ದಕ್ಷಿಣ ಭಾರತೀಯರ ಲೋಹಶಾಸ್ತ್ರದ ಪ್ರಾಚೀನತೆ ಮತ್ತು ಜ್ಞಾನದ ಕುರಿತಂತೆ ಹೆಚ್ಚಿನ ಸಂಶೋಧನೆಗಳು ತಮಿಳುನಾಡು ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿಯೂ ನಡೆಯಬೇಕಿದೆ. ಹಾಗಾದಲ್ಲಿ ದಕ್ಷಿಣ ಭಾರತದ ಕಬ್ಬಿಣದ ಯುಗವನ್ನು ಸಮಗ್ರವಾಗಿ ಗ್ರಹಿಸಬಹುದಾಗಿದೆ.
ಜಗತ್ತಿನಲ್ಲಿಯೇ ಮೊಟ್ಟ ಮೊದಲು ಕಬ್ಬಿಣದ ಯುಗ ಆರಂಭಗೊಂಡಿದ್ದು ಭಾರತದಲ್ಲಿ, ಅದರಲ್ಲಿಯೂ ತಮಿಳುನಾಡಿನಲ್ಲಿ ಎಂಬ ಮಹತ್ತರವಾದ ಅಧ್ಯಯನವೊಂದು ಇತ್ತೀಚೆಗೆ ಬಹಿರಂಗಗೊಂಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಚೆನ್ನೈನ ಅಣ್ಣಾ ಶತಮಾನೋತ್ಸವ ಗ್ರಂಥಾಲಯದಲ್ಲಿ ಜನವರಿ 23ರಂದು ಪುರಾತತ್ವಶಾಸ್ತ್ರಜ್ಞರು ಮತ್ತು ತಜ್ಞರ ಸಮ್ಮುಖದಲ್ಲಿ, ಪಾಂಡಿಚೇರಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಕೆ. ರಾಜನ್ ಮತ್ತು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ಆರ್. ಶಿವಾನಂದಮ್ ಅವರ ‘ಆಂಟಿಕ್ವಿಟಿ ಆಫ್ ಐರನ್: ರೀಸೆಂಟ್ ರೇಡಿಯೊಮೆಟ್ರಿಕ್ ಡೇಟ್ಸ್ ಫ್ರಮ್ ತಮಿಳುನಾಡು’ (ಕಬ್ಬಿಣದ ಪ್ರಾಚೀನತೆ: ತಮಿಳುನಾಡಿನಿಂದ ಇತ್ತೀಚಿನ ರೇಡಿಯೋಮೆಟ್ರಿಕ್ ದಿನಾಂಕಗಳು) ಎಂಬ ಶೀರ್ಷಿಕೆಯ ಅಧ್ಯಯನವನ್ನು ಬಿಡುಗಡೆಗೊಳಿಸಿದರು. ”ತಮಿಳು ಭೂಪ್ರದೇಶದಲ್ಲಿ 5,300 ವರ್ಷಗಳ ಹಿಂದೆ ಕಬ್ಬಿಣವನ್ನು ಪರಿಚಯಿಸಲಾಯಿತು ಎಂದು ನಾವು ವೈಜ್ಞಾನಿಕವಾಗಿ ನಿರೂಪಿಸಿದ್ದೇವೆ. ಕಬ್ಬಿಣದ ಯುಗವು ತಮಿಳು ಮಣ್ಣಿನಲ್ಲಿ ಪ್ರಾರಂಭವಾಯಿತು” ಎಂದು ಘೋಷಿಸಿದರು.
ಈ ಹಿಂದೆ, ಹಿಟ್ಟೈಟ್ ಸಾಮ್ರಾಜ್ಯ (ಆಧುನಿಕ ಟರ್ಕಿಯಲ್ಲಿ) ಕಬ್ಬಿಣವನ್ನು ಬಳಸಿದ ಮೊದಲ ನಾಗರಿಕತೆ ಎಂದು ನಂಬಲಾಗಿತ್ತು. ಇದಕ್ಕೆ ಪುರಾವೆಗಳು ಸುಮಾರು ಕ್ರಿ.ಪೂ. 1,380ರ ಹಿಂದಿನದ್ದಾಗಿತ್ತು. ಆದರೆ, ತಮಿಳುನಾಡಿನ ಕಬ್ಬಿಣದ ಯುಗವು ಕ್ರಿ.ಪೂ 3,345 ರಷ್ಟು ಹಿಂದೆಯೇ ಪ್ರಾರಂಭವಾಯಿತು ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ. ಇದು ಸರಿಸುಮಾರು ಕ್ರಿ.ಪೂ 4ನೇ ಸಹಸ್ರಮಾನದ ಮಧ್ಯಭಾಗಕ್ಕೆ ಅನುಗುಣವಾಗಿದೆ ಮತ್ತು ಹಿಟ್ಟೈಟ್ ಸಾಮ್ರಾಜ್ಯದ ಕಬ್ಬಿಣದ ಬಳಕೆಗಿಂತ ಸಹಸ್ರಮಾನದಷ್ಟು ಮುಂಚಿತವಾಗಿದೆ.
