ಜುಲೇಕಾ ಬೇಗಂಗೆ ರಾಜ್ಯೋತ್ಸವ ಪ್ರಶಸ್ತಿ | ಮಲ್ಲಮ್ಮ ಸರಸ್ವತಿಯಾಗಿ ಜುಲೇಕಾ ಆಗಿದ್ದೇ ರೋಚಕ!

Date:

Advertisements
ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ, ಈಗ ಜುಲೇಕಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿರುವ, ಹಿಂದೆ ಸರಸ್ವತಿ ಎಂಬ ಹೆಸರಿದ್ದ, ಅದಕ್ಕೂ ಮೊದಲು ಮಲ್ಲಮ್ಮ ಎಂಬ ಬಾಲಕಿಯಾಗಿದ್ದ ಈ ಮಹಿಳೆ ಈಗಲೂ ಪುಟ್ಟ ಹುಡುಗಿಯ ಹಾಗೆ ನಗುತ್ತಾರೆ. ಅವಕಾಶ ಸಿಕ್ಕರೆ ಈಗಲೂ ಆಂಜನೇಯನ ಹಾಗೆ ಕುಣಿಯಬಲ್ಲೆ ಎಂದು ಅವರ ಕಣ್ಣುಗಳು ಹೇಳುತ್ತವೆ... ಅಬ್ದುಲ್ ರಶೀದರ ಚಿಂತನಾರ್ಹ ಬರಹ

ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಸಂಗತಿ. ಎಲ್ಲಿಯೋ ತಿರುಗಾಡಲು ಹೋಗಿದ್ದ ನಾನು ತಿರುಗಿ ಬಂದಾಗ ಕತ್ತಲಾಗುತ್ತಿತ್ತು. ನೋಡಲು ಚೂಟಿಯಾಗಿದ್ದ, ಆದರೆ ಓದಲು ಅಷ್ಟೇನೂ ಆಸಕ್ತಿ ಇರದ ನನ್ನ ಅಕ್ಕನ ಮಗಳನ್ನು ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದೆ. ಆ ಹುಡುಗಿಗೆ ಗಂಡು ಹುಡುಕಿಕೊಂಡು ಬಂದ ಮಹಿಳೆಯರೊಬ್ಬರು ನನಗಾಗಿ ಕಾಯುತ್ತಾ ಕುಳಿತಿದ್ದರು. ಗಂಡು ಹುಡುಕುವುದು, ಮದುವೆ ಮಾಡಿಸುವುದು ಇತ್ಯಾದಿಗಳಲ್ಲಿ ಅಷ್ಟೇನೂ ಆಸಕ್ತಿ ಇರದ ನಾನು ಒಂದು ತರಹದ ನಿರಾಸಕ್ತಿಯಿಂದಲೇ ಆಕೆಯನ್ನು ಏನು ಮಾತಾಡಿಸುವುದು ಎಂದು ಯೋಚಿಸುತ್ತಿದ್ದೆ. ಮದುವೆಯ ವಯಸ್ಸೇನೂ ಆಗಿರದಿದ್ದ ಅಕ್ಕನ ಮಗಳು ಬಿಸಿಲು ಚಾವಣಿಯಲ್ಲಿ ಮಕ್ಕಳೊಡನೆ ಜೂಟಾಟ ಆಡುತ್ತಾ ಕುಳಿತಿದ್ದಳು.

