2023 ವರ್ಷದ ಅಂತ್ಯದಲ್ಲಿ ಬಂದ ಕಾಟೇರ ಸಿನಿಮಾ ಹಣಗಳಿಕೆಯಲ್ಲಿ ಮತ್ತು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಪ್ರೇಕ್ಷಕ ಮತ್ತು ಕನ್ನಡ ಚಿತ್ರರಂಗ ಹೊಸ ಆಲೋಚನೆಗಳಿಗೆ ಹೊರಳ ಬೇಕಾದ, ಕಲಿಕೆಯ ವಿಷಯವಾಗಿ ಬಹಳ ಮುಖ್ಯವಾಗುತ್ತದೆ.
ತರುಣ್ ಸುಧೀರ್ ನಿರ್ದೇಶನದ ʼಕಾಟೇರʼ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದೆ. ಇದೊಂದು ವಿಶೇಷವಾದ ವಿದ್ಯಮಾನ ಯಾಕೆಂದರೆ ಸಾಮಾನ್ಯವಾಗಿ ದರ್ಶನ್ ಅಭಿನಯದ ಅದ್ದೂರಿ ಸಿನಿಮಾಗಳು ಅವರ ಅಭಿಮಾನ ಬಳಗವೇ ಸಿನಿಮಾದ ಯಶಸ್ಸಿಗೆ ಕಾರಣವಾಗುವುದರ ಹೊರತಾಗಿ ಕಾಟೇರವನ್ನು ಇತರರು ಕುತೂಹಲದಿಂದ ನೋಡಲು ಧಾವಿಸುತ್ತಿರುವುದು. ದರ್ಶನ್ ಎಂಬ ಸ್ಟಾರ್‌ನ ಇಮೇಜಿಗೆ ತಕ್ಕಂತೆ ಕತೆಯನ್ನು ಹೊಸೆದು ಒಂದಷ್ಟು ಡ್ಯೂಯೆಟ್ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಿ, ಮತ್ತೊಂದಷ್ಟು ಫೈಟ್ ಸೀನ್ ಗಳನ್ನ ಪೋಣಿಸುವ ಕಥಾವಸ್ತು ಇರುವ ಸಂಪ್ರದಾಯವನ್ನು ಈ ಸಿನಿಮಾ ಮುರಿದಿರುವುದು.
ಕಾಟೇರ ಸಿನಿಮಾದ ಮೂಲ ಕತೆ 1974ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ತಂದ ಉಳುವವನೇ ಭೂಮಿ ಒಡೆಯ – ಭೂ ಸುಧಾರಣೆ ಕಾಯ್ದೆ ಕುರಿತದ್ದು. ಆದರೆ, ಅಷ್ಟಕ್ಕೆ ಸಿಮೀತವಾಗದೆ ಅದರೊಂದಿಗೆ ತಳಸಮುದಾಯದ ಮೇಲೆ ಆಗುತ್ತಿದ್ದ ಮೇಲ್ಜಾತಿಯ ಜಾತಿ ತಾರತಮ್ಯ, ಅಮಾನವೀಯ ಶೋಷಣೆಗಳನ್ನು ಹಲವು ದೃಶ್ಯಕಟ್ಟುಗಳಲ್ಲಿ ದಿಟ್ಟವಾಗಿ ಕಟ್ಟಿಕೊಡುತ್ತದೆ. ಜನಪ್ರಿಯ ಅಥವಾ ಕಮರ್ಷಿಯಲ್ ಸೂಪರ್ ಸ್ಟಾರ್ ನಟನೊಬ್ಬನ ಸಿನಿಮಾದಲ್ಲಿ ಫ್ಯೂಡಲ್ ಮನಸ್ಥಿತಿಯ ಜಮೀನ್ದಾರರು ಮತ್ತು ಬ್ರಾಹ್ಮಣರೇ ಆದ ಶಾನುಭೋಗರ ಪಾತ್ರಗಳನ್ನು ವಸ್ತುನಿಷ್ಟವಾಗಿ ಚಿತ್ರಿಸಿ, ತಳಸಮುದಾಯದ ಶತಮಾನದ ನೋವು ಸಂಕಟಗಳನ್ನು ತೆರೆಗೆ ತಂದಿರುವುದು ಕನ್ನಡ ಸಿನಿಮಾ ಇತಿಹಾಸದಲ್ಲಿ ಮೊದಲೆಂದೇ ಹೇಳಬಹುದು.
