ಲೈಂಗಿಕತೆ ಮತ್ತು ಕಾಮವೂ ಕೂಡ ಇವತ್ತು ಮಾರಾಟ ತಂತ್ರದ ಒಂದು ಭಾಗವಾಗಿದೆ. ಇದನ್ನು ನಮ್ಮ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ನೋಡುತ್ತಿದ್ದೇವೆ. ಇದರ ಸರಿತಪ್ಪುಗಳ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಲೇಖಕ ನಡಹಳ್ಳಿ ವಸಂತ್ ಅವರ ‘ಮಕ್ಕಳಿಗೆ ವೈವಾಹಿಕ ಶಿಕ್ಷಣ’ ಕೃತಿ, ಬೇರೆಬೇರೆ ವಯಸ್ಸಿನ ಮಕ್ಕಳ ಜೊತೆ ಲೈಂಗಿಕತೆಯ ಕುರಿತಾಗಿ ಮಾತನಾಡುವ ಸರಳ ಮಾದರಿಗಳನ್ನು ವಿವರಿಸುತ್ತದೆ. ನಿಮ್ಮ ಓದಿಗಾಗಿ… ಒಂದು ಅಧ್ಯಾಯ.
ಜನಸಾಮಾನ್ಯರಲ್ಲಿ, ನಮ್ಮನ್ನು ಆಳುವವರಲ್ಲಿ ಮತ್ತು ದುರಾದೃಷ್ಟವಶಾತ್ ಸಾಕಷ್ಟು ತಜ್ಞರಲ್ಲೂ ಲೈಂಗಿಕ ಶಿಕ್ಷಣದ ಬಗೆಗೆ ತಪ್ಪುತಿಳಿವಳಿಕೆಗಳಿವೆ.
ಕ್ರಿಯೆಯ ಶಿಕ್ಷಣವಲ್ಲ ಲೈಂಗಿಕತೆಯ ಶಿಕ್ಷಣ
ಹೆಸರು ಕೇಳಿದ ತಕ್ಷಣ ಮೂಗು ಮುರಿಯುವುದಕ್ಕೆ ಅಥವಾ ಗಾಬರಿಯಾಗುವುದಕ್ಕೆ ಮೊದಲ ಕಾರಣ ನಾವೆಲ್ಲಾ ಲೈಂಗಿಕ ಶಿಕ್ಷಣ ಅಂದರೆ ಲೈಂಗಿಕ ಕ್ರಿಯೆಯ ಶಿಕ್ಷಣ ಮಾತ್ರ ಎಂದುಕೊಂಡಿರುವುದು. ಇದು ಅರ್ಧ ಸತ್ಯ ಮಾತ್ರ. ಮಗು ಜನಿಸಿದಾಗಿನಿಂದ ಭಿನ್ನ ಭಿನ್ನ ರೂಪಗಳಲ್ಲಿ ಮಾನವನ ಲೈಂಗಿಕತೆ ಅಭಿವ್ಯಕ್ತಿಗೊಳ್ಳುತ್ತಾ ಹೋಗುತ್ತದೆ. ಮನಶ್ಯಾಸ್ತ್ರದ ಪಿತಾಮಹ ಸಿಗ್ಮಂಡ್ ಫ್ರಾಯ್ಡ್‌ನ ಪ್ರಕಾರ ಮಗು ತಾಯಿಯ ಮೊಲೆ ಹಾಲನ್ನು ಕುಡಿಯುವಾಗಿನಿಂದಲೇ ಅದರ ಪ್ರಾಥಮಿಕ ಲೈಂಗಿಕ ಅಭಿವ್ಯಕ್ತಿ ಆರಂಭವಾಗಿರುತ್ತದೆ. ಇದನ್ನು ಒಪ್ಪಿಕೊಳ್ಳಲು ನಮ್ಮ ಸಾಂಪ್ರದಾಯಿಕ ಮನಸ್ಸುಗಳಿಗೆ ಕಷ್ಟವಾದರೂ ಮಗು ತನ್ನ ದೇಹದ ಬಗೆಗೆ ಕುತೂಹಲಗೊಳ್ಳುವ ವಯಸ್ಸಿನಿಂದಲಾದರೂ ಅಂದರೆ ಸುಮಾರು ಒಂದು ವರ್ಷವಾದಾಗಿನಿಂದ ನಮ್ಮ ಶಿಕ್ಷಣದ ಪ್ರಕ್ರಿಯೆ ಆರಂಭವಾಗಲೇಬೇಕು.