ಒಳಬಂದವನನ್ನು ಕಂಡ ಆ ಮಹಿಳೆ ಎದ್ದು ನಿಂತು ತನ್ನ ಹೆಸರು ಜುಲೇಕಾ ಎಂದೂ ತನ್ನ ಮಗ ಪಶ್ಚಿಮ ಆಫ್ರಿಕಾದ ಯಾವುದೋ ದೇಶವೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿರುವನೆಂದೂ, ಅವನು ಒಂದು ವರ್ಷದಲ್ಲಿ ಮೈಸೂರಿಗೆ ಬರುತ್ತಿರುವನೆಂದೂ, ನಮ್ಮ ಹುಡುಗಿಯ ಭಾವಚಿತ್ರವೊಂದು ಇದ್ದರೆ ಆತನಿಗೆ ಕಳುಹಿಸಿಕೊಡಬೇಕಿತ್ತೆಂದೂ, ಅದಕ್ಕಾಗಿ ಬಂದಿರುವುದಾಗಿಯೂ ಹೇಳಿದ್ದರು.
ಆ ತಾಯಿಯ ಮುಖ ಚಹರೆ, ನಡೆನುಡಿ, ಹಾವ ಭಾವ ಮತ್ತು ಆಕೆ ಆಡುತ್ತಿದ್ದ ಕನ್ನಡ ನುಡಿಯ ಶೈಲಿ ಇವುಗಳಿಗೂ ಮತ್ತು ಆಕೆಯ ಜುಲೇಕಾ ಎಂಬ ಹೆಸರಿಗೂ ಯವುದೇ ತರಹದ ತಾಳಮೇಳಗಳು ಗೋಚರಿಸುತ್ತಿರಲಿಲ್ಲ.

ನೋಡಿದರೆ, ಅವರು ಯಾವುದೋ ಹಳೆಯ ಕಾಲದ ಅಭಿನೇತ್ರಿಯಂತೆ ಕಾಣಿಸುತ್ತಿದ್ದರು. ಆಮೇಲೆ ಆಕೆ ತೀರಿಹೋಗಿರುವ ತನ್ನ ಪತಿಯ ಹೆಸರನ್ನು ಹೇಳಿದರು. ಆ ಹೆಸರು ಕೇಳಿದ ಮೇಲೆ ನನಗೆ ಅದು ಖಾತರಿಯಾಯಿತು. ‘ನಿಮ್ಮ ಹಳೆಯ ಹೆಸರು ಸರಸ್ವತಿ ಎಂದಿರಬೇಕಲ್ಲವೇ?’ ಅಂದೆ. ‘ಹೌದು’ ಎಂದು ಆಕೆ ನಾಚಿಕೊಂಡರು. ‘ನಿಮ್ಮ ಮಕ್ಕಳ ತಂದೆ ಬಿ. ಶೇಖ್ ಚಾಂದ್ ತೀರಿ ಹೋಗಿದ್ದಾರೆ ಅಲ್ಲವೇ’ ಅಂದೆ. ‘ಹೌದು’ ಎಂದರು. ‘ಹಾಗಾದರೆ ಕೂತುಕೊಳ್ಳಿ ಒಂದು ನಿಮಿಷ’ ಎಂದು ಒಳಕ್ಕೆ ಹೋಗಿ ಮುಖ ತೊಳೆದುಕೊಂಡು ಬಂದು ಅವರ ಜೊತೆ ಬಹಳ ಹೊತ್ತು ಮಾತನಾಡಿದೆ.

Advertisements

ಜುಲೇಕಾ ಅವರ ಮೂಲದ ಹೆಸರು ಮಲ್ಲಮ್ಮ. ಅವರ ಮನೆ ದೇವರು ಮಲ್ಲಿಕಾರ್ಜುನನಿಂದಾಗಿ ಅವರಿಗೆ ಆ ಹೆಸರು ಬಂದಿದೆ. ಕುರುವತ್ತಿ ಮಲ್ಲಯ್ಯ, ಮೈಲಾರಿ ಲಿಂಗ ಎಂದೂ ಆತನನ್ನು ಪೂಜಿಸುತ್ತಾರೆ. ಮಲ್ಲಮ್ಮ ಕೊಪ್ಪಳದ ಬಳಿಯ ಒಂದು ಹಳೆಯ ಗ್ರಾಮದ ಹಳೆಯ ವೀರಶೈವ ಕುಟುಂಬಕ್ಕೆ ಸೇರಿದವರು. ಆ ಊರಿನಲ್ಲಿ ನಡೆಯುವ ಮಹಮ್ಮಾಯಿಯ ಜಾತ್ರೆ ಇತಿಹಾಸ ಪ್ರಸಿದ್ಧವಂತೆ.

