ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ.
ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ.
1927ರ ಡಿಸೆಂಬರ್ ಇಪ್ಪತ್ತೈದರಂದು ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಬಾಬಾಸಾಹೇಬರು ಹಿಂದೂ ಧರ್ಮದ ಆಧಾರವಾಗಿರುವ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕುವ ಮೂಲಕ ಶ್ರೇಣೀಕೃತ ವ್ಯವಸ್ಥೆಯನ್ನು ಎತ್ತಿ ಹಿಡಿಯುವ, ದಲಿತರು ಮತ್ತು ಮಹಿಳೆಯರ ಘನತೆಯನ್ನು ಕಳೆಯುವುದಕ್ಕೆಂದೆ ರಚನೆಯಾಗಿ ಚಾಲನೆಯಲ್ಲಿರುವ ಧರ್ಮಶಾಸ್ತ್ರಗಳಿಗೆ ಸಾಂಕೇತಿಕವಾಗಿ ಪ್ರತಿರೋಧ ವ್ಯಕ್ತಪಡಿಸಿದರು. ಅದಾದ ನಂತರ ಇದೆ ಡಿಸೆಂಬರ್ 25, 1968ರಂದು ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ಹತ್ಯಾಕಾಂಡವಾದ ‘ಕಿಲ್ವೇನ್ಮಣಿ ಹತ್ಯಾಕಾಂಡ’ ನಡೆಯಿತು.
ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕಿಲ್ವೆನ್ಮಣಿಯಲ್ಲಿ 44 ಜನ ದಲಿತರನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಲಾಯಿತು. ಮೇಲ್ಜಾತಿಯ ಭೂಮಾಲೀಕರ ಭೂಮಿಯಲ್ಲಿ ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದ ಕಿಲ್ವೇನ್ಮಣಿಯ ದಲಿತರು ತಮಗೆ ಕೊಡುತ್ತಿದ್ದ ಕೂಲಿಯನ್ನು ಹೆಚ್ಚಿಸುವಂತೆ ಕೇಳಿದ್ದು ಭೂಮಾಲೀಕರು ಮತ್ತು ದಲಿತರ ನಡುವಿನ ಘರ್ಷಣೆಗೆ ಕಾರಣವಾಗುತ್ತದೆ. ಅಷ್ಟಕ್ಕೂ ಆಗ ದಲಿತರು ಹೆಚ್ಚುವರಿ ಕೂಲಿಯಾಗಿ ಕೇಳಿದ್ದು ಒಂದಷ್ಟು ಭತ್ತವನ್ನು ಮಾತ್ರ. ಆದರೆ ತಾವು ಕೊಡುವುದನ್ನು ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗದೆ ದಲಿತರು ಕೂಲಿ ಹೆಚ್ಚಿಸುವಂತೆ ‘ಕೇಳಿದ್ದು’ ಭೂಮಾಲೀಕರು ದಲಿತರಿಗೆ ‘ಬುದ್ದಿ ಕಲಿಸುವುದಕ್ಕೆ’ ಪ್ರಚೋದಿಸುತ್ತದೆ. ರೂಢಿಯಂತೆ ಆ ಊರಿನ ಭೂಮಾಲೀಕರು ಕಿಲ್ವೇನ್ಮಣಿಯ ದಲಿತರನ್ನು ಕೂಲಿಗೆ ಕರೆಯುವುದನ್ನು ನಿಲ್ಲಿಸಿ ಬೇರೆ ಊರಿಂದ ಕೂಲಿಯಾಳುಗಳನ್ನು ಕರೆತರುವುದಕ್ಕೆ ಶುರು ಮಾಡುತ್ತಾರೆ. ಆಗ ಕಿಲ್ವೇನ್ಮಣಿಯ ದಲಿತರು ಸಂಘಟಿತರಾಗಿ ಪ್ರತಿಭಟನೆಗೆ ಇಳಿಯುತ್ತಾರೆ. ಈ ಘರ್ಷಣೆಯಲ್ಲಿ ಬೇರೆ ಊರಿಂದ ಕೂಲಿಯಾಳುಗಳನ್ನು ಕರೆತರುತ್ತಿದ್ದ ಕೂಲಿಕಾರ್ಮಿಕರ ಏಜೆಂಟನೊಬ್ಬನು ಸಾವನ್ನಪ್ಪುತ್ತಾನೆ. ದಲಿತರು ಹೆಚ್ಚುವರಿ ಕೂಲಿ ಕೇಳಿದ್ದಷ್ಟೆ ಅಲ್ಲದೆ ತಮ್ಮ ವಿರುದ್ಧ ನಿಲ್ಲುವುದಕ್ಕೆ ಮುಂದಾಗಿದ್ದನ್ನು ನೋಡಿ ಕೆರಳುವ ಮೇಲ್ಜಾತಿಯ ಜನ ದಲಿತರಿಗೆ ತಕ್ಕ ಪಾಠ ಕಲಿಸುವುದಕ್ಕೆ ಮುಂದಾಗುತ್ತಾರೆ.
