ಕರ್ನಾಟಕದ ವಿಶಿಷ್ಟ ಪ್ರಾದೇಶಿಕ ಪಕ್ಷವಾಗಬಹುದಿದ್ದ ಜೆಡಿಎಸ್ ತನ್ನ ಗೋರಿಯನ್ನು ತಾನೇ ತೋಡಿಕೊಂಡಿದೆ. ಪಕ್ಷದ ವರಿಷ್ಠ ದೇವೇಗೌಡರ ರಾಜಕೀಯ ಮುತ್ಸದ್ದಿತನವನ್ನು ಪಕ್ಷದ ಮೂರನೇ ತಲೆಮಾರು ಆದ ಪ್ರಜ್ವಲ್ ಅಥವಾ ನಿಖಿಲ್ ಅವರಲ್ಲಿ ಕಾಣಲಾಗದೆ ನರಳುತ್ತಿದೆ. ಈಗ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆಗಲೇ ಕುಮಾರಸ್ವಾಮಿಯವರು ಆರೆಸ್ಸೆಸ್ ಭಾಷೆ – ಪೇಶ್ವೆ ಬ್ರಾಹ್ಮಣರ ಭಾಷೆಯನ್ನು ಶುರು ಹಚ್ಚಿಕೊಂಡಿದ್ದಾರೆ. ಉಳಿದು ಬೆಳೆಯಬೇಕಾದ ಪಕ್ಷವನ್ನು ನಾಯಕರೇ ಮುಂದೆ ನಿಂತು ಇಲ್ಲವಾಗಿಸುತ್ತಿರುವುದರ ಸುತ್ತ ಒಂದು ಅವಲೋಕನ
ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಹೊರಟಿದೆ. ಇದು ಆ ಪಕ್ಷದ ದೃಷ್ಟಿಯಿಂದಲೂ ಒಳ್ಳೆಯದಲ್ಲ; ಕರ್ನಾಟಕ ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇದ್ದರೆ ತನ್ನ ಪಕ್ಷವನ್ನ ಕಾಂಗ್ರೆಸ್ ತಿಂದು ಹಾಕುತ್ತದೆ ಅನ್ನುವುದು ಕುಮಾರಸ್ವಾಮಿಯವರ ಅನಿಸಿಕೆ. ಹಾಗಾಗಿ ಇದು ಅನಿವಾರ್ಯ ಇತ್ತು, ಪಕ್ಷವನ್ನ ಉಳಿಸಿಕೊಳ್ಳುವುದಕ್ಕೆ ಇದನ್ನು ಮಾಡುತ್ತಿದ್ದೇವೆ ಅನ್ನುವ ಅವರಿಗೆ ಹೇಳಬಹುದಾದ್ದು ಇಷ್ಟೇ- ಜೆಡಿಎಸ್ ಈಗ ಉಳಿದುಕೊಂಡರೂ, ಮುಂದೆ ಮುಳುಗಿ ಹೋಗುತ್ತದೆ.
ಯಾಕೆಂದರೆ, ಕರ್ನಾಟಕದ ಜನರು ಅಥವಾ ರಾಜಕಾರಣದಲ್ಲಿ ಆಸಕ್ತಿ ಇದ್ದವರು ಗಮನಿಸಿ ಹೇಳುತ್ತಿರುವ ಒಂದು ಅಂಶವನ್ನ ಕುಮಾರಸ್ವಾಮಿಯವರು ಮಾತ್ರ ಗಮನಿಸಿಲ್ಲ. ಅದೇನೆಂದರೆ, ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಒಂದು ವ್ಯಕ್ತಿತ್ವ– ಜೆಡಿಎಸ್‌ಗೆ ಇಲ್ಲ. ಅದೇ ಜೆಡಿಎಸ್ ಕರಗಿ ಹೋಗಲಿಕ್ಕೆ, ಅದರ ಸೋಲಿಗೆ ಕಾರಣ ಆಗುತ್ತಿರುವುದು. ಆದರೂ ಕರ್ನಾಟಕಕ್ಕೆ ಒಂದು ಮೂರನೇ ರಾಜಕೀಯ ಶಕ್ತಿಯ ಅಗತ್ಯ ಇರುವುದರಿಂದ ಅದಕ್ಕೆ ಒಂದು ಸ್ಥಾನ, ಪಾತ್ರ ಇದ್ದೇ ಇತ್ತು. ಈಗ ಜೆಡಿಎಸ್ ಈ ರಾಜ್ಯದ ಎರಡನೇ ಶಕ್ತಿ ಜೊತೆಗೆ ಹೋಗಿ, ಆ ಮೂರನೇ ಶಕ್ತಿಯ ಪಾತ್ರವನ್ನು ಕಳೆದುಕೊಳ್ಳುತ್ತಿದೆ.
ಜೆಡಿಎಸ್ ಕರಗಿ ಹೋಗಲಿಕ್ಕೆ ಅದರ ಸೋಲಿಗೆ ಅದಕ್ಕಿರುವ ವ್ಯಕ್ತಿತ್ವದ ಕೊರತೆ ಹೇಗೆ ಕಾರಣ ಅನ್ನುವುದನ್ನು ಬಿಡಿಸಿ ನೋಡಿದರೆ ಇದು ಅರ್ಥವಾಗುತ್ತದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹಳ ಹೀನಾಯ ಸೋಲನ್ನು ಕಂಡಿತು. ನಾವು ಈದಿನ.ಕಾಮ್ ಸರ್ವೇ ಮಾಡಿದಾಗಲೇ ಇದು ಸ್ಪಷ್ಟವಾಗಿತ್ತು. ಜೆಡಿಎಸ್ 19ರಿಂದ 25 ಸ್ಥಾನಗಳನ್ನು ಪಡೆದುಕೊಳ್ಳಬಹುದು ಅಂತ ನಾವು ಹೇಳಿದಾಗ ಕುಮಾರಸ್ವಾಮಿಯವರು ಇಂತಹ ಸರ್ವೇಗಳನ್ನು ಭಾಳಾ ನೋಡಿದೀನಿ ಎಂದು ವ್ಯಂಗ್ಯವಾಡಿದರು.
