ಮನುಷ್ಯರನ್ನು ಕೊಂದು 'ಜೈ ಶ್ರೀ ರಾಮ್' ಎಂದು ಕೂಗುವುದನ್ನು ನೋಡಿದಾಗ ನಾವು ನಿನಗೆ ದ್ರೋಹ ಬಗೆದೆವು ಎಂದು ನನಗೆ ಅನಿಸಿತು. ನಾವು ನಿನ್ನ ಕ್ಷಮೆಯಾಚಿಸುತ್ತೇವೆ. ಒಂದು ರಾಷ್ಟ್ರ ಮತ್ತು ಧಾರ್ಮಿಕ ಗುಂಪಾಗಿ, ನಾವು ಘನತೆ ಮತ್ತು ಮರ್ಯಾದೆ ಎರಡನ್ನೂ ಕಳೆದುಕೊಂಡಿದ್ದೇವೆ
ಪ್ರೀತಿಯ ಶ್ರೀರಾಮ, ನರಾಧಿಪತಿ, ಪುರುಷೋತ್ತಮ,
ನಿನಗೆ ಪತ್ರ ಬರೆಯಲು ನನಗೆ ಕಾರಣಗಳೇ ಇಲ್ಲ. ಯಾಕೆಂದರೆ ನೀನು ಸರ್ವಾಂತರ್ಯಾಮಿ ಮತ್ತು ಸರ್ವಜ್ಞ. ಈ ಜಗತ್ತಿನ ಚರಾಚರವನ್ನೂ ಬಲ್ಲವನು. ಆದರೆ ನಾನು ನಿನಗೆ ಬರೆವಾಗ, ನನ್ನ ಸ್ಥಾನಮಾನ, ಬೂಟಾಟಿಕೆ ಹಾಗೂ ನನ್ನ ಸಮುದಾಯದಲ್ಲಿನ ಆತ್ಮವಿಮರ್ಶೆಯ ಕೊರತೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಲಿರುತ್ತೇನೆ.
ನಾನು ವಿದ್ಯಾರ್ಥಿಯಾಗಿದ್ದಾಗ ಪ್ರಬಂಧವೊಂದರಲ್ಲಿ “ಜೋ ರಮತಾ ಹೈ, ವಹೀ ರಾಮ್ ಹೈ” ಎಂಬ ಪದವಿನ್ಯಾಸವನ್ನು ಕಂಡಿದ್ದೆ. ಇದಕ್ಕೂ ಅಯೋಧ್ಯೆಯ ರಾಜಕುಮಾರ ರಾಮನ ವನವಾಸಕ್ಕೂ ಏನಾದರೂ ಸಂಬಂಧವಿದೆಯೇ ಎಂದು ನಾನು ನನ್ನ ಶಿಕ್ಷಕರೊಂದಿಗೆ ವಿಚಾರಿಸಿದೆ. ಪ್ರಬಂಧಕಾರರು ನಿರ್ಗುಣ (ನಿರಾಕಾರ) ಅರ್ಥದಲ್ಲಿ ಪರಿಶುದ್ಧತೆಯನ್ನು ಪ್ರತಿನಿಧಿಸಲು “ರಾಮ್” ಪದವನ್ನು ಬಳಸಿದ್ದಾರೆ ಎಂದು ಅವರು ತಾಳ್ಮೆಯಿಂದ ವಿವರಿಸಿದರು. ಜೊತೆಗೆ, ‘ರಮತಾ’ ವನ್ನು ಪ್ರಯಾಣದ ಪರಿಕಲ್ಪನೆಯನ್ನು ಅಕ್ಷರಶಃವಾಗಿಯೂ ಮತ್ತು ಸಾಂಕೇತಿಕವಾಗಿಯೂ ತಿಳಿಸಿದರು. ಕಬೀರ್ ಮತ್ತು ಸೂರದಾಸ್ ಕುರಿತೂ ವಿವರಿಸಿದರು.
