ಪ್ರವಾದಿ ಮುಹಮ್ಮದ್(ಸ)ರು ತಮ್ಮ ಜೀವನದಲ್ಲಿ ಹೆಚ್ಚು ಕಾಳಜಿ ವಹಿಸಿರುವ ವಿಷಯವಾಗಿದೆ ಪ್ರಕೃತಿ. ಪ್ರಕೃತಿ ಮನುಷ್ಯನ ಬದುಕಿಗೆ ಅಗತ್ಯವಾದ ಒಂದು ಅಂಶ. ಅದರಿಂದ ಅವನಿಗೆ ಸಾಕಷ್ಟು ಪ್ರಯೋಜನೆಗಳು ಇವೆ ಅವನ ಬದುಕಿನ ಅಸ್ತಿತ್ವ ಪ್ರಕೃತಿಯೊಂದಿಗೆ ಜೋಡಿಸಲ್ಪಟ್ಟಿದೆ. ಪ್ರಾಕೃತಿಕ ಸಂಪತ್ತನ್ನು ಮನುಷ್ಯ ತನ್ನ ಬದುಕಿಗೆ ಪೂರಕವಾಗಿ ಬಳಸುವ ಅವಕಾಶವನ್ನು ಸೃಷ್ಟಿಕರ್ತನೂ ನೀಡಿದ್ದಾನೆ.
ಫುಡ್ ಚೈನ್ ವ್ಯವಸ್ಥೆಯಲ್ಲಿ ಜೀವಿಗಳು ಒಂದು ಇನ್ನೊಂದನ್ನು ಅವಲಂಬಿಸಿರುವುದು ಲೋಕ ನಿಯಮ. ಆದೂದರಿಂದ ಮಿತವಾದ ರೀತಿಯಲ್ಲಿ ಅಗತ್ಯಕ್ಕನುಗುಣವಾಗಿ ಅದರ ಪ್ರಯೋಜನವನ್ನು ಪಡೆಯಬಹುದು. ಪವಿತ್ರ ಕುರ್ ಆನ್ ಹೀಗೆ ಹೇಳುತ್ತದೆ “ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ. ಅಲ್ಲಾಹನು ಮಿತಿಮೀರುವವರನ್ನು ಮೆಚ್ಚುವುದಿಲ್ಲ’ (ಅಧ್ಯಾಯ ಅಲ್ ಅಅರಾಫ್ – 7:31)
ಪರಿಸರದ ಮೇಲೆ ಅಕ್ರಮವೆಸಗುವುದು ಅದನ್ನು ನಾಶಮಾಡುವುದು ಮನುಷ್ಯ ಮಾಡುವ ದೊಡ್ಡ ಅಪರಾಧವಾಗಿದೆ. ಪ್ರಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ವಿಶ್ವಾಸಿಯ ಜವಾಬ್ದಾರಿಯಾಗಿದೆಯೆಂದು ಪ್ರವಾದಿ ಬೋಧಿಸುತ್ತಾರೆ. ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳು, ಮರ ಗಿಡಗಳು, ಹಾಗೂ ಜಗತ್ತಿನಲ್ಲಿರುವ ವೈವಿಧ್ಯಮಯ ಸಕಲ ಜೀವ ಜಾಲಗಳೂ ಮನುಷ್ಯನ ಸಹವಾಸಿಗಳಾಗಿದ್ದಾರೆ. ಮನುಷ್ಯನಂತೆ ಭೂಮಿಯಲ್ಲಿ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ ಅವುಗಳಿಗೂ ಇವೆ ಎಂದಿದ್ದಾರೆ.
ಪವಿತ್ರ ಕುರ್‌ಆನ್‌ನಲ್ಲಿ ಹೀಗಿದೆ; “ಅಲ್ಲಾಹನು ಭೂಮಿಯನ್ನು ಸಕಲ ಪ್ರಾಣಿಗಳಿಗೆ ಉಂಟು ಮಾಡಿರುವನು. ಅಲ್ಲಾಹನು ಸೃಷ್ಟಿಸಿದ ಪ್ರಕೃತಿಯಲ್ಲಿ ಸಮತೋಲನವಿದೆ, ಸಮತೋಲನವನ್ನು ಕೆಡಿಸಬೇಡಿರಿ” ( ಅರ್ರಹ್ಮಾನ್ – 55:8,9) ಪ್ರವಾದಿ ಸಕಲ ಜೀವಿಗಳೊಂದಿಗೂ ನ್ಯಾಯ ಪಾಲಿಸಿದವರು ಪ್ರಕೃತಿಯ ಸಂರಕ್ಷಣೆಯ ಜೊತೆಗೆ ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿದರು ಮತ್ತು ಗೌರವಿಸಿದರು.