ಆದರೆ, ಈ ಸೋಲು ನಿಚ್ಚಳವಾಗಿತ್ತು. ಕುಟುಂಬ ರಾಜಕಾರಣದ ಜೊತೆಗೆ ಇನ್ನೂ ಕೆಲವು ಕಾರಣಗಳು ಇದಕ್ಕಿದ್ದವು. ಬಹಳ ಮುಖ್ಯವಾಗಿ ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್‌ನ ಅಸ್ತಿತ್ವದ ತಳಹದಿಯೇ ಅತ್ಯಂತ ದುರ್ಬಲವಾಗಿತ್ತು. ಅದರ ವ್ಯಕ್ತಿತ್ವ ಏನು ಅನ್ನುವುದು ಗೊತ್ತಾಗದೇ ಇರುವಷ್ಟು ವೈರುಧ್ಯಗಳು ಅದರಲ್ಲಿ ತುಂಬಿಕೊಂಡಿವೆ.
ಇದನ್ನು ಓದಿದ್ದೀರಾ?: ಚುನಾವಣಾ ಬಾಂಡ್ | ಮೋದಿ ಸರ್ಕಾರ ‘ಗುಪ್ತ ದೇಣಿಗೆ’ ಬಯಸುತ್ತಿರುವುದೇಕೆ?
ಮುಖ್ಯವಾಗಿ ಅದರಲ್ಲಿ ನಾಲ್ಕು ಸಂಗತಿಗಳನ್ನು ನೋಡೋಣ.
ಒಂದು- ತನ್ನ ಹೆಸರಿನಲ್ಲೇ ಜಾತ್ಯತೀತ ಇರುವ ಈ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರಿಗೆ ಜಾತ್ಯತೀತತೆ ಕುರಿತಾಗಿ ಇರುವ ನಿಲುವು ಏನು ಎನ್ನುವುದೇ ಗೊತ್ತಾಗಲ್ಲ. ಚುನಾವಣೆಗೆ ಮುಂಚೆ ಬಿಜೆಪಿಗೆ ‘ಪೇಶ್ವೆ ಬ್ರಾಹ್ಮಣರ ಪಕ್ಷʼ ಅನ್ನುವ ಹೊಸ ನಾಮಕರಣ ಮಾಡಿ, ಬಹಳ ವಿನೂತನವಾಗಿ ಮತ್ತು ಪರಿಣಾಮಕಾರಿಯಾಗಿ ಬಿಜೆಪಿಯನ್ನು ಅವರು ಎಕ್ಸ್‌ಪೋಸ್ ಮಾಡಿದ್ದರು. ಆರೆಸ್ಸಸ್ಸನ್ನೂ ಕುಮಾರಸ್ವಾಮಿ ನೇರಾನೇರ ಎದುರುಗೊಂಡಿದ್ದ ರೀತಿ ಆಶ್ಚರ್ಯ ಹುಟ್ಟಿಸಿತ್ತು. ಆದರೆ, ಅದೇ ಕುಮಾರಸ್ವಾಮಿ ಸಲೀಸಾಗಿ ಬಿಜೆಪಿಯ ಜೊತೆಗೆ ಹೋಗಿಬಿಡಬಹುದು ಎಂಬ ಅನುಮಾನ ಎಲ್ಲಾ ಕಾಲಕ್ಕೂ ಯಾಕೆ ಇತ್ತು ಅನ್ನುವುದನ್ನು ಕುಮಾರಸ್ವಾಮಿಯವರು ಕೇಳಿಕೊಳ್ಳಬೇಕು. 2006ರಲ್ಲಿ ಕೇಳಿದ ಹಾಗೆ ʼಜಾತ್ಯತೀತತೆ ಅಂದ್ರೆ ಏನ್ರೀ?ʼ ಅಂತ ಇನ್ನೊಮ್ಮೆ ಕುಮಾರಸ್ವಾಮಿಯವರು ಕೇಳಲ್ಲ ಎನ್ನುವ ನಂಬಿಕೆ ಯಾರಿಗೂ ಇರಲಿಲ್ಲ. ಜಾತ್ಯತೀತತೆ ಅನ್ನುವುದು ಒಂದು ತಮ್ಮ ನಂಬಿಕೆಯ ಸಿದ್ಧಾಂತ ಅನ್ನುವುದಕ್ಕಿಂತ ಮುಸ್ಲಿಮರು ಓಟು ಹಾಕುವುದಾದರೆ ತಾನು ಜಾತ್ಯತೀತ, ಇಲ್ಲದಿದ್ದರೆ ಅಲ್ಲ ಅನ್ನುವ ಥರಾ ಕುಮಾರಸ್ವಾಮಿ ನಡ್ಕೋತಿದಾರೆ. ಈ ರೀತಿ ಯಾರಾದರೂ ಹೇಳುವುದಾದರೆ ಅಂತಹ ಒಂದು ಪಕ್ಷಕ್ಕೆ ತನ್ನದೇ ಆದ ಒಂದು ವ್ಯಕ್ತಿತ್ವ ಇಲ್ಲ ಎಂದೇ ಅರ್ಥ.