ತಮಿಳುನಾಡು ಪುರಾತತ್ವ ಇಲಾಖೆಯು ಕೈಗೊಂಡಿರುವ ಸರಣಿ ಸಮಗ್ರ ಅಧ್ಯಯನಗಳಿಂದ ತೂತುಕುಡಿ ಜಿಲ್ಲೆಯ ಹೊರವಲಯದಲ್ಲಿರುವ ಶ್ರೀವೈಕುಂಡಂ ಬಳಿಯ ಶಿವಗಲೈನ ಸಮಾಧಿ ಪಾತ್ರೆಗಳಲ್ಲಿ ಸಿಕ್ಕ ಇದ್ದಿಲು ಮತ್ತು ಕಬ್ಬಿಣದ ವಸ್ತುಗಳನ್ನು ಒಳಗೊಂಡಿರುವ ಮಾದರಿಗಳ ರೇಡಿಯೋಮೆಟ್ರಿಕ್ ಡೇಟಿಂಗ್ ಮೂಲಕ ಈ ಆವಿಷ್ಕಾರವನ್ನು ಮಾಡಲಾಗಿದ್ದು, ಈ ಕಾಲನಿರ್ಣಯವು ಸಿಂಧೂ ಕಣಿವೆ ನಾಗರಿಕತೆಗೆ ಸಮಕಾಲೀನವಾಗಿ ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಹೊಂದಿದ್ದ ಕಬ್ಬಿಣ ಯುಗದ ನಾಗರಿಕತೆಯನ್ನು ಸೂಚಿಸುತ್ತದೆ. ಪತ್ರಿಕಾಗೋಷ್ಠಿಯಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ಕ್ರಿ.ಪೂ 4 ನೇ ಸಹಸ್ರಮಾನದಷ್ಟು ಹಿಂದಿನ ತಮಿಳುನಾಡಿನಲ್ಲಿ ಕಬ್ಬಿಣದ ಕರಗಿಸುವಿಕೆಯ ಪುರಾವೆಗಳನ್ನು ವಿವರಿಸಿದ್ದಾರೆ. ಈ ಆವಿಷ್ಕಾರದಿಂದ ಭಾರತದ ಪ್ರಾಚೀನ ನಾಗರಿಕತೆಗಳ ಕಾಲರೇಖೆಯನ್ನು ಪುನರ್ ವ್ಯಾಖ್ಯಾನಿಸುವಂತಾಗಿದೆ.

ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಸಮಯದಲ್ಲಿಯೇ ದಕ್ಷಿಣ ಭಾರತದಲ್ಲಿ ಸಮಕಾಲೀನ ಕಬ್ಬಿಣ ಯುಗದ ನಾಗರಿಕತೆ ಅಸ್ತಿತ್ವದಲ್ಲಿತ್ತು ಎಂದು ಆವಿಷ್ಕಾರವು ಸೂಚಿಸುತ್ತದೆ. ವಿಂಧ್ಯ ಪರ್ವತದ ಉತ್ತರದ ಪ್ರದೇಶಗಳು ಇನ್ನೂ ತಾಮ್ರದ ಯುಗದಲ್ಲಿದ್ದರೆ, ವಾಣಿಜ್ಯಿಕವಾಗಿ ಬಳಸಿಕೊಳ್ಳಬಹುದಾದ ತಾಮ್ರದ ಅದಿರುಗಳ ಕೊರತೆಯಿಂದಾಗಿ ದಕ್ಷಿಣ ಭಾರತವು ಕಬ್ಬಿಣದ ಯುಗವನ್ನು ಪ್ರವೇಶಿಸಿರಬಹುದು ಎಂದು ಅಧ್ಯಯನವು ಸೂಚಿಸುತ್ತದೆ.