ಮರ-ಗಿಡಗಳ ರಕ್ಷಣೆ ವಿಚಾರವಾಗಿ ಮುಹಮ್ಮದ್ (ಸ) ರ ಒಂದು ವಚನ ಹೀಗಿದೆ; “ನಾಳೆ ಮಹಾ ಪ್ರಳಯ ಸಂಭವಿಸುವ ಸಾಧ್ಯತೆಯಿದ್ದರೆ, ಇಂದು ನೀನು ಸಾಧ್ಯವಾದರೆ ಒಂದು ಗಿಡ ನೆಟ್ಟು ಬಿಡು” ಎನ್ನುವ ಮೂಲಕ ಜೀವವನ್ನು ಉಳಿಸಿಕೊಳ್ಳುವಲ್ಲಿ ಮರಗಳ ಮಹತ್ವವನ್ನು ಸಾರಿದ್ದಾರೆ. ಅವರು ಮರಗಳನ್ನು ನೆಡುವುದನ್ನು ಪ್ರೋತ್ಸಾಹಿಸಿದರು ಮತ್ತು ಅದನ್ನು ದಾನ ಕಾರ್ಯವೆಂದು ಪರಿಗಣಿಸಿದರು.

“ಗಿಡ ನೆಟ್ಟರೆ ಅಥವಾ ಬೀಜಗಳನ್ನು ಬಿತ್ತಿದರೆ ಮತ್ತು ನಂತರ ಒಂದು ಪಕ್ಷಿ ಅಥವಾ ವ್ಯಕ್ತಿ ಅಥವಾ ಪ್ರಾಣಿ ಅದನ್ನು ತಿಂದರೆ, ಅದು ಅವನಿಗೆ ದಾನ ಅದು ಪುಣ್ಯ ಕಾರ್ಯವಾಗಿ ಪರಿಗಣಿಸಲ್ಪಡುತ್ತದೆ.”(ಹದೀಸ್). ಪಕ್ಷಿಗಳು ವಾಸ ಹೂಡಿರುವ ಮತ್ತು ಫಲಭರಿತ ಮರಗಳನ್ನು ಕಡಿಯಬಾರದು ಎಂದರು.
ಯುದ್ಧಗಳ ಸಂದರ್ಭಗಳಲ್ಲಿ ಮರಗಿಡ, ಕೃಷಿ ಪ್ರದೇಶಗಳಲ್ಲಿ ಹಾನಿಯುಂಟು ಮಾಡಬಾರದು, ಪ್ರವಾದಿ ತನ್ನ ಅಧಿಕಾರದ ಸಮಯದಲ್ಲಿ ಯುದ್ಧ ಖೈದಿಗಳಿಗೆ, ಸಣ್ಣ ಪುಟ್ಟ ತಪ್ಪುಗಳಲ್ಲಿ ಸಿಲುಕಿದ ಆರೋಪಿಗಳಿಗೆ ಬೇಸಾಯ ಮಾಡುವ, ಗಿಡ ನೆಡುವ ಶಿಕ್ಷೆ ನೀಡಿ ಬಿಡುಗಡೆ ಭಾಗ್ಯ ನೀಡುತ್ತಿದ್ದರು.