ಮಾನವನ ಲೈಂಗಿಕತೆಯ ಅಂತಿಮ ರೂಪ ಲೈಂಗಿಕ ಕ್ರಿಯೆಯಾಗಿದ್ದರೂ, ಇದೊಂದರಿಂದಲೇ ಒಟ್ಟಾರೆ ಸಂತೃಪ್ತ ಜೀವನ ಸಾಧ್ಯವಾಗಲಾರದು. ಅದೂ ಅಲ್ಲದೆ ತೃಪ್ತಿಕರ ಲೈಂಗಿಕ ಜೀವನ ಕೌಟುಂಬಿಕ ಜೀವನದ ಒಂದು ಭಾಗವಾಗಿರಬೇಕಾದರೆ ನಮಗೆ ಸರಿಯಾದ ಮಾನಸಿಕ ಸಿದ್ಧತೆಯ ಅಗತ್ಯವಿರುತ್ತದೆ. ಇದನ್ನು ಹಂತ ಹಂತದ ಶಿಕ್ಷಣದ ಮೂಲಕ ಮಾತ್ರ ಸಾಧಿಸಲು ಸಾಧ್ಯ. ಹಾಗಾಗಿ ಲೈಂಗಿಕ ಶಿಕ್ಷಣ ನಮ್ಮ ಮಕ್ಕಳಿಗೆ ನಾವು ನೀಡುವ ಜೀವನ ಶಿಕ್ಷಣದ ಒಂದು ಭಾಗ ಮಾತ್ರ ಅಂದುಕೊಂಡಾಗ ನಮ್ಮ ಕೆಲಸ ಸುರಳೀತವಾಗುತ್ತದೆ!
ಶಿಕ್ಷಣಕ್ಕೇಕೆ ಗೌಪ್ಯತೆ?
ನಮ್ಮ ಲೈಂಗಿಕತೆಯ ಅಭಿವ್ಯಕ್ತಿಯೆಲ್ಲಾ ಖಾಸಗಿಯಾಗಿ ನಡೆದರೂ ಅದೊಂದು ಮುಜುಗರಪಟ್ಟುಕೊಳ್ಳಬೇಕಾದ, ಅದಕ್ಕಿಂತ ಹೆಚ್ಚಾಗಿ ಮಕ್ಕಳಿಂದ ಮರೆಮಾಚಬೇಕಾದ ವಿಚಾರ ಎನ್ನುವ ತಪ್ಪು ತಿಳಿವಳಿಕೆಯೇ ನಮ್ಮ ಹಿಂಜರಿಕೆಯ ಮೂಲ. ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಯಾವ್ಯಾವ ವಿಚಾರಗಳನ್ನು ಮತ್ತು ಹೇಗೆ ಹೇಳಬೇಕೆಂಬ ಅರಿವಿಲ್ಲದ ನಾವು ಇದೆಲ್ಲಾ ನಮಗೆ ಸಾಧ್ಯವಾಗುವಂತಾದ್ದಲ್ಲ ಎಂದುಕೊಂಡರೆ ನಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ. ಲೈಂಗಿಕ ಕ್ರಿಯೆ ಖಾಸಗಿಯಾಗಿ ನಡೆಯುಬೇಕು ನಿಜ, ಹಾಗೆಂದು ಅದಕ್ಕೆ ಸಂಬಂಧಪಟ್ಟ ವಿಚಾರಗಳೆಲ್ಲವನ್ನೂ ಸಾರ್ವಜನಿಕವಾಗಿ ಮಾತನಾಡಬಾರದು ಅಂತ ಏಕೆ ಅಂದುಕೊಳ್ಳಬೇಕು? ಮಾತೇ ಬರದ ಪ್ರಾಣಿಗಳು ಎಲ್ಲ ಕ್ರಿಯೆಗಳನ್ನೂ ಸಾರ್ವಜನಿಕವಾಗಿಯೇ ಮಾಡುತ್ತಿಲ್ಲವೇ?
