ನೆನಪು | ಪ್ರತಿಯೊಂದರಲ್ಲೂ ವಿಸ್ಮಯವನ್ನು ಹುಟ್ಟಿಸುತ್ತಿದ್ದ ಗದ್ದರ್

Date:

Advertisements
ಗದ್ದರ್‌ ಅವರನ್ನು ನಾನು ಭೇಟಿಯಾಗಿದ್ದು ಕೆಲವೇ ಬಾರಿಯಾದರೂ ಅಷ್ಟಕ್ಕೇ ಬರೆಯಲು ಬಹಳಷ್ಟಿದೆ. ಅವರ ಪ್ರತಿಯೊಂದು ಹಾಡೂ ಒಂದೊಂದು ಸಂದರ್ಭವನ್ನು ಪ್ರತಿನಿಧಿಸುತ್ತಿತ್ತು ಮತ್ತು ಆ ಸಂದರ್ಭವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿತ್ತು. ಪ್ರತಿಯೊಂದು ಹಾಡಿಗೂ ಅವರ ಅಭಿನಯ-ನೃತ್ಯ-ಕುಣಿತ, ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ನೆಗೆತ ಕೂಡ! ವಿಶಿಷ್ಟವಾಗಿರುತ್ತಿತ್ತು. 

ಕರ್ನಾಟಕದಲ್ಲಿ ಚಳವಳಿಗಳ ರಂಗದಲ್ಲಿರುವವರಿಗೆಲ್ಲ ಗೊತ್ತಿರುವಂತೆ 1970ರ ದಶಕವು ಮೈಸೂರಿನಲ್ಲಿ ಎಲ್ಲ ಬಗೆಯ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಚಳವಳಿ/ಹೋರಾಟಗಳು ಅತ್ಯಂತ ಉಚ್ಛ್ರಾಯದಲ್ಲಿದ್ದ ಕಾಲ. ಮೈಸೂರಿನ ಬಹುದೊಡ್ಡ ಸಂಖ್ಯೆಯ ಪ್ರೊಫೆಸರುಗಳು, ವಕೀಲರು ಮುಂತಾದ ಚಿಂತನಶೀಲರು (ಬುದ್ಧಿಜೀವಿಗಳು) ಈ ಚಳವಳಿಗಳ ಮುಂಚೂಣಿಯಲ್ಲಿದ್ದ ಫಲವಾಗಿ ಅವುಗಳಲ್ಲಿ ಕನ್ನಡಿಗ ವಿದ್ಯಾರ್ಥಿ ಯುವಜನರು ಸಹ ದೊಡ್ಡ ಸಂಖ್ಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ನಕ್ಸಲ್ (ಎಂಎಲ್ ಅಥವಾ ಮಾವೋವಾದಿ) ಸಹಾನುಭೂತಿಪರ ಪ್ರೊಫೆಸರರೂ ಅವರಲ್ಲಿ ಸಾಕಷ್ಟು ಜನರಿದ್ದರು. ಅಂದಿನ ಒಟ್ಟಾರೆ ಸಾಮಾಜಿಕ ಸಂದರ್ಭದಲ್ಲಿಯೇ ನಕ್ಸಲ್ ಚಳವಳಿಯ ಕುರಿತು ಪ್ರತ್ಯಕ್ಷವಾದ-ಪರೋಕ್ಷವಾದ ಸಹಾನುಭೂತಿ ಒಂದು ರೀತಿ ಅಂತರ್ಗಾಮಿಯಾಗಿತ್ತು. ಆಗಿನ್ನೂ ಎಂಬಿಬಿಎಸ್ ಅಂತಿಮ ಹಂತದ ವಿದ್ಯಾರ್ಥಿಯಾಗಿದ್ದ, ಇಂದು ಮೈಸೂರಿನ ಒಬ್ಬ ಪ್ರಮುಖ ಕ್ರಿಯಾಶೀಲ ಮಾರ್ಕ್ಸ್‌ವಾದಿ ಚಿಂತಕರೆನ್ನಿಸಿರುವ ಡಾ. ವಿ. ಲಕ್ಷ್ಮೀನಾರಾಯಣ (ಲಕ್ಷ್ಮಿ), ಕ್ರಾಂತಿಕಾರಿ ಚಿಂತನೆಗಳಿಂದ ಪ್ರೇರಿತರಾಗಿದ್ದ ನಾವೊಂದಷ್ಟು ಜನ ಬಿಸಿ ರಕ್ತದ ಯುವಕ ಯುವತಿಯರಿಗೆ ‘ನಾಯಕ’ನಂತಿದ್ದ.