ಈ ಎಲ್ಲ ಅಧ್ಯಯನಗಳು ಪ್ರಾರಂಭವಾಗಲು ಸ್ಫೂರ್ತಿಯಾಗಿದ್ದು, ಸೇಲಂ ಬಳಿಯ ಮೆಟ್ಟೂರಿನಲ್ಲಿರುವ ಮಾಂಗಡು ಎಂಬಲ್ಲಿ, ಸಿಸ್ಟ್ ಸಮಾಧಿ ಸ್ಥಳದಿಂದ ಪಡೆದ ಕಬ್ಬಿಣದ ಕತ್ತಿಯು ಕ್ರಿ.ಪೂ. 1604 ರಿಂದ 1416 ರ ನಡುವಿನ ವರ್ಷಗಳಷ್ಟು ಹಿಂದಿನದು ಎಂದು ಸೂಚಿಸಿದಾಗ. ತಮಿಳುನಾಡಿನಲ್ಲಿ ಅಷ್ಟು ಪ್ರಾಚೀನ ಕಾಲದ ಕಬ್ಬಿಣ ದೊರೆತಿದ್ದು ಅದೇ ಮೊದಲಾಗಿತ್ತು. ಇದಕ್ಕೆ ಹೋಲಿಸಿದರೆ, ಕರ್ನಾಟಕದ ಬ್ರಹ್ಮಗಿರಿ ಮತ್ತು ಹೈದರಾಬಾದ್ ಬಳಿಯ ಗಚಿಬೌಲಿಯಂತಹ ತಾಣಗಳು ಕ್ರಮವಾಗಿ ಕ್ರಿ.ಪೂ 2140 ಮತ್ತು ಕ್ರಿ.ಪೂ 2200ರ ಕಬ್ಬಿಣದ ಯುಗದ ಕಾಲವನ್ನು ನೀಡಿವೆ. ಅದಾಗಲೇ, ಪುರಾತತ್ತ್ವಜ್ಞರು ಶಿವಗಲೈ, ಆದಿಚನಲ್ಲೂರು, ಮೈಲಾಡುಂಪರೈ, ಮತ್ತು ಕಿಲ್ನಮಂಡಿ ಸ್ಥಳಗಳಲ್ಲಿ ಏಕಕಾಲದಲ್ಲಿ ಕಬ್ಬಿಣವನ್ನು ಹುಡುಕಲು ಪ್ರಯತ್ನಿಸುತ್ತಿದ್ದರು.
ಪುರಾತತ್ವಶಾಸ್ತ್ರಜ್ಞರ ತಾಳ್ಮೆ ಮತ್ತು ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದ್ದು, ತಿರುವಣ್ಣಾಮಲೈನ ಕಿಲ್ನಮಂಡಿಯಲ್ಲಿ ಕಬ್ಬಿಣದ ವಸ್ತುಗಳೊಂದಿಗೆ ಸಾರ್ಕೊಫಾಗಸ್ ಅನ್ನು ಪತ್ತೆಹಚ್ಚಿದಾಗ. ಅಲ್ಲಿ ದೊರೆತ ಕಬ್ಬಿಣದ ವಸ್ತುಗಳ ಸಾಂಪ್ರದಾಯಿಕ ದಿನಾಂಕವು(conventional date) ಕ್ರಿ.ಪೂ 1450ರಷ್ಟು ಹಿಂದಿನದ್ದಾಗಿತ್ತು. ಮತ್ತು ಮಾಪನಾಂಕ ನಿರ್ಣಯಿಸಿದ ದಿನಾಂಕವು(calibrated dates) ಕ್ರಿ.ಪೂ 1769 ಮತ್ತು ಕ್ರಿ.ಪೂ 1615ರ ನಡುವೆ ಇತ್ತು, ಅಂತಿಮವಾಗಿ ಮಂಗಾಡುವಿನಲ್ಲಿ ದೊರೆತ ಕಬ್ಬಿಣಕ್ಕಿಂತ ಒಂದು ಶತಮಾನದಷ್ಟು ಹಿಂದಕ್ಕೆ ಸೂಚಿಸಿತು.

