ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಒಡಕು; ಈ ಹೋರಾಟದ ಹಿಂದಿರುವ ಕುಮ್ಮಕ್ಕು ಯಾರದ್ದು?

Date:

Advertisements

ಪಂಚಮಸಾಲಿ ಮೀಸಲಾತಿ ಹೋರಾಟಕ್ಕಾಗಿ ಆ ವರ್ಗದ ಎರಡು ಪೀಠಗಳ ಮಠಾಧೀಶರಿಗೆ ಸರ್ವ ರೀತಿಯಿಂದ ಸಂಪನ್ಮೂಲಗಳನ್ನು ಒದಗಿಸಿ ಅವರನ್ನು ಫೀಲ್ಡಿಗೆ ಬಿಡಲಾಯಿತು. ಅದರ ನಾಯಕತ್ವವನ್ನು ನಿರೀಕ್ಷಿಸಿದಂತೆ ಬಸನಗೌಡ ಪಾಟೀಲ ಯತ್ನಾಳರಿಗೆ ವಹಿಸಲಾಯಿತು. ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಯೊಂದು ವೇದಿಕೆ ಯಡಿಯೂರಪ್ಪ ಕುಟುಂಬವನ್ನು ಉಗ್ರವಾಗಿ, ಹೀನಾಯವಾಗಿ ಟೀಕಿಸಲು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಯಿತು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ವೀರೇಂದ್ರ ಪಾಟೀಲರ ಪದಚ್ಯುತಿಯಿಂದ ಕಳೆದು ಹೋಗಿದ್ದ ಲಿಂಗಾಯತ ಮತ ಬ್ಯಾಂಕನ್ನು ಮರಳಿ ಪಡೆಯಲು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಕಾಂಗ್ರೆಸ್ ಮಾಡಿದ ಕಸರತ್ತು ಸಹಜವಾದ ರಾಜಕೀಯ ನಡೆಯೇ ಆಗಿತ್ತು. ಕಾರಣ ಕೆಜೆಪಿ ಕಟ್ಟಿ ಬಿಜೆಪಿಯನ್ನು ಮಕಾಡೆ ಮಲಗಿಸಿದ ಯಡಿಯೂರಪ್ಪನವರನ್ನು ಮರಳಿ ಪಕ್ಷಕ್ಕೆ ತಂದು ಅಲಕ್ಷಿಸುವ ಕಾರ್ಯ ಆಗ ಆರಂಭಗೊಂಡಿತ್ತು. ಯಡಿಯೂರಪ್ಪ ವಿರುದ್ಧ ರಾಯಣ್ಣ ಬ್ರಿಗೇಡ್ ವೇದಿಕೆಯಿಂದ ಈಶ್ವರಪ್ಪರನ್ನು ಛೂ ಬಿಟ್ಟಿದ್ದು ಒಂದುಕಡೆಯಾದರೆ ಯತ್ನಾಳರನ್ನು ಎತ್ತಿಕಟ್ಟಿದ್ದು ಮತ್ತೊಂದು ಕಡೆ. ಆದರೆ ಲಿಂಗಾಯತ ಧರ್ಮ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಸಿದ್ಧರಾಮಯ್ಯ ಸರಕಾರ ಶಿಫಾರಸ್ಸು ಮಾಡಿದ ಕಾರಣಕ್ಕೆ 2018ರ ಚುನಾವಣೆಯಲ್ಲಿ ಧರ್ಮ ಒಡೆದರು ಎಂದು ಬೊಬ್ಬಿಡುತ್ತ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದು ಬಿಜೆಪಿಗೆ ಅನಿವಾರ್ಯವಾಯಿತು. ಬಿಜೆಪಿಯ ಎದುರಿಗೆ ಬೇರೆ ವಿಕಲ್ಪಗಳು ಇರಲಿಲ್ಲ.

ಆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಮತ್ತು ಅವರ ಬೆಂಬಲಿಗ ಲಿಂಗಾಯತ ನಾಯಕರ ಪ್ರಾಮುಖ್ಯತೆ ಗೌಣಗೊಳಿಸಲು ಕಾಂಗ್ರೆಸ್ ಪಕ್ಷದೊಳಗಿನ ಶಕ್ತಿಗಳೆಲ್ಲ ಒಂದಾಗಿ ಗುಟ್ಟಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಕೆಲಸ ಮಾಡಿದವು. ಧರ್ಮಕ್ಕೆ ಶಿಫಾರಸ್ಸು ಒಂದು ಅಚಾತುರ್ಯವೆಂದು ಬಿಂಬಿಸುವ ಲಿಂಗಾಯತ ವಿರೋಧಿ ಹಾಗೂ ಸಿದ್ಧರಾಮಯ್ಯ ವಿರೋಧಿ ಕಾಂಗ್ರೆಸ್ಸಿಗರ ಲೆಕ್ಕಾಚಾರ ಭಾಗಶಃ ಯಶಸ್ಸು ಕಂಡಿತು. ಅತಂತ್ರ ಫಲಿತಾಂಶ ಅವಕಾಶವಾದಿ ರಾಜಕಾರಣಿ ಕುಟುಂಬಕ್ಕೆ ಮತ್ತೊಮ್ಮೆ ಬಾಚಿಕೊಳ್ಳುವ ಸುಸಂಧಿಯೊದಗಿಸಿತು. ಸಮ್ಮಿಶ್ರ ಸರಕಾರ ಸಿದ್ಧರಾಮಯ್ಯನವರಿಗೆ ಇಷ್ಟವಿರಲಿಲ್ಲ. ಆದರೂ ಅವರು ತಾಳ್ಮೆಯಿಂದ ಪಕ್ಷದ ವರಿಷ್ಠರ ನಿರ್ಧಾರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಸಮ್ಮತಿಸಿದರು. ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತರನ್ನು ಗಾಳ ಹಾಕಿ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಬಿಜೆಪಿ ಅಕ್ರಮವಾಗಿ ಸರಕಾರವನ್ನು ರಚಿಸುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಯಡಿಯೂರಪ್ಪನವರಿಗೆ ತಮ್ಮ ಮಂತ್ರಿಮಂಡಲ ರಚಿಸುವಷ್ಟು ಮತ್ತು ಆಪ್ತರಿಗೆ ಸಚಿವರನ್ನಾಗಿ ಮಾಡುವಷ್ಟು ಕೂಡ ಸ್ವತಂತ್ರ ಅವರ ಪಕ್ಷ ನೀಡಲಿಲ್ಲ.

Advertisements

ಆಗ ಸಂಘಮೂಲದ ಬಿ ಎಲ್ ಸಂತೋಷ್ ಎಂಬ ಉಡುಪಿ ಮೂಲದ ವ್ಯಕ್ತಿ ರಾಜ್ಯ ಬಿಜೆಪಿಯನ್ನು ಅಕ್ಷರಶಃ ನಿಯಂತ್ರಿಸಲಾರಂಭಿಸಿದ್ದ. ಲಿಂಗಾಯತರನ್ನು ನೆಚ್ಚಿಕೊಳ್ಳದೇ ಹಿಂದುತ್ವದ ಆಧಾರದಲ್ಲಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಸಂಘದ ಯೋಜನೆಯು ಸಿದ್ಧಗೊಂಡಿತು. ಅದರ ಭಾಗವಾಗಿ ಮೂರು ಮುಖ್ಯ ಉದ್ದೇಶಗಳ ಈಡೇರಿಕೆಗಾಗಿ ಕಾರ್ಯ ಚಟುವಟಿಕೆಗಳು ಆರಂಭಗೊಂಡವು.
ಮೊದಲನೆಯದು: ಯಡಿಯೂರಪ್ಪನವರ ಆಡಳಿತಕ್ಕೆ ಹಾಗೂ ಪ್ರಾಬಲ್ಯಕ್ಕೆ ಕಡಿವಾಣ ಹಾಕುವುದುˌ ಪಕ್ಷದ ಮೇಲಿನ ಮತ್ತು ಲಿಂಗಾಯತ ಸಮಾಜದ ಮೇಲಿನ ಯಡಿಯೂರಪ್ಪನವರ ನಿಯಂತ್ರಣವನ್ನು ಕಡಿಮೆಗೊಳಿಸುವುದು. ಅದಕ್ಕಾಗಿ ಯಡಿಯೂರಪ್ಪ ವಿರೋಧಿಗಳಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ಕೊಡಮಾಡುವುದು.
ಎರಡನೆಯದು: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಹತ್ತಿಕ್ಕಲು ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಉತ್ತೇಜಿಸುವುದು.
ಮೂರನೆಯದು: ಸಿದ್ಧರಾಮಯ್ಯನವರ ಪ್ರಾಬಲ್ಯವನ್ನು ತಡೆಯಲು ಕುರುಬರ ಎಸ್ಟಿ ಮೀಸಲಾತಿ ಹೋರಾಟವನ್ನು ಮುನ್ನೆಲೆಗೆ ತರುವುದು. ಇದರಲ್ಲಿ ಕುರುಬರ ಮೀಸಲಾತಿ ಹೋರಾಟ ಕೈಗೂಡದೇ ವಿಫಲವಾಯಿತು.

