್ಯಾಡ್ತಾನೇ ಇದ್ದೆ. ಆಮ್ಯಾಗೆ ಇದ್ದಕ್ಕಿದ್ದಂತೆ ಒಮ್ಮೆ ಅದರ ಇಂಗ್ಲೀಷ್ ಅನುವಾದ ನನಗೆ ಸಿಕ್ತು. ಅದನ್ನ ಮೊದಲ ಪುಟದಿಂದ ಕೊನೇವರೆಗೂ ಒಂದೇ ಸಲ ಬಿಡ್ದೆ ಕುಂತು ಓದಿ ಮುಗಿಸ್ದೆ.

Advertisements

ನನಗೆ ಎಂತಹಾ ರೋಮಾಂಚನ, ಉದ್ವೇಗ ಮತ್ತ ಸಂತೊಷ ಆಯ್ತಂದ್ರೆ -ಅದನ್ನ ಮಾತಿನಾಗೆ ಹೇಳ್ಲಿಕ್ಕೆ ಬರೂದಿಲ್ಲ. ಭೂಮಿ ಬಗ್ಗೆ ಆದಿವಾಸಿ ರೈತಾಪಿಗಳ ಅನುಬಂಧ ಹೆಂಗರ‍್ತದ? ಅವರ ಜೀವನ ಶೈಲಿ ಹೆಂಗರ‍್ತದ? ಭೂಮಿ ನಮಿಗ್ಯಾಕ್ ಮುಖ್ಯ? ಈ ಜೀತದಾಳುಗಳು ಹಣ ಪಡೆದವರಿಂದ ಹೆಂಗೆ ಚಿತ್ರಹಿಂಸೆ ಅನುಭವಿಸ್ತಾರೆ? ಜಮೀನ್ದಾರರ ದರ್ಪ, ಶೋಷಣೆ, ಹಕ್ಕು ವಂಚಿತರು ಭೂಮಿ ಬಿಟ್ಟು ವಲಸೆ ಹೋಗುವಂಥಾ ಪ್ರಸಂಗ ಯಾಕೆ ರ‍್ತದೆ? ಇವೆಲ್ಲಾ ಮನಸಿಗೆ ನೇರವಾಗಿ ಮನವರಿಕೆ ಆಗ್ತಾ ಹೋಯ್ತು. ಭೂಮಿ ಮತ್ತು ಮನುಷ್ಯ ಸಂಬಂಧಗಳ ಅಂತರಂಗ ನನ್ನ ಮನಸು ಮುಟ್ಟಿತು. ನಮ್ಮ ಜೀವಾನಾದ್ರೂ ಕೊಟ್ಟು ಭೂಮಿಯನ್ನ ಉಳಸ್ಕೋಬೇಕಾಗದ. ಇದನ್ನ ಮಾತಾಡೋದ್ರಿಂದ ಆಗೋದಿಲ್ಲ. ಕ್ರಿಯೆಯೊಳಗೆ ರ‍್ಬೇಕಿದು ಅನ್ನೂ ಛಲ ಬಂತು. ಶಿವರಾಂ ಕಾರಂತರ ‘ಚೋಮನದುಡಿ’ನಾಗೂ ಇಂತಹುದೇ ಚಿತ್ರಣ ರ‍್ತದೆ.

Paraja: Buy Paraja by Mohanty Gopinath at Low Price in India | Flipkart.comಮತ್ತೊಂದು ಹೇಳ್ಬೇಕಂದ್ರೆ, ದೂರದ ಹಿಮಾಚಲ ಪ್ರದೇಶದೊಳಗ ಪಾಲಂಪುರ್ ಅಂತ ಐತಿ. ನಮ್ಮ ವಕೀಲ ಗೆಳೆಯ ಪ್ರಶಾಂತ್ ಭೂಷಣ್ ಅವರು ಇಲ್ಲೊಂದು ‘ಇನ್ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಪಾಲಿಸೀ ಅಂಡ್ ಪೊಲಿಟಿಕ್ಸ್’ ಅಂತ ಸಂಸ್ಥೆ ಮಾಡ್ಯಾರಾ. 2012ರಾಗ ನಾವಲ್ಲಿ 3 ದಿವಸ ಕೂಡಿದ್ದೆವು. ಆ ಕಾರ್ಯಾಗಾರದಾಗ ಈ ಭೂಮಿ ವಿಷಯ ಬಹಳ ಚರ್ಚೆಗೆ ಬಂತು. ‘ಕೃಷಿಗೆ ಸಂಬಂಧಿಸಿದ ಸಂಕಟ’ಗಳನ್ನ ಕುರಿತು ಎಸ್.ಪಿ ಶುಕ್ಲಾ ಆಳವಾಗಿ ಮಾತಾಡಿದ್ರು. ಕೃಷಿಯಲ್ಲಿ ಸಹಕಾರಿ ತತ್ವಗಳ ಮೂಲಕನೇ ಪ್ರಬಲ ಶಕ್ತಿಗಳಿಗೆ ಹೆಂಗೆ ಎದುರಾಗಬೇಕು ಎಂದೂ, ಇಂದು ಕೃಷಿ ವ್ಯಕ್ತಿಗತ ಆಗಿರೋದ್ರಿಂದ ಏನು ಸಮಸ್ಯೆಗಳಾಗಿದ್ದಾವೆ ಎಂದವರು ಆಲವಾಗಿ ವಿವರಿಸಿದ್ರು. ನಮ್ಮ ಸ್ವಾತಂತ್ರ್ಯ ಆಂದೋಲನ ಸಂಪೂರ್ಣ ಯಶಸ್ವಿಯಾಗ್ಬೇಕಂದ್ರೇ ಈ ಕೆಲವೇ ಉಚ್ಛವರ್ಗದ ಮಂದಿ, ಓದು ಬರಹ ಬಲ್ಲ ಕೆಲವೇ ಜನ, ಉಚ್ಛಜಾತಿ ಮಂದಿ -ಇವರಿಂದ ಮಾತ್ರ ಅದಾಗಿಲ್ಲ. ಯಾವಾಗ ಸಾಮಾನ್ಯ ಮಂದಿ ಇದರೊಳಗೆ ರ‍್ತಾರೋ ಅವಾಗಿದಾಗ್ತದೆ. ಇದಕ್ಕೆ ‘ಉಳುವವನೇ ಭೂಮಿ ಒಡೆಯ’ ಆಗ್ಬೇಕು. ಇದೊಂದೇ ದಾರಿ. ಇದನ್ನ ಕೇಂದ್ರ ಮಾಡಿಕೊಂಡೇ ನಮ್ಮೆಲ್ಲರ ಹೋರಾಟ ನಡೀಬೇಕಾಗದಾ ಅಂತ ಚರ್ಚೆ, ಸಂವಾದ ಆಯ್ತು. ಇದೂ ಕೂಡ ನನ್ನ ತಿಳಿವಿಗೆ ಮೂಲ.