ಇಲ್ಲೊಂದು ವಿಪರ್ಯಾಸವನ್ನು ಗಮನಿಸಬೇಕು. ಬಟ್ಟೆಗಳನ್ನೇ ತೊಡದೆ ಅಥವಾ ಮಲಗುವ ಕೋಣೆಯಂತಹ ಖಾಸಗೀ ಸ್ಥಳಗಳೇ ಇಲ್ಲದಿದ್ದ ಶಿಲಾಯುಗದ ಮಾನವ ಲೈಂಗಿಕ ಕ್ರಿಯೆಯನ್ನು ಬಹಿರಂಗವಾಗಿ ಮಾಡುತ್ತಿದ್ದಿರಲೇಬೇಕು. ಆಗ ಅದನ್ನು ಮಕ್ಕಳಿಂದ ಮುಚ್ಚಿಡಲು ಸಾಧ್ಯವಿರಲಿಲ್ಲ ಅಥವಾ ಮಕ್ಕಳಿಗೆ ಲೈಂಗಿಕತೆಯ ಬಗೆಗೆ ವೈಜ್ಞಾನಿಕವಾಗಿ ಶಿಕ್ಷಣ ಕೊಡುವ ಜ್ಞಾನ ಅಥವಾ ವ್ಯವಧಾನ ಅವರ ಬಳಿ ಇರಲಿಲ್ಲ. ಹಾಗಿದ್ದರೂ ಈಗಿನಷ್ಟು ಲೈಂಗಿಕ ವಿಕೃತಿಗಳು, ಅಪರಾಧಗಳು, ತಪ್ಪು ತಿಳಿವಳಿಕೆಗಳು, ರೋಗಗಳು ಆಗ ಇದ್ದಿರಲಾರದು. ಆದರೆ ಮಾನವ ಬಟ್ಟೆ ತೊಡಲು ಪ್ರಾರಂಭಿಸಿ, ಲೈಂಗಿಕ ಕ್ರಿಯೆಯನ್ನು ಖಾಸಗಿಯಾಗಿ ಮಾಡುವ ಅಭ್ಯಾಸ ಬೆಳೆಸಿಕೊಂಡ ಮೇಲೆ ಇವುಗಳೆಲ್ಲಾ ಹೆಚ್ಚಾಗುತ್ತಿದೆ. ಅಂದರೆ ನಾಗರಿಕತೆ ಬೆಳೆಯುತ್ತಾ ಬಂದಂತೆ ನಮ್ಮ ಲೈಂಗಿಕತೆಯ ತೊಂದರೆಗಳು ಹೆಚ್ಚಾಗುತ್ತಿದೆಯೇ? ಈಗಲೂ ನಾಗರಿಕತೆಯ ಸೋಂಕೇ ಇಲ್ಲದ ಆಫ್ರಿಕದ ಅಥವಾ ಅಂಡಮಾನ್‌ನ ಬುಡಕಟ್ಟು ಜನಾಂಗಗಳವರು ಲೈಂಗಿಕವಾಗಿ ನಮಗಿಂತ ಹೆಚ್ಚು ತೃಪ್ತಿಕರವಾಗಿ ಮತ್ತು ಆರೋಗ್ಯಕರವಾಗಿ ಬದುಕುತ್ತಿದ್ದಾರಲ್ಲವೇ? ನಾಗರಿಕರಾಗಿ ಸಮಸ್ಯೆಗಳನ್ನು ಆಹ್ವಾನಿಸಿಕೊಂಡಿರುವ ನಾವು ನಮ್ಮ ಮಕ್ಕಳನ್ನು ಅದಕ್ಕಾಗಿ ಸಿದ್ಧಗೊಳಿಸಲೇಬೇಕು.