2021ರಿಂದ ಉತ್ಖನನಗಳನ್ನು ನಡೆಸಲಾಗುತ್ತಿದ್ದ ಕೃಷ್ಣಗಿರಿಯ ಮೈಲಾಡುಂಪರೈನಿಂದ ಅತಿಹೆಚ್ಚು ಪ್ರಾಚೀನ ವಸ್ತುಗಳು ಬೆಳಕಿಗೆ ಬಂದವು. ಇಲ್ಲಿ ದೊರೆತ ಅತ್ಯಂತ ಹಳೆಯ ಕಬ್ಬಿಣದ ವಸ್ತುಗಳು ಕ್ರಿ.ಪೂ 2172ಕ್ಕೆ ಸೇರಿದ್ದು, ಸೂಕ್ಷ್ಮ ಶಿಲಾಯುಗದ ಉಪಕರಣಗಳು, ನವಶಿಲಾಯುಗದ ಸೆಲ್ಟ್ ಗಳು(ಕೈಗೊಡಲಿ), ನವಶಿಲಾಯುಗದ ಹೊಳಪು ನೀಡುವ ಉಪಕರಣಗಳು, ಶಿಲಾ ವರ್ಣಚಿತ್ರಗಳು, ಕಪ್ಪು ಮತ್ತು ಕೆಂಪು ಪಾತ್ರೆಗಳು, ಸೆರಾಮಿಕ್ಸ್ ಉಪಕರಣಗಳು ಮತ್ತು ಕಬ್ಬಿಣಯುಗದ ಸಮಾಧಿಗಳಂತಹ ಸಾಂಸ್ಕೃತಿಕ ವಸ್ತುಗಳನ್ನು ಅಗೆದು ತೆಗೆಯಲಾಯಿತು. ಅಲ್ಲದೆ, ತಮಿಳು ಬ್ರಾಹ್ಮಿ ಲಿಪಿಯ ಮಡಿಕೆ ಚೂರುಗಳನ್ನು ಹೊರತೆಗೆಯಲಾಯಿತು.
ಅದೇ ಸಮಯದಲ್ಲಿ, ಆದಿಚನಲ್ಲೂರಿನ ಪುರಾತತ್ವ ಸ್ಥಳವನ್ನು ಎಎಸ್ಐ ಮತ್ತು ರಾಜ್ಯ ಪುರಾತತ್ವ ಇಲಾಖೆ ಎರಡೂ ಮರು ಉತ್ಖನನ ಮಾಡುತ್ತಿದ್ದವು. ಪ್ರಮುಖ ಪ್ರಾಚೀನ ವ್ಯಾಪಾರ ಬಂದರು ಮತ್ತು ಸಂಗಮ್ ಯುಗದ ಪಾಂಡ್ಯರ ರಾಜಧಾನಿ ಎಂದು ಗುರುತಿಸಲ್ಪಟ್ಟಿರುವ ಆದಿಚನಲ್ಲೂರ್ ಬಹುಶಃ ಅತ್ಯಂತ ಹಳೆಯ ಉತ್ಖನನ ತಾಣವಾಗಿದ್ದು, ಇದನ್ನು 1876ರಲ್ಲಿ ಜರ್ಮನಿಯ ಜನಾಂಗಶಾಸ್ತ್ರಜ್ಞ ಎಫ್ ಜಾಗೋರ್ ಮತ್ತು ನಂತರ 1902-04ರಲ್ಲಿ ಅಲೆಕ್ಸಾಂಡರ್ ರಿಯಾ, 2004-05 ರಲ್ಲಿ ಎಎಸ್ಐ ಮತ್ತು 2021-23 ರಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಉತ್ಖನನಗಳಿಂದ ಕಬ್ಬಿಣದ ಪರಿಚಯದ ಯುಗವನ್ನು 3ನೇ ಸಹಸ್ರಮಾನದಷ್ಟು ಹಿಂದಕ್ಕೆ ಸೂಚಿಸಿತು. ಸುಮಾರು 50 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸ್ಥಳದಲ್ಲಿ ಕಬ್ಬಿಣದ ಯುಗದ ಜನವಸತಿ ದಿಬ್ಬವನ್ನು ಎರಡು ಪ್ರದೇಶಗಳಲ್ಲಿ ಗುರುತಿಸಲಾಗಿದೆ- ಒಂದು ವೆಲ್ಲೂರು- ಆದಿಚನಲ್ಲೂರ್ ಕೆರೆಯ ಒಳಗೆ ಮತ್ತು ಇನ್ನೊಂದು ಇಂದಿನ ಆದಿಚನಲ್ಲೂರ್ ಗ್ರಾಮದೊಳಗೆ. ಈ ಜನವಸತಿ ದಿಬ್ಬದ ಉತ್ಖನನದಲ್ಲಿ ಕಪ್ಪು ಮತ್ತು ಕೆಂಪು ಪಾತ್ರೆಗಳು, ಕಪ್ಪು ಪಾಲಿಶ್ಡ್ ಪಾತ್ರೆಗಳು, ಬಿಳಿ ಬಣ್ಣದ ಕಪ್ಪು ಮತ್ತು ಕೆಂಪು ಪಾತ್ರೆಗಳು ಮತ್ತು ಕೆಂಪು ಪಾತ್ರೆಗಳು, ಕಬ್ಬಿಣದ ಉಪಕರಣಗಳು, ನೆಲದ ಮಟ್ಟಗಳ ಮೂರು ಹಂತಗಳು ಮತ್ತು 933 ಗೀಚುಬರಹವನ್ನು ಹೊಂದಿರುವ ಮಡಕೆಗಳು ಪತ್ತೆಯಾಗಿವೆ. ಕಬ್ಬಿಣದ ಸಹಯೋಗದೊಂದಿಗೆ ಸಂಗ್ರಹಿಸಿದ ಇದ್ದಿಲಿನ ಮಾದರಿಯನ್ನು ಕ್ರಿ.ಪೂ. 2060 (ಕ್ರಿ.ಪೂ. 4010± 30 ಬಿಪಿ)ಗೆ ಸೇರಿದೆ.