• ಕಾದಂಬರಿ ಆಯ್ತು, ಸಂವಾದ ಆಯ್ತು. ಆದರೆ ವಾಸ್ತವದಲ್ಲಿ?
ಭೂಮಿ ಒಡೆಯರಾದ ಪಾಟೀಲರು, ಆಮೇಲೆ ಗುಜರಾತ್‌ನ ಪಟೇಲರು, ಆಮೇಲೆ ಉಳಿದ ಗೌಡರು, ರೆಡ್ಡಿಗಳು…. ಇಂಥಹ ಬಲಾಢ್ಯರೆಲ್ಲ ಹೋಗಿ ಅಧಿಕಾರ ಹಿಡಿದ್ರೆ ಹೆಂಗೆ ಉಳುವವನೇ ಭೂಮಿ ಒಡೆಯ ಆಗ್ತಾನೆ! ದೇವರಾಜ್ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ 1974ರಾಗ ಭೂ ಸುಧಾರಣೆ ಒಳಗೆ ಮುಖ್ಯ ತಿದ್ದುಪಡಿ ತಂದ್ರು. ಒಂದು ಉಳುವವನೇ ಭೂಮಿ ಒಡೆಯ ಅನ್ನೋದು. ಇನ್ನೊಂದು ಭೂಮಿಯನ್ನ ಗೇಣಿಗೆ ಕೊಡೋ ಪದ್ಧತಿಯನ್ನ ನಿಷೇಧಿಸಿದ್ದು. ಮತ್ತೊಂದು ವ್ಯಕ್ತಿ ಅಥವಾ ಸಂಸ್ಥೆಗಳು ಭೂಮಿಯನ್ನ ಹೊಂದಬಹುದಾದ ಗರಿಷ್ಠ ಮಿತಿಯನ್ನ ಕಡಿಮೆ ಮಾಡಿದ್ದು. ಈಗ ಅಂತವ್ರು ವಿರಳ. ಕೇರಳದೊಳಗಿನ ಕಮ್ಯುನಿಷ್ಟರಂತವರೂ ವಿರಳ. ಆಮೇಲೆ ದೂರದ ಶೇಕ್ ಅಬ್ದುಲ್ಲಾರಂತವರು ಇನ್ನೂ ವಿರಳ. ಅವರು ಜಮ್ಮು-ಕಾಶ್ಮೀರದೊಳಗ ಭೂಸುಧಾರಣೆ ಭಾರಿ ಮಾಡಿದ್ರು. ಯಾವಾಗೂ ಬಡವರ ಸಲುವಾಗೇ ಇರುತ್ತಿದ್ದರು. ನಿಜವಾದ ಪ್ರಜಾಪ್ರಭುತ್ವವಾದಿ ಮತ್ತು ಸಮಾಜವಾದಿ. ಆಮೇಲೆ ಪಶ್ಚಿಮಬೆಂಗಾಲದಲ್ಲಿ ಸ್ವಲ್ಪ ಮಟ್ಟಿಗೆ, ಮಣಿಪುರದಲ್ಲಿ ಕೆಲಮಟ್ಟಿಗೆ ಭೂಮಿ ಹಂಚಿಕೆ ಆಗ್ಯಾದಾ. ಇಷ್ಟು ಬಿಟ್ರೆ ಬೇರೆ ಎಲ್ಲೀನೂ ಸರಿಯಾಗಿ ಆಗಿಲ್ಲ. ಹಿಂಗಾಗಿ ‘ಉಳುವವನೇ ಭೂಮಿಗೆ ಒಡೆಯ’ ಅನ್ನೋದನ್ನ ಮತ್ತೊಮ್ಮೆ ಕೇಂದ್ರಕ್ಕೆ ತರಬೇಕು. ಜೊತೆಗೆ ಸರ್ಕಾರಾನೇ ಮಧ್ಯಸ್ಥಿಕೆ ವಹಿಸಿ ಕಾರ್ಪೋರೇಟ್ಸ್‌ಗಳಿಗೆ ಭೂಮಿ ಧಾರೆ ಎರೀತಿರೋದನ್ನ ನಿಲ್ಲಿಸ್ಬೇಕು. ಅದರ ನಂತರ ನಾವು ಮಧ್ಯಪ್ರದೇಶದಾಗ ಏನು ಹೋರಾಟ ಮಾಡ್ದೆವು, ವರ್ಲ್ಡ್ ಬ್ಯಾಂಕ್ ನೀತಿ ಬಗ್ಗೆ ಸತ್ಯಾಗ್ರಹ ಮಾಡಿದ್ವಿ, ಆಗ ಅದನ್ನ ಹೆಂಗೆ ಪರಿಸರ ಕೇಂದ್ರಿತ ಅಭಿವೃದ್ಧಿ ಮಾಡ್ಬೇಕಂತ ಯೋಜನೆಗಳನ್ನ ಮಾಡಿದ್ವಿ. ಹಿಂಗೆ ಮೊದಲಿಂದಲೆ ಈ ನೀತಿಗಳು, ಇಲ್ಲಿನ ಪರಿಸರ, ಸರ್ಕಾರಿ ವ್ಯವಸ್ಥೆ ಏನಾಗೇದ ಇವನ್ನೆಲ್ಲಾ ಸಮಗ್ರವಾಗಿ ತಿಳ್ಕೊಳ್ದೇ ಇದ್ರೆ ಏನು ಮಾಡಿದ್ರು ವ್ಯರ್ಥ ಆಗ್ತದ.

