ಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಒಂದು ಪ್ರವೇಶಿಕೆ

Date:

Advertisements
ಲೇಖಕ, ವಿಮರ್ಶಕ ಸುರೇಶ್ ನಾಗಲಮಡಿಕೆ ಅವರು ಲಂಕೇಶ್ ಕಥನ ಕುರಿತ ಅಧ್ಯಯನ 'ಮಣ್ಣಿನ ಕಸುವು' ಕೃತಿ ಶನಿವಾರ, 8.7.2023ರಂದು, ಬೆಂಗಳೂರಿನ ವಿಜಯನಗರದ ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ಸಂಜೆ 3.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಆ ನಿಮಿತ್ತ ಲಂಕೇಶರನ್ನು, ಅವರ ಕಥನ ಕ್ರಮವನ್ನು ಅರಿಯಲು ಅನುವು ಮಾಡಿಕೊಡುವ ಪುಟ್ಟ ಪ್ರವೇಶಿಕೆ

ಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು ಎಂಬ ಪ್ರಶ್ನೆಯೇ ಈ ಅಧ್ಯಯನದ ಉದ್ದಕ್ಕೂ ಹರಡಿಕೊಂಡಿದೆ. ಸಾಮಾನ್ಯವಾಗಿ ಪ್ರತಿ ಲೇಖಕನೂ ಎಲ್ಲ ಕಾಲಕ್ಕೂ ಸಲ್ಲುವ ಕೆಲ ಬಗೆಯ ಆಲೋಚನೆಗಳನ್ನು ನೀಡದೇ ಹೋದರೆ ನೆನಪಿನಲ್ಲಿ ಉಳಿಯುವುದು ಕಷ್ಟ. ‘ಬದುಕ’ನ್ನು ಕುರಿತು ಲಂಕೇಶರು ಕಟ್ಟಿಕೊಟ್ಟ ಆಯಾಮಗಳನ್ನು ಸೂಕ್ಷ್ಮವಾಗಿ ಕಾಣುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ. ಬಹುಶಃ ವಿಮರ್ಶೆಯ ಕೆಲಸವೂ ಇದೆ ಆಗಿರುತ್ತದೆ.

ಕನ್ನಡ ಕಥನ ಪರಂಪರೆಯ ದಿಕ್ಕುಗಳನ್ನು ನಮ್ಮ ಹಿರಿಯ ವಿದ್ವಾಂಸರು ಶ್ರದ್ಧೆಯಿಂದ ವಿಶ್ಲೇಷಣೆ ಮಾಡಿರುವುದನ್ನು ನೋಡಬಹುದು. ನವ್ಯ ಕಾಲಮಾನದಲ್ಲಿ ಬರೆಯಲು ಹೊರಟ ಲಂಕೇಶರು ಮನುಷ್ಯನ ತಲ್ಲಣಗಳನ್ನು ಅರ್ಥಮಾಡಿಕೊಳ್ಳಲು ನಿರ್ದಿಷ್ಟ ಮಾನದಂಡಗಳಿಗೆ ಒಗ್ಗಿಕೊಳ್ಳಲು ಹೋಗಲಿಲ್ಲ. ಕರ್ನಾಟಕದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳಿಗೆ ಸ್ಪಂದಿಸುತ್ತಲೇ ಸೃಜನಶೀಲ ವಲಯಕ್ಕೂ ಸ್ಪಂದಿಸಿದರು. ನೆಲದ ಬದುಕನ್ನು ಕೇವಲ ಏಕಮುಖಿಯಾಗಿ ಗ್ರಹಿಸಲು ಲಂಕೇಶರು ತಲುಪಲಿಲ್ಲ. ನಗರ ಚಿತ್ರಗಳನ್ನು, ಆ ಮೂಲಕ ವ್ಯಕ್ತಿಯ ಅಸಂಗತ ತೊಳಲಾಟಗಳನ್ನು ಕಟ್ಟಿಕೊಡುವ ಹಂತದಲ್ಲೂ ಅವರು ಗ್ರಾಮೀಣ ಸಮಾಜವನ್ನು ಮರೆಯಲಿಲ್ಲ. ನಗರ-ಗ್ರಾಮ ಎರಡರ ತಲ್ಲಣಗಳನ್ನು ತಮ್ಮ ಕಥನದಲ್ಲಿ ಕಟ್ಟಿಕೊಟ್ಟಿರುವ ರೀತಿಯು ಈ ಬರವಣೆಗೆಯಲ್ಲಿ ವಿವರವಾಗಿ ಬಂದಿದೆ.