ಮರ ಬೆಳೆಸಬೇಕು, ಪರಿಸರ ಉಳಿಸಬೇಕು ಎಂಬುದು ಪ್ರವಾದಿಯ ಪ್ರಮುಖ ಕಾಳಜಿಯಾಗಿದೆ. ಒಂದು ವಚನ ಹೀಗಿದೆ “ಒಂದು ಮರ ನೆಟ್ಟು ಅದು ದೊಡ್ಡದಾಗಿ ಅದರ ಫಲಗಳನ್ನು ಪಕ್ಷಿಗಳು ಮನುಷ್ಯರು ತಿನ್ನುತ್ತಿದ್ದಾರೆ. ಅದರ ನೆರಳಲ್ಲಿ ದಾರಿಹೋಕರು ಪ್ರಾಣಿಗಳು ವಿಶ್ರಮಿಸುತ್ತಿದ್ದಾರೆಂದರೆ ಅದರ ಪ್ರತಿಫಲ ಕಾಲಕಾಲಕ್ಕೆ ನೆಟ್ಟವರ ಹೆಸರಿಗಿರುವುದೆಂದರು.
ಕೃಷಿಗೆ ಆದ್ಯತೆ ನೀಡುವ ವಿಚಾರದಲ್ಲೂ ಪ್ರವಾದಿ ಮುಹಮ್ಮದ್ ಅವರು ಸುಸ್ಥಿರ ಕೃಷಿಯನ್ನು ಉತ್ತೇಜಿಸಿದರು. ಅವರು ಕೃಷಿಯಲ್ಲಿ ಮಿತವಾಗಿರುವುದನ್ನು ಪ್ರೋತ್ಸಾಹಿಸಿದರು ಮತ್ತು ಭೂಮಿಯ ಮೇಲೆ ಅತಿಯಾದ ಶೋಷಣೆಯ ವಿರುದ್ಧ ಎಚ್ಚರಿಕೆ ನೀಡಿದರು.
“ಯಾರು ಸತ್ತ ಭೂಮಿಗೆ ಜೀವ ತರುತ್ತಾರೆ, ಅಂದರೆ, ಬಂಜರು ಭೂಮಿಯನ್ನು ಬೆಳೆಸುತ್ತಾರೆ, ಅವರಿಗೆ ಅದರಲ್ಲಿ ಪ್ರತಿಫಲವಿದೆ” (ಸುನಾನ್ ಅಲ್-ತಿರ್ಮಿದಿ). ಖಾಲಿ ಬಿದ್ದಿರುವ ಭೂಮಿಯನ್ನು ಧನಿಕನಿಂದ ವಶಕ್ಕೆ ಪಡೆದು, ಕೃಷಿ ಮಾಡಲು ಆಸಕ್ತರಾದ ರೈತರಿಗೆ ನೀಡಲು ಪ್ರವಾದಿ ಸೂಚಿಸಿದರು. ಖಲೀಫ ಉಮರ್ ತನ್ನ ಆಡಳಿತಾವಧಿಯಲ್ಲಿ ಅದನ್ನು ವ್ಯಾಪಕವಾಗಿ ಕಾರ್ಯರೂಪಕ್ಕೆ ತಂದಿದ್ದರು.

‘ಉಳುವವನೇ ಹೊಲದೊಡೆಯ’ ವ್ಯವಸ್ಥೆಯನ್ನು ಮೊದಲು ಕಾರ್ಯರೂಪಕ್ಕೆ ತಂದವರು ಪ್ರವಾದಿ ಎಂಬುದು ಸ್ಮರಣೀಯ. ಫಲ ಭರಿತವಾದ ಮರಗಳನ್ನು ಕಡಿಯುವುದು, ಕೃಷಿ ಭೂಮಿಯನ್ನು ಮಲೀನಗೊಳಿಸುವುದನ್ನು ಪ್ರವಾದಿ ವಿರೋಧಿಸಿದರು. ತೋಟಗಳಲ್ಲಿ ಹಕ್ಕಿಗಳು, ಜೀವ ಜಂತುಗಳು ಹಣ್ಣು ಹಂಪಲುಗಳನ್ನು ತಿನ್ನುವುದನ್ನು ತಡೆಯಬಾರದು. ಅದು ಅದರ ಪಾಲು ಅವುಗಳಿಗೂ ಹಕ್ಕಿದೆ ಎಂದು ಪ್ರವಾದಿ ತಿಳಿಸಿದ್ದಾರೆ. ಅನಗತ್ಯವಾಗಿ ಪರಿಸರವನ್ನು ದುರುಪಯೋಗ ಮಾಡುವುದನ್ನು, ಮಲಿನಗೊಳಿಸುವುದನ್ನು ಪ್ರವಾದಿ ವಿರೋಧಿಸಿದ್ದಾರೆ.