ಪುರಾತತ್ವಶಾಸ್ತ್ರದ ಪ್ರಕಾರ, ಆದಿಚನಲ್ಲೂರ್ ಸುತ್ತಮುತ್ತಲಿನ ಪ್ರದೇಶವು ಹೆಚ್ಚು ಮಹತ್ವದ್ದಾಗಿದೆ. ಮತ್ತು ಅದರ ಪಶ್ಚಿಮಕ್ಕೆ ಸುಮಾರು 15 ಕಿ.ಮೀ ದೂರದಲ್ಲಿ ಇರುವ ಮತ್ತೊಂದು ಪ್ರಮುಖ ತಾಣವೇ ಶಿವಗಲೈ, ಇದನ್ನು 2019-2022 ರ ನಡುವೆ ಏಕಕಾಲದಲ್ಲಿ ಉತ್ಖನನ ಮಾಡಲಾಯಿತು. ಈ ಸ್ಥಳವು ಎಂಟು ಪ್ರದೇಶಗಳು, ಮೂರು ಸಮಾಧಿ ದಿಬ್ಬಗಳು ಮತ್ತು ಐದು ಜನವಸತಿ ದಿಬ್ಬಗಳನ್ನು ಹೊಂದಿದೆ. ವಳಪ್ಪಲನ್ ಪಿಳ್ಳೈ- ತಿರಡು ಎಂದು ಕರೆಯಲ್ಪಡುವ ಜನವಸತಿ ದಿಬ್ಬದಲ್ಲಿ, ಕ್ರಿ.ಪೂ. 685ಕ್ಕೆ ಸೇರಿದ ಕಂದಕವನ್ನು (ಟ್ರೆಂಚ್ ಎ1) ಹಾಕಲಾಯಿತು. ಶಿವಗಲೈ-ಪರಂಪುರದ ಸಮಾಧಿ ದಿಬ್ಬಗಳಲ್ಲಿ ಒಂದರಲ್ಲಿ, ಒಟ್ಟು 24 ಕಂದಕಗಳನ್ನು ಉತ್ಖನನ ಮಾಡಲಾಯಿತು, ಇದರಲ್ಲಿ 160 ಪಾತ್ರೆಗಳು ದೊರೆತವು- ಒಂಬತ್ತು ಕಪ್ಪು ಮತ್ತು ಕೆಂಪು ಪಾತ್ರೆಗಳು ಮತ್ತು 151 ಕೆಂಪು ಪಾತ್ರೆ ಸಮಾಧಿಗಳು, ಚಾಕುಗಳು, ಬಾಣದ ತಲೆಗಳು, ಉಂಗುರಗಳು, ಉಳಿಗಳು, ಕೊಡಲಿಗಳು ಮತ್ತು ಕತ್ತಿಗಳು ಸೇರಿದಂತೆ 85ಕ್ಕೂ ಹೆಚ್ಚು ಕಬ್ಬಿಣದ ವಸ್ತುಗಳನ್ನು ಪಾತ್ರೆಗಳ ಒಳಗೆ ಮತ್ತು ಹೊರಗೆ ವಿವಿಧ ಹಂತಗಳಿಂದ ಸಂಗ್ರಹಿಸಲಾಗಿದೆ.