ಮಲ್ಲಮ್ಮನಿಗೆ ಆರುವರ್ಷದಿಂದಲೂ ನಾಟಕದ ಹುಚ್ಚು. ಪುಟ್ಟ ಬಾಲಕಿಯಾಗಿರುವಾಗಲೇ ಜಂಪರ್ ಲಂಗವನ್ನು ಉಲ್ಟಾ ಮಾಡಿ ಕಚ್ಚೆಯಂತೆ ಕಟ್ಟಿಕೊಂಡು, ತಂದೆಯ ರುಮಾಲನ್ನು ಉರಿ ಹೊಡೆದು ಸೊಂಟದ ಸುತ್ತ ನೆರಿಗೆ ಮಾಡಿ ಸುತ್ತಿಕೊಂಡು, ರೊಟ್ಟಿ ತಟ್ಟುವ ಹಂಚಿನ ತಳದ ಮಸಿಯನ್ನು ವಿಭೂತಿಯಂತೆ ಬಳಿದುಕೊಂಡು, ಮುಖವನ್ನು ‘ಉಫ್’ ಅಂತ ಹನುಮಂತನ ಹಾಗೆ ಮಾಡಿಕೊಂಡು ಪುಟ್ಟ ಆಂಜನೇಯಳಾಗಿ ಕುಣಿಯುತ್ತಿದ್ದಳಂತೆ. ಅವರ ತಾತನ ಕಾಲಕ್ಕೆ ಎಂಟು ಎತ್ತಿನ ಕಟ್ಟೆಯಿತ್ತಂತೆ. ಅದು ಪಾಲಾಗಿ ನಾಲ್ಕು ಎತ್ತಿನ ಕಟ್ಟೆಯೊಂದು ತಂದೆಯ ಪಾಲಿಗೆ ಬಂದಿತ್ತಂತೆ. ಮಲ್ಲಮ್ಮ ದಿನವಿಡೀ ಅದರ ಮೇಲೆ ಹತ್ತಿ ಹನುಮಂತನಂತೆ ಜಿಗಿಯುತ್ತಿದ್ದಳಂತೆ. ಮನೆಗೆ ಬಂದು ಹೋಗುವವರೆಲ್ಲರೂ ಅವಳನ್ನು ನೋಡಿ ನಗುತ್ತಿದ್ದರಂತೆ.

WhatsApp Image 2024 10 31 at 11.10.58 AM

ಅವರ ಹಳ್ಳಿಯಲ್ಲಿ ಒಬ್ಬಾಕೆ ನಾಟಕದ ನಟಿಯೊಬ್ಬಳು ಹೋಟೆಲ್ಲು ಇಟ್ಟುಕೊಂಡಿದ್ದಳಂತೆ. ಅವಳ ಒಬ್ಬ ತಮ್ಮ ಸನ್ಯಾಸಿಯಾಗಿ ಊರು ಬಿಟ್ಟು ಹೋಗಿದ್ದನಂತೆ. ಇನ್ನೊಬ್ಬಾತ ಹಾರ್ಮೋನಿಯಂ ಕಲಿತು ಅಕ್ಕನ ಹಾಡಿಗೆ ಸಾಥ್ ನೀಡುತ್ತಿದ್ದನಂತೆ. ಆ ನಟಿ ಆರು ವರ್ಷದ ಮಲ್ಲಮ್ಮನ ಆಂಜನೇಯ ವೇಷವನ್ನು ಮೆಚ್ಚಿಕೊಂಡು ಈಗಲೇ ಸುರಸುಂದರಿಯಂತಿರುವ ಈ ಬಾಲಕಿ ದೊಡ್ಡವಳಾದ ಮೇಲೆ ಖ್ಯಾತ ಅಭಿನೇತ್ರಿಯಾಗುವಳು ಎಂದು ಭವಿಷ್ಯ ನುಡಿದು ಆಕೆಯನ್ನು ಕರೆದುಕೊಂಡು ಹೋಗಿ ನಾಟಕದಲ್ಲಿ ಲೋಹಿತಾಶ್ವನ ಪಾತ್ರ ಕೊಟ್ಟಳಂತೆ.