ಕಥನದ ಪ್ರಯೋಗಶೀಲತೆ ಮತ್ತು ಆಶಯಗಳ ತಾಜಾತನಗಳನ್ನು ಸಾಧಿಸುವುದು ಯಾವ ಲೇಖಕನಿಗೂ ಸವಾಲಿನ ಸಂಗತಿ. ಕತೆ ಮತ್ತು ಕಾದಂಬರಿಗಳನ್ನು ಏಕ ಕಾಲದಲ್ಲಿ ಬರೆಯ ಹೊರಟ ಲೇಖಕರಿಗಂತೂ ಈ ಕ್ರಮ ಇನ್ನೂ ದುಸ್ತರ. ಈ ಪಲ್ಲಟಗಳು ಕೂಡ ಇಲ್ಲಿ ಚರ್ಚಿತಗೊಂಡಿವೆ. ಲಂಕೇಶರ ಒಟ್ಟು ಕತೆ, ಕಾದಂಬರಿಗಳನ್ನು ಗ್ರಹಿಸಿದರೇ, ಅವರ ಸೋಲು-ಗೆಲುವುಗಳು ತಿಳಿಯುತ್ತವೆ. ಪ್ರಯೋಗಶೀಲತೆಯ ದೃಷ್ಟಿಯಿಂದ ಹೇಳುವುದಾದರೇ, ತಮ್ಮ ಕತೆಗಳಲ್ಲಿ ಮನುಷ್ಯನ ತಿಳಿವುಗಳು ಬದಲಾದಂತೆಲ್ಲ ಮತ್ತು ಕಾಲಮಾನದ ಒತ್ತಡಗಳು ಬೇರೊಂದು ಸ್ವರೂಪವನ್ನು ಧರಿಸಿದಂತೆಲ್ಲ ಕಥನದ ಪ್ರಯೋಗವೂ ಬದಲಾಗಿದೆ. ಈ ಚರ್ಚೆಯೂ ಈ ಅಧ್ಯಯನಲ್ಲಿದೆ. ಮನುಷ್ಯ ಬದುಕಿನ ವಾಸ್ತವಗಳನ್ನು ತೆರೆದ ದಾರಿಯಲ್ಲಿ ಅನಾವರಣಗೊಳಿಸುವುದರಲ್ಲಿ ಲಂಕೇಶರ ಗೆಲುವಿದೆ. ತಮ್ಮ ಕಥನದ ಉದ್ದಕ್ಕೂ ಹುಡುಕಾಡಿರುವ ಸಂಗತಿಗಳು ಎರಡು ಬಗೆಯವು. ಒಂದು; ಮನುಷ್ಯನ ಭಿನ್ನ ಬಗೆಯ ವರ್ತನೆಗಳು. ಎರಡು: ಗ್ರಾಮ ಮತ್ತು ಜಾತಿಗಳು ಉಂಟುಮಾಡುವ ಅವಸ್ಥೆಗಳು. ಈ ಅಧ್ಯಯನದ ಒಳಲೋಕದಲ್ಲಿ ಈ ಎರಡೂ ಕಾಳಜಿಗಳು ವಿಸ್ತಾರವಾಗಿ ಚರ್ಚೆಗೆ ಒಳಪಟ್ಟಿವೆ.

Advertisements

ಯಾವುದೇ ಕತೆಗಾರ ತೀವ್ರವಾಗಿ ತಾಕುವುದು ಹೇಗೆ ಎಂಬ ಪ್ರಶ್ನೆ ಲಂಕೇಶರನ್ನು ಓದುವಾಗ ಕಾಡದೇ ಇರದು. ವ್ಯಕ್ತಿಯ ಸುತ್ತ ಆವರಿಸಿರುವ ಸಂಬಂಧಗಳು, ಪ್ರೇಮ, ದ್ವೇಷ, ಜಾತಿಯ ಕ್ಷುದ್ರತೆ ಮುಂತಾದವುಗಳನ್ನು ಲಂಕೇಶರ ಸಾಹಿತ್ಯ ಸೂಕ್ಷ್ಮವಾಗಿ ಗ್ರಹಿಸಿದೆ. ಇವೆಲ್ಲ ಕಾಳಜಿಗಳನ್ನು ಈ ಅಧ್ಯಯನ ತೀರಾ ಹೊಸ ಮಾದರಿಗಳಲ್ಲಿ ನೋಡಲಾಗಿದೆ ಎಂಬ ನಿಲುವು ನನ್ನದಲ್ಲ. ಬದಲಿಗೆ ನೋಡುವ ಕ್ರಮದಲ್ಲಿ ಒಳನೋಟಗಳನ್ನು ನೀಡುವುದಕ್ಕೆ ಯತ್ನಿಸಲಾಗಿದೆ. ಲಂಕೇಶರ ಕಥಾ ಜಗತ್ತನ್ನು ಕಾಲಾನುಕ್ರಮದ ಬೆನ್ನಲ್ಲಿ ಚರ್ಚೆ ಮಾಡುವ ಹಾದಿಯನ್ನು ಈ ಬರವಣಿಗೆ ಕೈಬಿಟ್ಟಿದೆ. ಬದಲಾಗಿ ಕೆಲ ಪರಿಕಲ್ಪನೆಗಳ ಜಾಡನ್ನು ಹಿಡಿದು ವಿಶ್ಲೇಷಣೆ ಮಾಡಲಾಗಿದೆ. ಈ ಕ್ರಮ ಸುಲಭವಲ್ಲ. ಆದರೆ, ಇದರಿಂದ ಲಂಕೇಶರ ಕಥನಲೋಕದ ಜೀವನ ದರ್ಶನದ ಕೆಲ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಅನುವಾಯಿತು.

ಹಲವು ಸಾರಿ ಪರಿಕಲ್ಪನೆಗಳ ಚರ್ಚೆಯಲ್ಲಿ ತಾತ್ವಿಕತೆಯ ಗೊಂದಲಗಳು ನಿವಾರಣೆಯಾಗಬಲ್ಲವು. ಇದರ ಬೆನ್ನಲ್ಲಿ ಇವರ ಕಥನಗಳ ಓದಿನಿಂದ ಆಗುವ ಲಾಭಗಳೇನು ಎಂಬ ಪ್ರಶ್ನೆ ಅಂತಿಮವಾಗಿ ಕಾಡಬಹುದು. ಇದು ಎಲ್ಲ ಲೇಖಕರಿಗೂ ಅನ್ವಯವಾಗುತ್ತದೆ. ಯಾವುದೇ ಸಾಹಿತ್ಯ ಮನುಷ್ಯನ ವ್ಯಕ್ತಿಗತ ಬದುಕಿಗಿಂತ ಬೇರೆತನದ ಅನುಭವಗಳನ್ನು ನೀಡಿದರೇ ಮಾತ್ರ ಹತ್ತಿರವಾಗಬಲ್ಲದು. ವ್ಯಕ್ತಿಯ ಸುಂದರ ಕಲ್ಪನೆಗಳನ್ನು, ಸುಖದ ಉನ್ನತಿಕೆಗಳನ್ನು ತೋರಿಸಿದಾಗಲೂ ಏಕಮುಖವಾಗುತ್ತದೆ. ಲಂಕೇಶರ ಕಥನದ ಮಟ್ಟಿಗೆ ಹೇಳುವುದಾದರೇ, ವ್ಯಕ್ತಿಯ ಅನುಭವಕ್ಕೆ ಬರುವ ಬಹುಬಗೆಯ ಬಾಳಾಟಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಿದೆ. ಮನುಷ್ಯ ತನ್ನನ್ನು ಮುಚ್ಚಿಟ್ಟುಕೊಳ್ಳುವುದೇ ಹೆಚ್ಚು. ಆದರೆ, ಬಿಟ್ಟುಕೊಡುವುದರಲ್ಲಿ ಅವನು ಸದಾ ಸ್ವಾರ್ಥಿ. ಇವರೆಡನ್ನು ಲಂಕೇಶರ ಕೆಲ ಪಾತ್ರಗಳು ಒಳಗೊಂಡಿವೆ. ಬದುಕಿನ ಅರ್ಥಗಳನ್ನು ತಿಳಿಯಲು ಹಾತೊರೆವ ಅನೇಕ ‘ಜನರು’ ಇವರ ಕಥನದಲ್ಲಿದ್ದಾರೆ.

ಕನ್ನಡ ಕಥನ ಪರಂಪರೆಗೆ ದೀರ್ಘವಾದ ಚರಿತೆ ಇದೆ. ಈ ಬಗೆಯ ಪರಂಪರೆಗೆ ಲಂಕೇಶ ಕಥನ ಸೇರಿಸಿದ ಆಯಾಮಗಳು ಇಲ್ಲಿ ಚರ್ಚಿತಗೊಂಡಿವೆ. ದಿನೇ ದಿನೇ ಆತಂಕಗೊಳ್ಳುತ್ತಿರುವ ಸಮಾಜದಲ್ಲಿ ಮನುಷ್ಯ ಹುಡುಕಬೇಕಾದ ದಾರಿಗಳೇನು ಎಂಬ ಪ್ರಶ್ನೆಗಳು ಅಧಿಕವಾಗುತ್ತಿರುವ ಸಂದರ್ಭದಲ್ಲಿ ಲಂಕೇಶರ ಕಥನ ಕೆಲವು ಉತ್ತರಗಳನ್ನಾದರೂ ನೀಡಬಹುದೇನೋ! ಜೊತೆಗೆ ಮತ್ತಷ್ಟು ತೀವ್ರವಾಗಿ ಕೆಟ್ಟ ಸ್ವರೂಪಗಳನ್ನು ಧರಿಸುತ್ತಿರುವ ಜಾತಿ, ಧರ್ಮ, ರಾಜಕಾರಣಗಳು ಸುತ್ತಣ ವಾತವರಣವನ್ನು ದಿಕ್ಕೆಡಿಸುತ್ತಿವೆ. ಇಂಥ ದುಸ್ತರ ಕಾಲದಲ್ಲಿ ಇವರ ಕಥನ ಗಂಭೀರವಾದ ಎಚ್ಚರಗಳನ್ನು ನೀಡುತ್ತದೆ ಎಂಬುದಂತೂ ವಾಸ್ತವ.

-ಸುರೇಶ್ ನಾಗಲಮಡಿಕೆ

ಪುಸ್ತಕಕ್ಕಾಗಿ: ಅಮೂಲ್ಯ ಪ್ರಕಾಶನ, 94486 76770

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X