ಕಾಲ ಬದಲಾಗಿದೆ
”ನಮ್ಮ ಕಾಲದಲ್ಲಿ ಇವೆಲ್ಲಾ ಎಲ್ಲಿತ್ತು, ನಾವೇನು ಚೆನ್ನಾಗಿ ಸಂಸಾರ ಮಾಡಿಕೊಂಡು ಬಂದಿಲ್ವಾ? ಪ್ರಾಣಿ ಪಕ್ಷಿಗಳೆಲ್ಲಾ ಲೈಂಗಿಕ ಶಿಕ್ಷಣ ಪಡೆದುಕೊಂಡಿರುವುದಿಲ್ಲವಲ್ಲಾ! ಇದನ್ನೆಲ್ಲಾ ಕಲಿಸಿದರೆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕೆಟ್ಟು ಕೆರ ಹಿಡಿದು ಹೋಗ್ತಾರೆ” ಈ ರೀತಿಯ ಸಾಕಷ್ಟು ತಗಾದೆ ತಕರಾರುಗಳಿವೆ.
* ಮೊದಲನೆಯದಾಗಿ, ಅಂದಿನ ಸಾಮಾಜಿಕ ಸ್ಥಿತಿಗತಿಗಳೇ ಬೇರೆ ಇತ್ತಲ್ಲವೇ? ಹಿಂದಿನ ಕಾಲದಲ್ಲಿ ವೈಜ್ಞಾನಿಕ ಮಾಹಿತಿಗಳು ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ತಪ್ಪುಮಾಹಿತಿಗಳು ಅತಿ ಕಡಿಮೆಯಾಗಿ ಪ್ರಸಾರವಾಗುತ್ತಿತ್ತು. ಸರೀಕರಿಂದ ಸಿಗುವ ಅತ್ಯಲ್ಪ ಮಾಹಿತಿಗಳಿಂದ ಹೇಗೋ ಜೀವನ ಸಾಗುತ್ತಿತ್ತು ಎಂಬುದಕ್ಕೆ ನಮ್ಮೆಲ್ಲರ ಬಾಲ್ಯದ ಅನುಭವಗಳೇ ಸಾಕ್ಷಿ! (ಬಾಲ್ಯದಲ್ಲಿ ದೊರೆಯುತ್ತಿದ್ದ ಮಾಹಿತಿಗಳಲ್ಲಿ ಸಾಕಷ್ಟು ತಪ್ಪಾಗಿತ್ತು ಎಂದು ನಮಗೆ ಇವತ್ತು ಗೊತ್ತಾಗಿದೆ!) ಇಂದು ವಯಸ್ಸು ಮತ್ತು ಲಿಂಗ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಪುಸ್ತಕ, ದೃಶ್ಯಮಾಧ್ಯಮ ಮತ್ತು ಅಂತರ್ಜಾಲದಲ್ಲಿ ಸಿಗುತ್ತಿರುವ ವಿಕೃತ ಮತ್ತು ವೈಭವೀಕೃತ ಮಾಹಿತಿಗಳು ನಿಜವಾಗಿಯೂ ಭಯಾನಕವಾಗಿವೆ. ಮುಗ್ಧ ಮಕ್ಕಳ ಮೇಲೆ ಇವು ಬೀರಬಹುದಾದ ದುಷ್ಪರಿಣಾಮಗಳನ್ನು ಸುತ್ತಲೂ ದಿನನಿತ್ಯ ನೋಡುತ್ತಲೇ ಇದ್ದೇವೆ. ನಮ್ಮ ಸರ್ಕಾರೀ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿರುವಾಗ ಪೋಷಕರೂ ಸುಮ್ಮನೆ ಕುಳಿತರೆ, ನಮ್ಮ ಮಕ್ಕಳಿಗೆ ವಿಚಾರಗಳನ್ನು ವೈಜ್ಞಾನಿಕವಾಗಿ ವಾಸ್ತವದ ನೆಲೆಯಲ್ಲಿ ತಿಳಿಸುವವರು ಯಾರು? ತಪ್ಪು ಮಾಹಿತಿಗಳಿಂದ ಅವರು ಅಡ್ಡದಾರಿ ಹಿಡಿದು ಅಸುಖಿಗಳಾದರೆ ಅದರಲ್ಲಿ ಪೋಷಕರ ಹೊಣೆಗಾರಿಕೆಯೂ ಇರುತ್ತದೆಯಲ್ಲವೇ?