ಗದ್ದರ್ ಅವರ ಪ್ರವೇಶವಾದದ್ದು ಇದೇ ಸಮಯದಲ್ಲೇ. 1977-78ರ ಆಜುಬಾಜಿನಲ್ಲಿ ಆಂಧ್ರ ಪ್ರದೇಶದ ಕರ್ನೂಲೋ ಚಿತ್ತೂರೋ ಯಾವುದೋ ಒಂದು ನಗರದಲ್ಲಿ (ಸರಿಯಾಗಿ ನೆನಪಿಲ್ಲ) ನಡೆದ ‘ರ‍್ಯಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್’ ಮತ್ತು ‘ರ‍್ಯಾಡಿಕಲ್ ಯೂತ್ ಲೀಗ್’ಗಳ (‘ಪೀಪಲ್ಸ್ ವಾರ್’ ಪಕ್ಷದ ಮುಂಚಿನ ಹೆಸರು ‘ಸಿಓಸಿ’; ಅದರ ವಿದ್ಯಾರ್ಥಿ-ಯುವಜನ ಘಟಕಗಳಿವು) ಬೃಹತ್ ಸಮಾವೇಶಕ್ಕೆ ನಮ್ಮ ಲಕ್ಷ್ಮಿಯೂ ಹೋಗಿ ಭಯಂಕರ ಫಿದಾ ಆಗಿ ಬಂದುಬಿಟ್ಟಿದ್ದ“… ಗದ್ದರ್ ಅಂತ ಒಬ್ಬ ಯುವಕ ಇದಾನೆ ಮಾರಾಯಾ. ಐದು-ಐದೂಕಾಲು ಅಡಿಗಿಂತ ಹೆಚ್ಚು ಎತ್ತರವಿಲ್ಲ, ಸ್ವಲ್ಪ ದಪ್ಪಗಿದಾನೆ. ತಾನೇ ಬರೆದ ಕ್ರಾಂತಿಕಾರಿ ಹಾಡುಗಳನ್ನ ಒಂದು ಹಾಡ್ತಾನೆ ಅಂದರೇ, ಅಬ್ಬಬ್ಬ! ಅದೇನು ಕಂಚಿನ ಕಂಠ, ಅದೇನು ಕುಣಿತ!! ಇಡೀ ವೇದಿಕೆ ತುಂಬ ಆವರಿಸಿಕೊಳ್ತಾನೆ ಮಹಾರಾಯ. ಕೈಯಲ್ಲೊಂದು ಕೆಂಪು ಬಟ್ಟೆ ತುಂಡನ್ನು ಬಾವುಟದ ರೀತಿ ಹಿಡ್ಕೊಂಡು, “ಎರ ಝಂಡೆರಝಂಡನೀಯಲೊ ಎರ್ರೆರ್ರನಿದೀ ಝಂಡನೀಯಲೋ … ಬೋಲೊ ಎರಝಂಡೆರಝಂಡೆರಝಂಡೆರಝಂಡ್ .. ಎರಝಂಡೆರಝಂಡನೀಯಲೊ” ಅಂತ ಅವನು ಹಾಡ್ತಿದ್ದರೆ ಮೈಯೆಲ್ಲ ರೋಮಾಂಚನ ಆಗೋಗುತ್ತೆ ಮಾರಾಯ, ಕೂತಲ್ಲಿ ಕೋರೋಕಾಗಲ್ವೋ …” ಅಂತೆಲ್ಲ ಬಾಯಿ ತುಂಬ ವರ್ಣಿಸುತ್ತ, ಆ ಹಾಡಿನ ತುಣುಕನ್ನು ಮತ್ತೆಮತ್ತೆ ಗುನುಗುತ್ತಲೇ ಇದ್ದ!