• ಹಾಗಾದರೆ ಹೋರಾಟ ಹೇಗೆ?
ಭೂಮಿ ಮತ್ತು ಪರಿಸರ ಸಂಬಂಧಿತ ಹೋರಾಟಗಳೇನಿದ್ದಾವಲ್ಲ ಅವು ಸ್ಥಳೀಯ ಜನರ ಬೆಂಬಲ ಇರಲರ‍್ದಂಗೆ ಸಫಲ ಆಗಲಾರವು. ಜನರಿಗೆ ಭೂಮಿ ಮತ್ತು ಪರಿಸರದ ಕೂಡೆ ಒಂದು ಅರ್ಥಪೂರ್ಣ ಸಂಬAಧ ಇತ್ತಂದ್ರೆ ಮಾತ್ರ ಮುಂದಿನ ಜನಾಂಗಕ್ಕೆ ಅದನ್ನ ನಾವು ಉಳಿಸಿಡ್ಬೊದು. ಇಲ್ಲಾಂದ್ರೆ ಸಾಧ್ಯವಿಲ್ಲ. ಬೆಂಗಳರ‍್ನಾಗೆ ಕೂತ್ಕೊಂಡು ಪರಿಸರ ಉಳಿವಿಗಾಗಿ ಯಾವ್ದೇ ಯೋಜನೆ ವಿರುದ್ಧ ಹೋರಾಡ್ತೀನಂದ್ರೆ ಅರ್ಥ ಇಲ್ಲ. ಸ್ಥಳೀಯ ಸಮಸ್ಯೆಗೆ ನಮ್ಮ ನಮ್ಮ ಸ್ಥಳದಾಗ ಕುಂತು ಸಮಸ್ಯೆಯ ಸಂಪೂರ್ಣ ಮಾಹಿತಿ, ಅಧ್ಯಯನ ಮಾಡ್ಕೊಂಡು ಮುಂದಡಿ ಇಟ್ರೆ ಮಾತ್ರ ನಾವು ಸಮರ್ಥವಾಗಿ ಪರಿಸರ ಸಮಸ್ಯೆಯನ್ನ ಎದುರಿಸ್ಬೋದಷ್ಟೇ. ಗ್ರಾಮ ಮಟ್ಟದಾಗ ಸಮರ್ಥ ಕಾವಲು ಸಮಿತಿಗಳನ್ನ ರಚಿಸಬೇಕು. ಅನಾದಿ ಕಾಲದಿಂದಲೂ ಕಾಡಲ್ಲೇ ಜೀವಿಸಿರೋರು- ಇವರಿಂದ ಶುರು ಮಾಡಿಕೊಂಡು, ತಳಸಮುದಾಯ, ಹಳ್ಳಿಯ ಬಡವರು, ಕೃಷಿಕರು, ಅದಕ್ಕೂ ನಿಕೃಷ್ಟವಾಗಿರೋ ಮಹಿಳೆಯರು… ಈ ಎಲ್ಲರ ಜೀವನ ಆಳವಾಗಿ ಅಧ್ಯಯನ ಮಾಡಿದ್ರಿಂದಲೇ, ಪರಸ್ಪರ ಪೂರಕವಾಗಿರೋ ಸಂಪರ್ಕ ಕೊಂಡಿಯನ್ನ ಮೊದಲಿಗೆ ನಾವು ಅರ್ಥ ಮಾಡಿಕೊಂಡೆವು.

• ಈ ಹಿನ್ನೆಲೆಯಲ್ಲೇ ನಿಮ್ಮ ಕುಸನೂರು ಭೂ ಹೋರಾಟ ಇರುವುದಲ್ವೇ?
ಹೌದೌದು. ಆಗ 1991ರಲ್ಲಿ ಏನಾಯ್ತು… ನಿಜಲಿಂಗಪ್ಪ ಜೀವಂತವಿದ್ರು. ಅವರು ಫೋನ್ ಎತ್ತಿ ಹೇಳಿದ್ರು ಬಂಗಾರಪ್ಪ ಅವರಿಗೆ, ‘ಇವರು ಹೊಸ ಸ್ವಾತಂತ್ರ್ಯ ಹೋರಾಟಗಾರರು, ನೂರಾರು ಜನ ಸೈಕ್ಲಿಸ್ಟ್‌ರಾಗ್ತಾ ಇದ್ದಾರೆ ಬೆಂಗಳೂರಿಗೆ. ಇದೊಂದು ಎರಡನೇ ಸ್ವಾತಂತ್ರ್ಯ ಆಂದೋಲನ ಇದ್ದ ಹಂಗೆ, ಅವರೇನು ಹೇಳ್ತಾರೆ ಕೇಳು ಸರಿಯಾಗಿ. ಅವರಿಗೇನೂ ಸ್ವಾರ್ಥ ಇಲ್ಲ, ಅವರೇನು 75,000 ಎಕರೆ ಭೂಮಿ ಉಳಿಸಲು ಹೋರಾಟ ಮಾಡ್ತಿದ್ದಾರೆ, ಅದು 5 ಲಕ್ಷ ಬಡವರ ಉಪಜೀವನದ ಸಲುವಾಗಿನ ಹೋರಾಟ. ಅದನ್ನ ನೀನು ಮಾಡಿಕೊಡು. ಜೊತೆಗೆ ಮನಿಗೆ ಬಂದಾಗ ಆದರಾತಿಥ್ಯನೂ ಮಾಡು’ ಅಂದರು. ಬಂಗಾರಪ್ಪ ನಮ್ಮನ್ನ ಆತ್ಮೀಯತೆಯಿಂದ ಕಂಡರು… ಆದರೆ ಅವರಿಗೆ ಗೊತ್ತಿರಲಿಲ್ಲ ನಾವು ಏನೇನು ಹೋರಾಟ ಮಾಡೇವಿ ಅಂತ! ಅದಕ್ಕೆ ಬಂಗಾರಪ್ಪನವರು ‘ಇದು 3-4 ತಿಂಗಳಾಗುತ್ತೆ ಸಚಿವ ಸಂಪುಟ ತೀರ್ಮಾನ ಆಗಕ್ಕೆ, ನಿಮಗೆ ಅನುಭವ ಇಲ್ಲ ಹಿರೇಮಠರೇ’ ಅಂದ್ರು ನಗುತ್ತಾ.