ಆ ನಾಟಕ ನಡೆದದ್ದು ಮಾನ್ವಿಯಲ್ಲಿ. ತಾಯಿ ತಾರಾವತಿಯ ಪಾತ್ರವನ್ನು ಮುರುಗೋಡು ರೇಣಮ್ಮ ವಹಿಸಿದ್ದರಂತೆ. ತಾಯಿಯಿಂದ ಅಗಲುವಾಗ ಬಾಲಕ ಲೋಹಿತಾಶ್ವ ‘ಅಮ್ಮಾ ನನ್ನನ್ನು ಅಗಲಬೇಡ. ನಿನ್ನ ಬಿಟ್ಟು ನಾನು ಇರಲಾರೆ’ ಎಂದು ಅಳುತ್ತಾ ಹೇಳಬೇಕಿತ್ತಂತೆ. ಮಲ್ಲಮ್ಮ ತಾಯಿಯನ್ನು ಬಿಟ್ಟು ಬಂದ ಖುಷಿಯಿಂದ ಅದನ್ನು ನಗುತ್ತಾ ಹೇಳಿದಳಂತೆ. ರೇಣುಕಮ್ಮ ಪ್ರೇಕ್ಷಕರಿಗೆ ಗೊತ್ತಾಗದೆ ಹಾಗೆ ಮಲ್ಲಮ್ಮನನ್ನು ಜೋರಾಗಿ ಗಿಂಡಿದಳಂತೆ. ಲೋಹಿತಾಶ್ವ ಆಗ ‘ಅಮ್ಮಾ ಹೋಗಬೇಡ’ ಎಂದು ಅಳುತ್ತಾ ಹೇಳಿದಳಂತೆ. ನಾಟಕ ಮುಗಿಸಿ ಊರಿಗೆ ಬಂದ ಮಲ್ಲಮ್ಮ ಶಾಲೆಯಲ್ಲಿ ಈ ಘಟನೆಯನ್ನು ನಗುತ್ತಾ ತನ್ನ ಗೆಳತಿಯರ ಬಳಿ ಹೇಳುತ್ತಿದ್ದಳಂತೆ.

ಇನ್ನೊಂದು ದೃಶ್ಯದಲ್ಲಿ ಲೋಹಿತಾಶ್ವ ಸಾಯಬೇಕು – ಸತ್ತು ಒಂದು ಗಂಟೆಯ ಬಳಿಕ ಮುನಿಗಳೊಬ್ಬರು ಕಮಂಡಲದಿಂದ ನೀರು ಚಿಮುಕಿಸುವಾಗ ಲೋಹಿತಾಶ್ವ ಜೀವ ತಳೆದು ಏಳಬೇಕು. ಆದರೆ, ಆ ಪಾತ್ರ ಮಾಡುತ್ತಿದ್ದ ಮಲ್ಲಮ್ಮ ಸ್ಟೇಜಿನಲ್ಲಿ ನಿದ್ದೆ ಹೋಗಿದ್ದಳಂತೆ. ನೀರು ಚಿಮುಕಿಸಿದರೂ ಲೋಹಿತಾಶ್ವ ಏಳದಿರುವುದನ್ನು ನೋಡಿ ಮುನಿಗಳು ಕಾಲಿನ ಹೆಬ್ಬೆರೆಳಿನಿಂದ ಮಲ್ಲಮ್ಮಳ ತೊಡೆಯನ್ನು ತುಳಿದರಂತೆ. ಆಗ ಮಲ್ಲಮ್ಮ ಕಿರುಚುತ್ತಾ ಎದ್ದು ನಿಂತಳಂತೆ.

ಜುಲೈಕ ಬೇಗಂ, ರಾಜ್ಯೋತ್ಸವ ಪ್ರಶಸ್ತಿ, ಮಲ್ಲಮ್ಮ, ಸರಸ್ವತಿ, Julyaka Begum, Rajyotsava Award, Mallamma, Saraswati,

