ಈ ದಿನ ವಿಶೇಷ | ಸೈಬರ್ ಕ್ರೈಮ್ ತಡೆಯುವುದು ಹೇಗೆ?

Date:

Advertisements
ಸೈಬರ್ ವಂಚನೆ ಹಲವು ಬಗೆಯಲ್ಲಿ ಇಡೀ ವಿಶ್ವಾದ್ಯಂತ ವ್ಯಾಪಿಸಿದೆ. ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದ ನಂತರವಂತೂ ಸೈಬರ್ ವಂಚನೆ ಪ್ರಮಾಣ ಅಂಕೆ ಮೀರಿ ಬೆಳೆದಿದೆ. ಅದಕ್ಕೆ ಕಾರಣ, ಬ್ಯಾಂಕ್ ಸಿಬ್ಬಂದಿಗಳ ಬೇಜವಾಬ್ದಾರಿ ಇಲ್ಲವೇ ಶಾಮೀಲಾತಿ. ಬ್ಯಾಂಕ್ ಉದ್ಯೋಗಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಂಡರೆ, ಸೈಬರ್ ವಂಚನೆಗಳನ್ನು ಮಟ್ಟ ಹಾಕುವುದು ತೀರಾ ಕಷ್ಟವಲ್ಲ

‘ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬ ಗಾದೆ ಮಾತಿನಂತೆ ಸೈಬರ್ ವಂಚನೆಯಿಂದ ಸಾಮಾನ್ಯ ಜನರು ನೂರಾರು ಕೋಟಿ ರೂಪಾಯಿ ಕಳೆದುಕೊಂಡ ನಂತರ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ, ಸೈಬರ್ ವಂಚನೆಗಳ ಬಗ್ಗೆ ಒಂದು ‘ಮನ್ ಕಿ ಬಾತ್’ ಸಂಚಿಕೆಯನ್ನೇ ಪ್ರಸ್ತುತ ಪಡಿಸಿಬಿಟ್ಟರು. ಅದರಲ್ಲಿ ಸಾಮಾನ್ಯ ಜನರಿಗೆ, ‘ತಾಳಿ, ಯೋಚಿಸಿ, ನಂತರ ಕ್ರಮ ಕೈಗೊಳ್ಳಿ’ ಎಂಬ ತ್ರಿಸೂತ್ರದ ಪುಕ್ಕಟೆ ಸಲಹೆಯನ್ನೂ ನೀಡಿಬಿಟ್ಟರು. ಆದರೆ, ಸೈಬರ್ ವಂಚನೆಗೊಳಗಾಗುವ, ಅದರಲ್ಲೂ ಡಿಜಿಟಲ್ ಅರೆಸ್ಟ್ ಎಂಬ ವಿನೂತನ ಸೈಬರ್ ವಂಚನೆಯ ಬಗ್ಗೆ ಸಾಮಾನ್ಯ ಜನರು ಪ್ರಧಾನಿಯ ತ್ರಿಸೂತ್ರವನ್ನು ಪಾಲಿಸುವಷ್ಟು ವ್ಯವಧಾನ ಹೊಂದಿರುವುದಿಲ್ಲ. ಅದಕ್ಕೆ ಕಾರಣ: ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗಿರುವ ತೀವ್ರ ಭೀತಿ. ಹೀಗಾಗಿಯೇ, ಬಹುತೇಕ ಸಂತ್ರಸ್ತರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಹು ಬೇಗ ಬಲಿಯಾಗಿ ನೂರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಇಷ್ಟಕ್ಕೂ ಸೈಬರ್ ವಂಚನೆ, ಅದರಲ್ಲೂ ಡಿಜಿಟಲ್ ಅರೆಸ್ಟ್‌ನಂತಹ ವಿನೂತನ ಸೈಬರ್ ವಂಚನೆ ಬಗ್ಗೆ ಬಾಯಿ ಬಿಡಬೇಕಾಗಿದ್ದದ್ದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ. ಆದರೆ, ಇಡೀ ವ್ಯವಸ್ಥೆಯನ್ನು ಒನ್ ಮ್ಯಾನ್ ಶೋಗೆ ಮೀಸಲಾಗಿರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂತಹ ಸಾಮಾನ್ಯ ವಂಚನೆ ಪ್ರಕರಣಗಳ ಬಗೆಗೂ ತಾವೇ ಮುಂದೆ ನಿಂತು ಜನರಲ್ಲಿ ಜಾಗೃತಿ ಮೂಡಿಸುವಂತಾಗಿದ್ದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವೇ ಸರಿ.