ಶಿವಗಲೈ ಸಂಶೋಧನೆಗಳ ಜೊತೆಗೆ, ರಾಜ್ಯದ 140 ಪುರಾತತ್ವ ತಾಣಗಳಲ್ಲಿ ಕಂಡುಬರುವ ಪ್ರಾಚೀನ ಗೀಚುಬರಹದ ಗುರುತುಗಳಲ್ಲಿ ಶೇ. 90ಕ್ಕೂ ಹೆಚ್ಚು ಸಿಂಧೂ ಕಣಿವೆ ನಾಗರಿಕತೆ(ಸರಿಸುಮಾರು ಕ್ರಿ.ಪೂ 3300 ರಿಂದ ಕ್ರಿ.ಪೂ 1300 ರವರೆಗೆ ಪ್ರವರ್ಧಮಾನಕ್ಕೆ ಬಂದಿತು)ಯೊಂದಿಗೆ ಹೋಲಿಕೆಗಳನ್ನು ಹಂಚಿಕೊಳ್ಳುತ್ತವೆ ಎಂದು ತಮಿಳುನಾಡು ಪುರಾತತ್ವ ಇಲಾಖೆ ಬಹಿರಂಗಪಡಿಸಿದೆ. ಈ ಅಧ್ಯಯನದ ಸಹ-ಲೇಖಕರಲ್ಲಿ ಒಬ್ಬರಾದ ಕೆ. ರಾಜನ್, “ಇತ್ತೀಚಿನ ರೇಡಿಯೋಕಾರ್ಬನ್ ದಿನಾಂಕಗಳು ಸಿಂಧೂ ಕಣಿವೆಯು ತಾಮ್ರದ ಯುಗವನ್ನು ಅನುಭವಿಸಿದಾಗ, ದಕ್ಷಿಣ ಭಾರತವು ಅದಾಗಲೇ ಕಬ್ಬಿಣದ ಯುಗದಲ್ಲಿತ್ತು ಎಂದು ಸೂಚಿಸುತ್ತದೆ. ಈ ಅರ್ಥದಲ್ಲಿ, ದಕ್ಷಿಣ ಭಾರತದ ಕಬ್ಬಿಣದ ಯುಗ ಮತ್ತು ಸಿಂಧೂ ತಾಮ್ರದ ಯುಗ ಸಮಕಾಲೀನವಾಗಿವೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಏಕರೂಪ ನಾಗರಿಕ ಸಂಹಿತೆ | ಅಲ್ಪಸಂಖ್ಯಾತರ ಮೇಲೆ ಹಿಂದುತ್ವದ ಹೇರಿಕೆ!
ಶಿವಗಲೈನಿಂದ ಪಡೆದ ಮಾದರಿಗಳನ್ನು ಮೂರು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ವಿಶ್ಲೇಷಿಸಿದ್ದು, ಅಮೆರಿಕಾದ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್ನ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಕ್ನೋದ ಬೀರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸಸ್ ಎಂಬ ಮೂರು ಪ್ರಯೋಗಾಲಯಗಳಲ್ಲಿಯೂ ಸಂಶೋಧನೆಗಳು ಸ್ಥಿರವಾಗಿದ್ದವು ಮತ್ತು ದಿನಾಂಕಗಳು ಗಮನಾರ್ಹ ಹೊಂದಾಣಿಕೆಯನ್ನು ತೋರಿಸಿವೆ. ಆದ್ದರಿಂದ, ಈ ಹೊಸ ದಿನಾಂಕಗಳು ತಮಿಳುನಾಡನ್ನು ಕಬ್ಬಿಣದ ಯುಗದ ಅತ್ಯಂತ ಹಳೆಯ ನಾಗರಿಕತೆಯ ತಾಣವೆಂದು ಸೂಚಿಸುತ್ತದೆ, ಮತ್ತು ಇದು ವಿಶ್ವದ ಅತ್ಯಂತ ಹಳೆಯ ನಾಗರಿಕತೆಯಾಗಿದೆ.