ಅದೇ ಕಾರಣವಾಗಿ ಕಾಟೇರ ಸಿನಿಮಾ ನೋಡಿ ಬೆರಗಾದ ಸಿನಿಮಾ ಕುತೂಹಲಿಗಳು, ವಿಮರ್ಶಕರು, ಸಿನಿಮಾ ಅಧ್ಯಯನಿಗಳು, ಪ್ರಾಧ್ಯಾಪಕರು… ಬಹಳಷ್ಟು ಮಂದಿ ಹಲವು ದೃಷ್ಟಿಕೋನದಲ್ಲಿ ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿ ಬರೆಯುತ್ತಿದ್ದಾರೆ. ಸಿನಿಮಾ ಯಶಸ್ಸಿಗೆ ಕಾರಣಗಳನ್ನು ವಿಶ್ಲೇಷಿಸುತ್ತ, ಈ ಕಾಲಘಟ್ಟದಲ್ಲಿ ಅದರ ಪ್ರಸ್ತುತತೆ ಬಗ್ಗೆ ಚರ್ಚಿಸುತ್ತಿದ್ದಾರೆ. ಇಂಥ ಧನಾತ್ಮಕ ಚಿಂತನೆಗಳ ನಡುವೆಯೇ ಕೆಲವು ಅಪಸ್ವರಗಳು ಕೇಳಿ ಬರುತ್ತಿವೆ.
ನಾಗರಿಕ ಸಮಾಜದ ಇಪ್ಪತ್ತೊಂದನೇ ಶತಮಾನದ ಈ ಕಾಲಘಟ್ಟದಲ್ಲೂ ಅಸ್ಪೃಶ್ಯತೆಯನ್ನು ಸಮರ್ಥಿಸುವವರ ದಂಡೇ ಇದೆ. ಬ್ರಾಹ್ಮಣ ಮನಸ್ಥಿತಿಯ ಅವರೆಲ್ಲಾ ಹೆಚ್ವಾಗಿ ವಿದ್ಯಾವಂತ, ಅನುಕೂಲವಂತರು. ಅವರೆಲ್ಲಾ ಕಾಟೇರ ಸಿನಿಮಾ ನೋಡಿ ಅಸಹನೆಗೊಂಡಿದ್ದಾರೆ, ಚಡಪಡಿಸುತ್ತಿದ್ದಾರೆ. ಕಡ್ಡಿ ಮುರಿದ ಹಾಗೆ ಜಾತಿ ಶ್ರೇಣೀಕೃತ ವ್ಯವಸ್ಥೆಯನ್ನು ಖಂಡಿಸುವ ಬದಲಿಗೆ – ಅದು ಆ ಕಾಲದಲ್ಲಿತ್ತು ಈಗಿಲ್ಲ ಎಂದೋ, ಅದನ್ನು ಬ್ರಾಹ್ಮಣರು ಮಾಡಲಿಲ್ಲ ಶತಮಾನಗಳಿಂದಲೂ ಅದು ತಾನೇ ಇದ್ದದ್ದು ಎಂದೋ, ಒಬಿಸಿ ತಳಸಮುದಾಯಗಳಲ್ಲೂ ಅಸ್ಪಶೃತೆ ಆಚರಣೆ ಇದೆಯೆಂದೋ, ಕುತರ್ಕ ಮಂಡಿಸುತ್ತಿದ್ದಾರೆ. ಇನ್ನೂ ಕೆಲವರು ಮುಂದೆ ಹೋಗಿ ಸಿನಿಮಾದ ಕೊನೆಯಲ್ಲಿ ಬರುವ ಬ್ರಾಹ್ಮಣನ ಹತ್ಯೆಯು ಸಿನಿಮಾದ ಆಶಯಕ್ಕೆ ಪೂರಕವಾಗಿಲ್ಲ ಎಂದು ನಿರ್ದೇಶಕನ ಸಿನಿಮ್ಯಾಟಿಕ್ ಲಿಬರ್ಟಿಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಆ ಸಾವು ಒಂದು ರೂಪಕವಾಗಿದೆ. ಬ್ರಾಹ್ಮಣತ್ವದ ಹತ್ಯೆಯಾದರೆ ಸಮಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತದೆ ಎಂದು ಅವರು ಗ್ರಹಿಸುತ್ತಿಲ್ಲ. ಅದೇನೇ ಇದ್ದರೂ ಕಾಟೇರ ಎತ್ತಿದ ಪ್ರಶ್ನೆಗಳು ಚರ್ಚೆಗೆ ಒಳಗಾಗುತ್ತಿರುವುದು ಸಮಾಜದ ಆರೋಗ್ಯಕ್ಕೆ ಒಳ್ಳೆಯದು.