ಜುಲೇಕಾ ತಮ್ಮ ಪುಟ್ಟ ಮನೆಯಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು, ನಡುನಡುವಲ್ಲಿ ಅಳುತ್ತಾ, ಒಮ್ಮೊಮ್ಮೆ ನಗುತ್ತಾ, ಕಣ್ಣೀರು ಒರೆಸಿಕೊಳ್ಳುತ್ತಾ, ಕೆಲವೊಮ್ಮೆ ವೇದಾಂತಿಯಂತೆ ಮಾತನಾಡುತ್ತಾ ಮಲ್ಲಮ್ಮ ಎಂಬ ಹುಡುಗಿ ಸರಸ್ವತಿ ಎಂಬ ಹೆಸರಿನಲ್ಲಿ ಅಭಿನೇತ್ರಿಯಾಗಿದ್ದು, ಆಮೇಲೆ ಶೇಖ್ ಚಾಂದ್ ಎಂಬ ರಂಗನಟನನ್ನು ಮದುವೆಯಾಗಿ ಜುಲೇಕಾ ಆಗಿದ್ದು ಎಲ್ಲವನ್ನು ನಾಟಕವೊಂದರ ದೃಶ್ಯಗಳಂತೆ ನನಗೆ ಹಾವಭಾವಗಳ ಸಮೇತ ವಿವರಿಸುತ್ತಿದ್ದರು.

ಗಂಡನಿಗೆ ಪ್ರೇಮಿಯಾಗಿ, ಹೆಂಡತಿಯಾಗಿ, ಮಗಳಾಗಿ, ತಾಯಿಯಾಗಿ, ಊರೂರು ತಿರುಗುತ್ತಾ ನಾನಾ ಪಾತ್ರಗಳಲ್ಲಿ ಅಭಿನಯಿಸಿದ್ದು, ನಾಟಕದ ಡೇರೆಗಳಲ್ಲಿಯೇ ಮೂವರು ಗಂಡುಮಕ್ಕಳು ಹುಟ್ಟಿದ್ದು, ಬೆಳೆದದ್ದು, ಅವರನ್ನು ಓದಿಸಿ ದೊಡ್ಡವರನ್ನಾಗಿ ಮಾಡಿದ್ದು, ಕೊನೆಯ ಮಗ ಸಿಕಂದರ್ ಪಾಷಾ ಕಾಮಾಲೆ ಕಾಯಿಲೆ ಬಂದು, ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ತೀರಿ ಹೋಗಿದ್ದು, ಅದರಿಂದ ತಮಗೆ ಮತಿಭ್ರಮಣೆಯಾಗಿದ್ದು, ಆ ಮತಿಭ್ರಮಣೆಯನ್ನು ಮರೆಸಲೋ ಎಂಬಂತೆ ಆ ಭಗವಂತ ಪತಿ ಶೇಖ್ ಚಾಂದರ ಪ್ರಾಣವನ್ನು ಕಿತ್ತುಕೊಂಡಿದ್ದು ಎಲ್ಲವನ್ನೂ ಹೇಳುತ್ತಿದ್ದರು. ನಡುನಡುವೆ ಪಾತ್ರಗಳ ಸಾಲುಗಳನ್ನು ಹೇಳುತ್ತಿದ್ದರು. ನಾಟಕದ ಹಾಡುಗಳನ್ನು ಹಾಡುತ್ತಿದ್ದರು.

ಕೊನೆಯಲ್ಲಿ, ‘ನೀನು ಏನು ಬೇಕಾದರೂ ಬರಿ. ನಾನು ಹೇಳಿದ್ದೆಲ್ಲವನ್ನೂ ಬರಿ. ಆದರೆ ಕೊಪ್ಪಳದ ಬಳಿಯ ತನ್ನ ಹಳ್ಳಿಯ ಹೆಸರನ್ನು ಮಾತ್ರ ಬರೆಯಬೇಡ’ ಎಂದು ಹೇಳಿ ಆ ಮಳೆಯಲ್ಲಿಯೇ ನನ್ನನ್ನು ಕಳಿಸಿದ್ದರು.

