‘ಮಾದಿಗ ಮುನ್ನಡೆ’ ಹೆಸರಲ್ಲಿ ’ಮನುವಾದ ಮುನ್ನಡೆ’; ಆರ್‌ಎಸ್‌ಎಸ್ ಹುನ್ನಾರ ಅರಿಯುವರೇ ದಲಿತರು?

Date:

ಬಾಬಾ ಸಾಹೇಬರು ಹಿಂದುತ್ವ ಸಂಘಟನೆಗಳ ಕುರಿತು ಆಡಿದ್ದ ಎಚ್ಚರಿಕೆಯ ಮಾತುಗಳನ್ನುಇವರು ಅರ್ಥಮಾಡಿಕೊಳ್ಳುವರೇ?

ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಈ ದೇಶಕ್ಕೆ ನೀಡಿದ್ದ ಎಚ್ಚರಿಕೆಯ ಮಾತುಗಳಿಂದಲೇ ಈ ಹೊತ್ತಿನ ವಿದ್ಯಮಾನಕ್ಕೆ ಪ್ರತಿಕ್ರಿಯಿಸುವುದು ಸೂಕ್ತ. “ಹಿಂದೂ ಮಹಾಸಭಾ ಅಥವಾ ಆರ್‌ಎಸ್‌ಎಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ” ಎಂದಿದ್ದರು ಅಂಬೇಡ್ಕರ್‌ (ಬರಹ ಮತ್ತು ಭಾಷಣಗಳು ಸಂಪುಟ 17, ಪುಟ 359). ಜೊತೆಗೆ “ಆರ್‌ಎಸ್‌ಎಸ್ ಒಂದು ಅಪಾಯಕಾರಿ ಸಂಘಟನೆ” ಎಂದೂ ಮುನ್ನೆಚ್ಚರಿಕೆ ನೀಡಿದ್ದರು (ಇಂಗ್ಲಿಷ್‌ ಸಂಪುಟ 15, ಪುಟ 560).

ಮತ್ತೊಂದೆಡೆ “ಹಿಂದೂ ರಾಷ್ಟ್ರ ವಾಸ್ತವವಾದರೆ, ಅದು ನಿಸ್ಸಂದೇಹವಾಗಿ ಈ ದೇಶದ ದೊಡ್ಡ ದೌರ್ಭಾಗ್ಯವಾಗುತ್ತದೆ. ಹಿಂದೂಗಳು ಏನೇ ಹೇಳಲಿ, ಹಿಂದೂ ಧರ್ಮವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಅಪಾಯಕಾರಿಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಹಿಂದೂ ರಾಷ್ಟ್ರ ಸ್ಥಾಪನೆಯಾಗದಂತೆ ತಡೆಯಬೇಕು” (ಸಂಪುಟ-8, ಪುಟ-358) ಎಂದು ತಿಳಿಸಿದ್ದರು. “ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ” ಎಂದು ಘೋಷಿಸಿಕೊಂಡಿದ್ದ ಬಾಬಾ ಸಾಹೇಬರು, ಬೌದ್ಧಧರ್ಮಕ್ಕೆ ಮರಳಿ ಉಸಿರುಗಟ್ಟಿದ ವಾತಾವರಣದಿಂದ ಹೊರಬಂದರು. ಆದರೆ ಇಂದು ಅಂಬೇಡ್ಕರ್‌ ಅವರ ಹೆಸರು ಹೇಳಿಕೊಂಡು ಆರ್‌ಎಸ್‌ಎಸ್ ಏನೆಲ್ಲ ಪಿತೂರಿ ಮಾಡುತ್ತಿದೆ ಎಂಬುದನ್ನು ತಿಳಿದಿದ್ದರೂ ದಲಿತ ಸಮುದಾಯದ ಕೆಲವರು ಜಾಣಮೌನ ತೋರುತ್ತಿರುವುದು ಅಥವಾ ಆರ್‌ಎಸ್‌ಎಸ್ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಹುದೊಡ್ಡ ದ್ರೋಹವೇ ಸರಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರ್‌ಎಸ್‌ಎಸ್‌, ಬಿಜೆಪಿ ಪ್ರಾಯೋಜಿತ ’ಮಾದಿಗ ಮುನ್ನಡೆ’ ಎಂಬ ಕಾರ್ಯಕ್ರಮವನ್ನು ರಾಜ್ಯದ ವಿವಿಧೆಡೆ ಆಯೋಜನೆ ಮಾಡಲಾಗಿದೆ. ಕೆಲವೆಡೆ ಕಾರ್ಯಕ್ರಮಗಳು ನಡೆದಿವೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಮಾದಿಗ ಸಮುದಾಯದ ಕೆಲ ಮುಖಂಡರು ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಫ್ಯಾಸಿಸ್ಟ್‌ ಆಲೋಚನೆಯ, ಹಿಂದುತ್ವ ಪ್ರತಿಪಾದಿಸುವ ಆರ್‌ಎಸ್‌ಎಸ್ ಜೊತೆಯಲ್ಲಿ ನಡೆಯುವುದೆಂದರೆ ಬಾಬಾ ಸಾಹೇಬರ ಚಿಂತನೆಗಳಿಗೆ ಘೋರ ಅನ್ಯಾಯವನ್ನು ಮಾಡಿದ್ದಂತೆ ಅಲ್ಲವೇ?