2023 ವರ್ಷದ ಅಂತ್ಯದಲ್ಲಿ ಬಂದ ಕಾಟೇರ ಸಿನಿಮಾ ಹಣಗಳಿಕೆಯಲ್ಲಿ ಮತ್ತು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಪ್ರೇಕ್ಷಕ ಮತ್ತು ಕನ್ನಡ ಚಿತ್ರರಂಗ ಹೊಸ ಆಲೋಚನೆಗಳಿಗೆ ಹೊರಳ ಬೇಕಾದ, ಕಲಿಕೆಯ ವಿಷಯವಾಗಿ ಬಹಳ ಮುಖ್ಯವಾಗುತ್ತದೆ.
ತಮಿಳು, ಮಲಯಾಳಮ್, ಮರಾಠಿ ಭಾಷೆಯ ತಳಸಮುದಾಯದ ಕತೆಯ ಸಿನಿಮಾಗಳನ್ನು ನೋಡುತ್ತ, ಕನ್ನಡದಲ್ಲಿ ಅಂತಹ ಸಿನಿಮಾ ಬರುತ್ತಿಲ್ಲ ಎಂದು ಹಲುಬುವವರಿಗೆ ಕಾಟೇರ ಉತ್ತರವಾಗಿದೆ ಮತ್ತು ಈ ನೆಲದ ಮಕ್ಕಳ ಕತೆಯನ್ನು ಜನಪ್ರಿಯ ಸಿನಿಮಾವಾಗಿಸಬಹುದಾದ ಸಾಧ್ಯತೆಯನ್ನು ಕಾಟೇರ ಕಟ್ಟಿಕೊಟ್ಟಿದೆ. ಅದನ್ನು ಮುಂದಕ್ಕೆ ಕೊಂಡೊಯ್ಯವ ಜವಾಬ್ದಾರಿ ಕನ್ನಡ ಚಿತ್ರರಂಗ ವಹಿಸಿಕೊಳ್ಳಬೇಕಿದೆ.
ಇದನ್ನೂ ಓದಿ ನನ್ನ ಅಜ್ಜಂದಿರ ಕತೆ ಹೋಲುವ ʼಕಾಟೇರʼ ರೋಮಾಂಚನಗೊಳಿಸಿ, ಕಣ್ಣೀರು ಜಿನುಗಿಸಿತು
2023ರಲ್ಲಿ ಬಂದ ಕನ್ನಡದ ಬಹಳಷ್ಟು ಸಿನಿಮಾಗಳು ಹೀಗೆ ಬಂದು ಹಾಗೆ ಮಾಯವಾದವು. ʼಕ್ರಾಂತಿ, ಹಾಸ್ಟೆಲ್ ಹುಡುಗರು ಮತ್ತು ಟಗರು ಪಲ್ಯ ಸಿನಿಮಾಗಳು ಮಾತ್ರ ಲಾಭ ಮಾಡಿದವುʼ ಎಂದು ಖ್ಯಾತ ಸಿನಿಮಾ ನಿರ್ದೇಶಕ, ನಿರ್ಮಾಪಕರು ಒಬ್ಬರು ಹೇಳಿದ ಮಾತು. ಕಾಟೇರ ಸಿನಿಮಾದ ಯಶಸ್ಸು ಕನ್ನಡ ಚಿತ್ರಲೋಕಕ್ಕೆ ಭರವಸೆಯ ಕೈಮರವಾಗಿದೆ. ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಬದಲಿಗೆ ಗಂಭೀರವಾಗಿ ಕೂತು ಕತೆಗೆ ಪ್ರಾಮುಖ್ಯತೆ ನೀಡುವುದಲ್ಲದೆ ಅದಕ್ಕೆ ತಕ್ಕ ಚಿತ್ರಕತೆಯನ್ನು ಹೆಣೆದು, ಉತ್ತಮ ಸಂಭಾಷಣೆ ಬರೆಯುವ ಸಂಯಮವನ್ನು ಸಿನಿಮಾ ತಯಾರಿಸುವವರು ರೂಢಿಸಿಕೊಳ್ಳಬೇಕಿದೆ.
ಹಾಗೆ ಕಾಟೇರದ ಸಿನಿಮಾಕ್ಕೆ ಧೈರ್ಯದಿಂದ ಬಂಡವಾಳ ಹಾಕಿದ ರಾಕ್‌ಲೈನ್ ವೆಂಕಟೇಶ್‌ರಂತೆ ಇತರ ನಿರ್ಮಾಪಕರು ಸಂವೇದನಾಶೀಲ ಸಿನಿಮಾ ತಯಾರಿಕೆಗೆ ಮುಂದೆ ಬರಬೇಕಿದೆ.