ಎಸ್‌ ಆರ್ ಹಿರೇಮಠ್

ಅದಕ್ಕೆ ‘ಹೌದು ಸರ್ ನಮಗೆ ನಿಮ್ಮಷ್ಟು ಅನುಭವ ಇಲ್ಲ. ಆದರೆ ನಮ್ಮದೇ ಆದ ರೀತಿ ಒಳಗೆ ನಾವು ಪ್ರಯತ್ನ ಮಾಡೇವಿ. ನಮ್ಮ ಹೋರಾಟದಿಂದ ಪರಿಸರ ನಾಶ ಮಾಡುತ್ತಿದ್ದ ಸರ್ಕಾರ ಮತ್ತು ಕಂಪೆನಿಯ ಜಂಟಿ ವಲಯದಾಗಿದ್ದ ಕರ್ನಾಟಕ ಪಲ್ಪ್ವುಡ್ ಲಿಮಿಟೆಡ್ ಕಂಪನಿ ಮುಚ್ಚಿಹೋಗೇದ. ಹರಿಹರ ಪಾಲಿಫೈಬರ್ ಅವರು ನಿರ್ಣಯ ತೊಗೊಂಡಾರ’ ಅಂದ್ವಿ. ನಮ್ಮ ಶಿವರಾಂ ಕಾರಂತರು, ನಾವು ಕೂಡಿ ಕೇಸ್ ಹಾಕಿದ್ವಿ. ಅದಕ್ಕೊಂದು ಕಥೇನ ಅದೇರಿ. ‘ಕಿತ್ತಿಕೋ ಹಚ್ಚಿಕೋ’ ಅಂತ ಕನ್ನಡದಾಗ, ಕೆಪಿಎಲ್- ‘ಕ್ವೆಸ್ಟ್ ಫರ್ ಜಸ್ಟಿಸ್’! ಅಂತ ಇಂಗ್ಲೀಷ್ ಪುಸ್ತಕದ ಒಳಗೆ ಇದೆಲ್ಲ ವಿವರಿಸಿದೆ.

ಕೊನೆಗೆ ಬಂಗಾರಪ್ಪನವರು, ಸಂಬಂಧಪಟ್ಟವರಿಗೆ ಫೋನ್ ಮಾಡಿ ವಿಚಾರಿಸಿಕೊಂಡರು. ‘ಹೌದು ಅವರು ಹೇಳೋದೆಲ್ಲಾ ನಿಜ ಅದ’ ಅಂತ ಆ ಕಡೆಯಿಂದ ಉತ್ತರ ಬಂತು! ತಕ್ಷಣ ಬಂಗಾರಪ್ಪ ನಮಗ, ‘ಹಾಗಾದರೆ ಮುಗಿಸಿ ಬಿಡೋಣಲ್ಲ ಇದನ್ನ’ ಅಂದ್ರು. ಒಂದು ವಾರದೊಳಗೆ ಸಚಿವ ಸಂಪುಟ ತೀರ್ಮಾನ ಬಂತು! ಭೂಮಿ ಉಳೀತು.

• ಭೂಮಿಗೆ ಸಂಬಂಧಪಟ್ಟಂತೆ ಇನ್ನೊಂದು ಪ್ರಶ್ನೆ. ಇವತ್ತು ಭೂಮಿ ಇರೋ ರೈತರೂ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹಾಗಾದ್ರೆ ಈ ಸಮಸ್ಯೆ ಹಿಂದೆ ನಿಜವಾಗಿ ಏನಿದೆ?
ಅಂದ್ರೆ ವ್ಯಕ್ತಿಯಾಗಿ ಭೂಮಿ ಕೊಟ್ಟರೆ ಸಾಲದು, ಅದನ್ನ ಒಂದು ಸಾಮೂಹಿಕ ಶಕ್ತಿಯಾಗಿಸಬೇಕು. ವ್ಯವಸಾಯವನ್ನ ಸಹಕಾರಿ ಕ್ಷೇತ್ರವನ್ನಾಗಿಸಬೇಕದಾ. ಅಷ್ಟೂ ಸಾಲದು, ರೈತರು ಬೆಳೆದದ್ದನ್ನ ಕಚ್ಚಾ ಆಗಿ ಮಾರಾಟ ಮಾಡದೇ ಅದನ್ನ ಬಳಕೆ ಉತ್ಪನ್ನವಾಗಿ ರೂಪಾಂತರಿಸಬೇಕಾಗೇತಿ. ಉದಾಹರಣೆಗೆ- ಟೊಮೆಟೊ ಬದಲಿಗೆ ಟೊಮೆಟೊ ಸಾಸ್ ಆಗಿಸಿ ಮಾರುಕಟ್ಟೆಗೆ ತಲುಪಿಸುವಂಥಹ ವ್ಯವಸ್ಥೆ ಮಾಡ್ಬೇಕದಾ. ಜೊತೆಗೆ ವ್ಯವಸಾಯ ಸಹಕಾರಿಯು, ಮಾರುಕಟ್ಟೆನಾಗೆ ತನ್ನ ಉತ್ಪನ್ನಗಳ ಬೆಲೆ ನಿರ್ಧರಿಸಿ ತಾನೇ ಭಾಗಿಯಾಗುವರೆಗೂ ಚಾಚಿಕೊಳ್ಳಬೇಕು. ಅಂದ್ರೆ, ‘ಉಳುವವನೆ ಭೂಮಿ ಒಡೆಯ’ ಎಂಬಷ್ಟಕ್ಕೇ ನಿಲ್ಲಬಾರದು. ಸಹಕಾರಿ ಸಾಧ್ಯತೆಗಳನ್ನ ಹುಡುಕಬೇಕು, ವಿಸ್ತರಿಸಿಕೊಳ್ಳಬೇಕದಾ. ಇದಾಗ್ಬೇಕು ಅಂದ್ರೆ ಇವತ್ತಿನ ಏನು ತಪ್ಪು ನೀತಿ ಇದೆ- ಇವರ ಕಡೆಯಿಂದ 2 ಎಕರೆ, ಅವರ ಕಡೆಯಿಂದ 3 ಎಕರೆ, 4 ಎಕರೆ ತೊಗೊಂಡು, ಅದನ್ನ ಬೆಳ್ಳಿಯ ತಟ್ಟೆನಾಗಿಟ್ಟು ಸಾವಿರ ಎಕರೆಗಟ್ಟಲೆ ಭೂಮಿಯನ್ನ ದೊಡ್ಡ ದೊಡ್ಡ ಕಂಪನಿಗಳಿಗೆ, ಇಂಡಸ್ಟ್ರಿಯವರಿಗೆ ಕೊಡೋದು… ಸಹಸ್ರಾರು ಲಕ್ಷಾನುಗಟ್ಟಲೆ ಕೋಟಿ ರೂಪಾಯಿಯನ್ನ ಕಾರ್ಪೊರೇಟ್‌ಗಳಿಗೆ ಸಬ್ಸೀಡಿ ಕೊಡೋದು… ಇದೇನದ ಇದನ್ನ ಬಂದ್ ಮಾಡ್ಬೇಕು. ಸಾಕಿಂಥ ನಿರ್ನಾಮ ಮಾಡೋ ಬೃಹತ್ ಅಭಿವೃದ್ಧಿ! ಇದು ಹಿಂಗೇ ಮುಂದುವರೆದ್ರೆ ಇಲ್ಲಿ ಸುಲಿಗೆ ಮಾಡಲಿಕ್ಕೆ ವಿದೇಶೀ ಕಂಪನಿಗಳಿಗೆ ದಿಡ್ಡಿ ಬಾಗಿಲು ತೆಗೆದಂತಾಗ್ತದ. ಇದು ಈಸ್ಟ್ ಇಂಡಿಯಾ ಕಂಪೆನಿಗಿಂತಾ ಘನಘೋರ.