ಹಾಗಾದ್ರೆ ಜಾತ್ಯತೀತ ಆಗಿದ್ರೆ ಅದಕ್ಕೊಂದು ವ್ಯಕ್ತಿತ್ವ ಇದೆ. ಇಲ್ಲಾಂದ್ರೆ ವ್ಯಕ್ತಿತ್ವ ಇಲ್ಲ ಅಂತಾನಾ? ಅಲ್ಲ. ಭಾರತದ ರಾಜಕಾರಣದಲ್ಲಿ ರಾಜಕೀಯ ಪಕ್ಷವಾಗಿ ಬೆಳೆಯೋದಕ್ಕೆ ಜಾತ್ಯತೀತವಾಗಿರುವುದು ಕಡ್ಡಾಯವೇನಲ್ಲ. ದೇಶದ ಅತಿ ದೊಡ್ಡ ಪಕ್ಷ ಬಿಜೆಪಿ ಜಾತ್ಯತೀತ ಅಲ್ಲ. ಬದಲಿಗೆ ಅದು ಜಾತ್ಯತೀತ ಅಂತ ಹೇಳಿಕೊಳ್ಳುವವರನ್ನು ವ್ಯಂಗ್ಯ ಮಾಡುತ್ತದೆ. ಆದರೆ ಈ ಕುರಿತ ಜೆಡಿಎಸ್ಸಿನ ನಿಲುವು ಏನು? ಅದರ ಹೆಸರಲ್ಲೇ ಜಾತ್ಯತೀತ ಅಂತ ಇದ್ದು ನೀವು ಬಿಜೆಪಿ ಜೊತೆಗೆ ಹೋಗುವುದರಲ್ಲಿ ಸಮಸ್ಯೆ ಇದೆ. ಎಲೆಕ್ಷನ್‌ಗೆ ಮುಂಚೆ ಬಿಜೆಪಿ ಸಿದ್ಧಾಂತಕ್ಕೆ ಸಿಕ್ಕಾಪಟ್ಟೆ ವಿರೋಧಿ. ಮುಸ್ಲಿಮರು ಓಟಾಕಲಿಲ್ಲ ಅಂತ – ಬಿಜೆಪಿ ಸಿದ್ಧಾಂತ ಓಕೆ ಅಂದುಬಿಟ್ರೆ ಆಗ ಸಮಸ್ಯೆ.
ಎರಡನೇದು– ಜೆಡಿಎಸ್ ಗೆ ಇರುವ ವರ್ಗ ನೆಲೆ ಯಾವುದು? ಅದು ರೈತರ ಪಕ್ಷ ಅಂತ ಮೊದಮೊದಲು ಹೇಳಲಾಗುತ್ತಿತ್ತು. ಆದರೆ ರೈತರ ಪಕ್ಷ ಅಂತ ತನ್ನನ್ನು ಬಿಂಬಿಸಿಕೊಳ್ಳಬಯಸುವ ಜೆಡಿಎಸ್ ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ವಿಧಾನಪರಿಷತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸಿತ್ತು. ಆಗ ಏನೋ ಒತ್ತಡ ಇತ್ತು ಅಂದ್ಕೊಂಡ್ರೆ, ರೈತ ವಿರೋಧಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಲಿಕ್ಕೆ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದ್ರೆ ಮತ್ತೆ ಜೆಡಿಎಸ್ ರೈತ ವಿರೋಧಿ ಕಾಯ್ದೆ ಪರವಾಗಿ ನಿಂತುಕೊಂಡಿತ್ತು. ಹಾಗಾದ್ರೆ, ರೈತರ ಪಕ್ಷ ಅನ್ನೋದು ಹೇಗೆ? ಜಾತಿ ಐಡೆಂಟಿಟಿ ಹೊರತಾಗಿ ಜೆಡಿಎಸ್ ಇನ್ನು ಯಾರ ಪಕ್ಷ? ದಲಿತರು-ಶೋಷಿತ ಸಮುದಾಯಗಳ ಪಕ್ಷವಾ? ನಗರ ಕೇಂದ್ರಿತವಾ? ಮಧ್ಯಮ ವರ್ಗದ್ದಾ? ಯಾವುದೂ ಅಲ್ಲ. ಇದು ಎರಡನೇ ಸಮಸ್ಯೆ.
ಮೂರನೇದು- ಜಾತಿ ಐಡೆಂಟಿಟಿ– ಜೆಡಿಎಸ್ಸಿಗೆ ಒಕ್ಕಲಿಗರ ಪಕ್ಷ ಅನ್ನುವ ಹಣೆಪಟ್ಟಿ ಈಗಲೂ ಇದೆ. ಆದರೆ ಒಕ್ಕಲಿಗರಲ್ಲಿ ಈ ಪಕ್ಷದ ಕುರಿತು ತೀವ್ರ ಅಸಮಾಧಾನ ಇರುವವರೂ ಇದ್ದಾರೆ. ಮೊನ್ನೆಯ ಚುನಾವಣೆಯಲ್ಲಿ ಒಕ್ಕಲಿಗರ ಶೇ.50ರಷ್ಟು ಓಟನ್ನೂ ಜೆಡಿಎಸ್ ಪಡೆದುಕೊಂಡಿಲ್ಲ. ಒಕ್ಕಲಿಗರ ಜೊತೆಗೆ ಇನ್ನು ಯಾವ ಸಮುದಾಯವನ್ನೂ ಜೆಡಿಎಸ್ ತನ್ನ ಬೇಸ್ ಎಂದುಕೊಳ್ಳುವ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ನಂತರ, ಲಿಂಗಾಯತ ಸಮುದಾಯಕ್ಕೆ ಸೇರಿದ ಎನ್. ತಿಪ್ಪಣ್ಣ, ಗೊಲ್ಲ ಸಮುದಾಯಕ್ಕೆ ಸೇರಿದ ಎ.ಕೃಷ್ಣಪ್ಪ, ಕುರುಬ ಸಮುದಾಯಕ್ಕೆ ಸೇರಿದ ಎಚ್.ವಿಶ್ವನಾಥ್, ದಲಿತ ಸಮುದಾಯಕ್ಕೆ ಸೇರಿದ ಎಚ್.ಕೆ.ಕುಮಾರಸ್ವಾಮಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಸಿ.ಎಂ.ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲಾಗಿತ್ತು. ಆದರೆ ಅವರು ಯಾರೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದಾಗಲೀ, ತಮ್ಮದೇ ಸ್ವತಂತ್ರ ವರ್ಚಸ್ಸು ಬೆಳೆಸಿಕೊಳ್ಳುವುದಾಗಲೀ ಸಾಧ್ಯವೇ ಇರಲಿಲ್ಲ. ಕುಮಾರಸ್ವಾಮಿಯವರೇ ಅದರ ದೊಡ್ಡ ಲೀಡರ್. ಅದು ಓಕೆ. ಆದರೆ ಅಧ್ಯಕ್ಷ ಅನ್ನುವವರು ಲೆಕ್ಕಕ್ಕೇ ಇಲ್ಲ. ಹೀಗಾಗಿ ನಾಮಕಾವಾಸ್ತೆ ಅಧ್ಯಕ್ಷರನ್ನು ನೇಮಕ ಮಾಡಿದ್ದು ಯಾವುದೂ ಫಲ ಕೊಟ್ಟಿಲ್ಲ.