ಒಡೆದು ಆಳುವ ನೀತಿಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಆರ್‌ಎಸ್‌ಎಸ್‌, ರಾಜ್ಯದ ಬಹುದೊಡ್ಡ ದಲಿತ ಸಮುದಾಯಗಳಾಗಿರುವ ಹೊಲೆಯ ಮತ್ತು ಮಾದಿಗರನ್ನು ಎತ್ತಿಕಟ್ಟುವ ಕ್ರೌರ್ಯಕ್ಕೆ ಇಳಿದಿದೆ. ವರ್ಷದ ಹಿಂದೆ ಡಿಸೆಂಬರ್‌ 6ರಂದು ಬೆಂಗಳೂರಿನಲ್ಲಿ ನಡೆದ ’ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ವು ಹೊಲೆಯ ಮಾದಿಗ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಜೊತೆಗೆ ಅನಾಥ ಸ್ಥಿತಿಯನ್ನು ಅನುಭವಿಸುತ್ತಿರುವ ಮುಸ್ಲಿಂ ಸಮುದಾಯವು ಸಾಲಿಡ್ ಆಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತು. ಮತ್ತೊಂದೆಡೆ ಹೊಲೆಯ, ಮಾದಿಗ ಸಮುದಾಯ ಒಗ್ಗಟ್ಟು ತೋರಿ, ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಮತ ಚಲಾಯಿಸಿ ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಉಳಿವಿಗೆ ಶ್ರಮಿಸಿದರು. ಇದರ ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿತ್ತು. ಶೇ. 50ಕ್ಕಿಂತ ಹೆಚ್ಚು ಹೊಲೆಯ ಮಾದಿಗರು ಕಾಂಗ್ರೆಸ್ ಜೊತೆಯಲ್ಲಿ ನಿಂತಿದ್ದನ್ನು ಸಮೀಕ್ಷೆಗಳು ಸ್ಪಷ್ಟಪಡಿಸಿದ್ದವು.

