ಮಹಾರಾಷ್ಟ್ರದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಂತೋಷಪಡಿಸಲು, ಅವರ ಆಪ್ತ ಗೆಳೆಯ ಗುಜರಾತಿನ ಉದ್ಯಮಿ ಗೌತಮ್ ಅದಾನಿಯೊಂದಿಗೆ ಕೋಟ್ಯಂತರ ರೂಪಾಯಿಗಳ ವಿದ್ಯುತ್ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ಇದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ, ಮೋದಿ ಮತ್ತು ಅದಾನಿಯವರ ನಡುವಿನ ಸಂಘಟಿತ ಭ್ರಷ್ಟಾಚಾರ.
‘ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಎರಡು ದೊಡ್ಡ ವಿದ್ಯುತ್ ಟೆಂಡರ್‌ಗಳನ್ನು ಅದಾನಿಗೆ ಕೊಡಲಾಗಿದೆ. ಬಿಡ್‌ದಾರರ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಅದಾನಿಗೆ ಇನ್ನೂ ಹೆಚ್ಚಿನ ಆದಾಯ ಮಾಡಿಕೊಡಲು ಟೆಂಡರ್ ಪ್ರಕ್ರಿಯೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಅವ್ಯವಹಾರದ ಆಘಾತಕಾರಿ ವಿವರಗಳು ಶೀಘ್ರದಲ್ಲೇ ಹೊರಬರಲಿವೆ’ ಎಂದಿದ್ದಾರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್.
ರಾಜಸ್ಥಾನ ಮತ್ತು ಮಹಾರಾಷ್ಟ್ರ- ಈ ಎರಡು ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ. ಸದ್ಯದಲ್ಲಿಯೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಆ ಚುನಾವಣೆಗೂ ಮುನ್ನವೇ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮೊದಲೇ, ಬೃಹತ್ ಮೊತ್ತದ 6,600 ಮೆಗಾ ವ್ಯಾಟ್ ಸೌರ ಮತ್ತು ಉಷ್ಣ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಟೆಂಡರ್ ಕರೆದು, ಆತುರಾತುರವಾಗಿ ಉದ್ಯಮಿ ಗೌತಮ್ ಅದಾನಿ ಕಂಪನಿಯೊಂದಿಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಟೆಂಡರ್‍ನಲ್ಲಿ ನಾಲ್ಕು ಕಂಪನಿಗಳು ಪಾಲ್ಗೊಂಡಿದ್ದವು. ಆದರೆ ಉದ್ಯಮಿ ಅದಾನಿ ಪ್ರಧಾನಿ ಮೋದಿಯವರ ಆಪ್ತ ಗೆಳೆಯ ಎಂಬ ಕಾರಣಕ್ಕೆ, ಅವರ ಕಂಪನಿಗೆ ಅನುಕೂಲವಾಗುವಂತಹ ಷರತ್ತುಗಳನ್ನು ಮಾತ್ರ ವಿನ್ಯಾಸಗೊಳಿಸಿ, ಮೂರು ಕಂಪನಿಗಳು ಟೆಂಡರ್ ಪ್ರಕ್ರಿಯೆಯ ವ್ಯಾಪ್ತಿಗೆ ಬರದಂತೆ ವ್ಯವಸ್ಥಿತವಾಗಿ ದೂರ ಇಡಲಾಗಿದೆ.
ಒಂದಲ್ಲ, ಎರಡಲ್ಲ 25 ವರ್ಷಗಳ ದೀರ್ಘಾವಧಿಗೆ 6,600 ಮೆಗಾ ವ್ಯಾಟ್ ಸೌರ ಮತ್ತು ಉಷ್ಣ ವಿದ್ಯುತ್ ಎರಡನ್ನೂ ಒಟ್ಟಿಗೆ ಪೂರೈಸಲು ಅದಾನಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ 1,496 ಮೆಗಾ ವ್ಯಾಟ್ ಸೌರ, 5,000 ಮೆಗಾ ವ್ಯಾಟ್ ಉಷ್ಣ ವಿದ್ಯುತ್ ಪೂರೈಸಬೇಕೆಂಬ ನಿಯಮ ಅಳವಡಿಸಲಾಗಿದೆ. ಇದಕ್ಕಾಗಿ ಕಂಪನಿಯು ಪ್ರತಿ ಯೂನಿಟ್‌ಗೆ 4.08 ರೂ ಬಿಡ್ ಮಾಡಿದೆ. ಅದನ್ನು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ.