ಇದರ ಜೊತೆಗೆ ಕಾಟೇರ ಸಿನಿಮಾದ ಯಶಸ್ಸಿಗೆ ನಿರ್ದೇಶಕ ತರುಣ ಸುಧೀರ್ ಭಾಜನರಾಗುತ್ತಾರೊ ಅಷ್ಟೇ ಸಮಾನವಾಗಿ ಕತೆ, ಸುಂದರ ಹೆಣಿಗೆಯ ಚಿತ್ರಕತೆ ಬರೆದ ಜಡೇಶ್ ಹಂಪಿ ಮತ್ತು ಕನ್ನಡ ಸಾಹಿತ್ಯವನ್ನು ಹೀರಿಕೊಂಡ ಸುಲಿಲತ, ಮನಮುಟ್ಟುವ ಮೊನಚು ಸಂಭಾಷಣೆ ಬರೆದ ಮಾಸ್ತಿಯವರ ಪಾಲು ಗಣನೀಯವಾಗಿದೆ. ರಾಕ್‌ಲೈನ್ ವೆಂಕಟೇಶ್ ಜೊತೆಗೆ ಇಡೀ ಚಿತ್ರತಂಡ ಅಭಿನಂದನಾರ್ಹವಾಗಿದೆ. ಈ ತಂಡ ಕಾಟೇರ ಯಶಸ್ಸಿನ ಅಮಲಿನಲ್ಲಿ ಮುಳುಗದೆ ಮುಂದೆ ಇಂತಹದೇ ತಳಸಮುದಾಯದ ಕತೆಗಳನ್ನು ಹೇಳುವ ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಲಿ, ಕನ್ನಡ ಪ್ರೇಕ್ಷಕ ಅಂಥ ಸಿನಿಮಾವನ್ನು ಬೆಂಬಲಿಸುತ್ತಾನೆಂಬ ಭರವಸೆಯನ್ನು ಕಾಟೇರ ಮೂಲಕ ಕೊಟ್ಟಿದ್ದಾನೆ.
ಕೊನೆಯ ಮಾತು
ಸಿನಿಮಾಸಕ್ತರಿಗೆ ನಿರಾಶೆ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸುವುದಾಗಿ ಘೋಷಿಸಿದ್ದಾರೆ. ಹಾಗೆಯೇ, ಶಾಂತಿ, ಸಮಾನತೆ, ಸೌಹಾರ್ದತೆಗಳನ್ನು ಎತ್ತಿ ಹಿಡಿಯುವಂತಹ ಸಿನಿಮಾಗಳಿಗೆ ಈ ಹಬ್ಬವು ವೇದಿಕೆಯಾಗಲಿದೆ ಎಂದು ಹೇಳಿರುವುದು ಖುಷಿಯ ವಿಷಯ. ಶಾಂತಿ, ಸಮಾನತೆಗಳನ್ನು ಸೃಜನಶೀಲವಾಗಿ ಅಭಿವ್ಯಕ್ತಿಸುವ ಮತ್ತು ಕನ್ನಡ ನಾಡಿನ ಜನಸಮುದಾಯದ ಜೀವಂತ ಮೌಲ್ಯಗಳನ್ನು ಎದೆಯಲ್ಲಿಟ್ಟು ಕೊಂಡಿರುವ ʼಕಾಟೇರʼ ಸಿನಿಮಾವನ್ನು ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಹಬ್ಬದ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶನ ಮಾಡುವುದು ಅತ್ಯಂತ ಸೂಕ್ತವಾದುದು. ಈ ಸೂಚನೆಯನ್ನು, ಸಿನಿಮಾಗಳು ಪ್ರತಿಫಲಿಸುವ ರಾಜಕೀಯ ಸಾಮಾಜಿಕ ನೆಲೆಗಳನ್ನು ಗಂಭೀರವಾಗಿ ಅಭ್ಯಸಿಸುತ್ತ, ಚರ್ಚಿಸುತ್ತ ಬಂದಿರುವ ʼಮನುಜಮತ ಸಿನಿಯಾನʼ ಮತ್ತು ʼಸಿನಿಮಾ ಓದುʼ ಬಳಗವು ಆಯ್ಕೆ ಸಮಿತಿಯ ಮುಂದಿಟ್ಟಿತ್ತು. ಅದು ಪರಿಗಣಿತವಾಗಿ ʼಕಾಟೇರʼ ಸಿನಿಮಾವು ಕನ್ನಡಿಗರಲ್ಲದೆ ಇತರೆ ಪ್ರೇಕ್ಷಕರೂ ನೋಡುವಂತಾಗಲಿ ಎಂದು ಆಶಿಸೋಣ.

ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