ನಾಲ್ಕನೇದು- ಪ್ರಾದೇಶಿಕ ಪಕ್ಷದ ವಿಚಾರಕ್ಕೆ ಸಂಬಂದಿಸಿದ್ದು- ಒಂದೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಕಾರಣಕ್ಕೆ ಯಾವ ಪಕ್ಷವೂ ಪ್ರಾದೇಶಿಕ ರಾಜಕಾರಣ ಮಾಡುವ ಪಕ್ಷ ಆಗಲ್ಲ. ಜೆಡಿಎಸ್ಸಿಗೆ ಸರಿಯಾಗಿ ಹೊಂದಿಕೊಳ್ಳುವ ವ್ಯಾಖ್ಯಾನ ಇದು. ಆಗಾಗ ಪ್ರಾದೇಶಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲವು ಮಾತುಗಳನ್ನು ಜೆಡಿಎಸ್ ನಾಯಕರು ಆಡುತ್ತಾರೆ. ಆದರೆ, ಇದು ʼಪ್ರಾದೇಶಿಕ ಹಿತಾಸಕ್ತಿʼಯನ್ನು ಎತ್ತಿ ಹಿಡಿಯುವ ಪಕ್ಷ ಎಂದು ಕರ್ನಾಟಕದ ಜನರಿಗೆ ಅನಿಸಿಲ್ಲ. ಹಾಗೆ ನೋಡಿದರೆ, ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಬಲವಾಗಿ ಎದುರಿಸುವ ಕೆಲಸವನ್ನು ಜೆಡಿಎಸ್ ಎಂದೂ ಮಾಡಲಿಲ್ಲ. ಇಡೀ ದೇಶದಲ್ಲಿ ಮೋದಿ-ಅಮಿತ್ ಶಾ ರಾಜ್ಯಗಳ ಅಧಿಕಾರ ನುಂಗಾಗ್ತಾ ಇದ್ದಾರೆ ಅನ್ನುವ ಮಾತು ಎದ್ದಿರುವಾಗ ಜೆಡಿಎಸ್ ಅವರ ಜೊತೆಗೇ ಕೈ ಜೋಡಿಸುತ್ತಿದ್ದಾರೆ.
ಜೆಡಿಎಸ್ಸಿನ ವ್ಯಕ್ತಿತ್ವ ಏನು ಅನ್ನುವುದೇ ಗೊತ್ತಾಗಲ್ಲ ಅನ್ನುವುದನ್ನು ವಿವರಿಸೋಕೆ ಇಂತಹ ಹಲವು ಉದಾಹರಣೆಗಳನ್ನು ನೀಡಬಹುದು.
ಆದರೆ ಜೆಡಿಎಸ್ಸಿಗೆ ಇದ್ದ ಅವಕಾಶ ಬೇರೆ. ವಾಸ್ತವದಲ್ಲಿ ಪ್ರಾದೇಶಿಕ ಪಕ್ಷ, ರೈತರ ಪಕ್ಷ, ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಪಕ್ಷ ಎಲ್ಲವೂ ಆಗಬಹುದಾಗಿದ್ದ ಅವಕಾಶ ಅದಕ್ಕಿತ್ತು. ಕುಮಾರಸ್ವಾಮಿಯವರಿಗೆ ಇದ್ದ ಜನಪ್ರಿಯತೆ – ಮೊದಲನೆ ಅವಧಿಯಲ್ಲಿ ಸಿಎಂ ಆಗಿದ್ದಾಗ ಬಂದಿದ್ದ ಜನಪ್ರಿಯತೆ ಆಧಾರದಲ್ಲಿ ವಿನೂತನ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ, ಕರ್ನಾಟಕ ಬ್ರ್ಯಾಂಡ್ ಅನ್ನು ಸಮರ್ಥವಾಗಿ ಸ್ಥಾಪಿಸುವ ಪಕ್ಷವಾಗಿ ಕೆಲಸ ಮಾಡುವ ಸಾಧ್ಯತೆ ಎಲ್ಲವೂ ಇದ್ದ ಪಕ್ಷ ಜೆಡಿಎಸ್. ಆದರೆ ಅದಾವುದನ್ನೂ ಅವರು ಯೋಚನೆ ಮಾಡಿದಹಾಗೆ ಕಾಣಲ್ಲ.