ರಾಮನ ಕಲ್ಪನೆಯು ಯಾವುದೋ ಏಕಗ್ರಾಹಿ ಸಂಕುಚಿತ ಪರಿಕಲ್ಪನೆಗೆ ಸೀಮಿತವಾಗಿಲ್ಲ. ಅದು ಪರಿಶುದ್ಧತೆಯ ಮಾನವ ಆದರ್ಶವಾಗಿದೆ ಎಂದು ನಾನು ಈ ಸಂಭಾಷಣೆಯಿಂದ ಅರಿತುಕೊಂಡೆ. ಈ ಪ್ರಬಂಧ ಮತ್ತು ಶಿಕ್ಷಕರೊಂದಿಗಿನ ಸಂಭಾಷಣೆ ನನ್ನ ಬದುಕಿನಲ್ಲಿ ಎಂದೂರ ಮರೆಯದ ನೆನಪಾಗಿ ಇನ್ನೂ ಉಳಿದುಬಿಟ್ಟಿದೆ. ನಂತರದ ವರ್ಷಗಳಲ್ಲಿ, ನಾನು ನಿನ್ನ ಬಗ್ಗೆ ಮತ್ತು ನನ್ನ ತಾಯಿ, ಸಹೋದರಿ ಮತ್ತು ಸ್ನೇಹಿತರಿಂದ ‘ರಾಮನ ಕಲ್ಪನೆ’ ಬಗ್ಗೆ ಹೆಚ್ಚು ಹೆಚ್ಚು ಕಲಿತಿದ್ದೇನೆ. ಅಮ್ಮನ ಪಾಲಿಗೆ ನೀನು ಘನತೆಯೇ (ಮರ್ಯಾದಾ) ಮೈವೆತ್ತವನು, ಅಕ್ಕನಿಗೆ ನೀನು ಅನುರಕ್ತಿಯಿಲ್ಲದ ಸಂಯಮಿ. ಆದರೆ ನನ್ನ ರಾಮನು ‘ರಮತಾ’ದ ಕಲ್ಪನೆಯ ರೂಪಾಂತರಿ.
ನಿನ್ನನ್ನು ಕಂಡುಕೊಳ್ಳುತ್ತಿದ್ದ ಅದೇ ಸಮಯದಲ್ಲಿ ನನ್ನಿಂದ ಹೊರಗೆ ನಾಟಕೀಯ ಬದಲಾವಣೆಯೊಂದು ಸಂಭವಿಸುತ್ತಿತ್ತು. 1990ರಲ್ಲಿ, ರಥಯಾತ್ರೆಯು ನಿನ್ನ ಹೆಸರು ಮತ್ತು ಅಸ್ತಿತ್ವವೇ ಆದ ರಾಮ್ ಅನ್ನು ಮರ್ಯಾದಾ ಪರಿಕಲ್ಪನೆಯಿಂದ ಸಮರ ಕೇಕೆಯಾಗಿ ಪರಿವರ್ತನೆಯಾಯಿತು. ಉಜ್ವಲ ಗತಕಾಲವೊಂದನ್ನು ಹಿಂದೂಗಳ ಕಣ್ಣ ಮುಂದಿಟ್ಟು, ಜರುಗಿರುವ ಐತಿಹಾಸಿಕ “ಅನ್ಯಾಯಗಳನ್ನ” ಸರಿಪಡಿಸುವುದು ಹೇಗೆಂಬ ರಣಘೋಷವಾಗಿ ನಿನ್ನ ಹೆಸರು ಬದಲಾಯಿತು.