ಹಾಡುಗಳ ಹುಟ್ಟಿಗೆ ಕಾರಣ ಮಹಿಳೆಯರು ಎನ್ನುವುದು ಗದ್ದರ್ ಅವರ ಒಂದು ‘ಸಿದ್ಧಾಂತ’. ಮಕ್ಕಳನ್ನು ನಿದ್ರೆ ಮಾಡಿಸುವಾಗಿನಿಂದ ಹಿಡಿದು ಕೃಷಿ ಕಾರ್ಯದ ವರೆಗಿನ ವಿವಿಧ ಸಂದರ್ಭಗಳಲ್ಲಿ ಮಹಿಳೆ ಮಾಡುತ್ತಿದ್ದ ಬಹುಶಃ ವಿವಿಧ ಹಮ್ಮಿಂಗ್ ದನಿಗಳೇ ಮುಂದೆ ಹಾಡುಗಳಾದವು; ಅವು ಮಹಿಳೆಯರ ಕೆಲಸಕ್ಕೆ ನೆರವಾಗುವುದು ಮತ್ತು ಅದರ ಏಕತಾನತೆ ಕಳೆಯುವುದರ ಜೊತೆಗೆ ಕೆಲಸವನ್ನು ವೇಗಗೊಳಿಸುವುದಕ್ಕೂ ನೆರವಾಗುತ್ತಿದ್ದವು … ಎಂದು ಗದ್ದರ್ ವಿವರಿಸುತ್ತಿದ್ದರು. ಅದನ್ನವರು ನಾಟಿ ಹಾಕುವಾಗಿನ ಒಂದು ಟ್ಯೂನ್ ಮತ್ತು ಹಾಡಿನ ಮೂಲಕ ಡೆಮಾನ್‍ಸ್ಟ್ರೇಟ್ ಮಾಡುತ್ತಿದ್ದರು. ಎಡಗೈಯಲ್ಲಿ ಭತ್ತದ ಸಸಿಗಳ ಕಟ್ಟು ಹಿಡಿದುಕೊಂಡಂತೆ, ಬಲಗೈಯಿಂದ ನಾಲ್ಕು-ಐದು ಸಸಿಗಳನ್ನು ಬಿಡಿಸಿ ಬಿಡಿಸಿ, ಪ್ರತಿ ಬಾರಿಯೂ ಬಗ್ಗಿ ನೆಟ್ಟಗಾಗುತ್ತ ನಾಟಿ ಹಾಕುವಂತಹ ಅವರ ಅಭಿನಯಕ್ಕೆ ಸರಿಯಾಗಿ ಅವರ ಗೆಜ್ಜೆ ಕಟ್ಟಿದ ಪಾದಗಳೂ ಚಲಿಸುವುವು, ಅದಕ್ಕೆ ಸರಿಯಾಗಿ ದಯಾ ಅಣ್ಣನ ಢೋಲಕ್‍ನ ಹಿಮ್ಮೇಳ. ಮೊದಲಿಗೆ ಬರೀ ಹಮ್ಮಿಂಗ್; ನಂತರ ಅದಕ್ಕೊಂದು ಹಾಡು. ಹಾಡ್ತಾ, ಕೆಲಸ ಮಾಡ್ತಾ ಅದನ್ನ ಎಷ್ಟು ವೇಗವಾಗಿ ಮಾಡುವರೆಂದರೆ, ಉಸಿರುಗಟ್ಟಿಸುವ ವೇಗ – ‘ಬ್ರೆತ್ ಟೇಕಿಂಗ್ ಸ್ಪೀಡ್’ ಅಂತಾರಲ್ಲ ಹಾಗೆ. 1997ರ ಭಾರತ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ, ‘ಅಖಿಲ ಭಾರತ ಪ್ರಜಾ ಪ್ರತಿರೋಧ ವೇದಿಕೆ’ (ಂIPಖಈ) ಮುಂಬಯಿಯಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಗದ್ದರ್‍ರ ಈ ಹಾಡು ಮತ್ತು ಅಭಿನಯವನ್ನು ನೋಡಿ ಕೇಳಿ, ಕಿಕ್ಕಿರಿದಿದ್ದ ಸಭಿಕರು ಹುಚ್ಚೆದ್ದು ನಿಂತು ಚಪ್ಪಾಳೆಯ ಸುರಿಮಳೆಗರೆದ್ದರು.