ಬಹಳ ಜನ ಜೆಡಿಎಸ್‌ಗೆ ಕುಟುಂಬ ರಾಜಕಾರಣವೇ ಸಮಸ್ಯೆ ಅಂತಾರೆ. ಕುಟುಂಬ ರಾಜಕಾರಣ ಎಲ್ಲಾ ರಾಜ್ಯಗಳಲ್ಲೂ ಎಲ್ಲಾ ಪಕ್ಷಗಳಲ್ಲೂ ಇದೆ. ಒಂದು ರೀತಿಯಲ್ಲಿ ಅದು ಭಾರತದ ರಾಜಕಾರಣದ ಅವಿಭಾಜ್ಯ ಅಂಗವಾಗಿದೆ. ಆದರೆ, ಅದನ್ನು ಜೆಡಿಎಸ್ ಅನುಸರಿಸಿಕೊಂಡು ಬಂದ ರೀತಿ ವಿಚಿತ್ರವಾಗಿದೆ. ಡಿಎಂಕೆಯಂತಹ ಪಕ್ಷದಲ್ಲೂ ಕುಟುಂಬದಿಂದ ಹೊರತಾದ ನಾಯಕರುಗಳು ಬೇಕಾದಷ್ಟು ಜನರಿದ್ದಾರೆ. ಆದರೆ ಜೆಡಿಎಸ್ಸಿನಲ್ಲಿ ಅಂತಹ ಸಾಧ್ಯತೆಯೇ ಇಲ್ಲದಂತೆ ಮಾಡಿದಾರೆ. ಅಲ್ಲಿ ಸಮಸ್ಯೆ ಇದೆ.
ಈ ಚುನಾವಣೆಯನ್ನೇ ನೋಡಿದರೆ, ಒಂದು ರೀತಿಯಲ್ಲಿ ಇದು ಜೆಡಿಎಸ್ಸಿನ ಕುಟುಂಬ ರಾಜಕಾರಣದ ವಿರುದ್ಧದ ತೀರ್ಪಿನ ರೀತಿ ಕಾಣತ್ತದೆ. ಬೆಂಗಳೂರಿನಿಂದ ಹೊರಟರೆ ಮೊದಲು ಸಿಗುವುದು ರಾಮನಗರ. ಅಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರು. ನಂತರ ಎಚ್‌ಡಿಕೆ ಸ್ಪರ್ಧಿಸಿದ್ದ ಚನ್ನಪಟ್ಟಣ; ಸ್ವತಃ ಕುಮಾರಸ್ವಾಮಿಯವರು ಹಿಂದಿನ ಸಲಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದರು. ಚನ್ನಪಟ್ಟಣದ ಪಕ್ಕವೇ ಮದ್ದೂರಿದೆ. ಅಲ್ಲಿಂದ ಸ್ಪರ್ಧಿಸಿದ್ದು ದೇವೇಗೌಡರ ಬೀಗರಾದ ಡಿ.ಸಿ.ತಮ್ಮಣ್ಣನವರು. ಅವರು 2018ರಲ್ಲಿ 54 ಸಾವಿರ ಅಂತರದಲ್ಲಿ ಗೆದ್ದಿದ್ದರು; ಈ ಸಾರಿ 25 ಸಾವಿರ ಮತಗಳಿಂದ ಸೋತರು. ಇನ್ನು ಹೊಳೆನರಸೀಪುರದಲ್ಲಿ ಎಂದೆಂದೂ ಅಜೇಯರಾಗಿದ್ದ ಎಚ್.ಡಿ.ರೇವಣ್ಣ ಹಿಂದಿನ ಸಾರಿ 44 ಸಾವಿರ ಅಂತರದಿಂದ ಗೆದ್ದಿದ್ದವರು ಈ ಸಾರಿ ಕೇವಲ 3,152 ಮತಗಳಿಂದಷ್ಟೇ ಗೆದ್ದರು. ಹೊಳೆನರಸೀಪುರಕ್ಕೆ ಹೊಂದಿಕೊಂಡ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಇವರ ಕುಟುಂಬದವರಾದ ಸಿ.ಎನ್.ಬಾಲಕೃಷ್ಣರಿಗೆ ಎದುರಾಳಿಗಳೇ ಇರಲಿಲ್ಲ. ಕಳೆದ ಸಾರಿ 53 ಸಾವಿರ ಮತಗಳಿಂದ ಗೆದ್ದಿದ್ದ ಬಾಲಕೃಷ್ಣ, ಈ ಸಾರಿ 6 ಸಾವಿರದಿಂದ ಗೆಲ್ಲಲಿಕೆ ಒದ್ದಾಡಿದರು. ಇದನ್ನ ದೇವೇಗೌಡರ ಫ್ಯಾಮಿಲಿ ಅರ್ಥ ಮಾಡಿಕೊಳ್ಳಬೇಕು.
ಕುಟುಂಬದ ಸದಸ್ಯರೇ ಎಲ್ಲಾ ಕಡೆ ನಿಲ್ಲಲಿಕ್ಕೆ ಒಕ್ಕಲಿಗರಿಂದಲೂ ಒಪ್ಪಿಗೆ ಇಲ್ಲ. ಇದು ಎದ್ದು ಕಾಣಿಸಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ, ಮಂಡ್ಯ ಕ್ಷೇತ್ರದಲ್ಲಿ. ನಿಖಿಲ್ ಕುಮಾರಸ್ವಾಮಿ 1,26,000 ಮತಗಳ ಅಂತರದಿಂದ ಸೋತರು. ಎಂಟಕ್ಕೆ ಎಂಟೂ ಜೆಡಿಎಸ್ ಶಾಸಕರೇ ಇದ್ದ, ಅವರಲ್ಲಿ ಮೂವರು ಸಚಿವರೇ ಇದ್ದ ಕ್ಷೇತ್ರದಲ್ಲಿ; ಮುಖ್ಯಮಂತ್ರಿಯ ಮಗನಾಗಿ ಸೋತರು.