ಸೈಬರ್ ವಂಚನೆ ಹಲವು ಬಗೆಯಲ್ಲಿ ಇಡೀ ವಿಶ್ವಾದ್ಯಂತ ವ್ಯಾಪಿಸಿದೆ. ಅದರಲ್ಲಿ ಪ್ರಮುಖವಾಗಿ ಚರ್ಚೆಗೊಳಗಾಗುತ್ತಿರುವುದು ಸ್ಕಿಮ್ಮಿಂಗ್, ಫಿಶಿಂಗ್, ವಿಶಿಂಗ್, ಆನ್‌ಲೈನ್ ಉದ್ಯೋಗ ವಂಚನೆ, ಸ್ಮಿಶಿಂಗ್, ಸಿಮ್ ಸ್ವ್ಯಾಪ್‌ ಹಾಗೂ ಡಿಜಿಟಲ್ ಅರೆಸ್ಟ್‌ನಂತಹ ವಂಚನೆ ಪ್ರಕರಣಗಳು. ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದ ನಂತರವಂತೂ ಸೈಬರ್ ವಂಚನೆ ಪ್ರಮಾಣ ಅಂಕೆ ಮೀರಿ ಬೆಳೆದಿದೆ. ಅದಕ್ಕೆ ಕಾರಣ, ಬ್ಯಾಂಕ್ ಸಿಬ್ಬಂದಿಗಳ ಬೇಜವಾಬ್ದಾರಿ ಇಲ್ಲವೇ ಶಾಮೀಲಾತಿ. ಬ್ಯಾಂಕ್ ಉದ್ಯೋಗಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಂಡರೆ, ಸೈಬರ್ ವಂಚನೆಗಳನ್ನು ಮಟ್ಟ ಹಾಕುವುದು ತೀರಾ ಕಷ್ಟವಲ್ಲ. ಆದರೆ, ಅದಕ್ಕೆ ಬೇಕಿರುವುದು ಇಚ್ಛಾಶಕ್ತಿ ಮಾತ್ರ.

Advertisements
  1. ಸ್ಕಿಮ್ಮಿಂಗ್: ಆನ್‌ಲೈನ್ ಬ್ಯಾಂಕಿಂಗ್ ಜಾರಿಗೆ ಬಂದಾಗ ಕಾಣಿಸಿಕೊಂಡ ಪ್ರಪ್ರಥಮ ಸೈಬರ್ ವಂಚನೆ ಪಿಡುಗಿದು. ಎಟಿಎಂ ಘಟಕಗಳಲ್ಲಿ ಹಣವನ್ನು ಡ್ರಾ ಮಾಡಲು ಬರುವ ಗ್ರಾಹಕರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳನ್ನು ನಕಲು ಮಾಡಿ, ಅದರ ಪಾಸ್‌ವರ್ಡ್‌ಗಳನ್ನು ನಕಲು ಮಾಡಲು ಸೈಬರ್ ವಂಚಕರು ಈ ಸ್ಕಿಮ್ಮರ್‌ಗಳನ್ನು ಬಳಸುತ್ತಾರೆ. ಈ ತಂತ್ರದಿಂದ ಸೈಬರ್ ವಂಚಕರು ಭಾರಿ ಪ್ರಮಾಣದ ನಗದನ್ನು ಬ್ಯಾಂಕ್ ಗ್ರಾಹಕರ ಖಾತೆಗಳಿಂದ ಲಪಟಾಯಿಸಿರುವ ಹೇರಳ ಪ್ರಕರಣಗಳು ವರದಿಯಾಗಿವೆ.