ಇದನ್ನ ಇನ್ನೂ ಒಂದು ಹೆಜ್ಜೆ ಇಟ್ಟು ಮುಂದಿನ ದುಷ್ಟತನಕ್ಕೆ ತೆಗೆದುಕೊಂಡು ಒಯ್ದವರೆಂದರೆ 2014ಕ್ಕೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರದವರು. ಮೊದಲಿಗೆ ಭೂ ಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆ-2015, [Land Acquisition Amendment Ordinance] ಜಾರಿಗೆ ತಂದಿತು. ಅದಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿದ್ದರಿಂದ ಆ ಸುಗ್ರೀವಾಜ್ಞೆ ವಾಪಸ್ ತೆಗೆದುಕೊಳ್ತು. 2020ರ ಕೋವಿಡ್ ಸೋಂಕಿನ ಅವಾಂತರದ ಸಂದರ್ಭದಾಗ ಮತ್ತೆ ಸುಗ್ರೀವಾಜ್ಞೆ ಮೂಲಕ ಮತ್ತೆ ಮೂರು ರೈತ ವಿರೋಧಿ, ಕಾರ್ಪೋರೇಟ್ ಪರ ಕರಾಳ ಕಾಯ್ದೆ ತಂದರು. ಇದರ ಸಮಗ್ರ ಪರಿಣಾಮಗಳನ್ನ ತಿಳಿದು ತಪಶ್ಚರ್ಯದ ರೀತಿಯೊಳಗೆ ಇದನ್ನ ಹಿಮ್ಮೆಟ್ಟಿಸಲಿಕ್ಕೆ ಪ್ರಯತ್ನಗಳು ನಡೆದ್ವು. ದೇಶಾದ್ಯಂತದ 500 ರೈತಸಂಘಟನೆಗಳ, ಲಕ್ಷಗಟ್ಟಲೆ ರೈತರು ಮತ್ತು ರೈತ ಕಾರ್ಮಿಕರು ಒಂದು ವರ್ಷ ಕಾಲ ದೆಹಲಿ ಗಡಿಗಳಲ್ಲಿ ಐತಿಹಾಸಿಕ, ಅಹಿಂಸಾತ್ಮಕ ಸತ್ಯಾಗ್ರಹ ಮಾಡಿ, ಈ ರೈತ ವಿರೋಧಿ ಕರಾಳ ಕಾಯ್ದೆಗಳ ವಾಪಸ್ಸಿಗೆ ಆಗ್ರಹಿಸಿದ್ದರಿಂದಾಗಿ, ಸರ್ಕಾರ ವಿಧಿಯಿಲ್ಲದೇ ಅದನ್ನ ವಾಪಸ್ ತೆಗೆದುಕೊಳ್ಳುವಂತಾಯ್ತು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರೊಂದಿಗೆ ಎಸ್‌.ಆರ್ ಹಿರೇಮಠ್
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರೊಂದಿಗೆ ಎಸ್‌.ಆರ್ ಹಿರೇಮಠ್

ಆದರೆ, ಕರ್ನಾಟಕದ ಹಿಂದಿನ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರದವರು ಮಾತ್ರ ಅದೇ ಕೇಂದ್ರದ ಸುಗ್ರೀವಾಜ್ಞೆಯನ್ನ ಅನುಸರಿಸ್ತಿವೆ, ಮೂರು ರಾಜ್ಯ ಮಟ್ಟದ ಕರಾಳ ಕಾಯ್ದೆ ವಾಪಸ್ ಪಡೆಯೋದಿಲ್ಲ ಅಂತ ಅಧಿಕಾರದಿಂದ ಮಾತಾಡಿದರು. ಆದರೆ ಕರ್ನಾಟಕದ ಮಂದಿ ಎಷ್ಟು ಬುದ್ಧಿವಂತರಂದ್ರೆ, ಆ ಬಿಜೆಪಿ ಸರ್ಕಾರವನ್ನೇ 2023ರ ವಿಧಾನ ಸಭಾ ಚುನಾವಣೆಯಲ್ಲಿ, ನಿರ್ಣಾಯಕವಾಗಿ ಸೋಲಿಸಿ ಮನೆಗಟ್ಟಿದರು! ಹಿಂಗಾ ಮೈಯೆಲ್ಲಾ ಎಚ್ಚರಾಗಿದ್ದು ಇವತ್ತು ರೈತನ ಉಳಿವಿನ ದಾರಿಗಳನ್ನ ಕಂಡುಕೊಳ್ಳಬೇಕಾಗೇದ.

• ಅಕ್ರಮ ಗಣಿಗಾರಿಕೆಯೂ ಭೂಧ್ವಂಸದ, ಪರಿಸರ ನಾಶದ ದಾರುಣ ಕತೆಯೇ ಅಲ್ಲವೇ?
ನಿಜನೇ ಅಲ್ಲೇನ್ರಿ? ಈಗ ಅಕ್ರಮ ಗಣಿಗಾರಿಕೆಯನ್ನ ನಮ್ಮ ಹೋರಾಟದಿಂದಾಗಿ ಸಮಗ್ರವಾಗಿ ನಿಲ್ಲಿಸಲಾಗೇದಾ. ಅದರಲ್ಲಿ ತೊಡಗಿದಂಥಾ ಮೈನಿಂಗ್ ಮಾಫಿಯಾ ಜೈಲಿಗೆ ಹೋದರು, ಮುಖ್ಯಮಂತ್ರಿ ಜೈಲಿಗೆ ಹೋದರು, ಸಚಿವರೂ ಹೋದ್ರು, ಉಳಿದವರೂ ಮುಂದಾದರೂ ಜೈಲಿಗೆ ಹೋಗಲೇಬೇಕದಾ. ಮುಂದೂ ನೆಲ ಜಲ ಅದಿರು ಭೂಮಿ ಅರಣ್ಯವನ್ನ ಶಾರ್ಕ್ಗಳಂಗೆ ನುಂಗ್ತಾ ಇದ್ದವರಿಗೆ ತಕ್ಕ ಕ್ರಿಮಿನಲ್ ಶಿಕ್ಷೆ ಆಗ್ಬೇಕಾಗೇದ. ಇದರ ಅಲೆ ಇವತ್ತ ನಮ್ಮ ಕಾನೂನು ಕೆಲಸದಾಗಿಂದ ಶುರು ಆಗೇದ. ಈ ಸಮಸ್ಯೆಗೆ ಮೂಲ ನಮ್ಮ ಆರ್ಥಿಕ ನೀತಿ ಒಳಗ, ಗಣಿಗಾರಿಕೆ ನೀತಿ ಒಳಗದ.