ಮಲ್ಲಮ್ಮನ ಮೈನೆರೆದಾಗ ಆಕೆ ಗದಗಿನಲ್ಲಿರುವ ಬಸಯ್ಯನವರ ಪಟ್ಟದ ಕಲ್ಲು ನಾಟಕ ಕಂಪನಿಯಲ್ಲಿದ್ದಳು. ಆಕೆ ತನ್ನ ಎಂಟು ವರ್ಷದಲ್ಲಿಯೇ ಮನೆಯಿಂದ ಹೇಳದೆ ಕೇಳದೆ ಓಡಿಹೋಗಿದ್ದಳಂತೆ. ಹೋಗುವ ಖರ್ಚಿಗೆ ಕಾಲಿನ ಕಡಗ, ಕೈಯ ಬಳೆ, ಜುಮುಕಿ, ಉಂಗುರ, ಸರ ಎಲ್ಲವನ್ನೂ ಮೂವತ್ತು ರೂಪಾಯಿಗೆ ಮಾರಿ ತನಗೆ ಯಾರೂ ಇಲ್ಲ ತಾನು ಅನಾಥೆ ಎಂದು ಸುಳ್ಳು ಹೇಳಿ ಬಸಯ್ಯನವರ ಕಾಲಿಗೆ ಬಿದ್ದಳಂತೆ. ಹಾಗೆ ಕಾಲಿಗೆ ಬಿದ್ದ ಮಲ್ಲಮ್ಮನಿಗೆ ಸರಸ್ವತಿ ಎಂಬ ಹೆಸರಿಟ್ಟು ಸಾಕುಮಗಳನ್ನಾಗಿ ಬೆಳೆಸಿ ಅಭಿನೇತ್ರಿಯನ್ನಾಗಿ ಮಾಡಿದರಂತೆ. ಹನ್ನರೆಡು ವರ್ಷಕ್ಕೆ ಸರಸ್ವತಿ ಮೈನೆರೆದಾಗ ಬಸಯ್ಯನವರು ನಿಜ ಹೇಳು ಎಂದು ಹೇಳಿ ಅವಳ ತಂದೆ ತಾಯಿಯರ ಹೆಸರು ತಿಳಿದುಕೊಂಡು ಪುನಃ ಊರಿಗೆ ಕಳುಹಿಸಿದರಂತೆ. ಊರಿಗೆ ಬಂದ ಮಗಳನ್ನು ಸೇರಿಸಿಕೊಂಡ ಆ ವೀರಶೈವ ತಂದೆ ಆಕೆಗೆ ಹೊಲಿಗೆಯ ಯಂತ್ರವೊಂದನ್ನು ಕೊಡಿಸಿ ಹೊಲಿದು ಕೊಂಡಿರು ಅಂತ ಕೂಡಿಸಿದರಂತೆ. ಯಾರಾದರೂ ಮಗಳು ಇಷ್ಟು ವರ್ಷ ಎಲ್ಲಿ ಕಾಣೆಯಾಗಿದ್ದಳು ಎಂದು ಕೇಳಿದರೆ ಕೊಪ್ಪಳಕ್ಕೆ ಹೊಲಿಗೆ ಕಲಿಯಲು ಹೋಗಿದ್ದಳು ಎಂದು ಸುಳ್ಳು ಹೇಳುತ್ತಿದ್ದರಂತೆ.