ಹಾಗಾದ್ರೆ ತಮಿಳುನಾಡಲ್ಲಿ ಈ ಥರಾ ಇಲ್ವಾ? ಡಿಎಂಕೆ, ಶಿವಸೇನೆ, ಆರ್ ಜೆಡಿ, ನ್ಯಾಷನಲ್ ಕಾಂಗ್ರೆಸ್ ಈ ಪಕ್ಷಗಳಲ್ಲೂ ಒಂದೇ ಕುಟುಂಬಕ್ಕೆ ಸೇರಿದ ಎರಡು ಮತ್ತು ಮೂರನೇ ತಲೆಮಾರಿನ ಕುಡಿಗಳು ರಾಜಕಾರಣಕ್ಕೆ ಬಂದಿದ್ದಾರೆ. ಸ್ವತಃ ಕಾಂಗ್ರೆಸ್ಸಿನಲ್ಲಿ ನಾಲ್ಕನೇ ತಲೆಮಾರು ನಾಯಕತ್ವದಲ್ಲಿದೆ. ಆದರೆ, ಅವರೆಲ್ಲರೂ (ಸ್ವಜನಪಕ್ಷಪಾತ, ಭ್ರಷ್ಟಾಚಾರ, ಪಕ್ಷದೊಳಗಿನ ಸರ್ವಾಧಿಕಾರದ ಹೊರತಾಗಿಯೂ) ಆ ಪಕ್ಷದ ಯಾವುದೋ ತತ್ವಗಳ ಜೊತೆಗೆ ಸಮೀಕರಿಸಿಕೊಂಡಿದ್ದಾರೆ. ಚೌಧರಿ ಚರಣಸಿಂಗರಷ್ಟಲ್ಲದಿದ್ದರೂ, ಲೋಕದಳಕ್ಕೆ ಇವಾಗ್ಲೂ ರೈತರ ಛಾಪು ಇದ್ದೇ ಇದೆ. ರಾಕೇಶ್ ಟಿಕಾಯಿತ್ ಅವರಿಗೆ ದೆಹಲಿ ಗಡಿಯಲ್ಲಿ ಅವಮಾನವಾಯಿತೆಂಬ ವರ್ತಮಾನ ಬಂದ ಕೆಲವೇ ಗಂಟೆಗಳಲ್ಲಿ ಅಲ್ಲಿಗೆ ಅಜಿತ್ ಸಿಂಗ್ ಮಗ ಜಯಂತ್ ಚೌಧುರಿ ಹೋಗಿದ್ದರು. ಡಿಎಂಕೆಯ ಹೊಸ ತಲೆಮಾರಿನ ಕುಡಿಯೂ ದ್ರಾವಿಡ ರಾಜಕಾರಣದ ಜೊತೆಗೇ ಗುರುತಿಸಿಕೊಳ್ಳುತ್ತಾರೆ. ತೇಜಸ್ವಿ ಯಾದವ್ ಲಲ್ಲೂ ಪ್ರಸಾದ್ ಯಾದವರ ಮುಂದುವರಿಕೆ ಥರಾ ಕಾಣುತ್ತಾರೆ. ಆದರೆ ದೇವೇಗೌಡರ ಯಾವ ಗುಣದ ಲವಲೇಶವನ್ನು ನಿಖಿಲ್ ಅಥವಾ ಪ್ರಜ್ವಲ್ ರಿಗೆ ಆರೋಪಿಸಬಹುದು ಎಂದು ಎಷ್ಟು ತಲೆಕೆರೆದುಕೊಂಡರೂ ಹೊಳೆಯುವುದಿಲ್ಲ.
ಅಂದರೆ ಒಂದುಕಡೆ ಪಕ್ಷಕ್ಕೂ ವ್ಯಕ್ತಿತ್ವದ ಕೊರತೆ ಇದೆ; ಇನ್ನೊಂದು ಕಡೆ ಪಕ್ಷದೊಳಗಿನ ನಾಯಕರಿಗೂ ಅದರ ಕೊರತೆ ಇದೆ. ಇದು ಜೆಡಿಎಸ್ಸಿನ ಅಸಲೀ ಸಮಸ್ಯೆ.
ಇಷ್ಟೆಲ್ಲಾ ಆದ ನಂತರವೂ ಜೆಡಿಎಸ್ಸಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಒಂದು ಪಾತ್ರ ಇತ್ತು ಮತ್ತು ಬಹುಶಃ ಈಗಲೂ ಇದೆ. ದೇವೇಗೌಡರಿಗಿಂತ ಭಿನ್ನವಾದ ರಾಜಕಾರಣದಿಂದ ತನ್ನದೇ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಕುಮಾರಸ್ವಾಮಿಯವರಿಗೂ ಆ ಸಾಧ್ಯತೆ ಇತ್ತು.
ಅಂತಹ ಸಾಧ್ಯತೆಗಳನ್ನು ಬಳಸಿಕೊಳ್ಳುವುದಕ್ಕೆ ಜೆಡಿಎಸ್ ಗಂಭೀರ ಪ್ರಯತ್ನ ಹಾಕಲಿಲ್ಲ. ಹೀಗಾಗಿ ಜೆಡಿಎಸ್ಸಿಗೆ ರಾಜಕೀಯ ಪಕ್ಷಕ್ಕಿರಬೇಕಾದ ಮೂಲಭೂತ ಬುನಾದಿ ದುರ್ಬಲ ಆಗಲಿಕ್ಕೆ ಶುರುವಾಗಿ ಬಹಳ ಕಾಲವಾಯಿತು. ಅದರ ಮೂಲವನ್ನು ಅರ್ಥ ಮಾಡಿಕೊಳ್ಳದೆ, ಕಾಂಗ್ರೆಸ್ಸೇ ತನ್ನ ಶತ್ರು ಅಂತ ಜೆಡಿಎಸ್ ಭಾವಿಸಿದೆ. ವಾಸ್ತವ ಏನಂದ್ರೆ, ಜೆಡಿಎಸ್ಸಿನ ಬುಡವನ್ನು ಅಲ್ಲಾಡಿಸುತ್ತಿರುವುದು ಬಿಜೆಪಿ. ಮೊನ್ನೆ ಎಲೆಕ್ಷನ್ನಲ್ಲಿ ಬಿಜೆಪಿಗೆ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಎಲ್ಲಾ ಕಡೆ ಓಟು ಕಡಿಮೆ ಆಯ್ತು. ಆದರೂ ಅದರ ಒಟ್ಟಾರೆ ಮತಗಳಿಕೆ ಅಷ್ಟೇ ಇರುವುದು ಯಾಕೆಂದರೆ ಜೆಡಿಎಸ್ ಬೆಲ್ಟ್ ನಲ್ಲಿ ಅದರ ಮತಗಳಿಕೆ ತುಂಬಾ ಹೆಚ್ಚಾಯಿತು. ಏನೇ ಆಗ್ಲಿ ಜೆಡಿಎಸ್ಸನ್ನು ಮುಗಿಸೇ ತೀರಬೇಕು ಅನ್ನುವಂತೆ ಬಿಜೆಪಿ ಈ ಸಾರಿ ದಕ್ಷಿಣ ಕರ್ನಾಟಕದಲ್ಲಿ ಕೆಲಸ ಮಾಡಿತು. ಅದನ್ನ ಮಾಡದೇ ಇದ್ದರೆ, ಬಿಜೆಪಿ ಈ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಕ್ಕೆ ಆಗುವುದಿಲ್ಲ.