ಪ್ರಭು, ರಾಮ,
“ನಿನಗಾಗಿ ಮಂದಿರ ನಿರ್ಮಿಸಲು ಸಾಮಾಜಿಕ, ಕಾನೂನು, ಧಾರ್ಮಿಕ ಮತ್ತು ರಾಜಕೀಯವಾಗಿ ಹೋರಾಡುವ ಇಡೀ ಸಮಾಜವೊಂದಕ್ಕೆ ನೀನು ಪೋಸ್ಟರ್ ಬಾಯ್ ಆಗಿ ಹೋದೆ. ಅವರು ನಿಮ್ಮ ದೇವಾಲಯಕ್ಕಾಗಿ ಹಿಂಸಾಚಾರದ ಹೆದ್ದೆರೆಯನ್ನೇ ಎಬ್ಬಿಸಿದರು. ಆದರೆ ಅದು ಅವರನ್ನು ಎಂದಿಗೂ ತಟ್ಟಿ ಬಾಧಿಸಲಿಲ್ಲ. ಪ್ರಭೂ, ತಂದೆ ನೀಡಿದ ವಚನ ಈಡೇರಿಸಲು ನಿಮ್ಮ ರಾಜ್ಯವನ್ನೇ ಬಿಟ್ಟುಕೊಟ್ಟಿರಿ. ಕೈಕೇಯಿಯ ಬಗ್ಗೆ ಎಂದೂ ಕೆಟ್ಟದಾಗಿ ಮಾತನಾಡಲಿಲ್ಲ, ಸೋದರ ಭರತನನ್ನು ಆಲಿಂಗಿಸಿಕೊಂಡು ಯಶಸ್ಸು ಹರಸಿ ಬೀಳ್ಕೊಂಡೆ. ನಿನ್ನ ಬದುಕೇ ತ್ಯಾಗದ ಪರಿಕಲ್ಪನೆ. ಬಿಟ್ಟುಕೊಟ್ಟ ಕ್ರಿಯೆಯೇ ತಪಸ್ಸು. ಜೀವನವು ಅದನ್ನು ತ್ಯಾಗದ ಕಲ್ಪನೆಯನ್ನು ಕಲಿಸಿ ಕೊಡುವ ಒಂದು ತಪಸ್ಸಿನ ಕಲ್ಪನೆ.

ಆತ್ಮೀಯ ರಘುಪತಿ, ಮೈಥಿಲಿ ಶರಣ್ ಗುಪ್ತ್ ಅವರ “ಕೈಕೇಯಿ ಕಾ ಅನುತಾಪ್ ” ಕೃತಿಯನ್ನು ನಾನು ಮತ್ತೊಮ್ಮೆ ಓದುತ್ತಲಿದ್ದೆ. ಕವಿತೆಯ ಉದ್ದಕ್ಕೂ, ಕೈಕೇಯಿ ತನ್ನ ಕೃತ್ಯಗಳಿಗಾಗಿ ವಿಷಾದ ವ್ಯಕ್ತಪಡಿಸುತ್ತಾಳೆ ಮತ್ತು ನಿನ್ನಿಂದ ಕ್ಷಮೆಯನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ನೀನು ಅವಳನ್ನು ಕ್ಷಮಿಸುವುದು ಮಾತ್ರವಲ್ಲ, ಪ್ರೀತಿಯನ್ನೂ ತೋರುತ್ತೀ. ಕೈಕೇಯಿ ಮತ್ತು ಭರತನ ಮೇಲೆ ನಿನ್ನ ಪ್ರೀತಿ ಅಚಲವಾಗಿತ್ತು. ಈ ಅಚಲ ಪ್ರೀತಿಯನ್ನು ಅಳವಡಿಸಿಕೊಳ್ಳಲು ನಾನು ವರ್ಷಾನುಗಟ್ಟಲೆ ಪ್ರಯತ್ನಿಸಿದ್ದೇನೆ (ಹಲವಾರು ಬಾರಿ ವಿಫಲನಾಗಿದ್ದೇನೆ) ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.
ನಿನ್ನ ಬದುಕಿನ ಹಲವು ಘಟನೆಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ತನ್ನನ್ನು ಮೋಸದಿಂದ ಕೊಲ್ಲಲಾಯಿತು ಎಂಬ ವಾಲಿಯು ನಿನ್ನ ತೋಳುಗಳಲ್ಲಿ ಕಡೆಯುಸಿರಳೆಯುತ್ತಿದ್ದಂತೆ ನಿವೇದಿಸಿಕೊಂಡ. ಆತನ ಕಟ್ಟಕಡೆಯ ಈ ಮಾತುಗಳನ್ನು ನೀನು ತೆರೆದ ಮನದಿಂದ ಒಪ್ಪಿಕೊಂಡೆ. ಭವಿಷ್ಯದಲ್ಲಿ ನೀನು ತಳೆಯಲಿರುವ ಕೃಷ್ಣಾವತಾರದಲ್ಲಿ ಜರ ಎಂಬ ಬೇಟೆಗಾರನು ನಿನ್ನನ್ನು ತಪ್ಪಾಗಿ ಗುರುತಿಸಿ ಗಾಯಗೊಳಿಸುತ್ತಾನೆ ಮತ್ತು ವಾಲಿಯೇ ಜರನಾಗಿ ಪುನರ್ಜನ್ಮ ತಳೆಯುತ್ತಾನೆ ಎಂಬ ವಚನವನ್ನೂ ನೀನು ನೀಡಿದ್ದೆ.