ಭೂಮಾಲೀಕರ ಕಡೆಯ ಮೇಲ್ಜಾತಿಯ ನೂರಾರು ಜನ 1968 ರ ಕ್ರಿಸ್‌ಮಸ್ ರಾತ್ರಿ ಕಿಲ್ವೇನ್ಮಣಿಯ ದಲಿತ ಕೇರಿಗೆ ನುಗ್ಗಿ ದಾಂದಲೆ ಶುರು ಮಾಡುತ್ತಾರೆ. ಆ ದಲಿತ ಕೇರಿಯಿಂದ ತಪ್ಪಿಸಿಕೊಂಡು ಹೋಗದಂತೆ ಅಲ್ಲಿದ್ದ ಎಲ್ಲ ದಾರಿಗಳನ್ನು ಬಂದು ಮಾಡಿ ದಲಿತರ ಮೇಲೆ ಹಲ್ಲೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಮೇಲ್ಜಾತಿಯ ಗೂಂಡಾಗಳ ಹಲ್ಲೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೇರಿಯಲ್ಲಿದ್ದ ಹೆಂಗಸರು, ಮಕ್ಕಳು ಮತ್ತು ಮುದುಕರು ತಮ್ಮ ಗುಡಿಸಲುಗಳ ಒಳಕ್ಕೆ ಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಆಗ ಮೇಲ್ಜಾತಿಯ ಜನ ಆ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಲವತ್ತನಾಲ್ಕು ಮಂದಿ ದಲಿತರನ್ನು(ಅವರಲ್ಲಿ ಹೆಚ್ವಿನವರು ಮಹಿಳೆಯರು, ಮಕ್ಕಳು ಮತ್ತು ಒಂದಿಬ್ಬರು ವಯಸ್ಸಾದವರು) ಸಜೀವವಾಗಿ ಸುಟ್ಟುಬಿಡುತ್ತಾರೆ. ಜಾತಿ ವಿಕಾರಕ್ಕೆ ನಲವತ್ತನಾಲ್ಕು ಜನ ದಲಿತರು ತಮ್ಮಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ.
ಅಲ್ಲಿ ಮೇಲ್ಜಾತಿಯ ಜನ ರೊಚ್ಚಿಗೆದ್ದಿದ್ದು ಕೇವಲ ದಲಿತರು ಕೂಲಿ ಹೆಚ್ಚಿಸಿ ಅಂತ ಕೇಳಿದ್ದಕ್ಕಲ್ಲ. ಪರಂಪರಾತವಾಗಿ ವಿಧೇಯತೆಯಿಂದ ಬದುಕುತ್ತಿದ್ದವರು ಎದರು ನಿಂತು ಮಾತಾಡುವ ಧೈರ್ಯ ಮಾಡಿದ್ದಕ್ಕಾಗಿ. ಇದು ಕೇವಲ ಭೂಮಾಲೀಕರು ಮತ್ತು ಕೂಲಿಕಾರ್ಮಿಕರ ನಡುವೆ ತಮ್ಮ ದುಡಿಮೆಗೆ ತಕ್ಕ ಕೂಲಿಗಾಗಿ ನಡೆದ ವರ್ಗ ಹೋರಾಟ ಮಾತ್ರವಲ್ಲ. ಸಾಂಪ್ರದಾಯಿಕ ಸಮಾಜದಲ್ಲಿ ದಲಿತರು ಸ್ವಲ್ಪ ಸೆಟೆದು ನಿಲ್ಲುವುದಕ್ಕೆ ಶುರು ಮಾಡಿದರೆ ಕೆರಳುವ ಜಾತಿವಿಕಾರದ ವಿರುದ್ಧದ ಹೋರಾಟ.