WhatsApp Image 2024 10 31 at 11.10.59 AM

ಹೀಗೆ ಹೊಲಿಯುತ್ತಾ ಕೂತ ಮಲ್ಲಮ್ಮ ಎಂಬ ಸರಸ್ವತಿಯ ಮುಂದೆ ಒಂದು ದಿನ ಶೇಖ್ ಚಾಂದ್ ಪ್ರತ್ಯಕ್ಷರಾಗುತ್ತಾರೆ. ನಾಟಕದ ಹುಚ್ಚು ತಲೆಗೆ ಹತ್ತಿಸಿಕೊಂಡಿದ್ದ ಶೇಖ್ ಚಾಂದ್ ಆಗ ಇನ್ನೂ ಚಿಗುರು ಮಿಸೆಯ ಚೆಲುವ. ಆತನನ್ನು ನೋಡಿಯೂ ನೋಡದವಳಂತೆ ಹೊಲಿಯುತ್ತಾ ಕುಳಿತಿದ್ದವಳನ್ನೂ ಅವರೇ ಮಾತನಾಡಿಸಿದನಂತೆ. ಗದಗಿನ ನಾಟಕದ ಕಂಪನಿ ಸೇರಿ ಸರಸ್ವತಿ ಎಂಬ ಹೆಸರಿನಲ್ಲಿ ಖ್ಯಾತಳಾಗಿ ಈ ಮಲ್ಲಮ್ಮ ಈಗ ಏನೂ ಆಗದವಳಂತೆ ಹೊಲಿಯುತ್ತಾ ಕೂತಿರುವುದು ಚಾಂದ್ ಪಾಷಾರಿಗೆ ಗೊತ್ತಾಗಿತ್ತು. ತನ್ನ ಕನಸಿನ ನಾಟಕ ಕಂಪನಿಯ ನಾಯಕಿಯನ್ನು ಹುಡುಕಿಕೊಂಡು ಅವರು ದೂರದ ಕಲಬುರ್ಗಿಯಿಂದ ಕೊಪ್ಪಳದ ಬಳಿಯ ಆ ಹಳ್ಳಿಗೆ ಬಂದಿದ್ದರು. ಅವರನ್ನು ಕಡೆಗಣ್ಣಿನಿಂದ ಗಮನಿಸುತ್ತಿದ್ದ ಸರಸ್ವತಿಗೆ ಕಲ್ಬುರ್ಗಿಯ ಬಸವೇಶ್ವರ ದೇವಾಲಯವೂ ಬಿಜಾಪುರದ ಗೋಳಗುಮ್ಮಟವೂ ಏಕಕಾಲಕ್ಕೆ ನೆನಪಾದವಂತೆ.

ಈ ವರದಿ ಓದಿದ್ದೀರಾ?: ಸೈದ್ಧಾಂತಿಕ ರಾಜಿಕೋರತನ: ಕಾಂಗ್ರೆಸ್ ತೆತ್ತ ದುಬಾರಿ ಬೆಲೆಯ ಇತಿಹಾಸ

ಆನಂತರ ನಡೆದದ್ದು ಒಂದು ದೊಡ್ಡ ಕತೆ. ನಾಟಕಕ್ಕಿಂತಲೂ ಮಿಗಿಲಾದ, ಕಥೆಗಿಂತಲೂ ರುಧ್ರ ಭಯಂಕರವಾದ, ಆಕಸ್ಮಿಕಗಳಿಗಿಂತಲೂ ಆಕಸ್ಮಿಕಗಳು ತುಂಬಿಕೊಂಡಿರುವ ಕಥಾನಕ ಅದು. ಈ ಕಥಾನಕದ ನಾಯಕ ಶೇಖ್ ಚಾಂದ್ ಭೀಮರಾಯನ ಗುಡಿ ಎಂಬ ಊರಿನಲ್ಲಿ ತನ್ನ ಪ್ರಾಣ ಸ್ನೇಹಿತನ ಮಗುವೊಂದನ್ನು ಉಳಿಸಲು ಹೋಗಿ ತಾನು ಆಟೋರಿಕ್ಷಾವೊಂದಕ್ಕೆ ಸಿಲುಕಿ ತೀರಿಹೋದರು. ಅದಕ್ಕಿಂತಲೂ ಮೊದಲು ಕಾಮಾಲೆಗೆ ಸಿಲುಕಿ ಮಗ ಸಿಕಂದರ್ ಬಾದಶಾ ತೀರಿಹೋಗಿದ್ದ.

ಈಗ ಜುಲೇಕಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿರುವ, ಹಿಂದೆ ಸರಸ್ವತಿ ಎಂಬ ಹೆಸರಿದ್ದ, ಅದಕ್ಕೂ ಮೊದಲು ಮಲ್ಲಮ್ಮ ಎಂಬ ಬಾಲಕಿಯಾಗಿದ್ದ ಈ ಮಹಿಳೆ ಈಗಲೂ ಪುಟ್ಟ ಹುಡುಗಿಯ ಹಾಗೆ ನಗುತ್ತಾರೆ. ಅವಕಾಶ ಸಿಕ್ಕರೆ ಈಗಲೂ ಆಂಜನೇಯನ ಹಾಗೆ ಕುಣಿಯಬಲ್ಲೆ ಎಂದು ಅವರ ಕಣ್ಣುಗಳು ಹೇಳುತ್ತವೆ.