ದಶರಥ ಪುತ್ರನೇ,
ನಿನ್ನ ತೋಳುಗಳಲ್ಲಿ ಸಾಯುವ ಜಟಾಯುವಿಗೆ ನೀನು ಕರುಣೆಯ ಧಾರೆಯೆರೆದೆ. ತಾನು ಮೊದಲೇ ರುಚಿ ನೋಡಿ ಎಂಜಲು ಮಾಡಿದ್ದ ಹಣ್ಣುಗಳ ನೈವೇದ್ಯವನ್ನು ಶಬರಿಯಿಂದ ಸ್ವೀಕರಿಸಿದೆ. ಈ ಎಂಜಲು ನೈವೇದ್ಯದಲ್ಲಿ ಭಕ್ತಿ ಮತ್ತು ನಿರ್ಮಲ ಪ್ರೀತಿಯನ್ನೇ ಕಂಡವನು ನೀನು. ಸುಗ್ರೀವ ಮತ್ತು ಲಕ್ಷ್ಮಣರು ವಿಭೀಷಣನ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದಾಗ್ಯೂ ಆತನಿಗೆ ಆಶ್ರಯ ನೀಡಿದಾತನು ನೀನು. ರಾವಣನ ರಾಜತಂತ್ರದ ಬಗ್ಗೆ ಗೌರವದಿಂದ ಮಾತನಾಡಿದವನು ನೀನು; ಯುದ್ಧವನ್ನು ನೀನೆಂದಿಗೂ ಬಯಸಲಿಲ್ಲ. ಶಾಂತಿಗಾಗಿ ಸಂಧಾನಕ್ಕಾಗಿ ಹನುಮಂತನನ್ನು ಕಳುಹಿಸಿದಾತನು ನೀನು. ಮತ್ತು ಅಂತಿಮವಾಗಿ, ಸೀತೆಯ ಮೇಲಿನ ಪ್ರೀತಿಗಾಗಿ ಯುದ್ಧ ಮಾಡುತ್ತೀಯೇ ವಿನಾ ಲಂಕೆಯನ್ನು ವಶಪಡಿಸಿಕೊಳ್ಳುವುದು ನಿನ್ನ ಉದ್ದೇಶವಾಗಿರುವುದಿಲ್ಲ. ಲಂಕೆಯನ್ನು ಆಳುವಂತೆ ವಿಭೀಷಣನನ್ನು ಕೇಳುತ್ತೀ. ವಿಭೀಷಣನು ನ್ಯಾಯಯುತವಾಗಿ ಆಡಳಿತ ನಡೆಸುತ್ತಾನೆ ಎಂದೇ ಭಾವಿಸಿದ್ದೆ ನೀನು. ಶತ್ರುಗಳನ್ನು ಕೂಡ ಕ್ಷಮಿಸುವ ಮತ್ತು ಅವರನ್ನು ಸಹಾನುಭೂತಿಯಿಂದ ಕಾಣುವ ನಿನ್ನ ಸಾಮರ್ಥ್ಯವು ನಮಗೆಲ್ಲ ಒಂದು ಅಸಾಧಾರಣ ಪಾಠವೇ ಸರಿ.