ಯಾರಾದರೂ ತೀರಿ ಹೋದರೆ ಅವರ ಗೋರಿಯ ಮೇಲೆ ಗಿಡ ನೆಡುವುದರಿಂದ ಅದು ಜೀವಂತ ಇರುವವರೆಗೆ ಅದರ ಪುಣ್ಯ ಆ ಮರಣಿಸಿದ ವ್ಯಕ್ತಿಗೆ ಲಭ್ಯವಾಗುತ್ತದೆ ಎಂದು ಪ್ರವಾದಿ ಸಾರಿದ್ದಾರೆ. ಆ ಕ್ರಮ ಇಂದಿಗೂ ಮುಸ್ಲಿಮರಲ್ಲಿ ಜಾರಿಯಲ್ಲಿದೆ.
ಪ್ರಾಣಿ – ಪಕ್ಷಿಗಳೊಂದಿಗೆ ಸಹಾನುಭೂತಿಯ ವಿಚಾರದಲ್ಲೂ ಪ್ರವಾದಿಯವರು ಮಾರ್ಗದರ್ಶನ ನೀಡಿದ್ದಾರೆ. “ಸರಕು ಸಾಗಾಣಿಕೆಗಾಗಿ ಉಪಯೋಗಿಸುವ ಜಾನುವಾರುಗಳಿಗೆ ಹೆಚ್ಚಿನ ಹೊರೆ ಬೀಳದಂತೆ ಎಚ್ಚರಿಕೆ ವಹಿಸಿ, ಉತ್ತಮ ಆಹಾರ ನೀಡಿ ಆರೈಕೆ ಮಾಡಬೇಕು” ಎಂದು ಸೂಚನೆ ನೀಡಿದರು.
ಮೂಖ ಜಂತುಗಳಿಗೆ ಹೊಡೆಯುವುದು, ಬಡಿಯುವುದು ಚಿತ್ರ ಹಿಂಸೆ ನೀಡುವುದನ್ನು ಖಂಡಿಸಿದ್ದಾರೆ. ನಾಯಿ ಮರಿಯನ್ನು ಕೂಡಾ “ನಾಯಿ ಮಗನೆ” ಎಂದು ಅಪಹಾಸ್ಯಕವಾಗಿ ಕೂಗುವುದನ್ನು ಅಪರಾಧವಾಗಿ ಪರಿಗಣಿಸಿದ್ದಾರೆ.
“ಒಮ್ಮೆ ಒಂದು ಮಹಿಳೆ ಬೆಕ್ಕನ್ನು ಕಟ್ಟಿ ಹಾಕಿ ಅದಕ್ಕೆ ಆಹಾರ ಪಾನೀಯ ಕೊಡದೆ ಹಿಂಸಿಸಿದ ಕಾರಣಕ್ಕೆ ದೇವನು ಅವಳನ್ನು ನರಕ್ಕೆಸೆದು ಶಿಕ್ಷಿಸಿದನು” (ವರದಿ ಅಬೂ ಹುರೈರಾ) ಎಂದು ಒಂದು ಘಟನೆಯಯನ್ನು ಪ್ರವಾದಿ ಸಹಚರರರಿಗೆ ವಿವರಿಸಿದರು.
ಪ್ರಾಣಿಯ ಮುಖಕ್ಕೆ ಹೊಡೆಯುವುದನ್ನು ಬರೆ ಹಾಕುವುದನ್ನು ಬಣ್ಣ ಹಚ್ಚುವುದನ್ನು, ವಿನೋದಕ್ಕಾಗಿ ಬಳಸುವುದನ್ನು ಪ್ರವಾದಿ ವಿರೋಧಿಸಿದರು.
ಜೀವಿಗಳ ಸಂರಕ್ಷಣೆಯೂ ಸಾಮಾಜಿಕ ಕಾಳಜಿಯ ಜೊತೆಗೆ ಅದು ಧಾರ್ಮಿಕವಾಗಿ ಒಂದು ಪುಣ್ಯ ಕಾರ್ಯವಾಗಿ ಪ್ರವಾದಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿಗಳಿಗೆ ಆ ಬಗ್ಗೆ ಅನೇಕ ಘಟನೆಗಳನ್ನು ಅವರು ವಿವರಿಸಿ ಕೊಡುತ್ತಿದ್ದರು.