ಇದೇನು ನಾವು ಅಕ್ರಮ ಗಣಿಗಾರಿಕೆ ವಿರುದ್ಧ ಕೋರ್ಟ್ದಾಗೆ ಹೋರಾಟಕ್ಕೆ ಇಳಿದೇವಿ, ಇದು ನ್ಯಾಯಮೂರ್ತಿ ಸಂತೋಷ್ ಹೆಗಡೆ ಮತ್ತವರ ಲೋಕಾಯುಕ್ತ ಟೀಮ್ 2008ರಿಂದ 2011ರವರೆಗೆ ಏನು ತಳಮಟ್ಟದಾಗ ಕೆಲಸ ಮಾಡಿದ್ರು, ಅದರ ಆಧಾರ ಇಟ್ಕೊಂಡು ನಾವು ಮಿಸ್ಸಿಂಗ್ ಲಿಂಕ್ ಹುಡುಕಿ ಕೆಲಸ ಮಾಡ್ತಾ ಬಂದೇವಿ. ಯಾವ ಕಾನೂನು ಗಾಳಿಗೆ ತೂರಿದ್ದಾರೋ ಅದನ್ನ ಅವರು ಪಾಲನೇ ಮಾಡೋಹಂಗೆ, ಅಂಕೆ ಬಿಟ್ಟು ಹೋಗುವವರಿಗೆ ಅಂಕುಶ ಹಾಕೋ ಕೆಲಸ ಅಷ್ಟೇ ನಮ್ದು. ನ್ಯಾಯಾಂಗದ ಹೋರಾಟದಿಂದ ಇದೇನು ಬಹಳೇ ದೂರ ಹೋಗೂದಿಲ್ಲ. ಆದರೆ, ಜನರು ಈಗಾದ್ರೂ ಎಚ್ಚೆತ್ತುಕೊಂಡ್ರ ಮುಂದಾದ್ರೂ ಇಂತಹವು ನಡೀದಂಗೆ ತಡೀಬಹುದು.

ಈಗಾಗಲೇ ಊಹೆಗೂ ಮಿರಿ ನಾಶ ಆಗಿರೋ ಪರಿಸರವನ್ನ ಮತ್ತು ಗಣಿಬಾಧಿತ ಸಂತ್ರಸ್ತ ಜನರ ಮಾನವೀಯ ವಿಕಾಸಕ್ಕಾಗಿ ನಾಶಪಡಿಸಿದವರೇ ಸಮಸ್ಥಿತಿಗೆ ತರಬೇಕಂಥ 24,000 ಕೋಟಿಯನ್ನ ಅವರಿಂದ ನ್ಯಾಯಾಲಯ ಕೊಡಿಸಿದೆ. ಆಂದೋಲನವನ್ನೂ ರೂಪಿಸಿದ್ದು ಸಮಾಧಾನ ತಂದಿದೆ. ಇದೇ ಅಂಕಿಅಂಶಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನ ಅರಣ್ಯ ಬೆಂಚ್ 29 ಜುಲೈ 2000ದಂದು ಬಳ್ಳಾರಿ ಜಿಲ್ಲೆನಾಗ ಗಣಿಗಾರಿಕೆಯನ್ನ ನಿಷೇಧಿಸಿತ್ತು. 26 ಆಗಸ್ಟ್ 2011ರಾಗ ಚಿತ್ರದುರ್ಗ ಮತ್ತ ತುಮಕೂರು ಜಿಲ್ಲೆಗಳಲ್ಲಿ ಸಹಿತ ಗಣಿಗಾರಿಕೆಯನ್ನ ಸ್ಥಗಿತಗೊಳೊಸಲಿಕ್ಕೆ ಆಜ್ಞೆಯನ್ನ ವಿಸ್ತರಿಸಲಾಯ್ತು. ಒಂದು ವರ್ಷ ಸಮಗ್ರವಾಗಿ ಗಣಿಗಾರಿಕೆ ನಿಂತುಬಿಟ್ಟಿತ್ತು.

• ಗಣಿ ನಿಷೇಧದಿಂದ ದೇಶದ ಉಕ್ಕು ಉದ್ಯಮಕ್ಕೆ ತೊಂದರೆ ಆಗುವುದಿಲ್ಲವೇ?
ಈಗಾಗಲೇ ಸರ್ಕಾರದ ಬಳಿನಾಗ 250 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಅಧಿಕ ವಶಪಡಿಸ್ಕೊಂಡ ಅಕ್ರಮ ಅದಿರು ದಾಸ್ತಾನಿದೆ. ಅದನ್ನ ವೈಜ್ಞಾನಿಕವಾಗಿ ಸ್ಪರ್ಧಾತ್ಮಕ ಬೆಲೆನಾಗ ಹರಾಜು ಹಾಕಿದ್ರೆ, ರಾಜ್ಯದ ಉಕ್ಕು ಉದ್ಯಮಕ್ಕ ಅದಿರು ಒದಗಿಸ್ಬಹುದು. ಗಣಿಗಾರಿಕೆಯಿಂದ 80% ಮಿಕ್ಕಿ ಲಾಭ ಪಡೆಯೋ ಖಾಸಗಿ ಗಣಿಗಾರಿಕೆಯನ್ನ ನಿಲ್ಲಿಸಿ, ಸರ್ಕಾರದ ಬೊಕ್ಕಸಕ್ಕೆ ಹಣ ಬರಬೇಕೆಂದರೆ ಗಣಿಗಾರಿಕೆಯನ್ನ ರಾಷ್ಟ್ರೀಕರಣ ಮಾಡೋದೊಂದೇ ದಾರಿ. ಆದರೆ ಇವತ್ತಿನ ಕೇಂದ್ರ ಸರ್ಕಾರ, ದೇಶವನ್ನ ಈ ಗಂಡಾಂತರಕಾರಿ ಹವಾಮಾನ ತುರ್ತು ಪರಿಸ್ಥಿತಿ ಕಡೆಗೆ ಇನ್ನಷ್ಟು ಬೇಗನೆ ಹೋಗಲಿಕ್ಕೆ ಬೇಕಾದಹಂಗೆ ಅರಣ್ಯ [ಸಂರಕ್ಷಣೆ] ತಿದ್ದುಪಡಿ ಮಸೂದೆಯನ್ನ ಆಗಸ್ಟ್ 2023ರಾಗ ಅಂಗೀಕಾರ ಮಾಡ್ಯಾರಾ! 1980ರ ಪರಿಸರ ಸಂರಕ್ಷಣಾ ಕಾಯ್ದೆಗೆ ಆಮೂಲಾಗ್ರ ತಿದ್ದುಪಡಿ ಮಾಡಿ, ಮತ್ತಷ್ಟು ಪರಿಸರ ವಿನಾಶಕ್ಕೆ ನಾಂದಿ ಹಾಡಲಾಗೇದ. ಸರ್ಕಾರ ಕೂಡ ಪರಿಸರ ಸಮತೋಲನ ಕಾಪಾಡಲಿಕ್ಕೆ ಇನ್ನಾದ್ರೂ ಗಂಭೀರವಾಗೇ ಯೋಚಿಸೂಹಂಗ ನಾವು ಮಾಡ್ಬೇಕಾಗೇದ. ಇದಕ್ಕೆ ಜನಜಾಗೃತಿ, ಜನಸಂಘಟನೆ ಒಂದೇ ಮದ್ದು. ನಾವು- ಅಂದರೆ ಪ್ರಜೆಗಳು ಮಲಗಿರೋದೇ ಇಷ್ಟೆಲ್ಲಾ ಅವಘಡಕ್ಕೆ, ಅವಾಂತರಕ್ಕೆ ಕಾರಣ.