ಗಡೀಪಾರು ಅಥವಾ “ವನವಾಸ”ದ ಅವಧಿ ಆತ್ಮಾವಲೋಕನದ ಸಮಯ ಮತ್ತು ಪ್ರೀತಿಗಾಗಿ ನೀನು ನಡೆಸಿದ ನಡೆಸಿದ ಹೋರಾಟವಾಗಿತ್ತು. ತಪಸ್ಸಿನ ಜೀವನದ ನಂತರ ಅಯೋಧ್ಯೆಯ ನೆಲಕ್ಕೆ ಮರಳಿ ಕಾಲಿಟ್ಟ ನೀನು ಭಕ್ತಿ ಎಂದರೆ ಏನೆಂದು ನಮಗೆ ಕಲಿಸಿದ್ದೀ. ಏಕೆಂದರೆ ನೈಜ ಪ್ರೀತಿಯನ್ನು, ದೂರವಾಗುವ ಮೂಲಕ ಮತ್ತು ಆತ್ಮಶೋಧನೆಯ ಮೂಲಕ ಗಳಿಸಬೇಕೇ ವಿನಾ ಒಡೆತನ ಪ್ರತಿಪಾದನೆಯ ಮೂಲಕ ಪಡೆಯಲು ಬರುವುದಿಲ್ಲ. ವಾಸ್ತವವಾಗಿ, ನಿನ್ನನ್ನು ವನವಾಸಪ್ರಿಯ ಎಂದು ಕರೆಯುತ್ತಾರೆ. ನಾನಾದರೂ ಅದನ್ನು ಬೇರ್ಪಡುವಿಕೆಯನ್ನು ಸಂಭ್ರಮಿಸಿದ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತೇನೆ.
ಪ್ರಭೂ ಶ್ರೀರಾಮ, ನಿನ್ನ ಅಂಬುಗಳ ಆಕ್ರೋಶದಿಂದ ಲವ ಮತ್ತು ಕುಶರನ್ನು ಹನುಮಂತ ರಕ್ಷಿಸಿದ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಿನ್ನ ಮೇಲಿನ ಭಕ್ತಿ ಮತ್ತು ಗೌರವದ ಮೂರ್ತರೂಪವೇ ಹನುಮಂತ. ನಿಮ್ಮ ಬಾಣದ ಪರಿಣಾಮವನ್ನು ಸಹ ಹಿಮ್ಮೆಟ್ಟಿಸುವ ಶಕ್ತಿ ನಿಮ್ಮ ಮೇಲಿನ ಭಕ್ತಿಗೆ ಉಂಟು ಎಂದು ಆತ ರುಜುವಾತು ಮಾಡಿ ತೋರಿದ.
ಭಗವಾನ್ ರಾಮನ ಪ್ರೀತಿಯು ನಿಮ್ಮ ಕೋಪವನ್ನು ಸಹ ಜಯಿಸಬಲ್ಲದು.
ರಾಮ-ಮರ್ಯಾದೆಯ ಮೌಲ್ಯಗಳನ್ನು ನಿಮ್ಮ ಪ್ರೀತಿಯು ಬಲಪಡಿಸಿತು. ಇದು ಘನತೆ, ಪ್ರೀತಿ ಮತ್ತು ಭಕ್ತಿಯನ್ನು ಒಳಗೊಳ್ಳುತ್ತದೆ ಮತ್ತು ಅದರ ಮಹತ್ವವು ಕಾಲಾನಂತರದಲ್ಲಿ ಬೆಳೆಯುತ್ತಲೇ ಸಾಗಿದೆ. ಆದರೂ, ಮನುಷ್ಯರನ್ನು ಕೊಂದು ‘ಜೈ ಶ್ರೀ ರಾಮ್’ ಎಂದು ಕೂಗುವುದನ್ನು ನೋಡಿದಾಗ ನಾವು ನಿನಗೆ ದ್ರೋಹ ಬಗೆದೆವು ಎಂದು ನನಗೆ ಅನಿಸಿತು. ನಾವು ನಿನ್ನ ಕ್ಷಮೆಯಾಚಿಸುತ್ತೇವೆ. ಒಂದು ರಾಷ್ಟ್ರ ಮತ್ತು ಧಾರ್ಮಿಕ ಗುಂಪಾಗಿ, ನಾವು ಘನತೆ ಮತ್ತು ಮರ್ಯಾದೆ ಎರಡನ್ನೂ ಕಳೆದುಕೊಂಡಿದ್ದೇವೆ. ರಾಜ್ಯಾಧಿಕಾರವನ್ನೇ ತ್ಯಜಿಸಬಲ್ಲ ಮತ್ತು ತಪಸ್ಸು, ಭಕ್ತಿ ಹಾಗೂ ಪ್ರೀತಿಗಾಗಿ ಸದಾ ಸರ್ವದಾ ಹೋರಾಡುವ ಪರಿಕಲ್ಪನೆಯನ್ನು ಕಲಿಸಿದ ಭಗವಂತನನ್ನು ಹಿಂಸೆ, ಸೇಡು ಹಾಗೂ ಅಧರ್ಮದ ಕೂಗಿನ ಕೀಳುಮಟ್ಟಕ್ಕೆ ಇಳಿಸಲಾಗಿದೆ.