ಇದನ್ನು ಓದಿದ್ದೀರಾ?: ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?
ಕುತೂಹಲಕರ ವಿಷಯವೆಂದರೆ, ದೇಶದ ಹಲವು ರಾಜ್ಯಗಳು ಖಾಸಗಿ ವಿದ್ಯುತ್ ಕಂಪನಿಗಳಿಂದ ಹತ್ತಾರು ವರ್ಷಗಳಿಂದ ವಿದ್ಯುತ್ತನ್ನು ಖರೀದಿಸುತ್ತಿವೆ. ಹಲವಾರು ಖಾಸಗಿ ಕಂಪನಿಗಳು ಸರ್ಕಾರಗಳೊಂದಿಗೆ ಇಂದಿಗೂ ವ್ಯವಹರಿಸುತ್ತಿವೆ. ಆ ಖಾಸಗಿ ಕಂಪನಿಗಳು ಪ್ರತಿ ಯೂನಿಟ್‌ಗೆ 2 ರೂ. 50 ಪೈಸೆಯಿಂದ ಹಿಡಿದು 3 ರೂ.ವರೆಗೆ ಸರಬರಾಜು ಮಾಡುತ್ತಿದ್ದರೂ, ಅವರನ್ನು ಕಡೆಗಣಿಸಿ, ಅದಾನಿ ಕಂಪನಿಗೆ ಪ್ರತಿ ಯೂನಿಟ್‌ಗೆ 4.08 ರೂ. ಕೊಟ್ಟು ಖದೀರಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಒಂದು ಯೂನಿಟ್‌ಗೆ ಒಂದು ರೂಪಾಯಿ ಹೆಚ್ಚಾದರೆ, ಸರ್ಕಾರ ಖರೀದಿಸುತ್ತಿರುವ 6,600 ಮೆಗಾ ವ್ಯಾಟ್‌ಗೆ ಎಷ್ಟಾಯಿತು? ಈ ನಷ್ಟವನ್ನು ಭರಿಸುವವರು ಯಾರು? ಮುಂದಿನ 25 ವರ್ಷಗಳ ಕಾಲ ಮಹಾರಾಷ್ಟ್ರದ ಜನ ಈ ನಷ್ಟದ ಹೊರೆ ಹೊರಬೇಕೇ? ಇದು ಬಿಜೆಪಿ ಸರ್ಕಾರ ಮಹಾರಾಷ್ಟ್ರದ ಜನತೆಗೆ ಎಸಗುತ್ತಿರುವ ವಂಚನೆಯಲ್ಲವೇ?
ಮಹಾರಾಷ್ಟ್ರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪಕ್ಕದ ರಾಜಸ್ಥಾನದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವೂ ಅದೇ ರೀತಿ 11,200 ಮೆಗಾ ವ್ಯಾಟ್ ವಿದ್ಯುತ್ ಸರಬರಾಜಿಗಾಗಿ ಟೆಂಡರ್ ಕರೆದಿದೆ. ಅದರಲ್ಲಿ 8,000 ಮೆಗಾ ವ್ಯಾಟನ್ನು ಸೌರಶಕ್ತಿಯಿಂದ ಮತ್ತು 3,200 ಮೆಗಾ ವ್ಯಾಟನ್ನು ಕಲ್ಲಿದ್ದಲಿನಿಂದ ಉತ್ಪಾದಿಸಬೇಕೆಂಬ ಮತ್ತು ಒಟ್ಟಿಗೆ ಸರಬರಾಜು ಮಾಡಬೇಕೆಂಬ ಶರತ್ತು ವಿಧಿಸಿದೆ. ಅಂದರೆ, ಅದಾನಿ ಕಂಪನಿಗಾಗಿಯೇ ವ್ಯವಸ್ಥಿತವಾಗಿ ರೂಪಿಸಲಾದ ಗುತ್ತಿಗೆ ಒಪ್ಪಂದವಿದು. ಹಾಗಾಗಿ ಆ ಟೆಂಡರ್ ಕೂಡ ಅದಾನಿ ಕಂಪನಿಗೇ ಲಭಿಸುವ ಸಾಧ್ಯತೆಗಳಿವೆ.