* ಎರಡನೆಯದು, ಮನುಷ್ಯ ಮತ್ತು ಪ್ರಾಣಿಗಳ ಲೈಂಗಿಕತೆಯ ಹಿಂದಿನ ಮೂಲ ಪ್ರೇರಣೆ ಒಂದೇ ಆಗಿರುತ್ತದೆ ನಿಜ. ಆದರೆ ಮನುಷ್ಯರಿಗೆ ಸಂಪೂರ್ಣ ಬೆಳವಣಿಗೆ ಹೊಂದಿರುವ ಮೆದುಳಿದೆ. ನಾವು ಕಟ್ಟಕೊಂಡಿರುವ ಸಾಮಾಜಿಕ ವ್ಯವಸ್ಥೆಯ ಅಗತ್ಯಗಳು ಪ್ರಾಣಿಗಳ ಸಂಘ ಜೀವನದ ವ್ಯವಸ್ಥೆಗಿಂತ ಬೇರೆಯಾಗಿದೆಯಲ್ಲವೇ? ಹಾಗಿದ್ದಾಗ ಪ್ರಾಣಿಗಳಂತೆ ಮಾನವ ಶಿಶುವಿನ ಲೈಂಗಿಕತೆಯೂ ಸಹಜವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಸುಮ್ಮನೆ ಇರಲು ಸಾದ್ಯವಿಲ್ಲ.
* ಮೂರನೆಯದು ಎಲ್ಲಾ ವಿಚಾರವನ್ನು ತಿಳಿದ ಮಕ್ಕಳು ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳಬಹುದು ಅಥವಾ ಮದುವೆಗೆ ಮುನ್ನವೇ ಲೈಂಗಿಕ ಸಂಪರ್ಕ ಹೊಂದಲು ಅನಗತ್ಯ ಕುತೂಹಲ ತೋರಬಹುದು ಎನ್ನುವ ಆತಂಕ ಕೇವಲ ಕಾಲ್ಪನಿಕ. ಸಂಶೋಧನೆಗಳ ಪ್ರಕಾರ ಸೂಕ್ತ ವೈವಾಹಿಕ ಶಿಕ್ಷಣ ಪಡೆದ ಮಕ್ಕಳು ಉಳಿದ ಮಕ್ಕಳಿಗಿಂತ ಹಾದಿ ತಪ್ಪುವ ಸಾಧ್ಯತೆಗಳು ಕಡಿಮೆ. ಹಾಗೊಮ್ಮೆ ಕೆಲವು ಸಣ್ಣಪುಟ್ಟ ತೊಂದರೆಗಳಾದರೂ ಅದು ಶಿಕ್ಷಣ ಕೊಡುವ ರೀತಿಯಲ್ಲಿರುವ ಕುಂದುಗಳೇ ಹೊರತು ಶಿಕ್ಷಣ ಕೊಡುವುದರಿಂದಲೇ ಆದ ದುಷ್ಪರಿಣಾಮಗಳಲ್ಲ.