panchamasali 1

ಪಂಚಮಸಾಲಿ ಮೀಸಲಾತಿ ಹೋರಾಟಕ್ಕಾಗಿ ಆ ವರ್ಗದ ಎರಡು ಪೀಠಗಳ ಮಠಾಧೀಶರಿಗೆ ಸರ್ವ ರೀತಿಯಿಂದ ಸಂಪನ್ಮೂಲಗಳನ್ನು ಒದಗಿಸಿ ಅವರನ್ನು ಫೀಲ್ಡಿಗೆ ಬಿಡಲಾಯಿತು. ಅದರ ನಾಯಕತ್ವವನ್ನು ನಿರೀಕ್ಷಿಸಿದಂತೆ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಹಿಸಲಾಯಿತು. ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಯೊಂದು ವೇದಿಕೆ ಯಡಿಯೂರಪ್ಪ ಕುಟುಂಬವನ್ನು ಉಗ್ರವಾಗಿ, ಹೀನಾಯವಾಗಿ ಟೀಕಿಸಲು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಯಿತು. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುವ ಭರವಸೆ ಬಿಜೆಪಿ ಸರಕಾರ ಕೊಡಲಿಲ್ಲ. ಅಸಲಿಗೆ ಬಿಜೆಪಿ ಅಧಿಕಾರದಲ್ಲಿರುವಾಗ ಯತ್ನಾಳ ಅವರು ಮೀಸಲಾತಿ ಹೋರಾಟ ಯಾರ ವಿರುದ್ಧ ಮಾಡಿದರು ಎನ್ನುವುದು ಯಾರಿಗೂ ಅರ್ಥವಾಗಲಿಲ್ಲ. ಮೀಸಲಾತಿ ಕೊಡಬೇಕಾದದ್ದು ಬೊಮ್ಮಾಯಿ ಸರಕಾರ ಮತ್ತು ಅದಕ್ಕೆ ಹಸಿರು ನಿಶಾನೆ ತೋರಿಸಬೇಕಾದದ್ದು ಬಿಜೆಪಿ ಹೈಕಮಾಂಡ್. ಆದರೆ ಹೋರಾಟಗಾರರ ಗುರಿ ಮಾತ್ರ ಯಡಿಯೂರಪ್ಪ ಮತ್ತು ಅವರ ಕುಟುಂಬ. ಬಿಜೆಪಿಯಲ್ಲಿರುವ ಪಂಚಮಸಾಲಿ ನಾಯಕರೆಲ್ಲರಿಗೆ ಹೋರಾಟದಲ್ಲಿ ಭಾಗವಹಿಸಲು ಸಂಘ ಮೂಲದ ಕೇಂದ್ರದ ಮಂತ್ರಿಯೊಬ್ಬರು ಮೌಖಿಕ ಆದೇಶವನ್ನು ನೀಡಿದ್ದರು ಎನ್ನುವ ಸುದ್ದಿಯೂ ಆಗ ಹರಿದಾಡಿತ್ತು.

ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರತೆ ಪಡೆಯಿತು. ಇದನ್ನು ಹಿನ್ನೆಲೆಯಲ್ಲಿ ಪ್ರಾಯೋಜಿಸಿದವರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತು. ಇನ್ನೇನು 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆತುರಾತುರವಾಗಿ ಕಾಟಾಚಾರಕ್ಕೆ ಮುಸ್ಲಿಮರಿಗೆ ಮೀಸಲಿದ್ದ 2ಬಿ ಕೋಟಾ ರದ್ದುಪಡಿಸಿ ಅದ್ಯಾವುದೊ 2ಡಿ ಪ್ರವರ್ಗ ಸೃಷ್ಟಿಸಿ, ಅದರ ಕುರಿತು ಯಾವುದೇ ಸ್ಪಷ್ಟತೆಯನ್ನು ನೀಡದೇ ಬೊಮ್ಮಾಯಿ ಸರಕಾರ ಕೈತೊಳೆದುಕೊಂಡಿತು. ಅದು ಮುಂದೆ ನ್ಯಾಯಾಲಯದಿಂದ ತಡೆಯಾಜ್ಞೆಗೊಳಗಾಯಿತು. ಯಾವ ಹೋರಾಟವೂ ಮಾಡದೇ, ಸಮೀಕ್ಷೆ ˌ ಶಿಫಾರಸ್ಸು ಹಾಗೂ ಆಯೋಗದ ವರದಿ ಇಲ್ಲದೆ ಇಡಬ್ಲ್ಯೂಎಸ್ ಕೋಟಾದಲ್ಲಿ 10%ನಷ್ಟು ಬೃಹತ್ ಪ್ರಮಾಣದ ಮೀಸಲಾತಿ ಪಡೆದು ಅದನ್ನು ನ್ಯಾಯಾಲಯದಲ್ಲಿಯೂ ಬಗೆಹರಿಸಿಕೊಂಡ ಬಿಜೆಪಿಗೆ ಪಂಚಮಸಾಲಿ ಮೀಸಲಾತಿ ಯಶಸ್ವಿಯಾಗಿ ಜಾರಿಗೊಳಿಸಲು ಯಾಕಾಗಲಿಲ್ಲ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಯತ್ನಾಳ್, ಬಿಜೆಪಿ ಹೈಕಮಾಂಡನ್ನು ಪ್ರಶ್ನಿಸಲೇಯಿಲ್ಲ. ಬದಲಾಗಿ ಇನ್ನು ಮುಂದೆ ತಾನು ಈ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯುವುದಾಗಿ 2023ರ ಚುನಾವಣೆಯ ನಂತರ ಘೋಷಿಸಿದರು.

ಯತ್ನಾಳ್‌

ಆವಾಗ ಈ ಹೋರಾಟ ಯಾತಕ್ಕಾಗಿ ನಡೆಯಿತು ಎನ್ನುವುದು ಪ್ರಜ್ಞಾವಂತ ಪಂಚಮಸಾಲಿ ಸಮುದಾಯ ಮತ್ತು ಅದನ್ನು ಬೆಂಬಲಿಸಿದ ಇತರ ಪಕ್ಷಗಳ ನಾಯಕರಿಗೆ ಮನವರಿಕೆಯಾಯಿತು. ಈಗ ಆ ಹೋರಾಟ ಅನಾಥವಾಗಿದೆ. ಅಸಾಧ್ಯವಾಗಿರುವ ಹಾಗೂ ಈಡೇರದ ಆಸೆಯೊಂದನ್ನು ಹಚ್ಚಿ ಪಂಚಮಸಾಲಿ ಸಮುದಾಯವನ್ನು ಪಂಚಮಸಾಲಿ ರಾಜಕಾರಣಿಗಳೇ ವ್ಯವಸ್ಥಿತವಾಗಿ ವಂಚಿಸಿದರು. ಆದರೆ, ಅದರ ಹಿಂದೆ ಇದ್ದದ್ದು ಮಾತ್ರ ಯಡಿಯೂರಪ್ಪ ವಿರೋಧಿ ಹಾಗೂ ಲಿಂಗಾಯತ ವಿರೋಧಿ ಸಂಘಿಗಳು ಎನ್ನುವುದು ಇನ್ನೂ ವ್ಯಾಪಕವಾಗಿ ಜನರಿಗೆ ಮನದಟ್ಟಾಗಬೇಕಿದೆ. ಇಡೀ ಪಂಚಮಸಾಲಿ ಮೀಸಲಾತಿ ಹೋರಾಟವು ಸಮುದಾಯದ ಹಿತವನ್ನು ಬಯಸದೇ, ಅದೊಂದು ವ್ಯಕ್ತಿಗತ ಹಿತಾಸಕ್ತಿಯ ದಾಳವಾಗಿ ರೂಪುಗೊಂಡಿತ್ತು. ಇದನ್ನು ಬಿಜೆಪಿಯೊಳಗಿನ ಭಿನ್ನಮತವನ್ನು ಜೀವಂತವಾಗಿಡಲು ಉದ್ದೇಶಪೂರ್ವಕವಾಗಿಯೇ ಬಳಸಿಕೊಳ್ಳಲಾಯಿತು. ಈಗಲೂ ಬಿಜೆಪಿಯೊಳಗಿನ ಭಿನ್ನಮತ ಜೀವಂತವಾಗಿ ಇಡಲಾಗಿದೆ. ಶಿಸ್ತಿನ ಪಕ್ಷವೆಂದು ಸ್ವಯಂ ಹಾಗೂ ಮಡಿಲ ಮಾಧ್ಯಮಗಳಿಂದ ಘೋಷಿಸಿಕೊಂಡಿರುವ ಬಿಜೆಪಿ ಜಗತ್ತಿನ ಅತ್ಯಂತ ಅಶಿಸ್ತಿನ ಪಕ್ಷವಾಗಿ ಕರ್ನಾಟಕದಲ್ಲಿ ಕುಖ್ಯಾತಿ ಪಡೆದಿದೆ.