Popular Singer Gaddar Rare Photos 8

ಅವರ ಲೆಕ್ಕವಿಲ್ಲದಷ್ಟು ಅದ್ಭುತ ಹಾಡು-ಅಭಿನಯಗಳಲ್ಲಿ ಕಣ್ಣಿಗೆ ಕಟ್ಟಿ ಹೃದಯ ತಟ್ಟಿ ಕಲಕುವ ಒಂದು ಹಾಡೆಂದರೆ ‘ಆಡ ಪಿಲ್ಲ ಪುಟ್ಟಿನಾದೇ ಓ ಲಚ್ಚ ಗುಮ್ಮಡಿ…’. ಹೆಣ್ಣುಮಗು ಹುಟ್ಟಿತೆಂದು ಅತ್ತೆ ಮನೆಯವರಿಂದ ಮೂದಲಿಕೆಗೆ, ತಿರಸ್ಕಾರಕ್ಕೆ ಒಳಗಾಗುವ ಯುವ ತಾಯಿ ಅದರ ಜೀವ ತೆಗೆಯಲು ನಾನಾ ವಿಧಗಳಲ್ಲಿ ಪ್ರಯತ್ನಿಸುವುದು, ಪ್ರತಿಯೊಂದು ಸಂದರ್ಭದಲ್ಲೂ ಮನಸ್ಸಾಗದೆ ಹಿಂದೆ ಬರುವುದು, ಕೊಟ್ಟಕೊನೆಗೆ, “ಇಲ್ಲ, ನಾ ನಿನ್ನ ಸಾಯಿಸಲ್ಲ. ನಿನ್ನನ್ನು ಪದ್ಮಕ್ಕ, ಬೆಳ್ಳಿ ಲಲಿತರಂತಹ ದಿಟ್ಟ ಹೋರಾಟಗಾರ್ತಿಯಾಗಿ ಮಾಡ್ತೀನಿ…” ಎಂದು ಶಪಥಗೈದು ಮಗುವನ್ನು ಎದೆಗಪ್ಪಿಕೊಳ್ಳುವ ದೃಶ್ಯ ಎಂಥ ಕಲ್ಲೆದೆಯ ನೋಡುಗರಾದರೂ ಅವರ ಮನಸ್ಸನ್ನು ಕಲಕಿ ಕಣ್ಣೀರು ತರಿಸುತ್ತಿತ್ತು. ಕೈಲಿ ಹಿಡಿದಿರುವ ಕೆಂಪು ವಸ್ತ್ರವನ್ನೇ ನವಜಾತ ಶಿಶುವಿನಂತೆ ವಿವಿಧ ಭಂಗಿಗಳಲ್ಲಿ ಎತ್ತಿಕೊಳ್ಳುವ ಅವರ ರೀತಿ ಅನನ್ಯವಾಗಿತ್ತು.