WhatsApp Image 2024 10 31 at 11.10.57 AM

‘ನೋಡಿ ಮದುವೆ ಸಂಬಂದಕ್ಕಾಗಿ ಬಂದಿದ್ದ ನಿಮ್ಮನ್ನು ಮಾತನಾಡಿಸಲು ಹೋಗಿ ನಿಮ್ಮ ಏನೆಲ್ಲ ಸಂಕಟಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ, ನನ್ನನ್ನು ಕ್ಷಮಿಸಿ’ ಎಂದು ಕೇಳಿದ್ದೆ. ಅವರು ನಕ್ಕಿದ್ದರು. ‘ಈಗಲೂ ಕಾಲ ಮೀರಿಲ್ಲ ಆಫ್ರಿಕಾದಿಂದ ಬಂದಿರುವ ನನ್ನ ಮಗನಿಗೆ ಇನ್ನೂ ಹೆಣ್ಣು ಹುಡುಕುತ್ತಿದ್ದೇನೆ, ಯಾರಾದರೂ ಸಾಬರ ಹುಡುಗಿಯರು ಇದ್ದರೆ ಹೇಳಿ’ ಎಂದು ಹೇಳಿದ್ದರು.

‘ಹೇಳುತ್ತೇನೆ. ಆದರೂ ಈ ಮದುವೆ-ಗಿದುವೆ, ಹುಟ್ಟು-ಸಾವು ಇತ್ಯಾದಿ ಆಕಸ್ಮಿಕಗಳು ನನಗೆ ಯಾಕೋ ಸರಿಯಾಗುವುದಿಲ್ಲ. ನಾನು ಯಾವಾಗಲೂ ಇವುಗಳಿಂದ ದೂರ ಇರುತ್ತೇನೆ’ ಎಂದು ಹೇಳಿ ಅವರಿಂದ ಬೀಳ್ಗೊಂಡು ಮಳೆಯಲ್ಲಿ ಬೈಕು ಓಡಿಸುತ್ತಾ ಬಂದಿದ್ದೆ.

(ಈಗ ಮತ್ತೆ ಇಪ್ಪತ್ತು ವರ್ಷಗಳ ನಂತರ ಜುಲೇಕಾ ಅವರನ್ನು ಕಳೆದ ವಾರ ಮತ್ತೆ ನೋಡಿದೆ. ಈ ಇಪ್ಪತ್ತು ವರ್ಷಗಳಲ್ಲಿ ಅವರ ಜೀವನದಲ್ಲಿ ಇನ್ನೂ ರಣಭಯಂಕರ ದುರಂತಗಳು ಸಂಭವಿಸಿದೆ. ಜನಾನುರಾಗಿ ಪೊಲೀಸ್ ಅಧಿಕಾರಿಯಾಗಿದ್ದ ಅವರ ಇನ್ನೊಬ್ಬ ಮಗ ಮಹಮದ್ ರಫಿ ಅವರು ತಾಯಿ ಜುಲೇಕಾರ ಕಣ್ಣ ಮುಂದೆಯೇ ಹೃದಯಾಘಾತದಿಂದ ತೀರಿಹೋಗಿದ್ದಾರೆ. ಜುಲೇಕಾ ಅವರೂ ಕ್ಯಾನ್ಸರ್ ಗೆದ್ದು ಬದುಕುತ್ತಿದ್ದಾರೆ. ಅವರು ಹೆಣ್ಣು ಹುಡುಕಿಕೊಂಡು ಬಂದ ಅನಿಮೇಷನ್ ಕಲಾವಿದ ಅಬ್ದುಲ್ ಕರೀಂ ಈಗ ಸಾಫ್ಟ್‌ವೇರ್ ಕಂಪನಿಯೊಂದರ ಮುಖ್ಯಸ್ಥರಾಗಿ ಮೈಸೂರಿನಲ್ಲಿದ್ದು ತಾಯಿಯನ್ನು ಮಗುವಿನಂತೆ ಸಲಹುತ್ತಿದಾರೆ.)

ಚಿತ್ರಗಳು ಮತ್ತು ಬರಹ – ಅಬ್ದುಲ್ ರಶೀದ್
(ಫೇಸ್‌ಬುಕ್‌ನಿಂದ)

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X