ಅಬು ಹುರೈರಾ ವರದಿ ಮಾಡಿದ್ದಾರೆ: ಪ್ರವಾದಿ (ಸ) ಹೇಳಿದರು, “ಒಬ್ಬ ವ್ಯಕ್ತಿ ದಾರಿಯಲ್ಲಿ ನಡೆಯುತ್ತಿದ್ದಾಗ, ಅವನಿಗೆ ತುಂಬಾ ಬಾಯಾರಿಕೆಯಾಯಿತು. ಅವನು ಒಂದು ಬಾವಿಯನ್ನು ಕಂಡನು, ಅದರಲ್ಲಿ ಇಳಿದು, ನೀರು ಕುಡಿದು, ಮೇಲಕ್ಕೆ ಏರಿದನು. ಆಗ ನಾಯಿಯೊಂದು ತೀವ್ರ ಬಾಯಾರಿಕೆಯಿಂದ ಕೆಸರು ತಿನ್ನುವುದನ್ನು ನೋಡಿದ ಆ ವ್ಯಕ್ತಿ, ‘ಈ ನಾಯಿಗೂ ನನ್ನಂತೆಯೇ ಬಾಯಾರಿಕೆಯಾಗಿದೆ’ ಎಂದುಕೊಂಡು ಅವನು ಮತ್ತೆ ಬಾವಿಗೆ ಇಳಿದು ತನ್ನ ಪಾದರಕ್ಷೆಯಲ್ಲಿ ನೀರು ತುಂಬಿಸಿ ಅದನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಮೇಲೇರಿ ನಾಯಿಗೆ ನೀರನ್ನು ಕೊಟ್ಟನು. ದೇವರು ಅವನ ಕಾರ್ಯವನ್ನು ಮೆಚ್ಚಿದನು ಮತ್ತು ಅವನನ್ನು ಕ್ಷಮಿಸಿದನು.
ಆಗ ಸಹವರ್ತಿಗಳು, “ಪ್ರವಾದಿಗಳೇ, ಪ್ರಾಣಿಗಳ ಸೇವೆಯಲ್ಲಿ ನಮಗೆ ಪ್ರತಿಫಲವಿದೆಯೇ?” ಎಂದು ಕೇಳಿದಾಗ, ಯಾವುದೇ ಜೀವಿಯ ಸೇವೆಗೆ ಪ್ರತಿಫಲವಿದೆ. ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿಸಿ ಆಕಾಶದಲ್ಲಿರುವವರು ನಿಮ್ಮ ಮೇಲೆ ಕರುಣೆ ತೋರುವನು” ಎಂದು ಕಲಿಸಿದರು.
ಒಮ್ಮೆ ಪ್ರವಾದಿಯ ಸೋದರ ಸಂಬಂಧಿ ಅಲೀ ಬಿನ್ ಅಬೀತಾಲಿಬ್ ಆಟ ಆಡಿ ಬರುವಾಗ ಒಂದು ಪೊದೆಯ ಮೆರೆಯಲ್ಲಿದ್ದ ಹಕ್ಕಿಯ ಮರಿಯನ್ನು ತಂದು ಸಾಕಲು ತೀರ್ಮಾನಿಸಿದರು. ಇದನ್ನು ಕಂಡ ಪ್ರವಾದಿ(ಸ) ಕೋಪಗೊಂಡು ಅದನ್ನು ಅಲ್ಲಿಯೇ ಬಿಟ್ಟು ಬರುವಂತೆ ಆಜ್ಞಾಪಿಸಿದರು. ತಾಯಿ ಹಕ್ಕಿಯೂ ಆಹಾರದೊಂದಿಗೆ ಮರಳುವಾಗ ಮರಿಹಕ್ಕಿ ಕಾಣೆಯಾಗಿರುವುದನ್ನು ಕಂಡು ಬಹಳ ದುಃಖಿಯಾಗುವುದೆಂದು ಪ್ರವಾದಿ ಭಾವುಕರಾದರು.