Advertisements

ಇದನ್ನು ಓದಿ ನುಡಿನಮನ | ಘರ್ಜನೆ ನಿಲ್ಲಿಸಿದ ʼಜನನಾಟ್ಯ ಮಂಡಳಿʼಯ ಜನ ಗಾಯಕ ಗದ್ದರ್

ಅವರ ಹಾಡುಗಳಿಗೆ ಅವರು ದೇಶಾದ್ಯಂತ ಸಂಚಾರ ಮಾಡುತ್ತಿದ್ದಾಗ ಕೇಳಿ ಮನನ ಮಾಡಿಕೊಳ್ಳುವ ಜನಪದ ಹಾಡುಗಳ ‘ರಾಗ’ಗಳೇ ಮೂಲ. ಅಂಥ ಒಂದು ಹಾಡನ್ನು ಸ್ವಲ್ಪ ಹೊತ್ತು ಕೇಳಿಸಿಕೊಂಡರೂ ಸಾಕು ಅದರ ಟ್ಯೂನನ್ನು ನೆನಪಿಟ್ಟುಕೊಳ್ಳುವರು. ಅಂಥ ನೂರಾರು ಟ್ಯೂನುಗಳನ್ನು ಅದು ಹೇಗೆ ಒಂದಕ್ಕೊಂದು ಕಲಸಿಕೊಳ್ಳದಂತೆ ನೆನಪಿಟ್ಟುಕೊಳ್ಳುತ್ತಿದ್ದರೋ ಅವರಿಗೇ ಗೊತ್ತು!

ಒಮ್ಮೆ ಅವರು ಬೆಂಗಳೂರಿಗೆ ಬಂದಾಗ ಪ್ರೊ. ನಗರಿ ಬಾಬಯ್ಯನವರ ಮನೆಯಲ್ಲಿ ಉಳಿದುಕೊಂಡಿದ್ದರು. ಬಾಬಯ್ಯನವರ ‘ಬೀಗ’ರಾದ ಸುಗಮಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಗದ್ದರ್‌ರನ್ನೊಮ್ಮೆ ಭೇಟಿ ಮಾಡಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಹಾಗಾಗಿ ಅಂದು ಅವರೂ ಬಂದರು. ಗದ್ದರ್ ಮಾತಾಡುವುದೆಂದರೆ ಬರೀ ಮಾತಲ್ಲ, ಮಧ್ಯಮಧ್ಯೆ ಒಂದೊಂದು ಹಾಡಿನ ತುಣುಕನ್ನು ಹಾಡುತ್ತ ಮಾತಾಡುತ್ತ ಹೋಗುವರು. ಹಾಗೆ ಅಂದೂ ಅವರೊಂದು ಹಾಡಿನ ತುಣುಕನ್ನು ಹಾಡಿದಾಗ ಸುಬ್ಬಣ್ಣನವರು ಅದರ ಸ್ವರವನ್ನು ಗುನುಗಿ, “ಇದು ಮೋಹನ ರಾಗ …” ಎಂದರು. ಅದಕ್ಕೆ ಗದ್ದರ್, “ನನಗೆ ಆ ರಾಗ ಈ ರಾಗ ಎಲ್ಲ ಗೊತ್ತಾಗೊಲ್ಲ ಸಾರ್. ಒಂದು ಹಾಡು ಕೇಳಿದರೆ ಅದರ ಟ್ಯೂನ್ ಹಿಡಿದು ಅದಕ್ಕೊಂದು ಹಾಡು ಕಟ್ಟುವುದಷ್ಟೇ ನನಗೆ ಗೊತ್ತು” ಎಂದು ಹೇಳಿ, ಕೆಲ ದಿನಗಳ ಹಿಂದಷ್ಟೇ ಅಸ್ಸಾಂ ಪ್ರವಾಸಕ್ಕೆ ಹೋಗಿ ಬಂದು, ಅಲ್ಲಿನ ಒಂದು ಜನಪದ ಟ್ಯೂನಿನಲ್ಲಿ ತಾನು ಕಟ್ಟಿದ್ದ ಹಾಡನ್ನು ಹಾಡಿದರು:
‘ಏsss … ಮಂಜು ಕೊಂಡ ಅಂಚುಡು ಚೂಡು ಚೂಡಮ್ಮೋ …
ಅಸ್ಸಾಂ ತಲ್ಲಿ ಅಂದಂ ಚೂಡು ಚೂಡಮ್ಮೋ…
ಹೋಲಿಯ ಹೋಲಿಯ ಹೋಲೋ ಹೋಲಿಯ ಹೋಲಿಯ ಹೋಲಾ
ಹೋಲಿಯ ಹೋಲಿಯ ಹೋಲೋ ಹೋಲಿಯ ಹೋಲಿಯ ಹೋಲಾ…
(ಮಂಜಿನ ಬೆಟ್ಟಗಳ ಅಂಚುಗಳನ್ನು ನೋಡು, ಅಸ್ಸಾಂ ತಾಯಿಯ ಅಂದವ ನೋಡು…)
ಆಗ ನಾನು, “ಅರೆ ಅಣ್ಣ, ಇದು ಹಿಂದಿಯ ‘ಹಮ್‍ರಾeóï’ ಸಿನಿಮಾದ ಪ್ರಖ್ಯಾತ ‘ಏ… ನೀಲ ಗಗನ ಕೇ ತಲೇ’ ಹಾಡಿನ ರಾಗದಂತಿದೆ!” ಎಂದೆ. ಅದಕ್ಕವರು, “ಆ ಹಾಡು ಕೂಡ ಸಂಗೀತ ನಿರ್ದೇಶಕ ರವಿಯವರ ಸ್ವಂತದ್ದೇನಲ್ಲ ಕಣಯ್ಯಾ. ಅಸ್ಸಾಮಿನ ಈ ಜನಪದ ಟ್ಯೂನನ್ನೇ ಮಾರ್ಪಡಿಸಿದ್ದು” ಎಂದರು.