ಹಿಂದುತ್ವದ ವಿಷವನ್ನುಂಡ ಜನರಿಂದ ಬಿಜೆಪಿ ಒಂದು ಹಿಡಿಯಷ್ಟು ಮತ ಬ್ಯಾಂಕ್ ಹೊಂದಿದ್ದು ಬಿಟ್ಟರೆ ಅದಕ್ಕೆ ಯಡಿಯೂರಪ್ಪನವರ ಆಶ್ರಯವೇ ಬಹುದೊಡ್ಡ ಶಕ್ತಿ. ಯಡಿಯೂರಪ್ಪನವರನ್ನು ಹೊರತುಪಡಿಸಿದ ಬಿಜೆಪಿ ಇಲ್ಲಿ ಶೂನ್ಯ. ಆದಾಗ್ಯೂ ಯಡಿಯೂರಪ್ಪನವರ ಪ್ರಭಾವವಿಲ್ಲದೆ ಪಕ್ಷವನ್ನು ಹಿಂದುತ್ವದ ಅಜೆಂಡಾ ಮೂಲಕ ಅಧಿಕಾರಕ್ಕೆ ತರಬೇಕೆನ್ನುವ ಸಂಘದ ಆಸೆಯನ್ನು ಯಡಿಯೂರಪ್ಪನವರಾಗಲಿ, ಅವರ ಅನುಯಾಯಿಗಳಾಗಲಿ ಅಷ್ಟು ಸುಲಭವಾಗಿ ನೆರವೇರಲು ಬಿಡಲಾರರು. ಪಂಚಮಸಾಲಿ ಮೀಸಲಾತಿ ಹೋರಾಟ ಪ್ರಾಯೋಜಿಸಿದ್ದರಿಂದ ಬಿಜೆಪಿಗೆ ಯಾವುದೇ ಬಗೆಯ ಲಾಭವಾಗಿಲ್ಲ, ಬದಲಿಗೆ ನಷ್ಟವೇ ಆಗಿದೆ. ಲಿಂಗಾಯತ ಧರ್ಮ ಹೋರಾಟವನ್ನು ಹತ್ತಿಕ್ಕಿದಷ್ಟು ಬಿಜೆಪಿ ಕರ್ನಾಟಕದಲ್ಲಿ ಸೊರಗಲಿದೆ ಹಾಗೂ ಅದು ಬಿಜೆಪಿ ಪಾಲಿಗೆ ದೂರಗಾಮಿ ದುಷ್ಪರಿಣಾಮವನ್ನು ಬೀರಲಿದೆ. ಯಡಿಯೂರಪ್ಪನವರನ್ನು ಕೂಡ ತಿರಸ್ಕರಿಸಿ ಸೆಕ್ಯೂಲರ್ ಬಸವವಾದಿ ಲಿಂಗಾಯತರು ಬಿಜೆಪಿಯ ಕೋಮುವಾದಿ ಸಿದ್ಧಾಂತದಿಂದ ದೂರವಿದ್ದಾರೆ. ಬಸವವಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಬಿಜೆಪಿಯೊಳಗಿನ ಭಿನ್ನಮತವು ಶಮನವಾಗದಂತೆ ಅದಕ್ಕೆ ನೀರೆರೆದು ಪೋಷಿಸುತ್ತಿರುವ ಬಿ ಎಲ್ ಸಂತೋಷ್ ಅದಕ್ಕೆ ತಕ್ಕುದ್ದನ್ನು ಪಡೆಯಲಿದ್ದಾರೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ

ಈಗಾಗಲೇ ವಚನದರ್ಶನವೆಂಬ ಕೊಳಕು ಪುಸ್ತಕ ಪ್ರಕಟಿಸಿ ಸಂಘ ಮಾಡಿದ ಅವಾಂತರಕ್ಕೆ ಲಿಂಗಾಯತರು ಸಂಘಟಿತರಾಗಿ ಪ್ರತಿಕ್ರಿಯಿಸಿದ್ದಾರೆ. ಸಕಾಲಕ್ಕೆ ಎಚ್ಚರಗೊಂಡ ಸಂಘ ವಚನದರ್ಶನ ಪುಸ್ತಕದ ವ್ಯಾಪಕ ಬಿಡುಗಡೆಯ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದೆ. ಪಂಚಮಸಾಲಿ ಹೋರಾಟದ ನೆಪದಲ್ಲಿ ಸಂಘ ಹುಟ್ಟುಹಾಕಿದ ಲಿಂಗಾಯತ ಧರ್ಮ ಹೋರಾಟದ ದಮನಕಾರಿ ಹುನ್ನಾರವಾಗಲಿ, ಯಡಿಯೂರಪ್ಪನವರನ್ನು ಹಣಿಯುವುದಾಗಲಿ ಮಾಡಿದಷ್ಟು ಬಿಜೆಪಿ ಕಳೆದುಕೊಳ್ಳುವುದೇ ಹೆಚ್ಚು. ಮುಂದೊಂದು ದಿನ ಅದೇ ಯತ್ನಾಳ್ ಬಿಜೆಪಿಗೆ ತಿರುಗಿ ಬಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಸಂಘದ ಲಿಂಗಾಯತ ವಿರೋಧಿ ಹುನ್ನಾರಗಳನ್ನು ಅಲ್ಲಿನ ಪ್ರಜ್ಞಾವಂತರು ವ್ಯವಸ್ಥಿತವಾಗಿ ಬಳಸಿಕೊಂಡು ತಮ್ಮವರನ್ನು ಜಾಗೃತಿಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ. ಬಸವಣ್ಣ, ಕುವೆಂಪು, ಕನಕ, ಶರೀಫರ ತತ್ವ ಸಿದ್ಧಾಂತಗಳ ಈ ನೆಲದಲ್ಲಿ ಸಂಘಿಗಳ ಹಿಂದುತ್ವದ ಬೀಜ ನಾಟುವುದಿಲ್ಲ. ಇದು ಅನೇಕ ವೇಳೆ ರುಜುವಾತಾದರೂ ಸಂಘಿಗಳು ತಮ್ಮ ಪ್ರಯತ್ನವನ್ನು ಬಿಟ್ಟುಕೊಟ್ಟಿಲ್ಲ. ಕರ್ನಾಟಕ ಸಂಘಿಗಳಿಗೆ ಅಷ್ಟು ಸುಲಭವಾಗಿ ದಕ್ಕಲಾರದು ಎನ್ನುವ ಸತ್ಯವನ್ನು ಅರಿತರೆ ಅವರಿಗೆ ಒಳಿತು ಎನ್ನುವ ಎಚ್ಚರಿಗೆ ಮಾತ್ರ ನಾವು ಕೊಡಬಹುದಾಗಿದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X