ಯಾವುದೇ ಸರ್ಕಾರ ಬರಲಿ. ಅದು ಜನರಿಗೆ ಅನ್ನ, ಆರೋಗ್ಯ, ಶಿಕ್ಷಣ ಮತ್ತು ನೆಮ್ಮದಿಯ ಜೀವನ ನಡೆಸಲು ಪೂರಕವಾಗುವ ರೀತಿಯ ಕಾನೂನು ಸುವ್ಯವಸ್ಥೆಯನ್ನು ಒದಗಿಸಬೇಕಿದೆ. ಇದು ಸಂವಿಧಾನದ ಆಶಯ ಕೂಡ.
ಜನಸಾಮಾನ್ಯರ ಸಂಕಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನವನ್ನೇ ಮಾಡದ ಒಂದು ಸರ್ಕಾರವನ್ನು ‘ಮತಾಧಿಕಾರ’ ಉಪಯೋಗಿಸಿ ಕರ್ನಾಟಕದ ಜನ ಅಧಿಕಾರದಿಂದ ಕೆಳಗಿಳಿಸಿದ್ದು ಅಭಿನಂದನೀಯ. ಕಾಂಗ್ರೆಸ್ ನೀಡಿದ ‘ಗ್ಯಾರಂಟಿ’ಗಳ ಬಗ್ಗೆ ಬಹಳ ಲಘುವಾದ ಲೇವಡಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿವೆ.
ಇದು ಬಡವರ ದಿನನಿತ್ಯದ ಬದುಕು ದುಸ್ತರವಾಗಿರುವ ಒಂದು ಅಸಹಾಯಕ ವರ್ಗದ ನೋವಿನ ಬಗ್ಗೆ ಉಳ್ಳವರಿಗಿರುವ ತಾತ್ಸಾರ ಮನೋಭಾವ ಮತ್ತು ವಿವೇಕ ಶೂನ್ಯ ನಿಲುವು ಎನ್ನಬೇಕಾಗುತ್ತದೆ. ಹಸಿವಿನ ಸಂಕಟ ಹೊಟ್ಟೆ ತುಂಬಿದವನಿಗೆ ತಿಳಿಯಲು ಸಾಧ್ಯವಿಲ್ಲ.
ಮೊದಲನೆಯದಾಗಿ, ಕಾಂಗ್ರೆಸ್ ಘೋಷಿಸಿರುವ ಈ ಗ್ಯಾರಂಟಿಗಳು ಯಾರಿಗೆ ದಕ್ಕಬೇಕು? ಇದು ನೀಡಬೇಕಿರುವುದು ಯಾರಿಗೆ? ಆದಾಯದ ಮೂಲವಿಲ್ಲದೆ ದಿನನಿತ್ಯದ ಖರ್ಚು ನಿಭಾಯಿಸಲಾಗದೆ ತೊಂದರೆ ಅನುಭವಿಸುವವರಿಗೆ.
ದಕ್ಷಿಣ ಕನ್ನಡ, ಉಡುಪಿ ಅಂತಹ ಜಾಗದಲ್ಲಿ ಹೆಚ್ಚಿನ ಜನರಿಗೆ ಇದರ ಅಗತ್ಯವಿಲ್ಲದಿರಬಹುದು. ಆದರೆ ನಮ್ಮ ಜಿಲ್ಲೆಗೆ ಭಾರತದ ಬೇರೆ ಬೇರೆ ಭಾಗದಿಂದ ವಲಸೆ ಬಂದು ದುಡಿಯುವ ಶ್ರಮಿಕರು ಇಲ್ಲಿ ಯಾಕೆ ಬಂದಿದ್ದಾರೆ ಎಂದು ಆಲೋಚಿಸಿದರೆ, ಜೀವನ ನಿರ್ವಹಣೆ ಕೆಲವು ಕಡೆ ಎಷ್ಟು ಕಷ್ಟವಾಗಿದೆ ಎಂದು ತಿಳಿಯುತ್ತದೆ.