ಜಗತ್ತಿನಲ್ಲಿಯೇ ಕಬ್ಬಿಣದ ಅದಿರಿನಿಂದ ಕಬ್ಬಿಣದ ಲೋಹದ ಉತ್ಪಾದನೆಯು ಕ್ರಿ.ಪೂ. ಎರಡನೇ ಸಹಸ್ರಮಾನದ ಮಧ್ಯಭಾಗದಲ್ಲಿ ಮಾತ್ರ ಪ್ರಾರಂಭವಾಯಿತು ಎಂದು ಇದುವರೆಗೂ ನಂಬಲಾಗಿತ್ತು. ಅನಾಟೋಲಿಯಾ ಮತ್ತು ಕಾಕಸಸ್ನಲ್ಲಿ, ಕಬ್ಬಿಣದ ಯುಗವು ಕ್ರಿ.ಪೂ 2 ನೇ ಸಹಸ್ರಮಾನದ ಉತ್ತರಾರ್ಧದಲ್ಲಿ (ಕ್ರಿ.ಪೂ. 1300) ಪ್ರಾರಂಭವಾಯಿತು. ಪ್ರಾಚೀನ ನಿಯರ್ ಈಸ್ಟ್ನಲ್ಲಿ, ಕಬ್ಬಿಣದ ಬಳಕೆಯು ಸರಿಸುಮಾರು ಕ್ರಿ.ಪೂ 12 ನೇ ಶತಮಾನದಲ್ಲಿ (ಕ್ರಿ.ಪೂ 1200–1100) ಆರಂಭಗೊಂಡಿತು. ಚೀನಾ, ಮಧ್ಯ ಮತ್ತು ಪಶ್ಚಿಮ ಯುರೋಪ್, ಉತ್ತರ ಯುರೋಪ್ ಮತ್ತು ಉತ್ತರ ಸ್ಕ್ಯಾಂಡಿನೇವಿಯನ್ ಯುರೋಪ್ನಲ್ಲಿ ಕ್ರಮವಾಗಿ ಕ್ರಿ.ಪೂ. 900, ಕ್ರಿ.ಪೂ. 800, ಕ್ರಿ.ಪೂ. 600 ಮತ್ತು ಕ್ರಿ.ಪೂ. 500 ರ ದಿನಾಂಕಗಳನ್ನು ಕಬ್ಬಿಣದ ಯುಗದ ಪ್ರಾರಂಭವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಕಬ್ಬಿಣವನ್ನು ಬಳಸುತ್ತಿದ್ದ ಕಾಲಮಾನವು ವಿವಿಧ ವಿದ್ವಾಂಸರ ಪ್ರಯತ್ನದಿಂದಾಗಿ ಕ್ರಿ.ಪೂ 1100 ರಿಂದ ಕ್ರಿ.ಪೂ 2 ನೇ ಸಹಸ್ರಮಾನದಷ್ಟು ಹಿಂದಕ್ಕೆ ಸಾಗಿತ್ತು. ಆದರೆ ಹೊಸ ಅಧ್ಯಯನದ ಫಲವಾಗಿ ಕ್ರಿ.ಪೂ. 3345 ರಷ್ಟು ಹಿಂದೆಯಿಂದಲೇ ಕಬ್ಬಿಣದ ಯುಗ ಆರಂಭಗೊಂಡಿರುವುದನ್ನು ಸೂಚಿಸಿದೆ. ಅಂದರೆ ತಮಿಳು ಭೂಪ್ರದೇಶದಲ್ಲಿ 5,300 ವರ್ಷಗಳ ಹಿಂದೆಯೇ ಕಬ್ಬಿಣದ ಬಳಕೆ ಆರಂಭಗೊಂಡಿದೆ ಎಂಬುದಕ್ಕೆ ಬಲವಾದ ಸಾಕ್ಷಿಗಳು ದೊರಕಿವೆ.

ಈ 80 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾದ ಪುರಾತತ್ವ ಸಂಶೋಧನೆಗಳು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಮತ್ತು ವಿವಿಧ ವಿಶ್ವವಿದ್ಯಾಲಯಗಳ ಪುರಾತತ್ವಶಾಸ್ತ್ರಜ್ಞರು ಮತ್ತು ತಜ್ಞರ ತಂಡದವರು ಮಾಡಿದ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಹಾಗಾಗಿ, ಇದು ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿರುವುದರಿಂದ, ಈ ಹಕ್ಕುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು, ಸಂಶೋಧನೆಗಳನ್ನು ಮುಕ್ತ ಮನಸ್ಸಿನಿಂದ ಮತ್ತು ವಿಶಾಲವಾದ ಶೈಕ್ಷಣಿಕ ಮನೋಭಾವದಿಂದ ಅಧ್ಯಯನ ಮಾಡಬೇಕಿದೆ.