ಗದ್ದರ್‌ ಅವರನ್ನು ನಾನು ಭೇಟಿಯಾಗಿದ್ದು ಕೆಲವೇ ಬಾರಿಯಾದರೂ ಅಷ್ಟಕ್ಕೇ ಬರೆಯಲು ಬಹಳಷ್ಟಿದೆ. ಅವರ ಪ್ರತಿಯೊಂದು ಹಾಡೂ ಒಂದೊಂದು ಸಂದರ್ಭವನ್ನು ಪ್ರತಿನಿಧಿಸುತ್ತಿತ್ತು ಮತ್ತು ಆ ಸಂದರ್ಭವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿತ್ತು. ಪ್ರತಿಯೊಂದು ಹಾಡಿಗೂ ಅವರ ಅಭಿನಯ-ನೃತ್ಯ-ಕುಣಿತ (ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ನೆಗೆತ ಕೂಡ!) ವಿಶಿಷ್ಟವಾಗಿರುತ್ತಿತ್ತು. ಮೇಲೆ ವಿವರಿಸಿದ ಕೂಸಿನ ಹಾಡಿಗೆ ನವಿರಾದ ನೃತ್ಯದಂತೆಯೇ, ಕೆಂಪು ಸೇನೆಯ ಮಾರ್ಚಿಂಗ್ ಅಥವಾ ದಲಿತರ ನರಮೇಧ ನಡೆಸಿದ ಭಾರೀ ಜಮೀನ್ದಾರ ಚೆಂಚು ರಾಮಯ್ಯನಿಗೆ ಪ್ರಜಾ ಸೇನೆ ಶಿಕ್ಷೆ ನೀಡಿದ ಸಂದರ್ಭದಂಥ ವೀರಾವೇಶ, ಹೀಗೆ ಒಂದೊಂದರ ಅಭಿನಯವೂ ವಿಶಿಷ್ಟ, ಪರ್ಫೆಕ್ಟ್.

ಹೀಗೆ ಪ್ರತಿಯೊಂದರಲ್ಲೂ ವಿಸ್ಮಯವನ್ನು ಹುಟ್ಟಿಸುತ್ತಿದ್ದ ಗದ್ದರ್ ಇನ್ನಿಲ್ಲ; ಆದರೆ ನಮ್ಮ ಸಿದ್ಧಲಿಂಗಯ್ಯನವರಂತೆ, ಅವರು ಕಟ್ಟಿ ಹಾಡಿದ ಮೈ ನವಿರೇಳಿಸುವ, ಸ್ಫೂರ್ತಿ ತುಂಬುವ ಅಥವಾ ಹೃದಯ ಕಲಕುವ ಅಸಂಖ್ಯಾತ ಕ್ರಾಂತಿಗೀತೆಗಳು ಎಂದೆಂದೂ ನಮ್ಮ ಸ್ವತ್ತಾಗಿ ಉಳಿದಿರುತ್ತವೆ. ಅಗಲಿದ ‘ಗದ್ದರನ್ನ’ನಿಗೆ ಜೈ ಭೀಮ್… ಲಾಲ್ ಸಲಾಮ್!

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X