ಎರಡನೆಯದಾಗಿ, ಈ ಯೋಜನೆಗಳು ಯಾರಿಗೆ ಅದರ ಅಗತ್ಯವಿದೆಯೋ ಅಂಥವರಿಗೆ ಸಿಗಬೇಕು. ರೇಷನ್ ಅಕ್ಕಿಯನ್ನು ಪಡೆದು ಬೇರೆಯವರಿಗೆ ಮಾರುವವರಿಗಲ್ಲ ಅಥವಾ ಅದನ್ನು ದುರುಪಯೋಗ ಮಾಡುವವರಿಗಲ್ಲ. ಒಂದು ವೇಳೆ, ಹಾಗೆ ಮಾಡಿದರೆ ಅದು ಸರ್ಕಾರದ ತಪ್ಪಲ್ಲ. ಬದಲಿಗೆ ಅವಕಾಶವನ್ನು ಸವಲತ್ತನ್ನು ದುರುಪಯೋಗ ಮಾಡಿಕೊಳ್ಳುವ ಸಮಾಜ ವಿರೋಧಿಗಳ ತಪ್ಪು.

ಇವತ್ತು ಶಿಕ್ಷಣ, ಆರೋಗ್ಯ, ಸಾರಿಗೆ ಸಂಪರ್ಕ ವ್ಯವಸ್ಥೆ ಜನಸಾಮಾನ್ಯರ ಆದಾಯದ ದೊಡ್ಡಪಾಲನ್ನು ಕಬಳಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹಾಯ ಮಾಡಿದರೆ ಆಗ ಜನರ ಕೈಯಲ್ಲಿ ಇತರ ಅಗತ್ಯಗಳಿಗಾಗಿ ಹೆಚ್ಚಿನ ಹಣಕಾಸು ಲಭ್ಯವಿರುತ್ತದೆ. ಬಡವರ್ಗದ ಜನ ಹೀಗೆ ಲಭ್ಯವಿರುವ ಹಣವನ್ನು ಇತರ ಸವಲತ್ತು ಪಡೆಯಲು ವೆಚ್ಚ ಮಾಡುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ವಸ್ತು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದರೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಉತ್ಪಾದನೆ ಹೆಚ್ಚಾದರೆ ಉದ್ಯೋಗಾವಕಾಶಗಳೂ ಹೆಚ್ಚಾಗುತ್ತದೆ. ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದರೆ ಸಮಾಜದಲ್ಲಿ ಸ್ಥಿರತೆ ಶಾಂತಿ ನೆಲೆಗೊಳ್ಳಲು ಪರೋಕ್ಷವಾಗಿ ಕಾರಣವಾಗುತ್ತದೆ.
ಇದನ್ನು ಓದಿದ್ದೀರಾ? ಕರ್ನಾಟಕ ಚುನಾವಣೆ | ಯಡಿಯೂರಪ್ಪ ಕಣ್ಣೀರಿಗೆ ಭಾರಿ ಬೆಲೆತೆತ್ತ ಬಿಜೆಪಿ
ಮೂರನೇಯದಾಗಿ, ಸರ್ಕಾರ ನೀಡುವ ಯಾವುದೇ ಯೋಜನೆ ಜನರಿಗೆ ತಲುಪುವಂತೆ ಮಾಡುವಲ್ಲಿ ಜನರ ಸಹಕಾರ ಕೂಡ ಅಗತ್ಯವಿರುತ್ತದೆ. ದಾನ ತಪ್ಪಲ್ಲ. ಯಾಕೆಂದರೆ ದಾನದ ಹಿಂದಿರುವ ಆಶಯ ಯಾರಿಗೆ ಅದರ ಅಗತ್ಯವಿದೆಯೋ, ಅಂತವರಿಗೆ ಅದು ತಲುಪುವುದು. ಒಂದು ವೇಳೆ ಯಾರಿಗೆ ಅದರ ಅಗತ್ಯವಿರುವುದಿಲ್ಲ ಅಂತವರು ಅದನ್ನು ನಿರಾಕರಿಸಬಹುದು.