“ಪ್ರಾಣಿ ಮತ್ತು ಪಕ್ಷಿಗಳನ್ನು ಅವುಗಳ ಸಂಗದಿಂದ ಬೇರ್ಪಡಿಸದಿರಿ. ಅವುಗಳು ನಿಮ್ಮ ಸಹಜೀವಿಗಳು. ಅವುಗಳನ್ನು ಪ್ರೀತಿಸಿ. ವ್ಯಾಪಾರಿ ಒಂಟೆಗಳ, ಕುದುರೆಗಳ, ಕತ್ತೆಗಳ ಹೆಗಲ ಮೇಲೆ ಹೆಚ್ಚು ಭಾರವನ್ನು ತೂಗಬೇಡಿ. ಯಾವ ಜೀವಿಗೆ ಉಪಕಾರ ಮಾಡಿದರೂ ಪ್ರತಿಫಲವಿದೆ ಎಂದರು.
ಮರಿಗಳಿರುವ, ಹಾಲುಣಿಸುವ ಮತ್ತು ಹಾಲು ನೀಡುವ ಪ್ರಾಣಿಗಳನ್ನೂ ವಧಿಸಬೇಡಿರಿ” “ಬಾಣ ಪ್ರಯೋಗಿಸಿ ಬೇಟೆಯಾಡುವುದನ್ನು, ಹಾಲು ಕುಡಿಯುವ, ಪ್ರಸವಕ್ಕೆ ನಿಂತಿರುವ ಪ್ರಾಯಕ್ಕೆ ಬರದ, ಕೃಷಿಗೆ ಉಪಯೋಗುವ ಪ್ರಾಣಿಗಳನ್ನು ದಬಹ್ (ಕಡಿಯುವುದು) ಮಾಡುವುದನ್ನು ವಿರೋಧಿಸಿದ್ದಾರೆ. ಪ್ರಾಣಿ ಪಕ್ಷಿಗಳಿಗೆ ಕಲ್ಲೆಸೆಯುವುದು, ಬಾಣ ಪ್ರಯೋಗಿಸುವುದು, ವಿನೋದಕ್ಕಾಗಿ ಭೇಟೆಯಾಡುವುದು ಪ್ರವಾದಿ ವಿರೋಧಿಸಿದರು.”ನಿಮ್ಮ ಪೈಕಿ ಯಾರು ಬೀಲದಲ್ಲಿ ಮಾತ್ರ ಶಂಕೆ ಮಾಡದಿರಿ” ಎಂದರು.
ಮೂಕ ಪ್ರಾಣಿಯ ಬಗ್ಗೆ ದೇವನ ಭಯವಿರಿಸಿರಿ ಅವು ಅನಾರೋಗ್ಯದಿಂದಿರುವಾಗ ಅವುಗಳಿಂದ ಕೆಲಸ ಮಾಡಿಸಬೇಡಿ.
ನೀರು ಅತೀ ಅಮೂಲ್ಯವಾದ ನೈಸರ್ಗಿಕ ಸಂಪತ್ತು ನೀರಿಲ್ಲದೆ ಯಾವ ಪ್ರಾಣಿಗಳಿಗೂ ಬದುಕಲು ಸಾಧ್ಯವಿಲ್ಲ. ಎಲ್ಲ ಜೀವ ಸಂಕುಲಗಳು ತಮ್ಮ ಜೀವ ರಕ್ಷಣೆಗಾಗಿ ನೀರನ್ನು ಅವಲಂಬಿಸಿದೆ. ಕೆರೆ,ಹಳ್ಳ, ಕೊಲದ ನೀರನ್ನು ಮಲೀನಗೋಳಿಸುವುದು, ಕಟ್ಟಿ ನಿಂತ ನೀರಿನ ಮೇಲೆ ಮೂತ್ರ ಮಾಡುವುದನ್ನು ಪ್ರವಾದಿ ಖಂಡಿಸಿದ್ದಾರೆ.