ಆದರೆ ಚುನಾವಣೆ ಆದಮೇಲೆ ಬಿಜೆಪಿ ಒಳಗಿರೋ ಸಮಸ್ಯೆಗಳ ಕಾರಣಕ್ಕೆ ಅದು ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜೆಡಿಎಸ್ ಜೊತೆಗೆ ಕೈ ಜೋಡಿಸೋಣ ಅಂತ ತೀರ್ಮಾನ ಮಾಡಿದೆ. ಆದರೆ, ಜೆಡಿಎಸ್ ಅಂತ ಒಂದು ಪಕ್ಷ ಇರೋತನಕ ಬಿಜೆಪಿಗೆ ಲಾಭ ಇಲ್ಲ. ಕಾಂಗ್ರೆಸ್ ವಿರೋಧಿ ಸ್ಪೇಸಿನಲ್ಲಿರುವ ಉಳಿದ ಪಕ್ಷಗಳನ್ನು ತಿಂದರೇನೇ ಅದಕ್ಕೆ ಅನುಕೂಲ.
ಕಾಂಗ್ರೆಸ್ ಒಂದೇ ರಾಜ್ಯದ ಜನರಿಗೆ ಪರ್ಯಾಯ ಅಂತ ಆಗದೆ ಇರುವುದಕ್ಕೂ ಜೆಡಿಎಸ್ ಅಸ್ತಿತ್ವ ಮುಖ್ಯ ಇತ್ತು. ಇಲ್ಲಾಂದ್ರೆ ಎರಡು ಪಕ್ಷಗಳ ರಾಜಕಾರಣದಲ್ಲಿ ಜನರಿಗೆ ಬೇರೆ ಆಯ್ಕೆನೇ ಇರಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಜೆಡಿಎಸ್ʼನ ಅಸ್ತಿತ್ವ ಇದ್ದಿದ್ದು ಮೂರನೆಯ ಶಕ್ತಿಯಾಗಿ. ಅಂದರೆ, ಬೇರಾವ ಕಾರಣವಿರದಿದ್ದರೂ ಮೂರನೆಯ ಶಕ್ತಿ ಅನ್ನುವುದಕ್ಕೇ ಒಂದು ಸ್ಪೇಸ್ ಇರಲು ಸಾಧ್ಯ. ಈಗ ಬಿಜೆಪಿಯ ಜೊತೆಗೆ ಹೋಗುವುದರಿಂದ ಅದನ್ನೂ ಕಳೆದುಕೊಳ್ಳುತ್ತದೆ.
ಈಗ ಬಿಜೆಪಿ ಜೊತೆಗೆ ಹೋಗದಿದ್ದರೆ ಜೆಡಿಎಸ್ ಅಸ್ತಿತ್ವ ಹೋಗಿಬಿಡುವ ಸಾಧ್ಯತೆ ಇದೆ. ಒಂದಷ್ಟು ಭಾಗವನ್ನು ಕಾಂಗ್ರೆಸ್ಸೂ, ಬಹುಭಾಗವನ್ನು ಬಿಜೆಪಿಯೂ ತಿಂದುಬಿಡುತ್ತವೆ ಅಂತ ಅವರೀಗ ಬಿಜೆಪಿ ಜೊತೆಗೆ ಹೋಗಿರಬಹುದು.