ಇದನ್ನು ಓದಿದ್ದೀರಾ?: ಹೊಸ ಓದು | ಕವಿ, ನಾಟಕಕಾರ ರಘುನಂದನ ಅವರ ಎರಡು ಪುಸ್ತಕಗಳ ಕಿರು ಪರಿಚಯ
* ಕೊನೆಯದಾಗಿ ಪೋಷಕರು ಈ ಎಲ್ಲಾ ವಿಚಾರಗಳನ್ನು ಮರೆಮಾಚಿದರೂ ಮಕ್ಕಳು ತಮ್ಮ ಕುತೂಹಲವನ್ನು ಬೇರೆಬೇರೆ ರೀತಿಯಲ್ಲಿ ತಣಿಸಿಕೊಳ್ಳುತ್ತಾರೆ. ಸ್ನೇಹಿತರು, ಮಾರುಕಟ್ಟೆಯಲ್ಲಿ ಕದ್ದುಮುಚ್ಚಿ ಮಾರಾಟವಾಗುವ ರೋಚಕ ಪುಸ್ತಕಗಳು, ಅಂತರ್ಜಾಲ ಮುಂತಾದವು ಮಕ್ಕಳ ಮಾಹಿತಿ ಕೇಂದ್ರಗಳಾಗುತ್ತವೆ. ವ್ಯಾಪಾರದ ಉದ್ದೇಶಗಳನ್ನು ಹೊಂದಿರುವ ಈ ಎಲ್ಲಾ ಮೂಲಗಳಲ್ಲಿ ವಿಕೃತ ಮತ್ತು ವೈಭವೀಕೃತ ಮಾಹಿತಿಗಳಿರುತ್ತವೆ. ಪೋಷಕರ ಮೌನ ಹಿಂಜರಿಕೆಗಳಿಂದಾಗಿ ಮಕ್ಕಳು ಇಂತಹ ಮಾಹಿತಿಗಳನ್ನೇ ಸತ್ಯವೆಂದು ನಂಬಿಕೊಂಡು ದಾರಿತಪ್ಪಿದರೆ ಇದಕ್ಕೆ ಯಾರು ಹೊಣೆಗಾರರು?
ಶಿಕ್ಷಣ ಲಿಂಗಾಧಾರಿತವಲ್ಲ
ಕೆಲವು ಪೋಷಕರು ಸ್ವಲ್ಪಮಟ್ಟಿನ ವಿಚಾರಗಳನ್ನು ಹೇಳುತ್ತಾರೆ. ಆದರೆ ಆಯಾಯಾ ಲಿಂಗದವರಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ತಿಳಿಸುತ್ತಾರೆ. ಇದರಿಂದ ಭಿನ್ನ ಲಿಂಗದವರ ಬಗೆಗಿನ ಮಕ್ಕಳ ಕುತೂಹಲ ತಣಿಯುವುದಿಲ್ಲ. ಹಾಗಾಗಿ ಎಲ್ಲಾ ಮಕ್ಕಳಿಗೆ ಸಂಪೂರ್ಣ ಲೈಂಗಿಕ ಶಿಕ್ಷಣ ನೀಡಲೇಬೇಕು.