ಪರಿಹಾರ: ಎಟಿಎಂ ಘಟಕಗಳಲ್ಲಿ ನಡೆಯುವ ಸ್ಕಿಮ್ಮರ್ ವಂಚನೆಗಳನ್ನು ತಡೆಯುವುದು ತೀರಾ ಕಷ್ಟದ ಕೆಲಸವಲ್ಲ. ಆದರೆ, ಅದಕ್ಕಾಗಿ ಎಟಿಎಂ ಯಂತ್ರಗಳನ್ನು ಉನ್ನತೀಕರಿಸಬೇಕಾದ ಅಗತ್ಯವಿದೆ. ಗ್ರಾಹಕರು ಎಟಿಎಂನಲ್ಲಿ ಹಣವನ್ನು ವಿತ್‌ಡ್ರಾ ಮಾಡಲು ಸದ್ಯ ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಪಾಸ್‌ವರ್ಡ್ ನಮೂದಿಸಿದರೆ ಸಾಕಾಗಿದೆ. ಸೈಬರ್ ವಂಚಕರ ಪಾಲಿಗೆ ಇದೇ ವರವಾಗಿ ಪರಿಣಮಿಸಿರುವುದು. ಹೀಗಾಗಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಪಾಸ್‌ವರ್ಡ್ ನಮೂದಿಸುವುದರೊಂದಿಗೆ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕ ಹೊಂದಿರುವ ಮೊಬೈಲ್ ಫೋನ್‌ಗೆ ರವಾನೆಯಾಗುವ ಒಟಿಪಿಯನ್ನು ನಮೂದಿಸುವುದನ್ನೂ ಕಡ್ಡಾಯಗೊಳಿಸಬೇಕಿದೆ. ಆಗ ಸ್ಕಿಮ್ಮರ್ ವಂಚನೆ ತನಗೆ ತಾನೇ ಅಂತ್ಯಗೊಳ್ಳಲಿದೆ.

  1. ಆನ್‌ಲೈನ್ ವರ್ಗಾವಣೆ: ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಜಾರಿಗೆ ಬಂದಾಗಿನಿಂದ ಸೈಬರ್ ವಂಚನೆಯ ಪ್ರಮಾಣವೂ ದುಪ್ಪಟ್ಟಾಗಿದೆ. ಆನ್‌ಲೈನ್ ಮಾರ್ಕೆಟಿಂಗ್ ತಾಣಗಳಲ್ಲಂತೂ ಈ ವಂಚನೆ ಮಿತಿ ಮೀರಿದೆ. ನಕಲಿ ಆನ್‌ಲೈನ್ ಕಂಪನಿಗಳು ರವಾನಿಸುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ, ಗ್ರಾಹಕರು ತಮ್ಮ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ದೊಡ್ಡ ಸಂಖ್ಯೆಯ ಘಟನೆಗಳು ಜರುಗಿವೆ. ಆದರೂ, ಈ ಆನ್‌ಲೈನ್ ಮಾರ್ಕೆಟಿಂಗ್ ವಂಚನೆಯನ್ನು ತಹಬಂದಿಗೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಬ್ಯಾಂಕ್ ಸಿಬ್ಬಂದಿಗಳ ಅಸಹಕಾರ, ಬೇಜವಾಬ್ದಾರಿ ಮತ್ತು ಶಾಮೀಲಾತಿಯೇ ಕಾರಣ.

ಪರಿಹಾರ: ಆನ್‌ಲೈನ್ ಹಣ ವರ್ಗಾವಣೆಯಲ್ಲಿ ಬ್ಯಾಂಕ್‌ಗಳೆಂದೂ ನೇರವಾಗಿ ನಗದು ವರ್ಗಾವಣೆ ಮಾಡುವುದಿಲ್ಲ. ಬದಲಿಗೆ ನಗದು ಮೊತ್ತಕ್ಕೆ ಸರಿಸಮಾನವಾದ ಪಾಯಿಂಟ್‌ಗಳನ್ನು ವರ್ಗಾವಣೆ ಮಾಡುತ್ತವೆ. ಅಂತಹ ಪಾಯಿಂಟ್‌ಗಳು ಹಣ ಸ್ವೀಕರಿಸುವವರ ಖಾತೆಯಲ್ಲಿ ಪ್ರತಿಫಲನಗೊಳ್ಳುತ್ತದೆ. ಆದರೆ, ಈಗಿರುವ ವ್ಯವಸ್ಥೆಯಲ್ಲಿ ಈ ಪಾಯಿಂಟ್‌ಗಳು ಹಣ ಸ್ವೀಕರಿಸುವವರ ಖಾತೆಯಲ್ಲಿ ಕ್ಷಣಾರ್ಧದಲ್ಲಿ ಪ್ರತಿಫಲನಗೊಳ್ಳುವುದರಿಂದ, ಸೈಬರ್ ವಂಚಕರು ತಕ್ಷಣವೇ ಆ ಮೊತ್ತವನ್ನು ವಿತ್‌ಡ್ರಾ ಮಾಡಿ, ತಮ್ಮ ಖಾತೆಯನ್ನು ರದ್ದುಗೊಳಿಸಿ, ಅಥವಾ ನಿಷ್ಕ್ರಿಯಗೊಳಿಸಿ ಪಾರಾಗಲು ಅವಕಾಶವಾಗುತ್ತಿದೆ.