ಸೋಜಿಗವೆಂದರೆ, ಮಹಾರಾಷ್ಟ್ರ ಸರ್ಕಾರ ಟೆಂಡರ್‍ದಾರರು ಥರ್ಮಲ್ ಮತ್ತು ಸೋಲಾರ್ ಪವರ್ ಪ್ರಾಜೆಕ್ಟ್‌ಗಳನ್ನು ರಾಜ್ಯದಿಂದ ಹೊರಗೆ ಸ್ಥಾಪಿಸಿದರೂ ಪರವಾಗಿಲ್ಲ ಎಂದಿದೆ. ಅದಕ್ಕೆ ಪೂರಕವಾಗಿ ರಾಜಸ್ಥಾನ ಸರ್ಕಾರ ನಮ್ಮಲ್ಲಿಯೇ ಬಂದು ಸ್ಥಾಪಿಸಿ ಎಂದು ಅದಾನಿಗೆ ರೆಡ್ ಕಾರ್ಪೆಟ್ ಹಾಸಿ ಕರೆದಿದೆ. ಅದರಲ್ಲೂ ರಾಜಸ್ಥಾನ ಸರ್ಕಾರ 11,200 ಮೆಗಾ ವ್ಯಾಟ್ ವಿದ್ಯುತ್ ಸರಬರಾಜಿಗಾಗಿ ಟೆಂಡರ್ ನೀಡುವುದಕ್ಕೂ ಮುಂಚೆಯೇ, ರಾಜಸ್ಥಾನದ ಬರಾನ್ ಜಿಲ್ಲೆಯ ಕವಾಯ್ ಗ್ರಾಮದಲ್ಲಿ 3,200 ಮೆಗಾ ವ್ಯಾಟ್ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ವಿಸ್ತರಿಸಲು ಅದಾನಿ ಕಂಪನಿಗೆ ಹಸಿರು ನಿಶಾನೆ ನೀಡಿದೆ, ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅದೇ ರೀತಿ ರಾಜ್ಯದಲ್ಲಿ 10 ಸಾವಿರ ಮೆಗಾ ವ್ಯಾಟ್ ಸೋಲಾರ್ ಪಾರ್ಕ್ ಅಭಿವೃದ್ಧಿಪಡಿಸಲು ಸರ್ಕಾರದೊಂದಿಗೆ ಎಂಒಯುಗೆ ಸಹಿಯನ್ನೂ ಹಾಕಿದೆ.
ಎರಡೂ ರಾಜ್ಯಗಳ ಟೆಂಡರ್‌ಗಳಲ್ಲಿನ ಪ್ರಮುಖ ಮಾನದಂಡವೆಂದರೆ, ಸರಬರಾಜುದಾರರು ಸೌರ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುವ ವಿದ್ಯುತ್ ಅನ್ನು ಒಟ್ಟಿಗೆ ಪೂರೈಸುವ ಸಾಮರ್ಥ್ಯವನ್ನು ಹೊಂದಿರಬೇಕು. ಬೃಹತ್ ಮಟ್ಟದಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ವಿದ್ಯುತ್ ಉತ್ಪಾದಕರು ಮಾತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಇಂತಹ ಟೆಂಡರ್ ನಿಯಮಗಳನ್ನು ಸೇರಿಸುವ ಮೂಲಕ, ರಾಜ್ಯ ಸರ್ಕಾರಗಳು ಅದಾನಿ ಕಂಪನಿಗೆ ಎದುರಾಗುವ ಸ್ಪರ್ಧೆಯನ್ನು ಸರಳಗೊಳಿಸಿದರು. ಪೈಪೋಟಿಯೇ ಇಲ್ಲದಂತೆ ಹಾದಿ ಸುಗಮಗೊಳಿಸಿದರು.
ಅಂದರೆ ಮಹಾರಾಷ್ಟ್ರದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಂತೋಷಪಡಿಸಲು, ಅವರ ಆಪ್ತ ಗೆಳೆಯ ಗುಜರಾತಿನ ಉದ್ಯಮಿ ಗೌತಮ್ ಅದಾನಿಯೊಂದಿಗೆ ಕೋಟ್ಯಂತರ ರೂಪಾಯಿಗಳ ವಿದ್ಯುತ್ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ಇದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ, ಮೋದಿ ಮತ್ತು ಅದಾನಿಯವರ ನಡುವಿನ ಸಂಘಟಿತ ಭ್ರಷ್ಟಾಚಾರ. ಸ್ವಪಕ್ಷಪಾತ, ಅಧಿಕಾರ ದುರುಪಯೋಗ.