• ಹಾಗಾದರೆ ನಿಮ್ಮ ಅಭಿಪ್ರಾಯದಲ್ಲಿ ಇಂದಿನ ತಪ್ಪು ಹೆಜ್ಜೆಗಳ ಮೂಲ ಎಲ್ಲಿದೆ?
ತಪ್ಪು ಹೆಜ್ಜೆಗಳ ಮೂಲ ಸರ್ಕಾರದ ತಪ್ಪು ಅಭಿವೃದ್ಧಿ ಪರಿಕಲ್ಪನೆಯಾಗಿದೆ. ಕಣ್ಣೆದುರಿಗೆ ಘೋರವಾಗಿ ಕಾಣಲಿಕ್ಕೆ ಹತ್ತಿರೋ ಪರಿಸರ ತುರ್ತು ಪರಿಸ್ಥಿತಿಯ ಬಗ್ಗೆ ಕ್ರಿಮಿನಲ್ ನೆಗ್ಲೆಕ್ಟ್- ಅಂದ್ರೆ ಅಪರಾಧವೆನ್ನುವಂತಾ ನಿರ್ಲಕ್ಷ್ಯ. ಜೊತೆಗೆ ಆಡಳಿತವನ್ನ ಒಳಗೊಂಡಂಗೆ ಎಲ್ಲ ಕ್ಷೇತ್ರಗಳ ನೈತಿಕ ಅಧಃಪತನದಾಗೆ ಇದರ ಮೂಲ ಅದೆ. ಶತಮಾನಗಳಿಂದ ಸಾಮಾನ್ಯ ಜನರಲ್ಲಿ ನೈತಿಕತೆಯನ್ನ ಬಿತ್ತಿದ ಶರಣ-ಸಂತ-ಸೂಫಿ ಸಂತರ ಪರಂಪರೆಯನ್ನ ಮತ್ತೊಮ್ಮೆ ತಿಳಿದುಕೊಂಡು ನಮ್ಮ ನಡತೆಯಾಗದನ್ನ ತರಬೇಕಾಗೇದ. ನಾವು ಮೊದಲು ತಿಳಿದುಕೊಳ್ಳಬೇಕದಾ. ಈ ಪ್ರಕೃತಿ, ಭೂಮಿ ನಮಗೆ ನಯಾ ಪೈಸೆ ಖರ್ಚು ಮಾಡ್ದೇ ಸಿಕ್ಕಿರೋ ಕೃಪೆ. ಮತ್ತೆ ಅದಕ್ಕೆ ಅದರದ್ದೇ ಆದ ವಿಕಸನ ವ್ಯವಸ್ಥೆ ಅದ. ಹಿಂಗಾಗಿ ಅದನ್ನ ಅರ್ಥ ಮಾಡ್ಕೊಂಡು ಈ ಸಮಾಜ, ನಿಸರ್ಗ ಮತ್ತು ಸಂಸ್ಕೃತಿಯೊಳಗೆ ಒಂದು ಮಧುರ ಸಂಬಂಧ ಏರ್ಪಡಿಸ್ಬೇಕು. ಹಿಂಗಾಗಿ ನಿಜಕ್ಕೂ ಪ್ರಕೃತಿ ಉಳೀಬೇಕಂದ್ರ, ನಮ್ಮ ಮಿತಿ ಮೀರಿದ ಉತ್ಪಾದನೆ ಮ್ಯಾಲೆ ಕಡಿವಾಣ ಹಾಕ್ಬೇಕು. ಅದು ಬಿಟ್ಟು ಪ್ರಕೃತಿಗೇನಾರ ನೀವು ಕಡಿವಾಣ ಹಾಕ್ತೇವೆ, ಅತ್ಯಾಚಾರ ಮಾಡ್ತೇವಂದ್ರ- ಅದು ತನ್ನ ಸಹನೆಯ ಮಿತಿ ಮೀರಿದಾಗ ತನ್ನ ಶಕ್ತಿ ತೋರಿಸ್ತದ. ಈ ನಿಸರ್ಗ ಯಾರ ಸಲುವಾಗೇದ? ಅದು ಮನುಷ್ಯ ಮಾತ್ರರಿಗೇ ಅಲ್ಲ. ಸಕಲ ಜೀವಿಗಳೂ ಸಮತೋಲನವಾಗಿದ್ದರೆ ಮಾತ್ರ ಮನುಷ್ಯ ಇಲ್ಲಿ ಉಳಿತಾನ. ಇಲ್ದಿದ್ರೆ ಮನುಷ್ಯ ಬದುಕಲಿಕ್ಕೆ ಸಾಧ್ಯ ಆಗೂದಿಲ್ಲ.