ದಾನ ಪಡೆದ ವ್ಯಕ್ತಿಗೂ ಒಂದು ಬಾಧ್ಯತೆ ಇರುತ್ತದೆ. ಪಡೆದ ಸವಲತ್ತನ್ನು ಸದುಪಯೋಗ ಕೊಂಡು ಸಾಮಾಜಿಕ ಉತ್ತರದಾಯಿತ್ವವನ್ನು ನಿಭಾಯಿಸಬೇಕಿದೆ. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಮಗೆ ಕಲಿಸಿದ ಪಾಠ. ಸಂಸ್ಕೃತಿ-ಪರಂಪರೆ ಧರ್ಮವನ್ನು ಸರಿಯಾಗಿ ತಿಳಿದವರಿಗೆ ಇದು ಗೊತ್ತಿರುತ್ತದೆ. ಇಲ್ಲವಾದರೆ, ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.
ಯಾವುದೇ ಸರಕಾರ ಬರಲಿ. ಅದು ಜನರಿಗೆ ಅನ್ನ, ಆರೋಗ್ಯ, ಶಿಕ್ಷಣ ಮತ್ತು ನೆಮ್ಮದಿಯ ಜೀವನ ನಡೆಸಲು ಪೂರಕವಾಗುವ ರೀತಿಯ ಕಾನೂನು ಸುವ್ಯವಸ್ಥೆಯನ್ನು ಒದಗಿಸಬೇಕಿದೆ. ಇದು ಸಂವಿಧಾನದ ಆಶಯ ಕೂಡ ಹೌದು. ಇಂತಹ ಉದಾತ್ತವಾದ ಸಾಂವಿಧಾನಿಕ ಆಶಯವನ್ನು ಅರಿತು ನಡೆಯಲು ಪಕ್ಷದ ಚಿಹ್ನೆಗಳು ನಮ್ಮ ದೂರದೃಷ್ಟಿಗೆ ಅಡ್ಡಿ ಬಾರದಿರಲಿ.

ಡಾ ಉದಯ್ ಕುಮಾರ್ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು
ಯಾವುದೇ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಹೇಳುವ ಪ್ರಣಾಳಿಕೆ ಗಳಿಗೆ ಲೇವಡಿ ಉತ್ತರ ಕೊಡುವುದು ಅವರು ಮನಸ್ತಿತಿಯನ್ನು ತೋರಿಸುತ್ತದೆ
ಆಯ್ಕೆಗೊಂಡ ಪಕ್ಷವು ಪ್ರಜೆಗಳಿಗೆ ಭ್ರಮನಿರಸನಗೊಳಿಸಬಾರದು
ಸರ್ಕಾರ ಕೊಡುವಂತ ಸೌಲಭ್ಯಗಳು ಅರ್ಹತೆ ಇರುವವರಿಗೆ ಮಾತ್ರ ಸಿಗಬೇಕು.
ತಾರತಮ್ಯವಾಗಲಿ ಪೂರ್ವಾಗ್ರಹವಾಗಲಿ ಖಂಡಿತ ಸಲ್ಲದು
ಜನಪ್ರತಿನಿದಿಗಳಲ್ಲಿ ಕಾಯಕ ನಿಷ್ಟೆ ಇರಬೇಕು
ಸರಳತೆ ಮೈಗೂಡಿಸಿಕೊಳ್ಳಬೇಕು
ಸದಾವಕಾಶ ಸದ್ಬಳಕೆ ಮಾಡಿಕೊಳ್ಳಬೇಕು
ಮುಂದಿನ ದಿನಗಳಲ್ಲಿ ಅವರ ಮೂರ್ತಿಗಳಿಗಿಂತ ಅವರ ಸ್ಪೂರ್ತಿಯಿಂದ ಸಮಾಜ ಮುಂದುವರಿಯಬೇಕು
ಯಥಾ ಜನಪ್ರತಿನಿಧಿ ತಥಾ ಪ್ರಜಾ
ಪ್ರಜೆಗಳಲ್ಲೂ ಸರ್ವೆಜನಸುಖಿನೋಭವ ಎಂಬ ಮನಸ್ಥಿತಿ ಬೆಳೆಸಿಕೊಳ್ಳಬೇಕು
This analysis is aptly given , the state does not need access to Gods which are already available in Plenty , but needs initiatives that make food more accesible to the poor that are carried out very transparently