ಆದರೆ, ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್ ಸ್ವಲ್ಪ ಕಾಲದಲ್ಲೇ ಅವಸಾನ ಹೊಂದುತ್ತದೆ. ಯಾಕೆಂದರೆ ಯಾವುದೇ ರಾಜಕೀಯ ಪಕ್ಷಕ್ಕೆ ಒಂದು ವ್ಯಕ್ತಿತ್ವ ಇರುತ್ತದೆ. ಅದು ಭ್ರಷ್ಟವಾಗಿರಬಹುದು; ಒಂದಷ್ಟು ಕುಟುಂಬ ರಾಜಕಾರಣ ಇರಬಹುದು; ಬಲಾಢ್ಯರಿಗೇ ಉಪಯೋಗ ತಂದುಕೊಡುವ ಪಕ್ಷವಾಗಿರಬಹುದು. ಆದರೆ, ಅದರಾಚೆಗೆ ಜನಸಾಮಾನ್ಯರ ಮುಂದೆ ಅದಕ್ಕೊಂದು ಒಂದು ವ್ಯಕ್ತಿತ್ವವಂತೂ ಇರುತ್ತದೆ. ಜೆಡಿಎಸ್ ಇವತ್ತು ಬಳಲುತ್ತಿರುವುದು ಅಂತಹ ವ್ಯಕ್ತಿತ್ವ ಅಥವಾ ಸಾರ್ವಜನಿಕ ಗುಣ ಹೊಂದಿಲ್ಲದೇ ಇರುವುದರಿಂದ. ಆ ಪಕ್ಷದ ಮೂಲನೆಲೆಯೆಂದು ಹೇಳಲಾಗುವ ಒಕ್ಕಲಿಗರೂ ಈ ಚುನಾವಣೆಯಲ್ಲಿ (ಈದಿನ.ಕಾಮ್ ಮತ್ತು ಇಂಡಿಯಾ ಟುಡೇ ಮೈ ಆಕ್ಸಿಸ್ ಸಮೀಕ್ಷೆಯ ಸರಾಸರಿ ಪರಿಗಣಿಸುವುದಾದರೆ) ಶೇ.39ರಷ್ಟು ಮಾತ್ರ ಓಟು ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ ಶೇ.28ರಷ್ಟು ಮತ ಹಾಕಿದ್ದಾರೆ. ಒಕ್ಕಲಿಗರಲ್ಲಿ ಒಂದಷ್ಟು ಜನರಿಗೆ ಕಾಂಗ್ರೆಸ್ಸೂ, ಇನ್ನೊಂದಿಷ್ಟು ಜನರಿಗೆ ಬಿಜೆಪಿಯೂ ಮುಂದೆಯೂ ಹಿತವೆನಿಸುತ್ತಾ ಹೋಗಬಹುದು. ಒಕ್ಕಲಿಗರನ್ನು ದಾಟಿಯೂ ಬೇರೆ ಬೇರೆ ಸಮುದಾಯಗಳಿಗೆ ಜೆಡಿಎಸ್ ಹಿತವೆನಿಸಲು ಏನು ಮಾಡಬೇಕು ಎಂಬುದೇ ಜೆಡಿಎಸ್ಸಿಗೆ ಗೊತ್ತಿದ್ದಂತಿಲ್ಲ.
ಹಾಗಿದ್ದರೆ ಜೆಡಿಎಸ್ ಏನು ಮಾಡಬಹುದಿತ್ತು? ಅದರ ನೆಲೆ ಕಾಂಗ್ರೆಸ್ ವಿರೋಧಿ ಸ್ಪೇಸಿನದ್ದು. ಅದೇ ಸ್ಪೇಸಿನಲ್ಲಿರೋ ಬಿಜೆಪಿ ದುರ್ಬಲಗೊಂಡಿದೆ. ಒಬ್ಬ ಹೊಸ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನನ್ನೂ ಆರಿಸಿಕೊಳ್ಳದ ಸ್ಥಿತಿಯಲ್ಲಿದೆ. ಆಗ ಆ ಇಡೀ ಸ್ಪೇಸನ್ನು ಆವರಿಸಿಕೊಳ್ಳಲು ಜೆಡಿಎಸ್ ಹೊರಡಬಹುದಿತ್ತು. ಅದಕ್ಕೆ ಭಾಳಾ ಕಷ್ಪಪಡಬೇಕು. ಸಮಯಾನೂ ಬೇಕು. ಜೊತೆಗೆ ಅದಕ್ಕಿರುವ ಪೂರ್ವಶರತ್ತು ರಾಜಕೀಯ ಪಕ್ಷವೊಂದರ ಗುಣವನ್ನು ಮತ್ತು ವ್ಯಕ್ತಿತ್ವವನ್ನು ಪಡೆದುಕೊಳ್ಳುವುದು. ಆಗ ಅದರಿಂದ ರಾಜ್ಯಕ್ಕೂ ಒಳ್ಳೆಯದಾಗುತ್ತಿತ್ತು. ಅಂಥಾ ಪಕ್ಷ ರಾಜ್ಯಕ್ಕೆ ಬೇಕಿತ್ತು. ಅದನ್ನು ಮಾಡದೇ ಇರುವುದರಿಂದ ಜೆಡಿಎಸ್, ಜೆಡಿಯು ರೀತೀಲಿ ಕರಗಿ ಹೋಗುತ್ತದೆ.
ಇದು ರಾಜ್ಯಕ್ಕೆ ಒಳ್ಳೆಯದಲ್ಲ. ಆ ಜಾಗದಲ್ಲಿ ಇನ್ನೊಂದು ಪಕ್ಷ ನಿಧಾನಕ್ಕಾದರೂ ಬೆಳೆಯುವುದೊಂದೇ ಇದಕ್ಕೆ ಪರಿಹಾರ. ಅದಾಗುತ್ತಾ ಇಲ್ವಾ ಅನ್ನುವುದು ಲೋಕಸಭೆ ಚುನಾವಣೇಲಿ ನಿರ್ಧಾರ ಆಗಲ್ಲ. 2028ರ ಹೊತ್ತಿಗೆ ನಿರ್ಧಾರ ಆಗುತ್ತದೆ. ಅದೇನೇ ಇರಲಿ, ಈ ಮೈತ್ರಿಯಿಂದ ಜೆಡಿಎಸ್ ಬಿಜೆಪಿ ಥರಾ ಆಗೋದರ ಬದಲಿಗೆ, ಬಿಜೆಪಿಯನ್ನು ಜೆಡಿಎಸ್ ಥರಾ ಮಾಡುವ ಪ್ರಯತ್ನಾನಾ ಮಾಡ್ಲಿ ಅಂತ ಆಶಿಸೋಣ.
ಬಿಜೆಪಿಯನ್ನು ಜೆಡಿಎಸ್ ತರಹ ಮಾಡುವ ಪ್ರಯತ್ನನಾ ಮಾಡಲಿ… ಎನ್ನುವುದು ಹಲವು ಆಶಾ ಭಾವನೆಯ ಗೂಢಾರ್ಥಗಳನ್ನು ಸೂಚಿಸುತ್ತದೆ