ಒಳಮೀಸಲಾತಿ ಅಗತ್ಯತೆಯನ್ನು ಅಸ್ತ್ರವಾಗಿ ಬಳಸಿಕೊಂಡು, ದಲಿತ ಸಮುದಾಯವನ್ನು ಒಡೆಯಬಹುದೆಂದು ಬಿಜೆಪಿ ಭಾವಿಸಿತು. ಒಳಮೀಸಲಾತಿ ಜಾರಿಯಾಗಿಬಿಟ್ಟಿದೆ ಎಂದು ಸುಳ್ಳು ಹೇಳಿದ್ದ ಬಿಜೆಪಿಗೆ ತಕ್ಕ ಪಾಠವನ್ನು ಚುನಾವಣೆಯಲ್ಲಿ ಕಲಿಸಲಾಗಿತ್ತು. ಆದರೆ ಚುನಾವಣೆ ಮುಗಿದರೂ ಒಳಮೀಸಲಾತಿ ಜಾರಿಯಾಗಲಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವಿದೆ ಎಂದು ಬಿಜೆಪಿ ಸಬೂಬು ಹೇಳಿತು. ಚುನಾವಣೆ ಪೂರ್ವದಲ್ಲೇ ಈ ಮಾತು ಆಡಲಿಲ್ಲ. ಸುಗ್ರೀವಾಜ್ಞೆ ಮೂಲಕ ತರುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ. ಅನೇಕ ಸಂದರ್ಭಗಳಲ್ಲಿ ಕೋರ್ಟ್ ನಲ್ಲಿದ್ದ ವಿಷಯಗಳನ್ನು ಮೀರಿ ಸುಗ್ರೀವಾಜ್ಞೆ ಹೊರಡಿಸಿದ ನಿದರ್ಶನಗಳಿವೆ. ಹೀಗಾಗಲೇ ಸಾಮಾಜಿಕವಾಗಿ ಮೇಲ್ತಸ್ಥರದಲ್ಲಿರುವ ಬ್ರಾಹ್ಮಣರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ, ಯಾವುದೇ ಆಗ್ರಹ, ಸಮೀಕ್ಷೆ ಇಲ್ಲದೆಯೇ ಒಂದೇ ವಾರದೊಳಗೆ ’ಇಡಬ್ಲ್ಯುಎಸ್’ ಜಾರಿಗೊಳಿಸಿದ್ದ ಬಿಜೆಪಿ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಮಾತ್ರ ಬೇರೆ ಬೇರೆ ಸಬೂಬುಗಳನ್ನು ಹೇಳುತ್ತಲೇ ಬರುತ್ತಿದೆ. ಈಗ ’ಮಾದಿಗ ಮುನ್ನಡೆ’ಯ ಮೂಲಕ ಯಾರನ್ನು ವಂಚಿಸಲು ಹೊರಟಿದ್ದಾರೆ?