ಎಲ್ಲವೂ ಮಾರಾಟದ ವಸ್ತುಗಳು
ಇಂದು ಎಲ್ಲವೂ ಜಾಗತೀಕರಣ ಮತ್ತು ಖಾಸಗೀಕರಣಗೊಂಡಿದೆ. ಹಾಗಾಗಿ ಎಲ್ಲವನ್ನೂ ಮಾರಾಟದ ವಸ್ತುವನ್ನಾಗಿ ಮಾಡಿ ಲಾಭ ಮಾಡುವ ದೃಷ್ಟಿಕೋನವೇ ಕಾಣುತ್ತಿದೆ. ಲೈಂಗಿಕತೆ ಮತ್ತು ಕಾಮವೂ ಕೂಡ ಇವತ್ತು ಮಾರಾಟ ತಂತ್ರದ ಒಂದು ಭಾಗವಾಗಿದೆ. ಇದನ್ನು ನಮ್ಮ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ನೋಡುತ್ತಿದ್ದೇವೆ. ಇದರ ಸರಿತಪ್ಪುಗಳ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಇದು ಅನಿವಾರ್ಯವಾದ ಬದಲಾವಣೆ ಎಂದು ನಾವೆಲ್ಲಾ ಒಪ್ಪಿಕೊಳ್ಳುವ ಹಂತ ತಲುಪಿದ್ದೇವೆ. ಇಂತಹ ಬದಲಾವಣೆ ನಮ್ಮ ಮಕ್ಕಳ ಮೇಲೆ ಎಂತಹ ಪ್ರಭಾವ ಬೀರುತ್ತದೆ ಎಂಬುದರ ಬಗೆಗೆ ಸಾಕಷ್ಟು ಅಧ್ಯಯನಗಳೇನೋ ನಡೆದಿದೆ. ಆದರೆ ಇವುಗಳ ಆಧಾರದ ಮೇಲೆ ನಮ್ಮ ಸರ್ಕಾರಗಳು ಒಂದು ಗಟ್ಟಿಯಾದ ನಿಲುವು ತೆಗೆದುಕೊಳ್ಳುತ್ತಿಲ್ಲ. ಆದರೆ ಪೋಷಕರು ತಮ್ಮ ಮಕ್ಕಳ ಬಗೆಗೆನ ಜವಾಬ್ದಾರಿಗಳಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ?

ಲೈಂಗಿಕ ಕಾಯಿಲೆಗಗಳು
ಲೈಂಗಿಕ ರೋಗಗಳು ಅದರಲ್ಲೂ ಪ್ರಮುಖವಾಗಿ ಹೆಚ್‌ಐವಿ ಏಡ್ಸ್ ಇತ್ತೀಚಿನ ದಿನಗಳಲ್ಲಿ ಭಯಾನಕವಾಗಿ ಹರಡುತ್ತಿದೆ. ಹದಿವಯಸ್ಸಿನ ಗರ್ಭಧಾರಣೆ ಮತ್ತು ಗರ್ಭಪಾತ ನಗರಗಳಲ್ಲಿ ಹೆಚ್ಚಾಗುತ್ತಿದೆ. ಇವೆಲ್ಲಾ ಹಳ್ಳಿಗಳಿಗೂ ಹರಡುವ ದಿನ ದೂರವಿಲ್ಲ. ಹಾಗಾಗಿ ಯಾವ ಪೋಷಕರೂ ತಮ್ಮ ಮಕ್ಕಳು ಇವುಗಳಿಗೆ ಬಲಿಯಾಗುವುದು ಸಾಧ್ಯವೇ ಇಲ್ಲ ಎನ್ನುವ ಭ್ರಮೆಯಲ್ಲಿ ಬದುಕುವಂತಿಲ್ಲ. ಇವುಗಳಿಗೆ ಹೆದರಿ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸುವುದು ಒಳಿತೇನೂ ಅಲ್ಲ. ಮನೆಯಲ್ಲೇ ಕುಳಿತ ಮಕ್ಕಳೂ ಅಂತರ್ಜಾಲದಲ್ಲಿ ಸಿಗುವ ವಿಕೃತ ಮಾಹಿತಿಗಳಿಂದ ದಾರಿತಪ್ಪಬಹುದು. ಹಾಗಾಗಿ ಮಕ್ಕಳಿಗೆ ಇಂದಿನ ಪ್ರಪಂಚದ ಎಲ್ಲಾ ಕೆಡುಕುಗಳ ಮಧ್ಯೆಯೂ ಸಂತೃಪ್ತಿಯಿಂದ ಬದುಕಬಲ್ಲ ತರಬೇತಿ ನೀಡುವುದೇ ಈಗ ಉಳಿದಿರುವ ದಾರಿ ಎನ್ನುವುದನ್ನು ಪೋಷಕರು ಮನಗಾಣಬೇಕಿದೆ.
(ಪ್ರತಿಗಳಿಗಾಗಿ: ಸಂಕಥನ, ಉದಯಗಿರಿ, ಮಂಡ್ಯ, ಫೋನ್ ನಂ: 9019529494, ಬೆಲೆ: ರೂ 80)