ಈ ರೋಗಗ್ರಸ್ತ ಸಮಾಜವನ್ನು ಉದ್ಧರಿಸಲು ನೀನು ಹಿಂತಿರುಗಬೇಕು ಎಂದು ಹಲವರು ಹೇಳುತ್ತಾರೆ, ಆದರೆ ನೀನು ನಿನ್ನ ಕಥೆ ಮತ್ತು ಪಾಠವನ್ನು ನಮಗೆ ನೀಡಿದ್ದೀ; ನಿನ್ನ ಶಿಷ್ಯರಾಗಿ, ನಮ್ಮಲ್ಲಿ ಭಕ್ತಿ, ಪ್ರೀತಿಯ ಪರಿಕಲ್ಪನೆಯನ್ನು ಹುಟ್ಟುಹಾಕಿರುವುದನ್ನು ನಾವು ಸ್ತುತಿಸಬೇಕಿದೆ.
ಕೈಕೇಯಿಯಂತೆಯೇ ನಾವು ನಿನ್ನ ಬಳಿಗೆ ಬರುತ್ತೇವೆ. ಪಶ್ಚಾತ್ತಾಪ ಮತ್ತು ವಿಷಾದದೊಂದಿಗೆ ಬಳಿ ಸಾರುತ್ತೇವೆ. ನೀನು ನಮಗೆ ಕಲಿಸಿದ ಪ್ರೀತಿ ಮತ್ತು ಸಹಾನುಭೂತಿಯ ಮೌಲ್ಯಗಳೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವುದು ನಮ್ಮನ್ನು ಸರಿಪಡಿಸಿಕೊಳ್ಳುವ ಏಕೈಕ ಮಾರ್ಗವಾಗಿದೆ.
ಹೇ ಪುರುಷೋತ್ತಮ ರಾಮನೇ, ನಿನ್ನನ್ನು “ಪ್ರೇಮಮಯಿ” ಎಂದೂ ಕರೆಯುತ್ತಾರೆ. “ತುಂಬು ಪ್ರೀತಿ ತೋರುವವನು” ಎಂಬುದೇ ಇದರ ಅರ್ಥ. ನಿನ್ನ ಪ್ರೀತಿ ಕರುಣೆಯ ನಾಮಧೇಯವನ್ನು ದ್ವೇಷದ ಸಂಕೇತವಾಗಿ ದುರುಪಯೋಗಪಡಿಸಿಕೊಳ್ಳಲು
ನಮ್ಮ ಅನುಮತಿ ಇಲ್ಲ.
ಇಂತಿ ಪ್ರೀತಿ ಮತ್ತು ಅರಿವಿನ ನಿನ್ನ ಶಿಷ್ಯ
ವೆಂಕಟ್ ಶ್ರೀನಿವಾಸನ್
(ಕೃಪೆ: ಸಬ್‌ರಂಗ್ ಇಂಡಿಯಾ)
ವೆಂಕಟ್ ಶ್ರೀನಿವಾಸನ್
ಬರಹಗಾರ, ಸಾಮಾಜಿಕ ಚಿಂತಕರು