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಒಂದೇ ವಾರದೊಳಗೆ ಒಳಮೀಸಲಾತಿ ಜಾರಿಗೊಳಿಸುವ ಶಕ್ತಿಯನ್ನು ಹೊಂದಿದ್ದರೂ ’ಮಾದಿಗ ಮುನ್ನಡೆ’ ಎಂಬ ಸೋಗು ಹಾಕುತ್ತಿರುವುದರ ಹಿಂದೆ ಇರುವುದು ’ಸಮುದಾಯವನ್ನು ಒಡೆದು ಮನುವಾದ ಮುನ್ನಡೆ’ ಮಾಡುವ ಹುನ್ನಾರವೇ ಹೊರತು ಬೇರೇನೂ ಅಲ್ಲ. ಒಗ್ಗಟ್ಟು ಮುರಿದಾಗ ಮಾತ್ರ ತಮ್ಮ ಶಕ್ತಿ ಬಲವಾಗುತ್ತದೆ ಎಂಬುದು ಆರ್‌ಎಸ್‌ಎಸ್‌ಗೆ ತಿಳಿದಿದೆ. ವಾದಿರಾಜ ಸಾಮರಸ್ಯ ಎನ್ನುವ ಆರ್‌ಎಸ್‌ಎಸ್ ಮುಖಂಡ, ಮಾದಿಗ ಸಮುದಾಯದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಬ್ರಾಹ್ಮಣರ ಕಾರ್ಯಕ್ರಮಕ್ಕೆ ಮಾದಿಗ ಸಮುದಾಯದ ನೇತೃತ್ವವನ್ನು ಆರ್‌ಎಸ್‌ಎಸ್‌ ನೀಡುತ್ತದೆಯೇ? ಎಂಬ ಕನಿಷ್ಠ ಪ್ರಶ್ನೆಯನ್ನು ಸಮುದಾಯದ ಮುಖಂಡರು ಕೇಳಿಕೊಳ್ಳಬೇಕು. ಬಾಬಾ ಸಾಹೇಬರು ತೋರಿದ ಬೌದ್ಧತ್ವದ ಹಾದಿಗೆ ವಿರುದ್ಧವಾಗಿರುವ ಅಸಮಾನತೆಯ ಹಿಂದುತ್ವದ ಕುರಿತು ಎಚ್ಚರಗೊಳ್ಳದಿದ್ದರೆ ಸಮುದಾಯ ಕೋಮುದಳ್ಳುರಿಯ ಕಾಲಾಳಾಗುತ್ತದೆ. ಇದಕ್ಕೆ ಅವಕಾಶ ನೀಡುತ್ತಿರುವ ಮಾದಿಗ ಸಮುದಾಯದ ಮಾದಾರ ಚೆನ್ನಯ್ಯ ಸ್ವಾಮೀಜಿ ಇಡೀ ಜನಾಂಗಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಹೇಳಲು ವಿಷಾದವಾಗುತ್ತದೆ. “ಬಿಜೆಪಿ ಎಲ್ಲವನ್ನೂ ಮಾಡುತ್ತದೆ” ಎಂದು ತಿಪ್ಪೇ ಸಾರಿಸಿ, ನಯವಂಚನೆಯ ಕೆಲಸವನ್ನು ಸ್ವಾಮೀಜಿಯಾದವರು ಮಾಡಬಾರದು. ಪ್ರಭಾವಿ ಜಾತಿಗಳ ಸ್ವಾಮೀಜಿಗಳಾರು ತಮ್ಮ ಸಮುದಾಯಕ್ಕೆ ದ್ರೋಹ ಬಗೆಯುವ ಕೆಲಸಗಳನ್ನು ಮಾಡಿದ್ದನ್ನು ನಾವು ನೋಡಿಲ್ಲ. ಆದರೆ ಮಾದರ ಚೆನ್ನಯ್ಯರಂತಹ ಸ್ವಾಮೀಜಿಗಳು  ಸಮುದಾಯಕ್ಕೆ ಮತ್ತು ಬಾಬಾ ಸಾಹೇಬರು ತೋರಿದ ದಾರಿಗೆ ಮುಳ್ಳಾಗಿದ್ದಾರೆಂದೇ ಹೇಳಬೇಕಾಗುತ್ತದೆ.

ಮಾದಿಗ ಮುನ್ನಡೆ ಎಂಬ ಕಾರ್ಯಕ್ರಮಗಳಲ್ಲಿ ಏಕೆ ಬೇರೆ ಪಕ್ಷಗಳಲ್ಲಿ ಇರುವ ಮಾದಿಗ ನಾಯಕರು ಕಾಣಿಸಿಕೊಳ್ಳುತ್ತಿಲ್ಲ? ಇದು ಮಾದಿಗರ ಆತ್ಮಗೌರವದ ಸಮಾವೇಶವೇ? ಹಿಂದುತ್ವವು ಮಾದಿಗರ ಆತ್ಮವಾಗಲು ಸಾಧ್ಯವೇ? ಕೇವಲ ಒಂದು ಪಕ್ಷದೊಂದಿಗೆ ಇರುವವರ ಮುನ್ನಡೆಯಷ್ಟೇ ಮಾದಿಗ ಮುನ್ನಡೆಯೇ? ಏನಿದರ ಹುನ್ನಾರ? ಗುಜರಾತ್‌ ಕೋಮು ಗಲಭೆಯಲ್ಲಿ ಜೈಲು ಸೇರಿದ ಬಹುತೇಕರು  ದಲಿತರು. ಬೆಂಕಿ ಹಚ್ಚಲು ಪ್ರೇರೇಪಿಸಿದ ಬಲಾಢ್ಯ ಜಾತಿಗಳವರ ಮಕ್ಕಳು ವಿದ್ಯಾಭ್ಯಾಸ ಪಡೆದು ಚೆನ್ನಾಗಿದ್ದಾರೆ. ಆದರೆ ಜೈಲಿನ ಕಂಬಿ ಎಣಿಸಿದ್ದು ದಲಿತರ ಮಕ್ಕಳು. ಈ ಸತ್ಯವನ್ನು ಅರ್ಥಮಾಡಿಕೊಳ್ಳದೆ ಹಿಂದುತ್ವ ಮುಖಗಳೊಂದಿಗೆ ಗುರುತಿಸಿಕೊಳ್ಳುತ್ತಿರುವವರನ್ನು ಸಮುದಾಯದ ಎಚ್ಚೆತ್ತ ಜನರು ಗಮನಿಸುತ್ತಿದ್ದಾರೆ.