image 29

ಹೀಗಾಗಿ, ಬ್ಯಾಂಕ್‌ಗಳು ಆನ್‌ಲೈನ್ ಹಣ ವರ್ಗಾವಣೆ ವಹಿವಾಟುಗಳ ಸಂದರ್ಭದಲ್ಲಿ ತಮ್ಮ ಗ್ರಾಹಕರ ಖಾತೆಗಳಿಂದ ವರ್ಗಾವಣೆಯ ಮೊತ್ತ (ಪಾಯಿಂಟ್‌ಗಳು) ಹಣ ಸ್ವೀಕರಿಸುವವರ ಮುಖ್ಯ ಬಾಕಿ(Main Balance)ಯಲ್ಲಿ ಪ್ರತಿಫಲನಗೊಂಡರೂ, ನಿವ್ವಳ ಬಾಕಿ (Net balance) ಮೊತ್ತ ಒಂದು ಗಂಟೆಯ ನಂತರವೇ ಪ್ರತಿಫಲಿಸುವಂತೆ ಕ್ರಮ ಕೈಗೊಳ್ಳಬೇಕು. ಸಾಗರೋತ್ತರ ವರ್ಗಾವಣೆಯಾಗಿದ್ದರೆ, 24 ಗಂಟೆಯ ನಂತರವೇ ನಿವ್ವಳ ಬಾಕಿ ಪ್ರತಿಫಲನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಆಗ ಸಂತ್ರಸ್ತ ಗ್ರಾಹಕರು ಈ ಕುರಿತು ಸಂಬಂಧಿತ ಬ್ಯಾಂಕ್‌ಗಳ ಗಮನಕ್ಕೆ ತಮಗಾಗಿರುವ ವಂಚನೆಯನ್ನು ತರಲು ಸಾಧ್ಯವಾಗಲಿದೆ. ಆ ಮೂಲಕ ತಮ್ಮ ದುಡ್ಡು ವಂಚಕರ ಪಾಲಾಗುವುದರಿಂದ ಪಾರಾಗಲಿದ್ದಾರೆ.

ಈ ವರದಿ ಓದಿದ್ದೀರಾ?: ಅನ್ನವನ್ನು ಅಪಮಾನಿಸಬೇಡಿ; ದುಷ್ಟ ಯಜಮಾನಿಕೆ ಕೊನೆಯಾಗಲಿ

ಆನ್‌ಲೈನ್ ವಂಚನೆಯಲ್ಲಿ ಹಣವು ಪಾಯಿಂಟ್‌ಗಳ ರೂಪದಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾವಣೆಗೊಳ್ಳುತ್ತದೆ. ಹೀಗಾಗಿ, ಪ್ರತಿ ಖಾತೆಯ ಕೆವೈಸಿ ವಿವರ ಬ್ಯಾಂಕ್ ಸಿಬ್ಬಂದಿ ಬಳಿ ಇದ್ದೇ ಇರುತ್ತದೆ. ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾದಾಗ, ಇಂತಹ ವಂಚಕ ಖಾತೆಗಳನ್ನು ಪತ್ತೆ ಹಚ್ಚಿ, ಈ ಕುರಿತು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕಾದ ಜವಾಬ್ದಾರಿ ಬ್ಯಾಂಕ್ ಸಿಬ್ಬಂದಿಗಳದ್ದೇ ಆಗಿದೆ. ಅಲ್ಲದೆ, ಅಂತಹ ವಂಚಕ ಖಾತೆದಾರರು ಬೇರಾವ ಬ್ಯಾಂಕ್‌ಗಳಲ್ಲೂ ಖಾತೆ ತೆರೆಯಲು ಅವಕಾಶ ನೀಡದೆ, ಅವರನ್ನು ಕಪ್ಪು ಪಟ್ಟಿಗೆ ಸೇರಿಸುವ ಹೊಣೆಗಾರಿಕೆಯೂ ಬ್ಯಾಂಕ್ ಸಿಬ್ಬಂದಿಗಳದ್ದೇ ಆಗಿದೆ.