ಎಸ್‌ ಅರ್ ಹಿರೇಮಠ

ಪ್ರಕೃತಿಯ ವಿಕಸನ, ಸುದೀರ್ಘ ಪ್ರಕ್ರಿಯೆ ಅದ. ಇದರ ಮುಂದೆ ನಾಲ್ಕು ದಿನಕ್ಕೆ ಬಂದಿರೋ ನಾವು ಎಷ್ಟರವರೂ? ಅದಕ್ಕೆ ಇದೊಂದು ದೊಡ್ಡ ಹೋರಾಟ ಅದ. ತಪ್ಪಿರೋ ಹೆಜ್ಜೆಗಳನ್ನ ಮತ್ತ ಟ್ರ್ಯಾಕ್‌ಗೆ ತರೋದೇನದಲ್ಲ ಅದು ಸಾಮಾನ್ಯದ ವಿಷಯ ಅಲ್ಲ. ಅದರ ಆಳ-ವ್ಯಾಪ್ತಿ ತಿಳ್ಕೊಂಡು ನಮಗೆಷ್ಟಾಗ್ತದ ಅಷ್ಟು ಮಾಡಬೇಕು. ಯಾಕಂದ್ರ ಇದು ನಮ್ಮ ಕೆಲ್ಸ ಅದ. ಕೋಟಿಗಟ್ಟಲೆ ಲೂಟಿ ಮಾಡಿ ಕಟ್ಟಿಟ್ಟರೆ ಏನ್ ಬಂದಂಗಾಯ್ತು? ಮನುಷ್ಯನ ಸೃಜನಶೀಲತೆ, ಹೊಸತನ್ನ ಸೃಷ್ಟಿಸೋ ಶಕ್ತಿನೇ ನಾಶ ಆದ್ರ, ಏನ್ ಬೆಲೆ? ಇದನ್ನ ನಾ ಹೇಳ್ತಿಲ್ಲ, ಎಲ್ಲ ದಾರ್ಶನಿಕರು, ಜ್ಞಾನಿಗಳೂ, ತತ್ವಜ್ಞಾನಿಗಳೂ ಇದನ್ನ ಹೇಳ್ಯಾರ.

ಜೊತ್ಯಾಗ ಇನ್ನೊಂದು ಉದಾಹರಣೆ ನೋಡಿ. ಈಗಿನ ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ಚಿಕ್ಕಪ್ಪ ಯೋಜನಾ ಆಯೋಗದ ಅಧ್ಯಕ್ಷರಾಗಿದ್ದ ಡಿ.ಆರ್.ಗಾಡ್ಗೀಳ್ ಎನ್ನೋ ಬಹಳೇ ದೊಡ್ಡ ಆರ್ಥಿಕ ತಜ್ಞರಿದ್ರು, ಆ ಕಾಲದಾಗ. ದೊಡ್ಡ ವಿಷನ್ ಇತ್ತು ಅವ್ರಿಗೆ. ಈ ತುರ್ತು ಪರಿಸ್ಥಿತಿ ಸಂದರ್ಭದಾಗ ಕೇರಳದಲ್ಲಿ ಕೆ.ಎನ್.ರಾಜ್ ಅಂತ ಒಬ್ರಿದ್ರು ಭಯಂಕರ ಬುದ್ಧಿವಂತ ಆರ್ಥಿಕ ತಜ್ಞ. ಪಂಜಾಬಿನಾಗ ವಿನ್ಹಾಸ್ ಅನ್ನೋವರು ಆರ್ಥಿಕ ತಜ್ಞರಿದ್ರು. ಅವರನ್ನ ನಾ ವೈಯಕ್ತಿಕವಾಗಿ ಭೇಟಿ ಮಾಡಿದ್ದೆ. ವಿ.ಕೆ.ಆರ್.ವಿ.ರಾವ್ ಅಂತ ನಮ್ಮ ಕನ್ನಡದ ಮನುಷ್ಯ. ದೊಡ್ಡ ಬ್ರಿಲಿಯಂಟ್ ಆರ್ಥಿಕ ತಜ್ಞ. ಬೆಂಗಳೂರಾಗೆ ಐಸ್ಯಾಕ್ ಸಂಸ್ಥೆಯನ್ನ ಇವರೇ ಕಟ್ಟಿದ್ದದ. ದೆಹಲಿ ಒಳಗೂ ‘ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಗ್ರೋಥ್’ ಸಂಸ್ಥೆ ಕೂಡ ಕಟ್ಟಿದ್ರು. ಇವರೆಲ್ಲಾ ಆರ್ಥಿಕ ಬೆಳವಣಿಗೆ ಬಗ್ಗೆ ಒಳ್ಳೆ ಸಂಶೋಧನೆ ಮಾಡ್ಯಾರಾ. ಆದ್ರೇನಂದ್ರೆ ಈ ಎಲ್ಲಾ ಅದ್ಭುತ ಆರ್ಥಿಕ ತಜ್ಞರು ರಾಜಕಾರಣದೊಳಗೆ ಇರಲಿಲ್ಲ! ನಿರ್ಣಾಯಕ ಶಕ್ತಿ ಆಗಿರಲಿಲ್ಲ. ಹಿಂಗಾಗಿ ಸರ್ಕಾರಗಳು ಅವರನ್ನ ತಮ್ಮ ಆರ್ಥಿಕ ಯೋಜನೆ ನಿರೂಪಣೆಯಲ್ಲಿ ಒಳಗೊಳ್ಳಲಿಲ್ಲ. ನಿರ್ಣಯ, ಕಾಯ್ದೆ ಆಗೋದು ಎಲ್ಲಾ ರಾಜಕಾರಣದಾಗ. ನಾವು ನಿಜಕ್ಕೂ ಇವತ್ತು ತುಂಬಾ ಅಪಾಯದಾಗಿದ್ದೇವೆ. ಹಡಗು ಕಟ್ಟಬೇಕು ಅಂದ್ರ ಅದರಲ್ಲಿ ಮಾಸ್ಟರ್ ಇದ್ದವನ್ನ ಕರೀತೇವೆ. ಒಂದು ಸೇತುವೆ ಮಾಡ್ಬೇಕಂದ್ರೆ ಅದರಲ್ಲಿ ನೈಪುಣ್ಯತೆ ಇದ್ದವನ್ನ ಕರೀತೇವೆ. ಹೀಗೇನೇ ಆರ್ಥಿಕ ತಜ್ಞರು ಯೋಜನೆ ನಿರೂಪಕರಾಗಬೇಕಲ್ಲೇನು? ಸಾರ್ವಜನಿಕ ಅಧಿಕಾರ ಸ್ಥಾನದಾಗಿರೋವ್ರಿಗೆ ಸಮರ್ಪಕ ನೈಪುಣ್ಯತೆ ಬೇಕು.

ಸಂದರ್ಶನದ ಮೂರನೇ ಭಾಗಕ್ಕಾಗಿ ನಿರೀಕ್ಷಿಸಿ….!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X