ಅಲ್ಲಲ್ಲಿ ನಡೆದಿರುವ ಮಾದಿಗ ಮುನ್ನಡೆ ಕಾರ್ಯಕ್ರಮದಲ್ಲಿ ಹೊಲೆಯ ಸಮುದಾಯವನ್ನು ವಿರೋಧಿಸಿ ಕೆಲವರು  ಮಾತನಾಡುತ್ತಿರುವ ಸಂಗತಿಗಳು ತಿಳಿದುಬರುತ್ತಿವೆ. ಆರ್‌ಎಸ್‌ಎಸ್ ಅಸ್ಪೃಶ್ಯರನ್ನು ಅಸ್ಪೃಶ್ಯರ ವಿರುದ್ಧವೇ ಛೂ ಬಿಡುತ್ತಿದೆ. ’ಮಾದಿಗ ಮುನ್ನಡೆ’ ಹೆಸರಲ್ಲಿ ’ಮನುವಾದದ ಮುನ್ನಡೆ’ ನಡೆಯುತ್ತಿದೆ ಎಂಬುದು ಸಮುದಾಯಕ್ಕೆ ಅರ್ಥವಾಗುವುದೇ? ಬಾಬಾ ಸಾಹೇಬರು ಹಿಂದುತ್ವ ಸಂಘಟನೆಗಳ ಕುರಿತು ಆಡಿದ್ದ ಎಚ್ಚರಿಕೆಯ ಮಾತುಗಳನ್ನು ಅರ್ಥಮಾಡಿಕೊಳ್ಳುವರೇ? ದಲಿತ ಸಮುದಾಯದ ಬೇರುಗಳು ಇರುವುದು ಡಿಎಸ್‌ಎಸ್‌ನಲ್ಲಿಯೇ ಹೊರತು ಆರ್‌ಎಸ್‌ಎಸ್‌ನಲ್ಲಿ ಅಲ್ಲ ಎಂಬುದನ್ನು ಅರಿತುಕೊಳ್ಳುವರೇ? ಆಮಿಷಗಳಿಗೇನಾದರೂ ಬಲಿಯಾದರೆ ಸಮುದಾಯ ನಿಮ್ಮನ್ನು ಕ್ಷಮಿಸುವುದಿಲ್ಲ.

(ಲೇಖಕರು ಮಾದಿಗ ಸಮುದಾಯದ ಯುವ ಬರಹಗಾರರು)

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ

"ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ...

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಪ್ರಕರಣ ಮುಚ್ಚಿಹಾಕಲು ಸರ್ಕಾರದಿಂದ ನಿರ್ದೇಶನ: ಆರ್‌ ಅಶೋಕ್‌ ಆರೋಪ

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ, ಬಹು ಸಂಖ್ಯಾತರ ಮೇಲೆ...

ದೇವರು-ಧರ್ಮದ ಹೆಸರಲ್ಲಿ ಮರುಳು ಮಾಡಿ ನಾವು ಅಧಿಕಾರ ನಡೆಸಲ್ಲ: ಸಿದ್ದರಾಮಯ್ಯ

ನಾವು ನಿಮ್ಮನ್ನು ದೇವರು-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ. ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ...

ಲಾಲೂ ಪ್ರಸಾದ್ ಟೀಕೆಯನ್ನೇ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ: ‘ಮೋದಿ ಕಾ ಪರಿವಾರ್’ ಅಭಿಯಾನ!

ನಿನ್ನೆ ಪಾಟ್ನಾದಲ್ಲಿ ನಡೆದಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಷ್ಟ್ರೀಯ ಜನತಾ ದಳ...