  1. ಡಿಜಿಟಲ್ ಅರೆಸ್ಟ್: ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗಿರುವ ಭೀತಿ ಯಾವ ಪ್ರಮಾಣದ್ದು ಎಂಬುದಕ್ಕೆ ಈ ಡಿಜಿಟಲ್ ಅರೆಸ್ಟ್ ಎಂಬ ವಿನೂತನ ಸೈಬರ್ ವಂಚನೆಯೇ ಪ್ರಮುಖ ನಿದರ್ಶನ. ಈ ಸೈಬರ್ ವಂಚನೆಯಲ್ಲಿ ಪೊಲೀಸ್ ಅಧಿಕಾರಿಗಳ ಮಕ್ಕಳು ಹಾಗೂ ಸಂಬಂಧಿಕರೂ ಭಾಗಿಯಾಗಿದ್ದಾರೆ. ಹೀಗಾಗಿಯೇ ಡಿಜಿಟಲ್ ಅರೆಸ್ಟ್ ವಂಚನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ವ್ಯವಸ್ಥಿತವಾಗಿ ರಕ್ಷಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ತಡವಾಗಿಯಾದರೂ ಎಚ್ಚೆತ್ತ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಡಿಜಿಟಲ್ ಅರೆಸ್ಟ್ ಎಂಬ ಯಾವುದೇ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದವು. ಆದರೆ, ಅಷ್ಟು ಹೊತ್ತಿಗಾಗಲೇ ನೂರಾರು ಅಮಾಯಕರ ಕೋಟ್ಯಂತರ ರೂಪಾಯಿಯನ್ನು ಸೈಬರ್ ವಂಚಕರು ಲಪಟಾಯಿಸಿಯಾಗಿತ್ತು.

ಪರಿಹಾರ: ಸೈಬರ್ ವಂಚನೆಯ ಮೊದಲ ದೂರು ಸ್ವೀಕರಿಸುವುದು ಸ್ಥಳೀಯ ಪೊಲೀಸರು. ಹೀಗಾಗಿ ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ರಾಜ್ಯ ಪೊಲೀಸ್ ಇಲಾಖೆಗಳದ್ದೇ ಆಗಿತ್ತು. ಹೀಗಿದ್ದೂ, ಯಾವುದೇ ರಾಜ್ಯ ಪೊಲೀಸ್ ಇಲಾಖೆ ಈ ಕುರಿತು ಜಾಗೃತಿ ಅಭಿಯಾನ ಪ್ರಾರಂಭಿಸಲಿಲ್ಲ. ಬದಲಿಗೆ ಅಸೀಮ ನಿರ್ಲಕ್ಷ್ಯವನ್ನೇ ಪ್ರದರ್ಶಿಸಿದವು. ಇದರಿಂದಾಗಿಯೇ ಸೈಬರ್ ವಂಚಕರು ಹುಲುಸಾಗಿ ಬೆಳೆದು ನಿಂತಿರುವುದು.

ಇನ್ನಾದರೂ, ಪೊಲೀಸ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಸೈಬರ್ ವಂಚನೆಯ ಆಳ-ಅಗಲಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ, ಅವುಗಳ ಮೂಲೋತ್ಪಾಟನೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಪರಾಧ ನಡೆದ ನಂತರವಷ್ಟೆ ಕ್ರಮ ಜರುಗಿಸುತ್ತೇವೆ ಎಂಬ ಓಬಿರಾಯನ ಕಾಲದ ನಿಲುವಿನಿಂದ ಪೊಲೀಸ್ ವ್ಯವಸ್ಥೆ ಇನ್ನಾದರೂ ಹೊರ ಬಂದು, ಆಧುನಿಕ ಕಾಲಘಟ್ಟದ ವಂಚನೆಗಳನ್ನು ಮುಖಾಮುಖಿಯಾಗಲು Prevention is better than cure ಎಂಬ ವೈಜ್ಞಾನಿಕ ನಿಲುವನ್ನು ಬೆಳೆಸಿಕೊಳ್ಳಬೇಕಿದೆ. ಆಗ ಮಾತ್ರ, ಸೈಬರ್ ವಂಚಕರ ಹೆಡೆಮುರಿ ಕಟ್ಟಲು ಸಾಧ್ಯ..

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X