ಮಿತವಾಗಿ ನೀರನ್ನು ಬಳಕೆ ಮಾಡಬೇಕು, ನೀರನ್ನು ದುರುಪಯೋಗ ಮಾಡಬಾರದು. ಕುಡಿಯುವ ನೀರನ್ನು, ಹರಿಯುವ ನೀರನ್ನು ಸ್ವಾರ್ಥ ಸಾಧನೆಗಾಗಿ ತಡೆ ಹಿಡಿಯಬಾರದು ನೀರು ದೇವನ ಕೊಡುಗೆಯಾಗಿದೆ ಎಂದಿದ್ದಾರೆ.
ಕುರ್‌ಆನಿನನಲ್ಲಿ, “ಮಳೆಯನ್ನು ಸುರಿಸುವವರು ನಾವು” (56: 68-69) ಎಂದು ಹೇಳಲಾಗಿದೆ. ಪ್ರವಾದಿ ನೀರಿನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿದ್ದರು. ಆದ್ದರಿಂದಲೇ ಸಣ್ಣ ಪ್ರಮಾಣದ ಅಶುದ್ಧಗಳಿಂದ ಶುದ್ಧರಾಗಲು “ವಝೂ” (ಐಚ್ಛಿಕ ಸ್ನಾನ) ಮತ್ತು ನೀರಿನ ಅಭಾವದಿಂದಿರುವವರಿಗೆ ತಯಮ್ಮಂ ಕರ್ಮ ನಿರ್ವಹಿಸಿ ನಮಾಝ್ ಮಾಡಬೇಕೆಂಬ ಸಲಹೆ ಕೊಟ್ಟರು. ಮಸೀದಿಯಲ್ಲಿರುವ “ಹೌಲ್” ಅಥವಾ ನೀರಿನ ಕೊಳ ಎಂಬ ಪರಿಕಲ್ಪನೆ ನೀರಿನ ಸಂರಕ್ಷಣೆ ಮತ್ತು ಜಾಗೃತಿಯ ಭಾಗವಾಗಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಪಾರಂಪರಿಕ ಕೃಷಿ ಉಳಿಸಿ: ಕುಲಾಂತರಿ ಆಹಾರದ ಎದುರು ಹೋರಾಟಕ್ಕೆ ಡಾ ಮಂಜುನಾಥ್ ಕರೆ
ಪರಿಸರದ ಬಗ್ಗೆ ಮಾನವನಿಗಿರುವ ಬೇಜವಾಬ್ದಾರಿ ನಡೆ ಪ್ರಕೃತಿ ದುರಂತಕ್ಕೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಕುರ್ ಆನ್ ಸ್ಪಷ್ಟವಾಗಿ ವಿವರಿಸುತ್ತದೆ. “ಜನರ ಸ್ವಂತ ಕೈಗಳ ದುಡಿಮೆಯಿಂದ ನೆಲ ಜಲಗಳಲ್ಲಿ ಕ್ಷೋಭೆಯುಂಟಾಗಿ ಬಿಟ್ಟಿದೆ. ಇದು ಜನರಿಗೆ ಅವರ ಕೆಲವು ಕರ್ಮಗಳ ಸವಿಯನ್ನುಣಿಸಲಿಕ್ಕಾಗಿಯೂ ಅವರು ಮರಳಲೂ ಬಹುದೆಂಬ ನಿರೀಕ್ಷೆಯಿಂದಲೂ (ಆಗಿದೆ). (ಅಧ್ಯಾನಯ 30: ಅರ್ರೂಮ್ ಸೂಕ್ತ : 41)
ಪ್ರವಾದಿ ಮುಹಮ್ಮದ್ (ಸ ) ರು ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ವಹಿಸಿದವರು. ಅದೊಂದು ಸಾಮಾಜಿಕ ಸೇವೆ ಮಾತ್ರವಾಗಿರದೆ ಧಾರ್ಮಿಕವಾಗಿ ಪುಣ್ಯ ಕಾರ್ಯವಾಗಿತ್ತು. ಪ್ರಕೃತಿ ಪ್ರೇಮವೂ ಆಧ್ಯಾತ್ಮಿಕತೆಯ ಭಾಗ ಎಂದು ಮಾನವ ಕುಲಕ್ಕೆ ಕಲಿಸಿಕೊಟ್ಟಿದ್ದಾರೆ.