ಏಕೆಂದರೆ ಈಗಾಗಲೇ ನಡೆದಿರುವ ಅಧ್ಯಯನಗಳು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಉದಾಹರಣೆಗೆ, ಈ ಕಬ್ಬಿಣದ ಉಪಕರಣಗಳನ್ನು ಇತರ ಸಮಕಾಲೀನ ತಾಣಗಳಿಗೆ ಹೇಗೆ ಹರಡಲಾಯಿತು ಅಥವಾ ವ್ಯಾಪಾರ ಮಾಡಲಾಯಿತು? ನೆರೆಯ ಕರ್ನಾಟಕ (ಕ್ರಿ.ಪೂ 2140) ಮತ್ತು ಆಂಧ್ರಪ್ರದೇಶದಲ್ಲಿಯೂ (ಕ್ರಿ.ಪೂ 2200) ಇದೇ ರೀತಿಯ ಪ್ರಾಚೀನ ಕಬ್ಬಿಣದ ಬಳಕೆಯ ಮಾದರಿಗಳು ದೊರಕಿರುವಾಗ, ಪ್ರಾದೇಶಿಕ ವಿನಿಮಯವನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಾವು ಪ್ರಾದೇಶಿಕ ವ್ಯತ್ಯಾಸಗಳನ್ನು ಗಮನಿಸಿದ್ದೇವೆಯೇ? ಕೃಷ್ಣಗಿರಿ ಜಿಲ್ಲೆ ಕರ್ನಾಟಕಕ್ಕೆ ಬಹಳ ಹತ್ತಿರವಿರುವುದರಿಂದ ಕಬ್ಬಿಣ ಯುಗದ ಕಾಲಾವಧಿಯ ದಿನಾಂಕಗಳ ವಿಷಯದಲ್ಲಿ ಸಾಕಷ್ಟು ಅಂತರ ಇರುವುದರಿಂದ, ಈ ಸಂಸ್ಕೃತಿಯು ಒಂದೇ ಆಗಿ ಉಳಿದಿದೆಯೇ? ಏಕೆಂದರೆ ಯಾವುದೇ ಸಂಸ್ಕೃತಿಯು ಭೌತಿಕವಾಗಿ ಎರಡು ಸಾವಿರ ವರ್ಷಗಳವರೆಗೆ ಸ್ಥಿರವಾಗಿ ಉಳಿಯಬಲ್ಲದೇ?
ಆದಿಚನಲ್ಲೂರಿನಲ್ಲಿ, ಸರಿಸುಮಾರು ಕ್ರಿ.ಪೂ 2060ರ ಕಬ್ಬಿಣದ ಜೊತೆಗೆ ದೊಡ್ಡ ಪ್ರಮಾಣದ ಕಂಚು ಕಂಡು ಬಂದಿರುವುದರಿಂದ, ಸಾವಿರಾರು ವರ್ಷಗಳ ಹಿಂದೆ ಕಬ್ಬಿಣದ ಯುಗ ಮತ್ತು ಕಂಚಿನ ಯುಗದ ಸಂಸ್ಕೃತಿಗಳ ನಡುವಿನ ಸಂಬಂಧವೇನು? ಹೀಗೆ, ವಿವಿಧ ಆಯಾಮಗಳಲ್ಲಿ ಇನ್ನಷ್ಟು ಗ್ರಹಿಸಬೇಕಿದೆ ಮತ್ತು ಉದ್ಭವಿಸಿರುವ ಪ್ರಶ್ನೆಗಳಿಗೆ ದಕ್ಷಿಣ ಭಾರತೀಯರ ಲೋಹಶಾಸ್ತ್ರದ ಪ್ರಾಚೀನತೆ ಮತ್ತು ಜ್ಞಾನದ ಕುರಿತಂತೆ ಹೆಚ್ಚಿನ ಸಂಶೋಧನೆಗಳು ತಮಿಳುನಾಡು ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿಯೂ ನಡೆಯಬೇಕಿದೆ. ಹಾಗಾದಲ್ಲಿ ದಕ್ಷಿಣ ಭಾರತದ ಕಬ್ಬಿಣದ ಯುಗವನ್ನು ಸಮಗ್ರವಾಗಿ ಗ್ರಹಿಸಬಹುದಾಗಿದೆ.
ಆಕಾರ: ಟೈಮ್ಸ್ ಆಫ್ ಇಂಡಿಯಾ, ದಿ ಪ್ರಿಂಟ್, ಪುರಾತತ್ವ ಇಲಾಖೆ, ತಮಿಳುನಾಡು ಸರ್ಕಾರದ ಲೇಖನಗಳನ್ನು ಆಧರಿಸಿದೆ.
Iron age limited to a certain area is a wrong presumption, because inventions/developments/improvements spread to neighboring areas with local modifications and improvements to suit?