ಹದಿನೈದು ವರ್ಷಗಳ ಕಾಲ ಕೋರ್ಟಿನಲ್ಲಿ ಕೇಸು ನಡೆಯುತ್ತದೆ. ಯಥಾಪ್ರಕಾರ ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆದಾಗ ಆಗುವಂತೆ ಸಾಕ್ಷಿಗಳ ಕೊರತೆ, ಆ ಹತ್ಯಾಕಾಂಡಕ್ಕೆ ಕಾರಣ ಜಾತಿ ಅಲ್ಲ ಅನ್ನುವ ವಾದ, ಪತ್ರಿಕೆಗಳ ನಿರ್ಲಕ್ಷ್ಯದ ಕಾರಣಗಳಿಂದಾಗಿ ಹತ್ಯಾಕಾಂಡದ ಆರೋಪಿಗಳಿಗೆ ಅವರು ಎಸಗಿದ ಕ್ರೌರ್ಯಕ್ಕೆ ತಕ್ಕ ಶಿಕ್ಷೆಯೂ ಆಗುವುದಿಲ್ಲ, ಹತ್ಯಾಕಾಂಡದಿಂದ ಸಂತ್ರಸ್ತರಾದವರಿಗೆ ಸಿಗಬೇಕಾದ ಸೂಕ್ತ ನ್ಯಾಯವೂ ಸಿಗುವುದಿಲ್ಲ.
ದಲಿತ ಚಳುವಳಿ ಇನ್ನೂ ಹುಟ್ಟಿರದ ಆ ಕಾಲದಲ್ಲಿ ಸಿಪಿಎಂ ಕಿಲ್ವೇನ್ಮಣಿ ಹತ್ಯಾಕಾಂಡವನ್ನು ಖಂಡಿಸಿ ದಲಿತರ ಪರ ಹೋರಾಟವನ್ನು ರೂಪಿಸಿತ್ತು. ಹತ್ಯಾಕಾಂಡದ ನಂತರದ ಘಟನಾವಳಿಗಳನ್ನು ಹೋರಾಟಗಾರ್ತಿ ಕಾಮ್ರೆಡ್ ಮೈಥಿಲಿ ಸಿವರಾಮನ್ ದಾಖಲು ಮಾಡಿದ್ದಾರೆ.
ಇದನ್ನು ಓದಿದ್ದೀರಾ?:‘ಮಾದಿಗ ಮುನ್ನಡೆ’ ಹೆಸರಲ್ಲಿ ’ಮನುವಾದ ಮುನ್ನಡೆ’; ಆರ್‌ಎಸ್‌ಎಸ್ ಹುನ್ನಾರ ಅರಿಯುವರೇ ದಲಿತರು?
ಬ್ರಾಹ್ಮಣ್ಯದ ಅಪಾಯಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ ದ್ರಾವಿಡ ಚಳುವಳಿಯ ತವರು ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ಹತ್ಯಾಕಾಂಡ ನಡೆದುಹೋಯಿತು.
ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ. ಹಾಗಾಗಿಯೇ ಕಿಲ್ವೇನ್ಮಣಿ, ಕರಂಚೇಡು, ಚಂಡೂರು, ಬೆಲ್ಚಿ, ಖೈರ್ಲಾಂಜಿ, ಕಂಬಾಲಪಲ್ಲಿ, ನಾಗಮಾಲಪಲ್ಲಿ, ಹಥ್ರಾಸ್ ಹತ್ಯಾಕಾಂಡಗಳು ಒಂದಾದಮೇಲೊಂದರಂತೆ ನಡೆಯುತ್ತಲೇ ಇವೆ… ಈ ನೆಲದ ಮೇಲೆ ದಲಿತರ ರಕ್ತ ಹರಿಯುತ್ತಲೇ ಇದೆ.
We never forget, we never forgive.