ಇದಕ್ಕೆ ಪೂರಕವಾಗಿ 2017ರಿಂದ ಇಲ್ಲಿಯವರೆಗೆ, scroll.in ಸುದ್ದಿ ಜಾಲತಾಣ ವರದಿ ಮಾಡಿರುವಂತೆ, ಪ್ರಧಾನಿ ಮೋದಿಯವರು ಯಾವ ದೇಶಕ್ಕೆ ರಾಜತಾಂತ್ರಿಕ ಕಾರಣವೊಡ್ಡಿ ಪ್ರಯಾಣ ಬೆಳೆಸುತ್ತಾರೋ, ನಂತರದ ದಿನಗಳಲ್ಲಿ ಆ ದೇಶಗಳು ಗೌತಮ್ ಅದಾನಿಯೊಂದಿಗೆ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡಿವೆ. ಮಲೇಷ್ಯಾ, ಸಿಂಗಪೂರ್, ಇಸ್ರೇಲ್, ಬಾಂಗ್ಲಾದೇಶ, ಶ್ರೀಲಂಕಾ, ಕೆನ್ಯಾ, ಆಸ್ಟ್ರೇಲಿಯಾ, ನೇಪಾಳಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯಾಪಾರ-ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈಗ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿಯೊಂದಿಗೆ ಪ್ರಧಾನಿ ಮೋದಿಯವರು ಇರುವ ಚಿತ್ರಗಳನ್ನು ಕಾಂಗ್ರೆಸ್ ಮುಖಂಡ, ಕಳೆದ ವರ್ಷ ಲೋಕಸಭೆಯಲ್ಲಿ ಪ್ರದರ್ಶಿಸಿದ್ದೂ ಇದೆ. ಮೋದಿಗೂ ಅದಾನಿಗೂ ಇರುವ ಸಂಬಂಧವೇನು ಎಂದು ಪ್ರಶ್ನೆ ಮಾಡಿದ್ದೂ ಇದೆ. ಇದರ ನಡುವೆಯೇ ಕಳೆದ ವರ್ಷ ಅದಾನಿ ಗ್ರೂಪ್ ಮೇಲೆ ಕಾರ್ಪೊರೇಟ್ ವಂಚನೆಗಳು ಮತ್ತು ಕಪ್ಪು ಹಣವನ್ನು ಬಿಳಿಯಾಗಿಸುವ ಆರೋಪಗಳನ್ನು ಅಮೆರಿಕದ ಹಿಂಡೆನ್‌ಬರ್ಗ್ ಮಾಡಿದ ನಂತರ ಈ ಪ್ರಶ್ನೆಗಳು ಮತ್ತಷ್ಟು ಕೇಳಿಬರುತ್ತಲೇ ಇವೆ.
ಆದರೆ ಉತ್ತರಿಸಬೇಕಾದ ಪ್ರಧಾನಿ ಮೋದಿಯವರು, ಮೌನಕ್ಕೆ ಜಾರಿದ್ದಾರೆ. ಅಷ್ಟೇ ಅಲ್ಲ, ಲಾಭ ತರುತ್ತಿದ್ದ ದೇಶದ ಪ್ರತಿಷ್ಠಿತ ವಿಮಾನನಿಲ್ದಾಣಗಳು, ಬಂದರುಗಳು, ರೈಲ್ವೆ ನಿಲ್ದಾಣಗಳ ಉಸ್ತುವಾರಿಯನ್ನು ಅದಾನಿ ಕಂಪನಿಗೆ ವಹಿಸಿಕೊಡುತ್ತಿದ್ದಾರೆ. ಪ್ರಧಾನಿ ಅದಾನಿ ಪರವಿರುವುದರಿಂದ ಬಿಜೆಪಿ ಆಡಳಿತವಿರುವ ರಾಜ್ಯಗಳು, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅದಾನಿಗೆ ರೆಡ್ ಕಾರ್ಪೆಟ್ ಹಾಸಿ, ಕರೆದು ಉಣಬಡಿಸುತ್ತಿವೆ.
ಇದು ಸಂಘಟಿತ ಭ್ರಷ್ಟಾಚಾರವಲ್ಲವೇ? ಇಲ್ಲಿ ಅಧಿಕಾರ ದುರುಪಯೋಗವಾಗಿಲ್ಲವೇ? ಈ ವಂಚನೆಯನ್ನು ದೇಶದ ಜನತೆಯ ಗಮನಕ್ಕೆ ತರಬೇಕಾದ್ದು ಸುದ್ದಿ ಮಾಧ್ಯಮಗಳ ಜವಾಬ್ದಾರಿಯಲ್ಲವೇ?

ಲೇಖಕ, ಪತ್ರಕರ್ತ